ಸಾಂವಿಧಾನಿಕ ಮೌಲ್ಯಗಳು ಮತ್ತು ಅಸಹನೆಯ ರಾಜಕಾರಣ
x

ಸಾಂವಿಧಾನಿಕ ಮೌಲ್ಯಗಳು ಮತ್ತು ಅಸಹನೆಯ ರಾಜಕಾರಣ

ಸಂವಿಧಾನದ ಭವಿಷ್ಯದ ಬಗ್ಗೆ ಅಂಬೇಡ್ಕರ್‌ರವರಿಗಿದ್ದ ಆತಂಕ ನಿಜವಾಗಿದೆ. ಜನವಿರೋಧಿ ಕಾಯಿದೆಗಳನ್ನು ಜಾರಿಗೊಳಿಸಿ ನಾಗರಿಕರ ಸ್ವಾತಂತ್ರ್ಯವನ್ನು ಮತ್ತು ಮಾನವ ಹಕ್ಕುಗಳನ್ನು ಕಸಿದುಕೊಂಡಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ.


ಭಾರತೀಯ ಜನತೆ 75 ವರ್ಷಗಳ ಹಿಂದೆ ಸಂವಿಧಾನವನ್ನು ಸ್ವೀಕರಿಸಿದಾಗ ಅದಕ್ಕಿದ್ದ ತಾತ್ವಿಕ ಉದ್ದೇಶ ರಾಷ್ಟ್ರೀಯ ಐಕ್ಯತೆಯನ್ನು ಸಾಧಿಸುವುದು, ಸಮಗ್ರತೆಯನ್ನು ರಕ್ಷಿಸುವುದು, ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಸ್ಥಾಪಿಸುವುದು ಮತ್ತು ಸಮಾನತೆಯ ಭಾವನೆಯನ್ನು ಬೆಳೆಸುವುದು ಹಾಗೂ ಸಾಮಾಜಿಕ ಕ್ರಾಂತಿಯ ಮೂಲಕ ಭಾರತೀಯ ಜನಸಮೂಹದ ಬದುಕನ್ನು ಉತ್ತಮಗೊಳಿಸುವುದಾಗಿತ್ತು. ಎಷ್ಟರಮಟ್ಟಿಗೆ ಈ ಉದ್ದೇಶಗಳು ಸಫಲವಾಗಿವೆ ಎಂಬುದರ ಬಗ್ಗೆ ಒಮ್ಮತದ ಅಭಿಪ್ರಾಯವಿಲ್ಲ. ಸಂವಿಧಾನವೊಂದು ಅತ್ಯುತ್ತಮವಾಗಿ ಬರೆಯಲ್ಪಟ್ಟಿರಬಹುದಾದರೂ ಅದರ ನಿಜವಾದ ಪ್ರಯೋಜನ ಜನರಿಗೆ ತಲುಪುವುದು ಅದು ಸಮರ್ಪಕವಾಗಿ ಜಾರಿಯಾದಾಗ ಮಾತ್ರ.

ಅಂಬೇಡ್ಕರ್‌ ಅವರು ಸಂವಿಧಾನ ಸಭೆಯಲ್ಲಿ ನವೆಂಬರ್ 25, 1949ರಂದು ಮಾಡಿದ ತಮ್ಮ ಭಾಷಣದಲ್ಲಿ ‘ಸಂವಿಧಾನವೊಂದು ಎಷ್ಟೇ ಉತ್ತಮವಾಗಿದ್ದರೂ ಯಾರು ಅದನ್ನು ಜಾರಿಗೊಳಿಸುತ್ತಾರೊ ಅವರಿಂದಾಗಿ ಅದು ಕೆಟ್ಟದ್ದಾಗಬಹುದು. ಒಂದು ಸಂವಿಧಾನ ಎಷ್ಟೇ ಕೆಟ್ಟದ್ದಾಗಿದ್ದರೂ ಅದನ್ನು ಜಾರಿಗೊಳಿಸುವವರಿಂದ ಅದು ಅತ್ಯುತ್ತಮ ಸಂವಿಧಾನವಾಗಬಹುದು,’ ಎಂದು ಅಭಿಪ್ರಾಯ ಪಡುತ್ತಾರೆ. ಸಂವಿಧಾನ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬುದು ಅದರ ಸ್ವರೂಪದ ಮೇಲೆ ಅವಲಂಬಿತವಾಗಿರುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಜನಪರ ಆಂದೋಲನಗಳ ಸ್ಥಾನ, ರಾಷ್ಟ್ರದ ಪರಿಕಲ್ಪನೆ, ಮಹಾ ನಾಯಕರ ಬಗೆಗಿನ ಅಂಧಭಕ್ತಿ, ಸಾಮಾಜಿಕ ಅಸಮಾನತೆ ಮತ್ತು ಪ್ರಜಾಪ್ರಭುತ್ವದ ಮಿತಿಗಳ ಕುರಿತು ಅವರು ಆಡಿದ ಎಚ್ಚರಿಕೆಯ ಮಾತುಗಳು ನಲುವತ್ತರ ದಶಕಕ್ಕಿಂತಲೂ ಈಗಲೇ ಹೆಚ್ಚು ಪ್ರಸ್ತುತವಾಗಿ ಕಾಣುತ್ತವೆ. ಸಂವಿಧಾನದ ಭವಿಷ್ಯದ ಬಗ್ಗೆ ಅಂಬೇಡ್ಕರ್‌ರವರಿಗಿದ್ದ ಆತಂಕ ನಿಜವಾಗಿದೆ. ಜನವಿರೋಧಿ ಕಾಯಿದೆಗಳನ್ನು ಜಾರಿಗೊಳಿಸಿ ನಾಗರಿಕರ ಸ್ವಾತಂತ್ರ್ಯವನ್ನು ಮತ್ತು ಮಾನವ ಹಕ್ಕುಗಳನ್ನು ಕಸಿದುಕೊಂಡಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ.

