
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ಇರಾನಿನಲ್ಲಿ ಈಗಿರುವ ಸರ್ಕಾರ ಪತನಗೊಳ್ಳದೇ ಹೋದರೆ ಯುದ್ಧ ಎಷ್ಟು ಸುದೀರ್ಘ ಕಾಲವಾದರೂ ನಡೆಯಬಹುದು. ಅದರಿಂದ ತೈಲ ಪೂರೈಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದು ನಿಶ್ಚಿತ.
ಏರುತ್ತಿರುವ ತೈಲ ಮತ್ತು ಎಲ್.ಎನ್.ಜಿ. ಬೆಲೆಗಳು, ತಾರುಮಾರಾದ ರಫ್ತು ಪಶ್ಚಿಮ ಏಷ್ಯಾದಲ್ಲಿ ದುಡಿಯುತ್ತಿರುವ ಅನಿವಾಸಿ ಭಾರತೀಯರ ಜೀವಕ್ಕೆ ಕುತ್ತು ಹಾಗೂ ಬ್ರಿಕ್ಸ್ ಒಕ್ಕೂಟದ ಸದಸ್ಯ ರಾಷ್ಟ್ರವಾದ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿಯ ಕುರಿತು ಭಾರತದ ಅಸ್ಪಷ್ಟ ನಿಲುವು…
ಸದ್ಯ ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಭಾರತದಲ್ಲಿ ನಡೆಯುತ್ತಿರುವ ಚರ್ಚೆಯ ಪ್ರಮುಖ ಅಂಶಗಳೇ ಇವು,
ನಿಜ, ಇವೆಲ್ಲವೂ ಸಮಂಜಸವಾದ, ಸಮರ್ಥನೀಯವೂ ಆದ ಕಳವಳಗಳೇ ಆಗಿವೆ. ಆದರೆ ಈ ಸಂಘರ್ಷದ ಪರಿಣಾಮಗಳು ಇಷ್ಟಕ್ಕೇ ಸೀಮಿತವಾಗಿಲ್ಲ ಎಂಬುದೂ ಸತ್ಯ. ಇವು ಇಡೀ ಜಗತ್ತನ್ನು ಮತ್ತಷ್ಟು ಅಪಾಯಕಾರಿ ತಾಣವನ್ನಾಗಿ ಮಾಡುವ ಭೀತಿ ಹುಟ್ಟಿಸಿವೆ: ಇನ್ನೂ ಹೆಚ್ಚಿನ ರಾಷ್ಟ್ರಗಳು ಶಸ್ತ್ರಾಸ್ತ್ರಗಳಿಗಾಗಿ ಅತಿ ಹೆಚ್ಚು ಹಣ ವ್ಯಯಿಸುತ್ತಿವೆ, ಕೆಲವು ಮಧ್ಯಮ ಶ್ರೇಣಿಯ ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬರುತ್ತಿವೆ, ಕೃತಕ ಬುದ್ಧಿಮತ್ತೆ ಆಧಾರಿತ ನಿಖರ ವೈಮಾನಿಕ ದಾಳಿಗೆ ತುತ್ತಾಗುತ್ತಿರುವ ರಾಷ್ಟ್ರಗಳು ಅದಕ್ಕೆ ಪ್ರತಿಯಾಗಿ ಭಯೋತ್ಪಾದನೆ ಮತ್ತು ಸೈಬರ್ ದಾಳಿಗಳ ಮೂಲಕ ಹಿಂದೆಂದೂ ಕಾಣದ ಪ್ರತಿಕ್ರಿಯೆ ನೀಡಲು ಮುಂದಾಗುತ್ತಿವೆ.
ವಿನಾಶಕಾರಿ ಕದನ
ತೈಲ ಮತ್ತು ಅನಿಲ ಪೂರೈಕೆಯ ಮೇಲಿನ ಅಪಾಯವು ಈ ಸಂಘರ್ಷ ಎಷ್ಟು ದಿನಗಳ ಕಾಲ ಮುಂದುವರಿಯುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ.
