
ರಸಗೊಬ್ಬರಕ್ಕೆ ನೀಡಲಾಗುವ ಸಹಾಯಧನ ಮಾಲಿನ್ಯಕಾರವೂ ಹೌದು, ಅದಕ್ಷತೆಗೆ ನೀಡುವ ಕುಮ್ಮುಕ್ಕೂ ಹೌದು. ಇದು ಕೃಷಿ ಇಳುವರಿ ಕುಂಠಿತಗೊಳಿಸುತ್ತದೆ, ನೀರಿಗೆ ವಿಷಪ್ರಾಶನ ಮಾಡುತ್ತದೆ,
ಪರಿಶುದ್ಧ ಸ್ವರೂಪದಲ್ಲಿರುವ ಯಾವ ರಸಗೊಬ್ಬರವೂ ಕೂಡ ವಾಸನೆಯನ್ನು ಹೊಂದಿರುವುದಿಲ್ಲ. ಆದರೆ ಭಾರತದಲ್ಲಿರುವ ರಸಗೊಬ್ಬರಗಳು ಹಾಗಲ್ಲ. ಅವು ಕೆಟ್ಟಾ ಕೊಳಕ ವಾಸನೆಯನ್ನು ಬೀರುತ್ತವೆ. ಅವು ಅಕ್ಷರಶಃ ವಾಸನೆಕೋರ ರಾಸಾಯನಿಕ ಗೊಬ್ಬರಗಳು ಎಂದು ಹೇಳುವುದು ಸರಿಹೋದೀತು. ಇಂತಹ ʼಅಕ್ಷರಶಃ ವಾಸನೆ ಬೀರಲು ಕಾರಣವಾದರೂ ಏನೆಂದರೆ ಈ ರಸಗೊಬ್ಬರಗಳು ತೇವಾಂಶದ ಸಂಪರ್ಕಕ್ಕೆ ಬಂದ ತಕ್ಷಣವೇ ಅಮೋನಿಯಾವನ್ನು ಬಿಡುಗಡೆ ಮಾಡಲು ಯೂರಿಯಾ ಮತ್ತು ಡೈಅಮೋನಿಯಾ ಫಾಸ್ಫೇಟ್ (ಡಿಎಪಿ)ಗೆ ಕಾರಣವಾಗುತ್ತದೆ. ಸಾರ್ವಜನಿಕ ಶೌಚಾಲಯಗಳಲ್ಲಿ ತೀವ್ರತರದ ದುರ್ವಾಸನೆ ಬರಲು ಈ ಅಮೋನಿಯಾವೇ ಮುಖ್ಯ ಕಾರಣ.
ಅಷ್ಟಾಯಿತಲ್ಲ, ಇನ್ನು ಇದರ ಸಾಂಕೇತಿಕ ವಾಸನೆಯನ್ನು ವಿವರಿಸಲು ಹೊರಟರೆ ಅದು ನಿಜಕ್ಕೂ ಮುಗಿಯದ ಕಥೆ. ಅದಕ್ಕೆ ಒಂದು ಇಡೀ ಲೇಖನವನ್ನೇ ಮೀಸಲಿಡಬೇಕು ಅನಿಸುತ್ತದೆ. ಅಂತಹ ಪ್ರಯತ್ನವನ್ನಾದರೂ ಇದರಲ್ಲಿ ಮಾಡೋಣ.
ಕೇಂದ್ರ ಮುಂಗಡಪತ್ರದಲ್ಲಿ ರಸಗೊಬ್ಬರ ಸಬ್ಸಿಡಿಯು ಅತಿ ದೊಡ್ಡ ವೆಚ್ಚದ ಬಾಬ್ತುಗಳಲ್ಲಿ ಒಂದಾಗಿದೆ. ಈ ವರ್ಷ ಇದು ರೂ.೧.೮೪ ಟ್ರಿಲಿಯನ್ ಆಗಿದ್ದು ಮುಂದಿನ ಬಜೆಟ್ ಹೊತ್ತಿಗೆ ಇದು ರೂ.