ಜನಸಂಖ್ಯೆ: ದಕ್ಷಿಣ- ಉತ್ತರ ರಾಜ್ಯಗಳಿಗೆ ವಿಭಿನ್ನ ಕಾರಣಗಳಿಂದ ಚಿಂತೆ
ದಕ್ಷಿಣದ ರಾಜ್ಯಗಳು ಫಲವತ್ತತೆ ದರದ ಕುಸಿತದಿಂದ ಜನಸಂಖ್ಯಾ ಲಾಭಾಂಶ, ಕೇಂದ್ರ ದ ಅನುದಾನ ಮತ್ತು ಸಂಸತ್ತಿನ ಸ್ಥಾನಗಳು ಕಡಿಮೆಯಾಗುತ್ತದೆ ಎಂದು ಕಳವಳ ಪಡುತ್ತಿವೆ. ಆದರೆ, ಉತ್ತರದ ರಾಜ್ಯಗಳು ಅಧಿಕ ಜನಸಂಖ್ಯೆಯಿಂದ ಹಲವು ಸಮಸ್ಯೆಗಳೊಟ್ಟಿಗೆ ಹೋರಾಡುತ್ತಿವೆ.
ದಕ್ಷಿಣ ರಾಜ್ಯವಾದ ಆಂಧ್ರಪ್ರದೇಶವು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಲು ಎರಡು ಮಕ್ಕಳ ನಿಯಮವನ್ನು ರದ್ದುಗೊಳಿಸುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ.
ಆದರೆ, ಈ ಕ್ರಮವು ಉತ್ತರದ ರಾಜ್ಯಗಳಲ್ಲಿನ ಪ್ರವೃತ್ತಿಗೆ ವಿರುದ್ಧವಾಗಿದೆ; ಅಲ್ಲಿ ಜನಸಂಖ್ಯೆ ಬೆಳವಣಿಗೆಯನ್ನು ತಡೆಯಲು ಎರಡು ಮಕ್ಕಳ ನಿಯಮವನ್ನು ಕಡ್ಡಾಯಗೊಳಿಸಬೇಕೆಂಬ ಒತ್ತಡ ಇದೆ.
ಕ್ಷೇತ್ರ ಪುನರ್ ವಿಂಗಡಣೆ ತಡೆ ಅಂತ್ಯ: ದಕ್ಷಿಣದ ರಾಜ್ಯಗಳು ವಿಶಿಷ್ಟ ಸವಾಲನ್ನು ಎದುರಿಸುತ್ತಿವೆ. 2026ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಗೆ ತಡೆ ಅಂತ್ಯಗೊಳ್ಳುತ್ತಿದ್ದಂತೆ, ಸಂಸತ್ತಿನಲ್ಲಿ ತಮ್ಮ ಪ್ರಾತಿನಿಧ್ಯ ಕಡಿಮೆ ಆಗಬಹುದು ಎಂದು ರಾಜ್ಯಗಳು ಆತಂಕ ಪಡುತ್ತಿವೆ.
ಇದಲ್ಲದೆ, ಕ್ಷೇತ್ರ ಪುನರ್ ವಿಂಗಡಣೆಯು ಜನಸಂಖ್ಯೆಗೆ ಸಂಬಂಧಿಸಿರುವುದರಿಂದ, ಕೇಂದ್ರದ ಅನುದಾನದಲ್ಲಿ ತಮ್ಮ ಪಾಲು ಕಡಿಮೆಯಾಗಬಹುದು ಎಂದು ಅವು ಚಿಂತೆಗೊಳಗಾಗಿವೆ.
ದಕ್ಷಿಣದ ರಾಜ್ಯಗಳು ತಾವು ಜನಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿರುವುದರಿಂದ, ತಮ್ಮನ್ನು ʻಶಿಕ್ಷಿಸಲಾಗುತ್ತಿದೆʼ ಎಂದು ಭಾವಿಸುತ್ತವೆ. ಕ್ಷೇತ್ರ ಪುನರ್ ವಿಂಗಡಣೆ ಮತ್ತು ಹಣಕಾಸು ಆಯೋಗದ ನಿಯಮಗಳಿಂದ ಸಂಸತ್ತಿನಲ್ಲಿ ತಮ್ಮ ಸ್ಥಾನಗಳಲ್ಲಿ ಹಾಗೂ ತಮ್ಮ ಪಾಲಿನ ಕೇಂದ್ರ ಅನುದಾನ ಕಡಿತ ಆಗಬಹುದು ಎಂದು ಆತಂಕಕ್ಕೆ ಸಿಲುಕಿವೆ.