ಇದೇ ಸಂದರ್ಭದಲ್ಲಿ, ಅಯತೊಲ್ಲಾ ಆಡಳಿತದ ವಿರುದ್ಧ ದಂಗೆ ಎದ್ದು ತಮ್ಮನ್ನು ತಾವು ಮುಕ್ತರಾಗಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜನತೆಗೆ ಕರೆಕೊಟ್ಟಿದ್ದಾರೆ. ಈಗ ನಡೆಯುತ್ತಿರುವ ಕಾರ್ಯಾಚರಣೆಯು ಕೇವಲ ನಾಲ್ಕೇ ದಿನಗಳಿಗೆ ಮುಗಿಯುತ್ತದೆ ಎಂಬ ಇರಾದೆಯನ್ನು ಅಮೆರಿಕ ಕೈಬಿಟ್ಟಂತೆ ಕಾಣುತ್ತಿದೆ. ಇರಾನ್ ಸಂಘರ್ಷ ನಾಲ್ಕು ವಾರಗಳನ್ನೂ ಮೀರಿ ಮುಂದುವರಿಯಬಹುದು. ಹಾಗಾಗಿ ಅಮೆರಿಕದ ಹೆಚ್ಚಿನ ಸಂಖ್ಯೆಯ ಯೋಧರ ಸಾವು-ನೋವುಗಳನ್ನು ನೋಡಲು ಸಿದ್ಧರಾಗಬೇಕಾದೀತು ಎಂದೂ ಟ್ರಂಪ್ ಅಮೆರಿಕನ್ನರಿಗೆ ತಿಳಿಸಿದ್ದಾಗಿದೆ.
“ಇದೊಂದು ವಿನಾಶಕಾರಿ ಯುದ್ಧ. ಇದರಲ್ಲಿ ಆಕಾಶದ ಮೂಲಕ ನಡೆಸಲಾಗುವ ಉನ್ನತ ಶ್ರೇಣಿಯ ಕ್ಷಿಪಣಿ ದಾಳಿಯಿಂದ ಇರಾನಿನ ಕ್ಷಿಪಣಿ ಮತ್ತು ನೌಕಾ ಸಾಮರ್ಥ್ಯವನ್ನು ಸಂಪೂರ್ಣ ನಾಶಮಾಡಲಾಗುವುದು,” ಎಂದು ಅಮೆರಿಕದ ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ್ದಾರೆ. ಕ್ಷಿಪಣಿ ದಾಳಿ ನಡೆಸಿ ಇರಾನಿನ ಸುಪ್ರೀಂ ನಾಯಕ ಅಯತೊಲ್ಲ ಖಮೇನಿ ಮತ್ತು ಅವರ ನಿಕಟವರ್ತಿಗಳನ್ನು ಹತ್ಯೆ ಮಾಡುವ ಮೂಲಕ ಆ ದೇಶದ ಆಡಳಿತದಲ್ಲಿ ಬದಲಾವಣೆ ತರಲು ಆರಂಭಿಸಿದ ಪ್ರಯತ್ನಗಳನ್ನು ಪೂರ್ಣಗೊಳಿಸಲು ಅಮೆರಿಕದ ಭೂಸೈನ್ಯವನ್ನು ಬಳಸುವ ಉದ್ದೇಶ ನಮಗಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಇರಾನ್ ನಾಯಕರು ಭೂಗತ ಬಂಕರ್ ಬದಲು ಅಧಿಕೃತ ಸರ್ಕಾರಿ ಕಟ್ಟಡದಲ್ಲಿ ಸಭೆ ಸೇರಲು ನಿರ್ಧರಿಸಿದ್ದು ನಿಜಕ್ಕೂ ಅಚ್ಚರಿಯ ಸಂಗತಿ. ಇಸ್ರೇಲ್-ಅಮೆರಿಕದ ಕ್ಷಿಪಣಿ ದಾಳಿ ಯಾವುದೇ ಕ್ಷಣದಲ್ಲಿ ಸಂಭವಿಸಬಹುದು ಎಂದು ನಿರೀಕ್ಷಿಸಬೇಕಾಗಿತ್ತು. ಆ ಕನಿಷ್ಠ ಜಾಗರೂಕತೆ ಇಲ್ಲದೇ ಇದ್ದುದರಿಂದ ಅವರು ತಮ್ಮ ಸುಪ್ರೀಂ ನಾಯಕನನ್ನು ಕಳೆದುಕೊಳ್ಳಬೇಕಾಯಿತು.
