KS Dakshina Murthy

ಟ್ರಂಪ್ ಘೋಷಿಸಿದ ನಂಬಲಸಾಧ್ಯ ಯುದ್ಧ ಬಿಡುವು: ಇರಾನ್ ಯುದ್ಧಕ್ಕೆ ಕೊನೆಗೂ ಬಿತ್ತೇ ಪೂರ್ಣ ವಿರಾಮ?


ಟ್ರಂಪ್ ಘೋಷಿಸಿದ ನಂಬಲಸಾಧ್ಯ ಯುದ್ಧ ಬಿಡುವು: ಇರಾನ್ ಯುದ್ಧಕ್ಕೆ ಕೊನೆಗೂ ಬಿತ್ತೇ ಪೂರ್ಣ ವಿರಾಮ?
x
ಇಸ್ರೇಲ್ ಯಾವತ್ತೂ ತನ್ನ ಭದ್ರತೆಯ ಪಾಲಿನ ಹೆಮ್ಮೆ ಎಂದು ಬೀಗುತ್ತಿದ್ದ ದಕ್ಷಿಣ ಇಸ್ರೇಲ್ನಲ್ಲಿರುವ ʼಡಿಮೊನಾʼ ಮೇಲೆ ಇರಾನ್ ನಡೆಸಿದ ದಾಳಿಯ ಪರಿಣಾಮ. ಇಸ್ರೇಲಿನ ಭದ್ರತಾ ಅಧಿಕಾರಿಗಳು ಈ ತಾಣವನ್ನು ಪರಿಶೀಲಿಸುತ್ತಿರುವ ದೃಶ್ಯ.
Click the Play button to hear this message in audio format

ಯುದ್ಧವನ್ನು ಹಂತ ಹಂತವಾಗಿ ಕೊನೆಗೊಳಿಸುವ ಬಗ್ಗೆ ಟ್ರಂಪ್ ಇತ್ತೀಚೆಗಷ್ಟೇ ಮಾತನಾಡಿದ್ದರು. ಆ ಬಳಿಕವೇ ಐದು ದಿನಗಳ ಬಿಡುವು ಘೋಷಣೆಯಾಗಿದೆ. ಹಾಗಾಗಿ ಮುಂದಿನ ಹಂತವೇನಿದ್ದರೂ ಶಾಂತಿಯೇ.

ಇರಾನ್‌ನ ವಿದ್ಯುತ್ ಕೇಂದ್ರಗಳು ಮತ್ತು ಇಂಧನ ಕೇಂದ್ರಗಳ ಮೇಲೆ ಇನ್ನು ಐದು ದಿನಗಳ ಕಾಲ ದಾಳಿ ನಡೆಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿರುವುದು ಅಚ್ಚರಿಗಿಂತ ಹೆಚ್ಚು ನೆಮ್ಮದಿಯನ್ನು ತಂದಿದೆ. ನೆಮ್ಮದಿ ಯಾಕೆಂದರೆ ಮುಟ್ಟುಗೋಲು ಹಾಕಿಕೊಳ್ಳಲಾದ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಇರಾನ್ ಮೇಲೆ ವಿಧಿಸಿದ್ದ 48 ಗಂಟೆಗಳ ಗಡುವನ್ನು ಟ್ರಂಪ್ ಹಿಂದಕ್ಕೆ ಪಡೆದಿರುವುದು. ಈ ಘೋಷಣೆ ಯಾಕೆ ಅಚ್ಚರಿ ತಂದಿಲ್ಲ ಎಂದರೆ ಇಂತಹ ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಇತಿಹಾಸ ಈ ನಿಗೂಢ ವ್ಯಕ್ತಿತ್ವದ ಅಧ್ಯಕ್ಷರಿಗಿದೆ.

ಈ ಐದು ದಿನಗಳ ವಿರಾಮದ ಘೋಷಣೆಯಲ್ಲಿಯೇ ಬಿಲಿಯನ್ (ಅಥವಾ ಟ್ರಿಲಿಯನ್) ಡಾಲರ್ ಪ್ರಶ್ನೆ ಕೂಡ ಅಡಗಿದೆ; ಈ ತಾತ್ಕಾಲಿಕ ದ್ವೇಷದ ನಿಲುಗಡೆ ಯುದ್ಧಕ್ಕೆ ದೀರ್ಘಕಾಲದ ಅಥವಾ ಶಾಶ್ವತ ಅಂತ್ಯವನ್ನು ತರುತ್ತದೆಯೇ?

