ಜನಸಂಖ್ಯೆಯ ಟೈಂ ಬಾಂಬ್ ಆಗಿದೆ ಉಬ್ಬಿರುವ ಭಾರತದ ಯುವಪಡೆ
x

ಪ್ರತಿ ವರ್ಷ ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷ ಮಂದಿ ಯುವಕರು ‘ಉದ್ಯೋಗದ ಮಾರುಕಟ್ಟೆ’ಯನ್ನು ಪ್ರವೇಶಿಸುತ್ತಾರೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕಾಲೇಜು ಮೆಟ್ಟಿಲನ್ನು ಏರುತ್ತಿದ್ದರೂ ಕೂಡ ಅವರಿಗೆ ಉತ್ತಮವೆನಿಸುವಂತಹ ಉದ್ಯೋಗ ದೊರೆಯುತ್ತಿಲ್ಲ.

ಜನಸಂಖ್ಯೆಯ ಟೈಂ ಬಾಂಬ್ ಆಗಿದೆ ಉಬ್ಬಿರುವ ಭಾರತದ ಯುವಪಡೆ

ಅವಕಾಶಗಳಿಂದ ವಂಚಿತವಾದ ಯುವಕರ ದೊಡ್ಡ ಸಮೂಹ ತಮ್ಮ ಕರಾಳ ಭವಿಷ್ಯವನ್ನು ಸುಖಾಸುಮ್ಮನೇ ಒಪ್ಪಿಕೊಳ್ಳಲು ಬಯಸುವುದಿಲ್ಲ. ಅವರು ಇಡೀ ಸಮಾಜವನ್ನೇ ಮರುರೂಪಿಸುತ್ತಾರೆ-ಬಹುಪಾಲು ಹಿಂಸಾತ್ಮಕವಾಗಿ. ಭಾರತದಲ್ಲಿ ಈಗ ಇರುವ ಸ್ಥಿತಿಯ ಬಗ್ಗೆ ಉದಾಸೀನ ಧೋರಣೆ ತಾಳದೆ ಅದನ್ನೊಂದು ತುರ್ತು ಅಗತ್ಯ ಎಂದು ಭಾವಿಸಬೇಕು.


ಈ ಲೆಕ್ಕಾಚಾರವು ಪ್ರಲೋಭನಕಾರಿಯಾಗಿದೆ. ಭಾರತದ ಜನಸಂಖ್ಯೆಯ ಶೇ.65ರಷ್ಟು ಮಂದಿ 35ಕ್ಕಿಂತ ಕಡಿಮೆ ವಯಸ್ಸಿನವರು. ಇದು ಮಾನವ ಇತಿಹಾಸದಲ್ಲಿಯೇ ಅತಿದೊಡ್ಡ ಯುವಸಮುದಾಯ. ಪ್ರಗತಿ ಮತ್ತು ಅಭ್ಯುದಯಕ್ಕೆ ದಶಕಗಳ ಕಾಲ ಶಕ್ತಿ ತುಂಬುವ ತಾಕತ್ತು ಈ ಯುವಸಮುದಾಯಕ್ಕಿದೆ.

ಆದರೆ ಈ ಭರವಸೆ ಸುಳ್ಳಾಗಬಹುದು. ಯಾಕೆಂದರೆ ಜನಸಂಖ್ಯೆಯ ಲಾಭಾಂಶವಾಗಿ ಪರಿಗಣಿಸಲಾಗಿರುವ ಈ ಸಮುದಾಯವು ಸಮಸ್ಯಾತ್ಮಕ ಜನಸಂಖ್ಯಾ ಹೊರೆಯಾಗಿ ಬೆಳೆಯುತ್ತಿದೆ. ಇಂತಹುದೊಂದು ಬೆಳವಣಿಗೆ ಪ್ರಗತಿ ಮತ್ತು ಸಾಮಾಜಿಕ ಸಾಮರಸ್ಯದ ತಳಹದಿಯನ್ನೇ ಅಸ್ಥಿರಗೊಳಿಸುವ ಅಪಾಯ ಉಂಟುಮಾಡಿದೆ.

ಸರ್ಕಾರಿ ಸಮೀಕ್ಷೆಗಳು ಮತ್ತು ಶೈಕ್ಷಣಿಕ ಅಧ್ಯಯನಗಳಲ್ಲಿ ಇದಕ್ಕೆ ಸಂಬಂಧಿಸಿದ ಪುರಾವೆಗಳು ಸಂಗ್ರಹವಾಗುತ್ತಿವೆ. ಕಾಲಕಾಲಕ್ಕೆ ನಡೆಸುವ ಕಾರ್ಮಿಕ ಶಕ್ತಿಯ ಸಮೀಕ್ಷೆ ಪ್ರಕಾರ 2023-24ರ ಅವಧಿಯಲ್ಲಿ ದೇಶದಲ್ಲಿ ಯುವಕರ ನಿರುದ್ಯೋಗ ದರವು ಶೇ.10.2ರಷ್ಟಿತ್ತು. ಇಷ್ಟು ಮಾತ್ರವಲ್ಲದೆ ಸುಮಾರು 1.20 ಕೋಟಿ ಯುವಕರು ಪ್ರತಿವರ್ಷ ಉದ್ಯೋಗ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದಾರೆ.

