ಕೆರಳಿದ ಭಾರತದ ಮತದಾರ: ಪಾಪ ಪ್ರಾಯಶ್ಚಿತ ಮಾಡಿಕೊಳ್ಳುವರೇ ಜ್ಞಾನೇಶ್‌?
x
ತಮ್ಮ ಅಕ್ಕ-ಪಕ್ಕ ಇರುವ ಇಬ್ಬರು ಸಹಾಯಕ ಆಯುಕ್ತರನ್ನು ಸಂಪೂರ್ಣವಾಗಿ ಕಡೆಗಣಿಸಿದ ಕೀರ್ತಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಸಲ್ಲುತ್ತದೆ. ಈಗಾಗಲೇ ಹದಿಮೂರು ಕೋಟಿಗೂ ಅಧಿಕ ಮಂದಿ ಭಾರತೀಯ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುವ ಗಂಭೀರ ಪರಿಣಾಮ ಉಂಟಾಗಿದೆ.

ಕೆರಳಿದ ಭಾರತದ ಮತದಾರ: ಪಾಪ ಪ್ರಾಯಶ್ಚಿತ ಮಾಡಿಕೊಳ್ಳುವರೇ ಜ್ಞಾನೇಶ್‌?

ಮುಂದಾಗುವ ಇನ್ನಷ್ಟು ಅವಮಾನ ತಪ್ಪಿಸುವ ದೊಡ್ಡ ಸವಾಲು ಜ್ಞಾನೇಶ್‌ ಮುಂದಿದೆ. ಹಾಗೆ ಮಾಡಬೇಕಿದ್ದರೆ ಎಸ್‌ಐಆರ್‌ ವೇಳೆ ಗುರುತಿಸಲಾದ ʼವಿದೇಶಿಯರʼ ಹೆಸರನ್ನು ಬಹಿರಂಗಪಡಿಸಬೇಕು, ಅಳಿಸಿದ ಹೆಸರನ್ನು ಮತ್ತೆ ಸೇರಿಸಬೇಕು ಮತ್ತು ಜನರ ಕ್ಷಮೆ ಕೋರಬೇಕು ..


Click the Play button to hear this message in audio format

ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆ ವಿರುದ್ಧ ಬಹಳ ದೊಡ್ಡ ಕೂಗು ಎದ್ದಿದೆ. ಎಸ್‌ಐಆರ್‌ಗೆ ಸಂಬಂಧಿಸಿ ಅವರ ನಿರಂಕುಶಾಧಿಕಾರದ ನಿರ್ಧಾರಗಳ ವಿರುದ್ಧ ದೇಶಾದ್ಯಂತ ಭಾರೀ ಪ್ರತಿಭಟನೆಗಳು ಭುಗಿಲೆದ್ದಿವೆ. ಆ ಮೂಲಕ ಅವರ ಮೇಲಿನ ಒತ್ತಡ ತೀವ್ರವಾಗುತ್ತ ಸಾಗಿದೆ. ಇಷ್ಟು ಮಾತ್ರವಲ್ಲದೆ ʼದಿ ಇಂಡಿಯನ್‌ ಎಕ್ಸ್‌ಪ್ರೆಸ್‌ʼನ ಇತ್ತೀಚಿನ ವರದಿಗಳಲ್ಲಿ ಅವರು ಆಡಳಿತಾರೂಢ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಸ್ಪಷ್ಟ ಉದ್ದೇಶ ಬಯಲಾದ ಬಳಿಕವಂತೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಇಂತಹ ಸ್ಥಿತಿಯಲ್ಲಿ ಅವರು ಇದ್ದ ಧೈರ್ಯವನ್ನೆಲ್ಲ ಒಟ್ಟುಗೂಡಿಸಿ ಒಂದು ಸರಳಾತಿ ಸರಳ ಕೆಲಸವನ್ನು ಮಾಡಿದರೆ ಮತ್ತಷ್ಟು ಅಪಮಾನದಿಂದ ಅವರು ತಮ್ಮನ್ನು ತಾವು ಪಾರುಮಾಡಿಕೊಳ್ಳಬಹುದು.