೨ ಟ್ರಿಲಿಯನ್ನಿಗೆ ಏರುವ ನಿರೀಕ್ಷೆಯಿದೆ. ಒಂದು ಟ್ರಿಲಿಯನ್ ಎಂದರೆ ಅದಕ್ಕಿರುವುದು ಹನ್ನೆರಡು ಸೊನ್ನೆಗಳು. ಅಂದರೆ ಅದು ಒಂದು ಲಕ್ಷ (ಐದು ಸೊನ್ನೆ) ಕೋಟಿ (ಏಳು ಸೊನ್ನೆ)ಗಳಿಗೆ ಸಮಾನ. ಈ ಸಹಾಯಧನದ ಸುಮಾರು ಮೂರನೇ ಎರಡರಷ್ಟು ಭಾಗ ಯೂರಿಯಾಕ್ಕೆ ಸಂದಾಯವಾಗುತ್ತದೆ. ಇದು ಮಣ್ಣಿನಲ್ಲಿರುವ ಸಾರಜನಕದ ಅಂಶವನ್ನು ಹೆಚ್ಚುಮಾಡುವ ಗೊಬ್ಬರವಾಗಿದೆ. ಪಾಸ್ಪೆಟಿಕ್ ಮತ್ತು ಪೊಟ್ಯಾಸಿಕ್ ಗೊಬ್ಬರಗಳಿಗೆ ಸಿಗುವ ಸಬ್ಸಿಡಿ ಪ್ರಮಾಣ ಕಡಿಮೆ. ಇದರ ಫಲವಾಗಿ ರೈತರು ಅತಿ ಹೆಚ್ಚು ಸಬ್ಸಿಡಿ ದೊರೆಯುವ ಯೂರಿಯಾವನ್ನು ಅತಿಯಾದ ಪ್ರಮಾಣದಲ್ಲಿ ಬಳಸಿ ಇತರ ಗೊಬ್ಬರಗಳನ್ನು ಕಡಿಮೆ ಬಳಸುತ್ತಾರೆ. ಇದರ ಪರಿಣಾಮವಾಗಿ ಭಾರತದಲ್ಲಿ ರಸಗೊಬ್ಬರಗಳ ಬಳಕೆಯ ಅನುಪಾತದಲ್ಲಿ ಗಣನೀಯ ವ್ಯತ್ಯಾಸ ಕಾಣುತ್ತದೆ.
ಯೂರಿಯಾ ಹೇಗೆ ಪೋಲಾಗುತ್ತಿದೆ?
ನೈಸರ್ಗಿಕ ಪ್ರಪಂಚವನ್ನು ರೂಪಿಸುವ ಮೂಲಧಾತುಗಳ ಆವರ್ತಕ ಕೋಷ್ಠಕದಲ್ಲಿ N ಎಂದರೆ ಸಾರಜನಕ (Nitrogeņ) P ಎಂದರೆ ರಂಜಕ (Phosphorus) ಹಾಗೂ K ಅಂದರೆ ಪೊಟ್ಯಾಸಿಯಂ. ಈ ಪೊಟ್ಯಾಸಿಯಂಗೆ ಇರುವ ಲ್ಯಾಟಿನ್ ಪದ ʼಕಾಲಿಯಂʼ. ಇದು ಅರೇಬಿಕ್ ಮೂಲದ ʼಅಲ್-ಖಲ್ಯ ಎಂಬ ಪದಮೂಲದಿಂದ ಬಂದಿದೆ. ಇದರ ಅರ್ಥ ಸಸ್ಯದ ಬೂದಿ. ಇದು ಮಣ್ಣನ್ನು ಪೊಟ್ಯಾಸಿಯಂನಿಂದ ಸಮೃದ್ಧಗಿೊಳಿಸಲು ಬಳಸುವ ಸಾಂಪ್ರದಾಯಿಕ ವಸ್ತುವಾಗಿದೆ. ಅಲ್ಕಲಿ ಎಂಬ ಪದದ ಮೂಲ ಕೂಡ ʼಅಲ್-ಖಲ್ಯʼ ಪದವೇ ಆಗಿದೆ.
ವಿವಿಧ ರಸಗೊಬ್ಬರಗಳ ಆದರ್ಶ ಪ್ರಮಾಣದ ಅನುಪಾತವು (NPK) 4:2:1 ಇರಬೇಕು. ಆದರೆ ಭಾರತದಲ್ಲಿ ಈ ಅನುಪಾತವು 10.9:4.4:1 ಕ್ಕೆ ಏರಿದೆ ಮತ್ತು ಅಷ್ಟರಮಟ್ಟಿಗೆ ಹದಗೆಟ್ಟಿದೆ. ಇದರರ್ಥವೇನೆಂದರೆ, ಸಬ್ಸಿಡಿ ನೀಡಲಾಗುತ್ತಿರುವ ಭಾರೀ ಪ್ರಮಾಣದ ಯೂರಿಯಾ ಬೆಳೆಗಳಿಗೆ ಯಾವುದೇ ರೀತಿಯಲ್ಲಿ ಪ್ರಯೋಜನ ನೀಡದೆ ವ್ಯರ್ಥವಾಗುತ್ತಿದೆ.
