ಕುಟಿಲ ಪ್ರಭುತ್ವಗಳನು ಉರುಳಿಸಿದ ಜನದಂಗೆಗಳು ಹುಟ್ಟುಹಾಕಿದ ಜಟಿಲ ಪ್ರಶ್ನೆಗಳು
x
ನೇಪಾಳದಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರು ಹಠಾತ್ ರಾಜೀನಾಮೆ ನೀಡಿ ನಿರ್ಗಮಿಸಿದ ಬಳಿಕ ಉಂಟಾದ ರಾಜಕೀಯ ಅನಿಶ್ಚಿತತೆ ಕೊನೆಗೊಂಡು ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕಾರ್ಕಿ ಅವರ ನೇತೃತ್ವದ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ರಾಜಧಾನಿ ಕಠ್ಮಂಡುವಿನಲ್ಲಿ ಕಟ್ಟೆಚ್ಚರ ವಹಿಸಿರುವ ಭದ್ರತಾ ಸಿಬ್ಬಂದಿ.

ಕುಟಿಲ ಪ್ರಭುತ್ವಗಳನು ಉರುಳಿಸಿದ ಜನದಂಗೆಗಳು ಹುಟ್ಟುಹಾಕಿದ ಜಟಿಲ ಪ್ರಶ್ನೆಗಳು

(ರಾಜಕೀಯ ಆಂದೋಲನ, ಜನಕ್ರಾಂತಿ, ದಂಗೆಗಳು ಮತ್ತು ರಾಜಕೀಯ ಅಧಿಕಾರದ ಸ್ವರೂಪದಲ್ಲಿ ಸಾಮಾಜಿಕ ಮಾಧ್ಯಮವು ಹೊಸ ಅಧ್ಯಾಯವನ್ನೇ ಬರೆದಂತೆ ಕಾಣುತ್ತಿದೆ. ಭೂಮಿ ಮೇಲಿನ ಯಾವುದೇ ಸರ್ಕಾರ ಇದಕ್ಕೆ ಗುರಿಯಾಗಬಹುದು. ಹಾಗಾಗಿ ಇಂತಹ ಕ್ರಾಂತಿಗೆ ನಿರ್ಣಾಯಕ ಹಂತವಾದರೂ ಯಾವುದು ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಕಷ್ಟವಾಗಿದೆ.)


Click the Play button to hear this message in audio format

ಮೊನ್ನೆ ಮೊನ್ನೆ ನೇಪಾಳದಲ್ಲಿ ತಾರಕ ತಲುಪಿದ ಆಂತರಿಕ ಕಲಹ ಮತ್ತು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತದ ನೆರೆಹೊರೆಯ ಎರಡು ರಾಷ್ಟ್ರಗಳಲ್ಲಿ ಹುಟ್ಟಿಕೊಂಡ ದಂಗೆಗಳು ಸಹಜವಾಗಿ ಪುಂಖಾನುಪುಂಖ ಪ್ರಶ್ನೆಗಳನ್ನು ನಮ್ಮ ಮಂದೆ ಮಂಡಿಸಿವೆ. ಕೆಲವು ಪ್ರಕರಣಗಳಲ್ಲಿ ಒಳಸಂಚಿನ ಸಿದ್ಧಾಂತಗಳಿರುವುದನ್ನು ಅಲ್ಲಗಳೆಯುವಂತಿಲ್ಲ. ಅಷ್ಟಕ್ಕೂ ಈ ಜನಪ್ರಿಯ ದಂಗೆಗಳ ಹಿಂದೆ ಯಾರಿದ್ದಾರೆ? ಯಾಕೆ ಯಾವೊಬ್ಬ ನಾಯಕನೂ ಇವುಗಳ ಹಿಂದೆ ಕಾಣಿಸುತ್ತಿಲ್ಲ? ಅವು ನಿಜಕ್ಕೂ ಆಕಸ್ಮಿಕವಾದುವೇ? ಇದು ಮುಂದೊಂದು ದಿನ ಭಾರತದಲ್ಲಿಯೂ ಸಂಭವಿಸಬಹುದೇ... ಇತ್ಯಾದಿ ಇತ್ಯಾದಿ.

