
Stray Dog Crisis: ‘ನಾಯಿ ಮನೆ’ ಸ್ಥಾಪಿಸುವ ಸುಪ್ರೀಂ ಕೋರ್ಟ್ ನಿರ್ದೇಶನ ಯಾಕೆ ಅಸಾಧ್ಯ?
ಬೀಡಾಡಿ ನಾಯಿಗಳ ಬಿಕ್ಕಟ್ಟನ್ನು ಬಗೆಹರಿಸಲು ಇರುವ ಏಕೈಕ ಮಾನವೀಯ ಮಾರ್ಗವೆಂದರೆ ಎಬಿಸಿ ಕಾರ್ಯಕ್ರಮ. ಸ್ಥಳೀಯ ಸಂಸ್ಥೆಗಳು ಎಬಿಸಿ ಕಾರ್ಯಾಚರಣೆಗಳನ್ನು ಆಕ್ರಮಣಕಾರಿಯಾಗಿ ಕೈಗೊಳ್ಳಬೇಕಾಗಿದೆ.
ಮನುಷ್ಯ ಮತ್ತು ನಾಯಿಯ ಸಂಬಂಧ ಇಂದು ನಿನ್ನೆಯದಲ್ಲ. ಅದು 12-14 ಸಹಸ್ರಮಾನಗಳ ಹಿಂದೆ ಯುರೇಷಿಯಾದಲ್ಲಿ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ. ಅಲ್ಲಿಂದ ಅವರಿಬ್ಬರ ನಡುವೆ ಪರಸ್ಪರ ಸಂಬಂಧ ಹೊರಹೊಮ್ಮಿತು.
ಮಾನವ ತನ್ನ ಆರಂಭಿಕ ಶಿಬಿರಗಳನ್ನು ಮತ್ತು ವಸಾಹತುಗಳನ್ನು ಹೊಂದಿದ್ದಾಗ ಅಲ್ಲಿಗೆ ಆಗಾಗ ಭೇಟಿ ಕೊಡುತ್ತಿದ್ದ ನಾಯಿಗೆ ತಿಂಡಿ ಚೂರುಗಳನ್ನು ಹಾಕುತ್ತಿದ್ದ. ಇದರ ರುಚಿಗೆ ಸಿಕ್ಕ ನಾಯಿ ಮಾನವನ ವಸತಿಯಲ್ಲಿ ಕಾಯಂ ಸ್ಥಾನವನ್ನು ಪಡೆದುಕೊಂಡಿತು. ಕ್ರಮೇಣ ಅದು ಮನುಷ್ಯನಿಗೆ ಅಪಾಯದ ಸೂಚನೆಯನ್ನು ನೀಡುತ್ತಿತ್ತು ಮತ್ತು ಕಾಡುಪ್ರಾಣಿಗಳನ್ನು ಬೇಟೆಯಾಡಲು ಸಹಾಯಮಾಡುತ್ತಿತ್ತು. ಹೀಗೆ ನಾಯಿಯ ಸಾಕಣೆ ಮತ್ತು ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಯಿತು.
ಇಂದು ಮನುಷ್ಯ ನಾಯಿಗಳನ್ನು ಅತಿಯಾದ ಸಂತಾನೋತ್ಪತ್ತಿಗೆ ಅವಕಾಶಮಾಡಿದ. ಯಾವಾಗ ಅವುಗಳ ಸಂಖ್ಯೆ ಮಿತಿಮೀರಿತೋ ಎಲ್ಲೆಂದರಲ್ಲಿ ಬಿಟ್ಟುಬಿಡಲು ಆರಂಭಿಸಿದ. ದಿನದಿಂದ ದಿನಕ್ಕೆ ಇಂತಹ ಅನಾಥ ನಾಯಿಗಳ ಸಂಖ್ಯೆ ಹೆಚ್ಚುತ್ತ ಹೋಯಿತು. ಇದರಿಂದ ನಾಯಿಗಳಿಗೆ ಮಾತ್ರ ಅಪಾಯ ಉಂಟಾಗಿದ್ದಲ್ಲ, ಮನುಷ್ಯನಿಗೂ ಆರೋಗ್ಯದ ಸಮಸ್ಯೆಗಳು ಉಂಟಾದವು.