ಇಂತಹ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಲು ಅವರು ತಮ್ಮಿಂದ ಸಾಧ್ಯವಾದುದನ್ನೆಲ್ಲ ಮಾಡುತ್ತಿದ್ದಾರೆ ಎಂಬ ವರದಿ ಬಂದಿದೆ. ದೇಶಾದ್ಯಂತ ಇರುವ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಯನ್ನು ನೀಡಿರುವ ಅವರು ಅನ್ಯಾಯವಾಗಿ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಮತದಾರರನ್ನು ಮರುಸೇರ್ಪಡೆ ಮಾಡಲು ʼವಿಶೇಷ ಅಭಿಯಾನʼ ಆರಂಭಿಸುವಂತೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಕಣ್ಮುಚ್ಚಿ ಕುಂತ ಅಧಿಕಾರಿಗಳು

ಹಾಗಾದರೆ ಅವರು ಇಷ್ಟು ಮಾಡಿದರೆ ಸಾಕಾದೀತೇ? ನಿಶ್ಚಿತವಾಗಿ ಇಲ್ಲ. ವಿಶೇಷವಾಗಿ ಚುನಾವಣಾ ಆಯೋಗದ ಅರ್ಜಿ ನಮೂನೆ 7ಕ್ಕೆ ಸಂಬಂಧಿಸಿದ ಕುಟಿಲ ಮತ್ತು ದ್ವಂದ್ವ ನೀತಿಯ ಹಿನ್ನೆಲೆಯಲ್ಲಿ ನೋಡಿದಾಗ ಇದು ಅರ್ಥವಾಗುತ್ತದೆ. ಈ ಕ್ರಮದ ಮೂಲಕವೇ ಆಯೋಗದ ಅಧಿಕಾರಿಗಳೇ ಲಕ್ಷಾಂತರ ಮಂದಿ ಮತದಾರರ ಹೆಸರನ್ನು ಪಟ್ಟಿಯಿಂದ ಕಿತ್ತುಹಾಕಿದ್ದಾರೆ. ಮುಖ್ಯವಾಗಿ ಪಶ್ಚಿಮ ಬಂಗಾಲದಲ್ಲಿ ಇದು ಅತ್ಯಂತ ನಿಚ್ಚಳವಾಗಿ ಕಾಣುತ್ತದೆ. ಅಲ್ಲದೆ ಸಿದ್ಧಾಂತ ಆಧಾರಿತ ಅಂಶಗಳು ಕ್ಷೇತ್ರಗಳಲ್ಲಿ ಸಾಮೂಹಿಕ ಆಕ್ಷೇಪಣೆಗೆ ಕಾರಣವಾಗಿ ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಡಿಲೀಟ್‌ ಮಾಡಲು ಮುಂದಾದಾಗ ಆಯೋಗವು ಕಣ್ಣುಮುಚ್ಚಿ ಕುಳಿತಿತ್ತು. ಇದು ವಿಶೇಷವಾಗಿ ಪಶ್ಚಿಮ ಬಂಗಾಲ, ಒಡಿಶಾ ಮತ್ತು ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಬೆಳಕಿಗೆ ಬಂದಿದೆ.

ಪಶ್ಚಾತ್ತಾಪದ ಮಾತು ಹಾಗಿರಲಿ, ಜ್ಞಾನೇಶ್‌ ಕುಮಾರ್‌ ಅವರು ತಮ್ಮ ಇಬ್ಬರು ಸಹಾಯಕ ಆಯುಕ್ತರನ್ನು ಕಡೆಗಳಿಸಿ ರಹಸ್ಯವಾಗಿ ರಾಜಕೀಯ ಪಕ್ಷಪಾತದ ಹೆಜ್ಜೆಗಳನ್ನು ಇರಿಸಿದ್ದು ಹೌದು ಎಂದು ಒಪ್ಪಿಕೊಂಡಿರುವ ಯಾವ ಸೂಚನೆ ಕೂಡ ಕಾಣಿಸುತ್ತಿಲ್ಲ. ಎಸ್‌ಐಆರ್‌ ಪ್ರಕ್ರಿಯೆ ಯಾವುದೇ ಎಗ್ಗಿಲ್ಲದೆ ನಡೆಯುತ್ತಿದೆ. ಇಂತಹ ಕ್ರಮದಿಂದಾಗಿ ಈಗಾಗಲೇ ಹದಿಮೂರು ಕೋಟಿಗೂ ಅಧಿಕ ಮಂದಿ ಭಾರತೀಯ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುವ ಗಂಭೀರ ಪರಿಣಾಮ ಉಂಟಾಗಿದೆ.