ಒಮ್ಮೆ ಭಾರತದ 2024ರ ಉದ್ಯೋಗ ವರದಿಯನ್ನು ಪರಿಶೀಲಿಸಿ ನೋಡಿದರೆ ಇದರ ವಿರೋಧಭಾಸ ಎಷ್ಟು ಕಠೋರವಾಗಿದೆ ಎಂಬುದು ಅರಿವಾಗುತ್ತದೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕಾಲೇಜು ಮೆಟ್ಟಿಲನ್ನು ಏರುತ್ತಿದ್ದರೂ ಕೂಡ ಅವರಿಗೆ ಉತ್ತಮವೆನಿಸುವಂತಹ ಉದ್ಯೋಗ ದೊರೆಯುತ್ತಿಲ್ಲ. ಅದಕ್ಕೆ ಮುಖ್ಯ ಕಾರಣ ಕೌಶಲ್ಯದ ಕೊರತೆ. ಇದರ ಫಲವಾಗಿ ಅವರು ಮಾರುಕಟ್ಟೆಯಲ್ಲಿ ಹಾಗೂಹೀಗು ಕಷ್ಟಪಟ್ಟು ಅಸ್ತಿತ್ವವನ್ನು ಕಂಡುಕೊಂಡ ಪದವೀಧರರಾಗಿ ಹೊರಹೊಮ್ಮುತ್ತಿದ್ದಾರೆ.

ಸಡಿಲವಾಗಿದೆ ಶಿಕ್ಷಣದ ತಳಹದಿ

ಕಲಿಕಾ ಸಮಸ್ಯೆಯು ಬಹಳ ಬೇಗ ಆರಂಭವಾಗುತ್ತದೆ. 2024ರ ವಾರ್ಷಿಕ ಶೈಕ್ಷಣಿಕ ವರದಿ (ASER)ಯ ಪ್ರಕಾರ ಅನೇಕ ವರ್ಷಗಳ ಶಾಲಾ ಶಿಕ್ಷಣದ ಬಳಿಕವೂ ಸಾಕಷ್ಟು ಸಂಖ್ಯೆಯ ಮಕ್ಕಳು ಸಮರ್ಪಕವಾಗಿ ಓದಲು ಮತ್ತು ಮೂಲ ಗಣಿತವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಇನ್ನೂ ಒಂದು ದುರದೃಷ್ಟದ ಸಂಗತಿ ಎಂದರೆ ಮಕ್ಕಳಲ್ಲಿರುವ ಅಪೌಷ್ಟಿಕತೆ ಮತ್ತು ಬೆಳವಣಿಗೆಯಲ್ಲಿ ಆಗಿರುವ ಕುಂಠಿತ. ಈ ಕಾರಣದಿಂದಾಗಿ ಉದ್ಯೋಗದ ಹುಡುಕಾಟವನ್ನು ಆರಂಭಿಸುವುದಕ್ಕೂ ಮೊದಲೇ ತಮ್ಮ ಯೋಚನಾ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ದೈಹಿಕ ಬೆಳವಣಿಗೆಯನ್ನೂ ಕೂಡ. ಇವೆಲ್ಲವೂ ಒಂದು ಪುಟದ ಮೇಲಿನ ಸಂಖ್ಯೆಗಳೆಂದು ಭಾವಿಸಬೇಡಿ. ಅವು ನಮ್ಮ ಲಕ್ಷಾಂತರ ಮಂದಿ ಯುವಕರು ಆರಂಭದಿಂದಲೇ ಇಂತಹ ‘ಕೊರತೆ’ಗಳಲ್ಲಿ ಬಂದಿಯಾಗಿದ್ದಾರೆ ಎಂಬುದರ ಪ್ರತೀಕ.

ಸಾಮಾನ್ಯವಾಗಿ ಹೆಚ್ಚು ಹೆಚ್ಚು ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ ಅಥವಾ ಬಂದೇ ಆಗಿವೆ. ಅಗತ್ಯವಿರುವ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಬಹುದಾದ ಸಣ್ಣ-ಪುಟ್ಟ ವ್ಯಾಪಾರ-ಉದ್ದಿಮೆಗಳು ಸಾಕಷ್ಟು ಪ್ರಮಾಣದಲ್ಲಿ ಬೆಳೆದಿಲ್ಲ. ಇಲ್ಲಿ ಬಂಡವಾಳ ತೀವ್ರತೆಯನ್ನು ಹೊಂದಿರುವ ವಲಯಗಳು ಬೆಳೆಯುತ್ತಿದ್ದರೂ ಅವು ಭಾರತಕ್ಕೆ ತುರ್ತಾಗಿ ಅಗತ್ಯವಾಗಿರುವ ಸಾಮೂಹಿಕ ಉದ್ಯೋಗವನ್ನು ಸೃಷ್ಟಿಸುವಲ್ಲಿ ವಿಫಲವಾಗಿವೆ. ಇದು ಉದ್ಯೋಗ ರಹಿತ ಬೆಳವಣಿಗೆಯ ಆತಂಕಕಾರಿ ಪ್ರವೃತ್ತಿ ಎನ್ನುತ್ತದೆ ನೀತಿ ಆಯೋಗ.