ಕೃಷಿ ವಿಜ್ಞಾನಿ ಅಶೋಕ್ ಗುಲಾಟಿ ಅವರ ಪ್ರಕಾರ, 'ಪೋಷಕಾಂಶ ಬಳಕೆಯ ದಕ್ಷತೆ'ಯು ಕೇವಲ ಶೇ.35-40ಕ್ಕೆ ಇಳಿದಿದೆ. ಅಂದರೆ ಹಾಕಿದ ರಸಗೊಬ್ಬರದಲ್ಲಿ ಎಷ್ಟು ಪ್ರಮಾಣವನ್ನು ಸಸ್ಯವು ನಿಜವಾಗಿ ಹೀರಿಕೊಳ್ಳುತ್ತದೆ ಮತ್ತು ಎಷ್ಟು ಪ್ರಮಾಣವು ಭೂಮಿಯಲ್ಲಿ ಸೋರಿಕೆಯಾಗುತ್ತಿದೆ, ಎಷ್ಟು ಆವಿಯಾಗುತ್ತಿದೆ ಅಥವಾ ಮಣ್ಣಿನಲ್ಲಿ ಸ್ಥಿರಗೊಂಡು ವ್ಯರ್ಥವಾಗುತ್ತದೆ ಎಂಬ ಲೆಕ್ಕಾಚಾರವಿದು. ಇದರ ಅರ್ಥ ಅನ್ವಯಿಸಲಾದ ಗೊಬ್ಬರದ ಬಹುಪಾಲನ್ನು ಹೀರಿಕೊಳ್ಳಲು ಸಸ್ಯಗಳು ವಿಫಲವಾಗುತ್ತಿವೆ. ಅಷ್ಟೇ ಅಲ್ಲದೆ, ಸಬ್ಸಿಡಿ ಇರುವ ಯೂರಿಯಾದ ಐದನೇ ಒಂದು ಭಾಗವು ಇತರ ಉದ್ದೇಶಗಳಿಗೆ ಅಕ್ರಮವಾಗಿ ಬಳಕೆಯಾಗುತ್ತಿದೆ.
ವಿಷವಾಗುತ್ತಿರುವ ಕುಡಿಯುವ ನೀರು
ಸಸ್ಯಗಳು ತಿರಸ್ಕರಿಸಿದ ಯೂರಿಯಾವು ವಿಭಜನೆಗೊಂಡು ವಾತಾವರಣಕ್ಕೆ ನೈಟ್ರಸ್ ಆಕ್ಸೈಡ್ ಆಗಿ ಬಿಡುಗಡೆ ಮಾಡುತ್ತದೆ. ಇದು ಪ್ರಬಲವಾದ ಹಸಿರುಮನೆ ಅನಿಲವಾಗಿದ್ದು, ಜಾಗತಿಕ ತಾಪಮಾನ ಏರಿಕೆಗೆ ಕೊಡುಗೆಯನ್ನು ನೀಡುತ್ತದೆ. ಇನ್ನು ಭೂಮಿಯಲ್ಲಿ ವಿಭಜನೆಗೊಂಡ ಹೀರಲ್ಪಡದೇ ಇರುವ ಯೂರಿಯಾವು ನೈಟ್ರೇಟ್ ಆಗಿ ಮಾರ್ಪಟ್ಟು, ನಾವು ಕುಡಿಯುವ ನೀರನ್ನು ವಿಷಕಾರಿಯಾಗಿ ಮಾಡುತ್ತದೆ. ಈ ನೀರನ್ನು ಸೇವಿಸಿದರೆ, ಅದು ನಮ್ಮ ದೇಹದಲ್ಲಿಯೂ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ.
ರಸಗೊಬ್ಬರಗಳ ಈ ಅಸಮತೋಲಿತ ಬಳಕೆಯಿಂದ ಸಬ್ಸಿಡಿಯೂ ವ್ಯರ್ಥವಾಗುತ್ತಿದೆ ಮತ್ತು ಗಾಳಿ-ನೀರು ಕೂಡ ವಿಷಪೂರಿತವಾಗುತ್ತಿದೆ. ಸಸ್ಯಗಳು ಹೆಚ್ಚುವರಿ ಯೂರಿಯಾವನ್ನು ಹೀರಿಕೊಂಡರೂ ಅದು ಕೇವಲ ಸಸ್ಯದ ಬೆಳವಣಿಗೆಯನ್ನು ಹೆಚ್ಚಿಸುತ್ತದೆಯೇ ಹೊರತು, ಧಾನ್ಯದ ಇಳುವರಿಯಲ್ಲಿ ಅಷ್ಟೇ ಪ್ರಮಾಣದ ಹೆಚ್ಚಳವನ್ನು ತರುವುದಿಲ್ಲ.
