
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ಮೋದಿ ಸರ್ಕಾರ ಅಮೆರಿಕದೊಂದಿಗಿನ ಸುಂಕ ಒಪ್ಪಂದದ ಚೌಕಟ್ಟನ್ನು 'ವಿಕಸಿತ ಭಾರತ'ದತ್ತ ಜಿಗಿತ ಎಂದು ಬಿಂಬಿಸುತ್ತಿದೆ. ವಾಸ್ತವದಲ್ಲಿ, ಅತ್ಯಂತ ಬಡ ನಾಗರಿಕರ ಕೊರಳಿಗೆ ಕಟ್ಟಿದ ಭಾರವಾದ ಕಲ್ಲಿನಂತೆ !
“ಭಾರತ ಮತ್ತು ಅಮೆರಿಕಕ್ಕೆ ಇದು ಉತ್ತಮ ಸುದ್ದಿ! ನಮ್ಮ ಎರಡು ಮಹಾನ್ ದೇಶಗಳ ನಡುವೆ ಮಧ್ಯಂತರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಚೌಕಟ್ಟಿಗೆ ನಾವು ಸಮ್ಮತಿ ಸೂಚಿಸಿದ್ದೇವೆ,” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಹಳ ಉತ್ಸಾಹದಿಂದ ಘೋಷಿಸಿದರು.
ತಮ್ಮದೇ ಆದ ವಿಶೇಷ ಶೈಲಿಯಲ್ಲಿ ಮಾತನ್ನು ಮುಂದುವರಿಸಿದ ಅವರು, “ಭಾರತವು ʼವಿಕಸಿತ ಭಾರತʼ ನಿರ್ಮಾಣದತ್ತ ಸಾಗುತ್ತಿರುವ ಈ ಹೊತ್ತಿನಲ್ಲಿ ಭವಿಷ್ಯದ ದೃಷ್ಟಿಕೋನ ಹೊಂದಿರುವ, ನಮ್ಮ ಜನರನ್ನು ಸಶಕ್ತಗೊಳಿಸುವ ಹಾಗೂ ಉದ್ದೇಶಿತ ಸಮೃದ್ಧಿಗೆ ಕೊಡುಗೆ ನೀಡುವ ಜಾಗತಿಕ ಪಾಲುದಾರಿಕೆ ರೂಪಿಸಲು ನಾವು ಬದ್ಧರಾಗಿದ್ದೇವೆ," ಎಂದು ತಿಳಿಸಿದರು.
ಪ್ರಧಾನಿಯವರ ಪದಗುಚ್ಛವು ಹಲವಾರು ವಿಷಯಗಳನ್ನು ಅನಾವರಣ ಮಾಡುತ್ತದೆ. ಈ ಒಪ್ಪಂದವು ʼಭವಿಷ್ಯದ ದೃಷ್ಟಿಕೋನʼವನ್ನು ಹೊಂದಿದೆ ಎಂಬುದಕ್ಕೆ ಒತ್ತು ನೀಡುವ ಮೂಲಕ ಇದು ಕೇವಲ ಪ್ರಸ್ತುತಕ್ಕೆ ಮಾತ್ರ ಅನ್ವಯಿಸುವುದಿಲ್ಲ ಎಂಬುದನ್ನು ಮೋದಿ ಅವರು ಬಹುಶಃ ಅರಿವಿಲ್ಲದೆ ಒಪ್ಪಿಕೊಂಡಂತೆ ಕಾಣುತ್ತದೆ.
ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಈ ಒಪ್ಪಂದವು ʼರೈತರು, ಉದ್ಯಮಿಗಳು, ಎಂ.ಎಸ್.ಎಂ.ಇಗಳು, ಸ್ಟಾರ್ಟ್-ಅಪ್ ನಾವೀನ್ಯಕಾರರು, ಮೀನುಗಾರರು ಮತ್ತು ಇನ್ನೂ ಅನೇಕರಿಗೆ ಅವಕಾಶಗಳನ್ನು ತೆರೆದಿಡುವ ಮೂಲಕ ʼಮೇಕ್ ಇನ್ ಇಂಡಿಯಾʼಗೆ ಇನ್ನಷ್ಟು ಬಲವನ್ನು ತುಂಬುತ್ತದೆ.