ಶ್ವಾನ ಸಂಹಾರದ ಕ್ರೂರ ಮಾರ್ಗ
ನಾಯಿಗಳಿಂದ ಉಂಟಾದ ಇಂತಹ ಸಮಸ್ಯೆಗಳು ನಿಯಂತ್ರಣಕ್ಕೆ ಸಿಗದೇ ಹೋದಾಗ ಅಧಿಕಾರಿಗಳು ಅವುಗಳಿಗೆ ತ್ವರಿತ ಪರಿಹಾರವನ್ನು ಕಂಡುಕೊಳ್ಳಲು ಸಾಮೂಹಿಕ ಸಂಹಾರದ ಕ್ರೂರ ಪರಿಹಾರದ ಮಾರ್ಗಗಳನ್ನು ಅನುಸರಿಸಿದರು. ಆದರೆ ವರ್ಷದಿಂದ ವರ್ಷಕ್ಕೆ ಅವು ಅಂತ್ಯ ಕಾಣದ ರೀತಿಯಲ್ಲಿ ಮುಂದುವರಿಯುತ್ತ ಹೋಯಿತು.
ಎಲ್ಲಕ್ಕಿಂತ ಹೆಚ್ಚಾಗಿ ಬೀಡಾಡಿ ನಾಯಿಗಳ ಸಂಖ್ಯೆಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವ ಮೂಲಕ ಉಳಿದ ನಾಯಿಗಳ ಬದುಕುವ ಅವಕಾಶಗಳನ್ನು ಇನ್ನಷ್ಟು ಸುಧಾರಿಸಿದರು. ನಾಯಿಗಳ ನೋಂದಣಿ, ಸಂತಾನಹರಣ ಮತ್ತು ಸಾರ್ವಜನಿಕ ಶಿಕ್ಷಣದಂತಹ ಇತರ ಕ್ರಮಗಳ ಜೊತೆಗೆ ಸಂಯೋಜಿಸದೇ ಹೊದರೆ ಹೆಚ್ಚುವರಿ ನಾಯಿಗಳನ್ನು ನಿರ್ಮೂಲ ಮಾಡುವುದರಿಂದ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ ಎಂಬುದನ್ನು ಕಂಡುಕೊಳ್ಳಲಾಗಿದೆ.
ಬೀದಿ ನಾಯಿಗಳ ಸಂತಾನ ಹರಣ ಕಾರ್ಯಕ್ರಮವನ್ನು ಮೊದಲು ಜಾರಿಗೆ ತಂದ ಸಂಸ್ಥೆ ಎಂದರೆ ಚೆನ್ನೈನ ಬ್ಲೂ ಕ್ರಾಸ್ ಆಫ್ ಇಂಡಿಯಾ. 1966ರಲ್ಲಿಯೇ ಅದು ನಾಯಿಗಳಿಗಾಗಿ ಮೊಟ್ಟ ಮೊದಲ ಕ್ಲಿನಿಕ್ ಸ್ಥಾಪಿಸಿತು. ಅಲ್ಲಿ ದೊರೆಯುತ್ತಿದ್ದುದು ಸಂಪೂರ್ಣ ಉಚಿತ ಚಿಕಿತ್ಸೆ. ಅದಾಗಿ ಮುವತ್ತು ವರ್ಷಗಳ ಬಳಿಕ, ಅಂದರೆ 1996ರಲ್ಲಿ ಚೆನ್ನೈ ನಗರಪಾಲಿಕೆಗೆ ಸಂತಾನ ನಿಯಂತ್ರಣ ಕಾರ್ಯಕ್ರಮದ ಬಗ್ಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗುತ್ತದೆ. ಇದಕ್ಕೆ ಬೇಕಾದ ಸಂಪೂರ್ಣ ಹಣಕಾಸು ವ್ಯವಸ್ಥೆಯನ್ನು ಮಾಡಲು ಬ್ಲೂ ಕ್ರಾಸ್ ಆಫ್ ಇಂಡಿಯಾ ನಿರ್ಧರಿಸಿತು. ಅದಾದ ಬಳಿಕ ಮೇನಕಾ ಗಾಂಧಿ ನೇತೃತ್ವದ ಪೀಪಲ್ಸ್ ಫಾರ್ ಅನಿಮಲ್ಸ್ ಸಾಥ್ ನೀಡಿತು.
