
ಖ್ಯಾತ ಧರ್ಮಗುರು ಕ್ಯಾಥೋಲಿಕೋಸ್ ಬಸೆಲಿಯೊಸ್ ಮಾರ್ತೋಮಾ ಮ್ಯಾಥ್ಯೂಸ್ ಮಾಡಿದ ಭಾಷಣದ ʼಯಾರು ಭಾರತದ ಮೂಲ ನಿವಾಸಿಗಳುʼ ಎಂಬ ಪ್ರಶ್ನೆಯನ್ನು ಮುಂದಿಟ್ಟು ಮೂಲಭೂತ ಅಂಶಗಳನ್ನು ಮಂಡಿಸಲಾಗಿದೆ.
ವ್ಯಕ್ತಿಗಳು ಮತ್ತು ಸಮುದಾಯಗಳ ರಾಜಕೀಯ ಜೀವನದಲ್ಲಿ ಅಂತಹ ಕೆಲವು ಕ್ಷಣಗಳು ಬರುತ್ತವೆ; ಆ ಸಂದರ್ಭಗಳಲ್ಲಿ ಅವರು ಎಷ್ಟೇ ಅಂತರ ಕಾಯ್ದುಕೊಳ್ಳಲು ಪ್ರಯತ್ನ ನಡೆಸಿದರೂ ಅಥವಾ ಎಷ್ಟೇ ಕಣ್ಣು ಮುಚ್ಚಿ ಕುಳಿತುಕೊಳ್ಳಲು ಬಯಸಿದ್ದರೂ ಸಹ ವಾಸ್ತವ ಎಷ್ಟು ಕಹಿಯಾಗಿ ಮತ್ತು ಸ್ಪಷ್ಟವಾಗಿ ಎದುರಾಗುತ್ತವೆ ಎಂದರೆ ಅದನ್ನು ಅವರು ಇನ್ನು ಮುಂದೆ ನಿರಾಕರಿಸಲು ಸಾಧ್ಯವೇ ಇಲ್ಲ ಎಂಬ ಹಂತಕ್ಕೆ ಬಂದು ತಲುಪಿರುತ್ತಾರೆ.
ಮಲಂಕಾರ್ ಆರ್ಥೋಡಕ್ಸ್ ಸಿರಿಯನ್ ಚರ್ಚಿನ (ಭಾರತೀಯ ಸಂಪ್ರದಾಯವಾದದ ಚರ್ಚ್) ಸರ್ವೋಚ್ಛ ಮುಖ್ಯಸ್ಥರಾದ ಮೂರನೇ ಕ್ಯಾಥೋಲಿಕೋಸ್ ಬಸೆಲಿಯೊಸ್ ಮಾರ್ತೋಮಾ ಮ್ಯಾಥ್ಯೂಸ್ ಅವರು ದೇಶದ ನಾನಾ ಭಾಗಗಳಲ್ಲಿ ಕ್ರಿಶ್ಚಿಯನ್ನರು ಮತ್ತು ಕ್ರಿಸ್ಮಸ್ ಆಚರಣೆಗಳ ಮೇಲೆ ನಡೆಯುತ್ತಿರುವ ಇತ್ತೀಚಿನ ದಾಳಿಗಳ ವಿರುದ್ಧ ಕಠಿಣವಾಗಿ ಮಾತನಾಡಿದ್ದಾರೆ. ಅವರ ಮಾತಿನಲ್ಲಿ ಅನೇಕ ಬದಲಾವಣೆಗಳು ಗೋಚರಿಸುತ್ತಿವೆ.
ಕೇರಳದ ಕೊಟ್ಟಾಯಂನ ಪನಯಂಪಾಲದಲ್ಲಿರುವ ಸೇಂಟ್ ಮೇರಿಸ್ ಚರ್ಚ್-ನಲ್ಲಿ ಹಬ್ಬದ ಸಂದೇಶವನ್ನು ನೀಡುವ ಸಂದರ್ಭದಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ನಿಗೂಢ ಮೌನವನ್ನು ನೇರ ನಿಷ್ಠುರ ಮಾತುಗಳಲ್ಲಿ ಖಂಡಿಸಿದರು. ʼಭಯೋತ್ಪಾದಕ ಗುಂಪುಗಳನ್ನುʼ ಹದ್ದುಬಸ್ತಿನಲ್ಲಿಡುವ ಕೆಲಸದಲ್ಲಿ ಸಂಪೂರ್ಣ ವಿಫಲವಾಗಿದೆ. ಜೊತೆಗೆ ಸರ್ಕಾರದ ಮೌನವು ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಅಧಿಕಾರದಲ್ಲಿ ಇರುವವರ ಬಹುಸಂಖ್ಯಾತ ಕಾರ್ಯಸೂಚಿಯ ಭಾಗವೇ ಆಗಿವೆ ಎಂಬ ಅರ್ಥವನ್ನು ನೀಡುತ್ತದೆ ಎಂದು ಅವರು ಅತ್ಯಂತ ಸ್ಪಷ್ಟವಾಗಿ ಹೇಳಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಆರ್.ಎಸ್.ಎಸ್. ಮತ್ತು ಅದರ ಅಂಗಸಂಸ್ಥೆಗಳ ಬಗ್ಗೆ ಸಂಪ್ರದಾಯವಾದಿ ಚರ್ಚ್ ತಾನು ಹೊಂದಿದ್ದ ನಿಲುವಿನಲ್ಲಿ ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ ಎಂಬುದಕ್ಕೆ ಕ್ಯಾಥೋಲಿಕೋಸ್ ಅವರ ಭಾಷಣವೇ ಸಾಕ್ಷಿಯಾಗಿದೆ.
