GST Reforms: ಆರು ಹಂತದ ರಾಕ್ಷಸ ಐದು ಹಂತಕ್ಕೆ ಬದಲಾದ ಕಥೆ! ಕಣ್ಣಿಗೆ ಕಾಣದ ತೆರಿಗೆ ದರಗಳು
x
ನವದೆಹಲಿಯಲ್ಲಿ ನಡೆದ ಜಿ.ಎಸ್.ಟಿ ಮಂಡಳಿಯ 56ನೇ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.

GST Reforms: ಆರು ಹಂತದ ರಾಕ್ಷಸ ಐದು ಹಂತಕ್ಕೆ ಬದಲಾದ ಕಥೆ! ಕಣ್ಣಿಗೆ ಕಾಣದ ತೆರಿಗೆ ದರಗಳು

ಕಣ್ಣಿಗೆ ಕಾಣುವ ತೆರಿಗೆ ದರಗಳನ್ನು ತಗ್ಗಿಸಲಾಗಿದೆ, ಆದರೆ ಗ್ರಾಹಕರಿಗೆ ನೇರವಾಗಿ ಕಾಣಿಸದ ತೆರಿಗೆ ದರಗಳನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ಪರೋಕ್ಷ ತೆರಿಗೆಗಳು ಇನ್ನಷ್ಟು ಪರೋಕ್ಷವಾಗಿವೆ.


ಇಲಿಯು ಕನ್ಯೆಯಾಗಿ ಮಾರ್ಪಟ್ಟು, ಕೊನೆಗೆ ಮತ್ತೆ ಇಲಿಯಾಗಿಯೇ ಸಂತೋಷದಿಂದ ಬದುಕಿದ ಕಥೆಯನ್ನು ನಮ್ಮಲ್ಲಿ ಬಹುತೇಕರು ಕೇಳಿರಬಹುದು. ಆ ಕನ್ಯೆಯನ್ನು ಸಾಕಿದ ತಂದೆ ಆಕೆಗೊಂದು ಸೂಕ್ತ ವರನನ್ನು ಹುಡುಕುತ್ತಾ, ಸೂರ್ಯನೇ ಅತ್ಯಂತ ಶಕ್ತಿಶಾಲಿ ಮತ್ತು ಯೋಗ್ಯ ಎಂದು ಭಾವಿಸುತ್ತಾನೆ. ಆದರೆ, ಮಳೆ ಮೋಡಗಳು ಸೂರ್ಯನನ್ನೇ ಮರೆಮಾಚುವುದನ್ನು ಕಂಡು ತನ್ನ ನಿರ್ಧಾರ ಬದಲಾಯಿಸುತ್ತಾನೆ. ಆದರೆ ಆ ಮೋಡಗಳ ಶಕ್ತಿ ಗಾಳಿಗಿಂತ ಕಡಿಮೆ ಎಂಬುದು ತಿಳಿಯುತ್ತದೆ. ಯಾಕೆಂದರೆ ಗಾಳಿಯು ಮೋಡಗಳನ್ನೆಲ್ಲ ತೇಲಿಸಿಬಿಡುತ್ತದೆ. ಇಂತಹ ಗಾಳಿಯನ್ನು ಪರ್ವತವು ತಡೆಯುತ್ತದೆ. ಆದರೆ, ಪರ್ವತವೂ ಕೂಡ ಅದರಲ್ಲಿ ಬಿಲ ತೋಡುವ ಇಲಿಯನ್ನು ತಡೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಆ ತಂದೆ ತನ್ನ ಮಗಳನ್ನು ಮತ್ತೆ ಇಲಿಯನ್ನಾಗಿ ಮಾಡಿ, ಆ ಧೈರ್ಯಶಾಲಿ ಹೆಗ್ಗಣಕ್ಕೆ ಮದುವೆ ಮಾಡಿಕೊಡುತ್ತಾನೆ.