ಈ ದಂಗೆಗಳು ಬಹುತೇಕ ಪೂರ್ವಯೋಜಿತವಾಗಿರುವಂತೆ ಕಂಡುಬಂದವು. ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಅಂದಿನ ಸರ್ಕಾರಗಳು, ಭದ್ರತಾ ಪಡೆಗಳು ಮತ್ತು ಗುಪ್ತಚರ ಸೇವೆಗಳು ಗಾಢ ನಿದ್ದೆಯಲ್ಲಿದ್ದವು. ತಾವೆಂದೆಂದಿಗೂ ಅಜೇಯವೆಂದು ಭಾವಿಸಿದ್ದ ಸರ್ಕಾರಿ ವ್ಯವಸ್ಥೆಗಳು ಜನ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿರುವಂತೆ ಒಂದೇ ಒಂದು ರಾತ್ರಿಯಲ್ಲಿ ಧರಾಶಾಹಿಯಾದವು. ಚುನಾಯಿತರೋ ಅಥವಾ ಅಲ್ಲವೋ ಈ ರಾಷ್ಟ್ರಗಳ ಪ್ರಧಾನಿಗಳು ಮತ್ತು ಅಧ್ಯಕ್ಷರು ತರಗೆಲೆಗಳಂತಾದರು. ನಿಜಕ್ಕೂ ಅವೆಲ್ಲವೂ ಹಾಲಿವುಡ್ಡಿಗಾಗಿ ಹೆಣೆದ ಚಿತ್ರಕಥೆಗಳಂತಿದ್ದವು.

ಒಂದೂವರೆ ದಶಕದ ಸಾಮಾಜಿಕ ಮಾಧ್ಯಮದ ಹಿನ್ನೆಲೆ

ಇವೆಲ್ಲವನ್ನೂ ಹಿಂದೆಯೂ ಹೇಳಿ ಸವಕಲಾಗಿದ್ದರೂ ಕೂಡ ಇಡೀ ಪ್ರಕರಣದಲ್ಲಿ ‘ಐರಾವತ’ನಂತೆ ಕೆಲಸ ಮಾಡಿದ್ದು ಸಾಮಾಜಿಕ ಮಾಧ್ಯಮ. ಮೇಲೆ ಪ್ರಸ್ತಾಪ ಮಾಡಿದ ಮೂರೂ ದಂಗೆಗಳಲ್ಲಿ ಸಂಪರ್ಕದ ಕೊಂಡಿಯಾಗಿದ್ದುದು ಅದರ ಎಳೆಗಳೇ. ಈ ಸಾಮಾಜಿಕ ಮಾಧ್ಯಮದ ಪಾತ್ರವು ದಕ್ಷಿಣ ಏಷ್ಯಾದ ಇತ್ತೀಚಿನ ಮೂರು ದಂಗೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ಹದಿನೈದು ವರ್ಷಗಳ ಹಿಂದೆ ಆಗಿನ್ನೂ ಪ್ರವರ್ಧಮಾನಕ್ಕೆ ಬರುತ್ತಿದ್ದ ಟ್ಯೂನಿಷಿಯಾದಲ್ಲಿಯೂ ಕಾಣಿಸಿಕೊಂಡಿತ್ತು. 2010-11ರಲ್ಲಿ ಅರಬ್ ಜಗತ್ತಿನಲ್ಲಿ ಸಂಪೂರ್ಣ ದಂಗೆಗೆ ಪ್ರಚೋದನೆ ಸಿಕ್ಕಿದ್ದು ಫೇಸ್-ಬುಕ್ ಎಂಬ ಸಾಮಾಜಿಕ ಮಾಧ್ಯಮದಿಂದ.

20910ರ ಡಿಸೆಂಬರ್ 17ರಂದು ತರಕಾರಿ ವ್ಯಾಪಾರಿ ಮೊಹಮದ್ ಬೌಜಿಜಿ ಪೊಲೀಸ್ ಚಿತ್ರಹಿಂಸೆಯನ್ನು ಪ್ರತಿಭಟಿಸಿ ಆತ್ಮಾಹುತಿಗೆ ಒಳಗಾದರು. ಅದು ನಡೆದಿದ್ದು ಸಿದಿ ಬೌಜಿದ್ ಎಂಬ ಉಪನಗರದಲ್ಲಿ. ಆರಂಭದಲ್ಲಿ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಯಾಕೆಂದರೆ ಇಪ್ಪತ್ತನಾಲ್ಕು ವರ್ಷಗಳ ಕಾಲ ಅಧಿಕಾರ ನಡೆಸಿದ ಸರ್ವಾಧಿಕಾರಿ ಝಿನೆ ಎಲ್ ಅಬಿದೈನ್ ಬೆನ್ ಅಲಿ ಆಳ್ವಿಕೆಯಲ್ಲಿ ರಾಜಕೀಯ ವ್ಯವಸ್ಥೆ ಇದ್ದುದೇ ಹಾಗೆ.

