
ಬನುರಿ ಸ್ವರಾಜ್, ತೇಜಸ್ವಿ ಸೂರ್ಯ, ಅನುರಾಗ್ ಠಾಕೂರ್ ಅವರಂತಹ ಲೋಕಸಭೆಯ ಯುವ ಬಿಜೆಪಿ ಸಂಸದರು ಯುವ ಪ್ರತಿಭಟನಾಕಾರರನ್ನು ತಲುಪುವ ಸೂಚನೆ ಕಾಣುತ್ತಿಲ್ಲ. ಮೋದಿಯವರೇ ಅದನ್ನು ಮಾಡಲು ಬಯಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಜಂತರ್ ಮಂತರ್ ಮತ್ತು ದೇಶದ ಇತರ ಭಾಗಗಳಲ್ಲಿ ನಡೆಯುತ್ತಿರುವ ಯುವ ಪ್ರತಿಭಟನಾಕಾರರನ್ನು ತಮ್ಮ ರೆಕಾರ್ಡ್ ಮಾಡಿರುವ ಇನ್‌ಸ್ಟಾಗ್ರಾಮ್ ವಿಡಿಯೋಗಳ ಮೂಲಕ ತಲುಪುವ ಪ್ರಯತ್ನ ಮಾಡಿದಾಗ ಮತ್ತು ಅದರ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದಾಗ ಪ್ರಧಾನಿಯವರು ಯುವಶಕ್ತಿಗೆ ನಿಜಕ್ಕೂ ಸ್ಪಂದಿಸುತ್ತಿದ್ದಾರೆ ಎಂಬಂತೆ ಭಾಸವಾಯಿತು.
ಪ್ರತಿಭಟನೆಗಳು ಎಲ್ಲ ಮಿತಿಗಳನ್ನು ಮೀರಿ ಬೆಳೆಯುತ್ತಿರುವುದರಿಂದ ಅವುಗಳನ್ನು ತಕ್ಷಣಕ್ಕೆ ತಹಬಂದಿಗೆ ತರುವುದು ಅತ್ಯವಶ್ಯ ಎಂಬ ಗುಪ್ತಚರ ಸಂಸ್ಥೆಗಳ ಮಾಹಿತಿಯ ನಂತರವೇ ಇನ್‌ಸ್ಟಾಗ್ರಾಮ್ ವಿಡಿಯೋಗಳನ್ನು ಮಾಡಲಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ವಿದೇಶಿ ಶಕ್ತಿಗಳು ಪ್ರತಿಭಟನೆಯ ಮೇಲೆ ಹಿಡಿತ ಸಾಧಿಸುವುದಕ್ಕೂ ಮುನ್ನವೇ ಪ್ರದರ್ಶನಕಾರರನ್ನು ಮನೆಗೆ ಕಳುಹಿಸಬೇಕು ಎಂಬುದು ಗುಪ್ತಚರ ಸಂಸ್ಥೆಗಳು ನೀಡಿದ ಸೂಚನೆಯಾಗಿತ್ತು. ಹಾಗಾಗಿ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಲು ಸರ್ಕಾರವು ತೆರಬೇಕಾಗಿ ಬಂದ ಬೆಲೆ ಎಂದರೆ ಸಚಿವ ಪ್ರಧಾನ್ ಅವರ ರಾಜೀನಾಮೆ.