ಕಳೆದ ಬಾರಿ ಅವರು ನಡೆಸಿದ ಬಾಂಬ್ ದಾಳಿ ಅತ್ಯಂತ ಕರಾರುವಕ್ಕಾಗಿತ್ತು. ಅಂತಹ ಅನುಭವದ ನಂತರವೂ ಎಚ್ಚರ ತಪ್ಪಿದ್ದು ಎಲ್ಲರನ್ನೂ ಅಚ್ಚರಿಗೆ ನೂಕಿತ್ತು. ಇಸ್ರೇಲಿ ಗುಪ್ತಚರ ಸಂಸ್ಥೆಗಳು ತಮ್ಮ ವ್ಯವಸ್ಥೆಯೊಳಗೆ ಎಷ್ಟು ಆಳವಾಗಿ ನುಸುಳಿಬಿಟ್ಟಿವೆ ಎಂಬುದನ್ನು ಇರಾನಿನ ನಾಯಕರು ಪತ್ತೆ ಹಚ್ಚುವಲ್ಲಿ ವಿಫಲವಾಗಿದ್ದಾದರೂ ಹೇಗೆ? ಹಾಗಾದರೆ ಇದರ ಹಿಂದೆ ಇರಾನಿನ ಯಾವುದಾದರೂ ಗಹನವಾದ ಕುತಂತ್ರ ಕೆಲಸ ಮಾಡುತ್ತಿದೆಯೇ? ಎಂಬ ಪ್ರಶ್ನೆಯೂ ಉದ್ಭವಿಸದೇ ಇರದು.
ಸೃಷ್ಟಿಯಾಗದ ಅರಾಜಕತೆ
ಈ ಪ್ರದೇಶದಾದ್ಯಂತ ಇರಾನಿನ ದಾಳಿಗಳು ಅವ್ಯಾಹತವಾಗಿ ಮುಂದುವರಿಯುತ್ತಿರುವುದನ್ನು ಗಮನಿಸಿದರೆ ಅಲ್ಲಿ ಇನ್ನೂ ʼನಾಯಕತ್ವʼ ಅಸ್ತಿತ್ವದಲ್ಲಿದೆ ಎಂಬುದಕ್ಕೆ ಸ್ಪಷ್ಟ ಸೂಚನೆಯಾಗಿದೆ. ಇರಾನ್ ಈ ಯುದ್ಧವನ್ನು ಅಮೆರಿಕದ ಅರಬ್ ಮಿತ್ರರಾಷ್ಟ್ರಗಳನ್ನೂ ಒಳಗೊಂಡ ಪ್ರಾದೇಶಿಕ ಯುದ್ಧವನ್ನಾಗಿ ಮಾಡಬೇಕು ಎಂಬುದು ಇರಾನಿನ ಉದ್ದೇಶ. ಅದು ಉದ್ದೇಶಪೂರ್ವಕವಾಗಿಯೇ ʼಡ್ರಿಝಲ್ ಸ್ಟ್ರಟಜಿʼ ಬಳಸುತ್ತಿದೆ ಎಂದು ಫೈನಾನ್ಸಿಯಲ್ ಟೈಮ್ಸ್ ವರದಿ ಮಾಡಿದೆ. ಅದರೆ ಈಗಿನ ಅದರ ಗುರಿ ಏನಿದ್ದರೂ ಪಟ್ಟಣಗಳಲ್ಲಿರುವ ವಾಯುರಕ್ಷಣಾ ಮದ್ದುಗುಂಡುಗಳನ್ನು ಖಾಲಿ ಮಾಡಲು ಹಳೆಯ ಕ್ಷಿಪಣಿಗಳು ಮತ್ತು ಡ್ರೋನ್-ಗಳನ್ನು ಸೀಮಿತ ಸಂಖ್ಯೆಯಲ್ಲಿ ಮಾತ್ರ ಉಡಾಯಿಸಲಾಗುತ್ತಿದೆ. ಸುಧಾರಿತ ಮತ್ತು ಆಧುನಿಕ ಶಸ್ತ್ರಾಸ್ತ್ರಗಳನ್ನು ಮುಂದಿನ ಕಾರ್ಯಾಚರಣೆಗಾಗಿ ಕಾಯ್ದಿರಿಸಿದೆ.