ಇತರ ದೇಶಗಳ ಸಂವಿಧಾನಗಳಿಗೆ ಹೋಲಿಸಿದರೆ ನಮ್ಮ ಸಂವಿದಾನ ತಿದ್ದುಪಡಿ ವಿಧಾನ ಸರಳವಾಗಿದೆ. ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ, ದಕ್ಷಿಣ ಆಪ್ರಿಕಾ ದೇಶಗಳಲ್ಲಿ ಸಂವಿಧಾನಗಳು ಯಾವ ರೂಪದಲ್ಲಿ ಮಂಡಿತವಾಗಿದ್ದವೋ ಹಾಗೆಯೆ ಸಂವಿಧಾನ ಸಭೆಗಳಲ್ಲಿ ಅನುಮೋದಿಸಲ್ಪಟ್ಟಿದ್ದವು. ಆದರೆ ನಮ್ಮ ಸಂವಿಧಾನ ಅಂತಿಮಗೊಳ್ಳುವ ವೇಳೆಗೆ 2473 ತಿದ್ದುಪಡಿಗಳಾಗಿದ್ದವು. ಅದು ಸಂವಿಧಾನ ರಚನಾ ಸಮಿತಿಯ ವಿಶೇಷ ಸಾಧನೆಯಾಗಿತ್ತು. ಸಂವಿಧಾನ ರಚನಾ ಪ್ರಕ್ರಿಯೆ ಕೂಡ ಪ್ರಜಾಸತ್ತಾತ್ಮ್ಮಕವಾಗಿತ್ತು ಎಂಬುದನ್ನು ನಾವು ಗಮನಿಸಬೇಕು. ಪ್ರತೀ ತಲೆಮಾರನ್ನು ಒಂದು ಭಿನ್ನ ರಾಷ್ಟ್ರವೆಂದು ಕಾಣುವ ಅಮೇರಿಕಾದ ಅಧ್ಯಕ್ಷನಾಗಿದ್ದ ಚಿಂತಕ ಥಾಮಸ್ ಜಫರ್‌ಸನ್‌ನನ್ನು ಉಲ್ಲೇಖಿಸುತ್ತಾ ಒಂದು ತಲೆಮಾರಿಗೆ ಮುಂದಿನ ತಲೆಮಾರಿನವರ ಮೇಲೆ ಕಾಯಿದೆಗಳನ್ನು ಹೇರುವ ಹಕ್ಕಿಲ್ಲ ಎಂದು ಅಂಬೇಡ್ಕರ್ ಹೇಳುತ್ತಾರೆ. ಆ ಕಾರಣಕ್ಕಾಗಿ ಸಂವಿಧಾನವನ್ನು ತಿದ್ದುಪಡಿ ಮಾಡುವ ವಿಧಾನವನ್ನು ಸರಳಗೊಳಿಸಲಾಗಿದೆ. ಮೂರರಲ್ಲಿ ಎರಡರಷ್ಟು ಬಹುಮತದಿಂದ ತಿದ್ದುಪಡಿ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಇದೇ ಅಂತಿಮ ಎನ್ನುವ ನಿಲುವನ್ನು ಅವರು ಒಪ್ಪಲಿಲ್ಲ. ಯಾವುದೂ ಪವಿತ್ರವಾದುದಲ್ಲವೆಂದು ಅವರು ಹೇಳುತ್ತಾರೆ. ಆದರೆ ಈ ಸಂವಿಧಾನವನ್ನು ಜಾರಿಗೆ ತಂದವರು ಸರಳ ತಿದ್ದುಪಡಿ ವಿಧಾನವನ್ನು ಹಲವು ಬಾರಿ ದುರುಪಯೋಗ ಮಾಡಿದ್ದಾರೆ.

