
ಸೌದಿ ಪಟ್ಟಾಭಿಷಿಕ್ತ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೈಭವ ಮತ್ತು ವಿಜೃಂಭಣೆಯ ಸ್ವಾಗತ ನೀಡಿದರು. ಆ ಮೂಲಕ ಪತ್ರಕರ್ತ ಖುಶೋಗಿ ಅವರ ಭೀಬತ್ಸ ಹತ್ಯೆಯಂತಹ ಗಂಭೀರ ವಿಷಯ ಕೂಡ ಕಾಲ ಮತ್ತು ಕಾಂಚಾಣದ ಕುಣಿತದ ನಡುವೆ ಮರೆಯಾಗಿ ಹೋಯಿತು...
ಡೊನಾಲ್ಡ್ ಟ್ರಂಪ್ ಮತ್ತು ಅವರ ಹಿಂದಿನ ಅಧ್ಯಕ್ಷ ಜೋ ಬಿಡೆನ್ ಇಬ್ಬರೂ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದರೂ ಸಹ, ಮೊಹಮ್ಮದ್ ಬಿನ್ ಸಲ್ಮಾನ್ (ಎಂ.ಬಿ.ಎಸ್) ಅವರಿಗೆ ನೀಡಲಾದ ಶಿಷ್ಟಾಚಾರವು ರಾಜತಾಂತ್ರಿಕವಾಗಿ ಅವರಿಗೆ ಸಂಪೂರ್ಣ ಮರುಜೀವ ನೀಡಿದ್ದರ ಸಂಕೇತವಾಗಿದೆ. ಅಕ್ಟೋಬರ್ 2018ರಲ್ಲಿ ಇಸ್ತಾಂಬುಲ್ನಲ್ಲಿರುವ ತಮ್ಮ ದೇಶದ ಕಾನ್ಸುಲೇಟ್ ಜನರಲ್ ಕಚೇರಿಯಲ್ಲಿ ನಡೆದ ಸೌದಿ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಅವರ ಭೀಕರ ಹತ್ಯೆಯಲ್ಲಿ ಎಂ.ಬಿ.ಎಸ್ ಸಂಭಾವ್ಯ ಶಾಮೀಲಾಗಿರುವ ಬಗ್ಗೆ ಈಗ ಯಾವ ರಾಷ್ಟ್ರವೂ ಕಿಂಚಿತ್ತೂ ಚಿಂತಿಸುತ್ತಿಲ್ಲ.
ನೈತಿಕತೆಯಲ್ಲ ಹಿತಾಸಕ್ತಿಯೇ ಮುಖ್ಯ
ಖಶೋಗಿ ಅವರ ಕೊಲೆ ಮತ್ತು ಅವರ ದೇಹವನ್ನು ಛಿದ್ರ ಛಿದ್ರ ಮಾಡಿದ ಭೀಕರ ಕೃತ್ಯದ ಬಗ್ಗೆ ಜಾಗತಿಕವಾಗಿ, ಅದರಲ್ಲೂ ವಿಶೇಷವಾಗಿ ಪಾಶ್ಚಿಮಾತ್ಯ ಉದಾರವಾದಿ ವಲಯಗಳಲ್ಲಿ ಮತ್ತು ಕೆಲವು ಸರ್ಕಾರದ ಮಟ್ಟದಲ್ಲಿ, ದೊಡ್ಡ ಮಟ್ಟದ ಆಕ್ರೋಶ ಕೇಳಿಬಂದಿತ್ತು. ಆದಾಗ್ಯೂ, ಈಗ ಅವೆಲ್ಲವೂ ಮನುಷ್ಯ ಸ್ಮೃತಿಯಿಂದ ಮರೆತುಹೋದ ಸಂಗತಿ ಎಂಬಂತಾಗಿದೆ. ಇದು ಅಂತರರಾಷ್ಟ್ರೀಯ ಸಂಬಂಧಗಳು ನೈತಿಕತೆಯಿಂದಲ್ಲ ಬದಲಾಗಿ ಹಿತಾಸಕ್ತಿಗಳಿಂದ ನಿಯಂತ್ರಿಸಲ್ಪಡುತ್ತವೆ ಎಂಬುದಕ್ಕೆ ಸ್ಷಷ್ಟ ಸಾಕ್ಷಿ.