ಇದು ಆಂಧ್ರಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ.ಇತರ ದಕ್ಷಿಣದ ರಾಜ್ಯಗಳಾದ ತೆಲಂಗಾಣ, ತಮಿಳುನಾಡು, ಕರ್ನಾಟಕ ಮತ್ತು ಕೇರಳ ಕೂಡ ಜನಸಂಖ್ಯೆ ಬದಲಾವಣೆಯೊಂದಿಗೆ ಸೆಣಸಾಡುತ್ತಿವೆ.
ಫಲವತ್ತತೆ ದರ: ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣದ ರಾಜ್ಯಗಳು ಕಡಿಮೆ ಫಲವತ್ತತೆ ಪ್ರಮಾಣವನ್ನು ಹೊಂದಿವೆ. ಆಂಧ್ರಪ್ರದೇಶದ ಸರಾಸರಿ ಟಿಎಫ್‌ಆರ್ (ಒಟ್ಟು ಫಲವತ್ತತೆ ದರ ಅಥವಾ ಪ್ರತಿ ಮಹಿಳೆಯ ಜನನ ಪ್ರಮಾಣ) 1.5 ಇದೆ: ಇದು ರಾಷ್ಟ್ರೀಯ ಸರಾಸರಿ ಶೇ.2 ಕ್ಕಿಂತ ಕಡಿಮೆ.
'ಉತ್ಪಾದಕ ಜನಸಂಖ್ಯೆ'ಯ ಕುಸಿತದಿಂದ ರಾಜ್ಯದ ಆರ್ಥಿಕ ಬೆಳವಣಿಗೆಗೆ ಹಿನ್ನಡೆ ಆಗುತ್ತದೆ.
ದಕ್ಷಿಣದ ರಾಜ್ಯಗಳ ಜನಸಂಖ್ಯಾ ರೀತಿಯೂ ವೇಗವಾಗಿ ಬದಲಾಗುತ್ತಿದೆ. 60 ವರ್ಷಕ್ಕಿಂತ ಮೇಲಿನವರ ಶೇಕಡಾವಾರು ಪ್ರಮಾಣ ಹೆಚ್ಚುತ್ತಿದೆ; ಆಂಧ್ರಪ್ರದೇಶ ಈಗಾಗಲೇ ಶೇ.11 ರಷ್ಟು ನಾಗರಿಕರನ್ನು ಹೊಂದಿದೆ. ಇದು 2047 ರ ವೇಳೆಗೆ ಶೇ.19 ಕ್ಕೆ ಹೆಚ್ಚುವ ನಿರೀಕ್ಷೆಯಿದೆ. ಪ್ರಸ್ತುತ, ಜನಸಂಖ್ಯೆಯಲ್ಲಿ ಹಿರಿಯರ ರಾಷ್ಟ್ರೀಯ ಸರಾಸರಿ ಶೇ.10 ರಷ್ಟಿದೆ ಮತ್ತು ಇದು 2047 ರ ವೇಳೆಗೆ ಶೇ.15 ಕ್ಕೆ ಏರಬಹುದು.
ಉತ್ಪಾದಕ ಕಾರ್ಯಪಡೆ: ಪ್ರಸ್ತುತ, 144 ಕೋಟಿ ಜನಸಂಖ್ಯೆ ಇರುವ ಭಾರತ, ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಹಿರಿಯ ವಯಸ್ಸಿನವರು ಹೆಚ್ಚು ಸಂಖ್ಯೆಯಲ್ಲಿರುವ ಜಗತ್ತಿನಲ್ಲಿ ಕಿರಿಯ ವಯಸ್ಕರು ಅಧಿಕ ಪ್ರಮಾಣದಲ್ಲಿರುವುದು ಭಾರತಕ್ಕೆ ಪ್ರಯೋಜನವಾಗಿದೆ.