ಎಚ್ಚರಿಕೆಯ ನಡೆ
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ನೇರ ಭೇಟಿ ಮತ್ತು ಕೇರಳದ ಕ್ರಿಶ್ಚಿಯನ್ ಸಮುದಾಯವನ್ನು ತಲುಪಲು ಬಿಜೆಪಿ ನಡೆಸಿದ ವಿಶೇಷ ಪ್ರಯತ್ನಗಳೂ ಸೇರಿದಂತೆ ಒಂದು ಅವಧಿಯ ಎಚ್ಚರಿಕೆಯ ರಾಜತಾಂತ್ರಿಕ ಒಡನಾಟದ ಬಳಿಕ ಹಿಂದುತ್ವದ ಪ್ರಾಬಲ್ಯವನ್ನು ಹೊಂದಿರುವ ಭಾರತದಲ್ಲಿ ಕ್ರಿಶ್ಚಿಯನ್ ಸಮುದಾಯವು ಎದುರಿಸುತ್ತಿರುವ ಅಪಾಯಕಾರಿ ಪರಿಸ್ಥಿತಿಯ ಬಗ್ಗೆ ಚರ್ಚ್ ಕೊನೆಗೂ ಮೈಕೊಡವಿ ಎದ್ದು ನಿಂತಂತೆ ಕಾಣುತ್ತಿದೆ.
ಮೇಲ್ನೋಟಕ್ಕೆ ಇವೆಲ್ಲವೂ ವ್ಯರ್ಥ ಪ್ರಯತ್ನಗಳೆಂದು ಅನ್ನಿಸಬಹುದು. ಹಾಗಂತ ಕ್ಯಾಥೋಲಿಕೋಸ್ ಅವರು ನಡೆಸಿದ ರಾಜತಾಂತ್ರಿಕ ಪ್ರಯತ್ನಗಳನ್ನೇನು ಸಂಪೂರ್ಣ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಸಂಘರ್ಷವನ್ನು ತಪ್ಪಿಸುವ ಉದ್ದೇಶದಿಂದ ಹಾಗೂ ಬಹುಸಂಖ್ಯಾತರ ಹಿಂಸಾತ್ಮಕ ಶಕ್ತಿಯಿಂದ ತಮ್ಮ ಅಲ್ಪಸಂಖ್ಯಾತ ಸಮುದಾಯವನ್ನು ರಕ್ಷಿಸುವ ಸ್ವಾಭಾವಿಕ ಜವಾಬ್ದಾರಿಯೇ ಅವರ ಈ ನಡೆಯ ಹಿಂದಿನ ಪ್ರೇರಣೆಯಾಗಿರುವ ಸಾಧ್ಯತೆಯಿದೆ.
ತಾವು ಯಾರೊಂದಿಗೆ ಮಾತುಕತೆಗೆ ಮುಂದಾಗಿದ್ದಾರೋ ಅಂತಹ ಶಕ್ತಿಯ ಮೂಲ ಸ್ವರೂಪದ ಬಗ್ಗೆ ಅವರಿಗೆ ಭ್ರಮೆಗಳೇನೂ ಇರಲಿಲ್ಲ ಎಂಬುದು ಆಗಲೇ ಸ್ಪಷ್ಟವಾಗಿತ್ತು. ಯಾಕೆಂದರೆ ಟೀಕಿಸಬೇಕಾದ ಸಂದರ್ಭ ಎದುರಾದರೆ ಆ ಹಕ್ಕನ್ನು ತಾವು ಕಾಯ್ದಿರಿಸಿಕೊಂಡಿದ್ದಾಗಿ ಅವರು ಮೊದಲೇ ಹೇಳಿದ್ದರು. ಛತ್ತೀಸಗಢದಲ್ಲಿ ಮಾನವ ಕಳ್ಳಸಾಗಣೆ ಮತ್ತು ಮತಾಂತರ ಆರೋಪದ ಮೇಲೆ ಕೇರಳದ ಇಬ್ಬರು ಕ್ರಿಶ್ಚಿಯನ್ ಸನ್ಯಾಸಿನಿಯರನ್ನು ಬಂಧಿಸಿದಾಗ, ʼಒಂದೆಡೆ ಕಿರುಕುಳ ಮತ್ತು ಇನ್ನೊಂದು ಕಡೆ ತುಷ್ಟೀಕರಣ ಮಾಡುವ ನೀತಿ ಪರಸ್ಪರ ವಿರೋಧಾಭಾಸದಿಂದ ಕೂಡಿದೆ” ಎಂದೂ ಪ್ರತಿಪಾದಿಸಿದ್ದರು.
ಇನ್ನು ಮುಂದೆ ಇಂತಹ ಅಪಾಯವನ್ನು ಕೇವಲ ಮೌನ ರಾಜತಾಂತ್ರಿಕತೆಯ ಮೂಲಕ ನಿಭಾಯಿಸಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕ್ಯಾಥೋಲಿಕೋಸ್ ಅವರು ನೀಡಿದ್ದಾರೆ. ಅದಕ್ಕೆ ಅವರು ಬಳಸುತ್ತಿರುವ ನೇರಾನೇರ ದಾಟಿ ನಿಜಕ್ಕೂ ಗಮನಾರ್ಹವಾಗಿದೆ. ಈಗ ನಡೆಯುತ್ತಿರುವ ಹಿಂಸಾಚಾರಕ್ಕೆ ಸರ್ಕಾರವನ್ನೇ ನೇರ ಹೊಣೆಗಾರರನ್ನಾಗಿ ಮಾಡುವ ಮೂಲಕ ಮತ್ತು ಅದರಲ್ಲಿ ಸರ್ಕಾರದ ಪಾತ್ರವೂ ನಿಚ್ಚಳವಾಗಿ ಕಾಣಿಸುತ್ತಿದೆ ಎಂಬುದರ ಕಡೆಗೂ ಅವರು ಬೊಟ್ಟು ಮಾಡಿದ್ದಾರೆ.
ಬದಲಾವಣೆಯ ಪ್ರತೀಕ
ಇವೆಲ್ಲವೂ ಒತ್ತಟ್ಟಿಗಿರಲಿ, ಕ್ಯಾಥಲಿಕೋಸ್ ಅವರು ತಮ್ಮ ಹೇಳಿಕೆಯನ್ನು ಮಂಡಿಸಿರುವ ಐತಿಹಾಸಿಕ ಮತ್ತು ರಾಜಕೀಯ ಚೌಕಟ್ಟು ನಮ್ಮನ್ನು ಆಳವಾಗಿ ಯೋಚಿಸುವಂತೆ ಮಾಡುತ್ತದೆ. ಯಾಕೆಂದರೆ ಇದು ಅವರ ದೃಷ್ಟಿಕೋನ ಮತ್ತು ನೀತಿಯಲ್ಲಿ ಆಗುತ್ತಿರುವ ಮಹತ್ತರ ಬದಲಾವಣೆಯ ಪ್ರತೀಕವಾಗಿದೆ.