ಇದು ಪ್ರತಿದಾಳಿಯ ಬಗ್ಗೆ ಯೋಜನೆ ರೂಪಿಸಿ ಮುನ್ನಡೆಸುತ್ತಿರುವ ಸಂಕೇತವೇ ಹೊರತು ನಾಯಕನಿಲ್ಲದ ಅರಾಜಕತೆಯಲ್ಲ. ಈಗ ನಡೆಯುತ್ತಿರುವ ಸಂಘರ್ಷ ದೀರ್ಘಕಾಲ ಮುಂದುವರಿಯುವುದು ಖಚಿತ ಎಂಬುದಕ್ಕೆ ಇದು ಸಾಕ್ಷಿ. ಹಾಗಾಗಿ ಪಶ್ಚಿಮ ಏಷ್ಯಾದಿಂದ ಹೊರಗಿನ ಜಗತ್ತಿಗೆ ತೈಲ ಪೂರೈಕೆ ಮಾಡುವ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಯು ದೀರ್ಘಕಾಲದ ವರೆಗೆ ಬಂದ್ ಆಗುವ ಸಾಧ್ಯತೆಯೇ ಹೆಚ್ಚು.
ಸೌದಿ ಅರೇಬಿಯಾದ ತೈಲದ ಒಂದು ಭಾಗವು ಭೂಮಾರ್ಗದ ಮೂಲಕ ಕೆಂಪು ಸಮುದ್ರದ ನೈಋತ್ಯ ಬಂದರಿಗೆ ಹರಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಮತ್ತು ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಅಗತ್ಯವಿಲ್ಲದೆ ಅರಬ್ಬಿ ಸಮುದ್ರವನ್ನು ತಲುಪಬಹುದು. ಆದರೆ ಕೆಂಪು ಸಮುದ್ರದ ಕರಾವಳಿ ರಾಷ್ಟ್ರವಾದ ಯೆಮನ್-ನಲ್ಲಿ ಹೌತಿ ಬಂಡುಕೋರರಿದ್ದಾರೆ. ಅವರಿಗೆ ಇರಾನಿನ ಬೆಂಬಲವಿದೆ. ಅವರು ಈ ಹಿಂದೆ ಸೂಯೇಜ್ ಕಾಲುವೆಯನ್ನು ಬಳಸಲಾಗದಂತೆ ಮಾಡಿದ ಇತಿಹಾಸವಿದೆ. ಹಾಗಾಗಿ ಈಗ ಕೆಂಪು ಸಮುದ್ರದಿಂದ ಅರಬ್ಬಿ ಸಮುದ್ರಕ್ಕೆ ಹೋಗುವ ಮಾರ್ಗವನ್ನು ಕೂಡ ತಡೆಯಬಹುದು.
ತೈಲ ಬೆಲೆಯಲ್ಲಿ ಈಗಾಗಲೇ ಏರಿಕೆ ಉಂಟಾಗಿದೆ. ಸಾರಿಗೆ ವೆಚ್ಚವು ಭಾರತದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಇರಾನಿನ ಜನ ತಮ್ಮ ದೇಶದ ಆಡಳಿತದ ವಿರುದ್ಧವೇ ದಂಗೆ ಎದ್ದರೆ ಯುದ್ಧ ಬೇಗ ಕೊನೆಗೊಳ್ಳುತ್ತದೆ. ಅದು ಡೊನಾಲ್ಡ್ ಟ್ರಂಪ್ ಅವರ ಲೆಕ್ಕಾಚಾರ. ಆದರೆ ಇರಾನಿನ ಆಡಳಿತ ಸುಸಜ್ಜಿತವಾದ ಸಂಸ್ಥೆಗಳನ್ನು ಹೊಂದಿದೆ ಮತ್ತು ಅದು ವ್ಯವಸ್ಥೆಯಲ್ಲಿ ಆಳವಾಗಿ ಬೇರುಬಿಟ್ಟಿದೆ ಕೂಡ. ಸಾಮಾನ್ಯ ಸಂದರ್ಭದಲ್ಲಿ ಒಂದು ರಾಷ್ಟ್ರದ ಮೇಲೆ ವಿದೇಶಿ ದಾಳಿ ನಡೆದಾಗ ಅದು ಜನರನ್ನೆಲ್ಲ ಒಗ್ಗೂಡಿಸುತ್ತದೆ. ಇದರಿಂದ ಆಡಳಿತ ದುರ್ಬಲಗೊಳ್ಳುವ ಬದಲಿಗೆ ಮತ್ತಷ್ಟು ಗಟ್ಟಿಯಾಗುತ್ತದೆ.