ಪರಿಸ್ಥಿತಿ ತಣ್ಣಗಾಗಿಸಲು ಹರಸಾಹಸ
ಇನ್ನು ಇದೇ ಹೊತ್ತಿನಲ್ಲಿ ಪರಿಸ್ಥಿತಿಯ ಮೌಲ್ಯಮಾಪನವನ್ನು ನಡೆಸುವ ಸಲುವಾಗಿ ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಅವರು ಪಕ್ಷದ ಯುವ ಮೋರ್ಚಾಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದರು. ಪ್ರಧಾನ್ ಅವರ ರಾಜೀನಾಮೆಯನ್ನು ಸಮರ್ಥಿಸಿಕೊಳ್ಳಲು ಪಕ್ಷವು ಈಗ ಪ್ರತಿ-ನಿರೂಪಣೆಗಳನ್ನು ರೂಪಿಸುವಲ್ಲಿ ನಿರತವಾಗಿದೆ. ಪ್ರಧಾನಿ ಅವರ ಇನ್‌ಸ್ಟಾಗ್ರಾಮ್ ವಿಡಿಯೋಗಳು ಮತ್ತು ಪ್ರಧಾನ್ ಅವರ ರಾಜೀನಾಮೆಯ ಹಿಂದಿನ ಸ್ಪಷ್ಟ ಉದ್ದೇಶವೇನೆಂದರೆ ಮುಂದೆ ಸಂಭವಿಸಬಹುದಾದ ಹಾನಿಯನ್ನು ಸಾಧ್ಯವಾದಷ್ಟು ನಿಯಂತ್ರಿಸುವುದು. ಮೋದಿ ಅವರ ರಾಜಕೀಯ ಶೈಲಿ ಏನಿದ್ದರೂ ಯಾವುದೇ ಕಾರಣಕ್ಕೂ ತಳೆದ ನಿಲುವಿನಿಂದ ಹಿಂದೆ ಸರಿಯದೇ ಇರುವುದು. ಆದರೆ ಅಂತಹ ನಿಲುವಿಗೆ ಅಂಟಿಕೊಳ್ಳುವ ಬದಲು ಪರಿಸ್ಥಿತಿಯನ್ನು ತಣ್ಣಗಾಗಿಸುವುದು ಮುಖ್ಯವಾಗಿತ್ತು. ಅಂತಹ ಒಂದು ಕಾರ್ಯತಂತ್ರವೇ ಪ್ರಧಾನ್ ಅವರ ರಾಜೀನಾಮೆ.
ಮುಂದಿನ ವರ್ಷದ ಹೊತ್ತಿಗೆ ಉತ್ತರ ಪ್ರದೇಶ, ಪಂಜಾಬ್, ಗೋವಾ ಮತ್ತು ಉತ್ತರಾಖಂಡದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್‌ವದ ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಗಳ ಪರಿಣಾಮವನ್ನು ಎದುರಿಸುವುದು ಮುಖ್ಯವಾಗಿದೆ. ಯುವ ಮತದಾರರ ಈ ವರ್ಗದ ಪ್ರಭಾವ ಹಾಗೂ ಶಕ್ತಿಯನ್ನು ಕಡೆಗಣಿಸುವಂತಿಲ್ಲ ಎಂಬುದು ಪಕ್ಷದ ತಂತ್ರಗಾರರ ಅರಿವಿಗೆ ಬಂದಿದೆ. ಈಗ ಪ್ರತಿಭಟನೆ ನಡೆಸಿದವರಲ್ಲಿ ಹೆಚ್ಚಿನವರು ಮಧ್ಯಮವರ್ಗಕ್ಕೆ ಸೇರಿದವರು. ಎಲ್ಲಕ್ಕಿಂತ ಮುಖ್ಯವಾಗಿ ಇವರ ಪೋಷಕರು ಬಿಜೆಪಿ ಮತ್ತು ಮೋದಿ ಅವರ ಪರವಾಗಿ ಮತ ಚಲಾಯಿಸಿದ ಕುಟುಂಬಗಳಿಂದ ಬಂದವರಾಗಿದ್ದಾರೆ ಎಂಬುದು ಗಮನಾರ್ಹ.
ಹೃದಯ ಗೆದ್ದ ಹೇಳಿಕೆ
ನರೇಂದ್ರ ಮೋದಿ ಅವರು ಯಾವತ್ತೂ ಹಿಂದೂ-ಮುಸ್ಲಿಂ ಕಾರ್ಡ್ ಬಳಸುವ ಮೂಲಕ ತಮ್ಮ ಅಷ್ಟೂ ಅಧಿಕಾರದ ಅವಧಿಯನ್ನು ಕಳೆದಿದ್ದಾರೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರು ಹೇಳಿರುವುದು ಜಾತ್ಯತೀತವಾದಿಗಳ ಹೃದಯ ಗೆಲ್ಲುವಂತೆ ಮಾಡಿದೆ. ಪ್ರಧಾನ್ ಅವರ ಪದತ್ಯಾಗದ ಬಳಿಕ ಜಂತರ್ ಮಂತರ್‌ನಲ್ಲಿ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಬಿ.ಆರ್. ಅಂಬೇಡ್ಕರ್ ಅವರ ಚಿತ್ರವನ್ನು ಪ್ರದರ್ಶಿಸುವ ಮೂಲಕ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಪರಂಪರೆಯೇ ತಮ್ಮ ದಿಕ್ಸೂಚಿ ಎಂಬುದನ್ನು ದೀಪ್ಕೆ ಅವರು ದೃಶ್ಯರೂಪದಲ್ಲಿ ತೋರಿಸಿಕೊಟ್ಟಿದ್ದಾರೆ.