ನಿಶ್ಚಿತವಾಗಿ ಈ ʼಬಿಡುವುʼ ದೀರ್ಘಕಾಲೀನ ಶಾಂತಿಗೆ ದಾರಿ ಮಾಡಿಕೊಡುವ ಸಾಧ್ಯತೆಗಳೇ ಅಧಿಕವಾಗಿವೆ. ಯಾಕೆಂದರೆ ಕಳೆದ ನಾಲ್ಕು ವಾರಗಳಿಂದ ಇರಾನ್ ಮೇಲೆ ನಡೆದ ಸತತ ದಾಳಿಗಳಿಂದ ಅಮೆರಿಕ ಮತ್ತು ಇಸ್ರೇಲ್ಗೆ ಈವರೆಗೆ ಯಾವುದೇ ಸ್ಪಷ್ಟ ಲಾಭಗಳು ಉಂಟಾಗಿಲ್ಲ.

ಯಾಕೆಂದರೆ ಈ ಯುದ್ಧೋತ್ಸಾಹಿಗಳ ಗುರಿಗಳೇ ಸ್ಪಷ್ಟವಾಗಿರಲಿಲ್ಲ ಮತ್ತು ವಾಸ್ತವಿಕವಾಗಿಯೂ ಇರಲಿಲ್ಲ. ಟ್ರಂಪ್ ಮತ್ತು ಇಸ್ರೇಲಿನ ಕಟ್ಟಾ ಬೆಂಬಲಿಗರನ್ನು ಹೊರತುಪಡಿಸಿ ಇಡೀ ಜಗತ್ತು ಈ ಮಿಲಿಟರಿ ದಾಳಿಗಳನ್ನು ಅನಿರೀಕ್ಷಿತ, ಕಾನೂನುಬಾಹಿರ ಮತ್ತು ಅಪ್ರಚೋದಿತ ಎಂದೇ ಪರಿಗಣಿಸಿದವು.

ತಪ್ಪಾಯಿತು ಲೆಕ್ಕಾಚಾರ

ಇರಾನ್ ಮೇಲೆ ಏಕಾಏಕಿ ಎರಗಿ ಬೀಳುವುದಕ್ಕೂ ಮುನ್ನ ಟ್ರಂಪ್ ಮತ್ತು ಅವರ ಇಸ್ರೇಲಿ ಸಹವರ್ತಿ ಬೆಂಜಮಿನ್ ನೆತನ್ಯಾಹು ಇರಾನ್ ಮಿಲಿಟರಿ ಸಾಮರ್ಥ್ಯದ ಬಗ್ಗೆ ಯಾವುದೇ ಪ್ರಾಥಮಿಕ ಮೌಲ್ಯಮಾಪನವನ್ನೇ ಮಾಡಿದಂತೆ ಕಾಣಲಿಲ್ಲ. ಅವರು ಮರುಳಾಗಿದ್ದು ಪರಸ್ಪರ ತಮ್ಮದೇ ವಾಕ್ಚಾತುರ್ಯಕ್ಕೆ ಮಾತ್ರ. ಇಂತಹ ದಾಳಿ ಮಾಡುವುದರಿಂದ ಇಸ್ಲಾಮಿಕ್ ಆಡಳಿತದ ಹೆಡೆಮುರಿ ಕಟ್ಟಬಹುದು, ಇದರಿಂದ ಇರಾನ್ನೊಳಗೆ ಇರುವ ವಿರೋಧಿಗಳಿಂದ ಅಲ್ಲಿನ ಆಡಳಿತವನ್ನು ಬುಡಮೇಲು ಮಾಡಬಹುದು ಎಂದು ಬಲವಾಗಿ ನಂಬಿದ್ದರು.

ಆರ್ಥಿಕ ದಿಗ್ಬಂಧನಗಳ ಕಾರಣಗಳಿಂದಾಗಿ ಇರಾನ್ನ ಇಸ್ಲಾಮಿಕ್ ಆಡಳಿತ ದುರ್ಬಲಗೊಂಡಿ ಮತ್ತು ಆ ದೇಶದ ಮೇಲೆ ದಾಳಿ ಮಾಡುವುದಕ್ಕೆ ಇದು ಸಕಾಲ. ಹಾಗೇ ಮಾಡಿದರೆ ಅದನ್ನು ಅಧಿಕಾರದಿಂದ ಕೆಳಕ್ಕಿಳಿಸಬಹುದು ಎಂದು ಇಸ್ರೇಲ್ನ ಗುಪ್ತಚರ ಸಂಸ್ಥೆ ಮೊಸಾದ್ ಮತ್ತು ಅಮೆರಿಕದ ಪತ್ತೆದಾರಿಗಳು ಮಾಹಿತಿ ನೀಡಿದ್ದರು. ಇದನ್ನೇ ಸತ್ಯವೆಂದು ಎರಡೂ ದೇಶಗಳು ನಂಬಿದ್ದವು.

