
ಧಾರ್ಮಿಕ ಸಿದ್ಧಾಂತ ಚುನಾವಣೆಗಳನ್ನು ತಿರುಚಲು ಮತ್ತು ಜಾತ್ಯತೀತ ವ್ಯವಸ್ಥೆಯನ್ನು ದುರ್ಬಲವಾಗಿಸಲು ಬಳಕೆಯಾಗುತ್ತಿದೆ. ಇದು ನಿರಂಕುಶ ಪ್ರಭುತ್ವದ ಕಡೆಗೆ ಬದಲಾವಣೆಯಾಗುವ ಕಳವಳವನ್ನು ಗಟ್ಟಿಗೊಳಿಸುತ್ತಿದೆ
ಪ್ರಾಚೀನ ಮತ್ತು ಮಧ್ಯಕಾಲೀನ ಅವಧಿಯಲ್ಲಿ ಪುರೋಹಿತರು ಮತ್ತು ರಾಜರ ನಾಯಕತ್ವದಲ್ಲಿ ಪ್ರಭುತ್ವ ಮತ್ತು ಧರ್ಮವು ಒಂದು ಕ್ರಿಯಾತ್ಮಕ ಘಟಕವಾಗಿ ಕಾರ್ಯನಿರ್ವಹಿಸುತ್ತಿತ್ತು. ಉದಾಹರಣೆಗೆ ಭಾರತದಲ್ಲಿ ಚಂದ್ರಗುಪ್ತ ಮೌರ್ಯನ ರಾಜ್ಯವು ಮೊಟ್ಟಮೊದಲ ಜಾತ್ಯತೀತವಲ್ಲದ ರಾಜಪ್ರಭುತ್ವದ ಸಾಮ್ರಾಜ್ಯವಾಗಿ ಸ್ಥಾಪನೆಗೊಂಡಿತು. ಅದಕ್ಕೆ ಕೌಟಿಲ್ಯ ಹಿಂದೂ ಪ್ರಧಾನ ಅರ್ಚಕರಾಗಿದ್ದರೆ ಚಂದ್ರಗುಪ್ತ ರಾಜನಾಗಿದ್ದ.
ಆದರೆ ವೇತನ ಪದ್ಧತಿಯೂ ಸೇರಿದಂತೆ ಕೌಟಿಲ್ಯನ ಅಧಿಕಾರಗಳು ರಾಜನ ಅಧಿಕಾರಕ್ಕಿಂತ ಅಧಿಕವಾಗಿತ್ತು. ಕೌಟಿಲ್ಯನ ಸಲಹೆಗಳನ್ನು ಕೇಳಿಯೇ ಚಂದ್ರಗುಪ್ತ ಆಡಳಿತ ನಡೆಸಬೇಕಾದ ಅಗತ್ಯವಿತ್ತು. ಅಂದಹಾಗೆ ಇದು ಪ್ರಾಚೀನ ಭಾರತದಲ್ಲಿ ಮತ್ತು ಜಗತ್ತಿನಲ್ಲಿಯೇ ಮೊದಲ ಹಿಂದೂ ಧಾರ್ಮಿಕ ರಾಜಪ್ರಭುತ್ವದ ರಾಜ್ಯವಾಗಿತ್ತು.
ಚಂದ್ರಗುಪ್ತ ಶೂದ್ರನೆಂದೇ ಗುರುತಿಸಿಕೊಂಡಿದ್ದ. ಯಾಕೆಂದರೆ ಆತ ಮುರಾ ಎಂಬ ಶೂದ್ರ ಮಹಿಳೆಯ ಮಗ. ಹಾಗಿದ್ದೂ ಆತನ ಜಾತಿ ಹಿನ್ನೆಲೆಯ ಬಗೆಗೆ ನಮ್ಮಲ್ಲಿ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಬ್ರಾಹ್ಮಣನಾದ ಹಾಗೂ ‘ಅರ್ಥಶಾಸ್ತ್ರ’ (ಕ್ರಿ.ಪೂ. 3ನೇ ಶತಮಾನ) ಗ್ರಂಥದ ಲೇಖಕನಾದ ಕೌಟಿಲ್ಯನ ಬಗ್ಗೆ ನಮ್ಮ ಬಳಿ ಅಧಿಕೃತ ಮಾಹಿತಿ ಇದೆ. ಬ್ರಾಹ್ಮಣೀಯ ಸಾಮಾಜಿಕ ವ್ಯವಸ್ಥೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಇಂತಹ ಜಾತೀಯವಾದ ಆಡಳಿತ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಲು ಈ ಅರ್ಥಶಾಸ್ತ್ರವು ಸೂಚಿಸುತ್ತದೆ.
ಯುರೋಪ್-ನಲ್ಲಿ ಪ್ರಾಚೀನ ಕಾಲದ ಕೊನೆಯ ಭಾಗದಲ್ಲಿ ಇದೇ ಮಾದರಿಯ ರೋಮನ್ ಕ್ಯಾಥೋಲಿಕ್ ಹೋಲಿ ಸೀ ಪ್ರಭುತ್ವವು ಹೊರಹೊಮ್ಮಿತು. ಅಲ್ಲಿ ಪೋಪ್ ಕೌಟಿಲ್ಯನಂತೇ ಇದ್ದರು. ಅವರು ಯುರೋಪಿನ ಪ್ರತಿಯೊಬ್ಬ ದೊರೆಯ ಮೇಲೆ ನಿಯಂತ್ರಣ ಹೊಂದಿದ್ದರು. ರಾಜನು ಅವರ ಮಾರ್ಗದರ್ಶನದಲ್ಲಿಯೇ ಕಾರ್ಯ ನಿರ್ವಹಿಸಬೇಕಾಗಿತ್ತು.