ಗುಲಾಟಿ ಅವರ ಪ್ರಕಾರ, ಭಾರತದಲ್ಲಿ ಹೆಚ್ಚುವರಿ ರಸಗೊಬ್ಬರ ಬಳಕೆಯಿಂದ ಬರುವ ಇಳುವರಿಯ ಪ್ರಮಾಣವು 1970ರ ದಶಕದಲ್ಲಿ ಪ್ರತಿ ಒಂದು ಯುನಿಟ್ ಗೊಬ್ಬರಕ್ಕೆ 10 ಯುನಿಟ್ ಧಾನ್ಯದಷ್ಟಿತ್ತು; ಆದರೆ ಈಗ ಅದು ಕೇವಲ 2.7 ಯುನಿಟ್ ಗೆ ಕುಸಿದಿದೆ. ಭಾರತದಲ್ಲಿ ಪ್ರತಿ ಯುನಿಟ್ ಕೃಷಿ ಪ್ರದೇಶದ ಕೃಷಿ ಮೌಲ್ಯವರ್ಧನೆಯು ಚೀನಾಕ್ಕೆ ಹೋಲಿಸಿದರೆ ಕೇವಲ ಶೇ.38ರಷ್ಟಿದೆ. ರಸಗೊಬ್ಬರ ಬಳಕೆಯಲ್ಲಿನ ಈ ಅಸಮತೋಲನವೇ ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ
ಮತ್ತೆ ಮತ್ತೆ ಸಹಾಯಧನ…
ಹಾಗಂತ ಇದನ್ನು ರಸಗೊಬ್ಬರ ಸಬ್ಸಿಡಿ ಕಥೆಯ ಸಂಪೂರ್ಣ ಭಾಗವೆಂದು ಪರಿಭಾವಿಸುವ ಅಗತ್ಯವೇನೂ ಇಲ್ಲ. ಭಾರತದಲ್ಲಿ ಯೂರಿಯಾ ಉತ್ಪಾದನೆಯಲ್ಲಿ ಬಳಸುವ ನೈಸರ್ಗಿಕ ಅನಿಲಕ್ಕೆ ಇತರ ಕೈಗಾರಿಕಾ ಬಳಕೆಗಿಂತ ಶೇ.೫೦ರಷ್ಟು ಹೆಚ್ಚಿನ ಸಬ್ಸಿಡಿ ನೀಡಲಾಗುತ್ತದೆ. ಸರ್ಕಾರವು ಮಾರುಕಟ್ಟೆ ಬೆಲೆಯಲ್ಲಿ ದ್ರವೀಕೃತ ನೈಸರ್ಗಿಕ ಅನಿಲವನ್ನು (LNG) ಆಮದು ಮಾಡಿಕೊಳ್ಳುತ್ತದೆ. ಅದನ್ನು ಮರು-ಅನಿಲೀಕರಣಗೊಳಿಸಿ ದೇಶಾದ್ಯಂತ ಕೊಳವೆಮಾರ್ಗಗಳ ಮೂಲಕ ಸಾಗಿಸಲಾಗುತ್ತದೆ. ನಂತರ ಅದನ್ನು ಉತ್ಪಾದನಾ ವೆಚ್ಚಕ್ಕಿಂತ ತೀರಾ ಕಡಿಮೆ ಬೆಲೆಗೆ ರಸಗೊಬ್ಬರ ಉದ್ಯಮಕ್ಕೆ ಮಾರಾಟ ಮಾಡಲಾಗುತ್ತದೆ.
ಈ ಉದ್ಯಮದ ಉತ್ಪಾದನೆಗೆ ಮತ್ತೊಮ್ಮೆ ಸಹಾಯಧನ ನೀಡಲಾಗುತ್ತದೆ. ಇದು ಅಂತಿಮವಾಗಿ ಏನಾಗುತ್ತದೆ? ನಾವು ಉಸಿರಾಡುವ ಗಾಳಿ ಮತ್ತು ಕುಡಿಯುವ ನೀರನ್ನು ಮಲಿನಗೊಳಿಸುತ್ತದೆ.
ಇದು ನಿಜಕ್ಕೂ ಕ್ರಿಮಿನಲ್ ಎಂದು ನೀವು ಉದ್ಗರಿಸಿದರೆ ನಿಮ್ಮನ್ನು ಆತಂಕಕ್ಕೆ ಒಳಪಡಿಸುವ ಇನ್ನಷ್ಟು ಸಂಗತಿಗಳಿವೆ. ಆಹಾರ ಸಬ್ಸಿಡಿ ಬಿಲ್-ನಲ್ಲಿ ಕೂಡ ಒಂದು ಹೆಚ್ಚುವರಿ ಸಬ್ಸಿಡಿ ಇದೆ. ಭಾರತೀಯ ಆಹಾರ ನಿಗಮವು ಧಾನ್ಯಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಗಾಗಿ ನಾಗರಿಕ ಸರಬರಾಜು ಇಲಾಖೆಗಳಿಗೆ ಅಥವಾ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಪಡೆಯುವ ಆದಾಯದ ನಡುವಿನ ವ್ಯತ್ಯಾಸವೇ ಆಹಾರ ಸಬ್ಸಿಡಿ. ಇದರ ಪ್ರಮುಖ ವೆಚ್ಚವೆಂದರೆ ಸರ್ಕಾರವು ಘೋಷಿಸಿದ ಕನಿಷ್ಠ ಬೆಂಬಲ ಬೆಲೆಯಲ್ಲಿ ಧಾನ್ಯಗಳನ್ನು ಖರೀದಿ ಮಾಡುವುದು.