‘ಹಿಂದಿನಿಂದಲೂ ಜಾತಿಯ ರೂಪದಲ್ಲಿರುವ ನಮ್ಮೊಳಗಿನ ವೈರಿಗಳು ಮತ್ತು ವಿವಿಧ ಬಗೆಯ ರಾಜಕೀಯ ಪಕ್ಷಗಳು ನನ್ನ ಆತಂಕವನ್ನು ಹೆಚ್ಚಿಸಿವೆ. ಈ ಪಕ್ಷಗಳು ರಾಷ್ಟ್ರಕ್ಕಿಂತಲೂ ಮತೀಯ ನಂಬಿಕೆಗಳೇ ಪ್ರಮುಖವೆಂದು ಪರಿಗಣಿಸಿದರೆ ನಮ್ಮ ಸ್ವಾತಂತ್ರ್ಯ ಮತ್ತೊಮ್ಮೆ ಅಪಾಯದಲ್ಲಿದೆ ಎಂದೇ ತಿಳಿಯಬೇಕಾಗುತ್ತದೆ’ ಎಂದು ಹೇಳಿದ್ದ ಅಂಬೇಡ್ಕರ್ ಈ ಪ್ರಜಾಸತ್ತಾತ್ಮಕ ಸಂವಿಧಾನವನ್ನು ಮುಂದಿನ ಪೀಳಿಗೆ ಉಳಿಸಿಕೊಳ್ಳಬಹುದೇ ಅಥವಾ ಕಳೆದುಕೊಳ್ಳಬಹುದೇ ಎಂಬುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ‘ಭಾರತದಲ್ಲಿ ಬೇರಾವ ದೇಶದಲ್ಲೂ ಇಲ್ಲದಂತಹ ಭಕ್ತಿ, ವ್ಯಕ್ತಿಪೂಜೆ ಇದೆ. ಅದು ರಾಜಕಾರಣದಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ. ಭಕ್ತಿಯೆಂಬುದು ಧರ್ಮದಲ್ಲಿ ಆತ್ಮದ ಮುಕ್ತಿಗೆ ದಾರಿಯಾಗಬಹುದು. ಆದರೆ. ರಾಜಕಾರಣದಲ್ಲಿ ಭಕ್ತಿ ಅಥವಾ ವ್ಯಕ್ತಿ ಪೂಜೆ ವ್ಯವಸ್ಥೆಯನ್ನು ಕೀಳುಮಟ್ಟಕ್ಕಿಳಿಸಿ ಸರ್ವಾಧಿಕಾರಕ್ಕೆ ಕಾರಣವಾಗುತ್ತದೆ’ ಎನ್ನುವುದು ಅವರ ನಂಬಿಕೆಯಾಗಿತ್ತು. ರಾಜಕೀಯ ಪ್ರಜಾಭುತ್ವವು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಗೌರವಿಸುವ ಸಾಮಾಜಿಕ ಪ್ರಜಾಪ್ರಭುತ್ವವಾಗಿ ಮಾರ್ಪಾಡಾಗಬೇಕೆಂಬ ಅವರ ಆಶಯ ಕನಸಾಗಿಯೇ ಉಳಿದಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆಯೇ ಪ್ರಶ್ನೆಗಳು ಮೂಡುತ್ತವೆ.

ನವೆಂಬರ್ 4, 1948ರಂದು ಕರಡು ರಚನಾ ಸಭೆಯಲ್ಲಿ ಮಾತನಾಡುತ್ತಾ ‘ಸಂವಿಧಾನಿಕ ನೈತಿಕತೆಯೆನ್ನುವುದು ಸಹಜವಾದ ಭಾವನೆಯಲ್ಲ. ಅದನ್ನು ಪೋಷಿಸಬೇಕು. ನಮ್ಮ ಜನರು ಅದನ್ನು ಇನ್ನು ಕಲಿಯಬೇಕಿದೆಯೆಂಬುದನ್ನು ಅರಿತುಕೊಳ್ಳಬೇಕು. ಭಾರತದ ಪ್ರಜಾತಂತ್ರವು ಮೂಲತಃ ಪ್ರಜಾಸತ್ತಾತ್ಮಕವಲ್ಲದ ಭಾರತೀಯ ಮಣ್ಣಿನ ಮೇಲಿರುವ ಬಾಹ್ಯ ಹೊದಿಕೆಯಷ್ಟೆ’ ಎಂದು ಹೇಳುತ್ತಾರೆ. ಸಂವಿಧಾನ ಜಾರಿಯಾದ ಎಪ್ಪತೈದು ವರ್ಷಗಳ ನಂತರವೂ ಭಾರತೀಯ ಸಮಾಜದಲ್ಲಿ ಪ್ರಜಾತಂತ್ರದ ಮೌಲ್ಯಗಳು ಬೆಳೆದಂತೆ ಕಾಣುತ್ತಿಲ್ಲ. ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳು ಹೆಚ್ಚಾಗುತ್ತಲೇ ಇವೆ.

ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗಾಗಿ ನೀಡಲಾಗಿದ್ದ ಮೀಸಲಾತಿಯನ್ನು ಯಾವುದೇ ಸಾಮಾಜಿಕ ಅನ್ಯಾಯಕ್ಕೆ ಒಳಗಾಗದ ಮತ್ತು ಈಗಾಗಲೇ ತಮ್ಮ ಜನಸಂಖ್ಯೆಗೂ ಅಧಿಕ ಪ್ರಮಾಣದಲ್ಲಿ ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಂಡಿರುವ ವರ್ಗಗಳಿಗೆ ವಿಸ್ತರಿಸಿರುವುದು ಸಂವಿಧಾನದ ಮೂಲ ಆಶಯವನ್ನೇ ಬುಡಮೇಲು ಮಾಡಿದೆ. ಈ ಕೃತ್ಯದಲ್ಲಿ ಪ್ರಮುಖ ವಿರೋಧಪಕ್ಷಗಳು ಭಾಗಿಗಳಾಗಿದ್ದು ಸಂವಿಧಾನವನ್ನು ವಿಫಲಗೊಳಿಸುವಲ್ಲಿ ವಿವಿಧ ರಾಜಕೀಯ ಪಕ್ಷಗಳು ಹೇಗೆ ಒಟ್ಟಾಗುತ್ತವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕಿದ್ದ ವಿಶೇಷ ಸ್ಥಾನವನ್ನು ರದ್ದುಪಡಿಸಿದ ವಿಧಾನ ಕೂಡ ಸಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿತ್ತು.

ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್ ಮತ್ತು ಇತರ ರಾಜ್ಯಗಳಲ್ಲಿ ಮುಸ್ಲಿಮರ ಮನೆಗಳನ್ನು, ಮಸೀದಿಗಳನ್ನು ಸುಪ್ರೀಂ ಕೋರ್ಟ್ ಅದೇಶವಿದ್ದಾಗ್ಯೂ ಕೆಡುವುತ್ತಿರುವುದು ಸರ್ಕಾರಗಳೇ ತಮ್ಮ ಪ್ರಜೆಗಳ ವಿರುದ್ಧ ನಡೆಸುತ್ತಿರುವ ಸಂವಿಧಾನ ಬಾಹಿರ ಕಾರ್ಯಾಚರಣೆಗಳಾಗಿವೆ. ಸಂವಿಧಾನ ಮತ್ತು ಕಾನೂನು ವ್ಯವಸ್ಥೆಯನ್ನು ಧಿಕ್ಕರಿಸುವ ಇಂತಹ ಆಕ್ರಮಣಕಾರಿ ಕೃತ್ಯಗಳ ವಿರುದ್ಧ ವಿರೋಧ ಪಕ್ಷಗಳ ವ್ಯಾಪಕ ಪ್ರ‍್ರತಿಭಟನೆಯಾಗಲೀ, ಸಾರ್ವಜನಿಕ ಆಕ್ರೋಶವಾಗಲೀ ವ್ಯಕ್ತವಾಗದಿರುವುದು ಆಂತಕಕಾರಿ ವಿಚಾರ. ಅಲ್ಪ ಸಂಖ್ಯಾತ ಮತ್ತು ನಿರ್ಲಕ್ಷಿತ ಸಮುದಾಯಗಳ ಮೇಲೆ ನಿರಂತರವಾಗಿ ನಡೆಯತ್ತಿರುವ ಅಸಂವಿಧಾನಿಕ ದಾಳಿಗಳನ್ನು ತಿರುಚಿ ವರದಿ ಮಾಡುತ್ತಿರುವ ಮುಖ್ಯವಾಹಿನಿ ಮಾಧ್ಯಮಗಳು ಸಂತ್ರಸ್ತರನ್ನೇ ಅಪರಾಧಿಗಳನ್ನಾಗಿಸಿವೆ.