ಮತ್ತೆ ಮತ್ತೆ ಪ್ರತಿಭಟನೆಗಳು
ಆದರೆ ಇರಾನ್ ನಲ್ಲಿ ಹಾಗಾಗುತ್ತಿಲ್ಲ. ಅಲ್ಲಿ ಪದೇ ಪದೇ ನಡೆಯುತ್ತಿರುವ ಪ್ರತಿಭಟನೆಗಳು ಈಗಿನ ಆಡಳಿತವು ಜನರಿಂದ ಪ್ರತ್ಯೇಕಿಸಲ್ಪಟ್ಟಿದೆ ಎಂಬುದಕ್ಕೆ ಸಾಕ್ಷಿ ಒದಗಿಸುತ್ತಿವೆ.
2021ರಲ್ಲಿ ಭೀಕರ ಬರಗಾಲದಿಂದ ಇರಾನ್ ತತ್ತರಿಸಿಹೋದಾಗ ನೀರು ಪೂರೈಸುವಲ್ಲಿ ಸರ್ಕಾರ ತೋರಿದ ಉದಾಸೀನತೆಯನ್ನು ಪ್ರತಿಭಟಿಸಿ ಜನ ಬೀದಿಗೆ ಇಳಿದಿದ್ದರು. ೨೦೨೨ರಲ್ಲಿ ಮಹಿಳೆಯರ ಜೀವನ ಮತ್ತು ಸ್ವಾತಂತ್ರ್ಯಕ್ಕಾಗಿ ಬೃಹತ್ ಪ್ರತಿಭಟನೆಗಳು ನಡೆದವು. ಕುರ್ದಿಸ್ ಇರಾನಿಯನ್ ಮೂಲದ ಯುವತಿ ಮಹ್ಸಾ ಅಮಿನಿ ಹಿಜಾಬ್ ಧರಿಸಲಿಲ್ಲ ಎಂಬ ಕಾರಣಕ್ಕೆ ನೈತಿಕ ಪೊಲೀಸರು ಬಂಧಿಸಿದರು. ಆಕೆ ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗಲೇ ಮೃತಪಟ್ಟರು. ಅದರಿಂದ ಪ್ರತಿಭಟನೆ ಭುಗಿಲೆದ್ದಿತ್ತು. ಅದು ದೇಶಾದ್ಯಂತ ವ್ಯಾಪಿಸಿ ಹಲವಾರು ತಿಂಗಳುಗಳ ಕಾಲ ವಿಸ್ತರಿಸಿತು.
ಕೆಲವು ತಿಂಗಳ ಹಿಂದೆ ಸರ್ಕಾರದ ಹಣಕಾಸಿನ ಅವ್ಯವಹಾರದಿಂದ ಉಂಟಾಗಿರುವ ಹಣದುಬ್ಬರದ ವಿರುದ್ಧ ಜನ ಭಾರೀ ಪ್ರತಿಭಟನೆ ನಡೆಸಿದ್ದರು. ಕ್ರಮೇಣ ಅದು ಹಿಂಸಾಚಾರಕ್ಕೂ ತಿರುಗಿತ್ತು ಮತ್ತು ಅದರಲ್ಲಿ ಸಾವಿರಾರು ಜನ ಮೃತಪಟ್ಟರು ಎಂದು ವರದಿಯಾಗಿದೆ.
