
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ಭಾರತದ ವ್ಯೂಹಾತ್ಮಕ ಮತ್ತು ರಕ್ಷಣಾ ವಿಶ್ಲೇಷಕರು ಕಣ್ಣು ತೆರೆದು ನೋಡಬೇಕು; ಅನೇಕ ವಿಚಾರಗಳಲ್ಲಿ ಭಾರತ ಮತ್ತು ಇಸ್ರೇಲ್ ನಡುವೆ ಎಷ್ಟೊಂದು ಢಾಳಾದ ವ್ಯತ್ಯಾಸವಿವೆ ಎಂಬುದನ್ನು!
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಎರಡು ದಿನಗಳ ಕಾಲ ಇಸ್ರೇಲ್‌ಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರು ಮತ್ತು ಅವರ ಇಸ್ರೇಲಿ ಸಹವರ್ತಿ ಬೆಂಜಮಿನ್ ನೆತನ್ಯಾಹು ಅವರು ಪರಸ್ಪರ ಸಂಭ್ರಮ-ಉಲ್ಲಾಸದಿಂದ ಇರುವುದನ್ನು ಕಾಣಬಹುದಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಕಂಡುಬಂದ ಮೋದಿ ಟ್ರಂಪ್ ನಡುವಿನ ಗಾಢವಾದ ಸ್ನೇಹಕ್ಕಿಂತಲೂ ಉತ್ತಮವಾಗಿತ್ತು. ಮೋದಿ ಮತ್ತು ನೆತನ್ಯಾಹು ನಡುವಿನ ಈ ಸಂಬಂಧ ಒಂದು ರೀತಿಯ ಅತಿಕಲ್ಪಿತ ಉತ್ಸಾಹಕ್ಕೆ ಉತ್ತಮ ಉದಾಹರಣೆ ಎಂಬಂತಿತ್ತು.
ಮೋದಿ ಮತ್ತು ನೆತನ್ಯಾಹು ಅವರ ನಡುವಿನ ಪರಸ್ಪರ ಒಡನಾಟದಲ್ಲಿ ಬಲವಾದ ಒಗ್ಗಟ್ಟು ಪ್ರದರ್ಶಿಸಲು ರಾಜಕೀಯ ಕಾರಣ ಕೂಡ ಇಲ್ಲದಿಲ್ಲ. ಮೋದಿ ಅವರು ಹಿಂದೂ ಬಲಪಂಥೀಯ ರಾಜಕೀಯ ಸಂಪ್ರದಾಯಕ್ಕೆ ಸೇರಿದವರು. ಬಿಜೆಪಿಯ ಹಿಂದಿನ ಅವತಾರವಾದ ಭಾರತೀಯ ಜನಸಂಘವು ಇಸ್ರೇಲ್ ಬಗ್ಗೆ ಸೌಮ್ಯ ನಡೆಯನ್ನು ಹೊಂದಿತ್ತು. ಅದಕ್ಕೆ ಮುಖ್ಯ ಕಾರಣವೇನೆಂದರೆ ಇಸ್ರೇಲ್ ಪ್ಯಾಲೇಸ್ತೀನ್ನಲ್ಲಿ ಮುಸ್ಲಿಮರ ವಿರುದ್ಧ ಹೋರಾಡುತ್ತಿದೆ ಮತ್ತು ಆ ಪ್ರದೇಶದ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳನ್ನು ದೂರವಿಡುತ್ತಿದೆ ಎಂಬ ತಪ್ಪು ನಂಬಿಕೆ. ಇಸ್ರೇಲ್ ವಿಚಾರದಲ್ಲಿ ಮೋದಿ ಅವರಿಗೆ ಇರುವ ಮಿತಿ ಇಲ್ಲದ ಮೆಚ್ಚುಗೆಯ ಹಿಂದೆ ಅವರಿಗೆ ಪಕ್ಷದ ನಿಲುವಿನ ಬಗ್ಗೆ ಪರಂಪರಾಗತವಾಗಿ ಪಡೆದ ಸೈದ್ಧಾಂತಿಕ ಬದ್ಧತೆಯೇ ಕಾರಣ.