ಹಾಗಾದರೆ ಉದ್ಯೋಗ ಮಾಡುತ್ತಿರುವ ಯುವತಿಯರ ಪ್ರಮಾಣ ಎಷ್ಟು? ಸುಮಾರು ಮೂರನೇ ಒಂದು ಭಾಗದಷ್ಟು ಯುವತಿಯರು ಮಾತ್ರ ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ನಿಯಮಗಳು, ಅಸಮರ್ಪಕ ಮಕ್ಕಳ ಆರೈಕೆ ಮತ್ತು ನಗರ ಪ್ರದೇಶದಲ್ಲಿ ಇಲ್ಲದ ಸುರಕ್ಷತೆಯು ಅವರನ್ನು ನಿರ್ಬಂಧಿಸುತ್ತಿವೆ. ಹಾಗಾಗಿ ಅರ್ಧಕ್ಕರ್ಧ ಯುವತಿಯರು ಕೆಲಸಕ್ಕೆ ಹೋಗುತ್ತಿಲ್ಲ.

ಬಾಧಿಸದ ನೆರೆಹೊರೆಯ ಕ್ರಾಂತಿ

ಇಷ್ಟೆಲ್ಲದರ ಹೊರತಾಗಿಯೂ ಭಾರತವು ಇತ್ತೀಚಿನ ವರ್ಷಗಳಲ್ಲಿ ತನ್ನ ನೆರೆಹೊರೆಯ ರಾಷ್ಟ್ರಗಳಲ್ಲಿ ಯುವಪಡೆಯ ನೇತೃತ್ವದಲ್ಲಿ ಸಂಭವಿಸುತ್ತಿರುವ ಕ್ಷಿಪ್ರ ವಿಪ್ಲವದಿಂದ ಪಾರಾಗಿದೆ. ಈ ಸ್ಥಿರತೆಯ ಹಿಂದೆ ಒಂದು ಗುಪ್ತವಾದ ಮೌಲ್ಯವಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇಲ್ಲಿನ ಸಂಘಟಿತ ಧಾರ್ಮಿಕ-ರಾಷ್ಟ್ರೀಯವಾದಿ ಜಾಲಗಳು, ವಿದ್ಯಾರ್ಥಿ ಗುಂಪುಗಳು ಮತ್ತು ಸ್ವಯಂಸೇವಾ ಸಂಘಟನೆಗಳು ಯುವಶಕ್ತಿಯನ್ನು ರಾಜಕೀಯ ಪಾಲ್ಗೊಳ್ಳುವಿಕೆಯ ಕಡೆಗೆ ಮತ್ತು ಸೈದ್ಧಾಂತಿಕ ಯೋಜನೆಗಳ ಕಡೆಗೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿವೆ. ಅಂತಾರಾಷ್ಟ್ರೀಯ ಶಾಂತಿಗಾಗಿ ಸಂಸ್ಥೆ ಕಾರ್ಗೆನಿ ಎಂಡೋಮೆಂಟ್ ದಾಖಲಿಸಿದ ವರದಿ ಕೂಡ ಇದನ್ನೇ ಹೇಳುತ್ತದೆ; ಆರ್ಥಿಕ ಅವಕಾಶಗಳು ನೀಡಲು ವಿಫಲವಾಗಿದ್ದನ್ನು ಬಳಸಿಕೊಂಡಿರುವ ಇಂತಹ ಗುಂಪುಗಳು ಯುವಕರಲ್ಲಿ ಸಮುದಾಯದ ಪ್ರಜ್ಞೆಯನ್ನು ಬೆಳೆಸುವ ಕೆಲಸ ಮಾಡುತ್ತಿವೆ.

ಇಂತಹ ಏರ್ಪಾಡುಗಳು ಪರಿಸ್ಥಿತಿಯನ್ನು ಸ್ಥಿರಗೊಳಿಸಿದೆ. ಇನ್ನೂ ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಸಾಮಾಜಿಕ ಅಶಾಂತಿಯು ನಿರ್ಬಂಧಕ್ಕೆ ಒಳಗಾಗಿದೆ. ರಾಜಕೀಯ ಪಾಲ್ಗೊಳ್ಳುವಿಕೆಯು ಸೊಂಪಾಗಿದೆ. ಯುವಕರು ಸಾಮೂಹಿಕ ಅಸ್ತಿತ್ವ ಕಂಡುಕೊಳ್ಳುತ್ತಿದ್ದಾರೆ. ಆದರೆ ಈ ರೀತಿಯ ವಿಚಲನೆಯು ತೀವ್ರ ತರವಾದ ಅಪಾಯಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುತ್ತದೆ ಎಂಬುದನ್ನು ಮರೆಯಬಾರದು.