ರಾಷ್ಟ್ರವೊಂದಕ್ಕೆ 'ಉತ್ಪಾದಕ ಕಾರ್ಯಪಡೆ'ಯ ಲಭ್ಯತೆಯನ್ನು ಅದರ 'ಜನಸಂಖ್ಯಾ ಲಾಭಾಂಶ'(ಡೆಮಾಗ್ರಫಿಕ್ ಡಿವಿಡೆಂಡ್) ಎಂದು ಅರ್ಥಶಾಸ್ತ್ರಜ್ಞರು ವ್ಯಾಖ್ಯಾನಿಸುತ್ತಾರೆ. ದುಡಿಯುವ ವಯಸ್ಸಿನ ಜನಸಂಖ್ಯೆ (15-64 ವರ್ಷ) ಪಾಲು ಕೆಲಸ ಮಾಡದವರ ವರ್ಗಕ್ಕಿಂತ ಹೆಚ್ಚು ಇರುತ್ತದೆ. 2022 ರಲ್ಲಿ ಭಾರತದ ನಾಗರಿಕರ ಸರಾಸರಿ ವಯಸ್ಸು 28 ವರ್ಷ; ಆದರೆ, ಚೀನಾ ಮತ್ತು ಅಮೆರಿಕ 37, ಪಶ್ಚಿಮ ಯುರೋಪ್ 45 ಮತ್ತು ಜಪಾನ್ 49 ವರ್ಷ.
ಈ ಜನಸಂಖ್ಯಾ ಲಾಭಾಂಶ ಶಾಶ್ವತವಾಗಿ ಇರುವುದಿಲ್ಲ; ಏಕೆಂದರೆ, ದೇಶದಲ್ಲಿ 2040 ರ ವೇಳೆಗೆ ಕೆಲಸ ಮಾಡುವ ವಯಸ್ಸಿನ ಜನಸಂಖ್ಯೆ ಕ್ಷೀಣಿಸಲಿದೆ.
ಉತ್ತರದ ರಾಜ್ಯಗಳಾದ ಬಿಹಾರ ಮತ್ತು ಉತ್ತರ ಪ್ರದೇಶಗಳು ದಕ್ಷಿಣದ ರಾಜ್ಯಗಳಿಗಿಂತ ಕಡಿಮೆ ಸರಾಸರಿ ವಯಸ್ಸು ಹೊಂದಿವೆ. 2036 ರ ಹೊತ್ತಿಗೆ ಬಿಹಾರದ ಜನತೆ ಸರಾಸರಿ ವಯಸ್ಸು 28 ಆದಾಗ, ದಕ್ಷಿಣದಲ್ಲಿ ಇದು ಸುಮಾರು 40 ವರ್ಷ ಆಗಿರಬಹುದು.
ಏಕರೂಪವಲ್ಲದ ಬದಲಾವಣೆ: ದೇಶದಲ್ಲಿ ಜನಸಂಖ್ಯೆ ಬದಲಾವಣೆಗಳು ಏಕರೂಪವಾಗಿಲ್ಲ; ಕೇರಳವು ಬೇರೆ ರಾಜ್ಯಗಳಿಗಿಂತ ವೇಗವಾಗಿ ವಯಸ್ಸಾಗುತ್ತಿದ್ದರೆ, ಬಿಹಾರ 2051ರಲ್ಲಿ ಗರಿಷ್ಠ ಮಟ್ಟ ತಲುಪುತ್ತದೆ. 2031ರ ವೇಳೆಗೆ ಕೇರಳ ಸೇರಿದಂತೆ 22 ದೊಡ್ಡ ರಾಜ್ಯಗಳಲ್ಲಿ ಕನಿಷ್ಠ 11ರಲ್ಲಿ ಅಧಿಕ ವಯಸ್ಕರು ಇರಲಿದ್ದಾರೆ.
ಜನನ ದರದ ಕುಸಿತವು ಜನಸಂಖ್ಯೆಯಲ್ಲಿನ ಬದಲಾವಣೆಗೆ ಮತ್ತೊಂದು ಕಾರಣ. 1980ರ ದಶಕದಿಂದ ದೇಶದ ಫಲವತ್ತತೆ ದರ ಸುಮಾರು ಅರ್ಧದಷ್ಟು ಕಡಿಮೆಯಾಗಿದೆ; ಪ್ರಸ್ತುತ ಶೇ. 2 ಇದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ- 5 (ಎನ್‌ಎಫ್‌ಎಚ್‌ಎಸ್-5, 2019-21) ಪ್ರಕಾರ, ದೇಶದ ಫಲವತ್ತತೆ ದರವು ಬದಲಿ ದರ( ಶೇ. 2.1)ಕ್ಕಿಂತ ಕಡಿಮೆಯಾಗಿದೆ. ಇದರ ಧನಾತ್ಮಕ ಪರಿಣಾಮವೆಂದರೆ, ದುಡಿಯುವ ವಯಸ್ಸಿನ ಜನರ ಸಂಖ್ಯೆ ಹೆಚ್ಚುತ್ತಿದೆ.