ಜಗ್ಗದ ಸರ್ಕಾರ
ಆದರೆ ಸರ್ಕಾರ ಅಲುಗಾಡಲಿಲ್ಲ. ಅದರ ಉನ್ನತ ನಾಯಕರನ್ನು ಮುಗಿಸಿದರೂ ಕೂಡ ಸರ್ಕಾರ ಜಗ್ಗದೇ ಉಳಿದಿದೆ. ಹಾಗಾಗಿ ಜನರಿಂದ ಹರಡಿರುವ ಅಸಮಾಧಾನವು ಅಯತೊಲ್ಲ ಮರಣದ ಸಂಭ್ರಮಾಚರಣೆಯಾಗಿ ವ್ಯಕ್ತವಾಗಬಹುದೇ ಹೊರತು ಅನಿರೀಕ್ಷಿತವಾಗಿ ಒಬ್ಬ ಹೊಸ ಜನಪ್ರಿಯ ನಾಯಕ ಹುಟ್ಟಿಕೊಂಡು ಪ್ರೇರೇಪಣೆ ನೀಡದೇ ಇಡೀ ಆಡಳಿತವನ್ನೇ ಕಿತ್ತೊಗೆಯುವಂತಹ ಬಂಡಾಯವಾಗಿ ರೂಪುಗೊಳ್ಳುವುದು ಕಷ್ಟವಾಗಿದೆ.
ಅಮೆರಿಕವೇ ನೇತೃತ್ವ ವಹಿಸಿ ಭೂಸೇನೆಯ ಮೂಲಕ ಮುನ್ನುಗ್ಗಿ ಆಕ್ರಮಣ ಮಾಡಿದರೆ ಇರಾನ್ ಆಡಳಿತವನ್ನು ಉರುಳಿಸಿಬಿಡಬಹುದು. ಆದರೆ ಅದು ಅಸಂಭವವೆಂದು ಕಾಣುತ್ತದೆ. ಹಾಗೇನಾದರೂ ಮಾಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕದ ಸೈನಿಕರು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಇದರಿಂದ ಟ್ರಂಪ್ ಅವರ ʼಮಗಾʼ (MAGA) ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಬಹುದು. ವಿದೇಶಿ ಯುದ್ಧಗಳಿಗೆ ಹೊರಟು ಅಮೆರಿಕವು ತನ್ನ ಸೈನಿಕರನ್ನು ಮತ್ತು ಸಂಪತ್ತನ್ನೂ ಪೋಲು ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬುದು ಟ್ರಂಪ್ ಬೆಂಬಲಿಗರ ನಿಲುವಾಗಿದೆ.
ಇಸ್ರೇಲ್ ತನ್ನ ಸೈನಿಕರನ್ನು ಕೂಡ ಕಳುಹಿಸಿಕೊಡಬಹುದು. ಆದರೆ ಅದೂ ಕೂಡ ದೀರ್ಘಕಾಲದ ಯುದ್ಧದಲ್ಲಿ ಸಿಕ್ಕಿಹಾಕಿಕೊಳ್ಳುವ ಅಪಾಯವಿದೆ. ಅಂತಹ ಯುದ್ಧದ ಬಗ್ಗೆ ಇಸ್ರೇಲಿನ ಮತಾಂಧರು ಮಾತ್ರ ಆಸಕ್ತಿ ಹೊಂದಿರಬಹುದು. ಅವರು ತೀರಾ ಅಲ್ಪಸಂಖ್ಯಾತರು ಎಂಬುದನ್ನು ಗಮನಿಸಬೇಕು.
ಒಂದು ವೇಳೆ ಈಗಿರುವ ಆಡಳಿತವು ಪತನಗೊಳ್ಳದೇ ಹೋದರೆ ಯುದ್ಧ ಯಾವಾಗ ಕೊನೆಗೊಳ್ಳಬೇಕು ಎಂಬುದನ್ನು ಅದೇ ನಿರ್ಧರಿಸುತ್ತದೆ. ಇದರ ಇನ್ನೊಂದು ಅರ್ಥ ತೈಲ ಪೂರೈಕೆಯಲ್ಲಿ ದೀರ್ಘಕಾಲದ ವ್ಯತ್ಯಯ ಉಂಟಾಗುತ್ತದೆ. ಇದರ ನೇರ ಲಾಭವಾಗುವುದು ರಷ್ಯಾಕ್ಕೆ.
