ಸಂಧಾನಕಾರ ಪಾತ್ರದಲ್ಲಿ ಕತಾರ್, ಚೀನಾ, ನಾರ್ವೆ ಯಶಸ್ಸು: ‘ವಿಶ್ವಗುರು’ವಿನ ಪಾಲಿಗೆ ಇನ್ನೂ ಮರೀಚಿಕೆ
x

ಸಂಧಾನಕಾರ ಪಾತ್ರದಲ್ಲಿ ಕತಾರ್, ಚೀನಾ, ನಾರ್ವೆ ಯಶಸ್ಸು: ‘ವಿಶ್ವಗುರು’ವಿನ ಪಾಲಿಗೆ ಇನ್ನೂ ಮರೀಚಿಕೆ

ವಿಶ್ವದ ಪುಟ್-ಪುಟಾಣಿ ರಾಷ್ಟ್ರಗಳೆಲ್ಲ ಯಶಸ್ವೀ ಸಂಧಾನಕಾರರಾಗಿ ಹೊರಹೊಮ್ಮುತ್ತಿರುವ ಈ ಹೊತ್ತಿನಲ್ಲಿ ಒಬ್ಬ ಉತ್ತಮ ಸಂಧಾನಕಾರ ವ್ಯವಸ್ಥೆಯನ್ನು ಭಾರತ ಯಾವತ್ತೂ ತನ್ನ ವಿದೇಶಾಂಗ ನೀತಿಯ ಭಾಗವಾಗಿ ಮಾಡಿಕೊಂಡಿಲ್ಲ.


ತಾಲಿಬಾನ್ ನೇತೃತ್ವದ ಆಫ್ಘಾನಿಸ್ತಾನ ಪಾಕಿಸ್ತಾನದ ನಡೆಯುತ್ತಿದ್ದ ತೀವ್ರ ಪ್ರಮಾಣದ ಸಂಘರ್ಷಕ್ಕೆ ತೆರೆಬಿದ್ದಿದೆ. ಇದಕ್ಕಾಗಿ ಮಧ್ಯಸ್ಥಿಕೆ ವಹಿಸಿದ್ದು ಕತಾರ್. ಒಂದು ಪುಟ್ಟ ಕೊಲ್ಲಿ ರಾಷ್ಟ್ರ ಮಧ್ಯಸ್ಥಿಕೆ ವಹಿಸಿ ಯಶಸ್ವಿಯಾದ ರಾಷ್ಟ್ರಗಳ ಪಟ್ಟಿಗೆ ಈಗ ಕತಾರ್ ಸೇರ್ಪಡೆಯಾಗಿದೆ. ಇದರಲ್ಲಿ ಇನ್ನೊಬ್ಬ ಆಟಗಾರ ಕೂಡ ಇದ್ದಾನೆ-ಅದು ಚೀನಾ.

ಹಾಗಾದರೆ ಇಂತಹ ಪಾತ್ರವನ್ನು ಭಾರತದಿಂದ ಯಾಕೆ ನಿರ್ವಹಿಸಲು ಸಾಧ್ಯವಿಲ್ಲ? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಅಂತಹ ಸಾಧ್ಯತೆಯನ್ನು ಸುಲಭವಾಗಿ ತಳ್ಳಿಹಾಕಬಹುದು. ಅದು ಆಕರ್ಷಕವೂ ಅನಿಸಬಹುದು. ಆದರೆ ಅನೇಕ ರೀತಿಯಲ್ಲಿ ಯೋಚನೆ ಮಾಡಿದರೆ ಶಾಂತಿಪಾಲಕನ ಪಾತ್ರ ವಹಿಸಲು ಭಾರತ ಸೂಕ್ತವಾಗಿದೆ. ಪಾಕಿಸ್ತಾನವನ್ನು ಹೊರತುಪಡಿಸಿ ಹಾಗೂ ತಕ್ಕಮಟ್ಟಿಗೆ ಚೀನಾವನ್ನು ಬಿಟ್ಟು ಶಾಂತಿಯನ್ನು ಕಾಪಾಡುವಂತೆ ಎಲ್ಲರೊಂದಿಗೆ ಪ್ರಯತ್ನ ನಡೆಸಿದ ಇತಿಹಾಸವೂ ಭಾರತಕ್ಕಿದೆ. ದಕ್ಷಿಣ ಏಷ್ಯಾದಲ್ಲಿರುವ ಅದರ ಹತ್ತಿರದ ನೆರೆಹೊರೆಯವರು ಗಾತ್ರ ಮತ್ತು ಪ್ರಾಬಲ್ಯದ ದೃಷ್ಟಿಯಿಂದ ಭಯಭೀತರಾಗಿದ್ದರೂ ಕೂಡ ಅದು ಯಾವುದೇ ರಾಷ್ಟ್ರಕ್ಕೆ ಬೆದರಿಕೆ ನೀಡುವ ಛಾತಿ ಹೊಂದಿಲ್ಲ.

ಯಾವುದೇ ಅಭ್ಯಂತರ ಇಲ್ಲದೇ ಹೋದರೂ ಕೂಡ ಈಗಿನ ಮತ್ತು ಹಿಂದಿನ ಕೇಂದ್ರ ಸರ್ಕಾರಗಳು ಜೊತೆಯಲ್ಲಿ ಜಾಗತಿಕವಾಗಿ ಮೂರನೆಯವರ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸುವ ಸಾಮರ್ಥ್ಯ ಹೊಂದಿದ್ದರೂ ಕೂಡ ಅಂತಹ ಪ್ರಯತ್ನವನ್ನು ಅದೇನೂ ಮಾಡಿಲ್ಲ.