ಪೋಪ್ ವಿರುದ್ಧ ದಂಗೆ ಎದ್ದ ಹೆನ್ರಿ
ಇಂತಹ ನಿಯಂತ್ರಣಕ್ಕೆ ಭಂಗ ಉಂಟಾಗಿದ್ದು ಮಾರ್ಟಿನ್ ಲೂಥರ್ ನಡೆಸಿದ ಪ್ರೊಟೆಸ್ಟೆಂಟ್ ದಂಗೆ ಮತ್ತು ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಪಂಗಡದ ಉದಯದ ಬಳಿಕ. ಪೋಪ್ ವಿರುದ್ಧ ಮೊಟ್ಟ ಮೊದಲ ದಂಗೆ ಎದ್ದ ಕೀರ್ತಿ ಬ್ರಿಟಿಷ್ ದೊರೆ ಎಂಟನೇ ಹೆನ್ರಿ (ಜೂನ್ 28, 1491 - ಜನವರಿ 28, 1547)ಗೆ ಸಲ್ಲಬೇಕು.
ಎಂಟನೇ ಹೆನ್ರಿಯ ಈ ದಂಗೆಯನ್ನು ಬೌದ್ಧ ಧರ್ಮದ ದೃಷ್ಟಿಕೋನವನ್ನು ಹೊಂದಿದ್ದ ರಾಜ ಅಶೋಕನು ಬ್ರಾಹ್ಮಣ ಪುರೋಹಿತಶಾಹಿ ಹಿಂದೂ ಧರ್ಮದ ವಿರುದ್ಧ ನಡೆಸಿದ ದಂಗೆಗೆ ಹೋಲಿಸಬಹುದು. ಹಾಗಿದ್ದೂ ಆತ ಧರ್ಮವನ್ನು ಪ್ರಭುತ್ವದಿಂದ ಪ್ರತ್ಯೇಕಿಸಲಿಲ್ಲ. ಅದಕ್ಕೆ ಬದಲಾಗಿ ಬೌದ್ಧ ಧರ್ಮವನ್ನು ತನ್ನ ಸಾರ್ವಭೌಮತ್ವದ ಅಧೀನಕ್ಕೆ ಒಳಪಡಿಸಿದ. ಇದು ಎಂಟನೇ ಹೆನ್ರಿಯು ಹೋಲಿ ಸೀ ಪ್ರಭುತ್ವದ ಪೋಪ್ ಅವರಿಗೆ ಸಮಾನವಾಗಿ ಆರ್ಚ್ ಬಿಷಪ್ ಸಂಸ್ಥೆಯನ್ನು ಸ್ಥಾಪಿಸಿ ಆಂಗ್ಲಿಕನ್ ಚರ್ಚ್ ಅನ್ನು ಅದರ ಅಧೀನಕ್ಕೆ ಒಳಪಡಿಸಿದ ರೀತಿಯಲ್ಲಿಯೇ ಇತ್ತು.
ಬ್ರಿಟನ್ನಿನಲ್ಲಿ ಯಾವತ್ತೂ ಪ್ರಭುತ್ವದ ನೀತಿಗೆ ನಿರ್ದೇಶನ ನೀಡಲು ಆರ್ಚ್ ಬಿಷಪ್-ಗೆ ಸಾಧ್ಯವಾಗಲಿಲ್ಲ.
ಕ್ರಮೇಣ ಪ್ರಭುತ್ವದಿಂದ ಧರ್ಮವನ್ನು ಪ್ರತ್ಯೇಕಿಸುವ ಮೂಲಕ ಬ್ರಿಟನ್ ಒಂದು ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರವಾಗಿ ವಿಕಸನ ಹೊಂದಿತು. ಇದು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಆ ಒಂದೇ ಒಂದು ಪ್ರೊಟೆಸ್ಟೆಂಟ್ ಧರ್ಮಕ್ಕೂ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ನಡೆಸುವಲ್ಲಿ ಯಾವುದೇ ಪಾತ್ರ ಇಲ್ಲದ ಜಾತ್ಯತೀತ ರಾಷ್ಟ್ರದ ಕಲ್ಪನೆಯನ್ನು ಸೃಷ್ಟಿಸಲು ನೆರವಾಯಿತು. ಇಷ್ಟು ಮಾತ್ರವಲ್ಲದೆ ಇದರಿಂದ ಯುರೋಪ್ ಮತ್ತು ಅಮೆರಿಕ ಖಂಡದಲ್ಲಿ ಅನೇಕ ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರಗಳು ಹೊರಹೊಮ್ಮಲು ಸಾಧ್ಯವಾಯಿತು.
ಆದರೆ, ಮುಸ್ಲಿಂ ಜಗತ್ತು ಇಂತಹ ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆ ಹೊರಹೊಮ್ಮಲು ಯಾವುದೇ ಅವಕಾಶ ನೀಡಲಿಲ್ಲ. ಆದ್ದರಿಂದ, ಆಧುನಿಕ ರಾಜಕೀಯ ವ್ಯವಸ್ಥೆಯಾದ ಪ್ರಜಾಪ್ರಭುತ್ವವು ಕೆಲವೇ ಕೆಲವು ರಾಷ್ಟ್ರಗಳನ್ನು ಹೊರತುಪಡಿಸಿ ಮುಸ್ಲಿಂ ಜಗತ್ತಿನಲ್ಲಿ ಸ್ಥಿರವಾಗಿ ನೆಲೆಗೊಳ್ಳಲಿಲ್ಲ.