ಮಹಿಳೆಯರು ಮತ್ತು ಯುವ ಸಮುದಾಯಕ್ಕೆ ದೊಡ್ಡ ಮಟ್ಟದ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಪ್ರತಿಪಾದಿಸಿದ ಹೊರತಾಗಿಯೂ ಮೋದಿ ಅವರು ಇದನ್ನು ʼಎಲ್ಲ ವ್ಯಾಪಾರ ಒಪ್ಪಂದಗಳ ಪಿತಾಮಹʼ ಎಂದು ಬಣ್ಣಿಸುವ ಹಂತಕ್ಕೇನೂ ಹೋಗಲಿಲ್ಲ.
ಇದಕ್ಕೆ ವ್ಯತಿರಿಕ್ತವಾಗಿ, ವಾಷಿಂಗ್ಟನ್ ಯಾವುದೇ ಹಿಂಜರಿಕೆ ಪ್ರದರ್ಶಿಸಲಿಲ್ಲ. ಅಮೆರಿಕದ ವ್ಯಾಪಾರ ಪ್ರತಿನಿಧಿ, ರಾಯಭಾರಿ ಜೇಮಿಸನ್ ಗ್ರೀರ್ ಅವರು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ “ಒಪ್ಪಂದ ಮಾಡಿಕೊಳ್ಳುವ ಚಾತುರ್ಯ”ವನ್ನು ಶ್ಲಾಘಿಸುತ್ತಾ, ಅವರಿಗೆ ಪಿತೃತ್ವದ ಸ್ಥಾನಮಾನವನ್ನೇ ನೀಡಿದಂತೆ ಕಂಡುಬಂದರು.
“ಅಮೆರಿಕದ ಕಾರ್ಮಿಕರು ಮತ್ತು ಉತ್ಪಾದಕರಿಗಾಗಿ ವಿಶ್ವದ ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದನ್ನು ಮುಕ್ತಗೊಳಿಸಿದ್ದಕ್ಕಾಗಿ ಹಾಗೂ ಅಮೆರಿಕದ ಎಲ್ಲಾ ಕೈಗಾರಿಕಾ ಸರಕುಗಳು ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿಮೆ ಮಾಡಿದ್ದಕ್ಕಾಗಿ” ಅವರು ಟ್ರಂಪ್ ಅವರನ್ನು ಕೊಂಡಾಡಿದರು.
ವ್ಯಾಪಾರ ಒಪ್ಪಂದಗಳು ಮುಗಿದ ಬಳಿಕ ʼವಿಜಯʼದ ಇಂತಹ ಆಚರಣೆಯ ಘೋಷಣೆಗಳು ಸಾಮಾನ್ಯ ಸಂಪ್ರದಾಯ. ದೇಶೀಯ ಮತದಾರರನ್ನು ಸಮಾಧಾನಪಡಿಸುವುದಷ್ಟೇ ಇವುಗಳ ಉದ್ದೇಶ. ಆದರೆ, ಈ ಘೋಷಣೆಗಳು ವಿಜೇತರು ಮತ್ತು ಸೋತವರ ನಡುವಿನ ಕಠಿಣ ಲೆಕ್ಕಾಚಾರವನ್ನು ಮರೆಮಾಚುತ್ತದೆ. ವ್ಯಾಪಾರ ಒಪ್ಪಂದಗಳು ಜನರ ಜೀವನೋಪಾಯ ಮತ್ತು ಅಳಿವು-ಉಳಿವಿನ ಪ್ರಶ್ನೆಯಾದಾಗ ಈ ಲೆಕ್ಕಾಚಾರವು ಅತ್ಯಂತ ಮಹತ್ವದ್ದೂ ಕೂಡ ಆಗಿರುತ್ತದೆ.