ಹೀಗಾಗಿ ಪ್ರತಿಭಟನಾಕಾರರ ಒಂದು ವಿಭಾಗವು ಮೀಸಲಾತಿಯ ವಿರುದ್ಧ ಪ್ರತಿಭಟಿಸುವ ಇಂಗಿತ ವ್ಯಕ್ತಪಡಿಸಿದೆ ಎಂಬುದನ್ನು ಬಿಂಬಿಸುವ ವಿಡಿಯೋಗಳನ್ನು ಹತ್ತಿಕ್ಕುವ ಸಾಧ್ಯತೆಯಿದೆ. ಈಗ ಮೋದಿಯೂ ಸೇರಿದಂತೆ ಬಿಜೆಪಿಯ ನಾಯಕರು ಎದುರಿಸುತ್ತಿರುವ ದೊಡ್ಡ ಸವಾಲೆಂದರೆ ಪಕ್ಷದ ಪಾಲಿನ ದೊಡ್ಡ ಮತಕೋಟೆಯಾದ ಮಧ್ಯಮವರ್ಗದಲ್ಲಿ ಹುಟ್ಟಿಕೊಂಡಿರುವ ಅಸಮಾಧಾನವನ್ನು ನಿರ್ವಹಿಸುವುದಾದರೂ ಹೇಗೆ ಎಂಬುದು.
ಮುಂದಿನ ರಾಜ್ಯ ಚುನಾವಣೆಗಳ ಚಿಂತೆ
2014ರಿಂದಲೂ ಬಿಜೆಪಿ ಅಧ್ಯಕ್ಷರು ಮತ್ತು ಅವರ ಮುಖ್ಯ ತಂತ್ರಗಾರರ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಸುದ್ದಿಯನ್ನು ಚಾಲ್ತಿಯಲ್ಲಿತ್ತು. ಅದನ್ನು ಅಷ್ಟಾಗಿ ನಂಬಲಾಗುವುದಿಲ್ಲ. ಆದರೆ, ಅಮಿತ್ ಶಾ ನೇತೃತ್ವದ ಪಕ್ಷದ ತಂತ್ರಗಾರರು ಈಗ ಹೊಸದೊಂದು ಲೆಕ್ಕಾಚಾರದಲ್ಲಿದ್ದಾರೆ. ಅದೇನೆಂದರೆ—ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಮಧ್ಯಮ ವರ್ಗದ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು, ಮುಂಬರುವ ರಾಜ್ಯ ಚುನಾವಣೆಗಳಲ್ಲಿ ಪ್ರಮುಖ ಮತದಾರರಾಗಲಿದ್ದಾರೆಯೇ ಎಂಬ ಬಗ್ಗೆ ಅವರು ಯೋಚಿಸುತ್ತಿದ್ದಾರೆ.