ಆದರೆ ಈ ಅಂದಾಜುಗಳು ಮತ್ತು ಘೋಷಣೆಗಳ ಹೊರತಾಗಿಯೂ ಇಂತಹ ದಾಳಿಗಳು ಅಮೆರಿಕ ಮತ್ತು ಇಸ್ರೇಲ್ ನಿರೀಕ್ಷಿಸಿದ ಫಲವನ್ನು ಕೊಡಲಿಲ್ಲ. ಇರಾನ್ನ ಸರ್ವೋಚ್ಛ ನಾಯಕ ಅಯತೊಲ್ಲ ಅಲಿ ಖಮೇನಿ ಅವರನ್ನು ಹತ್ಯೆ ಮಾಡಲಾಯಿತು. ಆದರೆ ಅದರಿಂದ ಆದ ಬದಲಾವಣೆ ಏನೇನೂ ಇಲ್ಲ. ಅದಾದ ಬಳಿಕ ಇರಾನಿನ ಆಡಳಿತಾತ್ಮಕ ಮತ್ತು ಮಿಲಿಟರಿ ಶ್ರೇಣಿಯ ಅನೇಕ ಮಂದಿ ಉನ್ನತ ಅಧಿಕಾರಿಗಳನ್ನು ಕೂಡ ಹತ್ಯೆ ಮಾಡಲಾಯಿತು. ಆದರೆ ಇರಾನ್ ಜಗ್ಗಲಿಲ್ಲ. ಹತರಾದವರ ಸ್ಥಾನಕ್ಕೆ ತಕ್ಷಣವೇ ಬೇರೆಯವರು ಬಂದರು ಮತ್ತು ಇಸ್ರೇಲ್-ಅಮೆರಿಕದ ದಾಳಿಗೆ ಪ್ರತೀಕಾರ ನಿಲ್ಲಲೇ ಇಲ್ಲ. ವಿಶ್ವದ ಮಹಾಶಕ್ತಿ ಎಂದುಕೊಂಡಿದ್ದ ಅಮೆರಿಕ ಮತ್ತು ಮಧ್ಯಪ್ರಾಚ್ಯದಲ್ಲಿನ ಮಿತ್ರ ರಾಷ್ಟ್ರ ಇಸ್ರೇಲ್ಗೆ ಇದು ತೀವ್ರ ದಿಗ್ಭ್ರಮೆ ಉಂಟುಮಾಡಿತು.

ಎರಡು ಮದಗಜಗಳ ಕಾದಾಟದಲ್ಲಿ…

ಎರಡು ಆನೆಗಳು ಹೋರಾಟ ನಡೆಸುತ್ತಿರುವಾಗ ನಡುವೆ ಸಿಲುಕಿದ ಹುಲ್ಲು ನುಜ್ಜುಗುಜ್ಜಾಗುತ್ತದೆ ಎನ್ನುವ ಗಾದೆಯಂತೆ ಅರಬ್ ಕೊಲ್ಲಿ ರಾಷ್ಟ್ರಗಳ ಸ್ಥಿತಿ ಅತ್ಯಂತ ಶೋಚನೀಯವಾಯಿತು. ಈ ರಾಷ್ಟ್ರಗಳಲ್ಲಿ ಇರುವ ಅಮೆರಿಕದ ಹಿತಾಸಕ್ತಿಗಳ ಮೇಲೆ ಇರಾನ್ ಜಿದ್ದಿಗೆ ಬಿದ್ದವರಂತೆ ದಾಳಿ ನಡೆಸಿದ್ದರಿಂದ ಈ ಕೊಲ್ಲಿ ದೇಶಗಳು ಅಕ್ಷರಶಃ ಕಂಗೆಟ್ಟು ಹೋದವು. ತಮ್ಮನ್ನು ತಾವು ʼಶಕ್ತಿಶಾಲಿʼ ಎಂದುಕೊಂಡಿದ್ದ ಸೌದಿಗಳು, ಸಿರಿವಂತ ಹಾಗೂ ಪ್ರಭಾವಿ ಕತಾರಿಗಳು, ʼಪರೋಪಕಾರಿʼ ಒಮಾನಿಗಳು, ʼಮಹತ್ವಾಕಾಂಕ್ಷಿʼ ಗಣರಾಜ್ಯಗಳು ಹಾಗೂ ಬಹ್ರೇನ್ ಮತ್ತು ಕುವೇಟ್ ಸೇರಿದಂತೆ ಯಾರನ್ನೂ ಇರಾನ್ ಬಿಡಲಿಲ್ಲ.