ಇನ್ನೂ ಸಂಕ್ಷಿಪ್ತವಾಗಿ ಹೇಳುವುದಾದರೆ ಇದು ಇಡೀ ಹಿಂದುತ್ವ ರಾಜಕೀಯ ಕಾರ್ಯಸೂಚಿಯ ಕೇಂದ್ರ ಸಿದ್ಧಾಂತಗಳು ಮತ್ತು ಕಲ್ಪನೆಗಳ ಮೇಲೆ ಮಾಡಿದ ಅತ್ಯಂತ ಕಟುವಾದ ಟೀಕೆ ಮತ್ತು ಖಂಡನೆಯಾಗಿದೆ. ಕ್ರಿಶ್ಚಿಯನ್ ವಲಯದ ಅಧಿಕೃತ ವೇದಿಕೆಯಿಂದ ಈವರೆಗೆ ಬಂದಿರುವ ಅತ್ಯಂತ ತೀಕ್ಷ್ಣವಾದ ವಿಮರ್ಶೆ ಇದೆಂದು ಹೇಳಿದರೆ ತಪ್ಪಾಗಲಾರದು.
ಅವರ ಈ ಸಂಕ್ಷಿಪ್ತ ಆದರೇ ಅಷ್ಟೇ ನೇರವಾದ ಸಂದೇಶದಲ್ಲಿ ಐದು ಪ್ರಮುಖ ಅಂಶಗಳನ್ನು ನಾವು ಗುರುತಿಸಬಹುದಾಗಿದೆ:
ಅಂಶ-1: ಸಂಘದ ಭಾರತೀಯ ಇತಿಹಾಸ
ಮೊಟ್ಟಮೊದಲನೆಯದಾಗಿ ಸಂಘ ಪರಿವಾರವು ಭಾರತೀಯ ಇತಿಹಾಸದ ಬಗ್ಗೆ ಹೊಂದಿರುವ ಏಕರೂಪದ ಅಭಿಪ್ರಾಯವನ್ನು ಅವರು ಕಟುವಾಗಿ ಟೀಕಿಸಿದ್ದಾರೆ. ಅಂದರೆ ಆರ್ಯರು ಅಥವಾ ಹಿಂದೂಗಳು ಭಾರತದ ಮೂಲ ನಿವಾಸಿಗಳು ಎನ್ನುವ ವಾದವನ್ನೇ ಅವರು ನೇರವಾಗಿ ವಿರೋಧಿಸಿದ್ದಾರೆ. ಭಾರತದಲ್ಲಿ ನಡೆಸುವ ಕ್ರಿಸ್ಮಸ್ ಆಚರಣೆಗಳ ಮೇಲೆ ಪ್ರಹಾರ ನಡೆಸಿದ ಬಲಪಂಥೀಯ ಗುಂಪುಗಳು ಮಾಡಿರುವ “ಭಾರತದಲ್ಲಿ ವಿದೇಶಿ ಧರ್ಮಗಳಿಗೆ ಮತ್ತು ವಿದೇಶಿಯರಿಗೆ ಸ್ಥಾನವಿಲ್ಲ” ಎಂಬ ಘೋಷಣೆಗೆ ಪ್ರತಿರೋಧ ವ್ಯಕ್ತಪಡಿಸಿರುವ ಅವರು ʼಹಾಗಾದರೆ ನಿಜವಾದ ವಿದೇಶಿಯರು ಯಾರು?ʼ ಎಂದು ಪ್ರಶ್ನಿಸಿದ್ದಾರೆ.
ಕ್ರಿ.ಪೂ. ಸುಮಾರು 2000ರಲ್ಲಿ ಇರಾನಿನಿಂದ ವಲಸೆ ಬಂದ ಆರ್ಯರುʼ ಬ್ರಾಹ್ಮಣ ಆರಾಧನಾ ಪದ್ಧತಿʼಯನ್ನು ಸ್ಥಾಪನೆ ಮಾಡಿದ ಬಳಿಕವೇ ಹಿಂದೂ ಧರ್ಮವು ಒಂದು ನೈಜ ಧರ್ಮವಾಗಿ ಹೊರಹೊಮ್ಮಿತು ಎಂದು ಅವರು ಪ್ರತಿಪಾದಿಸಿದ್ದಾರೆ. ʼಯಾವುದೇ ಆರ್ಯ ಅಥವಾ ಹಿಂದೂ ಭಾರತೀಯ ಮೂಲವನ್ನು ಹೊಂದಿಲ್ಲ,ʼ ಎಂಬ ಅಭಿಪ್ರಾಯ ಅವರದ್ದಾಗಿದೆ.
ಅವರು ಪ್ರಸ್ತಾಪಿಸಿರುವ ಇನ್ನೊಂದು ಗಮನಾರ್ಹ ಸಂಗತಿ ಎಂದರೆ, ಅವರು ʼಆರ್ಯರ ಆಕ್ರಮಣʼ ಎನ್ನುವುದಕ್ಕೆ ಬದಲಾಗಿ, ʼಆರ್ಯರ ವಲಸೆʼ ಎಂಬ ಪದಬಳಕೆ ಮಾಡಿದ್ದಾರೆ. ಇತಿಹಾಸದ ಇತ್ತೀಚಿನ ಒಳನೋಟದ ಬಗ್ಗೆ ಅವರಿಗೆ ಅರಿವಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಈ ಆರಂಭಿಕ ವಲಸಿಗರು ʼಅತ್ಯಂತ ಬಲಿಷ್ಠ ಸಿಂಧೂ ನಾಗರಿಕತೆʼಯ ಪ್ರದೇಶಗಳನ್ನು ಯಾವ ರೀತಿಯಲ್ಲಿ ವಶಕ್ಕೆ ಪಡೆದರು ಹಾಗೂ ಕ್ರಿ.ಪೂ. ಸುಮಾರು 4000ರಲ್ಲಿ ಆಫ್ರಿಕದಿಂದ ಇರಾನ್ ಮೂಲಕ ಭಾರತಕ್ಕೆ ವಲಸೆ ಬಂದಿದ್ದ ದ್ರಾವಿಡರನ್ನು ಹೇಗೆ ದಕ್ಷಿಣದ ಕಡೆಗೆ ತಳ್ಳುವಲ್ಲಿ ಯಶಸ್ವಿಯಾದರು ಎಂಬ ಸಂಗತಿಯನ್ನು ಕೂಡ ವಿವರಿಸಿದ್ದಾರೆ. ʼತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಮಾತನಾಡುವ ಜನರೇ ಅವರ ವಂಶಸ್ಥರುʼ ಎಂದೂ ಕ್ಯಾಥಲಿಕೋಸ್ ತಿಳಿಸಿದ್ದಾರೆ.