ನೈಜ ಆರ್ಥಿಕ ಸಮಸ್ಯೆಗಳು ಪರಿಹಾರ ಕಾಣದೆ ಮುಗುಮ್ಮಾಗಿ ಕುಳಿತಿವೆ. ರಾಜಕೀಯವಾಗಿ ಸಕ್ರಿಯರಾಗಿರುವ ಯುವಕರನ್ನು ಧ್ರುವೀಕರಣವನ್ನು ಬಲಗೊಳಿಸುವ, ಅಲ್ಪಸಂಖ್ಯಾತರನ್ನು ಕಡೆಗಣಿಸುವ ಮತ್ತು ಸುಸ್ಥಿರ ಅಭಿವೃದ್ಧಿಗೆ ಅತ್ಯಗತ್ಯವಾದ ಸಾಮಾಜಿಕ ಸೌಹಾರ್ದತೆಯನ್ನು ದುರ್ಬಲಗೊಳಿಸುವ ಕಾರ್ಯಗಳಲ್ಲಿ ಸಜ್ಜುಗೊಳಿಸಲಾಗಿದೆ. ಇದು ತಕ್ಷಣ ಸ್ಫೋಟಗೊಳ್ಳುವುದನ್ನು ತಡೆಯಬಹುದು, ಆದರೆ ಅಸ್ಥಿರತೆಯ ಅಪಾಯಕಾರಿ ಸ್ವರೂಪಕ್ಕೆ ಬೀಜ ಬಿತ್ತುತ್ತದೆ.

ಧಾರ್ಮಿಕ ರಾಷ್ಟ್ರೀಯತೆಯು ಆಕರ್ಷಕವಾಗಿ ಕಾಣುತ್ತದೆ. ಅದು ಆರ್ಥಿಕ ಪ್ರಗತಿಗೆ ಪರ್ಯಾಯವನ್ನು ಒದಗಿಸುತ್ತಿದೆ ಎಂಬ ಭ್ರಮೆಯನ್ನು ಹುಟ್ಟಿಸುತ್ತದೆ. ಅದು ಭೌತಿಕ ಹತಾಶೆಯನ್ನು ಸಾಂಸ್ಕೃತಿಕ ಅಸ್ಮಿತೆಯ ಹೋರಾಟವಾಗಿ ಪರಿವರ್ತಿಸುತ್ತಿದೆ. ಇದರ ಪರಿಣಾಮವಾಗಿ ಜನರು ಅರ್ಥ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ಬಯಸುವ ಬದಲು ತಮ್ಮದೇ ನಂಬಿಕೆಯ ಆಧಾರದ ಮೇಲೆ ಇತರರನ್ನು ಹೊರಗಿಡಲು ಮತ್ತು ಅವರ ಮೇಲೆ ಪ್ರಾಬಲ್ಯವನ್ನು ಸಾಧಿಸಲು ಪ್ರೇರಣೆಯನ್ನು ನೀಡುತ್ತದೆ.

ಯೋಜಿತ ವಿಷಚಕ್ರದಲ್ಲಿ ಯುವಪಡೆ

ಇದು ಒಂದು ರೀತಿಯ ರಾಜಕೀಯ ರಸವಿದ್ಯೆ. ಇಂತಹ ತಂತ್ರಗಾರಿಕೆಯಿಂದ ಭಾರತದ ಯುವ ಜನತೆಯನ್ನು ಸೂಕ್ತವಾಗಿ ಬಳಸಿಕೊಳ್ಳುವ ಅಗತ್ಯವನ್ನು ದೂರಮಾಡುತ್ತದೆ. ಹೆಚ್ಚು ಹೆಚ್ಚು ಕಾರ್ಮಿಕರನ್ನು ಬೇಡುವ ಅಭಿವೃದ್ಧಿಯ ಕಡೆಗಿನ ಒತ್ತಡವನ್ನು ಗಣನೀಯವಾಗಿ ತಗ್ಗಿಸುತ್ತದೆ. ಇದು ಜನಸಂಖ್ಯೆಯನ್ನು ಒಳಗೊಳ್ಳುವ ಅಭಿವೃದ್ಧಿಯಲ್ಲ, ಜನರನ್ನು ಹೊರಗಿಡುವ ಯೋಜಿತ ಕ್ರಮ. ಅಂತಹುದೊಂದು ವಿಷಚಕ್ರವನ್ನು ಸೃಷ್ಟಿಸಿ ಅದರಲ್ಲಿ ಯುವಕರನ್ನು ಸಿಲುಕಿಸುವುದು ಸುಲಭ.