ಒಂದು ಯುವಪಡೆ ಅಥವಾ ಝೆನ್-ಎಕ್ಸ್ ಎಂಬ ಹೆಸರಿನ ಗುಂಪು ಈ ಘಟನೆಯನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರಿಸಿ ಫೇಸ್-ಬುಕ್ಕಿನಲ್ಲಿ ಹರಿಯಬಿಟ್ಟಿತು. ಅಸಲಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಅರಿವೇ ಅವರಿಗೆ ಇರಲಿಲ್ಲ.

ತಿರುಗಿಬಿದ್ದತು ನೋಡಿ ಟ್ಯೂನಿಷಿಯಾ

ಕ್ರಾಂತಿ ಮಾಡುವುದು ಅವರ ಉದ್ದೇಶವೇನೂ ಆಗಿರಲಿಲ್ಲ. ಆದರೆ ಅಂತಹುದೊಂದು ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ಯೋಗ್ಯವಾಗಿದೆ ಎಂದು ಅನಿಸಿದ್ದರಿಂದ ಅವರು ಶೇರ್ ಮಾಡಿದರು. ಆ ವಿಡಿಯೋಗೆ ಜನ ಸ್ಪಂದಿಸುತ್ತಾರೆ ಎಂಬ ಊಹೆಯೂ ಅವರಿಗೆ ಇರಲಿಲ್ಲ. ಆ ಘಟನೆ ಅನ್ಯಾಯಕ್ಕೆ ಸಾಕ್ಷಿ ಹೇಳುವಂತಿತ್ತು ಮತ್ತು ಮನಕಲಕುವಂತಿತ್ತು. ಆ ಹೊತ್ತಿಗೆ ಸರ್ವಾಧಿಕಾರಿ ವ್ಯವಸ್ಥೆಯಿಂದ ಬೇಸತ್ತಿದ್ದ ಜನಕ್ಕೆ ಅಷ್ಟು ಸಾಕಾಗಿತ್ತು. ದೇಶದ ಇತರ ಭಾಗಗಳ ಜನರು ಇದರ ವಿರುದ್ಧ ಪ್ರತಿಭಟನೆಗೆ ನಿಂತರು.

ಇದೇ ಅಭಿಪ್ರಾಯವನ್ನು ಹಂಚಿಕೊಂಡವರ ಸಂಖ್ಯೆ ನೂರಾಯಿತು, ಆ ಬಳಿಕ ಸಾವಿರವಾಯಿತು. ಅವರೆಲ್ಲರೂ ಪ್ರತಿಭಟಿಸಲು ಬೀದಿಗಿಳಿದರು. ಅದ್ಯಾವುದೂ ಯೋಜಿತ ಕೃತ್ಯಗಳಾಗಿರಲಿಲ್ಲ. ಆದರೂ ದಿನ ಕಳೆದಂತೆ ಪ್ರತಿಭಟನೆಗಳು ವ್ಯಾಪಕವಾಗಿ ಹಬ್ಬಲು ಶುರುವಾದವು. ಯಾವತ್ತೂ ಬಿಗಿ ಭದ್ರತೆಯಲ್ಲಿ ನಡೆಯುತ್ತಿದ್ದ ಟ್ಯೂನಿಷಿಯಾ ಸರ್ಕಾರ ಮಾತ್ರ ಇದನ್ನು ನಿರೀಕ್ಷಿಸಿರಲೇ ಇಲ್ಲ. ಭದ್ರತಾ ಪಡೆಗಳು ಸೇರಿ ಎಲ್ಲವನ್ನೂ ನಿಯಂತ್ರಣವನ್ನು ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಪರಿಸ್ಥಿತಿ ಕೈಮೀರಿ ಹೋಗಿತ್ತು.

ಪ್ರತಿಭಟನೆಗಳು ಕಾಡ್ಗಿಚ್ಚಿನ ಸ್ವರೂಪ ಪಡೆದವು. ಒಂದು ಪಟ್ಟಣದಲ್ಲಿ, ಒಂದು ಸಿಟಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ, ಆಕ್ರೋಶ ಕಂಡು ಉಳಿದ ನಗರಗಳು ಪ್ರೇರಿತವಾದವು. ಅವರೂ ರಟ್ಟೆಗೆ ಧೈರ್ಯ ತಂದುಕೊಂಡರು. ಜನರ ಹೇಗೆ ಬೀದಿಗೆ ನುಗ್ಗಿ ಬಂದರೆಂದರೆ ಅಕ್ಷರಶಃ ಸಾಗರ ಸ್ವರೂಪಿಯಾಗಿ. ಜನರಲ್ಲಿ ಮಡುಗಟ್ಟಿದ್ದ ಆಕ್ರೋಶ ಪ್ರವಾಹದ ರೂಪದಲ್ಲಿ ಮುನ್ನುಗ್ಗಿ ಬಂದವು. ಪ್ರಭುತ್ವ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಚಿತ್ರಣವೇ ಬದಲಾಗಿ ಹೋಗಿತ್ತು.