2022ರ ಫೆಬ್ರುವರಿಯಲ್ಲಿ ಶುರುವಾದ ರಷ್ಯಾ ಉಕ್ರೇನ್ ಯುದ್ಧದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅಂತಹುದೊಂದು ಕಾಲಘಟ್ಟದಲ್ಲಿ ಮಧ್ಯವರ್ತಿಯ ಪಾತ್ರವನ್ನು ವಹಿಸಲು ಭಾರತ ತಕ್ಕುದಾದ ಸ್ಥಾನದಲ್ಲಿಯೇ ಇತ್ತು. ಅಸಲಿಗೆ ಅನೇಕ ವರದಿಗಳು ಕೂಡ ಭಾರತ ಹೊಂದಿದ್ದ ವಿಶಿಷ್ಟ ಸ್ಥಾನವನ್ನು ಗುರುತಿಸಿದ್ದವು ಕೂಡ. ಪ್ರಧಾನಿ ನರೇಂದ್ರ ಮೋದಿ ಅವರು ಇಬ್ಬರ ನಡುವೆ ಮಧ್ಯಸ್ಥಿಕೆ ವಹಿಸಲು ಯಶಸ್ವಿಯಾದರೆ ಅವರಿಗೆ ನೋಬೆಲ್ ಶಾಂತಿ ಪುರಸ್ಕಾರವೂ ಲಭಿಸೀತು ಎಂಬ ಮಾತೂ ಕೇಳಿಬಂದಿತ್ತು.

ರಷ್ಯಾ ಮತ್ತು ಉಕ್ರೇನ್ ಜೊತೆಗಿನ ಭಾರತದ ಸಂಬಂಧವು ಸಾಕಷ್ಟು ಗಟ್ಟಿಮುಟ್ಟಾಗಿತ್ತು. ಅಷ್ಟುಮಾತ್ರವಲ್ಲದೆ ಹಿಂದಿನ ಸೋವಿಯತ್ ಒಕ್ಕೂಟದ ಜೊತೆಗಿನ ಅದರ ಸಂಬಂಧವೂ ಪರಿಣಾಮಕಾರಿಯಾಗಿತ್ತು. ಸೋವಿಯತ್ ಒಕ್ಕೂಟ ಒಡೆದು ಹೋಳಾದಾಗ ಎರಡೂ ಉತ್ತರಾಧಿಕಾರಿ ರಾಷ್ಟ್ರಗಳ ಜೊತೆ ತನ್ನ ಮಿಲಿಟರಿ ಅಗತ್ಯಗಳಿಗಾಗಿ ಸಹಯೋಗವನ್ನು ಮುಂದುವರಿಸಿತು.

“ಇದು ಯುದ್ಧದ ಯುಗವಲ್ಲ” ಎಂದರು ಮೋದಿ

ಯುದ್ಧದ ಆರಂಭಿಕ ದಿನಗಳಲ್ಲಿ, ಉಕ್ರೇನ್ ಮತ್ತು ರಷ್ಯಾ ಎರಡೂ ಮಾತುಕತೆ ನಡೆಸಿ ಹೋರಾಟವನ್ನು ಕೊನೆಗೊಳಿಸುವ ಒಲವು ಹೊಂದಿದ್ದವು. ರಷ್ಯಾ ಇನ್ನೂ ಉಕ್ರೇನ್ ಪ್ರದೇಶವನ್ನು ಆಕ್ರಮಿಸದೇ ಇದ್ದ ಕಾರಣ ಅದು ಸರಳವಾಗುತ್ತಿತ್ತು. ಭಾರತವು ಪೂರ್ವನಿಯೋಜಿತವಾಗಿ ತಟಸ್ಥ ಧೋರಣೆ ತಳೆದಿತ್ತು ಮತ್ತು ಎರಡೂ ದೇಶಗಳಲ್ಲಿ ಆಸಕ್ತಿ ಹೊಂದಿತ್ತು. ಹಾಗಾಗಿ ಯುದ್ಧದ ಅಂತ್ಯಕ್ಕೆ ಪಣ ತೊಟ್ಟಿತ್ತು. ಮೋದಿಯವರು ಮಾಸ್ಕೋದಲ್ಲಿ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿ, “ಇದು ಯುದ್ಧದ ಯುಗವಲ್ಲ” ಎಂದು ಹೇಳಿದರು. ಆದರೆ ಅಷ್ಟೇ. ಅದಕ್ಕೂ ಮೀರಿ ಏನೂ ನಡೆಯಲಿಲ್ಲ ಮತ್ತು ಭಾರತ ಸಕ್ರಿಯವಾಗಿ ಮತ್ತು ರಾಜತಾಂತ್ರಿಕವಾಗಿ ತನ್ನನ್ನು ಮಧ್ಯವರ್ತಿಯಾಗಿ ಬಿಂಬಿಸಿಕೊಳ್ಳಲು ಯಾವುದೇ ಉಪಕ್ರಮಕ್ಕೆ ಮುಂದಾಗಲಿಲ್ಲ.

