D Ravi Kanth

ನಿಮ್ಮ ಪರಮಾಪ್ತಮಿತ್ರ ಕದನದ ಕಿಚ್ಚು ಹಚ್ಚಿದಾಗ ತೆಪ್ಪಗಿರುವುದು ರಾಜತಂತ್ರವೇ?


ನಿಮ್ಮ ಪರಮಾಪ್ತಮಿತ್ರ ಕದನದ ಕಿಚ್ಚು ಹಚ್ಚಿದಾಗ ತೆಪ್ಪಗಿರುವುದು ರಾಜತಂತ್ರವೇ?
x
ಬಾಂಬ್ ಸುರಿಮಳೆ ಗರೆಯುವ ಕೆಲವೇ ದಿನಗಳಿಗೂ ಮೊದಲು ಮೋದಿ ಅವರು ನೆತನ್ಯಾಹು ಅವರ ಮೇಲೆ ಪ್ರಶಂಸೆಯ ಸುರಿಮಳೆ ಗರೆದಿದ್ದರು. ಇದೇ ನೆತನ್ಯಾಹು ಗಾಜಾದಲ್ಲಿ ನರಮೇಧ ಮಾಡಿದ್ದಕ್ಕಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳು ಅವರಿಗೆ ʼಯುದ್ಧಾಪರಾಧಿʼ ಎಂಬ ಹಣೆಪಟ್ಟಿ ಕಟ್ಟಿದ್ದವು. ಅಂದು ನೆತನ್ಯಾಹು ಮೋದಿ ಕಿವಿಯಲ್ಲಿ ಉಸುರಿದ್ದಾದರೂ ಏನು?
Click the Play button to hear this message in audio format

ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗುವ ಪ್ರತಿಯೊಂದು ಡಾಲರ್ ಕೂಡ ನಮ್ಮ ವಿತ್ತೀಯ ಕೊರತೆಯಲ್ಲಿ ಬಲವಾದ ರಂಧ್ರವನ್ನು ಕೊರೆಯಲಿದೆ ಮತ್ತು ಭಾರತದ ಚಾಲ್ತಿ ಖಾತೆಯ ಅಂತರವನ್ನು ಹೆಚ್ಚಿಸುತ್ತದೆ. ಜೊತೆಗೆ ಪೆಟ್ರೋಲ್, ಡೀಸೆಲ್ ಸೇರಿದಂತೆ ಟ್ರಕ್-ಗಳಲ್ಲಿ ಸಾಗಣೆಯಾಗುವ ಪ್ರತಿಯೊಂದು ವಸ್ತುವಿನ ಬೆಲೆಯನ್ನೂ ಸಾಮಾನ್ಯ ಮನುಷ್ಯನ ಕೈಗೆ ಎಟುಕದಂತೆ ಮಾಡಿಬಿಡುತ್ತದೆ.

ನಿಮ್ಮ ಮನೆಗೆ ಬೆಂಕಿ ಬಿದ್ದಾಗ ಏನು ಮಾಡುತ್ತೀರಿ? ಖಂಡಿತವಾಗಿ ಅಗ್ನಿಶಾಮಕ ದಳಕ್ಕೆ ಕರೆಮಾಡುತ್ತೀರಿ. ಆದರೆ ನಿಮ್ಮ ಪರಮಾಪ್ತ ಗೆಳೆಯನೇ ಬೆಂಕಿ ಕಡ್ಡಿ ಹಿಡಿದು ನಿಂತಾಗ ಏನು ಮಾಡುತ್ತೀರಿ?

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯನ್ನು ಕ್ಷಿಪ್ರಗತಿಯಲ್ಲಿ ಹದಗೆಡುವಂತೆ ಮಾಡಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಪ್ತ ಗೆಳಯರಾದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅಲ್ ನಹ್ಯಾನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಅವರಿಗೆ ಆತಂಕವಿರುವುದು ನಿಜ. ಎಲ್ಲ ದೇಶಗಳಿಗೂ ಆತಂಕವಿದೆ ಎಂಬುದು ನಿಶ್ಚಿತ. ಆದರೆ ಮೋದಿ ಅವರ ಕಾಳಜಿಯು ಆಯಕಟ್ಟಿನ ದೃಷ್ಟಿಯಿಂದ ಎಲ್ಲೋ ದಾರಿ ತಪ್ಪಿದಂತೆ ಕಾಣುತ್ತಿದೆ. ಅವರ ಈ ರಾಜತಾಂತ್ರಿಕ ನಡೆಯು ಅಸಲಿ ವಿಚಾರವನ್ನೇ ಮರೆತುಬಿಟ್ಟಂತೆ ಗೋಚರಿಸುತ್ತಿದೆ.