ಈ ಕಥೆಯನ್ನು ಭಾರತದ ಸರಕು ಮತ್ತು ಸೇವಾ ತೆರಿಗೆ (GST)ಯನ್ನುಹೋಲಿಸಬಹುದು. ಜಿಎಸ್‌ಟಿಯನ್ನು ಆರು ಹಂತದ ದೈತ್ಯ ಸ್ವರೂಪದಿಂದ ಎರಡು ಹಂತದ ಸುಂದರ ಸ್ವರೂಪಕ್ಕೆ ಪರಿವರ್ತಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದರು. ಆದರೆ, 56ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಅಳವಡಿಸಿಕೊಂಡ ಸುಧಾರಣೆಗಳು ಜಿಎಸ್‌ಟಿಯನ್ನು ಐದು ಹಂತದ ರಾಕ್ಷಸನನ್ನಾಗಿ ಮಾಡಿವೆ. ಶೂನ್ಯ, ಶೇಕಡ 3 (ಚಿನ್ನಕ್ಕೆ), ಶೇ.5 ಮತ್ತು ಶೇ.18ರ ಹಂತಗಳು ಯಥಾಸ್ಥಿತಿಯಲ್ಲಿವೆ. ಶೇ.28ರ ಹಂತವನ್ನು ಶೇ.40 ಹಂತದಿಂದ ಬದಲಾಯಿಸಲಾಗಿದೆ, ಆದರೆ ಶೇ. 12ರ ಹಂತವನ್ನು ಕಿತ್ತುಹಾಕಲಾಗಿದೆ. ಇಲಿಯು ಮತ್ತೆ ಇಲಿಯಾಗಿ ಮಾರ್ಪಟ್ಟಿದೆ. ಆದರೆ ಅದರ ಬಾಲವನ್ನೇ ಕತ್ತರಿಸಲಾಗಿದೆ.

ಆದರೆ, ಈ ಮೌಲ್ಯಮಾಪನವು ಹಲವಾರು ಸರಕು ಮತ್ತು ಸೇವೆಗಳ ದರ ಕಡಿತವನ್ನು ಗಣನೆಗೆ ತೆಗೆದುಕೊಳ್ಳುತ್ತದೆಯೇ? ಈ ಕಡಿತಗಳ ಜೊತೆಗೆ, ಜಿಎಸ್‌ಟಿ ದರ ಹೆಚ್ಚಳದ ಮೂಲಕ ಇಂಧನದ ವೆಚ್ಚದಲ್ಲಿಯೂ ತೀವ್ರ ಹೆಚ್ಚಳವಾಗಿದೆ.

ಕಲ್ಲಿದ್ದಲಿಗೆ ಶೇ.18ರಷ್ಟು ತೆರಿಗೆಯ ಪರಿಣಾಮ

ಪ್ರಸ್ತುತ ಶೇಕಡಾ 5ರ ಬದಲಿಗೆ ಕಲ್ಲಿದ್ದಲಿಗೆ ಶೇಕಡಾ 18ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈಗ ಪ್ರತಿ ಟನ್ಗೆ 400 ರೂಪಾಯಿಗಳ ತೆರಿಗೆಯನ್ನು ಶೇಕಡಾ 5ರ ಜಿಎಸ್‌ಟಿ ಜೊತೆಗೆ ವಿಧಿಸಲಾಗುತ್ತಿದೆ. ಆದರೆ ಹಣಕಾಸು ಸಚಿವರ ಪ್ರಕಾರ, ರಾಜ್ಯಗಳಿಗೆ ಕಳೆದುಹೋದ ಆದಾಯಕ್ಕೆ ಪರಿಹಾರ ನೀಡಲು ಪಡೆದ ಎಲ್ಲಾ ಸಾಲಗಳನ್ನು ಈ ಕ್ಯಾಲೆಂಡರ್ ವರ್ಷದಲ್ಲಿಯೇ ಮರುಪಾವತಿಸಿದ ನಂತರ ಈ ತೆರಿಗೆ ಕಣ್ಮರೆಯಾಗಲಿದೆ.