ಇಲ್ಲಿ ಜನರೇ ನಾಯಕರು

ಸಾಂಪ್ರದಾಯಿಕ ಪ್ರತಿಭಟನೆಗಳಾದರೆ ಅಲ್ಲೊಂದು ರಾಜಕೀಯ ಪಕ್ಷವಿರುತ್ತದೆ, ನಾಯಕರಿರುತ್ತಾರೆ, ಸಂಘಟನೆಗಳಿರುತ್ತವೆ. ಸರ್ಕಾರ ಅಂತಹ ನಾಯಕರನ್ನು ತಕ್ಷಣ ಗುರುತಿಸಿ ಅವರೊಂದಿಗೆ ಮಾತುಕತೆ ನಡೆಸುತ್ತದೆ. ಚಳವಳಿಯನ್ನು ಕೈಬಿಡುವಂತೆ ಮನವೊಲಿಸುತ್ತದೆ. ಅದರಲ್ಲಿ ವಿನಂತಿ, ಬೆದರಿಕೆ ಸೇರಿದಂತೆ ಸಾಧ್ಯವಿರುವ ಎಲ್ಲ ತಂತ್ರಗಳನ್ನೂ ಬಳಸಲಾಗುತ್ತದೆ.

ಆದರೆ ಟ್ಯೂನಿಷಿಯಾ ಪ್ರಕರಣದಲ್ಲಿ ಹಾಗಾಗಲಿಲ್ಲ. ಅಲ್ಲಿ ಯಾವುದೇ ನಾಯಕರಿರಲಿಲ್ಲ. ಜನರೇ ನಾಯಕರಾದಾಗ ಸರ್ಕಾರ ಯಾರೊಂದಿಗೆ ಮಾತನಾಡುತ್ತದೆ? ಅಲ್ಲಿ ಎಲ್ಲರೂ ಇದ್ದರು, ಆದರೆ ಮಾತನಾಡಲು ಯಾರೂ ಇರಲಿಲ್ಲ. ಈ ಪ್ರತಿಭಟನೆಗಳು ಪ್ರವಾಹವೇ ನುಗ್ಗಿ ಬಂದಂತೆ ಇದ್ದವು. ಒಂದು ಸಹಜ ಪ್ರವಾಹ ಆಸ್ತಿ-ಪಾಸ್ತಿ, ಮೂಲ ಸೌಕರ್ಯಗಳು, ವಾಹನಗಳು, ಜನ-ಜಾನುವಾರು ಎಲ್ಲವನ್ನೂ ಕೊಚ್ಚಿಕೊಂಡು ಸಾಗುವಂತೆ-ಅದಕ್ಕೆ ಯಾವ ನಿಯಂತ್ರಣವೂ ಇರಲಿಲ್ಲ. ಹಾಗೆ ಏಕಾಏಕಿ ಸೃಷ್ಟಿಯಾದ ಅಂತಹುದೊಂದು ಪ್ರವಾಹವು 24 ವರ್ಷಗಳಿಂದ ಗಟ್ಟಿಯಾಗಿ ತಳವೂರಿದ್ದ ಬೆನ್ ಅಲಿ ಸರ್ಕಾರವನ್ನು ಕೊಚ್ಚಿಕೊಂಡು ಹೋಯಿತು.