ಸಂಘ ಪರಿವಾರದ ಬೆಂಬಲಿಗರ ʼವಿದೇಶಿʼ ಎಂಬ ವಾದವನ್ನು ಟ್ರಂಪ್ ಅವರ ʼಅಮೆರಿಕನ್ನರಿಗಾಗಿ ಅಮೆರಿಕʼ ಎಂಬ ಹಾಸ್ಯಾಸ್ಪದ ಮತ್ತು ಬಹಿಷ್ಕಾರದ ಚಮತ್ಕಾರಿ ಮಾತಿಗೆ ಹೋಲಿಸಿದ ಅವರು ಭಾರತವನ್ನು ಸಹಸ್ರಾರು ವರ್ಷಗಳ ವಲಸೆಯ ವಿಶಾಲ ಚಿತ್ರಣವಾಗಿ ಪ್ರಸ್ತುತಪಡಿಸುತ್ತಾರೆ. ಯುಗಯುಗಾಂತರಗಳಿಂದ ಪ್ರತಿಯೊಬ್ಬರೂ ಬೇರೆ ಬೇರೆ ಪ್ರದೇಶಗಳಿಂದ ಇಲ್ಲಿಗೆ ಬಂದಿಳಿದ ಕಾರಣ ಯಾವೊಂದು ಸಮುದಾಯವೂ ಕೂಡ ಇತರರನ್ನು ಹೊರಗಿಟ್ಟು ತಾನೇ ಈ ನೆಲದ ಆದಿಮ ಮೂಲ ಎಂದು ಪ್ರತಿಪಾದಿಸಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ.
ಶ್ರೇಷ್ಠತೆಯ ವ್ಯಸನ
ಭಾರತೀಯ ಇತಿಹಾಸವನ್ನು ʼವಲಸೆಗಳ ಸರಣಿʼ ಎಂಬುದಾಗಿ ಚಿತ್ರಿಸುವ ಮೂಲಕ ಕ್ಯಾಥೋಲಿಕೋಸ್ ಅವರು, ʼವೈದಿಕವೇ ಶ್ರೇಷ್ಠʼ ಎಂಬ ವಾದವನ್ನು ಅತ್ಯಂತ ಪರಿಣಾಮಕಾರಿಯಾಗಿ ಎದುರಿಸಿದ್ದಾರೆ. ಆ ಮೂಲಕ ಹಿಂದು ಸಂಸ್ಕೃತಿಯೇ ಈ ಭೂಮಿಯ ಏಕೈಕ ಮತ್ತು ಮೂಲ ಚೇತನ ಎಂಬ ವಾದವನ್ನು ಅವರು ಬಹುಮೂಲಗಳಿಂದ ಹೆಕ್ಕಿ ತೆಗೆದ ಐತಿಹಾಸಿಕ ಮಾದರಿಯ ಮೂಲಕ ಪ್ರಶ್ನಿಸುವ ಕೆಲಸ ಮಾಡಿದ್ದಾರೆ.
ಒಂದು ವೇಳೆ ಆರ್ಯರು ಕ್ರಿ.ಪೂ. 2000ರಲ್ಲಿ ವಲಸೆ ಬಂದಿದ್ದಾರೆ ಎನ್ನುವುದಾದರೆ ಮತ್ತು ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಆ ನಂತರದ ಅವಧಿಯಲ್ಲಿ ವಲಸೆ ಬಂದವರಾಗಿದ್ದರೆ ಈ ವ್ಯತ್ಯಾಸಗಳು ಕೇವಲ ಕಾಲಾನುಕ್ರಮಕ್ಕೆ ಸಂಬಂಧಿಸಿದ್ದೇ ಹೊರತು ಮೂಲ ಅಸ್ತಿತ್ವಕ್ಕೆ ಸಂಬಂಧಿಸಿದ್ದಲ್ಲ. ಹಾಗಾಗಿ ಇದು ಭಾರತೀಯ ಸಂದರ್ಭದಲ್ಲಿ ʼವಿದೇಶಿʼ ಎಂಬ ಪದವನ್ನೇ ಅರ್ಥಹೀನಗೊಳಿಸುತ್ತದೆ.
ಇದರಿಂದಾಗಿ ಇತರರ ಧರ್ಮವನ್ನು ಅವರ ಆಗಮನದ ದಿನಾಂಕದ ಆಧಾರದ ಮೇಲೆ ವರ್ಗೀಕರಿಸಲು ಪ್ರಯತ್ನಿಸುವ ಹಿಂದುತ್ವವಾದಿಗಳ ನೈತಿಕ ಅಧಿಕಾರವನ್ನೇ ಅಸಿಂಧುಗೊಳಿಸಿದ್ದಾರೆ. ಯಾಕೆಂದರೆ ಈ ವಿಚಾರದಲ್ಲಿ ತೀರ್ಪು ನೀಡುತ್ತಿರುವವನೇ ಒಬ್ಬ ವಲಸಿಗನ ವಂಶಸ್ಥನಾಗಿರುತ್ತಾನೆ..