ಬಹುಧರ್ಮೀಯ ಭಾರತ ಸಮಾಜ
ಜಗತ್ತಿನ ಪೂರ್ವ ಭಾಗದಲ್ಲಿ ಭಾರತ ಮಾತ್ರ 1949ರಲ್ಲಿ ಪ್ರಜಾಸತ್ತಾತ್ಮಕ ಸಂವಿಧಾನವನ್ನು ಅಳವಡಿಸಿಕೊಂಡಿತು. ಆ ಹೊತ್ತಿಗೆ ಇದು ಹೆಚ್ಚು ಸಂಕೀರ್ಣವಾದ ಮತ್ತು ಬಹುಧರ್ಮೀಯ ಸಮಾಜವನ್ನು ಹೊಂದಿತ್ತು. ಯಾಕೆಂದರೆ ಹಲವಾರು ಧಾರ್ಮಿಕ ಮತ್ತು ರಾಜಕೀಯ ಶಕ್ತಿಗಳು ಮಧ್ಯಕಾಲೀನದ ಕೊನೆಯ ಭಾಗ ಮತ್ತು ಆಧುನಿಕ ಅವಧಿಗಳಲ್ಲಿ ಭಾರತವನ್ನು ಪ್ರವೇಶಿಸಿದ್ದವು. ಇವು ಹಿಂದೂ-ಬೌದ್ಧ, ಸಿಖ್ ಮತ್ತು ಜೈನ ಧಾರ್ಮಿಕ ಶಕ್ತಿಗಳ ಮೇಲೆ ಪ್ರಭಾವ ಬೀರಿದ್ದವು ಮಾತ್ರವಲ್ಲದೆ ಅವುಗಳನ್ನು ಅಧೀನಕ್ಕೆ ಪಡೆದಿದ್ದವು.
ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ, ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳು ಭಾರತವನ್ನು ಹೆಚ್ಚು ಸಂಕೀರ್ಣವಾದ ಬಹು-ಧರ್ಮೀಯ ರಾಷ್ಟ್ರವನ್ನಾಗಿ ಮಾಡಿದವು. ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮ ಎರಡೂ ರಾಜಕೀಯ ಇತಿಹಾಸವನ್ನು ಹೊಂದಿವೆ. ಭಾರತೀಯ ಮುಸ್ಲಿಂ ಆಡಳಿತಗಾರರು ಸಹ ಧಾರ್ಮಿಕ ರಾಜಪ್ರಭುತ್ವದ ಆಡಳಿತವನ್ನು ಸ್ಥಾಪಿಸಿದರು ಮತ್ತು ಶತಮಾನಗಳ ಕಾಲ ಭಾರತದ ದೊಡ್ಡ ಭಾಗಗಳನ್ನು ಆಳಿದರು.
ಕ್ರಿಶ್ಚಿಯನ್ ಧರ್ಮವು ವಸಾಹತುಶಾಹಿ ಆಡಳಿತದೊಂದಿಗೆ ತನ್ನ ರಾಜಕೀಯ ಸಂಬಂಧವನ್ನು ಹೊಂದಿದೆ, ಆದರೂ ಇದು ಸಾಂಕೇತಿಕವಾಗಿ ಕ್ರಿ.ಶ ಒಂದನೇ ಶತಮಾನದಲ್ಲಿಯೇ ಭಾರತವನ್ನು ತಲುಪಿತ್ತು. ಈ ಸಾಮಾಜಿಕ ಸಂಕೀರ್ಣತೆಯ ದೃಷ್ಟಿಯಿಂದ, ಆಧುನಿಕ ಭಾರತೀಯ ಚಿಂತಕರು ಪಾಶ್ಚಿಮಾತ್ಯ ದೇಶಗಳ ಜಾತ್ಯತೀತ ಪ್ರಜಾಪ್ರಭುತ್ವಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕಾಯಿತು.
ಐತಿಹಾಸಿಕವಾಗಿ ಕ್ರೈಸ್ತ ಧರ್ಮವು ಒಂದು ಪ್ರಬಲ ಧರ್ಮವಾಗಿ ಹೊರಹೊಮ್ಮಿದ ಬಳಿಕ ಪಾಶ್ಚಿಮಾತ್ಯ ರಾಷ್ಟ್ರಗಳು ಬಹುತೇಕ ‘ಏಕಧರ್ಮ’ದ ರಾಷ್ಟ್ರಗಳಾದವು. ಪ್ರಜಾಪ್ರಭುತ್ವವು ಭದ್ರವಾಗಿ ನೆಲೆಗೊಳ್ಳುತ್ತಿದ್ದಂತೆ ಅವುಗಳ ಜಾತ್ಯತೀತತೆಯು ಕೂಡ ಮೂಲತಃ ಪ್ರಭುತ್ವವನ್ನು ಧರ್ಮದಿಂದ ಪ್ರತ್ಯೇಕಿಸುವ ಒಂದು ಹೊಸ ವಿಧಾನವಾಗಿತ್ತು.
ಅಂಬೇಡ್ಕರ್ – ನೆಹರೂ ಅವರಿಗಿದ್ದ ಅರಿವು
ಆದರೆ ಭಾರತ ಹಾಗಲ್ಲ. ಅದು ಬಹುಧರ್ಮೀಯ ಮತ್ತು ಬಹು-ಜಾತಿಗಳ ದೇಶವಾಗಿತ್ತು ಮತ್ತು ದೇಶವಾಗಿದೆ. ಇದು ಜಾತಿ ಮತ್ತು ಧರ್ಮ ಎರಡೂ ಸಂಘರ್ಷಗಳನ್ನು ಎದುರಿಸಬೇಕಾಗಿತ್ತು. ಇದರ ಜಾತ್ಯತೀತತೆ ಎಲ್ಲರಿಗಿಂತ ಭಿನ್ನವಾದುದು. ಇತರ ಯಾವುದೇ ಭಾರತೀಯ ಚಿಂತಕರಿಗಿಂತ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡವರೆಂದರೆ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಪಂಡಿತ್ ಜವಾಹರ್ ಲಾಲ್ ನೆಹರೂ.
ವಸಾಹತುಶಾಹಿ ಮುಕ್ತ ಭಾರತವನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಸ್ವಾತಂತ್ರ್ಯ ಹೋರಾಟವು ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರದ ಹೊಸ ಕಲ್ಪನೆಗೆ ಜೀವ ತುಂಬಿತು. 1947ರಿಂದ 2014ರ ತನಕ ಭಾರತವು ಅಪ್ಪಟ ಜಾತ್ಯತೀತ ಪ್ರಜಾಪ್ರಭುತ್ವವಾಗಿ ಕಾರ್ಯನಿರ್ವಹಿಸಿತು.