ಸಮತೋಲನವಲ್ಲ—ವಾಸ್ತವದ ತಿರುಚುವಿಕೆ
ಇಲ್ಲಿರುವ ಅಸಮಾನತೆಯನ್ನು ಗಮನಿಸಿ: 33.8 ಕೋಟಿ ಜನಸಂಖ್ಯೆ ಹೊಂದಿರುವ ಅಮೆರಿಕವು ಕಳೆದ ವರ್ಷ ತಲಾ 76,477 ಡಾಲರ್ ಆದಾಯವನ್ನು ದಾಖಲಿಸಿದೆ. ಆದರೆ 140 ಕೋಟಿ ಜನಸಂಖ್ಯೆ ಇರುವ ಭಾರತದ ತಲಾ ಆದಾಯ ಕೇವಲ 2,940 ಡಾಲರ್ ಮಾತ್ರ. ಅಮೆರಿಕದಲ್ಲಿ ಸುಮಾರು 30,000 ಶ್ರೀಮಂತ ರೈತರಿದ್ದರೆ, ಭಾರತದಲ್ಲಿ ಸುಮಾರು 80 ಕೋಟಿ ರೈತರು ಅತ್ಯಂತ ಸಂಕಷ್ಟದಲ್ಲಿ ಬದುಕುತ್ತಿದ್ದಾರೆ, ಅವರಲ್ಲಿ ಅನೇಕರು ಜೀವನ ನಿರ್ವಹಣೆಗಾಗಿಯೇ ಹೋರಾಡುತ್ತಿದ್ದಾರೆ. ಇಂತಹ ಎರಡು ವಿಭಿನ್ನ ಅರ್ಥ ವ್ಯವಸ್ಥೆಗಳನ್ನು 'ಪರಸ್ಪರ ಉದಾರೀಕರಣ'ದ ಹೆಸರಿನಲ್ಲಿ ಸಮಾನವೆಂದು ಪರಿಗಣಿಸುವುದು ಸಮತೋಲನವಲ್ಲ. ಬದಲಾಗಿ ಅದು ವಾಸ್ತವದ ತಿರುಚುವಿಕೆ.
ಫ್ಯಾಕ್ಟ್-ಶೀಟ್-ನಲ್ಲಿ ಇರುವ ಸತ್ಯವೇನು?
ಭಾರತದ ವಾಕ್ಚತುರ ವಾಣಿಜ್ಯ ಸಚಿವರು ಈ ಒಪ್ಪಂದವನ್ನು ಉಭಯ ದೇಶಗಳಿಗೂ ಸಂದ ಗೆಲುವು ಎಂದು ಬಿಂಬಿಸುತ್ತಿದ್ದರೂ ಶ್ವೇತಭವನ ಬಿಡುಗಡೆ ಮಾಡಿದ ʼಫ್ಯಾಕ್ಟ್-ಶೀಟ್ʼನ್ನು ಪರಿಶೀಲಿಸಿದರೆ ಭಾರತ ನಿಜಕ್ಕೂ ಏನೆಲ್ಲ ಬಿಟ್ಟುಕೊಟ್ಟಿದೆ ಎಂಬುದು ಹೆಚ್ಚು ಸ್ಪಷ್ಟ ಹಾಗೂ ಗಂಭೀರ ಚಿತ್ರಣವನ್ನು ನೀಡುತ್ತದೆ.
“ಅಮೆರಿಕದ ಎಲ್ಲ ಕೈಗಾರಿಕಾ ಸರಕುಗಳು ಮತ್ತು ವ್ಯಾಪಕ ಶ್ರೇಣಿಯ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕಗಳನ್ನು ಭಾರತವು ತೆಗೆದುಹಾಕುತ್ತದೆ ಅಥವಾ ತಗ್ಗಿಸುತ್ತದೆ,” ಎಂದು ಈ ದಾಖಲೆಯು ಘೋಷಿಸುತ್ತದೆ.
ಇದರಲ್ಲಿ ಎಥೆನಾಲ್ ತಯಾರಿಕೆಗೆ ಮುಖ್ಯವಾಗಿ ಬಳಕೆ ಮಾಡಲಾಗುವ ಡ್ರೈಡ್ ಡಿಸ್ಟಿಲರ್ಸ್ ಗ್ರೇನ್ಸ್ (DDĢ) ಪಶು ಆಹಾರಕ್ಕಾಗಿ ಕೆಂಪು ಜೋಳ, ಒಣ ಹಣ್ಣುಗಳು, ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್ಸ್ ಸೇರಿದಂತೆ ಇತರ ವಸ್ತುಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.