ಸಂವಿಧಾನವನ್ನು ರಕ್ಷಿಸಬೇಕಾಗಿದೆ ಎಂದು ಸಂವಿಧಾನದ ಪ್ರತಿಗಳನ್ನು ಪ್ರದರ್ಶಿಸುತ್ತಾ ಪ್ರತಿಭಟನೆ ನಡೆಸುತ್ತಿರುವ ರಾಜಕೀಯ ಪಕ್ಷಗಳೂ ಕೂಡ ಬಡವರ ಮನೆಗಳನ್ನು ನೆಲಕ್ಕುರುಳಿಸುತ್ತಿರುವ ಅಮಾನವೀಯ ಕ್ರಮದ ಬಗ್ಗೆ ಮೌನವಾಗಿವೆ. ಸಂವಿಧಾನದ ಉಳಿವು ಇರುವುದು ಜನಸಾಮಾನ್ಯರ ಹಕ್ಕುಗಳ ರಕ್ಷಣೆಯಲ್ಲಿ ಎಂಬುದನ್ನು ಅವರು ಮರೆತಂತಿದೆ. ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕಿಯಾದ ಬೃಂದಾ ಕಾರತ್‌ ಅವರಂಥ ಕೆಲವೇ ನಾಯಕರು ಬುಲ್ಟೋಜರ್‌ನ ಎದುರು ನಿಂತು ಪ್ರತಿಭಟಿಸುವ ಮತ್ತು ನ್ಯಾಯಾಲಯಗಳಲ್ಲಿ ಪ್ರಶ್ನಿಸುವ ಧೈರ್ಯ ತೋರಿದ್ದಾರೆ.

ನವೆಂಬರ್ 26ನೇ ದಿನವನ್ನು ಸಂವಿಧಾನ ದಿನವೆಂದು 2015ರಿಂದ ಆಚರಿಸಲಾಗುತ್ತಿದೆ. ಯಾರು ಸಮಾನತೆ, ಭ್ರಾತೃತ್ವ ಮತ್ರು ಧರ್ಮನಿರಪೇಕ್ಷತೆಯನ್ನು ವಿರೋಧಿಸುತ್ತಿದ್ದಾರೊ ಹಾಗೂ ಈ ರಾಷ್ಟ ಬಹುಸಂಖ್ಯಾತರ ಸ್ವತ್ತು ಎಂದು ವಾದಿಸುತ್ತಿದ್ದಾರೊ ಅವರೇ ಸಂವಿಧಾನ ದಿನವನ್ನು ಸಂಭ್ರ‍್ರಮದಿಂದ ಆಚರಿಸುತ್ತಿರುವುದು ಈ ಕಾಲದ ವಿಪರ್ಯಾಸ. ‘ಸಂವಿಧಾನದ ದಿನ’ದ ಘೋಷಣೆಯಾದ ನಂತರದ ದಿನಗಳಲ್ಲಿ ಸಂವಿಧಾನ ವಿರೋಧಿ ಘಟನೆಗಳು ಹೆಚ್ಚಾಗಿರುವುದು ಆಡಳಿತ ಪಕ್ಷದ ಆಷಾಢಭೂತಿತನವನ್ನು ಬಯಲು ಮಾಡಿದೆ. ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತೇವೆಂದು ಸಾರ್ವಜನಿಕವಾಗಿ ಪ್ರತಿಜ್ಞೆ ಸ್ವೀಕರಿಸುತ್ತಿರುವವರು ಮತ್ತು ಮುಸ್ಲಿಮರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಬಹಿಷ್ಕರಿಸುವ ಪ್ರಮಾಣ ಮಾಡುತ್ತಿರುವವರ ವಿರುದ್ಧ ಇಲ್ಲಿಯ ತನಕ ಯಾವುದೇ ಕ್ರಮ ಕೈಗೊಂಡಿಲ್ಲ. ಅವರ ಫೋಟೊಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯಾಗಿದ್ದರೂ ಅವರ ಬಂಧನವಾದ ವರದಿಗಳಿಲ್ಲ. ಇಂತಹ ಸಭೆಗಳಲ್ಲಿ ಪಾಲ್ಗೊಂಡು ದ್ವೇಷ ಭಾಷಣ ಮಾಡಿದವರು ಶಾಸನ ಸಭೆಗಳ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಾರೆ.

ಹತ್ತು ವರ್ಷಗಳ ಹಿಂದೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಗಣರಾಜ್ಯ ದಿನದಂದು ಒಂದು ಜಾಹಿರಾತನ್ನು ಪ್ರಕಟಿಸಿತು. ಆ ಜಾಹಿರಾತಿನಲ್ಲಿದ್ದ ಸಂವಿಧಾನ ಪ್ರಸ್ತಾವನೆಯಲ್ಲಿ ‘ಧರ್ಮನಿರಪೇಕ್ಷ’ ಮತ್ತು ‘ಸಮಾಜವಾದಿ’ ಪದಗಳನ್ನು ತೆಗೆದು ಹಾಕಲಾಗಿತ್ತು. ಸಂಸತ್ತಿನಲ್ಲಿ ತಿದ್ದುಪಡಿಯಾಗದೆ ಪ್ರಸ್ತಾವನೆಯಲ್ಲಿರುವ ಯಾವುದೇ ಪದವನ್ನು ತೆಗೆಯುವ ಅಧಿಕಾರ ಸರ್ಕಾರಕ್ಕಿರಲಿಲ್ಲ. ಆದರೆ ಸರ್ಕಾರದ ಮಂತ್ರಿಗಳು ಅದನ್ನು ಅಸಂಬದ್ಧವಾಗಿ ಸಮರ್ಥಿಸಿದರು. ಪ್ರಸ್ತಾವನೆಯಲ್ಲಿರುವ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಹಾಗೂ ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನೇ ಒತ್ತಿ ಹೇಳುವ ಆ ಎರಡು ಪದಗಳನ್ನು ಸಹಿಸದವರು ಸಂವಿಧಾನದ ಮೂಲ ಆಶಯಗಳಿಗೆ ಬದ್ಧರಾಗಿರುತ್ತಾರೆಯೆ?