ಇದರ ಜೊತೆಗೆ ಸಾಗಣೆ, ನಿರ್ವಹಣೆ, ಸಂಗ್ರಹಣೆ, ಹಾನಿ ಮತ್ತು ಕಳ್ಳತನದ ವೆಚ್ಚಗಳು ಕೂಡ ಸೇರ್ಪಡೆಯಾಗುತ್ತವೆ. ದಾಸ್ತಾನು ವೆಚ್ಚದಲ್ಲಿ ಗೋದಾಮುಗಳು ಮತ್ತು ಸಿಲೊಗಳ ಮಾಡಿಯಲ್ಲದೆ, ಧಾನ್ಯವನ್ನು ಖರೀದಿ ಮತ್ತು ಸಂಗ್ರಹ ಮಾಡಲು ಸಾಲ ಪಡೆದ ಹಣದ ಮೇಲಿನ ಭಾರೀ ಬಡ್ಡಿಯೂ ಸೇರಿಕೊಂಡಿರುತ್ತದೆ.
ರೈತರಿಗೆ ಉತ್ಪಾದನಾ ವೆಚ್ಚಕ್ಕಿಂತ ಹೆಚ್ಚಿನ ಲಾಭವನ್ನು ಕಲ್ಪಿಸುವ ದೃಷ್ಟಿಯಿಂದ ಖರೀದಿ ಬೆಲೆಗಳನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಲಾಗುತ್ತದೆ. ಹಾಗಂತ ಈ ವೆಚ್ಚಗಳನ್ನು ಜಾಗತಿಕ ಮಾರುಕಟ್ಟೆಯ ದಕ್ಷತೆಯ ಮಾನದಂಡಗಳಿಗೆ ಹೋಲಿಸಲಾಗುವುದಿಲ್ಲ. ಜನರಿಗೆ ಆಹಾರ ನೀಡಲು ಬೇಕಾದುದಕ್ಕಿಂತ ಹೆಚ್ಚಿನ ಧಾನ್ಯವನ್ನು ಇಲ್ಲಿ ಉತ್ಪಾದಿಸಲಾಗುತ್ತಿದೆ. ಕಳೆದ ವರ್ಷ, ಎಫ್ಸಿಐ ಗೋದಾಮುಗಳಿಂದ 5.2 ಮಿಲಿಯನ್ ಟನ್ ಅಕ್ಕಿಯನ್ನು ಎಥೆನಾಲ್ ಉತ್ಪಾದನೆಗೆ (ಪೆಟ್ರೋಲ್ನೊಂದಿಗೆ ಬೆರೆಸಲು) ಬಳಸಲಾಯಿತು.
ವಾಸ್ತವವಾಗಿ, ಭಾರತದಲ್ಲಿನ ಒಟ್ಟು ಎಥೆನಾಲ್ನಲ್ಲಿ ಶೇಕಡಾ 56 ರಷ್ಟು ಕಬ್ಬಿನ ಬದಲಿಗೆ ಧಾನ್ಯಗಳಿಂದ ಪಡೆಯಲಾಗುತ್ತಿದೆ. ಈ ಧಾನ್ಯಗಳನ್ನು ಸಬ್ಸಿಡಿ ದರದ ರಸಗೊಬ್ಬರಗಳನ್ನು ಬಳಸಿ ಉತ್ಪಾದಿಸಲಾಗುತ್ತದೆ. ನಾವು ರಸಗೊಬ್ಬರ ಸಬ್ಸಿಡಿಯನ್ನು ಜಾಗತಿಕ ತಾಪಮಾನಕ್ಕೆ ಕಾರಣವಾಗುವ ನೈಟ್ರಸ್ ಆಕ್ಸೈಡ್ ಆಗಿ ವಾತಾವರಣಕ್ಕೆ ಬಿಡುತ್ತಿದ್ದೇವೆ ಮತ್ತು ಅಂತರ್ಜಲಕ್ಕೆ ಸೇರುವ ವಿಷಕಾರಿ ತ್ಯಾಜ್ಯವನ್ನಾಗಿ ಮಾಡುತ್ತಿದ್ದೇವೆ.