ವಾಸ್ತವವಾಗಿ, ಓವಲ್ ಕಛೇರಿಯಲ್ಲಿ ಎಂ.ಬಿ.ಎಸ್ ಅವರಿಗೆ ಒಬ್ಬ ಅಮೆರಿಕನ್ ಪತ್ರಕರ್ತ ಕೇಳಿದ ಪ್ರಶ್ನೆಗೆ ಟ್ರಂಪ್ ಮಾಡಿದ ತೀವ್ರವಾದ ಆಕ್ಷೇಪಣೆಯಿಂದ ಈ ಸತ್ಯವು ಮತ್ತಷ್ಟು ದೃಢಪಟ್ಟಿತು: “ಘನತೆವೆತ್ತ ರಾಜಮನೆತನದವರೇ, ಪತ್ರಕರ್ತರೊಬ್ಬರ ಭೀಕರ ಕೊಲೆಯನ್ನು ನೀವು ಸಂಘಟಿಸಿದ್ದೀರಿ ಎಂಬ ತೀರ್ಮಾನಕ್ಕೆ ಅಮೆರಿಕದ ಗುಪ್ತಚರ (ಸಮುದಾಯ) ಬಂದಿದೆ. ನೀವು ಓವಲ್ ಕಛೇರಿಗೆ ಆಗಮಿಸಿರುವುದಕ್ಕೆ 9/11ರ ಕುಟುಂಬಗಳು ಆಕ್ರೋಶಗೊಂಡಿವೆ. ಅಮೆರಿಕನ್ನರು ನಿಮ್ಮನ್ನು ಯಾಕಾದರೂ ನಂಬಬೇಕು?”
ಇನ್ನೇನು ಎಂಬಿಎಸ್ ಪ್ರತಿಕ್ರಿಯೆ ನೀಡಬೇಕು ಎನ್ನುವಷ್ಟರಲ್ಲಿಯೇ ಟ್ರಂಪ್ ಅವರ ರಕ್ಷಣೆಗೆ ನಿಂತುಬಿಟ್ಟಿದ್ದರು.
ಅತಿಥಿಗೆ ಮುಜುಗರ ತಾರದಿರಿ
ಅವರು ಹೇಳಿದರು, “ನೀವು ಒಬ್ಬ ತೀವ್ರ ವಿವಾದಾತ್ಮಕ ವ್ಯಕ್ತಿಯನ್ನು ಉಲ್ಲೇಖಿಸುತ್ತಿದ್ದೀರಿ. ನೀವು ಮಾತನಾಡುತ್ತಿರುವ ಮಹನೀಯರನ್ನು ನೀವು ಇಷ್ಟಪಟ್ಟರೂ ಅಥವಾ ಇಷ್ಟಪಡದಿದ್ದರೂ, ಬಹಳಷ್ಟು ಜನರಿಗೆ ಅವರ ಬಗ್ಗೆ ಇಷ್ಟವಿರಲಿಲ್ಲ. ಆದರೆ, ಅವರಿಗೆ (MBS ಕಡೆಗೆ ಕೈತೋರಿಸಿ) ಇದರ ಬಗ್ಗೆ ಏನೂ ತಿಳಿದಿಲ್ಲ. ಅಂತಹ ಪ್ರಶ್ನೆಯನ್ನು ಕೇಳುವ ಮೂಲಕ ನಮ್ಮ ಅತಿಥಿಗೆ ಮುಜುಗರ ಉಂಟುಮಾಡಬೇಕಾಗಿಲ್ಲ.”
ಇಂತಹ ಹೊತ್ತಿನಲ್ಲಿ ಎಂಬಿಎಸ್ ಮಾತನಾಡಲು ನಿರ್ಧರಿಸಿದರು.
