
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ಮೋದಿ ಅವರ ಮೇಲಿನ ಗೌರವ-ಸ್ನೇಹಕ್ಕೆ ಕಟ್ಟುಬಿದ್ದು ಸುಂಕ ತಗ್ಗಿಸಿದ್ದೇನೆ ಎಂಬ ಟ್ರಂಪ್ ಮಾತನ್ನು ನಂಬುವಂತೆಯೇ ಇಲ್ಲ.
ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದಕ್ಕೆ ತಾತ್ವಿಕವಾಗಿ ಅಂಕಿತ ಹಾಕಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಫೆಬ್ರುವರಿ 2ರಂದು ʼಟ್ರೂಥ್ ಸೋಶಿಯಲ್ʼ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ಮೋದಿ ಮತ್ತು ತಾವು ದೂರವಾಣಿ ಮೂಲಕ ದ್ವಿಪಕ್ಷೀಯ ವ್ಯಾಪಾರ ಮತ್ತು ರಷ್ಯಾ-ಉಕ್ರೇನ್ ಯುದ್ಧ ಸೇರಿದಂತೆ ಅನೇಕ ವಿಷಯಗಳ ಕುರಿತಂತೆ ಚರ್ಚೆ ನಡೆಸಿರುವುದಾಗಿ ಹೇಳಿದ್ದಾರೆ.
ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವುದಾಗಿ ಭಾರತ ಒಪ್ಪಿಕೊಂಡಿದೆ. ಇದರಿಂದ ಉಕ್ರೇನ್ ಸಂಘರ್ಷವನ್ನು ಕೊನೆಗೊಳಿಸಲು ಸಹಾಯವಾಗುತ್ತದೆ ಎಂಬ ಭರವಸೆಯನ್ನೂ ಟ್ರಂಪ್ ವ್ಯಕ್ತಪಡಿಸಿದ್ದಾರೆ.
ಅವರು ಮುಂದುವರಿದು ಹೀಗೆ ಬರೆದಿದ್ದಾರೆ: “ಪ್ರಧಾನಿ ಮೋದಿ ಅವರ ಮೇಲಿನ ಸ್ನೇಹ ಮತ್ತು ಗೌರವದ ದೃಷ್ಟಿಯಿಂದ ಹಾಗೂ ಅವರ ಕೋರಿಕೆಯ ಮೇರೆಗೆ ಈ ಕ್ಷಣದಿಂದ ಜಾರಿಗೆ ಬರುವಂತೆ ಅಮೆರಿಕ ಮತ್ತು ಭಾರತ ನಡುವೆ ವ್ಯಾಪಾರ ಒಪ್ಪಂದಕ್ಕೆ ನಾವು ಸಮ್ಮತಿಸಿದ್ದೇವೆ. ಇದರ ಅಡಿಯಲ್ಲಿ ಅಮೆರಿಕವು ವಿಧಿಸುವ ಪರಸ್ಪರ ಸುಂಕವನ್ನು ಶೇ. 25 ರಿಂದ 18ಕ್ಕೆ ಇಳಿಸಲಿದೆ. ಅದೇ ರೀತಿ ಭಾರತವು ಕೂಡ ಅಮೆರಿಕದ ವಿರುದ್ಧ ತನ್ನ ಸುಂಕಗಳು ಮತ್ತು ಸುಂಕೇತರ ಅಡೆತಡೆಗಳನ್ನು ʼಶೂನ್ಯʼಕ್ಕೆ ಇಳಿಸಲು ಮುಂದಾಗಲಿದೆ. ಅಷ್ಟು ಮಾತ್ರವಲ್ಲದೆ ಪ್ರಧಾನಿಯವರು ಅಮೆರಿಕದ ಇಂಧನ, ತಂತ್ರಜ್ಞಾನ, ಕೃಷಿ, ಕಲ್ಲಿದ್ದಲು ಮತ್ತು ಇತರ ಉತ್ಪನ್ನಗಳ ಮೇಲೆ 500 ಶತಕೋಟಿ ಡಾಲರ್-ಗಳಿಗಿಂತ ಹೆಚ್ಚಿನ ಮೊತ್ತದ ಹೂಡಿಕೆ ಮಾಡುವ ಮೂಲಕ ಅಮೆರಿಕದ ಉತ್ಪನ್ನಗಳನ್ನೇ ಖರೀದಿಸುವ ಬದ್ಧತೆ ತೋರಿದ್ದಾರೆ.”