ಎಲ್ಲರೂ ಗೆಳೆಯರೇ…

ಈ ಪರಿಸ್ಥಿತಿ ಹದಗೆಡುತ್ತಿರುವುದಕ್ಕೆ ನೈಸರ್ಗಿಕ ವಿಕೋಪವೇನು ಕಾರಣವಲ್ಲ. ಬದಲಾಗಿ ನೆತನ್ಯಾಹು ಹಾಗೂ ಮೋದಿ ಅವರ ಇನ್ನೊಬ್ಬ ʼಆಪ್ತ ಗೆಳೆಯʼ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲೆ ಯುದ್ಧ ಸಾರಿದ್ದರಿಂದ ಉಂಟಾದ ದಯನೀಯ ಪರಿಸ್ಥಿತಿ ಇದಾಗಿದೆ. ಇದನ್ನು ನಾವು ಅದರ ಹೆಸರಿನಿಂದಲೇ ಕರೆಯೋಣ; ʼಆಪರೇಷನ್ ಎಪಿಕ್ ಫ್ಯೂರಿʼ ಎಂಬ ಈ ಕಾರ್ಯಾಚರಣೆಗೆ ಯಾವ ಪ್ರಚೋದನೆಯೂ ಇಲ್ಲ. ಅದು ಏಕಪಕ್ಷೀಯ.

ಇನ್ನೇನು ಬಾಂಬ್ ಸುರಿಮಳೆ ಗರೆಯುವ ಕೆಲವೇ ದಿನಗಳಿಗೆ ಮುನ್ನ ನೆತನ್ಯಾಹು ಅವರನ್ನು ಮೋದಿ ಅವರು ಪ್ರಶಂಸೆಯ ಸುರಿಮಳೆ ಗರೆದಿದ್ದರು. ಇದೇ ನೆತನ್ಯಾಹು ಗಾಜಾದಲ್ಲಿ ನರಮೇಧ ಮಾಡಿದ್ದಕ್ಕಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳು ಅವರಿಗೆ ʼಯುದ್ಧಾಪರಾಧಿʼ ಎಂಬ ಹಣೆಪಟ್ಟಿ ಕಟ್ಟಿದ್ದವು.

ಮೋದಿ ಅವರು ಟೆಲ್ ಅವಿವ್-ನಲ್ಲಿದ್ದಾಗ ನೆತನ್ಯಾಹು ಅವರು ತಮ್ಮ ಸ್ನೇಹಿತನ ಕಿವಿಯಲ್ಲಿ ಏನಾದರೂ ಎಚ್ಚರಿಕೆಯ ಮಾತುಗಳನ್ನು ಪಿಸುಗುಟ್ಟಿದರೆ? ಈ ವಲಯವು ಅತಿ ಶೀಘ್ರದಲ್ಲಿಯೇ ಅರಾಜಕತೆಗೆ ಒಳಗಾಗಲಿದೆ ಎಂಬ ಮುನ್ಸೂಚನೆಯನ್ನೇನಾದರೂ ಮೋದಿ ಅವರಿಗೆ ನೀಡಿದ್ದರೆ? ನಮಗದು ಗೊತ್ತಿಲ್ಲ. ಆದರೆ ಮೋದಿ ಅವರು ಯಾರಿಗೆ ಕರೆ ಮಾಡಿಲ್ಲ ಎಂಬ ಸಂಗತಿ ನಮಗೆ ತಿಳಿದಿದೆ. ಅದು ಇನ್ಯಾರೂ ಅಲ್ಲ- ಡೊನಾಲ್ಡ್ ಟ್ರಂಪ್.