ಪ್ಯಾಲೆಸ್ತೀನ್ ಸಮಸ್ಯೆಯು ಕೇವಲ ಮುಸ್ಲಿಮರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇದು ಮೂಲಭೂತವಾಗಿ ಅರಬ್ಬರಾಗಿರುವ ಪ್ಯಾಲೆಸ್ತೀನಿಯರ ಸಹಜ ರಾಜಕೀಯ ಹಕ್ಕುಗಳ ಪ್ರಶ್ನೆಯಾಗಿದೆ; ಅವರಲ್ಲಿ ಬಹುಸಂಖ್ಯಾತರು ಮುಸ್ಲಿಮರಾಗಿದ್ದರೂ, ಕ್ರೈಸ್ತರು ಮತ್ತು ಯಹೂದಿ ಪ್ಯಾಲೆಸ್ತೀನಿಯರೂ ಸೇರಿದ್ದಾರೆ. ದುರದೃಷ್ಟವಶಾತ್, ಸತತವಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಗಳು ಪ್ಯಾಲೆಸ್ತೀನಿಯರನ್ನು ಬೆಂಬಲಿಸುವುದನ್ನು ಭಾರತದ ಮತ್ತು ವಿಶ್ವದ ಮುಸ್ಲಿಮರನ್ನು ಮೆಚ್ಚಿಸುವ ಒಂದು ಮಾರ್ಗವನ್ನಾಗಿ ಮಾಡಿಕೊಂಡವು. ನೆಹರೂ ಅವರಂತಹ ನಾಯಕರು ಅಂತರಂಗದಲ್ಲಿ ಯಹೂದಿಗಳ ಅಭಿಮಾನಿಗಳಾಗಿಯೇ ಉಳಿದಿದ್ದರು. ಆದರೆ 1938ರಲ್ಲಿ ಗಾಂಧೀಜಿಯವರು ಪ್ಯಾಲೆಸ್ತೀನ್ ಸಮಸ್ಯೆಯನ್ನು ಅತ್ಯಂತ ನಿಖರವಾಗಿ ಅರ್ಥಮಾಡಿಕೊಂಡಿದ್ದರು; ಯಹೂದಿಗಳು ಪಾಶ್ಚಿಮಾತ್ಯರ ಬೆಂಬಲದೊಂದಿಗೆ ಪ್ಯಾಲೆಸ್ತೀನ್ ಪ್ರವೇಶಿಸಬಾರದು ಎಂದು ಅವರು ಬಲವಾಗಿ ಪ್ರತಿಪಾದಿಸಿದ್ದರು. ಇಸ್ರೇಲ್ ಮತ್ತು ಯಹೂದಿಗಳ ಬಗ್ಗೆ ಬಿಜೆಪಿ/ಭಾರತೀಯ ಜನಸಂಘ ಹೊಂದಿರುವ ಮೆಚ್ಚುಗೆ ಮತ್ತು ಬೆಂಬಲಕ್ಕೆ ಅವರಲ್ಲಿನ ಮುಸ್ಲಿಂ ವಿರೋಧಿ ಭಾವನೆಯೇ ಮುಖ್ಯ ಪ್ರೇರಣೆಯಾಗಿತ್ತು.