ಇದಕ್ಕೆ ಪ್ರತಿಯಾಗಿ, ಅಮೆರಿಕವು 2025ರ ಏಪ್ರಿಲ್ 2ರಂದು ಕಾರ್ಯಕಾರಿ ಆದೇಶ 14257ರ ಅಡಿಯಲ್ಲಿ “ಶೇ.18ರಷ್ಟು ಪರಸ್ಪರ ಸುಂಕದ ದರವನ್ನು ಅನ್ವಯಿಸುತ್ತದೆ”. ಈ ಸುಂಕವು ಜವಳಿ ಮತ್ತು ಉಡುಪುಗಳು, ಚರ್ಮ ಮತ್ತು ಪಾದರಕ್ಷೆಗಳು, ಪ್ಲಾಸ್ಟಿಕ್ ಮತ್ತು ರಬ್ಬರ್, ಸಾವಯವ ರಾಸಾಯನಿಕಗಳು, ಗೃಹಾಲಂಕಾರದ ವಸ್ತುಗಳು, ಕರಕುಶಲ ಉತ್ಪನ್ನಗಳು ಮತ್ತು ಕೆಲವು ಯಂತ್ರೋಪಕರಣಗಳು ಸೇರಿದಂತೆ ಭಾರತೀಯ ರಫ್ತುಗಳ ಮೇಲೆ ಪ್ರಹಾರ ಮಾಡಲಿದೆ. ಇದು ಮಧ್ಯಂತರ ಒಪ್ಪಂದಕ್ಕೆ ಅಂತಿಮ ರೂಪ ನೀಡುವುದಕ್ಕೆ ಒಳಪಟ್ಟಿರುತ್ತದೆ.
ಅಮೆರಿಕ ಕೇವಲ ಸೀಮಿತ ವಸ್ತುಗಳ ಮೇಲೆ ಮಾತ್ರ ಈ ಸುಂಕಗಳನ್ನು ತೆಗೆದುಹಾಕುತ್ತದೆ—ಅವುಗಳೆಂದರೆ ಜೆನೆರಿಕ್ ಔಷಧಗಳು, ರತ್ನಗಳು ಮತ್ತು ವಜ್ರಗಳು, ಹಾಗೂ ವಿಮಾನದ ಬಿಡಿಭಾಗಗಳು. ಅಲ್ಲದೆ ಸೆಕ್ಷನ್ 232ರ ಅಡಿಯಲ್ಲಿ ಸ್ಟೀಲ್, ಅಲ್ಯೂಮಿನಿಯಂ ಮತ್ತು ಆಟೋ ಭಾಗಗಳ ಮೇಲೆ ವಿಧಿಸಲಾದ ಶೇಕಡಾ 25ರಷ್ಟು ಸುಂಕದ ಮೇಲೆ ಸೀಮಿತ ವಿನಾಯಿತಿಯನ್ನು ನೀಡಬಹುದು. ಇಲ್ಲಿಯೂ ಕೂಡ, ರಿಯಾಯಿತಿಗಳು ಷರತ್ತುಬದ್ಧವಾಗಿರುತ್ತವೆ ಮತ್ತು ಅಮೆರಿಕದ ವಿವೇಚನೆಗೆ ಒಳಪಟ್ಟಿವೆ. ಫ್ಯಾಕ್ಟ್ ಶೀಟ್ನಲ್ಲಿ ಹೇಳಿರುವಂತೆ, “ಔಷಧಗಳ ಮೇಲಿನ ಫಲಿತಾಂಶಗಳು ಅಮೆರಿಕದ ಸೆಕ್ಷನ್ 232 ರ ಅಡಿ ನಡೆಸಲಾದ ತನಿಖೆಯ ಸಂಶೋಧನೆಗಳಿಗೆ ಅನುಗುಣವಾಗಿರುತ್ತವೆ.”
ಸುಂಕದ ಅಸ್ತ್ರಕ್ಕೆ ಥರಗುಟ್ಟಿ…
ಈ ವಿಷಯವು ಅತ್ಯಂತ ಗಂಭೀರ ಸಂಗತಿ. ಯಾಕೆಂದರೆ ಶೇ. 18ರಷ್ಟು ʼಪರಸ್ಪರ ಸುಂಕʼ ವಿಧಿಸುವುದು ಅಂತಾರಾಷ್ಟ್ರೀಯ ವ್ಯಾಪಾರದ ಕಾನೂನಿನ ಪ್ರಕಾರ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಇದು GATT/WTO ಚೌಕಟ್ಟಿನ ಆರ್ಟಿಕಲ್-1 (ಅತ್ಯಂತ ಪ್ರಿಯ ರಾಷ್ಟ್ರದ ಗೌರವ) ಮತ್ತು ಆರ್ಟಿಕಲ್-2ನ್ನು (ತೆರಿಗೆ ಬದ್ಧತೆಗಳನ್ನು ಕಾಯ್ದುಕೊಳ್ಳುವುದು) ಉಲ್ಲಂಘಿಸುತ್ತದೆ. ರಾಷ್ಟ್ರೀಯ ಭದ್ರತೆಗೆ ನಿಜವಾಗಿಯೂ ಅಪಾಯ ಇದ್ದಾಗ ಮಾತ್ರ ಸೆಕ್ಷನ್ 232ರ ಕ್ರಮಗಳಿಗೆ ಅನುಮತಿ ನೀಡಬಹುದು ಎಂದು WTO ಸಮಿತಿಯು ಈಗಾಗಲೇ ತೀರ್ಪು ನೀಡಿದೆ.