ಆದರೆ, ಭಾರತದ ವಿದ್ಯುತ್ ಉತ್ಪಾದನೆಗೆ ಮೂಲಾಧಾರವಾಗಿರುವ ಕಲ್ಲಿದ್ದಲಿನ ಮೇಲೆ ಶೇ. 13ರಷ್ಟು ಹೆಚ್ಚಿಸಿದ ಜಿಎಸ್‌ಟಿ ಹಾಗೆಯೇ ಉಳಿದು, ಎಲ್ಲ ರೀತಿಯ ವೆಚ್ಚಗಳಿಗೆ ಸೇರ್ಪಡೆಯಾಗುತ್ತದೆ. ವಿದ್ಯುತ್ ಅನ್ನು ಜಿಎಸ್‌ಟಿವ್ಯಾಪ್ತಿಗೆ ತಂದಿಲ್ಲವಾದ್ದರಿಂದ ಮತ್ತು ಅದರ ಮೇಲೆ ವಿದ್ಯುತ್ ಸುಂಕ ವಿಧಿಸುವುದರಿಂದ, ಇನ್ಪುಟ್ ತೆರಿಗೆ ಕ್ರೆಡಿಟ್ ಪಡೆಯಲು ಸಾಧ್ಯವಿಲ್ಲ. ಇದರಿಂದ ವಿದ್ಯುತ್ನ ಹೆಚ್ಚುವರಿ ವೆಚ್ಚವು ಕಲ್ಲಿದ್ದಲಿನ ಬೆಲೆಯ ಹೆಚ್ಚುವರಿ ವೆಚ್ಚವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುತ್ತದೆ ಮತ್ತು ಭಾರತೀಯ ಉತ್ಪಾದಕರು ಹಾಗೂ ರಫ್ತುದಾರರಿಗೆ ತಗಲುವ ಪ್ರತಿ ವೆಚ್ಚವನ್ನು ಹೆಚ್ಚಿಸುತ್ತದೆ.

ಕಚ್ಚಾ ಮತ್ತು ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳನ್ನು ಕೊಳವೆಮಾರ್ಗದ ಮೂಲಕ ಸಾಗಿಸುವ ಸೇವೆಗಳ ಮೇಲಿನ ಜಿಎಸ್‌ಟಿ ದರವನ್ನು ಶೇ. 12ರಿಂದ ಶೇ. 18ಕ್ಕೆ ಹೆಚ್ಚಿಸಿರುವುದರಿಂದ, ಹಾಗೂ ಕೇವಲ ತೈಲ ನಿಕ್ಷೇಪಗಳ ಪರಿಶೋಧನೆ ಮತ್ತು ಅಭಿವೃದ್ಧಿ ಮಾತ್ರವಲ್ಲದೆ, ತೈಲ ಉತ್ಪಾದನೆಗೆ ಸಂಬಂಧಿಸಿದ ಕೆಲಸಗಳ ಮೇಲೂ ಜಿಎಸ್‌ಟಿ ಹೆಚ್ಚಳ ಮಾಡಿರುವುದರಿಂದ, ಪೆಟ್ರೋಲಿಯಂ ಇಂಧನಗಳ ಬೆಲೆಯೂ ಹೆಚ್ಚಾಗುವ ಸಾಧ್ಯತೆ ನಿಚ್ಚಳ.

ಇಂಧನ ಬೆಲೆ ಹೆಚ್ಚಳದ ಬಿಸಿ ಯಾರ ಮೇಲೆ?