ಈ ದುರ್ವರ್ತನೆ ಇಲ್ಲಿಗೇ ಕೊನೆಗೊಂಡಂತೆ ಕಾಣುತ್ತಿಲ್ಲ. ವಾಸ್ತವವಾಗಿ ಇಷ್ಟೊಂದು ದೊಡ್ಡ ಪ್ರಮಾಣದ ಮತದಾರರನ್ನು ಸಾಮೂಹಿಕವಾಗಿ ಕಿತ್ತುಹಾಕಿರುವುದು ಸ್ಪಷ್ಟವಾಗಿ ಭಾರತದ ಪ್ರಜಾಪ್ರಭುತ್ವ ಮತ್ತು ಅದರ ಸಂವಿಧಾನದ ಮೇಲೆ ನಡೆಸಿರುವ ವಿದ್ವಂಸಕ ಕೃತ್ಯವೆಂದರೂ ತಪ್ಪಲ್ಲ. ಇದು ನಿಜಕ್ಕೂ ಗಂಭೀರ ಅಪರಾಧ.

ಬಹಿರಂಗಪಡಿಸಲಿ ವಿದೇಶಿ ಹೆಸರುಗಳು

ಇಂತಹ ಹಂತದಲ್ಲಿ ಕುಮಾರ್‌ ಅವರು ಎರಡು ಸರಳ ಕ್ರಮಗಳನ್ನು ಕೈಗೊಳ್ಳಲು ಮುಂದಾದರೆ ಅವರಿಗೆ ತಕ್ಕಮಟ್ಟಿಗೆ ಪರಿಹಾರ ಸಿಗಬಹುದು. ಮೊಟ್ಟ ಮೊದಲನೆಯದಾಗಿ ಎಸ್‌ಐಆರ್‌ ಪ್ರಕ್ರಿಯೆಯ ಮೂಲಕ ಪತ್ತೆಯಾಗಿದ್ದಾರೆ ಎನ್ನಲಾದ ವಿದೇಶಿಯರ ಅಥವಾ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಮಾತಿನಂತೆ ಹೇಳುವುದಾದರೆ ʼನುಸುಳುಕೋರರʼ (ಇದು ಅಮಿತ್‌ ಶಾ ಮತ್ತು ಅವರ ಸಿದ್ದಾಂತ ಸಹಯಾತ್ರಿಗಳು ಮುಸ್ಲಿಮರನ್ನು ಗುರಿಯಾಗಿಸಲು ಬಳಸುವ ಸಾಂಕೇತಿಕ ಪದ) ಹೆಸರುಗಳನ್ನು ಹಾಗೂ ಇತರ ಸಂಬಂಧಿತ ವಿವರಗಳನ್ನು ಅವರು ತಕ್ಷಣವೇ ಸಾರ್ವಜನಿಕವಾಗಿ ಪ್ರಕಟಿಸಿಬಿಡಬೇಕು.