ಆದರೂ ಭಾರತವು ಇತರ ಅನೇಕ ರಾಷ್ಟ್ರಗಳ ರೀತಿಯಲ್ಲಿಯೇ ಇದಕ್ಕೆ ಮೌನ ಸಮ್ಮತಿ ನೀಡಿದೆ. ಟ್ರಂಪ್ ಅವರ ಸುಂಕದ ಅಸ್ತ್ರಕ್ಕೆ ತರಗುಟ್ಟಿದ ಸರ್ಕಾರಗಳು ಇಸ್ಪೀಟ್ ಎಲೆಗಳ ಮನೆಗಳಂತೆ ಕುಸಿದುಬಿದ್ದಿವೆ.
ಟ್ರಂಪ್ ಸಂಭ್ರಮ!
ಈ ಸುಂಕಗಳು ಕಥೆಯ ಒಂದು ಭಾಗ ಮಾತ್ರ. ಭಾರತವು ಹಲವಾರು ಸುಂಕೇತರ ಅಡೆತಡೆಗಳನ್ನು ತೆಗೆದುಹಾಕಲು ಒಪ್ಪಿಕೊಂಡಿದ್ದಾಗಿದೆ. ಈ ಕ್ರಮವನ್ನು ಅಧ್ಯಕ್ಷ ಟ್ರಂಪ್ ಈಗಾಗಲೇ ಸಂಭ್ರಮಿಸಿದ್ದಾರೆ.
ಒಪ್ಪಂದವು ಜಾರಿಗೆ ಬಂದ ಆರು ತಿಂಗಳೊಳಗೆ, ಭಾರತವು “ಅಮೆರಿಕದ ವೈದ್ಯಕೀಯ ಸಾಧನಗಳ ವ್ಯಾಪಾರಕ್ಕೆ ದೀರ್ಘಕಾಲದಿಂದ ಇರುವ ಅಡೆತಡೆಗಳನ್ನು ನಿವಾರಿಸುತ್ತದೆ,” ಅಮೆರಿಕದ ಐಸಿಟಿ ಸರಕುಗಳ ಮೇಲಿನ ನಿರ್ಬಂಧಿತ ಆಮದು ಪರವಾನಗಿ ರದ್ದುಗೊಳಿಸುತ್ತದೆ ಮತ್ತು “ಮಾನದಂಡಗಳು ಹಾಗೂ ಪರೀಕ್ಷಾ ಅವಶ್ಯಕತೆಗಳನ್ನು ಅಮೆರಿಕ-ಅಭಿವೃದ್ಧಿಪಡಿಸಿದ ಅಥವಾ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಪರಿಷ್ಕರಣೆ ನಡೆಸಲಿದೆ.”
ಇನ್ನೂ ಒಂದು ಆತಂಕದ ವಿಷಯವೆಂದರೆ, ʼಅಮೆರಿಕದ ಆಹಾರ ಮತ್ತು ಕೃಷಿ ಉತ್ಪನ್ನಗಳ ವ್ಯಾಪಾರಕ್ಕೆ ಇರುವ ದೀರ್ಘಕಾಲದ ಸುಂಕೇತರ ಅಡ್ಡಿಗಳನ್ನು ಪರಿಹರಿಸಲುʼ ಭಾರತ ಒಪ್ಪಿಕೊಂಡಿದೆ. ಇದು ತಳಿಪರಿವರ್ತಿತ (GM) ಜೋಳ, ಸೋಯಾ ಮತ್ತು ಇತರ ಸರಕುಗಳಿಗೆ ಭಾರತದ ಬಾಗಿಲನ್ನು ಮುಕ್ತಗೊಳಿಸುವುದನ್ನು ಸೂಚಿಸುವ ಮೃದುವಾದ ಪದಪ್ರಯೋಗವಾಗಿದೆ. ಟ್ರಂಪ್ ಅವರ ಈ ಸುಂಕ ಭಯದ ಅಡಿಯಲ್ಲಿ ಇಂತಹ ರಿಯಾಯ್ತಿಗಳು ಈಗಾಗಲೇ ಇರುವ ಭಾರತದ ದುರ್ಬಲ ಗ್ರಾಮೀಣ ಅರ್ಥವ್ಯವಸ್ಥೆಯ ಮೇಲೆ ಹಾನಿ ಉಂಟುಮಾಡುವ ಅಪಾಯ ಹೊಂದಿದೆ.