ಇಂಧನಗಳ ಮೇಲೆ ಜಿಎಸ್‌ಟಿ ಇಲ್ಲವಾದ ಕಾರಣ ಹೆಚ್ಚುವರಿ ವೆಚ್ಚದ ಸಂಪೂರ್ಣ ಭಾರವನ್ನು ತೈಲ ಮಾರುಕಟ್ಟೆಯನ್ನು ನಿರ್ವಹಿಸುವ ಕಂಪನಿಗಳಿಗೆ ವರ್ಗಾಯಿಸಲ್ಪಡುತ್ತದೆ. ಈ ಕಂಪನಿಗಳು ಇಂಧನದ ಬೆಲೆಯನ್ನು ನಿಗದಿಪಡಿಸುವಲ್ಲಿ ಪಾರದರ್ಶಕವಲ್ಲದ ವ್ಯವಸ್ಥೆಯನ್ನು ಹೊಂದಿವೆ, ಏಕೆಂದರೆ ಅವು ಜಾಗತಿಕ ಕಚ್ಚಾ ತೈಲ ಬೆಲೆಯ ಬದಲಾವಣೆಗಳ ಪರಿಣಾಮವನ್ನು ಹಲವು ತಿಂಗಳುಗಳವರೆಗೆ ಮುಂದೂಡುತ್ತವೆ. ಹಾಗಾಗಿ, ಗ್ರಾಹಕರು ಇಂಧನದ ಬೆಲೆ ಹೆಚ್ಚಳದ ಬಿಸಿಯನ್ನು ಅನುಭವಿಸುತ್ತಾರೆ, ಆದರೆ ಜಿಎಸ್‌ಟಿ ಹೆಚ್ಚಳದ ಮೇಲೆ ಅದರ ಹೊಣೆಯನ್ನು ಹೊರಿಸಲು ಸಾಧ್ಯವಾಗುವುದಿಲ್ಲ.

ಕಣ್ಣಿಗೆ ಕಾಣುವ ತೆರಿಗೆ ದರಗಳನ್ನು ತಗ್ಗಿಸಲಾಗಿದೆ, ಆದರೆ ಗ್ರಾಹಕರಿಗೆ ನೇರವಾಗಿ ಕಾಣಿಸದ ತೆರಿಗೆ ದರಗಳನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ಪರೋಕ್ಷ ತೆರಿಗೆಗಳು ಇನ್ನಷ್ಟು ಪರೋಕ್ಷವಾಗಿವೆ.

ಜವಳಿ ಮತ್ತು ರಸಗೊಬ್ಬರ ಕ್ಷೇತ್ರಗಳಲ್ಲಿ ವಿಲೋಮ ಸ್ವರೂಪದ ಸುಂಕ (inverted duties)ಗಳನ್ನು ತೆಗೆದುಹಾಕಿರುವುದು ಸ್ವಾಗತಾರ್ಹವಾದರೂ, ಸರ್ಕಾರವು ಹೊಸದಾಗಿ ಅದೇ ಸ್ವರೂಪದ ಸುಂಕಗಳನ್ನು ಸೃಷ್ಟಿಸಿದೆ. ಡೈರಿ ಉತ್ಪನ್ನಗಳಿಂದ ಆರಂಭಿಸಿ ಪೆನ್ಸಿಲ್ ತಯಾರಿಕೆಯವರೆಗೆ, ಕೆಲವು ವಲಯಗಳಿಗೆ ವಿನಾಯಿತಿ ನೀಡಲಾಗಿದೆ. ಈ ವಲಯಗಳ ಇನ್ಪುಟ್-ಗಳ ಮೇಲೆ ಜಿಎಸ್‌ಟಿ ಅನ್ವಯವಾಗುತ್ತದೆ. ಮರದ ತಿರುಳು ಅಥವಾ ಇತರ ಸ್ವರೂಪದ ಮರದ ಮೇಲಿನ ಸುಂಕವನ್ನು ಕಡಿಮೆ ಮಾಡಲಾಗಿದ್ದರೂ, ಅದು ಈಗಲೂ ಶೇ 5ರಷ್ಟಿದೆ. ಪೆನ್ಸಿಲ್ ಮೇಲಿನ ಸುಂಕ ಶೂನ್ಯವಾಗಿರುವ ಕಾರಣ, ತಯಾರಕರು ಇನ್ಪುಟ್ಗಳ ಮೇಲೆ ಪಾವತಿಸಿದ ತೆರಿಗೆಯನ್ನು ಅಂತಿಮ ಉತ್ಪನ್ನದ ಮೇಲಿನ ತೆರಿಗೆಗೆ ಸರಿದೂಗಿಸಲು ಯಾವುದೇ ಅವಕಾಶವಿಲ್ಲ.