ಮೇಲ್ನೋಟಕ್ಕೆ, ಈ ಆರು ರಾಜ್ಯಗಳಲ್ಲಿ ನೀಟ್‌ನಿಂದ ಬಾಧಿತರಾದ ಯುವಕರು ಕಡಿಮೆ ಸಂಖ್ಯೆಯಲ್ಲಿರಬಹುದು ಮತ್ತು ಸ್ಥಳೀಯ ಸಮಸ್ಯೆಗಳು ಹಾಗೂ ಸ್ಥಳೀಯ ಸಾಮಾಜಿಕ ಮತ್ತು ಜಾತಿ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು ಚುನಾವಣೆಗೆ ತಯಾರಿ ನಡೆಸುವ ವಿಚಾರದಲ್ಲಿ ಪಕ್ಷವು ಸುರಕ್ಷಿತವಾಗಿದೆ ಎಂಬ ಭಾವನೆ ಇರಬಹುದು. ಆದಾಗ್ಯೂ, 18-30 ವಯಸ್ಸಿನ ಸುಮಾರು 40 ಕೋಟಿ ಜನರಿಗೆ ಸ್ಮಾರ್ಟ್‌ಫೋನ್ ಮತ್ತು ಇನ್‌ಸ್ಟಾಗ್ರಾಂ ಲಭ್ಯವಿರುವುದರಿಂದ ಅದು ದೂರದೃಷ್ಟಿಯಿಲ್ಲದ ಕ್ರಮವಾಗಬಹುದು. ಸಂದೇಶಗಳು ಕ್ಷಣಮಾತ್ರದಲ್ಲಿ ವೈರಲ್ ಆಗುತ್ತವೆ, ಮತ್ತು ಆ ಸಂದೇಶಗಳ ಜೋಶ್ ಕೂಡ ಅದೇ ವೇಗದಲ್ಲಿ ಹರಡುತ್ತದೆ. ಆದ್ದರಿಂದ ಜೆನ್ ಝೆಡ್ ವಿಭಾಗವು ಚುನಾವಣಾ ಸ್ಪರ್ಧೆಗಳ ಮೇಲೆ ಬೀರುವ ಪರಿಣಾಮವನ್ನು ನಿಖರವಾಗಿ ಊಹಿಸುವುದು ಕಷ್ಟ, ಆದರೆ ಈ ವಿಭಾಗವು ಪಕ್ಷದ ಇಮೇಜ್ ಮತ್ತು ಮತಗಳ ಸಂಖ್ಯೆ ಎರಡಕ್ಕೂ ಧಕ್ಕೆ ತರಲಿದೆ ಎಂಬುದು ಸ್ಪಷ್ಟ.
ಏಕೈಕ ನಾಯಕನ ಹಿಂಬಾಲಕರಾಗಿ…
ಮೋದಿ ಮತ್ತು ಅವರ ಚುನಾವಣಾ ತಂಡವು ದಶಕಕ್ಕೂ ಹೆಚ್ಚು ಕಾಲದಿಂದ ಪ್ರದರ್ಶಿಸುತ್ತಿದ್ದ ನಿಶ್ಚೇತನಗೊಳಿಸುವ ದೃಶ್ಯ ರಾಜಕೀಯವನ್ನು ಎದುರಿಸುವಲ್ಲಿ ಜಿನ್ ಝೆಡ್ ಪ್ರತಿಭಟನೆಗಳು ಯಶಸ್ವಿಯಾಗಿವೆ. ಪ್ರತಿಭಟನಾಕಾರರ ಇನ್‌ಸ್ಟಾಗ್ರಾಂ ರೀಲ್ಸ್‌ಗಳು ಬಿಜೆಪಿ ಮತ್ತು ಮೋದಿಯವರ ಪ್ರಚಾರದ ಅಬ್ಬರವನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಿದವು. ಮುಖ್ಯವಾಹಿನಿಯ ಮಾಧ್ಯಮಗಳು, ವಿಶೇಷವಾಗಿ ಟಿವಿ ಸುದ್ದಿ ಚಾನೆಲ್‌ಗಳು ಬಿಂಬಿಸಿದಷ್ಟು ಮೋದಿಯವರ ಮತ್ತು ಬಿಜೆಪಿಯ ಯಶಸ್ಸು ಅಷ್ಟು ದೊಡ್ಡದಾಗಿರಲಿಲ್ಲ ಎಂಬುದನ್ನು ಚುನಾವಣಾ ಅಂಕಿಅಂಶಗಳು ತೋರಿಸುತ್ತವೆ. 2014ರಲ್ಲಿ ಬಿಜೆಪಿಯ ಮತ ಗಳಿಕೆ ಶೇ. 31ರಷ್ಟಿತ್ತು, 2019ರಲ್ಲಿ ಶೇ. 37.3ರಷ್ಟಿತ್ತು ಮತ್ತು 2024ರಲ್ಲಿ ಶೇ. 36.56ರಷ್ಟಿತ್ತು ಎಂಬುದನ್ನು ಗಮನಿಸಬೇಕು.