ಟ್ರಂಪ್ ಅವರ ಪೋಸ್ಟ್-ಗೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ, ತಮ್ಮ ʼಪ್ರಿಯ ಸ್ನೇಹಿತʼ ಅಮೆರಿಕದ ಅಧ್ಯಕ್ಷರ ಜೊತೆ ಮಾತನಾಡಿದ್ದಕ್ಕೆ ʼಸಂತಸವಾಗಿದೆʼ ಎಂದು ಬರೆದುಕೊಂಡಿದ್ದಾರೆ. ಅಮೆರಿಕಕ್ಕೆ ರಫ್ತಾಗುವ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 18ಕ್ಕೆ ಇಳಿಸಲು ಅಧ್ಯಕ್ಷರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ ಮೋದಿ ಅವರು, ಈ ʼಅದ್ಭುತ ಘೋಷಣೆʼಗಾಗಿ 140 ಕೋಟಿ ಜನರ ಪರವಾಗಿ ಟ್ರಂಪ್ ಅವರಿಗೆ ಧನ್ಯವಾದ ಸಮರ್ಪಿಸಿದರು.
ಈ ಬಗ್ಗೆ ಇನ್ನಷ್ಟು ವಿವರ ಹಂಚಿಕೊಂಡ ಮೋದಿ, ಈ ವ್ಯಾಪಾರ ಒಪ್ಪಂದವು ಪರಸ್ಪರ ಲಾಭದಾಯಕ ಸಹಕಾರಕ್ಕಾಗಿ ಅಪಾರ ಸಾಧ್ಯತೆಗಳನ್ನು ಅನಾವರಣ ಮಾಡಲಿದೆ ಎಂದು ತಿಳಿಸಿದರು. ವ್ಯಾಪಾರದ ಸಾಧ್ಯತೆಗಳ ಆಚೆಗೂ ಮಾತನಾಡಿದ ಅವರು, “ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಅಧ್ಯಕ್ಷ ಟ್ರಂಪ್ ಅವರ ನಾಯಕತ್ವ ಅತ್ಯಗತ್ಯ. ಶಾಂತಿಗಾಗಿ ಅವರು ನಡೆಸುತ್ತಿರುವ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ,” ಎಂದು ಹೇಳಿದ್ದಾರೆ.
ರೈತರ ಹಿತಾಸಕ್ತಿಗಳ ರಕ್ಷಣೆ
ಅದಾದ ಬಳಿಕ ಫೆಬ್ರವರಿ 3 ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಮಾತನಾಡಿ, ಈ ವ್ಯಾಪಾರ ಒಪ್ಪಂದವು ಭಾರತೀಯ ವ್ಯಾಪಾರ ಮತ್ತು ಕೈಗಾರಿಕೆಗಳು ತಮ್ಮ ಕಾರ್ಯಚಟುವಟಿಕೆಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಭಾರತವು ಜಾಗತಿಕ ಸರಬರಾಜು ಸೇರಲು ಅಪಾರ ಸಹಾಯ ಮಾಡಲಿದೆ ಎಂದು ಹೇಳಿದರು. ಇದೇ ವೇಳೆ, ಸರ್ಕಾರವು ರೈತರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ರಕ್ಷಿಸಿದೆ ಎಂದು ಅವರು ದೇಶಕ್ಕೆ ಭರವಸೆ ನೀಡಿದರು.
ಒಟ್ಟಾರೆಯಾಗಿ ಭಾರತದ ಅರ್ಥ ವ್ಯವಸ್ಥೆಯ ಮೇಲೆ ಈ ವ್ಯಾಪಾರ ಒಪ್ಪಂದದ ಪ್ರಭಾವ ಹಾಗೂ ಅದರ ಮೌಲ್ಯಮಾಪನವನ್ನು ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದ ಬಳಿಕ ಮತ್ತು ಅದರ ಸಂಪೂರ್ಣ ವಿವರಗಳು ಸಾರ್ವಜನಿಕರಿಗೆ ಲಭ್ಯವಾದ ಮೇಲಷ್ಟೇ ಮಾಡಲು ಸಾಧ್ಯವಾಗುತ್ತದೆ. ಸುಂಕಗಳು, ಸಸ್ಯ ನೈರ್ಮಲ್ಯ ಮಾನದಂಡಗಳಂತಹ ಸುಂಕೇತರ ಅಗತ್ಯಗಳು ಹಾಗೂ ಆಮದು ಕೋಟಾಗಳ ಉದ್ದೇಶಕ್ಕಾಗಿ ಎಲ್ಲ ವ್ಯಾಪಾರ ಒಪ್ಪಂದಗಳನ್ನು ಕಾನೂನು ಅಧಿಸೂಚನೆಗಳಾಗಿ ಪರಿವರ್ತಿಸುವುದು ಅನಿವಾರ್ಯವಾಗುವುದರಿಂದ ಇದು ನಡೆಯಲೇಬೇಕು.