ಅವರು ಹೇಳಿದರು, “ಯಾವುದೇ ನೈಜ ಉದ್ದೇಶವಿಲ್ಲದೆ ಯಾರಾದರೂ ತಮ್ಮ ಜೀವವನ್ನು ಕಳೆದುಕೊಳ್ಳುವುದು ನೋವಿನ ಸಂಗತಿ. ಇದು ನೋವಿನ ಜೊತೆಗೆ ಒಂದು ದೊಡ್ಡ ತಪ್ಪು ಕೂಡ. ಮತ್ತು ಅದು ಮರುಕಳಿಸದಂತೆ ನಾವು ನಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇವೆ.”
ಇಸ್ತಾಂಬುಲ್ನಲ್ಲಿ ಖಶೋಗ್ಗಿ ಅವರ ಹತ್ಯೆ ಒಂದು ಲೋಪವಲ್ಲ, ಅದು ಪಕ್ಕಾ ಯೋಜಿತ ಕಾರ್ಯತಂತ್ರವಾಗಿತ್ತು. ಅಮೆರಿಕದಲ್ಲಿ ನೆಲೆಸಿದ್ದ ಮತ್ತು ವಾಷಿಂಗ್ಟನ್ ಪೋಸ್ಟ್ಗೆ ಅಂಕಣಕಾರರಾಗಿದ್ದ ಆ ಭಿನ್ನಮತೀಯ ಪತ್ರಕರ್ತ, ಟರ್ಕಿಶ್ ಮಹಿಳೆ ಜೊತೆಗಿನ ತಮ್ಮ ಮದುವೆಗೆ ಬೇಕಾದ ದಾಖಲೆಗಳನ್ನು ಸಂಗ್ರಹಿಸಲು ತಮ್ಮ ದೇಶದ ಇಸ್ತಾಂಬುಲ್ ದೂತಾವಾಸಕ್ಕೆ ಭೇಟಿ ನೀಡಿದ್ದರು. ಕೆಲವು ದಿನಗಳ ನಂತರ ಬರುವಂತೆ ಅವರಿಗೆ ತಿಳಿಸಲಾಯಿತು.
ಆ ಪತ್ರಕರ್ತ ಮುಂದಿನ ಭೇಟಿ ನೀಡುವುದಕ್ಕೂ ಮೊದಲು, ಹದಿನೈದು ಸೌದಿ ಏಜೆಂಟರು ಖಶೋಗಿ ವಿರುದ್ಧದ ಕಾರ್ಯಾಚರಣೆಗಾಗಿ ಇಸ್ತಾಂಬುಲ್ಗೆ ಬಂದರು. ನಿಜವಾಗಿ, ಸೌದಿ ವ್ಯವಸ್ಥೆಯ ಸ್ವರೂಪವನ್ನು ಗಮನಿಸಿದರೆ, ಅಂತಹ ಕಾರ್ಯಾಚರಣೆಯನ್ನು ಎಂ.ಬಿ.ಎಸ್. ಅವರಿಂದ ಮಾತ್ರವೇ ಅಧಿಕೃತವಾಗಿ ನಡೆಯಲು ಸಾಧ್ಯವಿತ್ತು.
ದೂತಾವಾಸದಲ್ಲಿ ಭೀಭತ್ಸ ಕೃತ್ಯ
ನಿಗದಿತ ದಿನದಂದು, ಖಶೋಗಿ ಅವರು ದೂತಾವಾಸದೊಳಗೆ ಹೋದರು, ಅವರ ಭಾವಿ ಪತ್ನಿ ಅವರಿಗಾಗಿ ಕಚೇರಿಯ ಹೊರಗೆ ಕಾಯುತ್ತಿದ್ದರು. ಅವರು ಗಂಟೆಗಳ ಕಾಲ ಹೊರಗೆ ಬಾರದೇ ಇದ್ದಾಗ, ಆತಂಕ ವ್ಯಕ್ತಪಡಿಸಿದರು. ಅಷ್ಟರಲ್ಲೇ, ಖಶೋಗಿ ಅವರ ಹತ್ಯೆ ನಡೆದು ಹೋಗಿತ್ತು ಮತ್ತು ಅವರ ದೇಹವನ್ನು ತುಂಡು ತುಂಡು ಮಾಡಿ, ಆ ದೇಹದ ಭಾಗಗಳನ್ನು ದೂತಾವಾಸದ ಹೊರಗೆ ವಿಲೇವಾರಿ ಮಾಡಲು ಕೊಂಡು ಹೋಗಲಾಗಿತ್ತು.