ಹೀಗೆ ಉಬ್ಬಿಕೊಂಡಿರುವ ಯುವಕರ ಸಂಖ್ಯೆಯ ಅಪಾಯಗಳನ್ನು ಕೇವಲ ಸೈದ್ಧಾಂತಿಕವಲ್ಲ. ಯುವ ಜನರಿಂದಲೇ ತುಂಬಿತುಳುಕುತ್ತಿರುವ ದಕ್ಷಿಣ ಏಷ್ಯದಾದ್ಯಂತ ಈ ಅಪಾಯಗಳು ನಿಚ್ಛಳವಾಗಿ ಕಾಣುತ್ತಿದೆ. ಶ್ರೀಲಂಕಾದಲ್ಲಿ ನಿರುದ್ಯೋಗ, ಹಣದುಬ್ಬರ ಮತ್ತು ಸರ್ಕಾರದ ವೈಫಲ್ಯದಿಂದ ಯುವಜನತೆ ರೋಸಿಹೋಗಿದ್ದರು. ಅದರ ಫಲವಾಗಿಯೇ 2022ರಲ್ಲಿ ಅಲ್ಲಿನ ಸರ್ಕಾರ ಲಗಾಟಿ ಹೊಡೆಯಿತು.

ಇದು ಬಾಂಗ್ಲಾದೇಶದಲ್ಲಿಯೂ ಪುನರಾವರ್ತನೆಯಾಯಿತು. ಅಲ್ಲಿ ಶಿಕ್ಷಣ, ರಸ್ತೆ ಸುರಕ್ಷತೆ ಮತ್ತು ಉದ್ಯೋಗಕ್ಕಾಗಿ ವಿದ್ಯಾರ್ಥಿಗಳು ಮತ್ತು ಯುವಕರು ಮತ್ತೆ ಮತ್ತೆ ಬೀದಿಗಿಳಿದರು. ಈ ಚಳವಳಿ ಹೆದ್ದೆರೆಗಳಂತೆ ಒಂದರ ಹಿಂದೆ ಹಬ್ಬಿತು. ಅಲ್ಲಿನ ಪ್ರತಿಯೊಂದು ಅಲೆಗಳಲ್ಲೂ ಯುವಕರ ನಿರಾಶೆ-ಹತಾಶೆ ಸ್ಪಷ್ಟವಾಗಿ ಕಾಣುತ್ತಿತ್ತು. ಅದು ಸ್ಫೋಟಗೊಳ್ಳುವ ಸಾಧ್ಯತೆ ನಿಚ್ಚಳವಾಗಿತ್ತು. ಅಂತಿಮವಾಗಿ ಆಗಿದ್ದು ಸರ್ಕಾರದ ಪತನ.

ತಾಜಾ ತಾಜಾ ಕಂಪನ ಉಂಟಾಗಿದ್ದು ನೇಪಾಳದಲ್ಲಿ. ಈ ದೇಶ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ಮಗ್ಗಲು ಬದಲಿಸಿ ಈಗಿನ್ನೂ 24 ವರುಷಗಳಷ್ಟೇ ಕಳೆದಿವೆ. ನಿರುದ್ಯೋಗ ಸಮಸ್ಯೆಯಿಂದ ತತ್ತರಿಸುತ್ತಿರುವ ಈ ಹಿಮಾಲಯ ರಾಷ್ಟ್ರದ ಬಹುಪಾಲು ಯುವಕರು ಉದ್ಯೋಗವನ್ನು ಅರಸಿ ಅಕ್ಕ-ಪಕ್ಕದ ರಾಷ್ಟ್ರಗಳಿಗೆ ವಲಸೆ ಹೋಗಿದ್ದಾರೆ. ಹಾಗೆ ದುಡಿದು ಕಳಿಸುವವರ ಹಣವೇ ಜಿಡಿಪಿಯ ಕಾಲು ಭಾಗದಷ್ಟಿದೆ. ಅದು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ವಿಫಲವಾಗಿದೆ ಎಂಬುದಕ್ಕೆ ಸಾಕ್ಷಿಯಂತಿದೆ. ಅಲ್ಲಿ ಹುಟ್ಟಿಕೊಂಡ ದಳ್ಳುರಿ ಅಧ್ಯಕ್ಷರ ಅರಮನೆಗಳನ್ನೇ ಆಪೋಷನ ತೆಗೆದುಕೊಂಡಿತು. ಹಾಗೆ ದ್ವಂಸಗೊಳ್ಳುತ್ತಿರುವ ಚಿತ್ರಣ ಆ ಪ್ರದೇಶದ ಪ್ರತಿಯೊಬ್ಬ ನೀತಿ ನಿರೂಪಕರ ಎದೆಯನ್ನು ತಲ್ಲಣಿಸುವಂತೆ ಮಾಡಬೇಕು.

ಸಮಾಜವನ್ನೇ ಮರುರೂಪಿಸುವ ತಾಕತ್ತು

ಈ ಎಲ್ಲ ಉದಾಹರಣೆಗಳು ಆಯಾ ಪ್ರದೇಶದ ಮೂಲಭೂತ ಸತ್ಯವನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ. ಅವಕಾಶಗಳಿಂದ ವಂಚಿತವಾದ ಯುವಕರ ದೊಡ್ಡ ಸಮೂಹ ತಮ್ಮ ಕರಾಳ ಭವಿಷ್ಯವನ್ನು ಸುಖಾಸುಮ್ಮನೇ ಒಪ್ಪಿಕೊಳ್ಳಲು ಬಯಸುವುದಿಲ್ಲ. ಅವರು ಇಡೀ ಸಮಾಜವನ್ನೇ ಮರುರೂಪಿಸುತ್ತಾರೆ-ಬಹುಪಾಲು ಹಿಂಸಾತ್ಮಕವಾಗಿ. ಭಾರತದಲ್ಲಿ ಈಗ ಇರುವ ಸ್ಥಿತಿಯ ಬಗ್ಗೆ ಉದಾಸೀನ ಧೋರಣೆ ತಾಳದೆ ಅದನ್ನೊಂದು ತುರ್ತು ಅಗತ್ಯ ಎಂದು ಭಾವಿಸಬೇಕು.