ಅಮೆರಿಕದಲ್ಲಿ ತೈಲ ಬೆಲೆಗಳು ಅತಿಯಾಗಿ ಏರಿಕೆಯಾಗುವುದನ್ನು ಟ್ರಂಪ್ ಬಯಸುವುದಿಲ್ಲ. ಯಾಕೆಂದರೆ ಅಲ್ಲಿ ಡೆಮೊಕ್ರಟ್ ನಿಯಂತ್ರಿತ ಕಾಂಗ್ರೆಸ್-ನ್ನು ಎದುರಿಸುವ ಅವರ ಹಾದಿ ಅಷ್ಟೇನು ಸುಲಭವಲ್ಲ. ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಮತ್ತು ರಷ್ಯಾದ ತೈಲ ಆದಾಯವನ್ನು ತಡೆಯುವ ನಿಟ್ಟಿನಲ್ಲಿ ಈ ಹಿಂದೆ ಎಷ್ಟೇ ಮಾತುಗಳಾಗಿದ್ದರೂ ಕೂಡ ಪರ್ಷಿಯನ್ ಕೊಲ್ಲಿ ಹಾಕಿರುವ ಅಡ್ಡಗಾಲಿನಿಂದಾಗಿ ಕುಂಠಿತಗೊಂಡ ಪೂರೈಕೆಯನ್ನು ಸರಿದೂಗಿಸಲು ರಷ್ಯಾದಿಂದ ತೈಲ ಹರಿದುಬರುವುದನ್ನು ಅವರು ಸ್ವಾಗತಿಸುತ್ತಾರೆ.
ನೈಜೀರಿಯಾದಿಂದ ತೈಲ ಹರಿದುಬರಬಹುದು. ಹಾಗೆ ಮಾಡುವ ಮೂಲಕ ಅಮೆರಿಕ ಮತ್ತು ರಷ್ಯಾ ಪರ್ಷಿಯನ್ ಕೊಲ್ಲಿಯಲ್ಲಿನ ಹೊರ್ಮುಜ್ ಜಲಸಂಧಿ ಹಾಗೂ ಕೆಂಪು ಸಮುದ್ರವನ್ನು ಅರಬ್ಬಿ ಸಮುದ್ರದಿಂದ ಪ್ರತ್ಯೇಕಿಸುವ ಬಾಬ್-ಅಲ್-ಮಂದಬ್ ಮಾರ್ಗಗಳನ್ನು ತಪ್ಪಿಸಬಹುದು. ಅದಕ್ಕೆ ಬದಲಾಗಿ ಆಫ್ರಿಕದ ದಕ್ಷಿಣ ತುದಿಯಲ್ಲಿರುವ ಕೇಪ್ ಆಫ್ ಗುಡ್ ಹೋಪ್ ಮೂಲಕ ಅಥವಾ ಪೆಸಿಫಿಕ್ ಸಾಗರದ ಮೂಲಕ ದೀರ್ಘವಾದ ಮಾರ್ಗಗಳಲ್ಲಿ ತೈಲ ಹರಿದುಬರಬೇಕಾಗುತ್ತದೆ. ಈಗಾಗಲೇ ತೈಲ ಬೆಲೆ ಏರುಗತಿಯಲ್ಲಿದೆ. ಹೆಚ್ಚುವರಿ ಸಾರಿಗೆ ವೆಚ್ಚದ ಹೊರೆಯಿಂದಾಗಿ ಭಾರತದ ಮೇಲೆ ಮತ್ತಷ್ಟು ನಕಾರಾತ್ಮಕ ಪರಿಣಾಮ ಬೀರಿದರೆ ಅಚ್ಚರಿಯಿಲ್ಲ.
ಭೂರಾಜಕೀಯದ ಸಂಘರ್ಷಗಳು ಚಿನ್ನ ಮತ್ತು ಅಮೆರಿಕದ ಸರ್ಕಾರಿ ಬಾಂಡ್-ಗಳ ಮೌಲ್ಯವನ್ನು ಹೆಚ್ಚಿಸುತ್ತವೆ. ಯಾಕೆಂದರೆ ಭೂರಾಜಕೀಯದ ವಿಷಯ ಬಂದಾಗ ಅಮೆರಿಕ ಇಂದಿಗೂ ಪ್ರಬಲ ಶಕ್ತಿಯಾಗಿದೆ. ರೂಪಾಯಿ ಮೌಲ್ಯದಲ್ಲಿ ಉಂಟಾಗುವ ಕುಸಿತವು ಆಮದು ಬೆಲೆಗಳನ್ನು ಹೆಚ್ಚಿಸಿ ಹಣದುಬ್ಬರಕ್ಕೆ ದಾರಿ ಮಾಡಿಕೊಡುತ್ತದೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