ಅಂಶ 2: ಸಂವಿಧಾನವು ದೇವರಿಗೆ ಸಮಾನ
ಎರಡನೆಯದಾಗಿ, ಭಾರತ ದೇಶದ ತಳಹದಿ ಇರುವುದೇ ಸಂವಿಧಾನದಲ್ಲಿ ಎಂದು ಅವರು ಅತ್ಯಂತ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ: "ನಮಗೆಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ಮತ್ತು ನಮ್ಮ ಆಚರಣೆಗಳನ್ನು ಅನುಸರಿಸುವ ಹಕ್ಕಿದೆ. ಸಂವಿಧಾನದ ಮುಂದೆ ಭಾರತದ ಎಲ್ಲಾ ಜನರು ಸಮಾನರು; ಇಲ್ಲಿ ಬಹುಸಂಖ್ಯಾತ ಧರ್ಮ ಅಥವಾ ಅಲ್ಪಸಂಖ್ಯಾತ ಧರ್ಮ ಎಂಬ ಯಾವುದೇ ತಾರತಮ್ಯವಿಲ್ಲ. ಪ್ರತಿಯೊಂದು ಧರ್ಮಕ್ಕೂ ಸಮಾನ ಹಕ್ಕುಗಳಿವೆ ಮತ್ತು ಯಾವುದೇ ಧರ್ಮವನ್ನು ನಂಬುವ, ಅನುಸರಿಸುವ ಮತ್ತು ಪ್ರಚಾರ ಮಾಡುವ ಹಕ್ಕಿದೆ. ಧರ್ಮ ಪ್ರಚಾರದ ಹಕ್ಕನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಆರಾಧನಾ ಮಂದಿರಗಳನ್ನು ನಿರ್ಮಿಸುವ ಅಥವಾ ಆರಾಧನೆ ಮಾಡುವ ಸ್ವಾತಂತ್ರ್ಯವನ್ನ ಈ ಸಂವಿಧಾನವು ಎಲ್ಲಾ ಧರ್ಮಗಳಿಗೂ ಸಮಾನವಾಗಿ ನೀಡಿದೆ."
ದೇವರು ಮತ್ತು ಸಂವಿಧಾನವನ್ನು ಒಂದೇ ನೈತಿಕ ಚೌಕಟ್ಟಿನಲ್ಲಿ ತರುವ ಮೂಲಕ, ಕ್ಯಾಥೋಲಿಕೋಸ್ ಅವರು ಅತ್ಯಂತ ಆಸಕ್ತಿದಾಯಕವಾಗಿ ಸಂವಿಧಾನಕ್ಕೆ ಒಂದು ರಾಜಕೀಯ ಮತ್ತು ನೈತಿಕ ಪಾವಿತ್ರ್ಯತೆಯನ್ನು ನೀಡಿದ್ದಾರೆ. ಇದು ಯಾವುದೇ ತಾತ್ಕಾಲಿಕ ರಾಜಕೀಯ ಬಹುಮತದ ಆಜ್ಞೆಗಳನ್ನು ಮೀರಿದ ಒಂದು ಅಧಿಕೃತ ಪಠ್ಯ ಎಂಬುದನ್ನು ಅವರು ಪ್ರತಿಪಾದಿಸಿದ್ದಾರೆ.
ಯಾವುದೇ ಧರ್ಮವನ್ನು ಆರಾಧಿಸುವ ಸ್ವಾತಂತ್ರ್ಯ ಮತ್ತು ಪ್ರಚಾರ ಮಾಡುವ ಹಕ್ಕಿಗೆ ದೈವಿಕ ಮತ್ತು ಕಾನೂನುಬದ್ಧ ಅನುಮೋದನೆ ಇದೆ ಎಂಬ ಅವರ ಪ್ರತಿಪಾದನೆಯು, 'ಧರ್ಮ ಪ್ರಚಾರ'ದ ಸಾಂವಿಧಾನಿಕ ಹಕ್ಕನ್ನು ವಿವಾದಾತ್ಮಕ 'ಮತಾಂತರ'ದ ಹಣೆಪಟ್ಟಿಯಿಂದ ಸ್ಪಷ್ಟವಾಗಿ ಪ್ರತ್ಯೇಕಿಸುತ್ತದೆ. ಇದು ರಾಜ್ಯ ಮಟ್ಟದ ನಾನಾ ಮತಾಂತರ ವಿರೋಧಿ ಕಾಯ್ದೆಗಳಿಗೆ ನೀಡಿದ ಪರೋಕ್ಷ ಸವಾಲಾಗಿದ್ದು, ಆ ಕಾಯ್ದೆಗಳನ್ನು "ಯಾರೂ ನಿರಾಕರಿಸಲಾಗದ" ಮೂಲಭೂತ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಅವರು ಬಿಂಬಿಸಿದ್ದಾರೆ.
ಅಂಶ 3: ಹಿಂಸಾಚಾರಕ್ಕೆ ಸರ್ಕಾರವನ್ನೇ ಹೊಣೆ ಮಾಡುವುದು
ಮೂರನೆಯದಾಗಿ, ಬಜರಂಗದಳ ಮತ್ತು ಇತರ ಸಂಘ ಪರಿವಾರದ ಗುಂಪುಗಳನ್ನು ಪರೋಕ್ಷವಾಗಿ ಉಲ್ಲೇಖಿಸುವ ಮೂಲಕ—ಅಲ್ಲದೆ ವಿಷಯವನ್ನು ನೇರವಾಗಿಯೇ ಪ್ರಸ್ತಾಪಿಸುವ ಧೈರ್ಯ ತೋರುತ್ತಾ—ಅವರು ಹೀಗೆ ಹೇಳುತ್ತಾರೆ: "ಕೆಲವು ಉಗ್ರಗಾಮಿ ಅಥವಾ ಭಯೋತ್ಪಾದಕ ಗುಂಪುಗಳಿಗೆ ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಯಾವುದೇ ಹಕ್ಕಿಲ್ಲ. ಈ ದೇಶವನ್ನು ಆಳುವ ಆಡಳಿತಗಾರರೇ ಅವರನ್ನು ನಿಯಂತ್ರಿಸಬೇಕು. ಅವರು ಈ ಬಗ್ಗೆ ಧ್ವನಿ ಎತ್ತದೆ ಅಥವಾ ಇದನ್ನು ಖಂಡಿಸದೆ ಮೌನವಾಗಿ ಕುಳಿತಾಗ, ಇದು ಅವರದ್ದೇ ಕಾರ್ಯಸೂಚಿಯ ಭಾಗ ಎಂದು ಕ್ರಿಶ್ಚಿಯನ್ನರು ಅಥವಾ ಅಲ್ಪಸಂಖ್ಯಾತರು ಅರ್ಥೈಸಿಕೊಳ್ಳುವುದು ಅನಿವಾರ್ಯವಾಗುತ್ತದೆ,”
ಒಬ್ಬ ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯದ ಅಭಿಷಿಕ್ತ ನಾಯಕನಾಗಿ ಬಲಪಂಥೀಯ ಜಾಗೃತ ಗುಂಪುಗಳನ್ನು ʼಉಗ್ರಗಾಮಿಗಳುʼ ಮತ್ತು ʼಭಯೋತ್ಸಾದಕರುʼ ಎಂದು ಪರೋಕ್ಷವಾಗಿ ಗುರುತಿಸಿರುವುದು ಒಂದು ಕ್ರಾಂತಿಕಾರಿ ಹೇಳಿಕೆ ಎಂದೇ ಪರಿಗಣಿಸಲಾಗಿದೆ. ಅದರ ಜೊತೆಗೆ ಅವರು ಮಾಡುವ ಕೃತ್ಯಗಳನ್ನು ಸಂವಿಧಾನದ ಉಲ್ಲಂಘನೆ ಎಂದು ಬಣ್ಣಿಸುವ ಮೂಲಕ ದಾಳಿಗಳ ಅಂತಿಮ ಹೊಣೆಗಾರಿಕೆ ಏನಿದ್ದರೂ ಸರ್ಕಾರದ್ದು ಎಂದು ಬೊಟ್ಟುಮಾಡಿದ್ದಾರೆ.