ನಮ್ಮ ನಡುವೆ ಇರುವ ಅನಪೇಕ್ಷಿತ ವಿದೇಶಿಯರನ್ನು ಬೇಟೆಯಾಡುವುದು ಚುನಾವಣಾ ಆಯೋಗದ ಕೆಲಸವಲ್ಲ. ಸಂವಿಧಾನದ ಪ್ರಕಾರ ಅದು ಕೇಂದ್ರ ಗೃಹ ಸಚಿವಾಲಯದ ಸಂಪೂರ್ಣ ಜವಾಬ್ದಾರಿ. ಆದಾಗ್ಯೂ ಎಸ್‌ಐಆರ್‌ ಪ್ರಕ್ರಿಯೆಯ ಆಧಾರವಾಗಿರುವ ಅವ್ಯಕ್ತ ಅಂಶವೇನೆಂದರೆ ಒಬ್ಬ ಮತದಾರರ ಪೋಷಕರು ಅಥವಾ ಅಜ್ಜ-ಅಜ್ಜಿ 2002-2004ರ ಅವಧಿಯಲ್ಲಿ ನಡೆದ ಚುನಾವಣೆಯಲ್ಲಿ ಮತ ಚಲಾವಣೆ ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗದೇ ಇದ್ದರೆ ಅಂದರೆ ʼಮ್ಯಾಪ್‌ʼ ಮಾಡಲು ಸಾಧ್ಯವಾಗದೇ ಇದ್ದರೆ ಆ ವ್ಯಕ್ತಿಯನ್ನು ʼಅನ್ಯಲೋಕದ ವ್ಯಕ್ತಿʼ (ವಿದೇಶಿ) ಎಂದು ಪರಿಗಣಿಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ ಅಜ್ಞಾತ ಅರ್ಜಿದಾರರಿಂದ ಹೆಸರನ್ನು ಕಿತ್ತುಹಾಕಲು ಬಂದಿರುವ ದೊಡ್ಡ ಪ್ರಮಾಣದ ಅರ್ಜಿಗಳು ಸೂಚಿಸುವಂತೆ ಈ ವಿದೇಶಿ ಹಣೆಪಟ್ಟಿಯು ಒಂದು ನಿರ್ದಿಷ್ಟ ನಂಬಿಕೆಗೆ ಅಥವಾ ಧರ್ಮಕ್ಕೆ ಸೇರಿದ ಮತದಾರರಿಗೆ ತಳಕುಹಾಕಿಕೊಂಡಿದೆ.

ಯಾಕಾದರೂ ಈ ಮಾನದಂಡ?

ಯಾವುದೋ ಒಂದು ಅಸಾಧಾರಣ ಕಾರಣದಿಂದಾಗಿ 2002-2004ರ ನಡುವಿನ ಅವಧಿಯಲ್ಲಿ ನಡೆದ ರಾಜ್ಯ ಚುನಾವಣೆಗಳಲ್ಲಿ ಮತ ಚಲಾವಣೆ ಮಾಡಿರುವುದನ್ನೇ ಭಾರತೀಯರೆಂದು ಸಾಬೀತುಪಡಿಸುವ ಅತ್ಯುನ್ನತ ಮಾನದಂಡವೆಂದು ಪರಿಗಣಿಸಲಾಗಿದೆ. ಹಾಗೆ ಮಾಡಿರುವುದಾದರೂ ಯಾಕೆ ಎಂಬುದನ್ನು ಎಲ್ಲಿಯೂ ವಿವರಿಸಲಾಗಿಲ್ಲ. ನಿಮ್ಮ ಪಾಲಕರು ನಿಜವಾದ ಮತದಾರರಾಗಿದ್ದು ಆ ಸಮಯದಲ್ಲಿ ಮತ ಚಲಾವಣೆ ಮಾಡದೇ ಇದ್ದಿರಬಹುದು ಅಥವಾ ಮತ ಚಲಾಯಿಸಲು ಸಾಧ್ಯವಾಗದೇ ಇದ್ದಿರಬಹುದು (ಮತ್ತು ಅದು ಕಾನೂನುಬಾಹಿರವಲ್ಲ). ಹಾಗೆಂದ ಮಾತ್ರಕ್ಕೆ ಅವರು ಅನುಮಾನಾಸ್ಪದರಾಗುವರೇ ಮತ್ತು ಅವರ ವಂಶಸ್ಥರಾದ ನೀವು ಈಗ ಮತದಾರರಾಗಿ ನೋಂದಾಯಿಸಿಕೊಳ್ಳಲು ಅನರ್ಹರಾಗುವಿರಾ? ಚುನಾವಣೆ ಆಯೋಗವು ಇಂತಹ ನಿಯಮವನ್ನು ಯಾಕೆ ಮಾಡಿದೆ? ಇದಕ್ಕೆ ಸಂಸ್ಥೆಯ ಹೊರಗಿನಿಂದ ಯಾರಾದರೂ ಒತ್ತಡ ಹೇರಿದ್ದರೆ? ಈ ಪ್ರಶ್ನೆಯು ಈಗ ದೇಶಾದ್ಯಂತ ಭುಗಿಲೆದ್ದಿದೆ.