ಇನ್ನೂ ಕುತೂಹಲದ ಸಂಗತಿ ಎಂದರೆ ಬಿಜೆಪಿ 2019ರಲ್ಲಿ 302 ಸ್ಥಾನಗಳನ್ನು ಮತ್ತು 2024ರಲ್ಲಿ 240 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಮತ ಗಳಿಕೆಯ ಶೇಕಡಾವಾರು ವ್ಯತ್ಯಾಸವು ಶೇಕಡಾ ಒಂದಕ್ಕಿಂತ ಕಡಿಮೆ ಇತ್ತು. 1990ರ ದಶಕದ ಉತ್ತರಾರ್ಧದಿಂದ ಪಕ್ಷದ ಹಿಂದುತ್ವದ ಭದ್ರಕೋಟೆಯಾಗಿರುವ ಉತ್ತರ ಪ್ರದೇಶದಲ್ಲೂ ಇದೇ ಪರಿಸ್ಥಿತಿ ಇತ್ತು.
ಉತ್ತರ ಪ್ರದೇಶದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ 2017ರಲ್ಲಿ ಶೇಕಡಾ 39.67ರಷ್ಟು ಮತ ಗಳಿಕೆಯೊಂದಿಗೆ 403 ರಲ್ಲಿ 302 ಸ್ಥಾನಗಳನ್ನು ಗೆದ್ದುಕೊಂಡಿತ್ತು ಮತ್ತು 2022ರಲ್ಲಿ ಶೇಕಡಾ 42.20ರಷ್ಟು ಹೆಚ್ಚಳವಾದ ಮತ ಗಳಿಕೆಯೊಂದಿಗೆ 255 ಸ್ಥಾನಗಳನ್ನು ಗೆದ್ದಿತ್ತು. ಅತಿ ಹೆಚ್ಚು ಮತಗಳನ್ನು ಪಡೆದವರು ವಿಜೇತರೆನಿಸಿಕೊಳ್ಳುವ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ವೈಪರೀತ್ಯಗಳು ಸ್ಪಷ್ಟವಾಗಿವೆ, ಆದರೆ ಇದು ಮತದಾರರ ನಡುವೆ ಪಕ್ಷದ ಪ್ರಾಬಲ್ಯವು ಬಿಜೆಪಿ ಮತ್ತು ಮಾಧ್ಯಮಗಳು ನಂಬುವಷ್ಟು ವ್ಯಾಪಕವಾಗಿಲ್ಲ ಎಂಬುದನ್ನು ಬಿಂಬಿಸುತ್ತದೆ.
ಬನುರಿ ಸ್ವರಾಜ್, ತೇಜಸ್ವಿ ಸೂರ್ಯ, ಅನುರಾಗ್ ಠಾಕೂರ್ ಅವರಂತಹ ಲೋಕಸಭೆಯ ಯುವ ಬಿಜೆಪಿ ಸಂಸದರು ಯುವ ಪ್ರತಿಭಟನಾಕಾರರನ್ನು ತಲುಪುವ ಯಾವುದೇ ಸೂಚನೆ ಕಾಣುತ್ತಿಲ್ಲ. ಏಕೆಂದರೆ ಪ್ರಧಾನಿ ಮೋದಿಯವರೇ ಸ್ವತಃ ಅದನ್ನು ಮಾಡಲು ಬಯಸಿದ್ದಾರೆ. ಪಕ್ಷದ ಏಕೈಕ ನಾಯಕತ್ವದ ರಚನೆಯನ್ನು ಬದಲಾಯಿಸುವ ಹಾಗಿಲ್ಲ. ಯುವ ಸಂಸದರೇನಿದ್ದರೂ ನಾಯಕನ ಪ್ರಶಂಸೆಯನ್ನು ಮುಂದುವರಿಸುತ್ತಾರೆ. ಬಿಜೆಪಿ ಸಂಸದರು ಮೋದಿಯವರ ಕಡೆಗೆ ತೋರಿಸುವ ಒಲವಿನ ಬಗ್ಗೆ ಪ್ರತಿಭಟನಾಕಾರರಲ್ಲಿ ರೇಜಿಗೆ ಇದೆ. ಮೋದಿಯವರ ಇನ್‌ಸ್ಟಾಗ್ರಾಂ ಸಂದೇಶಗಳನ್ನು ನಿರ್ದಯವಾಗಿ ಹಾಸ್ಯ ಮಾಡುತ್ತಿರುವುದು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.
ಬಿಜೆಪಿ ಕಲಿಯಬೇಕಾದ ಪಾಠವೇನು?
