Binoo K John

ಕಾಕ್ರೋಚ್ ಪಾರ್ಟಿಯ ಸಂದಿಗ್ಧ: ರಾಜಕೀಯವಾಗಿ ಚಿವುಟಿ ಹಾಕುವಷ್ಟು ಕ್ಷುಲ್ಲಕವಲ್ಲ


ಕಾಕ್ರೋಚ್ ಪಾರ್ಟಿಯ ಸಂದಿಗ್ಧ: ರಾಜಕೀಯವಾಗಿ ಚಿವುಟಿ ಹಾಕುವಷ್ಟು ಕ್ಷುಲ್ಲಕವಲ್ಲ
x
ಅತ್ಯಂತ ಅಲ್ಪಾವಧಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಒಂದು ರಾಜಕೀಯ ಪಕ್ಷಕ್ಕಾಗುವಷ್ಟು ಕಸುವನ್ನು ಪಡೆದುಕೊಂಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಎರಡು ಕೋಟಿಗೂ ಅಧಿಕ ಬೆಂಬಲಿಗರನ್ನು ಪಡೆದಿರುವುದು ಗಮನಾರ್ಹ. ಚಿತ್ರದಲ್ಲಿ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ.
Click the Play button to hear this message in audio format

ವಾಂಗ್ಚುಕ್ ಉಪವಾಸ ಸತ್ಯಾಗ್ರಹದಲ್ಲಿ ನಿರತರಾಗಿದ್ದಾರೆ, ವಿರೋಧ ಪಕ್ಷಗಳು ದೂರದಿಂದಲೇ ದಿಟ್ಟಿಸುತ್ತಿವೆ. ಇಂತಹ ಸ್ಥಿತಿಯಲ್ಲಿ ದಿಪ್ಕೆ ಅವರ ಸಂಘಟನೆಯ ಹೋರಾಟವೇನಕ್ಕೆ ಎಂದು ನಿರ್ಧರಿಸಬೇಕಾಗಿದೆ.

ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶತಾಯಗತಾಯ ರಾಜೀನಾಮೆ ನೀಡಲೇಬೇಕು ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ದೆಹಲಿಯ ಜಂತರ್ ಮಂತರ್ನಲ್ಲಿ ಪಟ್ಟುಹಿಡಿದು ಕುಳಿತಿದೆ. ಪೊಲೀಸರು ಯಾವುದೇ ಕ್ಷಣದಲ್ಲಿ ದಾಳಿ ಮಾಡಿ ಎಲ್ಲರನ್ನೂ ಎಬ್ಬಿಸಬಹುದು ಎಂಬ ಆತಂಕ ಮನೆಮಾಡಿದೆ. ಪ್ರತಿಭಟನೆಕಾರರು ಯಾವುದೇ ಕಾರಣಕ್ಕೂ ಆತಂಕಪಡಬಾರದು, ದೃತಿಗೆಡಬಾರದು ಎಂದು ಈ ಶಾಂತಿಯುತ ಪ್ರತಿಭಟನೆಯ ಮುಂದಾಳತ್ವ ವಹಿಸಿರುವ ಅಂಬೇಡ್ಕರ್ವಾದಿ ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಪ್ರತಿ ಬಾರಿ ಮನವಿ ಮಾಡಿಕೊಳ್ಳುತ್ತಲೇ ಇದ್ದಾರೆ.

ಅಂದು ದಿಪ್ಕೆ ಅವರು ಪ್ರತಿಯೊಬ್ಬ ಸ್ವಯಂಸೇವಕರನ್ನೂ ವೇದಿಕೆಗೆ ಕರೆದು ತಮ್ಮನ್ನು ಪರಿಚಯ ಮಾಡಿಕೊಳ್ಳುವಂತೆ ಕೇಳಿಕೊಂಡರು. ಆಗ ಒಬ್ಬರು ವೇದಿಕೆಗೆ ಬಂದು ತಮ್ಮ ಪೂರ್ಣ ಹೆಸರು ಮತ್ತು ವಿಳಾಸದೊಂದಿಗೇ ಪರಿಚಯ ಮಾಡಿಕೊಳ್ಳುತ್ತಾ, “ಪೊಲೀಸರು ನನ್ನ ಮನೆಗೂ ಬರಬಹುದು. ಕೋಯಿ ದಿಕ್ಕತ್ ನಹೀ” ಎಂದರು.