“ಅಮೆರಿಕ ಮತ್ತು ಭಾರತವು ತಮ್ಮ ತಮ್ಮ ಮಾನದಂಡಗಳು ಮತ್ತು ಅನುಸರಣಾ ಮೌಲ್ಯಮಾಪನ ಪ್ರಕ್ರಿಯೆಗಳ ಬಗ್ಗೆ ಚರ್ಚೆ ನಡೆಸುವ ಉದ್ದೇಶವನ್ನು ಹೊಂದಿವೆ” ಎಂಬ ಒಪ್ಪಂದದ ನಿಬಂಧನೆಯು ದೇಶೀಯ ಉದ್ಯಮವನ್ನು ಇನ್ನಷ್ಟು ದುರ್ಬಲಗೊಳಿಸಿದರೆ ಅಚ್ಚರಿಯೇನೂ ಇಲ್ಲ. ಒಂದು ರೀತಿಯಲ್ಲಿ ಇದು ನಮ್ಮ ದೇಶದ ನಿಯಂತ್ರಕ ಸಾರ್ವಭೌಮತ್ವಕ್ಕೇ ತಿಲಾಂಜಲಿ ಇಟ್ಟಂತೆ ಕಾಣುತ್ತಿದೆ.
ಪೂರೈಕೆ ಸರಪಣಿ-ಚೀನಾ ವಿರುದ್ಧ ಕಾರ್ಯತಂತ್ರ
ʼಮೂರನೇ ದೇಶದ ಮಾರುಕಟ್ಟೇತರ ನೀತಿಗಳನ್ನು ಎದುರಿಸಲುʼ ಎನ್ನುವ ಮೂಲಕ ಚೀನಾವನ್ನು ಗುರಿಯಾಗಿಟ್ಟುಕೊಂಡು ಭಾಷೆಯನ್ನು ರೂಪಿಸಲಾಗಿದೆ. ಅದಕ್ಕಾಗಿ ಆರ್ಥಿಕ ಭದ್ರತಾ ಹೊಂದಾಣಿಕೆಗಳನ್ನು ಬಲಪಡಿಸಲು, ಹೂಡಿಕೆ ಪರಾಮರ್ಶೆಯಲ್ಲಿ ಸಹಕಾರ ಹೆಚ್ಚಿಸಲು ಹಾಗೂ ರಫ್ತು ನಿಯಂತ್ರಣಗಳನ್ನು ಬಿಗಿಪಡಿಸಲು ಪ್ರತಿಜ್ಞೆ ಮಾಡಿದ್ದಾರೆ. ಹಾಗೆ ಮಾಡುವ ಮೂಲಕ ಭಾರತವು ಪೂರೈಕೆ ಸರಪಣಿಯ ಮರುಹೊಂದಾಣಿಕೆಯ ತಂತ್ರಕ್ಕೆ ಒಳಗಾಗುತ್ತಿದೆ ಎಂಬುದು ಸ್ಪಷ್ಟ. ಯಾಕೆಂದರೆ ಇದು ವಾಷಿಂಗ್ಟನ್-ನಲ್ಲಿ ರೂಪಿತವಾಗಿದೆಯೇ ಹೊರತು ನವದೆಹಲಿಯಲ್ಲಿ ಅಲ್ಲ.
ಇದಕ್ಕೆ ತೆರಬೇಕಾದ ಬೆಲೆ ಸಾಮಾನ್ಯವಾದುದಲ್ಲ. ಅಮೆರಿಕವು ಮುಂದಿನ ಐದು ವರ್ಷಗಳಲ್ಲಿ ತನ್ನ ಇಂಧನ, ವಿಮಾನಗಳು, ಅಮೂಲ್ಯ ಲೋಹಗಳು, ತಂತ್ರಜ್ಞಾನದ ಉತ್ಪನ್ನಗಳು ಹಾಗೂ ಅಡುಗೆ ಕಲ್ಲಿದ್ದಲು ಖರೀದಿಗಾಗಿ ಭಾರತದಿಂದ 5೦೦ ಶತಕೋಟಿ ಡಾಲರ್ ಮೊತ್ತದ ಬದ್ಧತೆಯನ್ನು ಕೂಡ ಪೂರೈಸಿ ತೋರಿಸಬೇಕಾಗಿದೆ.