ಇಷ್ಟೆಲ್ಲ ಅಧ್ವಾನಗಳು ಬೇಕಿದ್ದವೇ?

ಹೇಗಾದರೂ ಆಗಲಿ, ಈ ವಿಧಾನವನ್ನೇ ಆರಿಸಿಕೊಂಡಿರುವ ಕಾರಣ, ಇದರ ಮೂಲಕ ಎಷ್ಟು ಮಂದಿ ವಿದೇಶಿಯರನ್ನು ರಾಜ್ಯವಾರು ಪತ್ತೆಹಚ್ಚಲಾಗಿದೆ ಎಂಬುದನ್ನು ಚುನಾವಣಾ ಆಯೋಗವು ನಮಗೆ ತಿಳಿಸಬೇಕಾದ ಸಮಯ ಈಗ ಬಂದಿದೆ. ಮಾಧ್ಯಮಗಳಲ್ಲಿ ಓಡಾಡುತ್ತಿರುವ ಅಂಕಿಅಂಶಗಳ ಪ್ರಕಾರ ಬಿಹಾರ ರಾಜ್ಯಕ್ಕೆ ಸಂಬಂಧಿಸಿದಂತೆ ಕೇವಲ ಕೆಲವೇ ನೂರು ಪ್ರಕರಣಗಳು ಮಾತ್ರ ಇವೆ ಎಂದು ಸೂಚಿಸುತ್ತವೆ. ಆದರೆ ಇಂತಹ ಇತರ ರಾಜ್ಯಗಳ ಕುರಿತು ಸಂಪೂರ್ಣ ಮೌನವಿದೆ.

ಇಲ್ಲಿ ಉದ್ಭವವಾಗುವ ಬಹಳ ದೊಡ್ಡ ಪ್ರಶ್ನೆಯೇನೆಂದರೆ, ಇಡೀ ದೇಶದ ಲಕ್ಷಾಂತರ ಮತ್ತು ಕೋಟ್ಯಂತರ ಜನರನ್ನು ಸೂಕ್ತವಾಗಿ "ಮ್ಯಾಪ್" ಮಾಡಲು ಹಳೆಯ ದಾಖಲೆಗಳನ್ನು ಹುಡುಕಲು ಓಡಾಡುವಂತೆ ಮಾಡುವುದು, ಆ ಮೂಲಕ ಅವರಿಗೆ ತೀವ್ರ ಆತಂಕ, ನೋವು ಮತ್ತು ಶ್ರಮವನ್ನು ಉಂಟುಮಾಡುವುದು ಅಗತ್ಯವಾಗಿತ್ತೇ ಅಥವಾ ಯೋಗ್ಯವಾಗಿತ್ತೇ ಎಂಬುದು.

ಮತದಾರರ ಮರುಸ್ಥಾಪನೆ, ಕ್ಷಮೆಯಾಚನೆ

ನಮ್ಮ ನಡುವೆ ಇರುವ ವಿದೇಶಿಯರನ್ನು ಸ್ವಾಭಾವಿಕವಾಗಿ ಹೊರಗಿಡಬೇಕು ಮತ್ತು ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಉಳಿದ ಎಲ್ಲರ ವಿಷಯದಲ್ಲಿ, ಯಾವುದೇ ಕಾಲಹರಣ ಮಾಡದೆ ಅವರನ್ನು ಮತ್ತೊಮ್ಮೆ ಚುನಾವಣಾ ಪಟ್ಟಿಯಲ್ಲಿ ಸೇರಿಸುವುದು ತರ್ಕಬದ್ಧ ಮತ್ತು ನ್ಯಾಯಯುತ. ಟ್ರಿಬ್ಯೂನಲ್ ಹಾಗೂ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನಲ್ಲಿನ ಎಲ್ಲಾ ವಿಚಾರಣೆಗಳನ್ನು ರದ್ದುಗೊಳಿಸಬೇಕು. ಇದರ ಬೆನ್ನಲ್ಲೇ ಚುನಾವಣಾ ಆಯೋಗವು ರಾಷ್ಟ್ರದ ಕ್ಷಮೆ ಯಾಚಿಸಬೇಕು. ಮುಖ್ಯ ಆಯುಕ್ತರು ತಾವು ಜನರನ್ನು ಈ ಯಾತನೆಗೆ ಗುರಿಪಡಿಸಿದ್ದಕ್ಕಾಗಿ ಜನರ ಕ್ಷಮೆ ಕೋರಬೇಕು.