ಈ ಎಲ್ಲ ಹಿನ್ನೆಲೆಯಲ್ಲಿ ಇದುವೆಗೆ ಮಾಡಲಾದ ಘೋಷಣೆಗಳ ಬಗ್ಗೆ ಇದುವರೆಗೆ ಮಾಡಲಾದ ಘೋಷಣೆಗಳ ಬಗ್ಗೆ ತರಾತುರಿಯಲ್ಲಿ ಪ್ರತಿಕ್ರಿಯೆ ನೀಡುವ ಬದಲು ವಿವರಗಳಿಗಾಗಿ ಕಾಯುವುದು ಮೇಲು. ಆದರೂ ಈ ವಿಚಾರದಲ್ಲಿ ಒಂದು ಅಂಶವನ್ನು ಗಮನಿಸಬಹುದು: ಟ್ರಂಪ್ ಉಲ್ಲೇಖ ಮಾಡಿರುವ 500 ಶತಕೋಟಿ ಡಾಲರ್ ಅಂಕಿ-ಅಂಶವು ತೀರಾ ಅತಿಶಯೋಕ್ತಿಗಳಿಂದ ಕೂಡಿದಂತೆ ಕಾಣುತ್ತಿದೆ. ಅದಕ್ಕಾಗಿ ಯಾವುದೋ ಒಂದು ಹಂತದಲ್ಲಿ ಸರ್ಕಾರವು ತನ್ನ ಪಾಲಿನ ವಿವರಣೆ ದಾಖಲಿಸಲು ಮಾರ್ಗವನ್ನು ಕಂಡುಕೊಳ್ಳಬೇಕಾಗುತ್ತದೆ.
ಅಸಮರ್ಥನೀಯ ಕ್ರಮ
ಈ ಒಪ್ಪಂದದ ವಿವರಗಳಿಗಾಗಿ ಕಾಯುತ್ತಿರುವ ಸಂದರ್ಭದಲ್ಲಿಯೇ ಕೆಲವು ಸಾಮಾನ್ಯ ಅಂಶಗಳನ್ನು ಇಲ್ಲಿ ಪ್ರಸ್ತಾಪ ಮಾಡುವುದು ಸೂಕ್ತವೆನಿಸುತ್ತದೆ. ಮೊದಲನೆಯದಾಗಿ, ಸುಂಕಗಳನ್ನು ಕಡಿಮೆ ಮಾಡಿದ್ದಕ್ಕಾಗಿ ಟ್ರಂಪ್ ಅವರಿಗೆ ಮೋದಿ ಸಲ್ಲಿಸಿದ ಕೃತಜ್ಞತೆ. ಭಾರತದ ಜನರ ಪರವಾಗಿ ಅವರಿಗೆ ಧನ್ಯವಾದ ಅರ್ಪಿಸುವ ಮೂಲಕ, ಟ್ರಂಪ್ ಅವರು ಭಾರತಕ್ಕೆ ದೊಡ್ಡ ಉಪಕಾರ ಮಾಡಿದ್ದಾರೆ ಎಂಬಂತೆ ಭಾಸವಾಗುತ್ತಿದೆ. ಆದರೆ ವಾಸ್ತವ ಹಾಗಿಲ್ಲ; ಏಕೆಂದರೆ ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುತ್ತಿದೆ ಎಂಬ ಕಾರಣಕ್ಕೆ ಶೇಕಡಾ 25 ರಷ್ಟು ಸಾಮಾನ್ಯ ಸುಂಕ ಮತ್ತು ಹೆಚ್ಚುವರಿ 25 ರಷ್ಟು ಸುಂಕವನ್ನು ವಿಧಿಸಿದ್ದು ಮೊದಲೇ ಅಸಮರ್ಥನೀಯವಾಗಿತ್ತು. ಒಂದು ವೇಳೆ ಈ ವಾದವನ್ನು ಒಪ್ಪುವುದಾದರೆ, ಟ್ರಂಪ್ ಅವರು ಭಾರತದ ವಿರುದ್ಧ ಮಾಡಬಾರದಿದ್ದ ಕೆಲಸವನ್ನು (ಸುಂಕ ವಿಧಿಸುವುದು) ಈಗ ಸರಿಪಡಿಸಿದ್ದಕ್ಕಾಗಿ ಮೋದಿ ಅವರು ಧನ್ಯವಾದ ಸಲ್ಲಿಸುವ ಅಗತ್ಯವಿರಲಿಲ್ಲ.