ನೆರೆಯ ರಾಷ್ಟ್ರದಲ್ಲಿ ಯುವ ನೇತೃತ್ವದ ಬಿಕ್ಕಟ್ಟುಗಳು ನಡೆಯುತ್ತಿದ್ದರೂ ಭಾರತವು ರಾಜಕೀಯ ಸ್ಥಿರತೆ ಮತ್ತು ಅರ್ಥ ವ್ಯವಸ್ಥೆಯ ವೈವಿಧ್ಯತೆಯ ಲಾಭವನ್ನು ಪಡೆದಿದೆ. ರಾಜ್ಯಮಟ್ಟದ ನಿರ್ಣಾಯಕ ಏರಿಳಿತಗಳನ್ನು ರಾಷ್ಟ್ರ ಮಟ್ಟದ ವಿಶ್ಲೇಷಣೆಯು ಕೆಲವೊಮ್ಮೆ ಮಂಕಾಗಿಸುತ್ತದೆ.

ಬೆಂಗಳೂರಿನಲ್ಲಿರುವ ಕರ್ನಾಟಕದ ತಂತ್ರಜ್ಞಾನ ಸಂಕೀರ್ಣ, ತಮಿಳು ನಾಡಿನ ತಯಾರಿಕಾ ಕೇಂದ್ರ ಮತ್ತು ಕೇರಳದ ಮಾನವಾಭಿವೃದ್ಧಿ ಸಾಧನೆಗಳು ವಿಭಿನ್ನವಾದ ಮಾದರಿಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಇವೆಲ್ಲವೂ ಜನಸಂಖ್ಯಾ ಲಾಭಾಂಶವನ್ನು ಅಳೆಯುವ ನಾನಾ ಮಾದರಿಗಳಾಗಿವೆ. ಏಕರೂಪದ ರಾಷ್ಟ್ರೀಯ ನೀತಿಗಳಿಗಿಂತ ಉದ್ದೇಶಿತ ವಿಧಾನಗಳು ಹೆಚ್ಚು ಪರಿಣಾಮಕಾರಿ ಎಂಬುದನ್ನು ಈ ಯಶೋಗಾಥೆಗಳು ಸಾಕ್ಷಿ ನುಡಿಯುತ್ತವೆ.

ಅದೇ ರೀತಿ ಆರ್ಥ ವ್ಯವಸ್ಥೆಯ ಒಳಗಿರುವ ವಲಯಗಳು ಗಣನೀಯವಾದ ವ್ಯತ್ಯಾಸವನ್ನು ತೋರಿಸುತ್ತವೆ. ಸಾಂಪ್ರದಾಯಿಕ ತಯಾರಿಕಾ ವಲಯವು ನಿಶ್ಚಲವಾಗಿವೆ ಎಂದು ಕಾಣಿಸುತ್ತಿದ್ದರೂ ಔಷಧ, ವಾಹನ ಬಿಡಿಭಾಗಗಳು ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳು ಯುವಕರನ್ನು ಹೆಚ್ಚು ಹೆಚ್ಚು ಸೆಳೆದುಕೊಳ್ಳುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿವೆ. ಹೊಸ ಹೊಸ ವಿಧಾನಗಳನ್ನು ಆವಿಷ್ಕರಿಸುವುದಕ್ಕೆ ಬದಲಾಗಿ ಯಶಸ್ವೀ ಮಾದರಿಗಳನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ.