ಇದರಿಂದ ತಾನು ನಿಷ್ಪಕ್ಷಪಾತ ಕ್ರಮಗಳನ್ನು ಕೈಗೊಳ್ಳುತ್ತೇನೆ ಎನ್ನುವ ಸರ್ಕಾರದ ಮುಖವಾಡವನ್ನು ಕಳಚಿದಂತಾಗುತ್ತದೆ. ಜೊತೆಗೆ ಈ ಜಾಗೃತ ಗುಂಪುಗಳ ಮೂಲಕ ನಡೆಯುವ ಹಿಂಸಾಚಾರದ ಕೃತ್ಯಗಳಿಗೆ ಕಾರ್ಯಾಂಗವನ್ನೇ ಹೊಣೆ ಮಾಡುತ್ತದೆ. ಅಲ್ಲದೆ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯೇ ಸರ್ಕಾರದ ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ನ್ಯಾಯಸಮ್ಮತ ಕ್ರಮಕ್ಕೆ ಇರುವ ಅಂತಿಮ ಒರೆಗಲ್ಲು ಎಂಬುದಾಗಿ ಅವರು ಪ್ರತಿಪಾದಿಸಿದ್ದಾರೆ.
ಅಂಶ-4: ಪರಸ್ಪರ ಅಸ್ತಿತ್ವದ ಬಿಕ್ಕಟ್ಟಿನ ಹೊಸ ತಿಳುವಳಿಕೆ
ಇನ್ನು ನಾಲ್ಕನೇ ಅಂಶವೇನೆಂದರೆ, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರನ್ನು ಸಂಕಷ್ಟದಲ್ಲಿರುವ ಒಡನಾಡಿಗಳು ಎಂದು ಕ್ಯಾಥೋಲಿಕೋಸ್ ಅವರು ವಿಶ್ಲೇಷಿಸಿದ್ದಾರೆ. ಅಂದರೆ ಮುಸ್ಲಿಮರನ್ನು ಪೈಶಾಚಿಕ ಸ್ವರೂಪದಲ್ಲಿ ನೋಡುವ ಹಿಂದುತ್ವದ ನಿರೂಪಣೆಗಳಿಗೆ ಈ ಹಿಂದೆ ಕ್ರಿಶ್ಚಿಯನ್ ಸಮುದಾಯ ಹೊಂದಿದ್ದ ಸಹಾನುಭೂತಿ ನಿಲುವಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ.
“ಇಂದಿನ ಹಿಂದೂಗಳು ಭಾರತದಲ್ಲೇ ಹುಟ್ಟಿ ಹಿಂದು ಧರ್ಮದಲ್ಲಿ ಬೆಳೆದವರು. ಇಲ್ಲಿನ ಕ್ರಿಶ್ಚಿಯನ್ನರು ಕೂಡ ಕ್ರಿ.ಶ. ೫೨ರಿಂದಲೇ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿ ಇಲ್ಲೇ ಹುಟ್ಟಿ ಬೆಳೆದವರು. ಇವರು ಈ ದೇಶದ ಪ್ರಜೆಗಳು ಮತ್ತು ಯಾವೊಬ್ಬ ಕ್ರಿಶ್ಚಿಯನ್ ಕೂಡ ಇಸ್ರೇಲ್ ನಿಂದ ಇಲ್ಲಿಗೆ ಬಂದವನಲ್ಲ,” ಎಂದು ಅವರು ಹೇಳಿದ್ದಾರೆ.
“ಯಾವೊಬ್ಬ ಕ್ರಿಶ್ಚಿಯನ್ ಕೂಡ ಅರಬ್ ದೇಶಗಳಿಂದ ಇಲ್ಲಿಗೆ ಬಂದವರಲ್ಲ. ಇಲ್ಲಿನ ಜನರೆಲ್ಲರೂ ಮೂಲತಃ ಇಲ್ಲೇ ಹುಟ್ಟಿ ಬೆಳೆದವರು. ಇಲ್ಲಿರುವ ಮುಸ್ಲಿಮರ ವಿಷಯದಲ್ಲೂ ಇದು ಅನ್ವಯಿಸುತ್ತದೆ; ಅವರು ಇಲ್ಲೇ ಹುಟ್ಟಿ ಬೆಳೆದವರು. ಮಧ್ಯಪ್ರಾಚ್ಯದಿಂದ ಬಂದ ಯಾವ ಮುಸ್ಲಿಮರೂ ಇಲ್ಲಿಲ್ಲ. ಇಲ್ಲೇ ಹುಟ್ಟಿ ಬೆಳೆದ ಮುಸ್ಲಿಮರು ಮಾತ್ರ ಇಲ್ಲಿದ್ದಾರೆ. ಆದ್ದರಿಂದ, ಕ್ರಿಶ್ಚಿಯನ್ ಧರ್ಮ ಮತ್ತು ಹಿಂದೂ ಧರ್ಮದಂತೆಯೇ ಆ ಧರ್ಮಕ್ಕೂ (ಇಸ್ಲಾಂ) ಇಲ್ಲಿ ಅಸ್ತಿತ್ವದಲ್ಲಿರುವ ಹಕ್ಕಿದೆ."