ಇಂತಹ ಮಾತುಗಳು ಕೇವಲ ಸಾಂತ್ವನವಲ್ಲ, ಬದಲಿಗೆ ಅಲ್ಲಿ ನೆರೆದಿರುವ ಉತ್ತರ ಭಾರತದ ನಾನಾ ಭಾಗಗಳಿಂದ ಬಂದ ಸುಮಾರು ಐನೂರಕ್ಕೂ ಅಧಿಕ ಯುವಕರ ಆಕ್ರೋಶವನ್ನು ಬಿಂಬಿಸುವಂತಿವೆ. ಅದು ಒಂದು ರೀತಿಯಲ್ಲಿ ವ್ಯಂಗ್ಯವೂ ಹೌದು, ಸವಾಲೂ ಹೌದು.

ಅವಕಾಶ ಕೊಟ್ಟಿದ್ದೇ ಅಚ್ಚರಿ

ಸಧ್ಯಕ್ಕಂತೂ ಸಿಜೆಪಿಯನ್ನು ಆಡಳಿತಾರೂಢ ಬಿಜೆಪಿ ಒಂದು ಸಣ್ಣ ಪೀಡೆ ಎಂಬಂತೆ ನೋಡುತ್ತಿರಬಹುದು. ಅನೇಕ ಸಂಘಟನೆಗಳಿಗೆ ಪ್ರತಿಭಟನೆ ಮಾಡಲಿಕ್ಕೇ ಅವಕಾಶ ನೀಡದ ಬಿಜೆಪಿ ಸಿಜೆಪಿಗೆ ಅನುಮತಿ ನೀಡಿರುವುದೇ ಅಚ್ಚರಿಯ ಸಂಗತಿ. ಇದೇನು ಸ್ವಯಂಪ್ರೇರಿತವಾಗಿ ಹುಟ್ಟಿಕೊಂಡ ಆಕ್ರೋಶವಾಗಿದ್ದು ಕ್ರಮೇಣ ತಣ್ಣಗಾಗಿ ಹೋಗುತ್ತದೆ ಎಂಬುದು ಆಡಳಿತ ಪಕ್ಷದ ಯೋಚನೆಯಾಗಿರಬಹುದು. ಜೊತೆಗೆ ಸಚಿವ ಪ್ರಧಾನ್ ಹಾಗೂಹೀಗೂ ಕೆಲಸ ಮುಂದುವರಿಸಲು ತೊಂದರೆಯಾಗದು ಎಂಬ ಇರಾದೆ ಕೂಡ ಇರಬಹುದು. ಈ ಪ್ರತಿಭಟನೆಗಳಿಗೆ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಅದರ ಮೊಂಡುತನಕ್ಕೂ ಒಂದು ಉದಾಹರಣೆ.

ಪುಣೆ ಮತ್ತು ಸುತ್ತಮುತ್ತಲಿನ ಕೆಲವು ಪ್ರೊಫೆಸರ್ಗಳ ಮೂಲಕ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಭುಗಿಲೆದ್ದ ಆಕ್ರೋಶದ ಫಲವಾಗಿ ರೂಪುಗೊಂಡಿದ್ದೇ ಸಿಜೆಪಿ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನಿರುದ್ಯೋಗಿ ಯುವಕರನ್ನು ಉಲ್ಲೇಖಿಸಿ ಮೌಖಿಕ ಅವಲೋಕನದಲ್ಲಿ ಜಿರಳೆ (ಕಾಕ್ರೋಚ್) ಎಂದು ಮೂದಲಿಸಿದ್ದು, ಸಿಜೆಪಿ ಅದನ್ನೇ ತನ್ನ ಸಂಕೇತವಾಗಿ ಬಳಸಿಕೊಂಡಿರುವುದು ವಿಶೇಷ.