ಈ ಘಟನೆಯಿಂದ ಟರ್ಕಿ ಕೆರಳಿ ಕೆಂಡವಾಗಿತ್ತು. ದೂತಾವಾಸದೊಳಗೆ ಪ್ರವೇಶಿಸಲು ಟರ್ಕಿ ಪ್ರತಿನಿಧಿಗಳಿಗೆ ಅವಕಾಶ ನೀಡಲಾಯಿತು ಮತ್ತು ಅವರು ದೂತಾವಾಸದ ಕಟ್ಟಡದಿಂದ ಹೊರಬರುವ ಚರಂಡಿಗಳಲ್ಲಿ ಹರಿಯುತ್ತಿದ್ದ ತ್ಯಾಜ್ಯದ ಮಾದರಿಗಳನ್ನು ಕೂಡ ಸಂಗ್ರಹಿಸಿದರು. ಅವರು ಸಂಗ್ರಹಿಸಿದ ಪುರಾವೆಗಳ ಪ್ರಕಾರ ಖಶೋಗಿ ಅವರನ್ನು ದೂತಾವಾಸದಲ್ಲಿಯೇ ಹತ್ಯೆ ಮಾಡಲಾಗಿತ್ತು ಎಂಬ ತೀರ್ಮಾನಕ್ಕೆ ಬರಲಾಯಿತು.
ಈ ಮಧ್ಯೆ ಸೌದಿ ಹತ್ಯಾ ತಂಡವು ಇಸ್ತಾಂಬುಲ್ನಿಂದ ಯಶಸ್ವಿಯಾಗಿ ಸೌದಿ ಅರೇಬಿಯಾಕ್ಕೆ ಮರು ಪ್ರಯಾಣ ಬೆಳೆಸಿತು.
ಘಟನೆಯ ಬಳಿಕ ತೀವ್ರ ಒತ್ತಡಕ್ಕೆ ಒಳಗಾದ ಸೌದಿ ಅರೇಬಿಯಾ ತನಿಖೆಯನ್ನೂ ಪ್ರಾರಂಭಿಸಿತು ಮತ್ತು ಹತ್ಯೆಯನ್ನು ತಾನು ನಡೆಸಿದ್ದು ಹೌದು ಎಂದು ಒಪ್ಪಿಕೊಂಡಿತು. ಜೊತೆಗೆ ಅಧಿಕಾರಿಗಳ ವಿರುದ್ಧ ಪ್ರಕರಣಗಳನ್ನೂ ದಾಖಲಿಸಿ ಕೆಲವರಿಗೆ ಶಿಕ್ಷೆಗಳನ್ನು ವಿಧಿಸಲಾಯಿತು, ಆದರೆ ಅವೆಲ್ಲವೂ ನಿಷ್ಪ್ರಯೋಜಕ. ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಮತ್ತು ತಾನು ನಿರಪರಾಧಿ ಎಂದು ಪ್ರತಿಪಾದಿಸಿದ ಎಂ.ಬಿ.ಎಸ್. ಖಶೋಗಿ ಅವರ ಪುತ್ರರನ್ನು ಭೇಟಿ ಮಾಡಿದರು ಮತ್ತು ಸೌದಿ ಅರೇಬಿಯಾದಂತಹ ರಾಜಕೀಯ ವ್ಯವಸ್ಥೆಗಳಲ್ಲಿ ಇಂತಹ ಸಮಸ್ಯೆಗಳನ್ನು ಬಗೆಹರಿಸುವ ವಿಶಿಷ್ಟ ಶೈಲಿಯಲ್ಲಿ ಈ ವಿಷಯಕ್ಕೆ ಪೂರ್ಣವಿರಾಮ ಹಾಡಲಾಯಿತು.