ಭಾರತೀಯ ಪ್ರಜಾಪ್ರಭುತ್ವವು ಸುಖಾಸುಮ್ಮನೆ ವಿಕಸನಗೊಂಡಿದ್ದಲ್ಲ. ಬದಲಾಗಿ ಅದು ಜನರ ಇಚ್ಛೆಯಾಗಿತ್ತು. ಅಂತಹ ಜಾತ್ಯತೀತ ಪ್ರಜಾಪ್ರಭುತ್ವವನ್ನು ನೆಲೆಗೊಳಿಸುವ ಪ್ರಕ್ರಿಯೆಯಲ್ಲಿ ಅಂಬೇಡ್ಕರ್, ನೆಹರೂ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಮುಖ ಪಾತ್ರ ವಹಿಸಿದರು. ಮಹಾತ್ಮಾ ಗಾಂಧಿ ಅವರು ಈ ಪ್ರಕ್ರಿಯೆಗೆ ಬೇಕಾದ ನೈತಿಕ ಬಲವನ್ನು ತುಂಬಿದರು.
ಇಪ್ಪತ್ತೊಂದನೇ ಶತಮಾನವು ಜಾಗತಿಕ ಪ್ರಜಾಪ್ರಭುತ್ವ ರಾಷ್ಟ್ರಗಳ ‘ಜಾತ್ಯತೀತ ಸ್ವರೂಪವನ್ನು ಕಿತ್ತು ಹಾಕುವ’ ಪ್ರಕ್ರಿಯೆಗೆ ಸಾಕ್ಷಿಯಾಗಿದೆ. ನಿಜಕ್ಕೂ ಇದೊಂದು ವಿಚಿತ್ರ ಪ್ರಕ್ರಿಯೆ. ಕೆಲವು ರಾಷ್ಟ್ರಗಳು ಇದನ್ನು ಜಿದ್ದಿಗೆ ಬಿದ್ದು ಮಾಡುತ್ತಿವೆ. ಇನ್ನು ಕೆಲವು ನಿಧಾನಕ್ಕೆ, ಯಾವುದೇ ಅವಸರವಿಲ್ಲದೆ ಮಾಡುತ್ತಿವೆ. ಅಮೆರಿಕದಲ್ಲಿನ ರಿಪಬ್ಲಿಕನ್ ಗಳು ಮತ್ತು ಬ್ರಿಟನ್ ಮತ್ತು ಇತರ ಯುರೋಪಿಯನ್ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿನ ಸಂಪ್ರದಾಯವಾದಿಗಳು ತಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿಧಾನಕ್ಕೆ ಜಾತ್ಯತೀತತೆಯಿಂದ ದೂರ ಸರಿಸುತ್ತಿದ್ದಾರೆ.
ಕೌಟಿಲ್ಯನ ಮನುಧಾರ್ಮಿಕ ಸಿದ್ಧಾಂತ
ಆದರೆ ಭಾರತದ ಕಥೆ ಹಾಗಲ್ಲ. ಮುಸ್ಲಿಂ ಧರ್ಮಾಧಾರಿತ ರಾಜಪ್ರಭುತ್ವಗಳು ಮತ್ತು ಅಸ್ಥಿರ ಇಸ್ಲಾಮಿಕ್ ಪ್ರಜಾಪ್ರಭುತ್ವಗಳು, ಬೌದ್ಧ-ಕಮ್ಯುನಿಸ್ಟ್ ಸರ್ವಾಧಿಕಾರಗಳು ಅಥವಾ ರಾಜಪ್ರಭುತ್ವಗಳಿಂದ ಸುತ್ತುವರಿದಿರುವ ಏಕೈಕ ಸ್ಥಿರ ಪ್ರಜಾಪ್ರಭುತ್ವದ ರಾಷ್ಟ್ರವೆಂದರೆ ಭಾರತ.
ಭಾರತೀಯ ಪ್ರಜಾಪ್ರಭುತ್ವವು 75 ವರ್ಷಗಳ ಕಾಲ ಸ್ಥಿರವಾಗಿ ಕಾರ್ಯನಿರ್ವಹಿಸಿದ ಬಳಿಕ ಈಗ ಜಾತ್ಯತೀತ ವ್ಯವಸ್ಥೆಯನ್ನೇ ಧಿಕ್ಕರಿಸುವ ಹಾದಿಯಲ್ಲಿದೆ. ಅದಕ್ಕೆ ಮುಖ್ಯ ಕಾರಣ ಪ್ರಭುತ್ವವನ್ನು ತನ್ನ ವಶಕ್ಕೆ ತೆಗೆದುಕೊಂಡಿರುವ ಆರ್.ಎಸ್.ಎಸ್. ಭಾರತೀಯ ಪ್ರಭುತ್ವ ಮತ್ತು ಅದರ ಅಧೀನ ಸಂಸ್ಥೆಗಳು ಜಾತ್ಯತೀತತೆಯನ್ನು ಕಳಚಿಕೊಳ್ಳುವ ಹಾದಿಯಲ್ಲಿವೆ. ಅವು ಮೂಲಭೂತವಾದದ ಹುಮ್ಮಸ್ಸಿನಿಂದ ಕುಣಿದಾಡುತ್ತಿರುವುದಕ್ಕೆ ಮುಖ್ಯ ಕಾರಣ ಕೌಟಿಲ್ಯನ ಮನುಧಾರ್ಮಿಕ ಸಿದ್ಧಾಂತ.
ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಈ ಪ್ರಾಚೀನ ಚಿಂತಕರು ಮತ್ತು ಇತರ ಸಂಸ್ಕೃತ ಧಾರ್ಮಿಕ ಗ್ರಂಥಗಳ ಹಿಡಿತಕ್ಕೆ ತರಲಾಗುತ್ತಿದೆ ಎಂಬುದನ್ನು ಗಮನಿಸಬೇಕು.