ಮುಬಾರಕ್ ಮೂರು ದಶಕಗಳ ಆಡಳಿತಕ್ಕೆ ಕೊನೆ

ಟ್ಯೂನಿಷಿಯಾ ದಂಗೆಯಿಂದ ಪ್ರೇರಣೆ ಪಡೆದಿದ್ದು ನೆರೆಯ ಈಜಿಪ್ಟ್. ಆ ರಾಷ್ಟ್ರದ ರಾಜಧಾನಿ ಕೈರೊದಲ್ಲಿ 26 ವರ್ಷದ ಯುವ ಕಾರ್ಯಕರ್ತೆ ಆಸ್ಮಾ ಮಹಫೂಜ್ ಅವರು ಮುಬಾರಕ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು 2011ರ ಜನವರಿ 25ರಂದು ಕರೆ ನೀಡಿದರು. ರಾಷ್ಟ್ರೀಯ ಪೊಲೀಸ್ ದಿನಕ್ಕೂ ಕೆಲವು ದಿನ ಮೊದಲು ನಗರದ ತಹ್ರೀರ್ ಚೌಕದಲ್ಲಿ ಸೇರುವಂತೆ ತನ್ನ ಸ್ನೇಹಿತರಿಗೆಲ್ಲ ಫೇಸ್-ಬುಕ್ ನಲ್ಲಿ ಸಂದೇಶ ಕಳುಹಿಸಿದರು. ಆಕೆಗೇ ಅಚ್ಚರಿಯಾಗುವಂತೆ ನೂರಾರು ಜನ ಜಮಾಯಿಸಿದರು. ಇನ್ನಷ್ಟು-ಮತ್ತಷ್ಟು ಜನ ಬರುತ್ತಲೇ ಇದ್ದರು. ಆಕೆಯ ಫೇಸ್ಬುಕ್ ಪೋಸ್ಟ್ ನ್ನು ನೂರಾರು ಮಂದಿ ಹಂಚಿಕೆ-ಮರುಹಂಚಿಕೆ ಮಾಡಿದ್ದರು. ಅದು ಇದ್ದಕ್ಕಿದ್ದಂತೆ ವೈರಲ್ ಆಯಿತು.

ಮೂರು ದಶಕಗಳಿಗೂ ಹೆಚ್ಚು ಕಾಲ ಅಧಿಕಾರಕ್ಕೆ ಅಂಟಿಕೊಂಡು ಕುಳಿತವರು ಆ ದೇಶದ ಅಧ್ಯಕ್ಷ ಹೋಸ್ನಿ ಮುಬಾರಕ್. ಯಾವುದೇ ವಿರೋಧ ಪಕ್ಷಗಳಿಗೆ ದಯ-ದಾಕ್ಷಿಣ್ಯ ತೋರಿಸಿದವರಲ್ಲ. ಚುನಾವಣೆ ವಂಚನೆಯ ಆಖಾಡವಾಗಿತ್ತು. ಜನ-ಸಾಮಾನ್ಯರ ಸ್ಥಿತಿಯಂತೂ ಅಸಹನೀಯವಾಗಿತ್ತು. ಯಾವಾಗ ಯುವಕರು ತಹಿರ್ ಚೌಕದಲ್ಲಿ ಸೇರಿದರೋ ಅಲ್ಲಿ ಅವರೆಲ್ಲರ ಹತಾಶೆ-ಅಸಮಾಧಾನ ಒಮ್ಮೆಗೇ ಹೊರಬಂದಿತ್ತು.

ಅಲ್ಲಿ ಸೇರಿದ್ದ ಜನಸ್ತೋಮವೇ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಕಂಡುಕೊಂಡಿದ್ದರು. ಇನ್ನು ಹಿಂದಿರುಗಿ ನೋಡುವ ಮಾತೇ ಇರಲಿಲ್ಲ. ಅಲ್ಲಿ ಘಟಿಸಿದ್ದೆಲ್ಲವನ್ನೂ ಫೇಸ್-ಬುಕ್ ನಲ್ಲಿ ಹಂಚಿಕೊಳ್ಳಲು ಆರಂಭಿಸಿದರು. ಅದು ಅನೇಕರಿಗೆ ಪ್ರೇರಣೆ ನೀಡಿತು. ಜನ ಸಾಗರದಂತೆ ಬಂದರು. ಟ್ಯೂನಿಷಿಯಾದಲ್ಲಿ ಏನು ಸಂಭವಿಸಿತೋ ಅದು ಇಲ್ಲಿಯೂ ಘಟಿಸಿತು. ಮೂವತ್ತು ವರ್ಷಗಳಿಂದ ಬೇರು ಬಿಟ್ಟಿದ್ದ ಸರ್ಕಾರ ಕೆಲವೇ ಕೆಲವು ದಿನಗಳಲ್ಲಿ ತತ್ತರಿಸಿಹೋಯಿತು. ಮುಬಾರಕ್ ಜೀವ ಭಯದಿಂದ ದೇಶ ಬಿಟ್ಟು ಪಲಾಯನ ಮಾಡಿದರು.