ಹೀಗೆ ಬೆಂಕಿ ಹಚ್ಚಿದ ವ್ಯಕ್ತಿಯನ್ನು ಭಾರತದ ಪ್ರಧಾನಿ ಯಾಕೆ ಸಂಪರ್ಕಿಸುತ್ತಿಲ್ಲ? ಅಮೆರಿಕ ಈ ಯುದ್ಧದಿಂದ ಹಿಂದೆ ಸರಿಯುವಂತೆ ಒತ್ತಡ ಹೇರಲು ತಮ್ಮ ಪ್ರಖ್ಯಾತ ʼವೈಯಕ್ತಿಕ ರಾಜತಾಂತ್ರಿಕತೆʼಯನ್ನು ಯಾಕೆ ಬಳಸುತ್ತಿಲ್ಲ? ಬದಲಾಗಿ ಈ ಬಿಕ್ಕಟ್ಟಿಗೆ ಮೂಲ ಕಾರಣವಾದ ಅಮೆರಿಕ-ಇಸ್ರೇಲ್ ಯುದ್ಧ ಯಂತ್ರದ ಬಗ್ಗೆ ದಿವ್ಯ ಮೌನವಹಿಸಿದ್ದಾರೆ. ಇದು ಅನೇಕ ಸಂಗತಿಗಳನ್ನು ತೆರೆದಿಡುತ್ತಿದೆ. ವಿಪತ್ತನ್ನು ತಡೆಗಟ್ಟಲು ಭಾರತಕ್ಕೆ ಇಷ್ಟವಿಲ್ಲ, ಆದರೆ ವಿಪತ್ತಿನ ನಂತರ ಉಂಟಾಗುವ ಪರಿಣಾಮಗಳನ್ನು ನಿಭಾಯಿಸಲು ಮಾತ್ರ ಅದು ಸಿದ್ಧವಿದೆ ಎಂಬ ಸಂದೇಶವನ್ನು ಇದು ಜಗತ್ತಿಗೆ ನೀಡುತ್ತಿದೆ. ಆ ಪರಿಣಾಮಗಳು ಈಗಾಗಲೇ ನಮ್ಮ ಮುಂದೆ ನಿಚ್ಚಳವಾಗಿ ಕಾಣಿಸಿಕೊಳ್ಳುತ್ತಿವೆ.

ಅರ್ಥ ವ್ಯವಸ್ಥೆಯ ಬುಡಕ್ಕೇ ಬೆಂಕಿ

ಇದು ಕೇವಲ ಸಾಂಪ್ರದಾಯಿಕ ಯುದ್ಧವಾಗಷ್ಟೇ ಉಳಿದಿಲ್ಲ; ಇದು ಒಂದು ಭೂ-ಆರ್ಥಿಕ ದುಸ್ವಪ್ನವಾಗಿ ರೂಪಾಂತರಗೊಂಡಿದೆ. ತನ್ನ ನಾಗರಿಕ ಇತಿಹಾಸದ 'ವ್ಯೂಹಾತ್ಮಕ ತಾಳ್ಮೆ'ಯನ್ನು ಬಂಡವಾಳವಾಗಿ ಮಾಡಿಕೊಂಡಿರುವ ಇರಾನ್, ಈಗ ಎರಡನೇ ಹಂತಕ್ಕೆ ಕಾಲಿಟ್ಟಿದೆ. ಸೇನಾ ಸಂಘರ್ಷದಲ್ಲಿ ತಾನು ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಇರಾನ್ ಸರಿಯಾಗಿಯೇ ಲೆಕ್ಕಹಾಕಿದೆ, ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ಅವರ ಪ್ರಾದೇಶಿಕ ಮಿತ್ರಪಕ್ಷಗಳಿಗೆ ಈ ಯುದ್ಧವು ಆರ್ಥಿಕವಾಗಿ ಭರಿಸಲಾಗದಂತೆ ಮಾಡುವ ಶಕ್ತಿ ತನಗಿದೆ ಎಂಬುದನ್ನು ಅದು ಅರಿತಿದೆ.