ನಗರಪಾಲಿಕೆಯ ಏಕೈಕ ವೆಚ್ಚವೆಂದರೆ ನಾಯಿಗಳನ್ನು ಹಿಡಿಯಲು ಸಿಬ್ಬಂದಿ ಮತ್ತು ವಾಹನಗಳನ್ನು ಒದಗಿಸುವುದು. ಆ ಸೌಲಭ್ಯಗಳನ್ನು ಅದು ನಿರಂತರವಾಗಿ ಮುಂದುವರಿಸಿತು.
ನಿಯಂತ್ರಣಕ್ಕೆ ಬಂದ ರೇಬಿಸ್
ಅದಕ್ಕೂ ಮೊದಲು ನಗರದಲ್ಲಿ ರೇಬಿಸ್ ಪ್ರಕರಣಗಳ ಸಂಖ್ಯೆ ಮಿತಿಮೀರಿತ್ತು. 1996ರಲ್ಲಿ 120 ಪ್ರಕರಣಗಳು ವರದಿಯಾಗಿದ್ದವು. ಅದು ಕ್ರಮೇಣ ಇಳಿಮುಖವಾಗತೊಡಗಿತು. 2007ರ ಹೊತ್ತಿಗೆ ಅದು ಶೂನ್ಯಕ್ಕೆ ಬಂದು ತಲುಪಿತು. ಸತತ ಮೂರು ವರ್ಷಗಳ ಕಾಲ ಶೂನ್ಯ ರೇಬಿಸ್ ಪ್ರಕರಣಗಳ ಬಳಿಕ 2010ರಲ್ಲಿ ಚೆನ್ನೈ ನಗರವನ್ನು ರೇಬಿಸ್ ಮುಕ್ತ ಎಂದು ಘೋಷಿಸಲಾಯಿತು. ಜೈಪುರ ಇದಕ್ಕಿಂತ ಮೊದಲೇ ಈ ಸಾಧನೆ ಮಾಡಿತ್ತು.
ಚೆನ್ನೈ ಮತ್ತು ರಾಜಸ್ಥಾನದಲ್ಲಿ ಎಬಿಸಿ-ಎಆರ್ ಸಾಧಿಸಿದ ಯಶಸ್ಸನ್ನು ಕಂಡ ಭಾರತ ಸರ್ಕಾರದ ಪ್ರಾಣಿ ಕಲ್ಯಾಣ ಮಂಡಳಿಯು ಎಬಿಸಿ-ಎಆರ್ ಅನ್ನು ತನ್ನ ನೀತಿಯನ್ನಾಗಿ ಅಳವಡಿಸಿಕೊಂಡಿತು. ಜೊತೆಗೆ ಸರ್ಕಾರಕ್ಕೂ ಶಿಫಾರಸು ಮಾಡಿತು.
ಅದಾಗುತ್ತಲೇ ಬಹುಬೇಗ ಬೆಳವಣಿಗೆಗಳು ಕಂಡವು. 2001ರಲ್ಲಿಯೇ ಎಬಿಸಿ ನಿಯಮಗಳನ್ನು ಸಂಸತ್ ಅನುಮೋದಿಸಿತು. ಇದರ ಪೂರ್ತಿ ಶ್ರೇಯ ಮೇನಕಾ ಗಾಂಧಿ ಅವರಿಗೆ ಸಲ್ಲಬೇಕು. ಅಂದಿನಿಂದ ಬೀದಿ ನಾಯಿಗಳಿಗೆ ವಿಷವಿಕ್ಕುವ ಅಥವಾ ವಿದ್ಯುದಾಘಾತ ನೀಡುವ ಕ್ರೂರ ಪದ್ಧತಿ ನಿಂತುಹೋಯಿತು. ಎಬಿಸಿಯನ್ನು ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಮಾಡಲಾಯಿತು.
ಆ ಬಳಿಕವೂ ಜಾಗೃತಿ ಮತ್ತು ಲಸಿಕೆ ಕಾರ್ಯಕ್ರಮಗಳು ಹೆಚ್ಚುತ್ತ ಹೋದವು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 1996ರಲ್ಲಿ ರೇಬಿಸ್ ಪ್ರಕರಣಗಳು 29 ಸಾವಿರ. ಅದು 2014ರಲ್ಲಿ ಭರೋಬ್ಬರಿ 600ಕ್ಕೆ ಕುಸಿತು. ಅಂದರೆ ಅಜಮಾಸು ಶೇ.95ರಷ್ಟು ಇಳಿಕೆ. ಕೇಂದ್ರ ಸರ್ಕಾರವೇ ಜುಲೈ 2025ರಲ್ಲಿ ಹೊರಡಿಸಿದ ಹೇಳಿಕೆಯ ಪ್ರಕಾರ 2024ರಲ್ಲಿ ರೇಬಿಸ್ ನಿಂದ ಉಂಟಾದ ಸಾವಿನ ಪ್ರಕರಣಗಳ ಸಂಖ್ಯೆ 54.
ದುಃಖದ ಸಂಗತಿ ಎಂದರೆ ದೇಶದ ಬಹುತೇಕ ಪುರಸಭೆಗಳು ಶೇ.70ರಷ್ಟು ಗುರಿಯನ್ನು ತಲುಪಲು ಎಬಿಸಿ ಕಾರ್ಯಕ್ರಮವನ್ನು ಆಕ್ರಮಣಕಾರಿಯಾಗಿ ಅನುಷ್ಠಾನಕ್ಕೆ ತರುತ್ತಿಲ್ಲ. ಅದು ಸಾಧ್ಯವಾಗುತ್ತಿದ್ದರೆ ಸಂತಾನ ನಿಯಂತ್ರಣ ಅನೂಚಾನವಾಗಿ ಕಾರ್ಯರೂಪಕ್ಕೆ ಬರುತ್ತಿತ್ತು. ಸಂವಿಧಾನದ 243ಡಬ್ಲ್ಯು ವಿಧಿಯ ಅಡಿಯಲ್ಲಿ ಬೀದಿ ನಾಯಿಗಳ ನಿಯಂತ್ರಣ ಮಾಡುವುದು ಪುರಸಭೆಗಳ ಜವಾಬ್ದಾರಿಯಾಗಿದೆ.
ಇತರ ರಾಷ್ಟ್ರಗಳಲ್ಲೂ ಪರಿಣಾಮಕಾರಿ
ಕಾಟಾಚಾರಕ್ಕೆ ಎಂಬಂತೆ ಎಬಿಸಿ ಶಿಬಿರಗಳನ್ನು ಮಾಡಿದರೆ ಸಾಕಾಗುವುದಿಲ್ಲ. ಈ ಸಮಸ್ಯೆಯನ್ನು ನಿಭಾಯಿಸಲು ಇರುವ ಏಕೈಕ ಮಾನವೀಯ ಮಾರ್ಗ ಇದಾಗಿದೆ. ವಾಸ್ತವವಾಗಿ ನಾನು ಜೋರ್ಡಾನ್ ಮತ್ತು ಈಜಿಪ್ಟ್ ನಂತಹ ರಾಷ್ಟ್ರಗಳಲ್ಲಿ ಪರಿಚಯಿಸಿದ ಎಬಿಸಿ ಕಾರ್ಯಕ್ರಮ ಎಷ್ಟು ಜನಪ್ರಿಯವಾಗಿದೆ ಎಂದರೆ ವಿಶ್ವ ಆರೋಗ್ಯ ಸಂಸ್ಥೆ, ಎಫ್ಎಓ ಮುಂತಾದ ಸಂಸ್ಥೆಗಳು ಕೂಡ ಉಳಿದೆಲ್ಲ ಪದಗುಚ್ಛಗಳನ್ನು ಕೈಬಿಟ್ಟು ಎಬಿಸಿ ಎಂದೇ ಕರೆಯುತ್ತಿವೆ.
ನೆದರಲ್ಯಾಂಡ್ ನಂತಹ ಜಾಗಗಳಲ್ಲಿ ಒಂದೇ ಒಂದು ನಾಯಿಯನ್ನು ಕೂಡ ಕೊಲ್ಲದೆ ಶೂನ್ಯ ಸ್ಥಿತಿಯನ್ನು ತಲುಪಿವೆ. ಸಮೂಹ ಸಂತಾನ ಹರಣ, ಮೈಕ್ರೋಚಿಪ್ಪಿಂಗ್, ಕಟ್ಟುನಿಟ್ಟಾದ ಸಂತಾನೋತ್ಪತ್ತಿ ಕಾನೂನುಗಳು ಹಾಗೂ ಭಾರೀ ಪ್ರಮಾಣದ ದಂಡಗಳನ್ನು ವಿಧಿಸುವ ಮೂಲಕ ಈ ಸಾಧನೆ ಮಾಡಿದೆ.