ಇಸ್ರೇಲ್ ಬಗ್ಗೆ ಅತಿಕಲ್ಪಿತ ಉತ್ಸಾಹವಿದ್ದರೂ ಸಹ, ಮೋದಿ ಅವರು ತಮ್ಮ 'ಕೆನೆಸೆಟ್' (ಇಸ್ರೇಲ್ ಸಂಸತ್ತು) ಭಾಷಣದಲ್ಲಿ ಇಸ್ರೇಲ್ ಮತ್ತು ಯುಎಇ, ಬಹ್ರೇನ್, ಸುಡಾನ್ ಹಾಗೂ ಮೊರಾಕೊ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ವೃದ್ಧಿಸಿದ 'ಅಬ್ರಹಾಂ ಒಪ್ಪಂದ'ಗಳನ್ನು ಉಲ್ಲೇಖಿಸುವ ಮೂಲಕ ವ್ಯೂಹಾತ್ಮಕ ನಡೆಯನ್ನು ಪ್ರದರ್ಶಿಸಿದರು. ಅಲ್ಲದೆ ಗಾಜಾ ಶಾಂತಿ ಯೋಜನೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ನೆತನ್ಯಾಹು ಅವರಿಗೆ ಮೋದಿಯವರ ಭೇಟಿಯು ಇಸ್ರೇಲ್ನ ಆಂತರಿಕ ರಾಜಕೀಯದಲ್ಲಿ ತಮ್ಮ ಇಕ್ಕಟ್ಟಿನ ಪರಿಸ್ಥಿತಿಯನ್ನು ರಕ್ಷಿಸಿಕೊಳ್ಳುವ ಒಂದು ಅಸಮರ್ಥ ಮಾರ್ಗವಾಗಿತ್ತು. ನೆತನ್ಯಾಹು ಅವರು ಮಧ್ಯಮ ಮತ್ತು ಬಲಪಂಥೀಯ ಪಕ್ಷಗಳ ದುರ್ಬಲ ಒಕ್ಕೂಟವನ್ನು ಮುನ್ನಡೆಸುತ್ತಿದ್ದಾರೆ. 2023ರ ಅಕ್ಟೋಬರ್ 7ರ ಹಮಾಸ್ ದಾಳಿಯನ್ನು ತಡೆಯುವಲ್ಲಿ ಆಗಿರುವ ವೈಫಲ್ಯ ಮತ್ತು 'ಯಾವುದೇ ಬೆಲೆ ತೆತ್ತಾದರೂ ಯುದ್ಧ' ಎನ್ನುವ ಅವರ ನಿಲುವಿನ ವಿರುದ್ಧ ಇಸ್ರೇಲ್ನಲ್ಲಿ ಪ್ರಬಲ ವಿರೋಧ ವ್ಯಕ್ತವಾಗಿದೆ. ಇಂದು ನೆತನ್ಯಾಹು ಇಸ್ರೇಲ್ನಲ್ಲಿ ಜನಪ್ರಿಯತೆ ಕಳೆದುಕೊಂಡ ನಾಯಕನಾಗಿದ್ದಾರೆ.
ಅಭಿಮಾನ ಮತ್ತು ವ್ಯೂಹತಂತ್ರ
ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧದ ಇನ್ನೊಂದು ಮುಖವೆಂದರೆ, ಇಸ್ರೇಲ್ ಜೊತೆಗೆ ಭಾರತ ನಿಕಟತೆವಾಗಿದ್ದುಬಿಟ್ಟರೆ ಪ್ಯಾಲೆಸ್ತೀನಿಯರು ಮತ್ತು ಅರಬ್ ಮುಸ್ಲಿಂ ರಾಷ್ಟ್ರಗಳನ್ನು ದೂರ ಮಾಡಿದಂತಾಗುತ್ತದೆ ಎಂಬ ತಪ್ಪು ಉದಾರವಾದಿ ದೃಷ್ಟಿಕೋನ. ಪ್ಯಾಲೆಸ್ತೀನಿಯರು ಭಾರತ ಮತ್ತು ಇಸ್ರೇಲ್ ಸ್ನೇಹವನ್ನು ವಿರೋಧಿಸುವುದಿಲ್ಲ. ಬದಲಾಗಿ, ಭಾರತವು ಇಸ್ರೇಲ್ ಮತ್ತು ತಮ್ಮ ನಡುವೆ ಸಂಧಾನಕಾರನಾಗಿ ಕಾರ್ಯನಿರ್ವಹಿಸಬಲ್ಲದು ಎಂಬ ಕಾರಣಕ್ಕೆ ಈ ಸ್ನೇಹವು ತಮಗೆ ಸಹಕಾರಿ ಎಂದು ಅವರು ಭಾವಿಸುತ್ತಾರೆ.