ಅದರ ನಂತರ, ಅವರನ್ನು ಊಹಿಸಲೂ ಸಾಧ್ಯವಾಗದಷ್ಟು ಕಠಿಣವಾದ ಪ್ರಶ್ನೆಗಳಿಗೆ ಒಳಪಡಿಸಬೇಕು ಮತ್ತು ಅದು ಇಡೀ ರಾಷ್ಟ್ರಕ್ಕೆ ಕಾಣುವಂತೆ ಟಿವಿಯಲ್ಲಿ ಪ್ರಸಾರ ಮಾಡಬೇಕು. ಅವರನ್ನು ವಿಚಾರಣೆಗೆ ಒಳಪಡಿಸಬೇಕೇ? ಅದು ಮುಂದಿನ ವಿವರಗಳಿಗೆ ಬಿಟ್ಟ ವಿಷಯ.

ಯಾರೂ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಮತ ಚಲಾಯಿಸಬಾರದು ಎಂಬ ನಿಯಮಕ್ಕೆ ತಕ್ಕಂತೆ ಹೊಂದಾಣಿಕೆಗಳನ್ನು ಮಾಡಿ, ಪ್ರತಿಯೊಬ್ಬ ಭಾರತೀಯನನ್ನು ಮತದಾರರ ಪಟ್ಟಿಗೆ ಮತ್ತೆ ಸೇರ್ಪಡೆ ಮಾಡಬೇಕು. ಇದಕ್ಕೆ ಒಂದು ಪ್ರಮುಖ ಕಾರಣವಿದೆ. ಈ ಸಂದರ್ಭದಲ್ಲಿ ಇತಿಹಾಸದ ಒಂದು ಸಂಕ್ಷಿಪ್ತ ಅವಲೋಕನ ನಡೆಸುವುದು ಉಪಯುಕ್ತವಾಗಿದೆ. ಇದರಿಂದ ವಸಾಹತುಶಾಹಿ ನೊಗವನ್ನು ಕಿತ್ತೆಸೆದು ಸ್ವತಂತ್ರ ರಾಷ್ಟ್ರಕ್ಕೆ ಒದಗಿದ ಸಾರ್ವತ್ರಿಕ ಮತದಾನದ ಅಧಿಕಾರದ ನಿಜವಾದ ಮಹತ್ವವನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.

ಮೊದಲ ಕರಡು ಮತದಾರರ ಪಟ್ಟಿ

ಭಾರತದಲ್ಲಿ ಪ್ರಜಾಪ್ರಭುತ್ವದ ಮೂಲಭೂತ ಅಂಶಗಳು ಹೇಗೆ ರೂಪುಗೊಂಡವು ಎಂಬುದನ್ನು ಅಧ್ಯಯನ ಮಾಡಿದ ವಿದ್ವಾಂಸರಾದ ಓಮಿತ್ ಶಾನಿ, ತಮ್ಮ ಗಮನಾರ್ಹ ಅಧ್ಯಯನ ಗ್ರಂಥವಾದ 'ಹೌ ಇಂಡಿಯಾ ಬಿಕೇಮ್ ಡೆಮಾಕ್ರಟಿಕ್' (ಕಾಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, 2017) ನಲ್ಲಿ, ಭಾರತೀಯರು ನಾಗರಿಕರಾಗುವುದಕ್ಕೂ ಮುನ್ನವೇ ಮತದಾರರಾಗಿದ್ದರು ಎಂದು ನಮಗೆ ತಿಳಿಸುತ್ತಾರೆ. ವಾಸ್ತವವಾಗಿ, ನವೆಂಬರ್ 1947 ರಿಂದ ಭಾರತವು ಸಾರ್ವತ್ರಿಕ ವಯಸ್ಕರ ಮತದಾನದ ಹಕ್ಕಿನ ಆಧಾರದ ಮೇಲೆ ಮೊದಲ ಕರಡು ಮತದಾರರ ಪಟ್ಟಿಯನ್ನು ತಯಾರಿಸುವ ಕೆಲಸಕ್ಕೆ ಮುಂದಾಯಿತು. ದೇಶ ವಿಭಜನೆಯ ಪ್ರಕ್ರಿಯೆ ನಡೆಯುತ್ತಿದ್ದ ಮತ್ತು ಕೋಮುವಾದಿ ಉನ್ಮಾದವು ಇನ್ನೂ ಶಮನಗೊಳ್ಳದ ಸಮಯದಲ್ಲಿ, ಸಂವಿಧಾನ ಸಭೆಯ ಸೆಕ್ರೆಟರಿಯೇಟ್‌ನ ಕೆಲವೇ ಕೆಲವು ಅಧಿಕಾರಶಾಹಿಗಳು ಈ ಸಾಹಸಕ್ಕೆ "ನಾಂದಿ ಹಾಡಿದರು". ಈ ಸಂದರ್ಭದಲ್ಲಿ ರಾಜ ಸಂಸ್ಥಾನಗಳು ಕೂಡ ವಸಾಹತುಶಾಹಿ ನಂತರದ ಭಾರತದೊಂದಿಗೆ ಇನ್ನೂ ವಿಲೀನಗೊಂಡಿರಲಿಲ್ಲ.