ಸಿರಿಯಾದಲ್ಲಿಯೂ ಇಂತಹುದೊಂದು ದಂಗೆ ಬಹಳ ಸದ್ದು ಮಾಡಿತ್ತು. ಅಲ್ಲಿಯೂ ಕೂಡ ಮಹತ್ವದ ಪಾತ್ರ ವಹಿಸಿದ್ದು ಸಾಮಾಜಿಕ ಮಾಧ್ಯಮಗಳು ಎಂಬುದನ್ನು ಮರೆಯಬಾರದು. ದಾರಾ ಪಟ್ಟಣದಲ್ಲಿ ಒಂದು ಗುಂಪಿಗೆ ಸೇರಿದ ಶಾಲಾ ಮಕ್ಕಳನ್ನು ಬಂಧಿಸಿ, ಕಿರುಕುಳ ನೀಡಿದ ಒಂದು ಸುದ್ದಿ ದೇಶಾದ್ಯಂತ ಕ್ಷಣಮಾತ್ರದಲ್ಲಿ ಹಬ್ಬಿದ್ದು ಇದಕ್ಕೆ ಕಾರಣವಾಗಿತ್ತು. ಈ ಮಕ್ಕಳು ಪಟ್ಟಣದ ಸಾರ್ವಜನಿಕ ಗೋಡೆಗಳ ಮೇಲೆ ಸರ್ಕಾರಿ ವಿರೋಧಿ ಬರಹಗಳನ್ನು ಬರೆಯುತ್ತಿದ್ದರು ಎಂಬುದಷ್ಟೇ ಆರೋಪವಾಗಿತ್ತು.

ಮಕ್ಕಳನ್ನು ಚಿತ್ರಹಿಂಸೆಗೆ ಗುರಿಪಡಿಸಿದ್ದಕ್ಕೆ ವ್ಯಾಪಕ ಪ್ರತಿಭಟನೆಗಳು ಮೊದಲ್ಗೊಂಡವು. ಭದ್ರತಾ ಪಡೆಗಳು ಎಲ್ಲರನ್ನೂ ನಿರ್ದಯವಾಗಿ ಹತ್ತಿಕ್ಕುವ ಪ್ರಯತ್ನ ಮಾಡಿತು. ಇದು ಒಂದು ಸಣ್ಣ ಪ್ರತಿಭಟನೆಯನ್ನು ಆಂತರಿಕ ಯುದ್ಧವಾಗಿ ಪರಿವರ್ತಿಸಿತು. ಅದು ವಿಸ್ತರಿಸಿದ್ದು ಒಂದು ದಶಕಕ್ಕೂ ಹೆಚ್ಚು ಕಾಲ. ಅಂತಿಮವಾಗಿ ಅಧ್ಯಕ್ಷ ಬಶರ್ ಅಲ್-ಅಸದ್ ಮತ್ತು ಅವರ ಸರ್ಕಾರವನ್ನು ಪದಚ್ಯುತಗೊಳಿಸಿತು. ದೇಶದ ಅಧಿಕಾರಶಾಹಿ ಜನರ ಪ್ರತಿಭಟನೆಯ ಮುಂದೆ ಮಂಡಿಯೂರಿತು.

ದಕ್ಷಿಣ ಏಷ್ಯಾದಲ್ಲಿ ಉರುಳಿ ಬಿದ್ದ ಪ್ರಭುತ್ವಗಳು

ಇನ್ನು ಶ್ರೀಲಂಕಾದಲ್ಲಿ ಆಗಿದ್ದೂ ಇದೇ ಪುನರಾವರ್ತನೆ. 2022ರ ಆರ್ಥಿಕ ಬಿಕ್ಕಟ್ಟಿನಿಂದ ದ್ವೀಪ ರಾಷ್ಟ್ರದ ಜನ ಕಂಗೆಟ್ಟು ಹೋಗಿದ್ದರು. ಈ ಬಿಕ್ಕಟ್ಟು ಅಂತರ್ಜಾಲದಲ್ಲಿ ವ್ಯಾಪಕವಾಗಿ ಹರಿದಾಡಿತು. ತಕ್ಷಣದ ಪ್ರತಿಕ್ರಿಯೆಯಾಗಿ ಸರ್ಕಾರ ಸಾಮಾಜಿಕ ಮಾಧ್ಯಮಗಳನ್ನು ಬಹಿಷ್ಕರಿಸಿತು. ಕೇವಲ ಒಂದೇ ದಿನ, ಆಗಬೇಕಾದ ಹಾನಿ ನಡೆದೇ ಹೋಗಿತ್ತು. ದೇಶದ ಉದ್ದಗಲಕ್ಕೂ ಪ್ರತಿಭಟನೆಗಳು ಎಗ್ಗಿಲ್ಲದೇ ನಡೆದವು. ಅಂತಿಮವಾಗಿ ರಾಜಪಕ್ಷೆ ಸರ್ಕಾರ ಪತನಹೊಂದಿತು.