ಈ ಹಿಂದೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ರಷ್ಯಾದಿಂದ ಭಾರತ ತೈಲ ಖರೀದಿಸುವುದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ತನ್ನ ಹಿತಾಸಕ್ತಿ ಕಾಯ್ದುಕೊಳ್ಳುವ ದೃಷ್ಟಿಯಿಂದ ಭಾರತ ಹೀಗೆ ಮಾಡುತ್ತಿದೆ ಎಂಬ ನಿಲುವನ್ನು ಅವರು ತಳೆದಿದ್ದರು. ಅಷ್ಟೇ ಅಲ್ಲದೆ, ಯುರೋಪ್ ರಾಷ್ಟ್ರಗಳು ತಮಗೆ ಅಗತ್ಯವಿರುವವರೆಗೆ ರಷ್ಯಾದಿಂದ ಅನಿಲ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿದ್ದವು ಎಂಬುದನ್ನೂ ಅವರು ಎತ್ತಿ ತೋರಿಸಿದ್ದರು. ಜೈಶಂಕರ್ ಅವರು ಭಾರತದ ಪರವಾದ ವಾದವನ್ನು ಮಂಡಿಸಿದ ರೀತಿಗೆ ಆಕ್ಷೇಪಗಳಿರಬಹುದು, ಆದರೆ ಅವರ ತರ್ಕದಲ್ಲಿ ತಪ್ಪು ಹುಡುಕಲು ಯಾರಿಗೂ ಸಾಧ್ಯವಿರಲಿಲ್ಲ.
ಈಗ ಮೋದಿ ಮತ್ತು ಗೋಯಲ್ ಅವರು ರಷ್ಯಾ ತೈಲ ಖರೀದಿಯ ಬಗ್ಗೆ ಭಾರತದ ಅಧಿಕೃತ ನಿಲುವನ್ನು ಸ್ಪಷ್ಟಪಡಿಸಿಲ್ಲ ಸರಿ, ಆದರೆ ಪ್ರಧಾನಿಯವರು ಒಂದು ಹೆಜ್ಜೆ ಮುಂದೆ ಹೋಗಿ ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಟ್ರಂಪ್ ನೀಡಿದ ಕೊಡುಗೆಯನ್ನು ಕೊಂಡಾಡಿದ್ದಾರೆ. "ಶಾಂತಿಗಾಗಿ ಅವರ ಪ್ರಯತ್ನಗಳನ್ನು" ಭಾರತ ಬೆಂಬಲಿಸುತ್ತದೆ ಎಂದೂ ಹೇಳಿದ್ದಾರೆ. ಸ್ಪಷ್ಟವಾಗಿ ಹೇಳುವುದಾದರೆ, ಇದು ಟ್ರಂಪ್ ಅವರ ಅಹಮಿಕೆಯನ್ನು ತಣಿಸುವ ಪ್ರಯತ್ನದಂತೆ ಕಾಣುತ್ತಿದೆ. ಕಳೆದ ವರ್ಷದ ಮೇ ತಿಂಗಳಲ್ಲಿ ತಮ್ಮ ಪ್ರಯತ್ನದಿಂದಲೇ ಭಾರತ-ಪಾಕಿಸ್ತಾನ ನಡುವಿನ ಸಶಸ್ತ್ರ ಸಂಘರ್ಷ ಕೊನೆಗೊಂಡಿದೆ ಎಂಬ ಟ್ರಂಪ್ ವಾದವನ್ನು ಭಾರತ ಸತತವಾಗಿ ಒಪ್ಪದಿದ್ದಾಗ ಅವರ ಅಹಂಗೆ ಪೆಟ್ಟು ಬಿದ್ದಿತ್ತು. ಕಳೆದ ಏಳು ತಿಂಗಳುಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಬಾರಿ ತಾವು ಶಾಂತಿ ಪ್ರಯತ್ನ ಮಾಡಿರುವುದಾಗಿ ಟ್ರಂಪ್ ಹೇಳಿಕೊಂಡಿದ್ದರು.