ಸೌದಿ ಅರೇಬಿಯಾ ಮತ್ತು ಯುಎಇಯಂತಹ ಅರಬ್ ರಾಷ್ಟ್ರಗಳು ಭಾರತವನ್ನು ಪ್ರಮುಖ ಆರ್ಥಿಕ ಪಾಲುದಾರನನ್ನಾಗಿ ನೋಡುತ್ತಿವೆ ಮತ್ತು ಭಾರತ ಇಸ್ರೇಲ್ ಜೊತೆ ಹೊಂದಿರುವ ನಿಕಟತೆಯು ಇದಕ್ಕೆ ಅಡ್ಡಿಯಾಗುತ್ತಿಲ್ಲ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, 2025ರಲ್ಲಿ ಭಾರತ-ಯುಎಇ ವ್ಯಾಪಾರ ವಹಿವಾಟು ಸುಮಾರು 100 ಬಿಲಿಯನ್ ಡಾಲರ್ ಆಗಿದ್ದರೆ, ಭಾರತ ಮತ್ತು ಇಸ್ರೇಲ್ ನಡುವಿನ ವಹಿವಾಟು ಕೇವಲ 3 ಬಿಲಿಯನ್ ಡಾಲರ್ಗಿಂತ ಸ್ವಲ್ಪ ಹೆಚ್ಚಿದೆ ಅಷ್ಟೆ.
ಭಾರತದ ಬಲಪಂಥೀಯರಲ್ಲಿರುವ ಇಸ್ರೇಲ್ ಬಗ್ಗೆ ಇರುವ ಸಾಮಾನ್ಯ ಮೆಚ್ಚುಗೆಯು ಹೆಚ್ಚಾಗಿ ತಪ್ಪು ಕಲ್ಪನೆಗಳಿಂದ ಕೂಡಿದ್ದಾಗಿದೆ. ಇಸ್ರೇಲ್ನ ಏಕೈಕ ದೊಡ್ಡ ಸಾಧನೆಯೆಂದರೆ, ಅರಬ್ಬರು ತಮ್ಮನ್ನು ಸುತ್ತುವರಿದಿದ್ದರೂ ಅದು ನಿರಂತರವಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವುದು. ಗಾಜಾ ಯುದ್ಧದ ಉತ್ತುಂಗದಲ್ಲಿ, ನೆತನ್ಯಾಹು ವೈಯಕ್ತಿಕ ಮತ್ತು ರಾಜಕೀಯ ರಂಗಗಳೆರಡರಲ್ಲೂ ತೀವ್ರ ವಿರೋಧವನ್ನು ಎದುರಿಸಿದರು. ದೇಶವು ಎದುರಿಸುತ್ತಿರುವ ಭದ್ರತಾ ಬಿಕ್ಕಟ್ಟಿನ ಕಾರಣದಿಂದಾಗಿ, ನೆತನ್ಯಾಹು ಮತ್ತು ಅವರ ಪತ್ನಿ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ಕೈಬಿಡಬೇಕೆಂದು ಅವರ ರಾಜಕೀಯ ಬೆಂಬಲಿಗರಿಂದ ಒತ್ತಾಯ ಕೇಳಿಬಂದಿತ್ತು. ಆದರೆ ಅದು ಯಶಸ್ವಿಯಾಗಲಿಲ್ಲ. ಇಸ್ರೇಲ್‌ನ ನ್ಯಾಯಾಲಯಗಳಾಗಲಿ ಅಥವಾ ಅಲ್ಲಿನ ಜನಸಂಖ್ಯೆಯ ಬಹುದೊಡ್ಡ ಭಾಗವಾಗಲಿ "ರಾಷ್ಟ್ರೀಯ ಭದ್ರತೆ"ಯ ನೆಪದಲ್ಲಿ ತೆಪ್ಪಗಿರಲು ಸಿದ್ಧರಿಲ್ಲ. ಮೋದಿ ಸರ್ಕಾರದ ಅಡಿಯಲ್ಲಿ ಇಂತಹ ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳುವುದು ಕೂಡ ಅಸಾಧ್ಯ.