ಇಂತಹುದೊಂದು ಅಪೂರ್ವ ಅವಕಾಶ ಭಾರತದ ಕೈಯಿಂದ ಜಾರಿಹೋಯಿತು. ಭಾರತ ರಷ್ಯಾದ ಕಡೆಗೇ ಹೆಚ್ಚು ವಾಲಿತು, ತನ್ನ ತೈಲ ಖರೀದಿಗಳನ್ನು ಬಹುತೇಕ ಶೂನ್ಯದಿಂದ (ದೇಶದ ಅಗತ್ಯದ ಶೇ.0.3) ಶೇ.40ರಷ್ಟು ಹೆಚ್ಚಿಸಿತು. ಈ ಪ್ರಕ್ರಿಯೆಯಲ್ಲಿ, ಆದ ಫಲವಾದರೂ ಏನು? ಮೋದಿ ಸರ್ಕಾರ ಉಕ್ರೇನ್‌ನ ವೊಲೊಡಿಮಿರ್ ಝೆಲೆನ್ಸ್ಕಿ ಸರ್ಕಾರಕ್ಕೆ ಸಿಟ್ಟು ಭರಿಸುವಲ್ಲಿ ಯಶಸ್ವಿಯಾಯಿತು. ಇಬ್ಬರ ನಡುವೆ ನಿಷ್ಠುರದ ಮಾತುಗಳು ವಿನಿಮಯವಾದವು ಮತ್ತು ಸಂಘರ್ಷವನ್ನು ಕೊನೆಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದಾಗಿದ್ದ ವೇದಿಕೆಯಿಂದ ಭಾರತವು ತನ್ನ ನೆಲೆಯನ್ನು ಕಳೆದುಕೊಂಡಿತು.

ಭಾರತವು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ಯಾಕೆ ಸಾಧ್ಯವಾಗಲಿಲ್ಲ ಎಂಬುದಕ್ಕೆ ಕಾರಣವೇ ಇರಲಿಲ್ಲ. ಆದರೂ ಅದು ಆ ಪಾತ್ರವನ್ನು ವಹಿಸಲಿಲ್ಲ. ಐತಿಹಾಸಿಕವಾಗಿ ಮತ್ತು ರಾಜಕೀಯವಾಗಿ, ಭಾರತದ ಸರ್ಕಾರಗಳು ತೀರಾ ಕೀಳರಿಮೆ ಸಂಕೀರ್ಣದಿಂದ ಬಳಲುತ್ತಿವೆ ಅಥವಾ ಮಧ್ಯವರ್ತಿ ಮನೋಭಾವವು ಭಾರತದ ವಿದೇಶಾಂಗ ನೀತಿಯ ಕಾರ್ಯತಂತ್ರದ ಭಾಗವಾಗಿ ಎಂದಿಗೂ ಇರಲಿಲ್ಲ.

ವಿಶೇಷವಾಗಿ 2014ರಲ್ಲಿ ಮೋದಿ ಆಡಳಿತವು ಅಧಿಕಾರ ವಹಿಸಿಕೊಂಡಾಗ, ಭಾರತವು “ಮೃದು ಸರ್ಕಾರ”ದಿಂದ “ತೋಳ್ಬಲದ ಕಾರ್ಯತಂತ್ರ”ದ ಸರ್ಕಾರವಾಗಿ ಬದಲಾಗಬೇಕು ಎಂಬ ಮಾತು ಸಾಕಷ್ಟು ಚಾಲ್ತಿಯಲ್ಲಿತ್ತು. ಆದರೆ, ಅದು ಸಂಭವಿಸಲೇ ಇಲ್ಲ. ಒಂದು ವೇಳೆ ಸಂಭವಿಸಿದ್ದರೂ, ಅದು ಪಾಕಿಸ್ತಾನಕ್ಕೆ ಮಾತ್ರ ಸೀಮಿತವಾಗಿದೆ. ಭಾರತವು ತನ್ನ ನೆರೆಯ ದೇಶದೊಂದಿಗೆ ದೀರ್ಘಕಾಲದ ದ್ವೇಷದ ಇತಿಹಾಸವನ್ನು ಹೊಂದಿದೆ. ಇದು ಹೊಸತೇನೂ ಅಲ್ಲ.