ಅಷ್ಟೇ ಅಲ್ಲದೆ, ತಾವು ಲಕ್ಷಾಂತರ ಜನರ ಜೀವ ಉಳಿಸಿದ್ದಾಗಿಯೂ ಆಗೊಮ್ಮೆ ಈಗೊಮ್ಮೆ ಹೇಳಿಕೊಳ್ಳುತ್ತಿದ್ದರು. ಪಾಕಿಸ್ತಾನವು ಅವರ ಈ ಅಭಿಪ್ರಾಯಗಳನ್ನು ಅನುಮೋದಿಸಿತ್ತು ಮತ್ತು ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಅವರ ಹೆಸರನ್ನು ನಾಮನಿರ್ದೇಶನ ಕೂಡ ಮಾಡಿತ್ತು.
ತಿರುಗುಬಾಣವಾಗದಿರಲಿ ಪದಗಳು
ವಿದೇಶಿ ನಾಯಕರ ಮುಂದೆ ಮಂಡಿಯೂರುವ ಇತಿಹಾಸ ಪಾಕಿಸ್ತಾನಕ್ಕೇನೂ ಹೊಸದಲ್ಲ. ಆದರೆ, ಭಾರತ ಹಾಗಲ್ಲ, ಅದು ಯಾವಾಗಲೂ ತನ್ನ ಘನತೆಯನ್ನು ಕಾಪಾಡಿಕೊಳ್ಳುತ್ತಾ ಬಂದಿದೆ. ಈ ಹಿಂದೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಧ್ಯಕ್ಷ ಜಾರ್ಜ್ ಬುಷ್ ಅವರ ಬಳಿ "ಭಾರತದ ಜನರು ನಿಮ್ಮನ್ನು ಪ್ರೀತಿಸುತ್ತಾರೆ" ಎಂದು ಹೇಳಿದಾಗ ಭಾರತದ ಜನತೆಯ ಒಂದು ವರ್ಗದಲ್ಲಿ ಅಸಮಾಧಾನ ಮೂಡಲು ಕಾರಣವಾಗಿತ್ತು. ಬುಷ್ ವಿಷಯದಲ್ಲಿ ಅಂತಹ ಉತ್ಸಾಹದ ಮಾತುಗಳು ಸಮರ್ಥನೀಯವಲ್ಲದಿದ್ದರೂ, ಅವರು ತಮ್ಮ ಪೂರ್ವಜರು ಭಾರತದ ಮೇಲೆ ಹೇರಿದ್ದ ಪರಮಾಣು ಮತ್ತು ದ್ವಿಬಳಕೆಯ ತಂತ್ರಜ್ಞಾನ ವರ್ಗಾವಣೆಯ ಅಡೆತಡೆಗಳನ್ನು ನಿವಾರಿಸಲು ಖಂಡಿತವಾಗಿಯೂ ಸಹಾಯ ಮಾಡಿದ್ದರು. ಆದರೆ ಟ್ರಂಪ್ ಅವರ ವಿಷಯದಲ್ಲಿ ಅಂತಹ ಯಾವುದೇ ಮಹತ್ವದ ಸಹಾಯ ನಡೆದಿಲ್ಲ.