ಅರಬ್ ರಾಷ್ಟ್ರಗಳ ಮೇಲೆ ಅಮೆರಿಕ ಹರಡಿಕೊಂಡಿದ್ದು ರಕ್ಷಣಾತ್ಮಕ ಛತ್ರಿ. ಆದರೆ ತಾವು ನಂಬಿಕೊಂಡಿದ್ದ ಈ ಭದ್ರತೆಯು ಕೇವಲ ʼಮರೀಚಿಕೆʼ ಎಂಬುದು ಈ ತೈಲ ಸಮೃದ್ಧ ರಾಜಪ್ರಭುತ್ವ ದೇಶಗಳಿಗೆ ಮೊದಲ ಬಾರಿಗೆ ಅರಿವಾಯಿತು. ಅಮೆರಿಕದ ಜೊತೆಗೆ ಅವರು ಹೊಂದಿರುವ ನಿಕಟ ಸಂಬಂಧಗಳು ರಕ್ಷಣೆ ನೀಡುವ ಬದಲು ಇರಾನ್‌ನ ವಿನಾಶಕಾರಿ ದಾಳಿಗಳಿಗೆ ತುತ್ತಾಗುವಂತೆ ಪ್ರಚೋದಿಸುವ ʼಕೆಂಪು ಬಟ್ಟೆʼಯಾಗಿ ಪರಿಣಮಿಸಿದವು.

ಇಷ್ಟಾಗಿಯೂ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರಂತಹ ನಾಯಕರು ವೈಯಕ್ತಿಕವಾಗಿ ಕೊಲ್ಲಿ ರಾಷ್ಟ್ರಗಳ ಆಡಳಿತಗಾರರೊಂದಿಗೆ ಸಂಪರ್ಕದಲ್ಲಿದ್ದರು. ನಾವು ಗುರಿಯಾಗಿಸಿಕೊಂಡಿದ್ದು ನಿಮ್ಮ ದೇಶಗಳಲ್ಲಿ ಇರುವ ಅಮೆರಿಕದ ನೆಲೆಗಳನ್ನು ಮಾತ್ರ, ನಿಮ್ಮ ವಿರುದ್ಧ ನಮಗೆ ಯಾವ ದ್ವೇಷವೂ ಇಲ್ಲ ಎಂದು ಅವರು ಭರವಸೆ ನೀಡುತ್ತ ಬಂದರು. ಹೀಗಾಗಿ ತಮ್ಮ ಮೇಲೆ ದಾಳಿಗಳ ಮೇಲೆ ದಾಳಿ ನಡೆಯುತ್ತಿದ್ದರೂ ಏನೂ ಮಾಡದೇ ಮೈಪರಚಿಕೊಳ್ಳಬೇಕಾದ ಭೀಕರ ಸ್ಥಿತಿಯಲ್ಲಿ ಕೊಲ್ಲಿ ರಾಷ್ಟ್ರಗಳು ಸಿಕ್ಕಿಹಾಕಿಕೊಂಡಿದ್ದವು.

ಟ್ರಂಪ್ ಗಂಟಲಲ್ಲಿ ಸಿಕ್ಕಿಕೊಂಡ ಕಡುಬು!