ಭಾರತೀಯ ಜನತಾ ಪಕ್ಷದ ಮೂಲ ಸಂಘಟನೆಯಾದ ಆರ್‌ಎಸ್‌ಎಸ್‌ನ ಮುಖವಾಣಿ ‘ಆರ್ಗನೈಸರ್’ ಪತ್ರಿಕೆಯ 1949 ನವೆಂಬರ್ 30ರ ಸಂಚಿಕೆ ಮತ್ತು ಜನವರಿ 25, 1950ರ ಸಂಚಿಕೆಯಲ್ಲಿ ಸಂವಿಧಾನದ ಬದಲಾಗಿ ಜಾತಿವ್ಯವಸ್ಥೆಯನ್ನು ಮತ್ತು ಅಸಮಾನತೆಯನ್ನು ವೈಭವೀಕರಿಸುವ ‘ಮನುಸ್ಮೃತಿ’ಯೇ ಈ ದೇಶದ ಕಾನೂನಾಗಬೇಕೆಂದು ಒತ್ತಾಯಿಸಲಾಗಿತ್ತು. ಆ ಪಕ್ಷದ ಕೆಲವು ನಾಯಕರು ಈಗಲೂ ಹಾಗೆಯೇ ಹೇಳುತ್ತಿರುವುದು ಈ ಕಾಲದ ಧರ್ಮಾಧಾರಿತ ರಾಜಕಾರಣಕ್ಕೆ ಹಿಡಿದ ಕನ್ನಡಿಯಾಗಿದೆ. ಸಂವಿಧಾನವನ್ನು ಬದಲಾಯಿಸುವುದೇ ನಮ್ಮ ಗುರಿ ಎಂದು ಕೆಲವು ಭಾರತೀಯ ಜನತಾ ಪಕ್ಷದ ನಾಯಕರು ಹೇಳುತ್ತಾ ಬಂದಿದ್ದಾರೆ. ಆದರೆ ಸಂವಿಧಾನವನ್ನು ಅಧಿಕೃತವಾಗಿ ಬದಲಿಸದೆ ಅದರ ಮೂಲ ತತ್ವಗಳನ್ನು ಗಾಳಿಗೆ ತೂರಿ ಅಸಮಾನತೆ, ತಾರತಮ್ಯವನ್ನು ಹೆಚ್ಚಿಸುವ ನೀತಿ-ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಸಂಸದರ ಅಥವಾ ಶಾಸಕರ ಸದಸ್ಯತ್ವ ರದ್ದಾದಾಗ, ಮಂತ್ರಿಗಳು ತಮ್ಮ ಸ್ಥಾನಗಳನ್ನು ಕಳೆದುಕೊಂಡಾಗ ಸಂವಿಧಾನ ಅಪಾಯದಲ್ಲಿದೆ ಎಂದು ಪ್ರತಿಭಟಿಸುವ ರಾಜಕೀಯ ಪಕ್ಷಗಳು ಜನಸಾಮಾನ್ಯರ ಹಕ್ಕುಗಳ ಮೇಲೆ ದಾಳಿ ನಡೆದಾಗ ಮೌನವಾಗುತ್ತವೆ.