ಆದರೆ, ಸರಾಸರಿಗಳು ತಪ್ಪುದಾರಿಗೆಳೆಯುವ ಸಾಧ್ಯತೆಯಿದೆ. ಈ ವಿದ್ಯಮಾನವು ಭಾರತದಾದ್ಯಂತ ಏಕರೂಪವಾಗಿಲ್ಲ. ಏಳು ರಾಜ್ಯಗಳು ಹೆಚ್ಚು ಟಿಎಫ್‌ಆರ್ ಹೊಂದಿವೆ: ಬಿಹಾರ (3.6), ಮಧ್ಯಪ್ರದೇಶ (3.1), ರಾಜಸ್ಥಾನ (3.0), ಜಾರ್ಖಂಡ್ (2.9), ಚತ್ತೀಸ್‌ಗಢ (2.7) ಮತ್ತು ಅಸ್ಸಾಂ (2.4). ಈ ವ್ಯಾಪಕ ಅಂತಾರಾಜ್ಯ ವ್ಯತ್ಯಾಸಗಳ ಅರ್ಥವೇನೆಂದರೆ, ಜನಸಂಖ್ಯಾ ಲಾಭಾಂಶ ವಿವಿಧ ರಾಜ್ಯಗಳಿಗೆ ವಿಭಿನ್ನ ಸಮಯಗಳಲ್ಲಿ ಲಭ್ಯವಾ ಗಲಿದೆ.
ಕೋಮು ಸಮಸ್ಯೆ: ವಿದ್ಯಾವಂತರು ಮತ್ತು ಶ್ರೀಮಂತರಿಗೆ ಹೋಲಿಸಿದರೆ, ಬಡವರು ಹೆಚ್ಚು ಬೆಳವಣಿಗೆ ದರವನ್ನು ಹೊಂದಿದ್ದಾರೆ. ಬಿಹಾರವು ʻಬಹು ಆಯಾಮದʼ ಬಡ ರಾಜ್ಯವಾಗಿದೆ ಮತ್ತು ಅಲ್ಲಿನ ಬಡತವವನ್ನು ಸಹರಾ ಕೆಳಗಿನ ದೇಶಗಳಿಗೆ ಹೋಲಿಸಬಹುದು. ರಾಜಕಾರಣಿಗಳು ಆರೋಗ್ಯ ಮತ್ತು ಶಿಕ್ಷಣದತ್ತ ಗಮನ ಹರಿಸದೆ, ಈ ವಿಷಯವನ್ನು ಕೋಮು ಸಮಸ್ಯೆಯಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ.
ಬಿಜೆಪಿ ಮತ್ತು ಬಲಪಂಥೀಯ ರಾಜಕಾರಣಿಗಳು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಆದರೆ, ವಾಸ್ತವವೆಂದರೆ, ಮುಸ್ಲಿಂ ಸಮುದಾಯದ ಜನಸಂಖ್ಯೆ ಬೆಳವಣಿಗೆ ದರವು ಹೆಚ್ಚು ವೇಗವಾಗಿ ಕುಸಿಯುತ್ತಿದೆ.
ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಅವರ ಪ್ರಕಾರ, 2001-11ರ ದಶಕದಲ್ಲಿ ಹಿಂದೂಗಳ ಬೆಳವಣಿಗೆ ದರ ಶೇ.19.2 ರಿಂದ ಶೇ.16.76ಕ್ಕೆ ಕುಸಿದಿದ್ದು, ಅದೇ ಅವಧಿಯಲ್ಲಿ ಮುಸ್ಲಿಮರ ಬೆಳವಣಿಗೆ ದರ ಶೇ.29.42ರಿಂದ ಶೇ.14.6ಕ್ಕೆ ಕಡಿಮೆಯಾಗಿದೆ.