ಇರಾನ್ ವಿರುದ್ಧ ಮಿಲಿಟರಿ ದಾಳಿಗಳು ಪ್ರಾರಂಭವಾದ ಫೆಬ್ರವರಿ 28 ರಿಂದ ಕಳೆದ ನಾಲ್ಕು ವಾರಗಳಲ್ಲಿ, ಪ್ರತಿಯೊಂದು ರಾಷ್ಟ್ರವೂ ಟ್ರಂಪ್ ಮತ್ತು ಇರಾನ್ಗೆ ಸಂಘರ್ಷವನ್ನು ಕಡಿಮೆ ಮಾಡುವಂತೆ ವಿನಂತಿ ಮಾಡಿಕೊಳ್ಳುತ್ತಲೇ ಬಂದಿವೆ. ಮೇಲ್ನೋಟಕ್ಕೆ, ದಾಳಿಯನ್ನು ನಿಲ್ಲಿಸುವಂತೆ ಈ ರಾಷ್ಟ್ರಗಳು ಅಮೆರಿಕದ ಮೇಲೆ ಹೇರುತ್ತಿದ್ದ ಒತ್ತಡ ಟ್ರಂಪ್ ಗಂಟಲಲ್ಲಿ ಕಡುಬು ಸಿಕ್ಕಿಹಾಕಿಕೊಂಡಂತಾಯಿತು. ಈ ಬೆಳವಣಿಗೆಯ ಬಳಿಕ ಅಮೆರಿಕ ನಿರ್ಲಕ್ಷಿಸಲಾಗದ ಒತ್ತಡದಲ್ಲಿ ಸಿಲುಕಿಬಿಟ್ಟಿತ್ತು.

ಇರಾನ್ ಮತ್ತು ಕತಾರ್ ಜಂಟಿಯಾಗಿ ಹಂಚಿಕೊಂಡಿದ್ದ 'ಸೌತ್ ಪಾರ್ಸ್' ಅನಿಲ ಘಟಕದ ಮೇಲೆ ಇಸ್ರೇಲ್ ನಡೆಸಿದ ದಾಳಿಯು ಈ ಸಂಘರ್ಷಕ್ಕೆ ಪೂರ್ಣ ವಿರಾಮ ಹಾಕುವಂತೆ ಮಾಡಿತು. ದೋಹಾ ಈ ಘಟನೆಯಿಂದ ಅಕ್ಷರಶಃ ಹೌಹಾರಿ ಹೋಯಿತು; ಇದಕ್ಕೆ ಪ್ರತಿಯಾಗಿ ಇರಾನ್ ಕತಾರ್ನ ಇಂಧನ ಮೂಲದ ಕಿರೀಟಪ್ರಾಯವಾದ 'ರಾಸ್ ಲಫಾನ್' ಮೇಲೆ ದಾಳಿ ನಡೆಸಿತು. ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು ದಾರಿಮಾಡಿಕೊಟ್ಟಿತು.

ಅಮೆರಿಕ ಮತ್ತು ಇಸ್ರೇಲ್ ನಡುವೆ ಮೊದಲ ಭಾರೀ ಬಿರುಕಿಗೆ ಕಾರಣವಾಗಿದ್ದೇ ಈ ದಾಳಿ. ಈ ಸಹವಾಸವೇ ಬೇಡ ಎಂದು ಇಂತಹ ದಾಳಿಯಿಂದ ಟ್ರಂಪ್ ತಮ್ಮ ಕೈತೊಳೆದುಕೊಂಡರು ಮತ್ತು ಯಾವುದೇ ಕಾರಣಕ್ಕೂ ಇರಾನ್ನ ಅನಿಲ ಮೂಲಸೌಕರ್ಯಗಳ ಮೇಲೆ ದಾಳಿ ಮಾಡದಂತೆ ನೆತನ್ಯಾಹು ಅವರಿಗೆ ತಾಕೀತು ಮಾಡಿದರು.

ಟ್ರಂಪ್ ಗಡುವು-ಇರಾನ್ ಧಮಕಿ

ಇರಾನ್ ಒಂದು ವೇಳೆ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸದೇ ಹೋದರೆ ಅದರ ಇಂಧನ ಜಾಲದ ಮೇಲೆ ದಾಳಿ ಮಾಡುವುದಾಗಿ ಟ್ರಂಪ್ ನೀಡಿದ್ದ ಬೆದರಿಕೆ ಮತ್ತು ಗಡುವು ಮತ್ತಷ್ಟು ಆತಂಕಕ್ಕೆ ಕಾರಣವಾಯಿತು. ಇದಕ್ಕೆ ಪ್ರತಿಯಾಗಿ ಇರಾನ್, ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕಕ್ಕೆ ಸಂಬಂಧಿಸಿದ ಎಲ್ಲಾ ಇಂಧನ ಮೂಲಸೌಕರ್ಯಗಳನ್ನು ಮತ್ತು ಈ ಪ್ರದೇಶದ ಜೀವನಾಡಿಯಾಗಿರುವ ಸಮುದ್ರದ ನೀರನ್ನು ಶುದ್ಧೀಕರಿಸುವ ಘಟಕಗಳನ್ನು ನಾಶಪಡಿಸುವುದಾಗಿ ಧಮಕಿ ಹಾಕಿತು.