ಕಳೆದ 48 ಗಂಟೆಗಳ ಅವಧಿಯಲ್ಲಿ, ಇರಾನ್ ಅಕ್ಷರಶಃ ಜಾಗತಿಕ ಆರ್ಥಿಕತೆಗೇ ಬೆಂಕಿ ಹಚ್ಚಿದೆ. ಈ ಪ್ರದೇಶದ ಇಂಧನ ದೈತ್ಯರಾದ ಸೌದಿ ಅರಾಮ್ಕೊದ ಘಟಕಗಳು, ಕತಾರ್ನ ಅನಿಲ ಕ್ಷೇತ್ರಗಳು, ಯುಎಇ, ಕುವೈತ್ ಮತ್ತು ಇರಾಕ್ನ ತೈಲ ಕೇಂದ್ರಗಳನ್ನು ಗುರಿಯಾಗಿಸುವ ಮೂಲಕ ಇರಾನ್ ಅಮೆರಿಕಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ: "ನೀವು ನಮ್ಮ ಘಟಕಗಳನ್ನು ನಾಶಪಡಿಸಬಹುದು, ಆದರೆ ನಾವು ನಿಮ್ಮ ಅರ್ಥ ವ್ಯವಸ್ಥೆಯನ್ನೇ ಧ್ವಂಸಗೊಳಿಸುತ್ತೇವೆ."

ಒಮ್ಮೆ ಈ ಲೆಕ್ಕಾಚಾರವನ್ನು ಗಮನಿಸಿ. ವಿಶ್ವದ ಮೂರನೇ ಅತಿದೊಡ್ಡ ಎಲ್ಎನ್ಜಿ (LNG) ರಫ್ತುದಾರ ರಾಷ್ಟ್ರವಾದ ಕತಾರ್, ಈಗಾಗಲೇ ತನ್ನ ಅತಿದೊಡ್ಡ ಅನಿಲ ಕ್ಷೇತ್ರದಲ್ಲಿ ಕೆಲಸವನ್ನು ಸ್ಥಗಿತಗೊಳಿಸಿದೆ. ಇದು ಕೇವಲ ದೋಹಾದ ಸಮಸ್ಯೆಯಲ್ಲ. ರಷ್ಯಾದ ಅನಿಲದ ಮೇಲಿನ ಅವಲಂಬನೆಯನ್ನು ಹೇಗಾದರೂ ಮಾಡಿ ಕಡಿಮೆ ಮಾಡಿಕೊಳ್ಳಲು ಹೆಣಗಾಡುತ್ತಿರುವ ಯುರೋಪ್ನ ಸಮಸ್ಯೆಯೂ ಹೌದು. ತನ್ನ ಶೇಕಡಾ 38 ರಷ್ಟು ತೈಲಕ್ಕಾಗಿ ಹೊರ್ಮುಜ್ ಜಲಸಂಧಿಯನ್ನೇ ನಂಬಿಕೊಂಡಿರುವ ಚೀನಾದ ಸಮಸ್ಯೆಯೂ ಹೌದು. ಮತ್ತು ಖಂಡಿತವಾಗಿಯೂ, ಇದು ಭಾರತದ ಸಮಸ್ಯೆಯೂ ಹೌದು.

ಬ್ರೆಂಟ್ ಕಚ್ಚಾ ತೈಲದ ಬೆಲೆ ಈಗಾಗಲೇ ಪ್ರತಿ ಬ್ಯಾರೆಲ್-ಗೆ ಎಂಭತ್ತು ಡಾಲರ್ ಗಡಿ ದಾಟುತ್ತಿರುವ ಬೆನ್ನಲ್ಲೇ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಕೂಡ ಈ ಯುದ್ಧದ ಬಲಿಪಶುವಾಗಲಿದ್ದಾನೆ. ಭಾರತವು ತನ್ನ ಬಳಕೆಯ ಬಹುಪಾಲು ತೈಲವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿದೆ. ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗುವ ಪ್ರತಿಯೊಂದು ಡಾಲರ್ ಕೂಡ ನಮ್ಮ ವಿತ್ತೀಯ ಕೊರತೆಯಲ್ಲಿ ಬಲವಾದ ರಂಧ್ರವನ್ನು ಕೊರೆಯಲಿದೆ ಮತ್ತು ಭಾರತದ ಚಾಲ್ತಿ ಖಾತೆಯ ಅಂತರವನ್ನು ಹೆಚ್ಚಿಸುತ್ತದೆ. ಜೊತೆಗೆ ಪೆಟ್ರೋಲ್, ಡೀಸೆಲ್ ಸೇರಿದಂತೆ ಟ್ರಕ್-ಗಳಲ್ಲಿ ಸಾಗಣೆಯಾಗುವ ಪ್ರತಿಯೊಂದು ವಸ್ತುವಿನ ಬೆಲೆಯನ್ನೂ ಸಾಮಾನ್ಯ ಮನುಷ್ಯನ ಕೈಗೆ ಎಟುಕದಂತೆ ಮಾಡಿಬಿಡುತ್ತದೆ.