ಭಾರತವು 'ದತ್ತಾಂಶ ಕೇಂದ್ರಗಳ ವಸಾಹತುಶಾಹಿ'ಯ ಹೊಸ ಹಂತಕ್ಕೆ ಪ್ರವೇಶಿಸುತ್ತಿದೆ ಎಂಬುದಕ್ಕೆ ಈ ಒಪ್ಪಂದ ಸ್ಪಷ್ಟ ಸೂಚನೆಯಾಗಿದೆ. “ಭಾರತ ಮತ್ತು ಅಮೆರಿಕ ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್ (GPU) ಸೇರಿದಂತೆ ತಂತ್ರಜ್ಞಾನ ಉತ್ಪನ್ನಗಳ ವ್ಯಾಪಾರವನ್ನು ಗಮನಾರ್ಹವಾಗಿ ಹೆಚ್ಚಿಸಲಿವೆ," ಎಂದು ಫ್ಯಾಕ್ಟ್ ಶೀಟ್ ಹೇಳುತ್ತದೆ.
ಭಾರತವು ಕೇವಲ ಕಾರ್ಮಿಕರು ಮತ್ತು ಮಾರುಕಟ್ಟೆಯನ್ನು ಒದಗಿಸುತ್ತಿದ್ದ ಹಾಗೂ ಲಾಭವೆಲ್ಲವೂ ಬೇರೆಡೆ ಸೇರುತ್ತಿದ್ದ ಹಳೆಯ ಕಾಲದ ಪ್ರತಿಧ್ವನಿಯಂತೆ ಇದು ಕಾಣುತ್ತಿದೆ ಎಂದು ವಿಮರ್ಶಕರು ವಾದಿಸುತ್ತಾರೆ.
ಐಟಿ ವಲಯದ ಕಡೆಗಣನೆ
“ಡಿಜಿಟಲ್ ವ್ಯಾಪಾರ"ದ ಹೆಸರಿನಲ್ಲಿ, ಭಾರತವು "ತಾರತಮ್ಯದ ಅಥವಾ ಹೊರೆಯಾಗುವ ಪದ್ಧತಿಗಳನ್ನು ಪರಿಹರಿಸಲು ಮತ್ತು ದೃಢವಾದ, ಮಹತ್ವಾಕಾಂಕ್ಷೆಯ ಡಿಜಿಟಲ್ ವ್ಯಾಪಾರ ನಿಯಮಗಳತ್ತ ಸಾಗಲು" ಒಪ್ಪಿಕೊಂಡಿದೆ. ಪ್ರಾಯೋಗಿಕವಾಗಿ, ಇದರರ್ಥ ಭಾರತವು ತನ್ನ ಡಿಜಿಟಲ್ ಸೇವಾ ತೆರಿಗೆಯನ್ನು ಕೈಬಿಡುವುದು ಮತ್ತು ಎಲೆಕ್ಟ್ರಾನಿಕ್ ಪ್ರಸರಣಗಳ ಮೇಲಿನ ಕಸ್ಟಮ್ಸ್ ಸುಂಕಗಳ WTO ನಿಷೇಧಕ್ಕೆ ತನ್ನ ವಿರೋಧವನ್ನು ತಗ್ಗಿಸುವುದು ಎಂದಾಗಬಹುದು. ಮುಂದಿನ ತಿಂಗಳು ಯಾವೂಂಡೆಯಲ್ಲಿ (Yaounde) ನಡೆಯಲಿರುವ ವಿಶ್ವ ವಾಣಿಜ್ಯ ಸಂಘಟನೆಯ 14ನೇ ಮಂತ್ರಿಮಟ್ಟದ ಸಮ್ಮೇಳನದಲ್ಲಿ ಇದಕ್ಕೆ ನಿಜವಾದ ಪರೀಕ್ಷೆ ಎದುರಾಗಲಿದೆ.