ಯಶಸ್ಸು ಲಭ್ಯವಾಗಲು ಅನೇಕ ರಂಗಗಳಲ್ಲಿ ಏಕಕಾಲಕ್ಕೆ ಗಮನ ಹರಿಸುವುದು ಮುಖ್ಯವಾಗುತ್ತದೆ. ಜೀವನ ಪರ್ಯಂತ ಕೊರತೆಗಳನ್ನು ನಾವು ಪರಿಣಾಮಕಾರಿಯಾಗಿ ತಡೆಯಬೇಕಿದ್ದರೆ ಬಾಲ್ಯಕಾಲದಲ್ಲಿಯೇ ಲಭ್ಯವಾಗುವ ಪೌಷ್ಟಿಕಾಂಶಗಳು ಮತ್ತು ಬುನಾದಿ ಹಂತದ ಕಲಿಕೆಗಳ ಅಗತ್ಯವಿದೆ. ವೃತ್ತಿಪರ ತರಬೇತಿಗಳು ಆಡಳಿತಾತ್ಮಕ ಅನುಕೂಲಕ್ಕಾಗಿ ಇರದೆ ನಿಜವಾದ ಉದ್ಯೋಗದಾತರ ಅಗತ್ಯಗಳಿಗೆ ಅನುಗುಣವಾಗಿರಬೇಕು. ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) ನಮಗೆ ಬೇಕಾದ ಚೌಕಟ್ಟುಗಳನ್ನೇನೋ ಒದಗಿಸುತ್ತವೆ, ಆದರೆ ಅದರ ಅನುಷ್ಠಾನಕ್ಕೆ ರಾಜಕೀಯ ಇಚ್ಛಾಶಕ್ತಿಯೂ ಬೇಕು, ಹಣಕಾಸಿನ ಅಗತ್ಯವೂ ಇದೆ. ಕಾರ್ಮಿಕರು ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿರುವ ಕೈಗಾರಿಕೆಗಳಿಗೆ ಸಾಲ, ಮೂಲಸೌಕರ್ಯ ಮತ್ತು ನಿಯಂತ್ರಿತ ಸುಧಾರಣೆಗಳ ಮೂಲಕ ಉದ್ದೇಶಿತ ಬೆಂಬಲವನ್ನೂ ನೀಡಬೇಕು.

ಮಹಿಳೆಯರ ಕಾರ್ಯಪಡೆಗೆ ಶಕ್ತಿ

ಶಿಶುಪಾಲನಾ ಸೌಲಭ್ಯವನ್ನು ವಿಸ್ತರಿಸುವುದರಿಂದ ಮತ್ತು ನಗರದ ಸುರಕ್ಷತೆಯನ್ನು ಸುಧಾರಿಸುವುದರಿಂದ ದುಡಿಯುವ ಮಹಿಳೆಯರ ಕಾರ್ಯಪಡೆಗೆ ಶಕ್ತಿಯನ್ನು ತುಂಬಬಹುದು. ಆ ಮೂಲಕ ದೇಶದ ಉತ್ಪಾದಕ ಕಾರ್ಯಪಡೆಯನ್ನು ಹಿಗ್ಗಿಸಲು ಅವಕಾಶ ದೊರೆಯುತ್ತದೆ. ಎಲ್ಲರನ್ನೂ ಒಳಗೊಳ್ಳುವ ಸಮಗ್ರ ಬೆಳವಣಿಗೆಗೆ ಸಾಮಾಜಿಕ ರಕ್ಷಣೆ ಮತ್ತು ನಗರ ಉದ್ಗೋಗ ಕಾರ್ಯಕ್ರಮಗಳನ್ನು ಬಲಪಡಿಸುವುದು, ಎಂಎಸ್ಎಂಇಗೆ ಬೆಂಬಲ ನೀಡುವುದು ಅತ್ಯಂತ ನಿರ್ಣಾಯಕ. ಓಇಸಿಡಿ ಮತ್ತು ಐ.ಸಿ.ಆರ್.ಐ.ಆರ್. ಎರಡರಲ್ಲೂ ಇದನ್ನು ಪ್ರತಿಪಾದಿಸಲಾಗಿದೆ.

ಆದಾಗ್ಯೂ ಕಾರ್ಯಕ್ರಮ ಅನುಷ್ಠಾನವೇ ಬಹುದೊಡ್ಡ ಸವಾಲು. ರಚನಾತ್ಮಕ ಸುಧಾರಣೆಗಳಿಗೆ ಅತ್ಯಗತ್ಯವಾಗಿ ಬೇಕಾದುದು ರಾಜಕೀಯ ಇಚ್ಛಾಶಕ್ತಿ, ಸಹಕಾರ ತತ್ವದ ಒಕ್ಕೂಟ ವ್ಯವಸ್ಥೆ ಮತ್ತು ಆರ್ಥಿಕ ಹೊಂದಾಣಿಕೆ. ಆದರೆ ಈಗಿರುವ ಆದ್ಯತೆಗಳು ಇದಕ್ಕೆ ಅಡ್ಡಿಯಾಗುತ್ತಿವೆ. ಮೂಲಸೌಕರ್ಯ, ರಕ್ಷಣೆ ಮತ್ತು ಬೃಹತ್ ಪ್ರಮಾಣದ ಕೈಗಾರಿಕಾ ಪ್ರೋತ್ಸಾಹಕಗಳು ಸಾಮಾನ್ಯವಾಗಿ ಜನರ ಅಗತ್ಯಗಳಿಗೆ ಬೇಕಾದ ವಿಶಾಲ ಸಾಮಾಜಿಕ ಹೂಡಿಕೆ ಗೌಣಗೊಳಿಸುತ್ತದೆ. ಧಾರ್ಮಿಕ ರಾಷ್ಟ್ರೀಯತೆಯನ್ನು ಆಧರಿಸಿದ ರಾಜಕೀಯ ಪ್ರೇರಣೆಯು ಕಾರ್ಮಿಕ ಸುಧಾರಣೆಗಳ ಮೇಲಿನ ರಾಜಕೀಯ ಒತ್ತಡವನ್ನು ಮತ್ತಷ್ಟು ತಗ್ಗಿಸುತ್ತದೆ. ಇದರಿಂದಾಗಿ ತಕ್ಷಣದ ಸ್ಥಿರತೆಯು ದೀರ್ಘಕಾಲೀನ ಸಮೃದ್ಧಿಯನ್ನು ಹಾಳುಮಾಡುವ ಅಪಾಯಕಾರಿ ಸ್ಥಿತಿಯನ್ನು ಸೃಷ್ಟಿಸುತ್ತದೆ.