ಬಹಳಷ್ಟು ಗದ್ದಲ ಮತ್ತು ಕೂಗಾಟ ನಡೆಸಿದ ಪಾಶ್ಚಿಮಾತ್ಯ ದೇಶಗಳು ಕೂಡ ಮೌನಕ್ಕೆ ಶರಣಾದವು.
ಅಳಕು-ಅಂಜಿಕೆ ಇಲ್ಲದ ನಿಲುವು
ಈ ವಿಷಯವನ್ನು ಓವಲ್ ಆಫೀಸ್ನಲ್ಲಿ ಒಬ್ಬ ಪತ್ರಕರ್ತ ಪ್ರಸ್ತಾಪ ಮಾಡುವವರೆಗೂ ಹಾಗೆಯೇ ಇತ್ತು. ಖಶೋಗಿ ಹತ್ಯೆ ಅತ್ಯಂತ ಕೆಟ್ಟ ಭಾಗವೆಂದರೆ ಅದನ್ನು ನಡೆಸಿದ ಸ್ಥಳ. ವಿದೇಶದಲ್ಲಿರುವ ಒಂದು ದೇಶದ ರಾಯಭಾರ ಕಚೇರಿ ಅಥವಾ ದೂತಾವಾಸ ಅತ್ಯಂತ ಸುರಕ್ಷಿತ ಆಶ್ರಯ ತಾಣವೇ ಹೊರತು ಕೊಲೆ ಮಾಡುವ ಸ್ಥಳವಲ್ಲ. ನಿಜವಾಗಿ, ನನ್ನ ಈ ರಾಜತಾಂತ್ರಿಕ ವೃತ್ತಿಜೀವನದಲ್ಲಿ, ತಮ್ಮ ನಾಗರಿಕರಿಗೆ ಸುರಕ್ಷತೆಯನ್ನು ಒದಗಿಸುವ ಬದಲು, ರಾಯಭಾರ ಕಚೇರಿ ಅಥವಾ ದೂತಾವಾಸವು ಎಳ್ಳಷ್ಟೂ ಅಂಜಿಕೆಯಿಲ್ಲದೆ ಕೊಲೆ ಮಾಡುವ ಸ್ಥಳವಾಗಿ ಮಾರ್ಪಟ್ಟ ಇನ್ನೊಂದು ನಿದರ್ಶನವನ್ನು ನಾನು ಕೇಳಿಲ್ಲ.
ಟ್ರಂಪ್ ಅವರ ಪ್ರತಿಕ್ರಿಯೆ ಹೆಚ್ಚಾಗಿ ಪತ್ರಕರ್ತರ ವಿರುದ್ಧವೇ ಆಗಿತ್ತು, ಏಕೆಂದರೆ ಅವರು ಮೂರು ಪ್ರಮುಖ ಕಾರಣಗಳಿಗಾಗಿ ಸೌದಿಗಳ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ: ಅವರು ಅಮೆರಿಕ-ಸೌದಿ ಭದ್ರತೆ, ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳನ್ನು ಪುನಶ್ಚೇತನಗೊಳಿಸಬೇಕು ಎಂಬುದು ಅವರ ಬಯಕೆ, ನವೆಂಬರ್ 17 ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ತನ್ನ 2803ನೇ ನಿರ್ಣಯದ ಮೂಲಕ ಅನುಮೋದಿಸಿದ ಗಾಜಾ ಯೋಜನೆಯ ಕುರಿತಂತೆ ಸೌದಿಯ ಸಂಪೂರ್ಣ ಬೆಂಬಲವನ್ನು ಪಡೆಯುವತ್ತ ಗಮನ ಹರಿಸಿದ್ದಾರೆ, ಮತ್ತು ಈ ಸಂಬಂಧ ಅಬ್ರಹಾಂ ಒಪ್ಪಂದಗಳಿಗೆ ಸೌದಿ ಕೈಜೋಡಿಸಬೇಕು ಎಂಬುದು ಅವರ ಬಯಕೆ
ಸ್ವಾಭಾವಿಕವಾಗಿ, ಅಮೆರಿಕ-ಸೌದಿ ಸಂಬಂಧಗಳು ಪಶ್ಚಿಮ ಏಷ್ಯಾದಲ್ಲಿ ಭಾರತದ ಹಿತಾಸಕ್ತಿಗಳ ಮೇಲೂ ಪರೋಕ್ಷ ಪರಿಣಾಮ ಬೀರುತ್ತವೆ, ಈ ಪ್ರದೇಶದಲ್ಲಿ ಭಾರತವು ವ್ಯಾಪಕವಾದ ಆರ್ಥಿಕ, ವಾಣಿಜ್ಯ ಮತ್ತು ಭದ್ರತಾ ಹಿತಾಸಕ್ತಿಗಳನ್ನು ಹೊಂದಿದೆ.