ಆಧುನಿಕ ಚಂದ್ರಗುಪ್ತ ಮೋದಿ
ಈ ಪ್ರಕ್ರಿಯೆ ಶುರುವಾಗಿದ್ದು 1999ರಿಂದ 2004ರ ವರೆಗಿನ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತದ ಅವಧಿಯಲ್ಲಿ. ಅದನ್ನೀಗ ಬಹು ಎಚ್ಚರಿಕೆಯಿಂದ ಮಾಡಲಾಗುತ್ತಿದೆ. ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಅವರು ಒಂದು ರೀತಿಯಲ್ಲಿ ಹಿಂದೂ ಮುಖ್ಯ ಅರ್ಚಕರಾಗಿ ಕೆಲಸ ಮಾಡಿದರೆ ಹಿಂದುಳಿದ ವರ್ಗದ ಹಣೆಪಟ್ಟಿ ಕಟ್ಟಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಆಧುನಿಕ (ಚುನಾಯಿತ) ಚಂದ್ರಗುಪ್ತನಾಗಿ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಪ್ರತಿಯೊಂದು ಸಂಸ್ಥೆಯನ್ನೂ ಜಾತ್ಯತೀತತೆಯ ಚೌಕಟ್ಟಿನಿಂದ ಹೊರಗೆ ತರುತ್ತಿದ್ದಾರೆ ಮತ್ತು ಅವುಗಳಿಗೆ ಅಪ್ಪಟ ಮೂಲಭೂತವಾದಿ ಸರ್ಕಾರಿ ಸಂಸ್ಥೆಗಳ ಸ್ವರೂಪ ನೀಡುವ ಕೆಲಸ ಮಾಡುತ್ತಿದ್ದಾರೆ.
ಮಾನವ ಇತಿಹಾಸದಲ್ಲಿ ಬಹಳ ಸುದೀರ್ಘ ಕಾಲದ ವರೆಗೆ ಧರ್ಮ ಮತ್ತು ಪ್ರಭುತ್ವವು ಒಂದೇ ಘಟಕವಾಗಿ ಕೆಲಸ ಮಾಡಿದ್ದರಿಂದ ಧರ್ಮವನ್ನು ಪ್ರಭುತ್ವದಿಂದ ಪ್ರತ್ಯೇಕಿಸುವುದು ಕಷ್ಟಕರ ಪ್ರಕ್ರಿಯೆಯಾಗಿತ್ತು. ಅಂತಹ ಸಾಧ್ಯತೆಯ ಶ್ರಮದಾಯಕ ಸಿದ್ಧಾಂತವು ಅದಕ್ಕೆ ಅಗತ್ಯವಾಗಿತ್ತು.
ನಿಕೊಲೊ ಮ್ಯಾಕಿಯಾವೆಲ್ಲಿ (Niccolo Machiavelli 1469-1527) ಅವರ ಮೇರುಕೃತಿ ‘ದಿ ಪ್ರಿನ್ಸ್’ನಲ್ಲಿ ಅಂತಹ ಪ್ರಭುತ್ವ ಮತ್ತು ಧರ್ಮವನ್ನು ಪ್ರತ್ಯೇಕಿಸುವ ಮೊದಲ ಪ್ರಸ್ತಾಪ ಕಂಡುಬರುತ್ತದೆ. ಆದರೆ ಒಂದು ರಾಷ್ಟ್ರದ ಆಡಳಿತವನ್ನು ಧರ್ಮದಿಂದ ದೂರವಿರಿಸಿ ಜಾತ್ಯತೀತವಾಗಿ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ಅದೇ ಹೊತ್ತಿನಲ್ಲಿ ತಮ್ಮ ವೈಯಕ್ತಿಕ ಜೀವನದಲ್ಲಿ ಧರ್ಮವನ್ನು ಅನುಸರಿಸುವ ವ್ಯಕ್ತಿಗಳು ಜಾತ್ಯತೀತವಾದ ರೀತಿಯಲ್ಲಿ (ಯಾವುದೇ ಧರ್ಮವನ್ನು ಬೆಂಬಲಿಸದೆ) ಒಂದು ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ಒಂದು ಸುದೀರ್ಘ ಮತ್ತು ಕಷ್ಟಕರ ಪ್ರಕ್ರಿಯೆಯಾಗಿತ್ತು.
ಸೈದ್ಧಾಂತಿಕ ಚಿಂತಕರಿಲ್ಲ ಸಮುದಾಯಗಳು
ಭಾರತಕ್ಕೆ ಅಂತಹ ಸೈದ್ಧಾಂತಿಕ ವೈಚಾರಿಕತೆಯ ಇತಿಹಾಸವೇ ಇರಲಿಲ್ಲ. ಯಾಕೆಂದರೆ ಬ್ರಿಟಿಷರು ವಸಾಹತುಶಾಹಿ ವ್ಯವಸ್ಥೆಗಳನ್ನು ಸ್ಥಾಪನೆ ಮಾಡುವ ಮೊದಲು ಸಂಘಟಿತ ಧರ್ಮವಾದ ಹಿಂದೂ ಧರ್ಮದ ರಚನೆಗಳಿಂದ ಹೊರಗಿಡಲಾಗಿದ್ದ ಬಹುಸಂಖ್ಯಾತ ಶೂದ್ರ/ದಲಿತ/ಆದಿವಾಸಿ ಸಮೂಹಗಳಿಗೆ ಶಿಕ್ಷಣದ ಹಕ್ಕೇ ಇರಲಿಲ್ಲ.
ಇದಕ್ಕೆ ಮುಖ್ಯ ಕಾರಣ ಧರ್ಮದ ದೃಷ್ಟಿಕೋನದಿಂದ ಏನಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಸಮುದಾಯದಿಂದ ಯಾವುದೇ ಸೈದ್ಧಾಂತಿಕ ಚಿಂತಕರು ಇರಲಿಲ್ಲ. ಅದೃಷ್ಟವೆಂಬಂತೆ ಇಂತಹ ಹೊತ್ತಿನಲ್ಲಿ ಅಂಬೇಡ್ಕರ್ ಅವರು ಹೊರಹೊಮ್ಮಿದರು ಮತ್ತು ‘ಹಿಂದೂ ರಾಷ್ಟ್ರ’ ಸ್ಥಾಪನೆಯಿಂದ ಆಗುವ ಅಪಾಯವನ್ನು ಮನಗಂಡರು. ಉನ್ನತ ಮಟ್ಟದ ಏಕೈಕ ಶೂದ್ರ ನಾಯಕರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಅಂಬೇಡ್ಕರ್ ಅವರಂತೆ ಚಿಂತಕರಾಗಿರಲಿಲ್ಲ. ಆದರೆ ಮುಸ್ಲಿಂ ಪ್ರಶ್ನೆಯ ಬಗೆಗೆ ಅವರಿಗೆ ಕಾಳಜಿ ಇತ್ತು.