ಸೋಮವಾರ (ಮಾರ್ಚ್ 23) ಈ ಗಡುವು ಮುಗಿಯುವುದನ್ನು ಇಡೀ ಜಗತ್ತು ಉಸಿರು ಬಿಗಿಹಿಡಿದು ವೀಕ್ಷಿಸುತ್ತಿದ್ದಾಗಲೇ ಟ್ರಂಪ್ ಹಿಂದೆ ಸರಿದಿದ್ದಾರೆ. ಒಂದು ವೇಳೆ ಅವರು ತಮ್ಮ ಬೆದರಿಕೆಯಂತೆ ಮುಂದುವರಿದಿದ್ದರೆ, ಅದು ಇಡೀ ಪ್ರದೇಶಕ್ಕೆ ದೊಡ್ಡ ಕಂಟಕಪ್ರಾಯವಾಗಿ ಪರಿಣಮಿಸುತ್ತಿತ್ತು. ಆದ್ದರಿಂದ, ಈ ಮಹಾವಿಪ್ಲವವನ್ನು ತಪ್ಪಿಸಬೇಕಾದರೆ ಟ್ರಂಪ್ ಅವರ ಈ ಬಿಡುವು ಶಾಶ್ವತವಾಗಲೇಬೇಕಿದೆ, ಏಕೆಂದರೆ ಇನ್ನು ಈ ಯುದ್ಧ ಮುಂದೆ ಸಾಗಲು ಯಾವುದೇ ಮಾರ್ಗವಿಲ್ಲ ಎಂಬುದು ಸ್ಪಷ್ಟ.

ಯುದ್ಧದ ಹೊತ್ತಿನಲ್ಲಿ ಯುರೋಪಿನ ತನ್ನ ಮಿತ್ರರಾಷ್ಟ್ರಗಳು ಮಧ್ಯಪ್ರವೇಶಿಸಿ ಅಮೆರಿಕಕ್ಕೆ ನೆರವಾಗುತ್ತವೆ ಎಂಬುದು ಟ್ರಂಪ್ ಲೆಕ್ಕಾಚಾರವಾಗಿತ್ತು. ಆದರೆ, ಅದು ಸುಳ್ಳಾಯಿತು. ತಮಗೆ ಸಂಬಂಧವಿಲ್ಲದ ಯುದ್ಧದಲ್ಲಿ ಭಾಗಿಯಾಗಲು ನಿರಾಕರಿಸಿದ ನ್ಯಾಟೋ ಮಿತ್ರರಾಷ್ಟ್ರಗಳು ಮತ್ತು ಇತರ ಸ್ನೇಹಪರ ದೇಶಗಳ ನಿರ್ಧಾರವನ್ನು ಅಮೆರಿಕ ಅಧ್ಯಕ್ಷರು ಬಹಿರಂಗವಾಗಿ ಲೇವಡಿ ಮಾಡಿದರು. ಆದರೆ ಇದೇ ಹೊತ್ತಿನಲ್ಲಿ ಅಮೆರಿಕ ಏಕಾಂಗಿಯಾಗಿದೆ ಎಂಬುದು ಅವರಿಗೆ ಮನವರಿಕೆಯಾಗಿರಬೇಕು;

ಇರಾನ್ ಮೇಲೆ ದಾಳಿ ಮಾಡುವ ಅವರ ಉದ್ದೇಶಗಳನ್ನು ಯಾರೂ “ಮೆಚ್ಚಲಿಲ್ಲ” ಮತ್ತು ಅವರು ಯುದ್ಧವನ್ನು ಇನ್ನೂ ಏನಾದರೂ ಮುಂದುವರಿಸಲು ನಿರ್ಧರಿಸಿದರೆ ಅದನ್ನು ಏಕಾಂಗಿಯಾಗಿಯೇ ನಿರ್ವಹಿಸಬೇಕಾಗುತ್ತದೆ. ಟ್ರಂಪ್ ಅವರ ಈ "ವಿರಾಮ"ಕ್ಕೆ ಇದು ಕೂಡ ಒಂದು ಪ್ರಮುಖ ಕಾರಣವಾಗಿರಬಹುದು.