ಏರಿತು ಹೂಡಿಕೆ ಪ್ರಮಾಣ
ಈ ವರ್ಷದ ಮೇ ತಿಂಗಳಲ್ಲಿ ಟ್ರಂಪ್ ಅವರು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದಾಗ, ಎಂ.ಬಿ.ಎಸ್. ಅವರು ಅಮೆರಿಕದಲ್ಲಿ ಸುಮಾರು 600 ಶತಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ಭರವಸೆ ನೀಡಿದ್ದರು. ಈಗ, ಅವರು ಆ ಮೊತ್ತವನ್ನು ಒಂದು ಟ್ರಿಲಿಯನ್ ಡಾಲರ್ಗೆ ಹೆಚ್ಚಿಸಲು ಒಪ್ಪಿಕೊಂಡಿದ್ದಾರೆ.
ಟ್ರಂಪ್ ಅವರ 'ಮೇಕಿಂಗ್ ಅಮೆರಿಕ ಗ್ರೇಟ್ ಎಗೈನ್' (MAGA) ಕಾರ್ಯಕ್ರಮದ ಪ್ರಮುಖ ಅಂಶವೆಂದರೆ ಅಮೆರಿಕದ ಆರ್ಥಿಕತೆಯನ್ನು ಹಿಗ್ಗಿಸುವುದು ಮತ್ತು ಇತರ ಕ್ಷೇತ್ರಗಳಲ್ಲಿ ವಿದೇಶಿ ನಿಧಿಯನ್ನು ಆಕರ್ಷಿಸುವುದು. ಹೀಗಾಗಿ, ಎಂ.ಬಿ.ಎಸ್. ಅವರ ಈ ಬದ್ಧತೆಯು ಮಹತ್ವದ್ದಾಗಿದೆ, ಆದರೆ ಸೌದಿಯ ಆದಾಯದ ಮೇಲೆ ಒತ್ತಡವಿದೆ ಮತ್ತು ಹೂಡಿಕೆ ಮೀಸಲು ನಿಧಿಗಳಲ್ಲಿ ಎಷ್ಟು ಮೊತ್ತವನ್ನು ದೇಶವು ಅಮೆರಿಕದಲ್ಲಿ ನಿಯೋಜಿಸಲು ಸಿದ್ಧವಾಗುತ್ತದೆ ಎಂಬುದನ್ನು ನೋಡಬೇಕಾಗಿದೆ. ಹೆಚ್ಚು ಸಂಭವನೀಯ ಸಂಗತಿ ಎಂದರೆ, ಎಂ.ಬಿ.ಎಸ್. ಅಮೆರಿಕದಲ್ಲಿನ ಸೌದಿ ಖಾಸಗಿ ಹೂಡಿಕೆಗಳನ್ನು ಪ್ರೋತ್ಸಾಹಿಸಲು ಮನವೊಲಿಸುವ ಸಾಧ್ಯತೆ ಇದೆ.