ಬೀದಿ ನಾಯಿಗಳಿಗೆ ಆಹಾರ ಹಾಕುವುದನ್ನು ಅನೇಕ ಪ್ರಾಣಿ ಕಲ್ಯಾಣ ಗುಂಪುಗಳು ಬೆಂಬಲಿಸಿದವು. ಹಾಗೆ ಮಾಡಿದರೆ ಅವುಗಳನ್ನು ಸುಲಭದಲ್ಲಿ ಹಿಡಿದು ಸಂತಾನಹರಣ ಮತ್ತು ಲಸಿಕೆ ಹಾಕಿಸಬಹುದು ಎಂಬುದು ಅವರ ಉದ್ದೇಶವಾಗಿತ್ತು. ದುರದೃಷ್ಟವಶಾತ್ ಹೀಗೆ ಆಹಾರ ಹಾಕುವವರು ತಮ್ಮ ಕೆಲಸವನ್ನು ಕೈಬಿಟ್ಟರು ಮತ್ತು ಹೊಸದಾಗಿ ಹುಟ್ಟಿದ ನಾಯಿ ಮರಿಗಳನ್ನು ಪ್ರಾಣಿ ಆಶ್ರಯತಾಣಗಳಲ್ಲಿ ಬಿಟ್ಟುಬಂದರು.
ಇದರಿಂದಾಗಿ ಪ್ರಾಣಿ ಆಶ್ರಯದಾಣಗಳು ಪ್ರಾಣಿಗಳಿಂದ ತುಂಬಿಹೋದವಲ್ಲ, ಅವುಗಳನ್ನು ನಿಭಾಯಿಸಲು ಹೆಣಗಾಡುವ ಗುಂಪುಗಳಿಗೆ ಸಹಾಯ ಮಾಡುವ ಬದಲು ಆರಾಮ ಚೇರಿನಲ್ಲಿ ಕುಂತ ‘ಕೀಬೋರ್ಡ್ ಯೋಧರು’ ಸಾಮಾಜಿಕ ಮಾಧ್ಯಮವೆಂಬ ಎರಡು ಅಲಗಿನ ಕತ್ತಿಯನ್ನು ಬಳಸಿಕೊಂಡು ಪುರಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳ ಕಾರ್ಯವೈಖರಿಯನ್ನು ಟೀಕಿಸಲು ಶುರುವಿಟ್ಟುಕೊಂಡರು. ಅಂತಿಮವಾಗಿ ಅವರು ಕೊಟ್ಟ ಚಿತ್ರಣವಾದರೂ ಏನು? ಬೀದಿ ನಾಯಿಗಳ ಬಗ್ಗೆ ಭಯ ಹುಟ್ಟುಹಾಕುವ ತಪ್ಪು ಮಾಹಿತಿಗಳನ್ನು ಹಬ್ಬಿಸಿದ್ದು.