ಈ ದುಂದುವೆಚ್ಚದಿಂದ ತೃಪ್ತರಾಗದ ನಾವು, ಆ ಸಬ್ಸಿಡಿಯನ್ನು ಆಂತರಿಕ ದಹನಕಾರಿ ಇಂಜಿನ್ಗಳಲ್ಲಿ (Internal Combustion Engines) ಸುಡುತ್ತಿದ್ದೇವೆ. ಈ ಇಂಜಿನ್ಗಳು ಇಂಧನವನ್ನು ಚಲನಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ಅತ್ಯಂತ ಅಸಮರ್ಥವಾಗಿವೆ.
ಪಾರಾಗುವ ಬಗೆ ಹೇಗೆ?
ಇಷ್ಟೊಂದು ಕಣ್ಣಿಗೆ ರಾಚುವಂತಿರುವ ವ್ಯರ್ಥ ಹಾಗೂ ಅವಿವೇಕದ ಸಬ್ಸಿಡಿ ಪದ್ಧತಿಯಿಂದ ನಾವು ಪಾರಾಗುವುದಾದರೂ ಹೇಗೆ?
ರೈತರಿಗೆ ಅವರು ಬಳಸುವ ಕೃಷಿ ಪರಿಕರಗಳ ಮೇಲೆ ಸಬ್ಸಿಡಿಯನ್ನು ನೀಡುವ ಬದಲಿಗೆ ನೇರ ಆದಾಯದ ಬೆಂಬಲವನ್ನು ನೀಡಿ ಉತ್ಪಾದನಾ ವೆಚ್ಚವನ್ನು ಸರಿದೂಗಿಸುವಂತೆ ಮತ್ತು ಉತ್ಪಾದಕರಿಗೆ ಸಲ್ಪ ಲಾಭ ಮಿಕ್ಕುವ ರೀತಿಯಲ್ಲಿ ಪರಿಕರಗಳ ಮೇಲೆ ಬೆಲೆ ನಿಗದಿ ಮಾಡುವುದು ಉತ್ತಮ. ಇದರಿಂದ ಕೃಷಿ ಪರಿಕರಗಳ ಉತ್ಪಾದನೆಯಲ್ಲಿ ಸ್ಪರ್ಧೆ ಮತ್ತು ತಾಂತ್ರಿಕ ಅಭಿವೃದ್ಧಿಗೆ ಪ್ರೇರಣೆ ನೀಡಿದಂತಾಗುತ್ತದೆ. ಜೊತೆಗೆ ರೈತರು ಪರಿಕರಗಳನ್ನು ಮಿತವಾಗಿ ಮತ್ತು ಪರಿಣಾಮಕಾರಿಯಾಗಿ ಬಳಕೆ ಮಾಡುವಂತೆ ಉತ್ತೇಜನ ನೀಡುತ್ತದೆ.
ಸಾರಜನಕ (N), ರಂಜಕ (P) ಮತ್ತು ಪೊಟ್ಯಾಶ್ (K)ನ್ನು ವಿವಿಧ ಬೆಳೆಗಳಿಗೆ ಸೂಕ್ತವಾಗುವಂತೆ ಬೇರೆ ಬೇರೆ ಪ್ರಮಾಣದಲ್ಲಿ ಮಿಶ್ರಣ ಮಾಡಿದ ಸಂಯೋಜಿತ ರಸಗೊಬ್ಬರಗಳು ಮಾರುಕಟ್ಟೆಗೆ ಬರುತ್ತವೆ. ಚೀನಾದ ಹೆಚ್ಚಿನ ಕೃಷಿ ಉತ್ಪಾದಕತೆಗೆ ಒಂದು ಮುಖ್ಯ ಕಾರಣವೆಂದರೆ ಅಲ್ಲಿ ಇಂತಹ ಸಂಯೋಜಿತ ರಸಗೊಬ್ಬರಗಳ ವ್ಯಾಪಕ ಬಳಕೆ.
ನೀರು ಮತ್ತು ನೀರೆತ್ತಲು ಬಳಸುವ ವಿದ್ಯುತ್ಗೆ ಸರಿಯಾದ ಬೆಲೆ ನಿಗದಿಪಡಿಸಿದರೆ, ರೈತರು ವ್ಯರ್ಥವಾಗುವ ಹೊಲಕ್ಕೆ ನೀರುಣಿಸುವ ಪದ್ಧತಿಯ ಬದಲಿಗೆ ನಿಯಂತ್ರಿತ ತೇವಾಂಶ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಾರೆ. ಇದು ಇಳುವರಿಯನ್ನು ಹೆಚ್ಚಿಸುವುದಲ್ಲದೆ ನೀರಿನ ಬಳಕೆ ಮತ್ತು ಮಣ್ಣಿನಲ್ಲಿರುವ ಲವಣಾಂಶದ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಹವಾಮಾನಕ್ಕೆ ತಕ್ಕಂತೆ ಇರಲಿ ಬೆಳೆಗಳು
ಭಾರತೀಯ ಕೃಷಿಯು ಆಯಾ ಹವಾಮಾನ ವಲಯಕ್ಕೆ ಸೂಕ್ತವಾದ ಬೆಳೆಗಳನ್ನು ಬೆಳೆಯುವಲ್ಲಿ ವಿಫಲವಾಗಿದೆ. ಉದಾಹರಣೆಗೆ, ಗಂಗಾ ನದಿಯ ಬಯಲು ಪ್ರದೇಶಗಳಾದ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಬೆಳೆಯಬೇಕಾದ ಹೆಚ್ಚು ನೀರು ಬೇಡುವ ಕಬ್ಬನ್ನು, ಆದರೆ ನಾವು ಅದನ್ನು ಒಣ ಹವಾಮಾನದ ದಖನ್ ಪ್ರಸ್ಥಭೂಮಿಯಲ್ಲಿ ಬೆಳೆಯುತ್ತಿದ್ದೇವೆ.