ನೆಹರೂ ಕೂಡ ಎರಡು ರಾಷ್ಟ್ರಗಳ ಕದನಗಳ ಹಿನ್ನೆಲೆಯಲ್ಲಿ ನೆಲೆಸಿದ್ದ ಸಂಕೀರ್ಣತೆಯ ಬಗ್ಗೆ ಹೆಚ್ವು ಚಿಂತಿತರಾಗಿದ್ದರು. ವಸಾಹತುಶಾಹಿ ಆಡಳಿತವು ಎಷ್ಟು ಸಂಕೀರ್ಣವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಆಧುನಿಕ ಜಗತ್ತಿನ ಇತಿಹಾಸದಲ್ಲಿ ಗಹನವಾದ ಶಿಕ್ಷಣದ ಅಗತ್ಯವಿತ್ತು. ಜೊತೆಗೆ ಭಾರತದ ಭವಿಷ್ಯದ ದೃಷ್ಟಿಯಿಂದ ಹೊಸ ಹೊಸ ಚಿಂತನೆಗಳನ್ನು ಅಭಿವೃದ್ಧಿಪಡಿಸಲು ವಸಾಹತುಶಾಹಿ ಆಡಳಿತಗಾರರೊಂದಿಗೆ ಪೈಪೋಟಿಗಿಳಿಯಲು ಇಂಗ್ಲಿಷ್ ಭಾಷಾ ಶಕ್ತಿಯ ಅಗತ್ಯವಿತ್ತು. ಆಗಿನ ಕಾಲಘಟ್ಟದಲ್ಲಿ ಆರ್.ಎಸ್.ಎಸ್. ರೀತಿಯ ಸಂಸ್ಕೃತ ಅಥವಾ ಹಿಂದಿಯ ಅಂತರ್ಮುಖಿ ಜ್ಞಾನದಿಂದ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಮಹತ್ವವನ್ನು ಗ್ರಹಿಸಲು ಸಾಧ್ಯವಿರಲಿಲ್ಲ.
ತಮ್ಮನ್ನು ತಾವು ಹಿಂದುಳಿದ ವರ್ಗ (ಒಬಿಸಿ) ಎಂದು ಹೇಳಿಕೊಳ್ಳುವ ಮತ್ತು ಪ್ರತಿಯೊಂದಕ್ಕೂ ವಸಾಹತುಶಾಹಿ ಆಡಳಿತವನ್ನು ದೂಷಿಸುವ ಮೋದಿ ಅವರು, ಒಂದು ವೇಳೆ ವಸಾಹತುಶಾಹಿ ಆಡಳಿತ ಇಲ್ಲದೇ ಹೋಗಿದ್ದಿದ್ದರೆ ಅದು ಶೋಷಣೆಯ ಸ್ವರೂಪವಾಗಿದ್ದರೂ ಕೂಡ ಗುಜರಾತಿ ಭಾಷೆಯಲ್ಲಿಯೂ ಶಿಕ್ಷಣ ಪಡೆಯುವ ಹಕ್ಕನ್ನು ಹೊಂದಿರುತ್ತಿರಲಿಲ್ಲ. ಅಷ್ಟು ಮಾತ್ರವಲ್ಲದೆ ವಸಾಹತುಶಾಹಿ ಆಡಳಿತ ಸ್ಥಾಪನೆಯಾಗುವುದಕ್ಕೂ ಮೊದಲು ಅವರ ಪೂರ್ವಜರಿಗೆ ಸ್ಥಳೀಯ ಭಾಷೆಯಲ್ಲಿಯೂ ಶಿಕ್ಷಣ ಪಡೆಯಲು ಅವಕಾಶ ಇರಲಿಲ್ಲ.
ದುರದೃಷ್ಟದ ಸಂಗತಿ ಎಂದರೆ ಅವರ ನಾಯಕತ್ವದಲ್ಲಿ ಭಾರತೀಯ ಪ್ರಭುತ್ವದ ಧರ್ಮನಿರಪೇಕ್ಷತೆಯನ್ನು ಛಿದ್ರಮಾಡುವ ಕೆಲಸವನ್ನು ಪ್ರತಿಕಾರದ ರೂಪದಲ್ಲಿ, ಆಕ್ರಮಣಕಾರಿಯಾಗಿ ಕೈಗೊಳ್ಳಲಾಗುತ್ತಿದೆ.
ಕೌಟಿಲ್ಯನ ಮಾದರಿಯ ಅಪಾಯ
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಮ್ಮ ಅನೇಕ ಮಂದಿ ಸ್ವಾತಂತ್ರ್ಯ ಹೋರಾಟಗಾರರು ಪಾಶ್ಚಿಮಾತ್ಯ ದೇಶಗಳಲ್ಲಿ ಶಿಕ್ಷಣವನ್ನು ಪಡೆದಿದ್ದರಿಂದ ಜಾತ್ಯತೀತ ಅಥವಾ ಧರ್ಮನಿರಪೇಕ್ಷ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಒಂದು ವಿದ್ವತ್ಪೂರ್ಣ ವಾತಾವರಣ ಸೃಷ್ಟಿಯಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಬ್ರಿಟಿಷರು ಭಾರತವನ್ನು ತೊರೆದುಹೋದ ಬಳಿಕ ಕೌಟಿಲ್ಯನ ಮಾದರಿಯ ಧರ್ಮಾಧಾರಿತ ಪ್ರಭುತ್ವವು ಅಸ್ತಿತ್ವಕ್ಕೆ ಬರಲು ಅವಕಾಶವೇನಾದರೂ ನೀಡಿದರೆ ಪ್ರಜಾಪ್ರಭುತ್ವವು ರಾಜಕೀಯ ವ್ಯವಸ್ಥೆಯಾಗಿ ಉಳಿಯುವುದಿಲ್ಲ ಎಂಬುದು ಮಹಾತ್ಮಾ ಗಾಂಧಿ, ನೆಹರೂ, ಅಂಬೇಡ್ಕರ್ ಮತ್ತು ಪಟೇಲ್ ಅವರಿಗೆ ಚೆನ್ನಾಗಿ ತಿಳಿದಿತ್ತು.