ಅತ್ಯಲ್ಪ ಕಾಲದಲ್ಲಿಯೇ ಸಿಜೆಪಿ ಬಹಳ ದೊಡ್ಡ ಮಟ್ಟದಲ್ಲಿ ಒಂದು ರಾಜಕೀಯ ಪಕ್ಷವಾಗಿ ಬೆಳೆದು ನಿಂತಿದೆ. ಸಾಮಾಜಿಕ ಮಾಧ್ಯಮದಲ್ಲಿ ಅದಲ್ಲಿ ಸಿಕ್ಕ ಬೆಂಬಲಿಗರ ಸಂಖ್ಯೆ 2.2 ಕೋಟಿಗೂ ಅಧಿಕ. ಜಂತರ್ ಮಂತರ್ ಪ್ರತಿಭಟನೆಯು ಸಿಜೆಪಿಗೆ ರಾಜಕೀಯ ಬಣ್ಣದೊಂದಿಗೆ ಒಂದು ಭೌತಿಕ ಸ್ವರೂಪವನ್ನು ನೀಡಿದೆ. ಸ್ಥಳದಲ್ಲಿ ಜಮಾಯಿಸಿರುವ ಗುಂಪುಗಳನ್ನು ನೋಡಿದರೆ ಇದು ಸಧ್ಯಕ್ಕೆ ಎಡಪಂಥೀಯ ಅಂಬೇಡ್ಕರ್ವಾಗಿ ಸಂಘಟನೆಯಾಗಿ ಹೊರಹೊಮ್ಮಿದೆ ಎಂಬುದು ಸ್ಪಷ್ಟವಾಗುತ್ತದೆ. ಲಡಾಖ್ ಮೂಲದ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರೂ ಸಿಜೆಪಿ ಜೊತೆ ಕೈಜೋಡಿಸಿರುವುದು ಪ್ರಧಾನ್ ಅವರ ರಾಜೀನಾಮೆಗೆ ಪಟ್ಟುಬಿಡದೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಆಡಳಿತ ಪಕ್ಷದ ನಿಗೂಢ ಮೌನ

ಈ ವಿಚಾರದಲ್ಲಿ ವಿರೋಧ ಪಕ್ಷಗಳು ಸಾಕಷ್ಟು ಜಾಗರೂಕತೆಯಿಂದಲೇ ವರ್ತಿಸಿದವು. ಇಂತಹ ವಿಚಾರದಲ್ಲಿ ಹೇಗೆ ಮುಂದಿನ ಹೆಜ್ಜೆ ಇಡಬೇಕು ಎಂಬ ಬಗ್ಗೆ ಅವು ಗೊಂದಲಕ್ಕೆ ಬಿದ್ದಿದ್ದವು. ಬಿಜೆಪಿ ಈ ವಿಚಾರದಲ್ಲಿ ತೀರಾ ಉದಾಸೀನ ಧೋರಣೆ ತಳೆಯಿತು. ಅದಕ್ಕೆ ಮುಜುಗರ ತರುವ ರೀತಿಯಲ್ಲಿ ಕೆಲವು ವಿರೋಧ ಪಕ್ಷಗಳ ನಾಯಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು. ಆದರೆ ಕಳೆದ ಕೆಲವು ವರ್ಷಗಳಿಂದ ತಾನು ಯಾವುದೇ ಮುಜುಗರ, ರಾಜಕೀಯ ನೈತಿಕತೆ, ಸಂಸದೀಯ ಸಂಪ್ರದಾಯ ಹಾಗೂ ಕಾನೂನಿನ ಗೌರವವನ್ನು ಮೀರಿದವನು ಎಂದು ವರ್ತಿಸುತ್ತಿರುವ ಆಡಳಿತ ಪಕ್ಷ ಒಂದು ರೀತಿಯ ನಿಗೂಢ ಮೌನವನ್ನು ಕಾಯ್ದುಕೊಂಡಿದೆ.

ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಸಂಪುಟ ಪುನಾರಚನೆಯ ಭಾಗವಾಗಿ ಪ್ರಧಾನ್ ಅವರನ್ನು ಕೈಬಿಡಲಾಗುತ್ತದೆ ಎಂಬ ವದಂತಿಗಳೂ ದಟ್ಟವಾಗಿವೆ.

ಪ್ರಧಾನ್ ಅವರಿಗೆ ಏನಾಗಲಿದೆ ಎಂಬುದನ್ನು ಪಕ್ಕಕ್ಕಿಟ್ಟರೆ, ಮುಂದಿನ ದಿನಗಳಲ್ಲಿ ಸಿಜೆಪಿ ಯಾವ ರೂಪವನ್ನು ಪಡೆಯಲಿದೆ ಎಂಬುದು ಈಗಿರುವ ಮುಖ್ಯ ಪ್ರಶ್ನೆಯಾಗಿದೆ. ದಿಪ್ಕೆ ಅವರು ರಾಜಕೀಯ ಎಂಬ ಆಳವಾದ ಸಾಗರಕ್ಕೆ ಧುಮುಕಿದ್ದಾರೆ, ಹಾಗಾಗಿ ಬದುಕುಳಿಯಲು ಕೇವಲ ಕೈಕಾಲು ಬಡಿಯುತ್ತಾ ಕುಳಿತರೆ ಸಾಲದು. ಪಕ್ಷ ಅಥವಾ ಗುಂಪನ್ನು ತಮ್ಮೊಂದಿಗೆ ಮುನ್ನಡೆಸಲು ಅವರು ಅತ್ಯಂತ ವೇಗವಾಗಿ ಮತ್ತು ದೃಢವಾಗಿ ಈಜಬೇಕಾಗಿದೆ. ನೀಟ್ ಪರೀಕ್ಷೆಯ ಕಳಪೆ ನಿರ್ವಹಣೆಯಿಂದ ವಂಚನೆಗೊಳಗಾದ ಭಾವನೆ ಹೊಂದಿದ್ದ ಲಕ್ಷಾಂತರ ವಿದ್ಯಾರ್ಥಿಗಳು (ಮರುಪರೀಕ್ಷೆಯನ್ನು ಯಾವುದೇ ಅಡ್ಡಿ ಆತಂಕ ಅಥವಾ ಸೋರಿಕೆಯ ವರದಿಗಳಿಲ್ಲದೆ ನಡೆಸಲಾಗಿತ್ತು) ಈಗ ಎಲ್ಲೂ ಕಾಣಿಸುತ್ತಿಲ್ಲ ಮತ್ತು ಅವರಲ್ಲಿದ್ದ ಕೆಲವು ಆಕ್ರೋಶಗಳು ಈಗಾಗಲೇ ಕರಗಿಹೋದಂತೆ ತೋರುತ್ತಿದೆ. ಆದರೆ, ಇಂತಹ ಮತ್ತೊಂದು ಘಟನೆ ನಡೆದರೆ ಸಾಕು, ಈ ಆಕ್ರೋಶ ಮತ್ತೆ ಸ್ಫೋಟಗೊಳ್ಳುತ್ತದೆ. ಸಿಜೆಪಿ ಈಗ ಒಂದು ರೀತಿಯ ರಾಜಕೀಯ ಮದ್ದಿನ ಗುಡಾಣದತಾಗಿದೆ. ಅದು ಯಾವತ್ತು ಬೇಕಿದ್ದರೂ ಸ್ಫೋಟಗೊಳ್ಳಬಹುದು.