ಯಾವಾಗ ಕೋವಿಡ್ ಸಾಂಕ್ರಾಮಿಕ ರೋಗ ವಕ್ಕರಿಸಿಕೊಂಡಿತೋ ಅಲ್ಲಿಂದ ಸುಮಾರು ಒಂದು ವರ್ಷ ಕಾಲ ಎಬಿಸಿ ಕಾರ್ಯಕ್ರಮಗಳು ನಿಂತುಹೋದವು. ಇದರಿಂದ ಬಹಳ ವರ್ಷಗಳಿಂದ ಮಾಡಿಕೊಂಡು ಬಂದಿದ್ದ ಕೆಲಸಗಳೆಲ್ಲ ವ್ಯರ್ಥವಾಗಿ ಎಲ್ಲವನ್ನೂ ಆರಂಭದಿಂದ ಶುರುಹಚ್ಚಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ನಾಯಿಮನೆ ಎಂಬ ವಿಫಲ ಪ್ರಯೋಗ
ಇವೆಲ್ಲವನ್ನೂ ಹೇಳಿದ ನಂತರ, ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯ ಇತ್ತೀಚಿಗೆ ನೀಡಿದ ಆದೇಶವನ್ನು ಕಾರ್ಯಗತಗೊಳಿಸಲು ಸಂಪೂರ್ಣವಾಗಿ ಅಸಾಧ್ಯ ಎಂಬುದು ಸ್ಪಷ್ಟ. ಸೆರೆಹಿಡಿದ ಬೀದಿ ನಾಯಿಗಳನ್ನು ದೊಡ್ಡ ಪ್ರಮಾಣದ ಆಶ್ರಯದಾಣಗಳಿಗೆ ಹಾಕುವುದು ಇನ್ನೊಂದು ರೀತಿಯಲ್ಲಿ ಕ್ರೂರ. ಅದನ್ನು ಊಹಿಸಿಕೊಳ್ಳಲಿಕ್ಕೇ ಸಾಧ್ಯವಿಲ್ಲ. ಸುಮಾರು 25 ವರ್ಷಗಳ ಹಿಂದೆ ತೈಪೆಯಲ್ಲಿ EAST ಎಂಬ ಗುಂಪು ಇಂತಹ ಪ್ರಯೋಗವನ್ನು ಜಾರಿಗೆ ತರಲು ಪ್ರಯತ್ನಿಸಿತ್ತು. ಒಂದು ಸಾವಿರ ನಾಯಿಗಳನ್ನು ಹಾಕಲಾಗಿದ್ದ ‘ನಾಯಿಮನೆ’ಯಲ್ಲಿ, ಪರಸ್ಪರ ಕಚ್ಚಾಟವೇ ಮೇಲಾಯಿತು. ಸಮ ಪ್ರಮಾಣದಲ್ಲಿ ಆಹಾರವೂ ದೊರೆಯದೆ ಎಲ್ಲ ನಾಯಿಗಳೂ ಸಾವನ್ನಪ್ಪಿದವು. ಬದುಕುಳಿದ ಕೆಲವು ನಾಯಿಗಳೂ ರೋಗಗಳಿಂದ ಸಾವನ್ನಪ್ಪಿದವು.
ಅದೃಷ್ಟವಶಾತ್, ಈ ಸಂಸ್ಥೆಯನ್ನು ವಹಿಸಿಕೊಂಡ ಬೌದ್ಧ ಸನ್ಯಾಸಿಯೊಬ್ಬರು ಸರ್ಕಾರವನ್ನು ಈ ಅಮಾನವೀಯ ಅಭ್ಯಾಸವನ್ನು ನಿಲ್ಲಿಸಲು ಮತ್ತು ABC (ಪ್ರಾಣಿ ಜನನ ನಿಯಂತ್ರಣ) ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಲು ಮನವೊಲಿಸಿದರು.
ಯಾತನೆಯಾಗದಿರಲಿ
ಮುಖ್ಯವಾಗಿ, ಸುಪ್ರೀಂ ಕೋರ್ಟ್‌ನ ಆದೇಶವು 2023ರ ABC ನಿಯಮಗಳು ಮತ್ತು ಇನ್ನಿಬ್ಬರು ನ್ಯಾಯಾಧೀಶರ ಪೀಠದ ಆದೇಶಗಳಿಗೆ ವಿರುದ್ಧವಾಗಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ, ಬೀದಿ ನಾಯಿಗಳಿಗೆ ಸಂಬಂಧಿಸಿದ ಹಲವಾರು ಪ್ರಕರಣಗಳನ್ನು ಅಖೈರುಗೊಳಿಸಿದ ಆದೇಶದಲ್ಲಿ, ನ್ಯಾಯಮೂರ್ತಿಗಳಾದ ಜೆ.ಕೆ.ಮಹೇಶ್ವರಿ ಮತ್ತು ಸಂಜಯ್ ಕರೋಲ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟಿನ ವಿಭಾಗೀಯ ಪೀಠ, ಸ್ಥಳೀಯವಾಗಿ ಉದ್ಭವಿಸುವ ಯಾವುದೇ ಸಮಸ್ಯೆಗಳನ್ನು ಹೈಕೋರ್ಟ್ ಅಥವಾ "ಇತರ ವೇದಿಕೆಗಳು" ಸ್ವತಂತ್ರವಾಗಿ ನಿರ್ಣಯ ಕೈಗೊಳ್ಳುವುದು ಉತ್ತಮ ಎಂದು ಅಭಿಪ್ರಾಯಪಟ್ಟಿತ್ತು. ಎಲ್ಲಾ ನಿರ್ಧಾರಗಳು “ಪ್ರಾಣಿಗಳಿಗೆ, ವಿಶೇಷವಾಗಿ ನಾಯಿಗಳಿಗೆ ಅನಗತ್ಯ ನೋವು ಮತ್ತು ಯಾತನೆ ಉಂಟಾಗುವುದನ್ನು ತಡೆಗಟ್ಟಲು ಹೊಸ ನಿಯಮಗಳ (2023ರ ABC ನಿಯಮಗಳು) ಪ್ರಕಾರ ಇರಬೇಕು" ಎಂದು ಮಾತ್ರ ನಿರ್ದೇಶಿಸಲಾಗಿತ್ತು.