ಬಿಜೆಪಿಯಲ್ಲಿರುವ ಕಿರಿಯ ಸದಸ್ಯರು ಈಗ ಮೈಕೊಡವಿ ನಿಲ್ಲಬೇಕಾಗಿದೆ. ಅಂದರೆ ಹೆಚ್ಚು ನಗಬೇಕು ಮತ್ತು ತಮ್ಮನ್ನು ತಾವು ಲೇವಡಿ ಮಾಡಿಕೊಳ್ಳಬೇಕು. ಸರ್ಕಾರ ಮತ್ತು ಪಕ್ಷದ ಬಗ್ಗೆ ಪ್ರತಿಭಟನಾಕಾರರು ಮಾಡುವ ಮೀಮ್‌ಗಳನ್ನು ನೋಡಿ ನಗಲು ಕೂಡ ಅವರಿಗೆ ಸಾಧ್ಯವಾಗುತ್ತಿಲ್ಲ. ಅವರ ಮುಖಗಳು ಎಷ್ಟು ಗಂಭೀರವಾಗಿರುತ್ತವೆಯೋ, ಬೀದಿಗಳಲ್ಲಿರುವ ಯುವಕರು ಅವರ ಮೇಲೆ ಅಷ್ಟೇ ಹೆಚ್ಚು ತಮಾಷೆ ಮಾಡುತ್ತಾರೆ. ಲೇವಡಿ ಮಾಡುತ್ತಾರೆ. ಪ್ರಧಾನಿಯವರ ಇನ್‌ಸ್ಟಾಗ್ರಾಂ ವೀಡಿಯೊ ಅಭಿಯಾನವು ಮೋದಿಗೆ ಮತ್ತು ಯಾವುದೇ ಲಂಗುಲಗಾಮಿಲ್ಲದೇ ನಗುವ ಯುವಕರಿಗೆ ಈಗ ಇರುವ ಮನೋಭಾವದ ತಡೆಗೋಡೆಯನ್ನು ಕಡಿಮೆ ಮಾಡುವುದಿಲ್ಲ.
ಪ್ರಧಾನಿಯವರು ಒಂದು ಶಾಲೆಯ ಹೆಡ್‌ಮಾಸ್ಟರ್‌ನಂತೆ ಪ್ರತಿಭಟನಾಕಾರರ ಮೇಲೆ ರೇಗುವ ತಮ್ಮ ಹಳೆಯ ಶೈಲಿಯನ್ನೇ ಮುಂದುವರಿಸಲು ಹೊರಟಂತೆ ಕಾಣುತ್ತಿದೆ. ಆದರೆ ಇದು ಸಕಾರಾತ್ಮಕ ಫಲ ನೀಡುವ ಬದಲು ಉಲ್ಟಾ ಹೊಡೆಯುತ್ತಿದೆ. ಉತ್ತರ ಪ್ರದೇಶದಲ್ಲೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇದೇ ರೋಷಾವೇಷದ ಧೋರಣೆಯನ್ನು ಮುಂದುವರಿಸಿದ್ದಾರೆ.
ಜೆನ್-ಝೀ ಯುವಕರ ಪ್ರತಿಭಟನೆಯ ನಡುವೆಯೂ ಬಿಜೆಪಿ ರಾಜ್ಯ ಚುನಾವಣೆಗಳನ್ನು ಗೆದ್ದುಬಿಡಬಹುದು. ಆದರೆ, ರಾಜಕೀಯದಲ್ಲಿ ಆಸಕ್ತಿ ಇಲ್ಲದ ಸಾಮಾನ್ಯ ಮತದಾರರಲ್ಲಿ ತಮಗಿದ್ದ ಸ್ವಲ್ಪಮಟ್ಟಿನ ಗೌರವವನ್ನೂ ಬಿಜೆಪಿ ಈಗ ಕಳೆದುಕೊಂಡಿದೆ.
ಜುಲೈ ಕೊನೆಯ ವಾರದಲ್ಲಿ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯು ಮೋದಿ ಸರ್ಕಾರಕ್ಕೊಂದು ಸ್ಪಷ್ಟ ಪಾಠ ಕಲಿಸಿದೆ: "ನಿಮ್ಮನ್ನು ನೀವೇ ಅತಿಯಾಗಿ ಗಂಭೀರವಾಗಿ ಪರಿಗಣಿಸಬೇಡಿ!" ಆದರೆ ಬಿಜೆಪಿಯು ಇದನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ತನ್ನ ಹಳೆಯ ಶೈಲಿಯನ್ನೇ ಇನ್ನಷ್ಟು ಮುಂದುವರಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