ಮಧ್ಯಸ್ಥಿಕೆಗೆ ಎದ್ದು ನಿಂತವರು

ಇನ್ನೊಂದೆಡೆ, ಶಾಂತಿ ಸ್ಥಾಪನೆಯ ಸಾಮರ್ಥ್ಯವನ್ನು ಅರಿತುಕೊಂಡ ಚೀನಾ ಸರ್ಕಾರವು, ಇತ್ತೀಚೆಗೆ 2025ರ ಮೇ ತಿಂಗಳಲ್ಲಿ, ಮಧ್ಯಸ್ಥಿಕೆಗಾಗಿ ಅಂತಾರಾಷ್ಟ್ರೀಯ ಸಂಘಟನೆ (International Organisation for Mediation)ಯನ್ನು ಸ್ಥಾಪಿಸಿಬಿಟ್ಟಿತು. ಅದರ ಪ್ರಧಾನ ಕಛೇರಿಯನ್ನು ಹಾಂಗ್ ಕಾಂಗ್‌ನಲ್ಲಿ ಸ್ಥಾಪಿಸಿತು. ಇದು ಕನಿಷ್ಠ 20 ಇತರ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ಒಂದು ಅಂತರ್-ಸರ್ಕಾರಿ ಸಂಸ್ಥೆಯಾಗಿ ರೂಪಿಸಲ್ಪಟ್ಟಿದೆ. ಪಾಕಿಸ್ತಾನವೂ ಇದರಲ್ಲಿ ಸೇರಿದೆ. ಸಂಘರ್ಷ ನಿವಾರಣೆಯ ಜೊತೆಗೆ, ಇದು ಅಂತರರಾಷ್ಟ್ರೀಯ ನ್ಯಾಯಾಲಯ ಮತ್ತು ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಪೈಪೋಟಿ ನೀಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಈ ಸಂಘಟನೆ ಸ್ಥಾಪನೆಗೂ ಮೊದಲಿನ ಘಟನೆಗಳು ಕಾಕತಾಳೀಯವಲ್ಲ: ಮಾರ್ಚ್ 2023ರಲ್ಲಿ ಸೌದಿ ಅರೇಬಿಯಾ ಮತ್ತು ಇರಾನ್ ನಡುವೆ “ಸಮನ್ವಯ”ಕ್ಕೆ ಅನುಕೂಲ ಮಾಡಿಕೊಡುವಲ್ಲಿ ಚೀನಾ ಪ್ರಮುಖ ಪಾತ್ರವಹಿಸಿತು. ಆ ಪ್ರದೇಶದ ಈ ಎರಡು ದೊಡ್ಡ ಪ್ರಾದೇಶಿಕ ಶಕ್ತಿಗಳ ನಡುವಿನ ವೈರತ್ವವು ನಾನಾ ರೀತಿಯ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಿದ್ದರಿಂದ, ಇದು ಬಹಳ ಮಹತ್ವದ ನಡೆಯಾಗಿತ್ತು.

ಸೌದಿ ಅರೆಬಿಯಾ ಮತ್ತು ಇರಾನ್ 2016ರಲ್ಲಿ ತಮ್ಮ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿದ್ದವು ಮತ್ತು ಯೆಮೆನ್ ಮತ್ತು ಸಿರಿಯಾದ ಸಂಘರ್ಷಗಳಲ್ಲಿ ಪರಸ್ಪರ ಎದುರಾ-ಬದುರಾ ನಿಂತಿದ್ದವು.

ಚೀನಾದ ಈ ಉಪಕ್ರಮವನ್ನು ಅದರ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಪ್ರಯತ್ನದ ಒಂದು ಪರೀಕ್ಷಾರ್ಥ ಪ್ರಕರಣವೆಂದು ವ್ಯಾಪಕವಾಗಿ ಪರಿಗಣಿಸಲಾಗುತ್ತಿದೆ. ಅಲ್ಲದೆ, ಇದು ಅಮೆರಿಕದ ಜೊತೆ ಪೈಪೋಟಿಯ ಒಂದು ಭಾಗವೇ ಆಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧೀನದಲ್ಲಿ ಅಮೆರಿಕವು ಅಬ್ರಹಾಂ ಒಪ್ಪಂದಗಳಿಗೆ ಮಧ್ಯಸ್ಥಿಕೆವಹಿಸಿತ್ತು. ಈ ಒಪ್ಪಂದಗಳು ಇಸ್ರೇಲ್ ಮತ್ತು ಮಧ್ಯಪ್ರಾಚ್ಯದ ಹಲವಾರು ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸಾಧ್ಯವಾಗಿಸಿದ್ದವು.

ಚೀನಾ ತಳೆದಿರುವ ಈ ನಡೆಯು ಅಮೆರಿಕ-ನಿರ್ದೇಶಿತ ವಿಶ್ವ ಭದ್ರತೆ ಮತ್ತು ರಾಜಕೀಯ ವ್ಯವಸ್ಥೆಗೆ ಸಂಭಾವ್ಯ ಸವಾಲು ಎಂದು ಸಹ ಪರಿಗಣಿಸಲಾಗಿದೆ.

ಜಾಗತಿಕ ವೇದಿಕೆಯಲ್ಲಿ ಸಂಧಾನಕಾರ ಕತಾರ್

ಇವೆಲ್ಲದರ ಮಧ್ಯೆ, ಕತಾರ್ ಹೇಗೆ ಜಾಗತಿಕ ಮಧ್ಯಸ್ಥಿಕೆಯ ದೊಡ್ಡಣ್ಣನಾಗಿ ಹೊರಹೊಮ್ಮಲು ಸಾಧ್ಯವಾಯಿತು? ಈ ಪುಟಾಣಿ ಕೊಲ್ಲಿ ರಾಷ್ಟ್ರವು ದೀರ್ಘಕಾಲದವರೆಗೆ ತನ್ನ ದೈತ್ಯ ಸಹೋದರ-ರಾಷ್ಟ್ರವಾದ ಸೌದಿ ಅರೇಬಿಯಾದಿಂದ ಹಿಂದೆ ಸರಿದಿತ್ತು. ಆದರೆ, 1990ರ ದಶಕದ ಮಧ್ಯಭಾಗದಿಂದ ದೇಶದ ಆಡಳಿತದಲ್ಲಿನ ಬದಲಾವಣೆಯ ನಂತರ, ಅದು ಸೌದಿಯ ಹೊರತಾಗಿಯೂ ಮೊದಲಿಗೆ ಅಮೆರಿಕದೊಂದಿಗೆ ಮೈತ್ರಿ ಮಾಡಿಕೊಂಡು ಮತ್ತು ಪ್ರಮುಖ ಅಂತರರಾಷ್ಟ್ರೀಯ ಸುದ್ದಿ ವಾಹಿನಿಯಾದ ಅಲ್-ಜಝೀರಾವನ್ನು (2003ರಲ್ಲಿ ಅಲ್-ಜಝೀರಾ ಇಂಗ್ಲಿಷ್ ವೆಬ್ತಾಣವನ್ನು ಪ್ರಾರಂಭಿಸಿದ ತಂಡದಲ್ಲಿ ಈ ಲೇಖಕರೂ ಭಾಗಿಯಾಗಿದ್ದರು) ರಚಿಸುವ ಮೂಲಕ ತನ್ನದೇ ಆದ ಪ್ರತ್ಯೇಕತೆಯನ್ನು ಗಳಿಸಿತು.