ಸಂವಿಧಾನದ ಪ್ರಕಾರ ಭಾರತವು ರಾಜ್ಯಗಳ ಒಕ್ಕೂಟವಾಗಿದ್ದರೂ ಕೇಂದ್ರ ಸರ್ಕಾರವು ರಾಜ್ಯಗಳ ಹಕ್ಕುಗಳ ಮೇಲೆ ಅತಿಕ್ರಮಣ ಮಾಡುತ್ತಿದೆ. ಇತ್ತೀಚೆಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ನೇಮಕಾತಿ ಮತ್ತು ಶೈಕ್ಷಣಿಕ ಗುಣಮಟ್ಟ ಕುರಿತ ಕರಡು ನಿಯಮಗಳನ್ನು ಹೊರಡಿಸಿದ್ದು ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ಮಾಡುವ ಆಧಿಕಾರವನ್ನು ರಾಜ್ಯಪಾಲರಿಗೆ ಮಾತ್ರ ನೀಡುವ ಪ್ರಸ್ತಾವನೆಯನ್ನು ಮುಂದಿಡಲಾಗಿದೆ. ಈ ನಿಯಮಗಳು ಜಾರಿಗೆ ಬಂದರೆ ರಾಜ್ಯಗಳು ತಮ್ಮದೇ ವಿಶ್ವವಿದ್ಯಾಲಯಗಳ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುತ್ತವೆ. ಒಕ್ಕೂಟ ವ್ಯವಸ್ಥೆಗೆ ಮಾರಕವಾಗಲಿರುವ ಇಂತಹ ಪ್ರಸ್ತಾವನೆಯನ್ನು ಕರ್ನಾಟಕ, ಕೇರಳ, ತಮಿಳು ನಾಡು, ಪಂಜಾಬ್, ಹಿಮಾಚಲ ಪ್ರದೇಶ, ಜಾರ್ಖಂಡ್ ಮತ್ತಿತರ ರಾಜ್ಯಗಳು ವಿರೋಧಿಸಿವೆ. ಹಿಂದೆ ರಾಷ್ಟೀಯ ಶಿಕ್ಷಣ ನೀತಿಯನ್ನು ರಾಜ್ಯಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಜಾರಿಗೆ ತರಲಾಗಿತ್ತು. ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಕೇಂದ್ರದ ಯಜಮಾನಿಕೆಯನ್ನು ರಾಜ್ಯಗಳ ಮೇಲೆ ಹೇರುತ್ತಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ.

ಕಾರ್ಯಾಂಗವು ಸಂವಿಧಾನಿಕ ಚೌಕಟ್ಟನ್ನು ಮೀರಿ ನಿಯಮಗಳನ್ನು, ಕಾಯಿದೆಗಳನ್ನು ಜಾರಿ ಮಾಡಿದ ಸಂದರ್ಭಗಳಲ್ಲಿ ಸರ್ವೋಚ್ಚ ನ್ಯಾಯಾಲಯ ಅವುಗಳನ್ನು ರದ್ದುಪಡಿಸಿ ಸಂವಿಧಾನದ ರಕ್ಷಣೆ ಮಾಡಿರುವ ಉದಾಹರಣೆಗಳಿವೆ. ಕೇಶವಾನಂದ ಭಾರತಿ (1973) ಮತ್ತು ಮಿನರ್ವ ಮಿಲ್ಸ್ (1980) ಪ್ರಕರಣಗಳಲ್ಲಿ ಸಂಸತ್ತು ಸಂವಿಧಾನಕ್ಕೆ ಮಾಡಿದ ತಿದ್ದುಪಡಿಗಳನ್ನು ಅವುಗಳು ಸಂವಿಧಾನದ ಮೂಲ ರಚನೆಗೆ ವಿರುದ್ಧವಾಗಿವೆಯೆಂದು ಸರ್ವೋಚ್ಚ ನ್ಯಾಯಾಲಯ ರದ್ದುಪಡಿಸಿದ್ದು ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ಮಹತ್ತರ ಘಟನೆಗಳಾಗಿವೆ. ಸಂವಿಧಾನವು ನಾಗರಿಕರಿಗೆ ನೀಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆಂಬ ಕಾರಣಕ್ಕೆ ಕಾರ್ಯಾಂಗವು ಹೊರಡಿಸಿದ ಹಲವು ಆದೇಶಗಳನ್ನು ನ್ಯಾಯಾಲಯಗಳು ಸಂವಿಧಾನ ಬಾಹಿರವೆಂದು ತಿರಸ್ಕರಿಸಿವೆ. ಇತ್ತೀಚಿನ ವರ್ಷಗಳಲ್ಲಿ ಸರ್ವೋಚ್ಚ ನ್ಯಾಯಾಲಯ ಇಂತಹ ತೀರ್ಪುಗಳನ್ನು ನೀಡಿರುವುದು ಅಪರೂಪವೇ. ಕಾರ್ಯಾಂಗದ ವಿವಾದಾತ್ಮಕ ನೀತಿಗಳನ್ನು, ಅದೇಶಗಳನ್ನು ಎತ್ತಿಹಿಡಿದಿರುವ ಪ್ರಕರಣಗಳೇ ಹೆಚ್ಚು.