ಬೀದಿ ನಾಯಿಗಳಿಗೆ ಸಂಬಂಧಿಸಿದ ನಿರ್ಧಾರಗಳು ಈ ನಿಯಮಗಳೊಂದಿಗೆ ಹೊಂದಿಕೆಯಾಗಬೇಕು ಎಂದು ನ್ಯಾಯಾಲಯವು ಪ್ರತಿಪಾದಿಸಿತ್ತು, ಏಕೆಂದರೆ ಈ ನಿಯಮಗಳು ಪ್ರಾಣಿಗಳ ಮೇಲಿನ ಕ್ರೂರತೆಯನ್ನು ತಡೆಗಟ್ಟುವ ಮತ್ತು ಅವುಗಳ ನಿರ್ವಹಣೆಗಾಗಿ ಕಾರ್ಯವಿಧಾನಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿವೆ. ಆ ಆದೇಶದಲ್ಲಿ, ನ್ಯಾಯಮೂರ್ತಿ ಮಿಧಾ ಅವರ ಮಾತುಗಳನ್ನು ಸಹ ಉಲ್ಲೇಖಿಸಲಾಗಿದೆ, "ಪ್ರಾಣಿಗಳು ತಮ್ಮದೇ ಆದ ಅಂತರ್ಗತ ಮೌಲ್ಯವನ್ನು ಹೊಂದಿರುವ ಸಂವೇದನಾಶೀಲ ಜೀವಿಗಳು. ಆದ್ದರಿಂದ, ಅಂತಹ ಜೀವಿಗಳನ್ನು ರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ನೈತಿಕ ಜವಾಬ್ದಾರಿಯಾಗಿದೆ...". ನಾಯಿಗಳು ಒಂದು ಪ್ರದೇಶಕ್ಕೆ ಸೀಮಿತವಾದ ಪ್ರಾಣಿಗಳಾದ ಕಾರಣ ಅವುಗಳನ್ನು ಅವುಗಳ ಪ್ರದೇಶಗಳಲ್ಲೇ ನೋಡಿಕೊಳ್ಳಬೇಕು ಮತ್ತು ಆಹಾರ ನೀಡಬೇಕು ಎಂದು ಅವರು ಒತ್ತಿ ಹೇಳಿದರು.
ಆಗಸ್ಟ್ 11 ರಂದು ನೀಡಿದ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಇತರ ಹಕ್ಕುದಾರರಿಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ನೀಡದೆ ಹೊರಡಿಸಲಾಗಿದೆ. 2023ರ ABC ನಿಯಮಗಳು ಸಂತಾನಶಕ್ತಿಹರಣ ಮಾಡಿದ ನಾಯಿಗಳನ್ನು ಬಿಡುಗಡೆ ಮಾಡುವುದನ್ನು ಕಡ್ಡಾಯಗೊಳಿಸುತ್ತವೆ. ನ್ಯಾಯಾಲಯದಲ್ಲಿ ಹಾಜರಿದ್ದವರಿಗೆ "ಈ ನಿಯಮಗಳನ್ನು ಸದ್ಯಕ್ಕೆ ಮರೆತುಬಿಡಿ" ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿರುವುದು ಆಘಾತಕಾರಿಯಾಗಿದೆ. ಈ ನಿಯಮಗಳು ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕೆ ಪ್ರಮುಖ ಸಾಧನಗಳಾಗಿ ಸಂತಾನಹರಣ ಮತ್ತು ರೇಬೀಸ್ ವಿರೋಧಿ ಲಸಿಕೆಗೆ ಒತ್ತು ನೀಡುತ್ತವೆ.