ಸಂಕಷ್ಟದಲ್ಲಿ ಸಮಾನರು
ಕೇರಳದ ಸಂದರ್ಭದಲ್ಲಿ ಈ ನಡೆಯು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಕೇರಳದ ಚರ್ಚ್ನ ಕೆಲವು ವರ್ಗಗಳು ಮತ್ತು ಕ್ರಿಶ್ಚಿಯನ್ ಸಮುದಾಯದ ಒಂದು ವಿಭಾಗವು ಹಿಂದೆ ತಾತ್ಕಾಲಿಕ ಲಾಭಕ್ಕಾಗಿ ಹಿಂದುತ್ವದ ನಿರೂಪಣೆಗಳ ಜೊತೆಗೆ ಕೈಜೋಡಿಸಿದ್ದವು. ಎಂಬ ಕಾರಣಕ್ಕೆ ಮಲಯಾಳಂನ ಆಡುಭಾಷೆಯಲ್ಲಿ ಇವರನ್ನು ವ್ಯಂಗ್ಯವಾಗಿ 'ಕ್ರಿಸಂಘಿಗಳು' (Krisanghis) ಎಂದು ಕರೆಯುತ್ತದೆ. ಆದರೆ ಈಗ ಕ್ಯಾಥೋಲಿಕೋಸ್ ಅವರ ಮಾತುಗಳು, "ನಮ್ಮ ಸಮುದಾಯ ಮಾತ್ರ ಸುರಕ್ಷಿತವಾಗಿರಬಹುದು" ಎಂಬ ಭ್ರಮೆಯನ್ನು ಮತ್ತು ಬಹುಸಂಖ್ಯಾತ ವ್ಯವಸ್ಥೆಯನ್ನು ಓಲೈಸುವ ಮೂಲಕ ಅಥವಾ ಮತ್ತೊಂದು ಅಲ್ಪಸಂಖ್ಯಾತ ಸಮುದಾಯಕ್ಕಿಂತ ನಾವು "ಹೆಚ್ಚು ಯೋಗ್ಯರು" ಎಂದು ತೋರಿಸಿಕೊಳ್ಳುವ ಮೂಲಕ ಸುರಕ್ಷತೆಯನ್ನು ಪಡೆಯಬಹುದು ಎಂಬ ಸುಳ್ಳು ನಂಬಿಕೆಯನ್ನು ಛಿದ್ರಗೊಳಿಸಿವೆ.
ಆ ಮೂಲಕ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಇಬ್ಬರೂ ಸಮಾನವಾಗಿ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ಒಂದೇ ಉಸಿರಿನಲ್ಲಿ ಹೇಳುವ ಕೆಲಸವನ್ನು ಅವರು ಮಾಡಿದ್ದಾರೆ.
ಅಂಶ-5: ಸರ್ಕಾರಕ್ಕೆ ಸ್ಪಷ್ಟ ಸಂದೇಶ
ಇನ್ನು ಐದನೆಯದಾಗಿ, ಕ್ರಿಶ್ಚಿಯನ್ ಸಮುದಾಯವು ಯಾವ ಕಿರುಕುಳವನ್ನು ಕೂಡ ಸುಮ್ಮನೇ ಸಹಿಸಿಕೊಂಡು ಕುಳಿತುಕೊಳ್ಳುವುದಿಲ್ಲ ಎನ್ನುವ ಮೂಲಕ ಕ್ಯಾಥೋಲಿಕೋಸ್ ಅವರು ಸವಾಲಿನ ದಾಟಿಯಲ್ಲಿ ಮಾತನಾಡಿದ್ದಾರೆ; “ಆರ್.ಎಸ್.ಎಸ್. ಭಾರತ ಎಂದರೆ ಹಿಂದುಗಳ ದೇಶ ಎಂಬ ಘೋಷವಾಕ್ಯವನ್ನು ಹೊಂದಿದ್ದರೆ ಅದು ಈ ಭಾರತದಲ್ಲಿ ನಡೆಯುವುದಿಲ್ಲ ಎಂಬುದು ಸತ್ಯ ಮತ್ತು ಅದು ಎಂದಿಗೂ ಸಾಧ್ಯವಿಲ್ಲ. ಈ ಉದ್ದೇಶಕ್ಕಾಗಿ ಕ್ರಿಶ್ಚಿಯನ್ನರು ಹುತಾತ್ಮರಾಗಲು ಹಿಂಜರಿಯುವುದಿಲ್ಲ. ಯಾಕೆಂದರೆ ಕ್ರಿಶ್ರಿಯನ್ ಧರ್ಮವು ರೂಪುಗೊಂಡಿರುವುದೇ ಹುತಾತ್ಮತೆಯಿಂದ. ಕಿರುಕುಳದ ವಿರುದ್ಧದ ನಮ್ಮ ಪ್ರತಿರೋಧವು ಮೊದಲ ಶತಮಾನದಲ್ಲಿಯೇ ಆರಂಭವಾಗಿತ್ತು,”
ಈ ಮಾತುಗಳು ಕೇವಲ ಸಾಂದರ್ಭಿಕ ಮಾಡಿದ ಭಾಷಣಕ್ಕಿಂತ ಭಿನ್ನವಾಗಿದೆ, ಚರ್ಚ್ನ ಪ್ರಸ್ತುತ ಸ್ಥಿತಿಯನ್ನು ಅದರ ಮೂಲ ಅಸ್ಮಿತೆಯೊಂದಿಗೆ ಜೋಡಿಸಿರುವುದು ಗಮನಾರ್ಹ. ಪ್ರಸ್ತುತ ಸಂಘರ್ಷವನ್ನು ಕೇವಲ ಒಂದು ಹೊಸ ಬೆದರಿಕೆಯಾಗಿ ನೋಡುವ ಬದಲು, ಅದನ್ನು ಎರಡು ಸಹಸ್ರಮಾನಗಳ ಹಳೆಯ ಸ್ಥಿತಿಸ್ಥಾಪಕತ್ವದ ಪರಂಪರೆಯ ಮುಂದುವರಿಕೆಯಾಗಿ ಅವರು ನೋಡುತ್ತಿದ್ದಾರೆ. ಇದು ಸರ್ಕಾರದ ರಕ್ಷಣೆಗಾಗಿ ಮೊರೆ ಹೋಗುವ ಹಳೆಯ ನಿಲುವಿನಿಂದ ದೂರ ಸರಿದು, ನೈತಿಕ ಮತ್ತು ನಾಗರಿಕ ಮುಖಾಮುಖಿಗೆ ಸಿದ್ಧವಾಗುತ್ತಿರುವ ಪ್ರಮುಖ ಬದಲಾವಣೆಯ ಸಂಕೇತವಾಗಿದೆ.