ಜಿ.ಎಸ್.ಟಿ ಮಂಡಳಿ ಕಳೆದುಕೊಂಡ ಅವಕಾಶ

ಐಷಾರಾಮಿ ವಸ್ತುಗಳನ್ನು ಪ್ರೀಮಿಯಂ ವಸ್ತುಗಳಿಂದ ಪ್ರತ್ಯೇಕಿಸಿ ಸೂಕ್ತವಾಗಿ ವ್ಯಾಖ್ಯಾನಿಸುವ ಅವಕಾಶವನ್ನು ಜಿ.ಎಸ್.ಟಿ ಮಂಡಳಿ ಕಳೆದುಕೊಂಡಿದೆ. ಈಗ, ಈ ಎರಡು ವಿಭಾಗಗಳು ಒಂದಕ್ಕೊಂದು ಬೆರೆತುಹೋಗಿವೆ ಮತ್ತು ಅವುಗಳ ಮೇಲೆ ಶೇ. 40ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಐಷಾರಾಮಿ ವಸ್ತುಗಳು ದುಬಾರಿಯಾದಾಗ ಶ್ರೀಮಂತರಿಗೆ ಅವು ಹೆಚ್ಚು ಅಪೇಕ್ಷಣೀಯ ಉತ್ಪನ್ನಗಳಾಗುತ್ತವೆ, ಯಾಕೆಂದರೆ ಹೆಚ್ಚಿನ ಬೆಲೆಯು ಅವುಗಳಿಗೆ ಇನ್ನಷ್ಟು ವಿಶೇಷ ಸ್ಥಾನಮಾನವನ್ನು ನೀಡುತ್ತದೆ.

ಇ-ಕಾಮರ್ಸ್ ವಲಯದ ಮೇಲಿನ ತೆರಿಗೆ ಹೊರೆಯನ್ನು ಕೂಡ ಜಿಎಸ್‌ಟಿ ಮಂಡಳಿ ಹೆಚ್ಚಿಸಿದೆ. ಅದು ವಿತರಣಾ ಸೇವೆಗಳ ಮೇಲಿನ ಜಿಎಸ್‌ಟಿಯನ್ನು ಶೇ. 5ರಿಂದ ಶೇ. 18ಕ್ಕೆ ಏರಿಸಿದೆ ಮತ್ತು ಜಿಎಸ್‌ಟಿ ಮಿತಿಗಿಂತ ಕಡಿಮೆ ಆದಾಯ ಹೊಂದಿರುವ ಸಣ್ಣ ಕೊರಿಯರ್ ಸೇವೆಗಳಿಗೆ ಇ-ಕಾಮರ್ಸ್ ವೇದಿಕೆಗಳು ‘ರಿವರ್ಸ್ ಚಾರ್ಜ್’ (ಪ್ರತಿ ಶುಲ್ಕ) ವಿಧಿಸುವುದನ್ನು ಕಡ್ಡಾಯಗೊಳಿಸಿದೆ. ಇದೇ ವೇಳೆ, ಈ ವೇದಿಕೆಗಳಲ್ಲಿ ಮಾರಾಟ ಮಾಡುವ ಸಣ್ಣ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಪ್ರತಿಯೊಂದು ರಾಜ್ಯದಲ್ಲಿ ಪ್ರತ್ಯೇಕವಾಗಿ ನೋಂದಣಿ ಮಾಡಿಕೊಳ್ಳುವುದನ್ನು ತಪ್ಪಿಸಲು ಸರಳೀಕೃತ ಕಾರ್ಯವಿಧಾನವನ್ನು ರೂಪಿಸುವ ಭರವಸೆ ನೀಡಿದೆ.