ಕುರುಡು ಇಸ್ರೇಲ್ ಅಭಿಮಾನದ ಆಚೆಗೆ
ಭಾರತದ ಬಲಪಂಥೀಯ ಹಿಂದುತ್ವವಾದಿ ವರ್ಗವು ಇಸ್ರೇಲ್‌ಗೆ ನೀಡುತ್ತಿರುವ ಅತಿಯಾದ ಪ್ರಾಮುಖ್ಯತೆಯಲ್ಲಿ ಅರ್ಥವೇ ಇಲ್ಲ. ಶಸ್ತ್ರಾಸ್ತ್ರಗಳು ಮತ್ತು ಭಯೋತ್ಪಾದನಾ ವಿರೋಧಿ ಕ್ರಮಗಳ ವಿಷಯದಲ್ಲಿ ಇಸ್ರೇಲ್ ಭಾರತಕ್ಕೆ ನೀಡಬಲ್ಲ ಕೊಡುಗೆ ಬಹಳ ಅಲ್ಪ. ಭಾರತದ ವ್ಯೂಹಾತ್ಮಕ ಮತ್ತು ಭದ್ರತಾ ತಜ್ಞರು ತೆರೆದ ಕಣ್ಣುಗಳಿಂದ ವಾಸ್ತವ ಪರಿಸ್ಥಿತಿಯನ್ನು ಗಮನಿಸಿದರೆ, ಭಾರತ ಮತ್ತು ಇಸ್ರೇಲ್ ನಡುವಿನ ಗಾತ್ರದ ಅಸಮಾನತೆ ಎದ್ದು ಕಾಣುತ್ತದೆ. ಇಸ್ರೇಲ್ ರಕ್ಷಣಾ ತಂತ್ರಜ್ಞಾನದಲ್ಲಿ ಯಶಸ್ವಿ ರಾಷ್ಟ್ರವಾಗಿ ಕಾಣಿಸಿಕೊಳ್ಳಲು ಕಾರಣವೆಂದರೆ, ಅದು ಅನೇಕ ವಿಷಯಗಳಲ್ಲಿ ಅಸಮರ್ಥ ನೆರೆಹೊರೆಯವರಿಂದ ಸುತ್ತುವರಿದಿರುವುದು. ಅದರ ಸ್ಪೈವೇರ್ ತಂತ್ರಜ್ಞಾನಗಳು ಭಾರತದ ಭದ್ರತಾ ಅಗತ್ಯತೆ ಮತ್ತು ಸವಾಲುಗಳಿಗೆ ಹೆಚ್ಚಿನ ಪ್ರಯೋಜನಕಾರಿ ಏನೂ ಅಲ್ಲ.