ಭಾರತದ ಜನಸಂಖ್ಯಾ ಲಾಭವು ಅವಲಂಬಿತವಾಗಿರುವುದು ಜೈವಿಕ ಕಾಲಮಾನದ ಮೇಲೆ. ರಾಜಕೀಯದ ಅನುಕೂಲ ಅಥವಾ ಅಧಿಕಾರಶಾಹಿ ಸಿದ್ಧತೆಗೆಲ್ಲ ಅದು ಕಾದು ಕುಳಿತುಕೊಳ್ಳುವುದಿಲ್ಲ. ಶಿಕ್ಷಣ, ಪೌಷ್ಟಿಕತೆ, ಉದ್ಯೋಗ ಮತ್ತು ಮಹಿಳಾ ಕಾರ್ಯಪಡೆಯನ್ನು ಒಳಗೊಳ್ಳುವಂತೆ ಮಾಡುವುದು ಮುಂತಾದ ಕೆಲಸಗಳನ್ನು ತುರ್ತಾಗಿ ಮಾಡದೇ ಹೋದರೆ ದೇಶವು ತನ್ನ ಜನಸಂಖ್ಯಾ ಸಾಮರ್ಥ್ಯವನ್ನೇ ಒಂದು ರಚನಾತ್ಮಕ ಹೊರೆಯಾಗಿ ಪರಿವರ್ತಿಸಿಕೊಳ್ಳುವ ಅಪಾಯವಿದೆ. ಇಂತಹ ಒಂದು ಸವಾಲಿನ ವ್ಯಾಪ್ತಿಯು ಅರ್ಥ ವ್ಯವಸ್ಥೆಯನ್ನೂ ಮೀರಿ ಸಾಮಾಜಿಕ ಸ್ಥಿರತೆ, ರಾಜಕೀಯ ಸಿಂಧುತ್ವ ಹಾಗೂ ರಾಷ್ಟ್ರೀಯ ಒಗ್ಗಟ್ಟಿನ ಮೇಲೆ ಪರಿಣಾಮ ಬೀರುವುದು ನಿಶ್ಚಿತ.

ಅವಕಾಶದ ಕಿಂಡಿಯೇನೋ ತೆರೆದಿದೆ. ಆದರೆ ಅದನ್ನು ನಂಬಿಕೊಳ್ಳುವಂತಿಲ್ಲ. ಪ್ರತಿವರ್ಷದ ವಿಳಂಬವು ಸವಾಲನ್ನು ದುಪ್ಪಟ್ಟಾಗಿಸುತ್ತ ಸಾಗುತ್ತದೆ. ಈ ದೇಶದ ಜನಸಂಖ್ಯಾ ಸಾಮರ್ಥವನ್ನು ಉತ್ಪಾದಕ, ಎಲ್ಲರನ್ನೂ ಒಳಗೊಳ್ಳುವ ಉದ್ಯೋಗ ಅವಕಾಶವಾಗಿ ಪರಿವರ್ತಿಸುವುದರ ಮೇಲೆ ಭಾರತದ ಭವಿಷ್ಯದ ಪ್ರಗತಿ ಮತ್ತು ಸಾಮಾಜಿಕ ಸೌಹಾರ್ದತೆ ಅವಲಂಬಿತವಾಗಿದೆ. ಇದಕ್ಕಾಗಿ ನಾವು ಮೂಲಭೂತ ಸವಾಲುಗಳನ್ನು ಪರಿಹರಿಸುವುದಕ್ಕೆ ಬದಲಾಗಿ ಮುಂದೂಡುತ್ತ ಹೋಗುವ ರಾಜಕೀಯ ಪ್ರಲೋಭನೆಗಳನ್ನು ವಿರೋಧಿಸಬೇಕು.

ನಮ್ಮ ಮುಂದಿನ ಆಯ್ಕೆಯು ಸ್ಪಷ್ಟವಾಗಿದೆ: ಜನಸಂಖ್ಯೆಯಿಂದ ಆಗುವ ಲಾಭಾಂಶವನ್ನು ಬಳಸಿಕೊಳ್ಳಬೇಕು ಅಥವಾ ಅದರ ಕರಾಳತೆಗೆ ಮುಖಾಮುಖಿಯಾಗಬೇಕು. ಅಂತಿಮವಾಗಿ ಅದು ಜನಸಂಖ್ಯಾ ಸಾಲ. ಯಾವುದೇ ರಾಜಕೀಯ ಕುಶಲತೆಗಳಿಂದ ಅದನ್ನು ತಡೆಯಲು ಸಾಧ್ಯವಿಲ್ಲ.

Read More
Next Story