ಸಂವಿಧಾನದ ಜಾರಿಯೊಂದಿಗೆ ನಾಗರಿಕರಾಗುವುದಕ್ಕೂ ಮುನ್ನ, ಮುಂದಿನ ಎರಡು ವರ್ಷಗಳಲ್ಲಿ ಎಲ್ಲಾ ವಯಸ್ಕ ಭಾರತೀಯರನ್ನು ಮತದಾರರನ್ನಾಗಿ ಪರಿವರ್ತಿಸುವುದು "ವಸಾಹತುಶಾಹಿಯಿಂದ ಮುಕ್ತವಾಗುವ ಭಾರತದ ದಿಟ್ಟ ಕೃತ್ಯವಾಗಿತ್ತು". ಬ್ರಿಟಿಷ್ ಭಾರತದಲ್ಲಿ ಮತದಾನದ ಹಕ್ಕು ಅಸ್ತಿತ್ವದಲ್ಲಿತ್ತು ಆದರೆ ಅದು ತೀವ್ರವಾಗಿ ನಿರ್ಬಂಧಿಸಲ್ಪಟ್ಟಿತ್ತು. ಅತ್ಯಂತ ಬಡ ಸಮಾಜದಲ್ಲಿ ಅದನ್ನು ಶೈಕ್ಷಣಿಕ ಅರ್ಹತೆಗಳು ಮತ್ತು ಆಸ್ತಿ ಹಕ್ಕುಗಳ ಮೂಲಕ ಕಟ್ಟಿಹಾಕಲಾಗಿತ್ತು.

ಹಾಗಾಗಿ, ಇದು ಮತದಾರರ ಪಟ್ಟಿಯ ಹಿಂದಿನ ಹಿನ್ನೆಲೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇರ ಆಯ್ಕೆಯಾಗಿರುವ ಜ್ಞಾನೇಶ್ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ಚುನಾವಣಾ ಆಯೋಗವು ಮಾಡಿರುವ ಕೆಲಸವೆಂದರೆ, ಧೈರ್ಯಗೆಟ್ಟು ಇತಿಹಾಸದ ಚಕ್ರವನ್ನು ಹಿಮ್ಮುಖವಾಗಿ ತಿರುಗಿಸಲು ನಡೆಸುತ್ತಿರುವ ಪ್ರಯತ್ನ.

ಸ್ವಾಭಾವಿಕವಾಗಿ, ಭಾರತವು ಇದರಿಂದ ಖುಷಿಯಾಗಿಲ್ಲ ಎಂಬುದು ಸ್ಪಷ್ಟ. ಈಗ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳು ಅದಕ್ಕೆ ಕನ್ನಡಿ ಹಿಡಿದಿದೆ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು 'ದ ಫೆಡರಲ್ ಕರ್ನಾಟಕ'ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

Read More
Next Story