ಆದರೆ, ಈ ಎಲ್ಲದರ ನಡುವೆ ಭಾರತೀಯ ಐಟಿ ವೃತ್ತಿಪರರ ಸಂಚಾರದ ಬಗ್ಗೆ ಅಮೆರಿಕದಿಂದ ಯಾವುದೇ ಅರ್ಥಪೂರ್ಣ ಬದ್ಧತೆ ಕಂಡುಬಂದಿಲ್ಲ ಎಂಬುದು ಗಮನಾರ್ಹ. ವೀಸಾ ನಿರ್ಬಂಧಗಳನ್ನು ಸಡಿಲಗೊಳಿಸುವ ಬಗ್ಗೆ ಅಥವಾ ಅಲ್ಪಾವಧಿಯ ಅಮೆರಿಕ ಕೆಲಸದ ಪರವಾನಗಿ ಪಡೆಯಲು ಭಾರತೀಯ ಸೇವಾ ಪೂರೈಕೆದಾರರ ಮೇಲೆ ವಿಧಿಸಲಾಗುವ ಸುಮಾರು 100,000 ಡಾಲರ್ (ಅಂದಾಜು 84 ಲಕ್ಷ ರೂಪಾಯಿ) ಅತಿಯಾದ ಶುಲ್ಕವನ್ನು ಕಡಿತಗೊಳಿಸುವ ಬಗ್ಗೆ ಈ ಒಪ್ಪಂದದ ಚೌಕಟ್ಟು ಮೌನವಾಗಿದೆ.
ಕೊರಳಿಗೆ ಕಟ್ಟಿದ ಬೀಸುವ ಕಲ್ಲು
ಮೋದಿ ಸರ್ಕಾರವು ಈ ಒಪ್ಪಂದದ ಚೌಕಟ್ಟನ್ನು 'ವಿಕಸಿತ ಭಾರತ'ದತ್ತ ಒಂದು ದೊಡ್ಡ ಜಿಗಿತ ಎಂದು ಬಿಂಬಿಸುತ್ತಿದೆ. ಆದರೆ ವಾಸ್ತವದಲ್ಲಿ, ಇದು ಭಾರತದ ಅತ್ಯಂತ ಬಡ ನಾಗರಿಕರ ಕೊರಳಿಗೆ ಕಟ್ಟಿದ ಭಾರವಾದ ಬೀಸುವ ಕಲ್ಲಿನಂತೆ ಆಗುವ ಅಪಾಯವಿದೆ. ಅನಿಶ್ಚಿತ ಭವಿಷ್ಯದ ಲಾಭಗಳಿಗಾಗಿ ಕಾಯುತ್ತಾ ಕುಳಿತುಕೊಳ್ಳಲು ಸಾಧ್ಯವಾಗದ, ಉದ್ಯೋಗ ನಷ್ಟ, ಕೃಷಿ ಸಂಕಷ್ಟ ಮತ್ತು ನಿಯಂತ್ರಕ ಸವೆತಗಳನ್ನು ತಡೆದುಕೊಳ್ಳುವ ಶಕ್ತಿ ಇಲ್ಲದ ಬಡ ಜನರಿಗೆ ಇದು ದೊಡ್ಡ ಹೊರೆಯಾಗಲಿದೆ.
ಹಿಂದಿನ ಅಂಕಣದಲ್ಲಿ ವಾದಿಸಿದಂತೆ, ಭಾರತವು ಈಗ ಸುಂಕಗಳು, ವ್ಯಾಪಾರ ನೀತಿ ಮತ್ತು ರಾಷ್ಟ್ರೀಯ ಹೆಮ್ಮೆಯ ಮೇಲಿನ ತನ್ನ ಸಾರ್ವಭೌಮತ್ವವನ್ನು ತ್ಯಜಿಸುವ ಅಂಚಿನಲ್ಲಿದೆ. ಆ ಅರ್ಥದಲ್ಲಿ, ಪ್ರಧಾನಿಯವರು ಖಂಡಿತವಾಗಿಯೂ ಒಂದು ಶ್ರೇಯಸ್ಸಿಗೆ ಅರ್ಹರು—ಅದೇನೆಂದರೆ, ಭಾರತದ ಐತಿಹಾಸಿಕ ʼಭವಿತವ್ಯದೊಂದಿಗೆ ಒಪ್ಪಂದʼ ವಾಗ್ದಾನವನ್ನು ಬುಡಮೇಲು ಮಾಡಿ, ಅದರ ಬದಲಾಗಿ ತಕ್ಷಣದ ನಷ್ಟವನ್ನು ನೀಡುವ, ಅನಿಶ್ಚಿತ ಲಾಭದ ಮತ್ತು ನ್ಯಾಯಸಮ್ಮತವಲ್ಲದ ಅರೆಬರೆ ಒಪ್ಪಂದವನ್ನು ದೇಶಕ್ಕೆ ತರಲು ಕಾರಣರಾಗಿರುವುದು.