ಭಾರತದಲ್ಲಿ ಧರ್ಮನಿರಪೇಕ್ಷ ಅಥವಾ ಜಾತ್ಯತೀತ ಸರ್ಕಾರವನ್ನು ಸ್ಥಾಪಿಸುವ ಚಿಂತನೆಗೆ ಬ್ರಾಹ್ಮಣ ಪಂಡಿತರು ವಿರೋಧ ವ್ಯಕ್ತಪಡಿಸಿದ್ದರು. ಯಾಕೆಂದರೆ ಅದು ಬ್ರಿಟಿಷರ ಕಲ್ಪನೆ ಎಂಬುದು ಅವರ ಭಾವನೆಯಾಗಿತ್ತು.
ಭಾರತದಲ್ಲಿರಲಿ ಅಥವಾ ಇನ್ಯಾವುದೇ ಪಾಶ್ಚಿಮಾತ್ಯ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿರಲಿ, ಧರ್ಮನಿರಪೇಕ್ಷತೆಯನ್ನು ರದ್ದುಮಾಡುವ ಪ್ರಕ್ರಿಯೆ ಎಂದರೆ ಅದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿದಂತೆಯೇ ಸರಿ. ಅಲ್ಲಿ ಅಧಿಕಾರವು ಕೇವಲ ಒಬ್ಬ ವ್ಯಕ್ತಿಯ ಕೈಯಲ್ಲಿ ಕೇಂದ್ರೀಕೃತವಾಗಿರುತ್ತದೆ. ಆ ವ್ಯಕ್ತಿಯ ದೃಷ್ಟಿಕೋನವು ಯಾವತ್ತೂ ಜನರ ಕಲ್ಯಾಣ ಮತ್ತು ಭವಿಷ್ಯದ ದೃಷ್ಟಿಯಿಂದ ರೂಪುಗೊಳ್ಳುವ ಬದಲು ಧರ್ಮದಿಂದ ಪ್ರೇರಿತವಾಗಿರುತ್ತದೆ ಮತ್ತು ಜನರ ಹಕ್ಕುಗಳನ್ನು ಕರ್ತವ್ಯಗಳಿಗೆ ಅಧೀನಗೊಳಿಸಲಾಗುತ್ತದೆ.
ಸಂಸ್ಥೆಗಳಲ್ಲಿ ಒಬ್ಬ ಧಾರ್ಮಿಕ ನಾಯಕನ ಆದೇಶದ ಅಡಿಯಲ್ಲಿ ಒಂದೇ ಸಿದ್ಧಾಂತದ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹನನ ಮಾಡುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಕಳೆದ ಹನ್ನೊಂದು ವರ್ಷಗಳಿಂದ ಆರ್.ಎಸ್.ಎಸ್. ಮುಖ್ಯಸ್ಥರು ಇದೇ ಪಾತ್ರವನ್ನು ನಿರ್ವಹಿಸುತ್ತ ಬಂದಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಇರುವಂತೆ, ವಿಭಿನ್ನ ಅಭಿಪ್ರಾಯಗಳ ಚರ್ಚೆ, ಭಿನ್ನಾಭಿಪ್ರಾಯಗಳ ಮೂಲಕ ಹೊಸ ನೀತಿಗಳನ್ನು ರೂಪಿಸುವುದು ಮತ್ತು ಎಲ್ಲರ ಒಪ್ಪಿಗೆಯೊಂದಿಗೆ ಅಥವಾ ವಿರೋಧಿಸುವ ಅಲ್ಪಸಂಖ್ಯಾತರನ್ನು ಲೆಕ್ಕಿಸದೆ ಬಹುಮತದ ನಿರ್ಧಾರಗಳನ್ನು ಜಾರಿಗೆ ತರುವ ಅವಕಾಶವಿರುವುದಿಲ್ಲ.
ಚರ್ಚೆ-ವಿಮರ್ಶೆಗಳಿಗಿಲ್ಲ ಕಿಮ್ಮತ್ತು
'ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರದ್ದು’ ಮಾಡುವುದರಿಂದ ಪ್ರತಿ ಸಂಸ್ಥೆಯಲ್ಲಿಯೂ ಭಿನ್ನ ಧ್ವನಿಯನ್ನು ಅಡಗಿಸುತ್ತದೆ. ಅದರಿಂದ ಸಹಜವಾಗಿಯೇ, ನೀತಿ ನಿರ್ಧಾರಗಳು ಕೂಡ ವ್ಯಕ್ತಿಯ ಸಾಮಾಜಿಕ-ಧಾರ್ಮಿಕ ದೃಷ್ಟಿಕೋನದಿಂದ ಪ್ರಭಾವಿತವಾಗುತ್ತವೆ. ಜಾತ್ಯತೀತ ದೃಷ್ಟಿಕೋನವನ್ನು ಕಳೆದುಕೊಂಡ ರಾಷ್ಟ್ರವು ಅಥವಾ ಸಂಸ್ಥೆಯು ಯಾವುದೇ ನೀತಿ-ನಿರೂಪಣೆಯಲ್ಲಿ ಚರ್ಚೆ ಮತ್ತು ಭಿನ್ನ ಅಭಿಪ್ರಾಯಕ್ಕೆ ಅವಕಾಶ ನೀಡುವುದಿಲ್ಲ.