ಎಂ.ಬಿ.ಎಸ್. ಅವರ ಭೇಟಿಯ ಸಾಧನೆಗಳ ಕುರಿತು ಟ್ರಂಪ್ ಸರ್ಕಾರದ ಟಿಪ್ಪಣಿ ಹೀಗೆ ಹೇಳುತ್ತದೆ: “ಪ್ರಮುಖ ಸಾಧನೆಗಳಲ್ಲಿ ನಾಗರಿಕ ಪರಮಾಣು ಸಹಕಾರ ಒಪ್ಪಂದ, ನಿರ್ಣಾಯಕ ಖನಿಜಗಳ ಸಹಕಾರದಲ್ಲಿನ ಪ್ರಗತಿ ಮತ್ತು ಕೃತಕ ಬುದ್ಧಿಮತ್ತೆ ಒಡಂಬಡಿಕೆ ಸೇರಿವೆ, ಇವೆಲ್ಲವೂ ಅಮೆರಿಕದ ಜನರಿಗೆ ನೇರವಾಗಿ ಪ್ರಯೋಜನವಾಗುವಂತೆ ಮಾಡುವ ಅಮೆರಿಕದ ಬದ್ಧತೆಯನ್ನು ಎತ್ತಿ ತೋರಿಸುತ್ತವೆ."
ಇನ್ನು ಮುಂದೆ ಜಾಗತಿಕ ಶಕ್ತಿಯ ಮುಖ್ಯ ಮೂಲ ಹೈಡ್ರೋಕಾರ್ಬನ್ಗಳು (ಕಲ್ಲಿದ್ದಲು, ತೈಲ ಇತ್ಯಾದಿ) ಆಗಿರದೇ ಇರುವುದರಿಂದ ರಾಷ್ಟ್ರದ ಭವಿಷ್ಯಕ್ಕಾಗಿ ಎಂ.ಬಿ.ಎಸ್. ಸಿದ್ಧತೆ ನಡೆಸಿದ್ದಾರೆ. ಆದ್ದರಿಂದಲೇ, ನಾಗರಿಕ ಪರಮಾಣು ಶಕ್ತಿಯಲ್ಲಿ ಅವರಿಗೆ ಆಸಕ್ತಿ ಇದೆ. ಈಗಿರುವಂತೆಯೇ, ಸೌದಿ ಅರೇಬಿಯಾವು ಸೌರಶಕ್ತಿ ಉತ್ಪಾದನೆ ವಿಚಾರದಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿದೆ ಮತ್ತು ನಾಗರಿಕ ಪರಮಾಣು ಶಕ್ತಿಯೊಂದಿಗೆ ಅದು ಭಾರತದಂತಹ ದೇಶಗಳಿಗೆ ಶಕ್ತಿಯ ಮೂಲವಾಗಿ ಮುಂದುವರಿಯಬಹುದು. ಆದರೆ, ಆಗ ಅದು ತನ್ನ ಹೈಡ್ರೋಕಾರ್ಬನ್ ನಿಕ್ಷೇಪಗಳೊಂದಿಗೆ ಹೊಂದಿರುವ ಅದೇ ಪ್ರಭಾವವನ್ನು ಹೊಂದಲು ಸಾಧ್ಯವಿಲ್ಲ.
ಹಮಾಸ್ ಹುಟ್ಟಡಗಿಸುವ ಬಯಕೆ
ಗಾಜಾ ಕುರಿತ ಟ್ರಂಪ್ ಯೋಜನೆಗಳು ಯಶಸ್ವಿಯಾಗಬೇಕು ಎಂಬುದು ಮೊಹಮ್ಮದ್ ಬಿನ್ ಸಲ್ಮಾನ್ ಅವರ ಬಯಕೆ, ಆದರೆ ಅವರು ಸೈನಿಕರನ್ನು ನೇಮಿಸಲು ಸಿದ್ಧರಿದ್ದಾರೆಯೆ ಎಂಬುದನ್ನು ನೋಡಬೇಕಾಗಿದೆ, ವಿಶೇಷವಾಗಿ ಗಾಜಾ ಈಗ ಪರಿಣಾಮಕಾರಿಯಾಗಿ ಟ್ರಂಪ್ ಅವರ ರಾಜಕೀಯ ಹಿಡಿತದಲ್ಲಿ ಇರುವುದರಿಂದ. ಹಮಾಸ್ ಅಂತ್ಯವಾಗುಬೇಕು ಎಂಬುದು ಎಂಬಿಎಸ್ ಬಯಕೆಯಾಗಿರಬಹುದು, ಆದರೆ ಈ ವಿಚಾರದಲ್ಲಿ, ಅವರು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇದು ವಿಶೇಷವಾಗಿ ಸೌದಿ ಅರೇಬಿಯಾ ಇಸ್ರೇಲ್ ಜೊತೆಗೆ ಹೊಂದಿರುವ ಸಂಬಂಧಗಳನ್ನು ಅನ್ವಿಯಿಸಿದೆ.