ವಾಸ್ತವದ ಭೀಕರತೆ

ಗ್ಯಾಸ್ ಬೆಲೆಯನ್ನು ಕಡಿಮೆ ಮಾಡುತ್ತೇನೆ ಎಂದು ಟ್ರಂಪ್ ಅಮೆರಿಕನ್ನರ ಮುಂದೆ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಆದರೆ ಈ "ಅಜಾಗರೂಕ ಜೂಜು" ಶೀಘ್ರದಲ್ಲೇ ಅಮೆರಿಕನ್ನರು ಪೆಟ್ರೋಲ್ ಬಂಕ್ಗಳಲ್ಲಿ ಬೆಲೆ ಏರಿಕೆಯ ಬಿಸಿ ಅನುಭವಿಸುವಂತೆ ಮಾಡಲಿದೆ ಎಂದು 'ಫೈನಾನ್ಷಿಯಲ್ ಟೈಮ್ಸ್' ಸರಿಯಾಗಿಯೇ ಹೇಳಿದೆ,. ಅಮೆರಿಕನ್ನರು ಆ ಬಿಸಿಯನ್ನು ಅನುಭವಿಸಿದಾಗ ಮಾತ್ರ ಇಡೀ ಜಗತ್ತಿಗೆ ಅದರ ಕಂಪನದ ಅನುಭವವಾಗುತ್ತದೆ.

ಆದರೆ ಇರಾನ್ನ ಆಟದ ಯೋಜನೆ ಕೇವಲ ಎರಡು ಹಂತಗಳಿಗೆ ಸೀಮಿತವಾಗಿಲ್ಲ. ಈ ತಂತ್ರಗಾರಿಕೆಯಲ್ಲಿ ಮೂರನೇ ಮತ್ತು ನಾಲ್ಕನೇ ಹಂತಗಳೂ ಇವೆ ಎಂದು ವಿಶ್ಲೇಷಕರು ಎಚ್ಚರಿಕೆ ನೀಡುತ್ತಿದ್ದಾರೆ: ಆಯಕಟ್ಟಿನ ಯುದ್ಧಕಾಲದ ಡಿಪೋಗಳು, ಆಹಾರ ಸಂಗ್ರಹಾಗಾರಗಳು, ಸಮುದ್ರದ ನೀರನ್ನು ಸಿಹಿನೀರು ಮಾಡುವ ಘಟಕಗಳು ಮತ್ತು ಅಂತಿಮವಾಗಿ ವಸತಿ ಪ್ರದೇಶಗಳನ್ನು ಗುರಿಯಾಗಿಸುವ ಉದ್ದೇಶಪೂರ್ವಕ ನಡೆ ಇದು. ಇದು ಹತೋಟಿ ಸಾಧಿಸಲು ರೂಪಿಸಲಾದ ಭಯಾನಕ ತಂತ್ರವಾಗಿದೆ. ಪ್ರಾದೇಶಿಕ ಅಸ್ಥಿರತೆಯೇ ತನ್ನ ಉಳಿವಿಗಿರುವ ಏಕೈಕ ದಾರಿ ಎಂದು ಇರಾನ್ ಪಣತೊಟ್ಟಿದೆ.

ಇದು ಅತ್ಯಂತ ಕಠೋರವಾದ ವಾಸ್ತವ. ಅಮೆರಿಕವು ಮತ್ತೊಮ್ಮೆ ಸ್ಪಷ್ಟವಾದ 'ನಿರ್ಗಮನ ಯೋಜನೆ' ಇಲ್ಲದೆಯೇ ಯುದ್ಧವೊಂದನ್ನು ಆರಂಭಿಸಿದೆ—ಇದು ವಿಯೆಟ್ನಾಂ, ಅಫ್ಘಾನಿಸ್ತಾನ, ಇರಾಕ್, ಲಿಬಿಯಾ ಮತ್ತು ಸಿರಿಯಾದ ದುರಂತಗಳ ಪ್ರತಿಧ್ವನಿಯಂತೆ ಕಾಣುತ್ತಿದೆ. ಸಾವಿರಾರು ಜನರು ಸಾಯಲಿದ್ದಾರೆ. ಈಗಾಗಲೇ ಟ್ರಂಪ್ ಅವರ ಏಕಪಕ್ಷೀಯ ಸುಂಕಗಳಿಂದ ಹೈರಾಣಾಗಿರುವ ಜಾಗತಿಕ ಆರ್ಥಿಕತೆಯು ಈಗ ಆರ್ಥಿಕ ಕುಂಠಿತದೊಂದಿಗೆ ಹಣದುಬ್ಬರ ಎಂಬ ಸಂಕಷ್ಟದ ಸುಳಿಗೆ ಸಿಲುಕುವ ಭೀತಿಯಲ್ಲಿದೆ.