ಭಾರತವು ಇಸ್ರೇಲ್ನೊಂದಿಗೆ ಸಮತೋಲಿತ ಸಂಬಂಧವನ್ನು ಕಾಯ್ದುಕೊಳ್ಳಬೇಕು. ಕುರುಡು ಅಭಿಮಾನದೊಂದಿಗೆ ಅತಿಯಾಗಿ ವರ್ತಿಸುವ ಅಗತ್ಯವಿಲ್ಲ. ಇಸ್ರೇಲ್ನ ಸಾಧನೆಗಳನ್ನು ಕಂಡು, ಅದರಲ್ಲೂ ವಿಶೇಷವಾಗಿ ಭದ್ರತಾ ಕ್ಷೇತ್ರದಲ್ಲಿನ ಸಾಧನೆಗಳನ್ನು ಕಂಡು ಭಾರತವು ಮಾರುಹೋಗಬಾರದು. ಇಸ್ರೇಲ್ ಬಗ್ಗೆ ಸಂಯಮದ ಮೌಲ್ಯಮಾಪನ ಮಾಡುವುದರಿಂದ ಭಾರತವು ಪಶ್ಚಿಮ ಏಷ್ಯಾದಲ್ಲಿ ಪ್ರಭಾವಶಾಲಿ ಪಾತ್ರವನ್ನು ವಹಿಸಲು ಸಾಧ್ಯವಾಗುತ್ತದೆ. ಪ್ಯಾಲೆಸ್ತೀನ್ ವಿಷಯದಲ್ಲಿ ತನ್ನ ನಿಲುವನ್ನು ಸಡಿಲಿಸುವಂತೆ ಇಸ್ರೇಲ್ ಮೇಲೆ ಒತ್ತಡ ಹೇರುವ ಸ್ಥಿತಿಯಲ್ಲಿ ಭಾರತವಿರಬೇಕು ಮತ್ತು ಇಸ್ರೇಲ್ ಜೊತೆ ಮುಕ್ತವಾಗಿ ಮಾತನಾಡಲು ಪ್ಯಾಲೆಸ್ತೀನಿಯರನ್ನು ಒಪ್ಪಿಸಬೇಕು.
ಪ್ಯಾಲೆಸ್ತೀನಿಯರು ಭಾರತವನ್ನು ನಂಬುತ್ತಾರೆ; ಭಾರತವು ಈ ಭಾಗದಲ್ಲಿ ನಿರ್ಣಾಯಕ ಶಕ್ತಿ ಎಂದು ಅರಿವಾದರೆ ಇಸ್ರೇಲ್ ಕೂಡ ಭಾರತವನ್ನು ನಂಬುತ್ತದೆ. ಇಂದು ಭಾರತವು ಇಸ್ರೇಲ್ ಅನ್ನು ಕಂಡು ಬೆರಗಾಗಿದೆ, ಆದರೆ ಇಸ್ರೇಲ್ ಭಾರತದ ಬಗ್ಗೆ ಅಷ್ಟೇನೂ ಪ್ರಭಾವಿತವಾಗಿಲ್ಲ. ಈ ಪ್ರದೇಶದಲ್ಲಿ ಭಾರತಕ್ಕೆ ಯಾವುದೇ ಮಹತ್ವದ ಪಾತ್ರವಿದೆ ಎಂದು ಇಸ್ರೇಲ್ ಭಾವಿಸುವುದಿಲ್ಲ. ಇಸ್ರೇಲ್ ತನ್ನ ಭದ್ರತೆಗಾಗಿ ಅಮೆರಿಕದ ಬೇಷರತ್ ಬೆಂಬಲವನ್ನು ಅವಲಂಬಿಸಿದೆ ಮತ್ತು ಅದು ಯುರೋಪ್ ಅಥವಾ ಭಾರತ ಮತ್ತು ಚೀನಾ ಸೇರಿದಂತೆ ಯಾವುದೇ ದೇಶವನ್ನು ಲೆಕ್ಕಿಸುವುದಿಲ್ಲ.