ಭಾರತೀಯ ಜನತಾ ಪಕ್ಷವು ಇತ್ತೀಚೆಗೆ (2017) ಜಾರಿಗೆ ತಂದ ಚುನಾವಣಾ ಬಾಂಡ್ ಯೋಜನೆಯನ್ನು ಸರ್ವೋಚ್ಚ ನ್ಯಾಯಾಲಯ ಅಸಂವಿಧಾನಿಕ ಎಂದು ಸರ್ವಾನುಮತದಿಂದ ರದ್ದುಪಡಿಸಿತು. ಆದರೆ ಈ ಅಸಂವಿಧಾನಿಕ ಯೋಜನೆಯ ಮೂಲಕ ರಾಜಕೀಯ ಪಕ್ಷಗಳ ಖಾತೆಗಳಿಗೆ ಜಮಾ ಆಗಿದ್ದ ಸಾವಿರಾರು ಕೋಟಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯ ನಿರಾಕರಿಸಿದ್ದು ಕಾನೂನು ತಜ್ಞರಲ್ಲಿ ಅಚ್ಚರಿ ಮೂಡಿಸಿದೆ.

ಕಳೆದ ಒಂದು ದಶಕದಿಂದ ಕಾರ್ಯಾಂಗವು ತನ್ನ ಅಧಿಕಾರವನ್ನು ವಿಸ್ತರಿಕೊಳ್ಳುತ್ತಾ ಶಾಸಕಾಂಗವು ಮುಕ್ತವಾಗಿ ತನ್ನ ಕಾರ್ಯಕಲಾಪಗಳನ್ನು ನಡೆಸದಂತೆ ನೋಡಿಕೊಂಡಿದೆ. ಸಂಸತ್ತಿನ ಎರಡೂ ಸದನಗಳಲ್ಲಿ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲು ವಿರೋಧ ಪಕ್ಷಗಳಿಗೆ ಅವಕಾಶ ನಿರಾಕರಿಸಲಾಗಿದೆ. ಶಾಸಕಾಂಗವು ನ್ಯಾಯಾಂಗದ ಮೇಲೂ ತನ್ನ ಪ್ರಭಾವವನ್ನು ಬೀರುವ ಮತ್ತು ಅದರ ತೀರ್ಮಾನಗಳನ್ನು ಗಂಭೀರವಾಗಿ ಪರಿಗಣಿಸದೆ ಇರುವ ಪ್ರಸಂಗಗಳಿಗೆ ಜನರು ಸಾಕ್ಷಿಯಾಗಿದ್ದಾರೆ. ನ್ಯಾಯಾಂಗ ಸಂಪೂರ್ಣ ಸ್ವಾತಂತ್ರ್ಯವಾಗಿ ಕಾರ್ಯ ನಿರ್ವಹಿಸದಿದ್ದರೆ ಪ್ರಜಾಪ್ರಭುತ್ವದ ಬುನಾದಿಯೇ ಸಡಿಲವಾದಂತೆ. ಇತ್ತೀಚಿನ ದಿನಗಳಲ್ಲಿ ಕೆಲವು ನ್ಯಾಯಾಧೀಶರಗಳು ತಮ್ಮ ತೀರ್ಮಾನಗಳಲ್ಲಿ ಸಂವಿಧಾನಕ್ಕಿಂತಲೂ ಹೆಚ್ಚಾಗಿ ಧಾರ್ಮಿಕ ಪಠ್ಯಗಳನ್ನು, ನಂಬಿಕೆಗಳನ್ನು, ಪುರಾಣಗಳನ್ನು ಉಲ್ಲೇಖಿಸುತ್ತಿರುವುದು ಮತ್ತು ಜಾತಿ-ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸುತ್ತಿರುವುದು ಆತಂಕಕಾರಿ ವಿಚಾರ. ವಿವಾದಾತ್ಜಕ ಪ್ರಕರಣಗಳಲ್ಲಿ ತೀರ್ಪು ನೀಡಲು ದೈವಿಕ ಶಕ್ತಿಗಳ ಮೊರೆ ಹೋಗುವುದು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು ಎಲ್ಲ ನಾಗರಿಕರ ಕರ್ತವ್ಯ ಎಂದು ಹೇಳುವ ಸಂವಿಧಾನಕ್ಕೆ ಎಸಗುವ ಅಪಚಾರವಲ್ಲವೆ?

ಸ್ವಹಿತಾಸಕ್ತಿಯ ಸಾಧನೆಗಾಗಿ, ಮತಗಳಿಕೆಗಾಗಿ, ಅಧಿಕಾರಕ್ಕಾಗಿ ಸಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳುವ ರಾಜಕೀಯ ಪಕ್ಷಗಳು ಸಂವಿಧಾನವನ್ನು ರಕ್ಷಿಸುತ್ತವೆಂಬ ನಂಬಿಕೆ ಸಾಮಾನ್ಯ ಜನರಲ್ಲಿ ಉಳಿದಿಲ್ಲ. ಪ್ರಜ್ಞಾವಂತ ಯುವ ನಾಯಕತ್ವದ ಕ್ರಿಯಾಶೀಲ ನಾಗರಿಕ ಸಮಾಜ ಮಾತ್ರ ಸಂವಿಧಾನವನ್ನು ರಕ್ಷಣೆ ಮಾಡಬಲ್ಲದು.

Read More
Next Story