ರಾಜಕಾರಣಿಗಳು ಆರೋಗ್ಯ ಮತ್ತು ಶಿಕ್ಷಣದಂತಹ ವಿಷಯಗಳತ್ತ ಗಮನ ಹರಿಸಬೇಕು. ಆದರೆ, ದುರದೃಷ್ಟವಶಾತ್ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮುಸ್ಲಿಮರು ತಮ್ಮ ಜನಸಂಖ್ಯೆ ನಿಯಂತ್ರಿಸಬೇಕು ಎಂದು ಕೇಳಿಕೊಂಡರು. ಇದನ್ನು ಮಾಡದ ಹೊರತು ʻಬಡತನವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ,ʼ ಎಂದು ಹೇಳಿದರು.
ಭೋಪಾಲ್‌ನ ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಅವರು ಈ ಹಿಂದೆ ʻಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾಗಳುʼ ʻನುಸುಳುಕೋರರುʼ ಮತ್ತು ದೇಶದ ವಿರಳ ಸಂಪನ್ಮೂಲದ ಮೇಲೆ ಹೊರೆ ಎಂದು ಹೇಳಿ, ದೇಶಾದ್ಯಂತ ಎರಡು ಮಕ್ಕಳ ನಿಯಮ ಜಾರಿಗೆ ಶಿಫಾರಸು ಮಾಡಿದ್ದರು.ವಾಸ್ತವವೆಂದರೆ, ಬಾಂಗ್ಲಾದೇಶವು ಭಾರತಕ್ಕಿಂತ ಉತ್ತಮ ಸಾಅಧನೆ ಮಾಡಿದೆ; ಅವರ ಟಿಎಫ್‌ಆರ್ 1.98.
ಸಾಮಾಜಿಕ ಅರಿವು: ದಕ್ಷಿಣದ ರಾಜ್ಯಗಳು ಬಲವಂತದ ಕ್ರಮಗಳ ಬದಲು ಸಾಮಾಜಿಕ ಜಾಗೃತಿ ಮೂಲಕ ಕುಟುಂಬದ ಗಾತ್ರವನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿವೆ.
ಈ ರಾಜ್ಯಗಳು ಸಂತಾನೋತ್ಪತ್ತಿ ಆರೋಗ್ಯ, ಜನಸಾಮಾನ್ಯರಿಗೆ ಗರ್ಭನಿರೋಧ ಕ್ರಮಗಳು ಮತ್ತು ವೈಯಕ್ತಿಕ ನೈರ್ಮಲ್ಯದ ಬಗ್ಗೆ ಶಿಕ್ಷಣ ನೀಡಿದರು. ಎರಡು ಮಕ್ಕಳ ಕಡ್ಡಾಯ ನಿಯಮ ಮತ್ತು ಪಾಲಿಸದೆ ಇರುವವರಿಗೆ ರಾಜ್ಯ ಪ್ರಾಯೋಜಿತ ಸಾಮಾಜಿಕ ಪ್ರಯೋಜನಗಳ ನಿರಾಕರ ಣೆಯು ಹೆಚ್ಚು ಯಶಸ್ಸು ಆಗಿಲ್ಲ ಎಂದು ಅಧ್ಯಯನಗಳು ಸೂಚಿಸುತ್ತವೆ. ಇದಕ್ಕೆ ವಿರುದ್ಧವಾಗಿ, ಈ ಕ್ರಮಗಳು ಮಹಿಳೆಯರನ್ನು ನೋಯಿಸಿದವು.
ಉತ್ತರದ ರಾಜ್ಯಗಳ ರಾಜಕೀಯ ಮುಖಂಡರು ʻಹಿಂದು ಖತ್ರೆ ಮೇ ಹೈ (ಹಿಂದುಗಳು ಅಪಾಯದಲ್ಲಿದ್ದಾರೆ)ʼ ಎಂದು ಸುಳ್ಳು ಹರಡುವ ಬದಲು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಗಮನಹರಿಸಬೇಕು. ಇದನ್ನು ಮಾಡದ ಹೊರತು ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸುವ ಬಯಕೆಯು ದೂರದ ಕನಸಾಗಿಯೇ ಉಳಿಯುತ್ತದೆ.