ಆ ಬಳಿಕ ನಡೆದಿದ್ದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿ. ಪ್ರತಿಭಟನಕಾರರನ್ನು ಹತ್ತಿಕ್ಕಲು ಮಾಡಿದ ಪ್ರಯತ್ನಗಳು ಅವರಿಗೆ ಮುಳುವಾಯಿತು. ಅಬು ಸಯದ್ ಎಂಬ ವಿದ್ಯಾರ್ಥಿಯನ್ನು ಆತನ ಯೂನಿವರ್ಸಿಟಿ ಮುಂದೆಯೇ ಗುಂಡಿಟ್ಟು ಸಾಯಿಸಲಾಯಿತು. ಸಾಮಾಜಿಕ ಮಾಧ್ಯಮದಲ್ಲಿ ಹರಡಿದ ಆ ಘಟನೆಯ ವಿಡಿಯೋ ಅಕ್ಷರಶಃ ಬೆಂಕಿಯನ್ನೇ ಉಗುಳಿತು. ಜನ ಸಾಗರೋಪಾದಿಯಲ್ಲಿ ಬೀದಿಗಿಳಿದು ಬಂದರು. ಹಸೀನಾ ಅಧಿಕಾರ ತೊರೆದಿದ್ದು ಮಾತ್ರವಲ್ಲದೆ ಹೆಲಿಕಾಪ್ಟರ್ ಹತ್ತಿ ದೇಶವನ್ನೇ ತೊರೆದರು.

ಇತ್ತೀಚಿನ ತಾಜಾ ತಾಜಾ ಸುದ್ದಿ ಎಂದರೆ ನೇಪಾಳದ್ದು. ಇಲ್ಲಿನ ಆಳುವವರ ಮಕ್ಕಳು ಅರ್ಥಾತ್ ‘ನೆಪೊ ಕಿಡ್ಸ್’ ಸಾಮಾಜಿಕ ಮಾಧ್ಯಮದಲ್ಲಿ ತಾವು ಅಕ್ರಮವಾಗಿ ಗಳಿಸಿದ ಸಂಪತ್ತನ್ನು ಅಸಹ್ಯವಾಗಿ ಪ್ರದರ್ಶನಕ್ಕಿಟ್ಟಿದ್ದು ಸ್ವಯಂ ಗೋಲು ಹೊಡೆಯಲು ಕಾರಣವಾಯಿತು. ಹತಾಶೆಗೆ ಒಳಗಾದ ಕೆ.ಪಿ.ಶರ್ಮಾ ಓಲಿ ಸರ್ಕಾರ ಸಾಮಾಜಿಕ ಮಾಧ್ಯಮವನ್ನು ಬಹಿಷ್ಕರಿಸಿತು. ಇದು ಅವರಿಗೆ ತಿರುಗುಬಾಣವಾಯಿತು. ಆವರ ವಿರುದ್ಧ ಹುಟ್ಟಿಕೊಂಡಿದ್ದು ವ್ಯಾಪಕ ಪ್ರತಿಭಟನೆ.

ರಾಜಕೀಯ ಆಂದೋಲನ, ಜನಕ್ರಾಂತಿ, ದಂಗೆಗಳು ಮತ್ತು ರಾಜಕೀಯ ಅಧಿಕಾರದ ಸ್ವರೂಪದಲ್ಲಿ ಸಾಮಾಜಿಕ ಮಾಧ್ಯಮವು ಹೊಸ ಅಧ್ಯಾಯವನ್ನೇ ಬರೆದಂತೆ ಕಾಣುತ್ತಿದೆ. ಇದು ಬಾಟಲಿಯಿಂದ ಹೊರಬಂದ ಬೂತದಂತೆ ಗೋಚರಿಸುತ್ತಿದೆ. ಈ ಹೊಚ್ಚಹೊಸ ವಾಸ್ತವತೆಯನ್ನು ಒಳಗೊಳ್ಳಲು ಶಾಸ್ತ್ರೀಯ ರಾಜಕೀಯ ಸಿದ್ಧಾಂತವನ್ನು ಮರುಪರಿಶೀಲಿಸಬೇಕಾದ ಅಗತ್ಯ ಎದುರಾಗಿದೆ. ಈ ಭೂಮಿ ಮೇಲಿನ ಯಾವುದೇ ಸರ್ಕಾರ ಇದಕ್ಕೆ ಗುರಿಯಾಗಬಹುದು. ಹಾಗಾಗಿ ಇಂತಹ ಕ್ರಾಂತಿಗೆ ನಿರ್ಣಾಯಕ ಹಂತವಾದರೂ ಯಾವುದು ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಕಷ್ಟವಾಗಿದೆ ಮತ್ತು ಇದೇ ಸರ್ಕಾರಗಳ ಪಾಲಿನ ಸವಾಲಾಗಿದೆ.