ಭಾರತವು ಖಾದ್ಯ ತೈಲ ಮತ್ತು ಬೇಳೆಕಾಳುಗಳಿಗಾಗಿ ಹೆಚ್ಚಾಗಿ ಆಮದಿನ ಮೇಲೆ ಅವಲಂಬಿತವಾಗಿದೆ. ಖಂಡಿತವಾಗಿಯೂ, ನಾವು ಧಾನ್ಯಗಳನ್ನು ಬೆಳೆಯುವ ಸ್ವಲ್ಪ ಭೂಮಿಯನ್ನು ಎಣ್ಣೆಕಾಳು ಮತ್ತು ಬೇಳೆಕಾಳುಗಳ ಕಡೆಗೆ ತಿರುಗಿಸಬೇಕು. ಅದಕ್ಕಾಗಿ ಧಾನ್ಯಗಳಿಗೆ ಸತತವಾಗಿ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವ ಚಕ್ರದಿಂದ ಹೊರಬರಬೇಕು ಮತ್ತು ಅಂತಹ ಬೆಂಬಲವನ್ನು ಎಣ್ಣೆಕಾಳು ಹಾಗೂ ಬೇಳೆಕಾಳುಗಳಿಗೆ ನೀಡಬೇಕಾದ ಅಗತ್ಯವಿದೆ.
ಪ್ರತಿ ಹಂಗಾಮಿನ ತುರ್ತು ದಾಸ್ತಾನು ನಿಯಮದ ಪ್ರಕಾರ ಎಷ್ಟು ಅಗತ್ಯವಿದೆಯೋ ಅಷ್ಟು ಧಾನ್ಯವನ್ನು ಮಾತ್ರ ಎಫ್ಸಿಐ ಖರೀದಿಸಬೇಕು. ಬೆಲೆಗಳನ್ನು ಸ್ಥಿರವಾಗಿಡಲು ಎಫ್ಸಿಐ ಸರಕು ವ್ಯಾಪಾರದಲ್ಲಿ ಪರಿಣತಿಯನ್ನು ಪಡೆದುಕೊಳ್ಳಲಿ ಮತ್ತು ಫ್ಯೂಚರ್ಸ್ ಹಾಗೂ ಆಪ್ಷನ್ಸ್ ಮಾರುಕಟ್ಟೆಗಳಲ್ಲಿ ಹಸ್ತಕ್ಷೇಪ ಮಾಡುವ ಕ್ರಮವನ್ನು ಕೂಡ ಅನುಸರಿಸಬೇಕು.
ರೈತರಿಗೆ ಹೆಚ್ಚಿನ ಅಧಿಕಾರ ನೀಡಿ
ಪ್ರಸ್ತುತ ನಿಷೇಧಿತವಾಗಿರುವ ಮಾರುಕಟ್ಟೆಗಳನ್ನು ಮುಕ್ತಗೊಳಿಸಿ. ಗ್ರಾಮೀಣ ವಿದ್ಯುದೀಕರಣದ ಶಕ್ತಿಯನ್ನು ಬಳಸಿಕೊಂಡು ವಿಕೇಂದ್ರೀಕೃತ ಆಹಾರ ಸಂಸ್ಕರಣಾ ಉದ್ಯಮದ ಬೆಳವಣಿಗೆಯನ್ನು ಉತ್ತೇಜಿಸಿ. ಇದರಿಂದ ಕೃಷಿ ಉತ್ಪನ್ನಗಳು ವ್ಯರ್ಥವಾಗುವುದಿಲ್ಲ ಮತ್ತು ಹೊಲದಿಂದ ಊಟದ ಮೇಜಿನವರೆಗಿನ ಪ್ರಯಾಣದಲ್ಲಿ ರೈತರು ಹೆಚ್ಚಿನ ಮೌಲ್ಯವರ್ಧಿತ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಮತ್ತು ರೈತ ಉತ್ಪಾದಕ ಕಂಪನಿಗಳನ್ನು ವ್ಯಾಪಕ ಪ್ರಮಾಣದಲ್ಲಿ ಬಳಸಿ.