ಇನ್ನು ಇಸ್ರೇಲ್, ಇರಾನ್ನ ಮಿಲಿಟರಿ ಸಾಮರ್ಥ್ಯವನ್ನು ತೀರಾ ತಪ್ಪಾಗಿ ಅಂದಾಜಿಸಿತ್ತು. ಹಾಗಾಗಿ ಅಮೆರಿಕದ ಜೊತೆ ಸೇರಿ ಅದು ಆರಂಭಿಸಿದ ಮಿಲಿಟರಿ ದಾಳಿಗಳು ಅದಕ್ಕೆ ತಿರುಗುಬಾಣವಾದವು. ಮೊದಲನೆಯದಾಗಿ, ಇಸ್ರೇಲ್ ಮೇಲೆ ಯಾವತ್ತು ಇರಾನ್ ಪ್ರತಿದಾಳಿಗಳನ್ನು ಶುರುಹಚ್ಚಿಕೊಂಡಿತೊ ಅದರ ರಕ್ಷಣಾ ವ್ಯವಸ್ಥೆಯ ಲೋಪದೋಷಗಳನ್ನು ಜಗತ್ತಿನ ಮುಂದೆ ಬಯಲಾಗಿ ಹೋಯಿತು. ತನ್ನ ಭದ್ರತೆಯ ಹೆಮ್ಮೆಯ ಪ್ರತೀಕವೆಂದು ಕೊಚ್ಚಿಕೊಳ್ಳುತ್ತಿದ್ದ 'ಐರನ್ ಡೋಮ್' ಮೇಲೆಯೇ ಇರಾನ್ ದಾಳಿ ಮಾಡಿತ್ತು. ಇಸ್ರೇಲ್ ಮೇಲೆ ಎರಗಿ ಬರುವ ಯಾವುದೇ ಕ್ಷಿಪಣಿಯನ್ನು ಇದು ತಡೆದು ಬಿಡುತ್ತದೆ ಎಂಬ ಭರವಸೆ ಹುಸಿಯಾಯಿತು.

ಇಸ್ರೇಲ್ ಅಹಮ್ಮಿಗೆ ಬಿದ್ದ ಭಾರೀ ಪೆಟ್ಟು

ದಿಗ್ಭ್ರಮೆಗೊಂಡ ಇಸ್ರೇಲಿ ಮಿಲಿಟರಿ ಅಧಿಕಾರಿಗಳು, ತಮ್ಮ ರಕ್ಷಣಾ ವ್ಯವಸ್ಥೆಯಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ಪತ್ತೆಹಚ್ಚಲು ತಪಾಸಣೆ ಆರಂಭಿಸಿದ್ದಾರೆ. ಇಸ್ರೇಲ್‌ಗೆ ಬಿದ್ದ ಈ ಹೊಡೆತವನ್ನು ಚೇತರಿಸಿಕೊಳ್ಳಲು ಬಹುಕಾಲ ಬೇಕು. ಜಾಗತಿಕ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಅವರ ಕ್ಷಿಪಣಿ ನಿರೋಧಕ ವ್ಯವಸ್ಥೆಯ ಘನತೆಗೇ ಪೆಟ್ಟು ಬಿದ್ದಿದೆ; ಮಿಲಿಟರಿ ವಿಷಯದಲ್ಲಿ ತಮ್ಮನ್ನು ಯಾರೂ ಮುಟ್ಟಲಾರರು ಎಂಬ ಅವರ ಅಹಂಕಾರದ ನಂಬಿಕೆ ನುಚ್ಚುನೂರಾಗಿ ಹೋಗಿದೆ; ಅವರ "ಅತ್ಯಂತ ರಹಸ್ಯ" ಎನ್ನಲಾದ ಡಿಮೋನಾ ಪರಮಾಣು ಕೇಂದ್ರವು ದಾಳಿಗೆ ತುತ್ತಾಗುವಷ್ಟು ಹತ್ತಿರಕ್ಕೆ ಇರಾನ್ ಕ್ಷಿಪಣಿಗಳು ಬಂದಿದ್ದವು ಮತ್ತು ಇರಾನ್ ಮೇಲಿನ ದಾಳಿಯಿಂದ ಇಸ್ರೇಲ್ ಸರ್ಕಾರಕ್ಕೆ ತೋರಿಸಿಕೊಳ್ಳಲು ಯಾವ ಸಾಧನೆಗಳೂ ಕೂಡ ಉಳಿಯಲಿಲ್ಲ.