ಇಸ್ರೇಲ್ ನೀತಿಯ ಮರುಪರಿಶೀಲನೆ
ಭಾರತದ ಬಿಜೆಪಿ ಮತ್ತು ಹಿಂದೂ ಬಲಪಂಥೀಯರು ಇಸ್ರೇಲ್ ಮೇಲಿನ ತಮ್ಮ ವ್ಯಾಮೋಹವನ್ನು ಬಿಡಬೇಕು. ಮೋದಿ ಅವರು ಈಗಾಗಲೇ ಈ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ, ಅದರಲ್ಲೂ ವಿಶೇಷವಾಗಿ ಗಲ್ಫ್ ರಾಷ್ಟ್ರಗಳ ಜೊತೆಗೆ. ಸೌದಿ ಅರೇಬಿಯಾ, ಯುಎಇ ಮತ್ತು ಓಮನ್ನೊಂದಿಗೆ ಭಾರತ ಹೊಂದಿರುವ ಸಂಬಂಧವು ಆ ಪ್ರದೇಶದ ಬಗ್ಗೆ ಭಾರತ ಹೊಂದಿರುವ ವಾಸ್ತವಿಕ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಗಲ್ಫ್ ರಾಷ್ಟ್ರಗಳೊಂದಿಗೆ ನಿಕಟ ಸಂಬಂಧವನ್ನು ಬೆಳೆಸುವಲ್ಲಿ 'ಮುಸ್ಲಿಂ ಅಂಶ' ಯಾವುದೇ ಪಾತ್ರ ವಹಿಸಿಲ್ಲ; ಬದಲಾಗಿ ಇದು ಆರ್ಥಿಕ ವಾಸ್ತವಗಳನ್ನು ಆಧರಿಸಿದೆ. ಗಲ್ಫ್ ರಾಷ್ಟ್ರಗಳೊಂದಿಗಿನ ಆರ್ಥಿಕ ಸಂಬಂಧಕ್ಕೆ ಹೋಲಿಸಿದರೆ, ಇಸ್ರೇಲ್ನೊಂದಿಗಿನ ಭಾರತದ ವ್ಯಾಪಾರ ಮತ್ತು ಆರ್ಥಿಕ ಒಪ್ಪಂದಗಳು ಅತ್ಯಲ್ಪ ಮತ್ತು ಸಾಧಾರಣವಾಗಿವೆ.
ಮೋದಿ ಸರ್ಕಾರದ ನೀತಿಯಲ್ಲಿ ಇರುವ ಪ್ರಮುಖ ಲೋಪವೆಂದರೆ, ಜಿಹಾದಿ ಭಯೋತ್ಪಾದನೆಯನ್ನು ಎದುರಿಸಲು ಇಸ್ರೇಲ್ನ ಸಹಾಯ ಅತ್ಯಗತ್ಯ ಎಂಬ ಅದರ ಗ್ರಹಿಕೆ. ಇಲ್ಲಿ ಗಮನಿಸದ ಇನ್ನೊಂದು ಸಂಗತಿಯೆಂದರೆ, ಭಾರತವು ಎದುರಿಸುತ್ತಿರುವ ಮಟ್ಟದ ಜಿಹಾದಿ ಭಯೋತ್ಪಾದನೆಯನ್ನು ಇಸ್ರೇಲ್ ಎದುರಿಸುತ್ತಿಲ್ಲ. ಇಸ್ರೇಲ್ ಹಿಜ್ಬೊಲ್ಲಾ ಅಥವಾ ಹಮಾಸ್‌ನಿಂದ ಎದುರಿಸುತ್ತಿರುವ ಬೆದರಿಕೆಗಳು ತುಲನಾತ್ಮಕವಾಗಿ ಅಷ್ಟೇನೂ ಗಂಭೀರವಾದವುಗಳಲ್ಲ.
ತನ್ನ ತಾಂತ್ರಿಕ ಶ್ರೇಷ್ಠತೆಯಿಂದಾಗಿ ಜಿಹಾದಿ ಗುಂಪುಗಳು ಇಸ್ರೇಲ್ ಕಂಡರೆ ಹೆದರುತ್ತವೆ ಎಂದು ಭಾವಿಸುವುದು ದೊಡ್ಡ ತಪ್ಪು. ಜಾಗತಿಕ ಮಟ್ಟದಲ್ಲಿ ಅತ್ಯಂತ ಸಣ್ಣ ಶಕ್ತಿಗಳಾಗಿರುವ ಈ ಜಿಹಾದಿ ಗುಂಪುಗಳು ವಾಸ್ತವವಾಗಿ ಅಮೆರಿಕದ ವ್ಯಾಪ್ತಿಯ ಬಗ್ಗೆ ಎಚ್ಚರಿಕೆಯಿಂದಿವೆ. ಇಸ್ರೇಲ್ಗೆ ಅಮೆರಿಕವೇ ರಕ್ಷಾಕವಚ ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