ನಾಯಿಮನೆಗಳಿಗೆ ಎಲ್ಲಿದೆ ಜಾಗ?
ಯಾವುದೇ ಪುರಸಭೆಯು ಇಂತಹ ‘ನಾಯಿಮನೆ’ಗಳನ್ನು ನಡೆಸಲು ಅಗತ್ಯವಿರುವಷ್ಟು ಸ್ಥಳ ಅಥವಾ ಹಣವನ್ನು ಹೊಂದಿಲ್ಲ. ಇದನ್ನು ಕೇಳಲು ಚೆನ್ನಾಗಿರುವಂತೆ 'ಆಶ್ರಯತಾಣಗಳು' ಎಂದು ಉಲ್ಲೇಖಿಸಲಾಗಿದೆ, ಆದರೆ ಇದು 'ಬ್ಲಾಕ್ ಹೋಲ್ ಆಫ್ ಕಲ್ಕತ್ತಾ'ವನ್ನು ಒಂದು ಅದ್ಭುತ ಸ್ಥಳದಂತೆ ಕಾಣುವಂತೆ ಮಾಡುತ್ತದೆ. ಅಲ್ಲದೆ, ಈ ನಾಯಿಮನೆಗಳನ್ನು ನಿರ್ಮಿಸಲು ಅವುಗಳಿಗೆ ಎಕರೆಗಟ್ಟಲೆ ಭೂಮಿ ಬೇಕು ಮತ್ತು ಮನುಷ್ಯರು ವಾಸಿಸದ ಜಾಗವನ್ನು ಸರ್ಕಾರ ಎಲ್ಲಾದರೂ ಕಂಡುಕೊಳ್ಳುತ್ತದೆ?
ಬೀದಿ ನಾಯಿಗಳ ಜನಸಂಖ್ಯೆಯನ್ನು ನಿಯಂತ್ರಿಸಲು ಏಕೈಕ ಮಾರ್ಗವಾದ ABC-AR ಕಾರ್ಯಕ್ರಮ ಪರಿಣಾಮಕಾರಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ವಾಸ್ತವವಾಗಿ, ರಾಡ್ಫೋರ್ಡ್ ವಿಶ್ವವಿದ್ಯಾನಿಲಯದ 'ಮೈಲ್ಸ್ಟೋನ್ಸ್ ಇನ್ ವರ್ಲ್ಡ್ ಎನ್ವಿರಾನ್ಮೆಂಟಲ್ ಹಿಸ್ಟರಿ'ಯಲ್ಲಿ, ಬ್ಲೂ ಕ್ರಾಸ್ ಆಫ್ ಇಂಡಿಯಾದ ABC ಕಾರ್ಯಕ್ರಮವನ್ನು 1959 ರಲ್ಲಿ ಜೇನ್ ಗುಡಾಲ್ ನಂತರದ ಪ್ರಮುಖ ಮೈಲಿಗಲ್ಲುಗಳಲ್ಲಿ ಒಂದೆಂದು ಪಟ್ಟಿ ಮಾಡಲಾಗಿರುವುದು ಗಮನಾರ್ಹ.
ಅಂತಿಮವಾಗಿ ಸದ್ಬುದ್ಧಿಯೇ ಮೇಲುಗೈ ಸಾಧಿಸುತ್ತದೆ ಮತ್ತು ಎಲ್ಲಾ ಸ್ಥಳೀಯ ಸಂಸ್ಥೆಗಳು ಸೂಕ್ತವಾಗಿ ಮತ್ತು ಆಕ್ರಮಣಕಾರಿಯಾಗಿ ABC ಕಾರ್ಯಕ್ರಮಗಳನ್ನು ಜಾರಿಗೆ ತರುವ ರೀತಿಯಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಹಿಂತೆಗೆದುಕೊಳ್ಳುತ್ತದೆ ಅಥವಾ ಸೂಕ್ತವಾಗಿ ಮಾರ್ಪಡಿಸುತ್ತದೆ ಎಂದು ನಾವೆಲ್ಲರೂ ಆಶಿಸೋಣ.