ಈ ಎರಡೂ ಬೆಳವಣಿಗೆಗಳು ಕತಾರ್ ಅನ್ನು ಪ್ರಮುಖ ಅಂತಾರಾಷ್ಟ್ರೀಯ ಆಟಗಾರನನ್ನಾಗಿ ಮಾಡಿತು, ಅದರ ಅಪ್ರಸ್ತುತ ಅಸ್ತಿತ್ವವನ್ನು ತಟಸ್ಥಗೊಳಿಸಿತು. ಜೊತೆಗೆ, ಅಪಾರ ಪ್ರಮಾಣದ ದ್ರವೀಕೃತ ನೈಸರ್ಗಿಕ ಅನಿಲದ ಶೋಧವು ಅದನ್ನು ಸಂಪತ್ತಿನ ನೆಲೆಯಾಗಿ (ಎಲ್ ಡೊರಾಡೋ) ಪರಿವರ್ತಿಸಿತು, ಇದು ಜಾಗತಿಕವಾಗಿ ಅದರ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿತು.

2006ರಲ್ಲಿ ಲೆಬನಾನ್‌ನ ಆಕ್ರಮಣದ ಸಂದರ್ಭದಲ್ಲಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಮಧ್ಯಸ್ಥಿಕೆ ವಹಿಸಲು ಪ್ರಾರಂಭಿಸಿದ ದಿನದಿಂದ, ಕತಾರ್ ಅಸಂಖ್ಯಾತ ಸಂಘರ್ಷದ ಸಂದರ್ಭಗಳಲ್ಲಿ ಶಾಂತಿ ಸಂಧಾನಕಾರನಾಗಿ ಕಾರ್ಯನಿರ್ವಹಿಸಿದೆ. ಇವುಗಳಲ್ಲಿ ತಾಲಿಬಾನ್ ಮತ್ತು ಅಮೆರಿಕ ಸರ್ಕಾರಗಳ ನಡುವೆ, ಟ್ರಂಪ್ ಅವಧಿಗೆ ಮೊದಲೇ ನಿರ್ಬಂಧಗಳನ್ನು ಸಡಿಲಿಸಲು ಕಾರಣವಾದ ಅಮೆರಿಕ ಮತ್ತು ವೆನೆಜುವೆಲಾ ನಡುವೆ, ಮತ್ತು ಅಮೆರಿಕ ಹಾಗೂ ಇರಾನ್ ನಡುವಿನ ಮಧ್ಯಸ್ಥಿಕೆಗಳು ಸೇರಿವೆ.

ಇತ್ತೀಚೆಗೆ, ಗಾಜಾದಲ್ಲಿ ಕದನ ವಿರಾಮಕ್ಕಾಗಿ ಇಸ್ರೇಲ್ ಮತ್ತು ಪ್ಯಾಲೇಸ್ತೀನಿ ಗುಂಪಾದ ಹಮಾಸ್ ನಡುವೆಯೂ ಕತಾರ್ ಮಧ್ಯಸ್ಥಿಕೆ ವಹಿಸಿತು. ಕಾನೂನುಬಾಹಿರವಾಗಿ ರಷ್ಯಾಕ್ಕೆ ಗಡೀಪಾರು ಮಾಡಲಾಗಿದೆ ಎಂದು ವರದಿಯಾದ ಉಕ್ರೇನಿಯನ್ ಅಪ್ರಾಪ್ತ ವಯಸ್ಕರನ್ನು ಬಿಡುಗಡೆ ಮಾಡುವ ವಿಚಾರ ಬಂದಾಗಲೂ ಕತಾರ್ ಉಕ್ರೇನ್ ಮತ್ತು ರಷ್ಯಾ ನಡುವೆಯೂ ಮಧ್ಯಸ್ಥಿಕೆ ವಹಿಸಿತು.