ಧರ್ಮವು ಒಂದು ಸಂಸ್ಥೆಯಾಗಿ ಭಿನ್ನಾಭಿಪ್ರಾಯಕ್ಕೆ ಅವಕಾಶ ಒದಗಿಸುವುದಿಲ್ಲ. ಇದು ತರ್ಕದ ಸಂಸ್ಥೆಯಲ್ಲ, ಬದಲಿಗೆ ನಂಬಿಕೆಯ ಸಂಸ್ಥೆಯಾಗಿದೆ.
ಭಾರತದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಇದು ನಡೆಯುತ್ತಿದೆ. ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತದ ಅವಧಿಯಲ್ಲಿ ಇದು ಹೆಚ್ಚು ಪ್ರಜ್ಞಾಪೂರ್ವಕವಾಗಿ ನಡೆಯುತ್ತಿದೆ. ಅಲ್ಲಿ ಧಾರ್ಮಿಕ ಸಿದ್ಧಾಂತವು ಸಧ್ಯದ ಮಟ್ಟಿಗೆ ಪ್ರಭುತ್ವದ ಅಧಿಕಾರದೊಂದಿಗೆ ಅಷ್ಟೊಂದು ಬಹಿರಂಗವಾಗಿ ತಳಕು ಹಾಕಿಕೊಂಡಿಲ್ಲ.
ಅಮೆರಿಕದಲ್ಲಿ ಜಾತ್ಯತೀತ ವ್ಯವಸ್ಥೆಯನ್ನು ರದ್ದುಗೊಳಿಸುವ ಪ್ರವೃತ್ತಿಯ ವಿರುದ್ಧ ಈಗಾಗಲೇ ಸಾಮೂಹಿಕ ಪ್ರತಿಭಟನೆಗಳನ್ನು ಶುರುಹಚ್ಚಿಕೊಳ್ಳಲಾಗಿದೆ. ಆದರೆ ಭಾರತದಲ್ಲಿ ಜಾತಿ-ವಿಭಜಿತ ಸಮಾಜವಾಗಿರುವ ಕಾರಣ ಅಂತಹ ಯಾವುದೇ ಸಾಮೂಹಿಕ ಪ್ರತಿಭಟನೆಗಳು ನಡೆಯುತ್ತಿಲ್ಲ.
ಜಾಣತನದ ನಡೆಯ ಹಿಂದೆ...
ಸಂಸ್ಥೆಗಳಲ್ಲಿ ಪ್ರಜಾಪ್ರಭುತ್ವ ರಹಿತ ವ್ಯವಸ್ಥೆಯನ್ನು ಸೃಷ್ಟಿಸುವುದರಿಂದ ಅವು ಆಡಳಿತ ಶಕ್ತಿಗಳ ಚುನಾವಣಾ ಪ್ರಕ್ರಿಯೆಯನ್ನು ನಿರ್ವಹಿಸುವಂತಾಗುತ್ತದೆ. ಆರಂಭದಲ್ಲಿ ಧಾರ್ಮಿಕ ಸಿದ್ಧಾಂತದ ಮೂಲಕವೇ ಅತ್ಯಂತ ಜಾಣತನದಿಂದ ಎಲ್ಲವನ್ನೂ ನಿಭಾಯಿಸಲಾಗುತ್ತದೆ. ಯಾವಾಗ ಜಾತ್ಯತೀತ ವಿರೋಧಿ ಶಕ್ತಿಗಳು ರಾಷ್ಟ್ರದ ಅಧಿಕಾರವನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತದೋ ಆವಾಗ ಪಾಕಿಸ್ತಾನದಲ್ಲಿ ಸಂಭವಿಸಿದಂತೆ ಅದೇ ಧಾರ್ಮಿಕ ಸಿದ್ಧಾಂತವನ್ನು ಬಳಸಿಕೊಂಡು ಮಿಲಿಟರಿ ಸರ್ವಾಧಿಕಾರಿಗಳು ತಲೆ ಎತ್ತುವ ರೀತಿಯಲ್ಲಿಯೇ ಚುನಾವಣಾ ವ್ಯವಸ್ಥೆಯಿಂದ ನಿಧಾನವಾಗಿ ಹೊರಬರುವಂತೆ ನಿರ್ದೇಶಿಸಲಾಗುತ್ತದೆ. ಭಾರತದಲ್ಲಿಯೂ ಇದೇ ರೀತಿ ಸಂಭವಿಸಬಹುದು.
ಭಾರತವು ಈಗ ಸಂಕಷ್ಟದ ಹಾದಿಯಲ್ಲಿದೆ. ಸುತ್ತಮುತ್ತ ಧರ್ಮ-ಆಧಾರಿತ ಸರ್ವಾಧಿಕಾರ ತುಂಬಿದ್ದರೂ, ಭಾರತವು ಸ್ವತಃ ಜಾತ್ಯತೀತತೆಯನ್ನು ಕಳೆದುಕೊಳ್ಳುತ್ತಿರುವ ಪ್ರಜಾಪ್ರಭುತ್ವವಾಗಿ ಬದಲಾಗುತ್ತಿದೆ. ಒಮ್ಮೆ ಈ ಜಾತ್ಯತೀತ ವ್ಯವಸ್ಥೆಯನ್ನು ಕಳಚಿಕೊಳ್ಳುವ ಸ್ಥಿತಿ ಇನ್ನಷ್ಟು ಗಂಭೀರವಾದರೆ ಅದು ಪ್ರಜಾಪ್ರಭುತ್ವ ರಹಿತ ಹಂತಕ್ಕೆ ಹೋಗುತ್ತದೆ. ಹಲವು ಧರ್ಮಗಳಿರುವ ದೇಶದಲ್ಲಿ ಧರ್ಮನಿರಪೇಕ್ಷ ರಹಿತ ಸ್ಥಿತಿ ಅಗತ್ಯ ಎಂದು ನಂಬುವವರಿಗೆ, ಇದರಿಂದ ಪ್ರಜಾಪ್ರಭುತ್ವವೇ ನಾಶವಾಗುವ ಅಪಾಯ ಇದೆ ಎಂಬುದು ಅರಿವಾಗುತ್ತಿಲ್ಲ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