ಬಂಡಾಯದ ಇನ್ನೊಂದು ಮುಖ

ಆದರೆ ಈ ಎಲ್ಲ ಸಾಮಾಜಿಕ ಮಾಧ್ಯಮಗಳಿಂದ ಪ್ರೇರಿತವಾದ ದಂಗೆಗಳ ಇನ್ನೊಂದು ಮುಖವನ್ನೂ ಅರ್ಥಮಾಡಿಕೊಳ್ಳಬೇಕು. ಒಮ್ಮೆ ಅಧಿಕಾರದಲ್ಲಿರುವ ಸರ್ಕಾರ ನಿರ್ಗಮಿಸಿದ ಬಳಿಕ ಏನು? ನಿಜವಾದ ಗೊಂದಲ ಉಂಟುಮಾಡುವುದು ಈ ಸಂಗತಿ.

ಅರಬ್ ಜಗತ್ತಿನ ಉದಾಹರಣೆಯನ್ನೇ ಪರಿಗಣಿಸುವುದಾದರೆ ಪ್ರತಿಭಟನೆಗಳು ಬಿಗಿ ಮುಷ್ಠಿಯಲ್ಲಿ ಬಂಧಿಸಲ್ಪಟ್ಟ ಸರ್ವಾಧಿಕಾರಿ ರಾಜಕೀಯ ರಚನೆಗಳನ್ನೇ ಮುರಿದು ಅನಿರೀಕ್ಷಿತ ಪರಿಣಾಮಗಳಿಗೆ ನಾಂದಿ ಹಾಡಿತು. ಸಿರಿಯಾದಲ್ಲಿ ಸುದೀರ್ಘ ಕಾಲದಿಂದ ನಡೆಯುತ್ತಿದ್ದ ಅಂತರ್ಯುದ್ಧ ಮತ್ತು ಲಿಬಿಯಾದಲ್ಲಿ ಹಿಂಸಾಲೇಪಿತ ಅರಾಜಕತೆಯು ಪ್ರತಿಭಟನೆಯ ಕಿಡಿ ಹೊತ್ತಿಸಿತು. ಈಜಿಪ್ಟ್ ಪ್ರಕರಣದಲ್ಲಿ ಅಲ್ಪ ಕಾಲದ ನಿಜವಾದ ಮುಕ್ತ ರಾಜಕೀಯದ ಬಳಿಕ ಒಂದು ಸೇನಾಕ್ರಾಂತಿಯು ದಂಗೆಯ ಫಲಿತಾಂಶವನ್ನು ಹಿಮ್ಮೆಟ್ಟಿಸಿತು. ಅದು ಪ್ರಜಾಪ್ರಭುತ್ವದ ಮುಖವಾಡದ ಅಡಿಯಲ್ಲಿ ಸರ್ವಾಧಿಕಾರವಾಗಿ ಮಾರ್ಪಟ್ಟಿತು. ಅದೇನು ಹಿಂದಿನ ಮುಬಾರಕ್ ಆಡಳಿಕ್ಕಿಂತ ಭಿನ್ನವಾಗಿರಲಿಲ್ಲ.

ಇನ್ನು ಶ್ರೀಲಂಕಾದ ವಿಚಾರದಲ್ಲಿ, ಸರ್ಕಾರದಲ್ಲಿ ಉಂಟಾದ ಬದಲಾವಣೆಯೊಂದೇ ಏಕೈಕ ಫಲಿತಾಂಶವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿದುಕೊಂಡಿತು. ಬಾಂಗ್ಲಾದೇಶದಲ್ಲಿ ಇದು ಇನ್ನೂ ಚಾಲ್ತಿಯಲ್ಲಿದೆ. ವಿದ್ಯಾರ್ಥಿ ನಾಯಕರು ಸಂವಿಧಾನವೂ ಸೇರಿದಂತೆ ಇನ್ನಷ್ಟು ಮಹತ್ವದ ಬದಲಾವಣೆಗಳಿಗಾಗಿ ಹಕ್ಕೊತ್ತಾಯ ಮಾಡುತ್ತಿದ್ದಾರೆ. ಇನ್ನು ನೇಪಾಳದಲ್ಲಿ, ಆರಂಭಿಕ ಭಯ-ಆತಂಕದ ಬಳಿಕ ಹೊಸ ಸರ್ಕಾರ ಸ್ಥಿರವಾಗಿ ನಿಂತಂತೆ ಕಾಣುತ್ತಿದೆ. ಸಂವಿಧಾನ ಸ್ಥಿರವಾಗಿದೆ. ಆದರೆ ತಿದ್ದುಪಡಿಗಳನ್ನು ತಳ್ಳಿಹಾಕುವಂತಿಲ್ಲ.

Read More
Next Story