ಬಹುಪಾಲು ಜನ ಬಳಸುವ ಸರಕುಗಳ ಮೇಲಿನ ದರ ಕಡಿತ ಸ್ವಾಗತಾರ್ಹವಾಗಿದೆ. ಆದರೆ, ಇದು ಇಂಧನದ ವೆಚ್ಚವನ್ನು ಹೆಚ್ಚಿಸುವುದರ ಜೊತೆಗೆ, ಪ್ರೀಮಿಯಂ ವಸ್ತುಗಳನ್ನು ಐಷಾರಾಮಿ ವಸ್ತುಗಳೊಂದಿಗೆ ಸೇರಿಸಿ, ಅನೇಕರಿಗೆ ಅವುಗಳನ್ನು ಕೈಗೆಟುಕದೇ ಇರುವಂತೆ ಮಾಡಿದೆ.

ಆದಾಯ ನಷ್ಟದ ಸಾಧ್ಯತೆ ವಿರಳ

ಬಹುತೇಕ ಭಾರತೀಯರು ತಮ್ಮ ವಿಲೇವಾರಿ ಆದಾಯದ ಬಹುಭಾಗವನ್ನು ಯಾವುದಾದರೂ ವಸ್ತುಗಳನ್ನು ಖರೀದಿಸಲು ಖರ್ಚು ಮಾಡುತ್ತಾರೆ. ಒಂದು ವೇಳೆ ಅವರು ಕೆಲವು ವಸ್ತುಗಳ ಮೇಲೆ ಹಣ ಉಳಿಸಿದರೆ, ಆ ಹೆಚ್ಚುವರಿ ಹಣವನ್ನು ಬೇರೆ ಯಾವುದಾದರೂ ವಸ್ತುವಿನ ಮೇಲೆ ಖರ್ಚು ಮಾಡಿಯೇ ಮಾಡುತ್ತಾರೆ. ಇದರಿಂದ ಒಟ್ಟಾರೆ ಬಳಕೆ ಹೆಚ್ಚುತ್ತದೆ, ಪ್ರೀಮಿಯಂ ವಸ್ತುಗಳ ಬಳಕೆಯೂ ಸೇರಿ. ಏನು ಬಳಕೆಯಾಗುತ್ತದೆಯೋ ಅದರ ಮೇಲೆ ಸರ್ಕಾರಕ್ಕೆ ಜಿಎಸ್‌ಟಿ ಸಿಗುತ್ತದೆ. ಆದ್ದರಿಂದ, ಗಣನೀಯ ಪ್ರಮಾಣದಲ್ಲಿ ಆದಾಯ ನಷ್ಟವಾಗುವ ಸಾಧ್ಯತೆ ಬಹಳ ಕಡಿಮೆ.

ಜಿಎಸ್‌ಟಿಗೆ ಅಗತ್ಯವಿರುವ ಅತಿದೊಡ್ಡ ಸುಧಾರಣೆಯೆಂದರೆ, ಜಿಎಸ್‌ಟಿ ಪಾವತಿಗಳನ್ನು ಆರ್‌ಬಿಐನ ಇ-ರೂಪಾಯಿ ಮೂಲಕ ಕಡ್ಡಾಯಗೊಳಿಸುವುದು, ಅದು ಬ್ಲಾಕ್‌ಚೈನ್ ಆಧಾರಿತ ಡಿಜಿಟಲ್ ಕರೆನ್ಸಿಯಾಗಿದೆ. ಇದು ಎಲ್ಲಾ ಪಾವತಿಗಳನ್ನು ಸಂಪೂರ್ಣವಾಗಿ ಪಾರದರ್ಶಕವಾಗಿ ಮಾಡುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಹಾಗಂತ ಇದೇನು ಜಿಎಸ್‌ಟಿ ಸುಧಾರಣೆಗೆ ಸಿಕ್ಕಿರುವ ಕೊನೆಯ ಅವಕಾಶವಲ್ಲ. ಮುಂದಿನ ಬಾರಿ ಜಿಎಸ್‌ಟಿ ಮಂಡಳಿಯು ಸಭೆ ಸೇರಿದಾಗ ಇನ್ನಷ್ಟು ಉತ್ತಮ ಕೆಲಸ ಮಾಡಬೇಕು.

Read More
Next Story