"ಆಪರೇಷನ್ ಎಪಿಕ್ ಫ್ಯೂರಿ" ಎಂಬ ವ್ಯರ್ಥ ಕಸರತ್ತು

ಇಸ್ರೇಲ್ ಮತ್ತು ಅಮೆರಿಕದ ಜಂಟಿ ದಾಳಿಗಳು ಇರಾನ್ನ ನಾಗರಿಕರ ಮೇಲೆ ಭಾರಿ ಪರಿಣಾಮ ಬೀರಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ; ಆಸ್ಪತ್ರೆಗಳು, ಶಾಲೆಗಳು ಮತ್ತು ಮಾಲ್ಗಳು ದಾಳಿಗೆ ತುತ್ತಾಗಿವೆ. ಕೆಲವು ಸಾವಿರ ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಮಂದಿ ಗಾಯಗೊಂಡಿದ್ದಾರೆ. ಇಷ್ಟೆಲ್ಲಾ ಆದರೂ, ತಿರುಗಿ ಬೀಳುವ ಇರಾನ್ನ ಹಠ ಮತ್ತು ಉತ್ಸಾಹ ಕುಗ್ಗಿಲ್ಲ. ಬಹುಶಃ ಇದೇ ಅಂಶವು ಟ್ರಂಪ್ ಅವರನ್ನು ಹಿಂದೆ ಸರಿಯುವಂತೆ ಮಾಡಿರಬಹುದು. ಮುಖ್ಯವಾಗಿ, ಟ್ರಂಪ್ ಅವರು ಇತ್ತೀಚೆಗೆ ಯುದ್ಧವನ್ನು "ಹಂತ ಹಂತವಾಗಿ ಕೊನೆಗೊಳಿಸುವ" ಬಗ್ಗೆ ಮಾತನಾಡಿದ ನಂತರವೇ ಈ ಐದು ದಿನಗಳ ಬಿಡುವು ಪ್ರಕಟವಾಗಿದೆ, ಆದ್ದರಿಂದ ಶಾಂತಿಯೇ ಮುಂದಿನ ತಾರ್ಕಿಕ ಹಂತವಾಗಿ ಕಂಡುಬರುತ್ತಿದೆ.

ಆದರೂ, ಟ್ರಂಪ್ ಅವರ ಈ ಬಿಡುವು ಕೇವಲ ಒಂದು ತಾಂತ್ರಿಕ ತಂತ್ರಗಾರಿಕೆಯೂ ಆಗಿರಬಹುದು; ಅಂದರೆ ಇರಾನ್ನ ವಿದ್ಯುತ್ ಜಾಲದ ಮೇಲೆ ದಾಳಿ ಮಾಡುವ ಮೊದಲು ಅಮೆರಿಕ ತನ್ನ ಮಿಲಿಟರಿಯನ್ನು ಸಜ್ಜುಗೊಳಿಸಲು ಮಾಡಿಕೊಂಡ ಸಮಯಾವಕಾಶವೂ ಇದಾಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಟ್ರಂಪ್ ಅವರ ವಿಶ್ವಾಸಾರ್ಹತೆಯ ಮಟ್ಟ ಎಂತಹುದೆಂದರೆ, ಅವರ ಮಾತುಗಳನ್ನು ಯಾರೂ ನಂಬುವ ಧೈರ್ಯ ಮಾಡಲಾರರು. ಟ್ರಂಪ್ ಅವರಿಂದ ಏನನ್ನೂ ನಿರೀಕ್ಷಿಸಬಹುದು ಎಂಬುದು ನಿಜವಾದರೂ ಮತ್ತೊಮ್ಮೆ ದಾಳಿ ಮಾಡುವ ಸಾಧ್ಯತೆಗಳು ತೀರಾ ತೀರಾ ಕ್ಷೀಣವಾಗಿವೆ. ಏಕೆಂದರೆ, "ಆಪರೇಷನ್ ಎಪಿಕ್ ಫ್ಯೂರಿ" ಎಂಬುದು ಮೊದಲಿನಿಂದಲೂ ಒಂದು ವ್ಯರ್ಥ ಕಸರತ್ತು ಎಂಬುದು ಬಹುಶಃ ಈಗ ಅವರಿಗೂ ಮನವರಿಕೆಯಾಗಿರಬಹುದು.



Next Story