ಪಶ್ಚಿಮ ಏಷ್ಯಾದ ಆಂತರಿಕ ಕಲಹಗಳಿಂದ ದೂರವಿದ್ದು, ಪ್ರಾದೇಶಿಕ ರಾಷ್ಟ್ರಗಳ ಜೊತೆ ಕೇವಲ ದ್ವಿಪಕ್ಷೀಯ ಸಂಬಂಧಗಳನ್ನು ಅಭಿವೃದ್ಧಿಪಡಿಸುವ ಸಾಂಪ್ರದಾಯಿಕ ನೀತಿಯನ್ನು ಭಾರತವು ತ್ಯಜಿಸಿದೆ. ಅಮೆರಿಕ, ಇಸ್ರೇಲ್, ಯುಎಇ ಮತ್ತು ಭಾರತ ಸದಸ್ಯರಾಗಿರುವ ಐ2ಯು2 ಗುಂಪಿನ ಸದಸ್ಯತ್ವ ಪಡೆಯುವ ಮೂಲಕ ಅದು ತನ್ನ ಆದ್ಯತೆಯನ್ನು ತೋರಿಸಿದೆ. ಅದು ಐಎಂಇಸಿ ಕಾರಿಡಾರ್-ನ್ನು ಸಹ ಅಭಿವೃದ್ಧಿಪಡಿಸಲು ಬಯಸಿತ್ತು, ಆದರೆ ಗಾಜಾ ಪರಿಸ್ಥಿತಿಯ ಪರಿಣಾಮಗಳಿಂದಾಗಿ ಅದರ ಸದ್ಯೋ ಭವಿಷ್ಯವು ಅಸ್ಪಷ್ಟವಾಗಿದೆ.
ಏತನ್ಮಧ್ಯೆ, ಪಶ್ಚಿಮ ಏಷ್ಯಾದ ಬೆಳವಣಿಗೆಗಳ ಬಗ್ಗೆ ಇರುವ ಹೆಚ್ಚು ಆತಂಕಕಾರಿ ಅಂಶವೆಂದರೆ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವಿನ ಕಾರ್ಯತಂತ್ರದ ವ್ಯವಸ್ಥೆ. ಇದಕ್ಕೆ ಟ್ರಂಪ್ ಅವರ ಆಶೀರ್ವಾದ ಕೂಡ ಇರಬಹುದು. ಜಾಗತಿಕ ವ್ಯವಹಾರಗಳಲ್ಲಿ ಈ ನಿರ್ದಿಷ್ಟ ನೈತಿಕತೆ ಇಲ್ಲದೇ ಇರುವ ಕ್ಷಣದಲ್ಲಿ, ಭಾರತವು ತನ್ನ ಪಶ್ಚಿಮ ನೆರೆಹೊರೆಯಿಂದ ಹೊರಹೊಮ್ಮುತ್ತಿರುವ ಸವಾಲುಗಳನ್ನು ಎದುರಿಸಲು ಸ್ಪಷ್ಟವಾದ ಕಾರ್ಯತಂತ್ರದ ದೃಷ್ಟಿ ಮತ್ತು ದೇಶದಲ್ಲಿ ಒಗ್ಗಟ್ಟು ಅಗತ್ಯವಿದೆ. ಎಂ.ಬಿ.ಎಸ್. ಅಮೆರಿಕಕ್ಕೆ ಭೇಟಿ ನೀಡಿದ ನಂತರ ಈಗ ಸ್ಪಷ್ಟವಾಗಿರುವ ಈ ಸವಾಲನ್ನು ಮೋದಿ ಸರ್ಕಾರವು ಎದುರಿಸಲು ಸಾಧ್ಯವಾಗುತ್ತದೆಯೇ?
(Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ ದ ಫೆಡರಲ್ ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.)