ಟ್ರಂಪ್ ಅವರನ್ನು ಅಟ್ಟಕ್ಕೇರಿಸುವ ಮೂಲಕ ಭಾರತವು ತನ್ನ ಕಾರ್ಯಸಾಧನೆ ಮಾಡಿಕೊಳ್ಳುವುದರಲ್ಲಿ ಯಾವುದೇ ನಷ್ಟವಿಲ್ಲ ಎಂದು ಕೆಲವು "ವಾಸ್ತವವಾದಿಗಳು" ವಾದಿಸಬಹುದು. ಅದೊಂದು ದೃಷ್ಟಿಕೋನ ಹೌದಾದರೂ, ಟ್ರಂಪ್ ಅವರೊಂದಿಗಿನ ರಾಜತಾಂತ್ರಿಕತೆಯಲ್ಲಿ 'ಪ್ರಶಂಸೆ'ಯನ್ನು ಒಂದು ಅಸ್ತ್ರವಾಗಿ ಬಳಸಬೇಕೆಂದಿದ್ದರೂ ಸಹ, ಭಾರತಕ್ಕೆ ತಿರುಗುಬಾಣವಾಗುವ ಪದಗಳನ್ನು ಬಳಸಬಾರದು. ಟ್ರಂಪ್ ಅವರು ಭಾರತಕ್ಕೆ ನೀಡಿದ ಬೆಂಬಲವನ್ನು ಮುಂದಿಟ್ಟುಕೊಂಡು, ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸುವ ಮೂಲಕ ತಾವು ಶಾಂತಿಯ ಹರಿಕಾರರಾಗುವುದಾಗಿ ಹೇಳಿಕೊಳ್ಳುವ ಸಾಧ್ಯತೆಯಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಭಿನ್ನಾಭಿಪ್ರಾಯಗಳನ್ನು ದ್ವಿಪಕ್ಷೀಯವಾಗಿ ಬಗೆಹರಿಸಿಕೊಳ್ಳಬೇಕು ಎಂಬ ತನ್ನ ಮೂಲ ತತ್ವದ ಕಾರಣಕ್ಕಾಗಿ ಭಾರತವು ಸಹಜವಾಗಿಯೇ ಅವರ ಈ ಪ್ರಸ್ತಾಪವನ್ನು ತಿರಸ್ಕರಿಸಬೇಕಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ದೀರ್ಘಾವಧಿಯಲ್ಲಿ ಭಾರತದ ಹಿತಾಸಕ್ತಿಗಳಿಗೆ ಹಾನಿ ಮಾಡುವಂತಹ ಮಾತುಗಳನ್ನು ತಪ್ಪಿಸುವುದು ಅತ್ಯಗತ್ಯ.
ಕೊನೆಯದಾಗಿ ಒಂದು ಅಂಶ: ಪ್ರಧಾನಿ ಮೋದಿಯವರು ಸುಂಕಗಳನ್ನು ಕಡಿಮೆ ಮಾಡುವಂತೆ ವಿನಂತಿಸಿದ್ದಕ್ಕೆ, ಅವರ ಮೇಲಿನ ಗೌರವ ಮತ್ತು ಸ್ನೇಹಕ್ಕಾಗಿ ತಾನು ಈ ಕ್ರಮ ಕೈಗೊಂಡಿರುವುದಾಗಿ ಟ್ರಂಪ್ ತಮ್ಮ ಪೋಸ್ಟ್ನಲ್ಲಿ ಒತ್ತಿ ಹೇಳಿದ್ದಾರೆ. ಸಹಜವಾಗಿಯೇ, ಈ ಮಾತನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ; ಯಾಕೆಂದರೆ ಅವರಿಗೆ ಮೋದಿಯವರ ಮೇಲೆ ಅಷ್ಟೊಂದು ಸ್ನೇಹವಿದ್ದಿದ್ದರೆ, ಅವರು ಮೊದಲೇ ಆ ಶೇ. 50 ರಷ್ಟು ಸುಂಕವನ್ನು ವಿಧಿಸುತ್ತಲೇ ಇರಲಿಲ್ಲ. ಮೊದಲು ಅಪಾರ ಹಾನಿ ಉಂಟುಮಾಡಿ, ಸುದೀರ್ಘ ಸಮಯದ ನಂತರ ಸ್ವಲ್ಪ ಮುಲಾಮು ಹಚ್ಚುವ ಈ ಸ್ನೇಹ ನಿಜಕ್ಕೂ ವಿಚಿತ್ರವಾದುದು.
ಅಂತಾರಾಷ್ಟ್ರೀಯ ಸಂಬಂಧಗಳು ರಾಷ್ಟ್ರೀಯ ಹಿತಾಸಕ್ತಿಗಳ ಆಧಾರದ ಮೇಲೆ ನಡೆಯುತ್ತವೆ ಎಂಬ ವಸ್ತುನಿಷ್ಠ ಅರಿವನ್ನು ಹೊಂದಿದ್ದ ಭಾರತದ ಘನವಂತ ರಾಜತಾಂತ್ರಿಕತೆಯು ಅನೇಕ ಗುಣಗಳನ್ನು ಹೊಂದಿತ್ತು. ಅದನ್ನು ಬದಲಾಯಿಸಲು ಪ್ರಯತ್ನಿಸಬಾರದು.