ಇದೆಲ್ಲದರ ಫಲವಾಗಿ ಕತಾರ್ ಆಡಳಿತವು ಸೌದಿ ಅರೇಬಿಯಾದ ಕೋಪಕ್ಕೆ ಗುರಿಯಾಗಬೇಕಾಯಿತು. ಇದು ಸಂಯುಕ್ತ ಅರಬ್ ಗಣರಾಜ್ಯ, ಬಹ್ರೇನ್ ಮತ್ತು ಈಜಿಪ್ಟ್ ಸಹಯೋಗದೊಂದಿಗೆ 2017-21ರವರೆಗೆ ಸುಮಾರು ನಾಲ್ಕು ವರ್ಷಗಳ ಕಾಲ ಕತಾರ್ ಮೇಲೆ ಆರ್ಥಿಕ ದಿಗ್ಬಂಧನವನ್ನು ಹೇರಲು ದಾರಿಮಾಡಿಕೊಟ್ಟಿತು. ಕಳೆದ ತಿಂಗಳು, ಮಾತುಕತೆಗಾಗಿ ಅಲ್ಲಿ ನೆಲೆಸಿದ್ದ ಪ್ರಮುಖ ಹಮಾಸ್ ನಾಯಕರನ್ನು ಹೊರಹಾಕುವ ಉದ್ದೇಶದಿಂದ ಇಸ್ರೇಲ್ ವಿವಾದಾತ್ಮಕ ರೀತಿಯಲ್ಲಿ ದೋಹಾ ಮೇಲೆ ಕ್ಷಿಪಣಿ ದಾಳಿಗೆ ನಡೆಸಿತು.

ಈ ಎರಡು ಹಗೆತನದ ಕೃತ್ಯಗಳಿಗೆ ಮುಖ್ಯ ಕಾರಣವೆಂದರೆ, ಈ ಪ್ರದೇಶದ ಇಸ್ಲಾಮಿಕ್ ಉಗ್ರಗಾಮಿ ಗುಂಪುಗಳೊಂದಿಗೆ ಕತಾರ್ ಹೊಂದಿದ್ದ ಒಡನಾಟದ ಬಗೆಗೆ ಇದ್ದ ಸಂದೇಹ. ಆದರೆ ಕತಾರ್ ವಾದವೇನೆಂದರೆ, ಸಂಬಂಧಪಟ್ಟ ಎಲ್ಲ ಪಕ್ಷಗಳೊಂದಿಗೆ ತೊಡಗಿಸಿಕೊಳ್ಳದೆ ಮಧ್ಯಸ್ಥಿಕೆವಹಿಸಲು ಸಾಧ್ಯವಿಲ್ಲ.

ನೆರವಿಗೆ ಬಂದ ನಾರ್ವೆಯ ತಟಸ್ಥ ನಿಲುವು

ಇದಕ್ಕೂ ಮೊದಲು, ಯುರೋಪಿನ ಸ್ಕ್ಯಾಂಡಿನೇವಿಯನ್ ಪ್ರದೇಶದಲ್ಲಿ ಅಡಗಿರುವ ಮತ್ತೊಂದು ಸಣ್ಣ ದೇಶವಾದ ನಾರ್ವೆಯು ಪ್ರಪಂಚದಾದ್ಯಂತದ ಕಷ್ಟಕರ ಸಂಘರ್ಷಗಳಲ್ಲಿ ಮಧ್ಯಸ್ಥಿಕೆವಹಿಸುವ ಕಾರ್ಯ ಕೈಗೊಂಡಿತ್ತು. ಇಸ್ರೇಲ್ ಮತ್ತು ಪ್ಯಾಲೇಸ್ತೀನಿಯನ್ನರ ನಡುವಿನ 1993ರ ಓಸ್ಲೋ ಶಾಂತಿ ಒಪ್ಪಂದಗಳು, ಶ್ರೀಲಂಕಾದ ಸರ್ಕಾರ ಮತ್ತು ಈಳಂ ನಾಗರಿಕ ಯುದ್ಧದ ಸಂದರ್ಭದಲ್ಲಿ ತಮಿಳು ಹುಲಿಗಳ ನಡುವಿನ 2000-2006ರ ಆರು ವರ್ಷಗಳ ಕದನ ವಿರಾಮ, ಮತ್ತು 2021ರಲ್ಲಿ ವೆನೆಜುವೆಲಾದಲ್ಲಿನ ಆಡಳಿತಾರೂಢ ಮಡುರೊ ಆಡಳಿತ ಮತ್ತು ದೇಶದ ಪ್ರತಿಪಕ್ಷದ ನಡುವೆ ನಡೆದ ಮಾತುಕತೆಗಳು (ಇದು 2024ರ ಅಧ್ಯಕ್ಷೀಯ ಚುನಾವಣೆಗಳಿಗೆ ದಾರಿ ಮಾಡಿಕೊಟ್ಟಿತು) ಅದರ ಶ್ರೇಯಸ್ಸಿನ ಕಿರೀಟಕ್ಕೆ ಸೇರ್ಪಡೆಯಾಗಿದೆ..

ನಾರ್ವೆಯು ಮತ್ತೆ ಶಾಂತಿ ಸಂಧಾನಕಾರನ ಪಾತ್ರ ವಹಿಸಲು ಉತ್ತಮ ಸ್ಥಾನದಲ್ಲಿತ್ತು, ಯಾಕೆಂದರೆ ಅದು ತಟಸ್ಥವಾಗಿತ್ತು ಮತ್ತು ಎರಡು ಮಹಾಶಕ್ತಿಗಳಾದ ಅಮೆರಿಕ ಮತ್ತು ಆಗಿನ ಸೋವಿಯತ್ ಒಕ್ಕೂಟದ ಕುಶಲತೆಗಳಿಂದ ದೂರವಿತ್ತು. ಸಂಘರ್ಷದಲ್ಲಿರುವ ಪಕ್ಷಗಳು ನಾರ್ವೆಯ ರಾಜಕೀಯ ನಿಷ್ಠೆಯನ್ನು ಅನುಮಾನಿಸಲು ಯಾವುದೇ ಕಾರಣವಿರಲಿಲ್ಲ. ನಾರ್ವೆಗಿಂತ ಮೊದಲು ಸ್ವಿಟ್ಜರ್ಲೆಂಡ್ ಇತ್ತು. ಅದು ಎರಡನೇ ಮಹಾಯುದ್ಧದ (1939-45) ಸಂದರ್ಭದಲ್ಲಿ ತಟಸ್ಥವಾಗಿ ಉಳಿದು, ಇದೇ ಅವಧಿಯಲ್ಲಿ ಜಿನೀವಾದಲ್ಲಿ ಹಲವಾರು ಮಧ್ಯಸ್ಥಿಕೆ ಪ್ರಯತ್ನಗಳನ್ನು ಆಯೋಜಿಸಲು ಸಾಧ್ಯವಾಯಿತು.