ಯಾವುದೇ ತಾತ್ಕಾಲಿಕ ರಾಜಕೀಯ ಆಡಳಿತದ ಅವಧಿಯನ್ನೂ ಮೀರಿದ ದೀರ್ಘಕಾಲೀನ ಅಸ್ತಿತ್ವದ ಸ್ಮರಣಶಕ್ತಿಯನ್ನು ಚರ್ಚ್ ಹೊಂದಿದೆ ಎಂಬುದು ಈ ಘೋಷಣೆಯ ಹಿಂದಿನ ಸಾರವಾಗಿದೆ. ಕಿರುಕುಳವು ಶರಣಾಗತಿಗೆ ಕಾರಣವಾಗುವುದಿಲ್ಲ; ಬದಲಾಗಿ, ಯಾವ ಇತಿಹಾಸದ ನೋವಿನ ಲಾಭವನ್ನು ಪಡೆಯಲು ಸರ್ಕಾರ ಯತ್ನಿಸುತ್ತಿದೆಯೋ, ಅದೇ ಇತಿಹಾಸದಿಂದ ಶಕ್ತಿಯನ್ನು ಪಡೆದು ಮತ್ತಷ್ಟು ದೃಢವಾದ ಮತ್ತು ತತ್ವಬದ್ಧವಾದ ಪ್ರತಿರೋಧಕ್ಕೆ ಕಾರಣವಾಗುತ್ತದೆ ಎಂಬ ಎಚ್ಚರಿಕೆಯನ್ನೂ ಸರ್ಕಾರಕ್ಕೆ ನೀಡುತ್ತಿದೆ. ಸರ್ಕಾರದ ಪಾಲಿಗೆ ಈ ಸಂದೇಶ ಸ್ಪಷ್ಟವಾಗಿದೆ: ಚರ್ಚ್ ಸಾಮ್ರಾಜ್ಯಗಳನ್ನೇ ಮೀರಿಸಿ ಎರಡು ಸಹಸ್ರಮಾನಗಳ ಕಿರುಕುಳವನ್ನು ಬದುಕಿ ಕಳೆದಿದೆ ಮತ್ತು ಮತ್ತೊಮ್ಮೆ ಹಾಗೆಯೇ ಮಾಡುವ ಐತಿಹಾಸಿಕ ಹಾಗೂ ನೈತಿಕ ಶಕ್ತಿಯನ್ನು ಅದು ಹೊಂದಿದೆ.
ಇಲ್ಲಿಂದ ಮುಂದೆ ನಮ್ಮ ಹಾದಿ ಎಲ್ಲಿಗೆ?
ಇದು ಬಹುಸಂಖ್ಯಾತರ ನಿರ್ಧಾರಗಳಲ್ಲಿ ಪಾಲು ಕೇಳುವ ಬದಲು, ಈ ದೇಶದ ಮೇಲಿನ ತನ್ನ ಸಮಾನ ಹಕ್ಕನ್ನು ಪ್ರತಿಪಾದಿಸುವ ಅಲ್ಪಸಂಖ್ಯಾತ ರಾಜಕಾರಣದ ಉದಯವೇ ಎಂಬುದನ್ನು ಕಾಲವೇ ನಿರ್ಧರಿಸಬೇಕು. ಹಾಗಿದ್ದರೂ, ಕ್ರಿಶ್ಚಿಯನ್ ಚರ್ಚ್ನ ಹಿರಿಯ ನಾಯಕರೊಬ್ಬರು ಇಷ್ಟು ನೇರವಾದ ಮಾತುಗಳಲ್ಲಿ ಸರ್ಕಾರವನ್ನು ಪ್ರಶ್ನಿಸಿದಾಗ, ಅದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಧ್ವನಿಸುವುದರಲ್ಲಿ ಸಂಶಯವಿಲ್ಲ; ಏಕೆಂದರೆ ಪ್ರಪಂಚದಾದ್ಯಂತ ಇರುವ ಕ್ರಿಶ್ಚಿಯನ್ನರು ಇದನ್ನು ಖಂಡಿತವಾಗಿಯೂ ಗಮನಿಸುತ್ತಾರೆ.
ಸರ್ಕಾರ ಮತ್ತು ಅದರ ಸಹವರ್ತಿಗಳ ಬಹುಸಂಖ್ಯಾತ ಸಂಸ್ಕೃತಿಯಲ್ಲಿ ಇದು ಯಾವುದಾದರೂ ಬದಲಾವಣೆ ತರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಅಲ್ಪಸಂಖ್ಯಾತರನ್ನು ಗುರಿಪಡಿಸುವುದು ಮತ್ತು ದ್ವೇಷದ ರಾಜಕಾರಣವನ್ನು ನಡೆಸುವುದರ ಮೇಲೆ ಅವರ ಇಡೀ ರಾಜಕೀಯ ಕಾರ್ಯಸೂಚಿಯಿದೆ. ಅಧಿಕಾರದಲ್ಲಿ ಅವರ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅವರಿಗೆ ಇದರ ಅಗತ್ಯ ಹೆಚ್ಚಾಗಿದೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