ರೈತರಿಗೆ ಕೃಷಿ ಪರಿಕರಗಳನ್ನು ಮಾರುಕಟ್ಟೆ ಬೆಲೆಯಲ್ಲಿ ಖರೀದಿಸಲು ಮತ್ತು ಗರಿಷ್ಠ ಇಳುವರಿ ಹಾಗೂ ಆದಾಯ ನೀಡುವ ಬೆಳೆಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಕಲ್ಪಿಸಲು ಅವರಿಗೆ ನೇರ ಆದಾಯ ಬೆಂಬಲವನ್ನು ಒದಗಿಸಿ.
ಆದಾಯ ಬೆಂಬಲವು ವಿಶ್ವ ವ್ಯಾಪಾರ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸುವುದಿಲ್ಲ, ಏಕೆಂದರೆ ಇವುಗಳನ್ನು ವ್ಯಾಪಾರಕ್ಕೆ ಅಡ್ಡಿಪಡಿಸುವ ಸಬ್ಸಿಡಿಗಳೆಂದು ಪರಿಗಣಿಸಲಾಗುವುದಿಲ್ಲ.
ಇಂಧನ ಮತ್ತು ತಂತ್ರಜ್ಞಾನದಲ್ಲಿ ಸಂಶೋಧನೆ
ಭೂಗತ ಕಲ್ಲಿದ್ದಲನ್ನು ಅನಿಲವನ್ನಾಗಿ ಪರಿವರ್ತಿಸಲು ಮತ್ತು ಕಲ್ಲಿದ್ದಲು ಹಾಗೂ ಎಲ್ಎನ್ಜಿ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಿ. ಇದರ ಜೊತೆಗೆ ಅನಿಲ ಟರ್ಬೈನ್ಗಳಿಂದ ಕಾರ್ಬನ್ ಡೈಆಕ್ಸೈಡ್ ಅನ್ನು ಹಿಡಿದಿಡುವ ತಂತ್ರಜ್ಞಾನದ ಬಗ್ಗೆಯೂ ಸಂಶೋಧನೆ ನಡೆಯಲಿ. ನೈಸರ್ಗಿಕ ಅನಿಲವನ್ನು ಹೈಡ್ರೋಜನ್ ಮತ್ತು ಶುದ್ಧ ಕಾರ್ಬನ್ ಆಗಿ ವಿಭಜಿಸಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ. ಹೈಡ್ರೋಜನ್ ಒಂದು ಸ್ವಚ್ಛ ಇಂಧನವಾಗಿದ್ದು, ಇದು ಇಂಧನ ಕೋಶಗಳಲ್ಲಿ ವಿದ್ಯುತ್ ಆಗಿ ಪರಿವರ್ತನೆಯಾಗುತ್ತದೆ ಅಥವಾ ಇಂಜಿನ್‌ನಲ್ಲಿ ದಹಿಸಿದಾಗ ಕೇವಲ ನೀರಿನ ಹಬೆಯನ್ನು ಹೊರಹಾಕುತ್ತದೆ.
ಇದೆಲ್ಲವೂ ಕಾರ್ಯಸಾಧುವಾದ ಅಂಶಗಳೇ ಆಗಿವೆ. ಅದಕ್ಕೆ ಬೇಕಾದ ತಂತ್ರಜ್ಞಾನವು ಬಹುಮಟ್ಟಿಗೆ ಈಗಾಗಲೇ ಅಸ್ತಿತ್ವದಲ್ಲಿದೆ. ಈ ಅಗತ್ಯ ಸುಧಾರಣೆಗಳನ್ನು ಜಾರಿಗೆ ತರಲು ಬೇಕಾದ ಧೋರಣೆ ಎಂದರೆ ಮಹತ್ವಾಕಾಂಕ್ಷೆ ಮತ್ತು ರಾಜಕೀಯ ಧೈರ್ಯದ ಸಂಯೋಜನೆ, ಅದರ ಕೊರತೆ ಇಲ್ಲಿಯವರೆಗೆ ಸ್ಪಷ್ಟವಾಗಿ ಕಾಣುತ್ತಿದೆ. ಮಹತ್ವಾಕಾಂಕ್ಷೆ ಮತ್ತು ರಾಜಕೀಯ ಧೈರ್ಯ - ಇವೆರಡೂ ಪ್ರಸ್ತುತ ಸರ್ಕಾರವು ತನ್ನ ವಿಶಿಷ್ಟ ಗುಣಗಳೆಂದು ಪರಿಗಣಿಸುವ ಮೌಲ್ಯಗಳಲ್ಲವೇ?
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