ಸ್ವಾತಂತ್ರ್ಯದ ನಂತರದ ಆರಂಭಿಕ ವರ್ಷಗಳಲ್ಲಿ, ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರೂ ಅವರಂತಹ ನಾಯಕರಿಗೆ ಪ್ರಪಂಚದಾದ್ಯಂತ ಇದ್ದ ಗೌರವವನ್ನು ಗಮನಿಸಿದರೆ, ಭಾರತವು ಸಂಧಾನಕಾರನ ಪಾತ್ರವನ್ನು ವಹಿಸಿಕೊಳ್ಳಲು ಸೂಕ್ತ ಸ್ಥಾನದಲ್ಲಿತ್ತು. ಆದರೆ ಆ ಸಾಮರ್ಥ್ಯ ಕೇವಲ ಕಾಗದದ ಮೇಲೆ ಮಾತ್ರ ಉಳಿದಿತ್ತು.

ಬಹಳ ದಿನಗಳ ಬಳಿಕ, ಭಾರತವು ಮೌನ ರಾಜತಂತ್ರವನ್ನು ಅನುಸರಿಸಿತು ಮತ್ತು ಶಾಂತಿ ಸ್ಥಾಪನೆ ಚಟುವಟಿಕೆಗಳ ಅಂಚಿನಲ್ಲಿ ನಿಂತಿತ್ತು. ಆದರೆ, ಅದು ಎಂದಿಗೂ ಮಧ್ಯಸ್ಥಿಕೆಯನ್ನು ತನ್ನ ವಿದೇಶಾಂಗ ನೀತಿಯ ಒಂದು ಸಾಧನವಾಗಿ ಸ್ಥಿರಗೊಳಿಸಲಿಲ್ಲ. ಪ್ರಪಂಚದಾದ್ಯಂತ ವಿಶ್ವಸಂಸ್ಥೆಯ ಶಾಂತಿಪಾಲನಾ ಚಟುವಟಿಕೆಗಳಿಗೆ ಭಾರತವು ಬಹಳ ದೊಡ್ಡ ಪ್ರಮಾಣದಲ್ಲಿ ಸೈನಿಕರನ್ನು ಕೊಡುಗೆಯಾಗಿ ನೀಡಿರುವುದು ಇಲ್ಲಿ ಸ್ಮರಣಾರ್ಹ.

ಶ್ರೀಲಂಕಾಕ್ಕೆ ಶಾಂತಿ ಪಾಲನಾ ಪಡೆ

ಒಮ್ಮೆ ಭಾರತವು ತಮಿಳು ಬಂಡುಕೋರರು ಮತ್ತು ಲಂಕಾದ ಸರ್ಕಾರದ ನಡುವೆ ಸಕ್ರಿಯವಾಗಿ ಮಾತುಕತೆ ನಡೆಸಲು ಮಧ್ಯಪ್ರವೇಶಿಸಿದಾಗ, ಅದು ವಿಪತ್ತಾಗಿ ಪರಿಣಮಿಸಿತು. 1987ರಲ್ಲಿ ರಾಜೀವ್ ಗಾಂಧಿ ಸರ್ಕಾರವು ಭಾರತ-ಶ್ರೀಲಂಕಾ ಒಪ್ಪಂದದ ಭಾಗವಾಗಿ ಶಾಂತಿಪಾಲನಾ ಪಡೆಗಳನ್ನು ಶ್ರೀಲಂಕಾಕ್ಕೆ ಕಳುಹಿಸಿದ್ದೇ ಈ ದುರಂತಕ್ಕೆ ಕಾರಣವಾಯಿತು. ಎರಡು ವರ್ಷಗಳ ನಂತರ ಸೇನೆಯನ್ನು ಹಿಂಪಡೆಯಬೇಕಾಯಿತು, ಇದು ದ್ವೀಪ ರಾಷ್ಟ್ರದಲ್ಲಿ ಭಾರತದ ಸಕ್ರಿಯ ಹಸ್ತಕ್ಷೇಪಕ್ಕೆ ಅಂತ್ಯ ಹಾಡಿತು. 2000ರ ದಶಕದ ಆರಂಭದಲ್ಲಿ ನಾರ್ವೆ ತಮಿಳು ಟೈಗರ್ಸ್ ಮತ್ತು ಶ್ರೀಲಂಕಾ ಸರ್ಕಾರದ ನಡುವೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದಾಗ ಭಾರತೀಯ ರಾಜತಾಂತ್ರಿಕರು ಹಿಂಬಾಗಿಲ ಮಾತುಕತೆಗಳಲ್ಲಿ ಸಕ್ರಿಯರಾಗುವುದನ್ನು ಇದು ತಡೆಯಲಿಲ್ಲ.