ಭಾರತದ ಪ್ರಭಾವ

ಹೀಗಿದ್ದರೂ, ಪ್ರಧಾನಿ ಮೋದಿಯವರ ಪ್ರತಿಕ್ರಿಯೆ ಮಾತ್ರ ಈ 'ಬೆಂಕಿ ಹಚ್ಚುವವರನ್ನೇ' "ಗೆಳೆಯರು" ಎಂದು ಕರೆದು ಕೇವಲ ಆತಂಕ ವ್ಯಕ್ತಪಡಿಸುವುದಕ್ಕೆ ಮಾತ್ರ ಸೀಮಿತವಾಗಿದೆ. ಭಾರತವು ದೊಡ್ಡ ಹಿತಾಸಕ್ತಿಗಳನ್ನು ಹೊಂದಿರುವ ಒಂದು ಪ್ರಬಲ ಶಕ್ತಿ. ನಮ್ಮದೇ ಆದ ಆಯಕಟ್ಟಿನ ಹಿತಾಸಕ್ತಿಗಳು—ಅಂದರೆ ಇಂಧನ ಭದ್ರತೆ, ವ್ಯಾಪಾರಕ್ಕೆ ಪೂರಕವಾದ ಸ್ಥಿರ ನೆರೆಹೊರೆ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿರುವ ನಮ್ಮ ಲಕ್ಷಾಂತರ ನಾಗರಿಕರ ಸುರಕ್ಷತೆ—ಎಲ್ಲವೂ ಬೆಂಕಿಗೆ ಆಹುತಿಯಾಗುತ್ತಿರುವಾಗ, ಕೇವಲ ಯುದ್ಧನಿರತ ಮಿತ್ರರ ಓಲೈಕೆಯಲ್ಲಿ ತೊಡಗಿರುವ ವಿದೇಶಾಂಗ ನೀತಿಯನ್ನು ಅನುಸರಿಸಲು ನಮಗೆ ಸಾಧ್ಯವಿಲ್ಲ.

ಮೋದಿ ಅವರು ಫೋನ್ ಎತ್ತಿಕೊಳ್ಳಬಹುದು. ಈ ಯುದ್ಧವನ್ನು ಪ್ರಾರಂಭಿಸಿದ ವ್ಯಕ್ತಿಗೆ ಕರೆ ಮಾಡಬಹುದು. ಭಾರತದ ನಿಜವಾದ ಪ್ರಭಾವ ಇರುವುದೇ ಅಲ್ಲಿ.

ನೀವು ಮಾತನಾಡಬೇಕೆಂದು ಒತ್ತಾಯಿಸುವುದರಲ್ಲಿಯೇ ನಿಮ್ಮ ಹಿತಾಸಕ್ತಿಗಳು ಅಡಗಿವೆ. ನಿಮ್ಮ ಸ್ನೇಹಿತರ ಮೂರ್ಖತನದ ಮುಂದೆ ನೀವು ಮೌನವಾಗಿರುವುದು ರಾಜತಾಂತ್ರಿಕತೆಯಲ್ಲ, ಅದು ಅಪರಾಧದಲ್ಲಿ ಪಾಲುದಾರಿಕೆ ಪಡೆದಂತೆ ಮತ್ತು ಭಾರತವು ತನ್ನದೇ ಆದ ಆರ್ಥಿಕ ವಿನಾಶಕ್ಕೆ ಪೂರಕವಾಗಿ ನಿಲ್ಲುವ ಸಹಚರನಾಗಲು ಖಂಡಿತವಾಗಿಯೂ ಸಾಧ್ಯವಿಲ್ಲ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story