2021ರಲ್ಲಿ ಅಮೆರಿಕವು ತಾಲಿಬಾನ್ ಜೊತೆ ಮಾತುಕತೆ ನಡೆಸಿ ಆಫ್ಘಾನಿಸ್ತಾನದಲ್ಲಿ ಅಮೆರಿಕದ ಆಕ್ರಮಣಕ್ಕೆ ಅಂತ್ಯ ಹಾಡಿದಾಗ, ಅಫ್ಘಾನ್ ಸರ್ಕಾರಕ್ಕೆ ಸಹಾಯ ಮಾಡುವಲ್ಲಿ ಭಾರತವೂ ಕೂಡ ಒಂದು ಅಲ್ಪ ಪಾತ್ರವನ್ನು ವಹಿಸಿತ್ತು ಎಂದು ವರದಿಯಾಗಿದೆ.

ಆದರೆ ಈ ಕ್ರಮಗಳು ಭಾರತವನ್ನು ಪೂರ್ಣ ಪ್ರಮಾಣದ, ಸ್ವತಂತ್ರ ಸಂಧಾನಕಾರನ ಪಾತ್ರವನ್ನು ಖಚಿತಗೊಳಿಸುವುದಿಲ್ಲ. ಮೊದಲನೆಯದಾಗಿ, ಇದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಟ್ಟದಲ್ಲಿ ರಚನಾತ್ಮಕ ಬದಲಾವಣೆಗಳು ಬೇಕಾಗುತ್ತವೆ. ಕತಾರ್ ತನ್ನ ವಿದೇಶಾಂಗ ಸಚಿವಾಲಯದ ಭಾಗವಾಗಿ ಮಧ್ಯಸ್ಥಿಕೆಯನ್ನು ಸಾಂಸ್ಥೀಕರಣಗೊಳಿಸಿದೆ ಮತ್ತು ನಿರ್ದಿಷ್ಟ ಅಧಿಕಾರಿಗಳು ಈ ಚಟುವಟಿಕೆಯಲ್ಲಿ ಮಾತ್ರ ತೊಡಗಿಸಿಕೊಂಡಿದ್ದಾರೆ.

ನಾರ್ವೆ ಕೂಡ ತನ್ನ ವಿದೇಶಾಂಗ ಸಚಿವಾಲಯದ ಮೂಲಕ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಓಸ್ಲೋ (PRIO) ಮತ್ತು ನಾರ್ವೇಜಿಯನ್ ಸೆಂಟರ್ ಫಾರ್ ಕಾನ್-ಫ್ಲಿಕ್ಟ್ ರೆಸಲ್ಯೂಷನ್ (NOREF) ಸಹಯೋಗದೊಂದಿಗೆ ಮಧ್ಯಸ್ಥಿಕೆ ಕಾರ್ಯನಿರ್ವಹಿಸುತ್ತದೆ. ಚೀನಾದ ಐಒಮೆಡ್ ಆಡಳಿತ ಮಂಡಳಿ, ಸಚಿವಾಲಯ ಮತ್ತು ಮಧ್ಯಸ್ಥಗಾರರ ಎರಡು ಸಮಿತಿಗಳನ್ನು ಒಳಗೊಂಡಿದೆ.

ಸ್ಪಷ್ಟವಾಗಿ, ಮಧ್ಯಸ್ಥಿಕೆ ವಹಿಸುವ ಸಾಮರ್ಥ್ಯವು ಇನ್ನು ಮುಂದೆ ಕೇವಲ ಶಾಂತಿ ಸ್ಥಾಪನೆಯ ಬಗ್ಗೆ ಮಾತ್ರವಲ್ಲ, ಇದು ಒಂದು ರಾಷ್ಟ್ರಕ್ಕೆ ತನ್ನ ಸಾಮರ್ಥ್ಯಕ್ಕಿಂತ ಮೀರಿದ ಪ್ರಭಾವ ಬೀರಲು ಅವಕಾಶ ನೀಡುವ ಒಂದು ಸಂಕೇತವಾಗಿದೆ, ಇದು ಗೌರವಾನ್ವಿತ ದೃಷ್ಟಿಕೋನ, ಪ್ರತಿಷ್ಠೆ ಮತ್ತು ಇತರ ಲೆಕ್ಕಿಸಲಾಗದ ಭೌಗೋಳಿಕ ರಾಜಕೀಯ ಪ್ರಯೋಜನಗಳನ್ನು ತರುತ್ತದೆ.

ಮೋದಿ ಸರ್ಕಾರ ಮತ್ತು ಅದರ ವಿದೇಶಾಂಗ ಕಚೇರಿಯ ಅಧಿಕಾರಿಗಳು, ದೇಶವನ್ನು “ವಿಶ್ವಗುರು” ಆಗಲು ಬಯಸುವ ಸ್ಥಿತಿಯಿಂದ ಅದರ ಹೆಚ್ಚು ನೈಜ ಆವೃತ್ತಿಗೆ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿರುವ ಸಾಧ್ಯತೆಗಳನ್ನು ಇನ್ನೂ ಗ್ರಹಿಸಿದಂತೆ ತೋರುತ್ತಿಲ್ಲ.

Read More
Next Story