ಜಂತರ್ ಮಂತರ್ನ ಹೊರಗೆ ಸಿಜೆಪಿ ತನ್ನನ್ನು ತಾನು ಹೇಗೆ ಗುರುತಿಸಿಕೊಳ್ಳುತ್ತದೆ ಅಥವಾ ಹೇಗೆ ಬದುಕುಳಿಯುತ್ತದೆ? ಎಂಬ ಪ್ರಶ್ನೆ ಮುಖ್ಯವಾಗಿದೆ. ಅಮೆರಿಕದಿಂದ ದೆಹಲಿಗೆ ಆಗಮಿಸಿದ ದಿಪ್ಕೆ ಅವರು, ಯಾವುದೇ ಗದ್ದಲವಿಲ್ಲದೆ ವಿಮಾನ ನಿಲ್ದಾಣದಲ್ಲಿ ಬಿ.ಆರ್. ಅಂಬೇಡ್ಕರ್ ಅವರ ಜೀವನಚರಿತ್ರೆಯನ್ನು ಕೈಯಲ್ಲಿ ಹಿಡಿಯುವ ಮೂಲಕ, ತಾವು ಎಕ್ಸ್ ನಲ್ಲಿ ಪ್ರಾರಂಭಿಸಿದ ಸಂಘಟನೆಯನ್ನು ಎಡಪಂಥೀಯ ಅಂಬೇಡ್ಕರ್ವಾದಿ ಗುಂಪಾಗಿ ಬಿಂಬಿಸಿದ್ದರು. ಆದರೆ ನೀಟ್ ವಿದ್ಯಾರ್ಥಿಗಳ ಪ್ರಮುಖ ಸಮಸ್ಯೆಯೆಂದರೆ, ಅವರಲ್ಲಿ ಹೆಚ್ಚಿನವರು ವ್ಯವಸ್ಥೆಯ ಪರವಾಗಿರುವವರು, ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ವಾಸಿಸುವ ಮತ್ತು ರಾಜಸ್ಥಾನದ ಕೋಚಿಂಗ್ ಸೆಂಟರ್ಗಳ ಕಿರಿದಾದ ಕೋಣೆಗಳಲ್ಲಿ ಕಂಠಪಾಠ ಮಾಡುವುದರಲ್ಲಿ ಪರಿಣತಿ ಹೊಂದಿರುವ ಬಿಜೆಪಿ ಮತದಾರರು. ಅವರಲ್ಲಿ ಹೆಚ್ಚಿನವರು ಈಗ ಕಣ್ಮರೆಯಾದಂತೆ ತೋರುತ್ತಿದೆ.

ಏಕೆಂದರೆ ಅವರ ಪಾಲಿಗೆ ದೊಡ್ಡ ರಾಜಕೀಯ ಪ್ರಶ್ನೆ ಈಗಾಗಲೇ ಬಗೆಹರಿದಿದೆ. ಪ್ರಧಾನ್-ವಿರೋಧಿ, ಬಿಜೆಪಿ-ವಿರೋಧಿ ಮತ್ತು ಮುಸ್ಲಿಂ-ವಿರೋಧಿ, ಅಂಬೇಡ್ಕರ್-ಪರ ಎಂಬ ವಿಚಾರಗಳ ನಡುವೆ ಆಯ್ಕೆ ಮಾಡಿಕೊಳ್ಳುವುದು ಈ ಬಹುತೇಕ ಯುವಕರಿಗೆ ತುಂಬಾ ಸುಲಭದ ವಿಷಯವಾಗಿರಬಹುದು.

ದಿಪ್ಕೆಗಿದೆ ರಾಜಕೀಯ ಭವಿಷ್ಯ

ವಾಂಗ್ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿದರೂ ಸಹ, ಸಿಜೆಪಿ ಅಲ್ಲಿ ತನ್ನ ಅಸ್ತಿತ್ವವನ್ನು ಮುಂದುವರಿಸಲಿದೆ. ಅಲ್ಲಿ ಉಪಸ್ಥಿತರಿರುವ ಎಸ್ಎಫ್ಐ, ಎಐಡಿಎಸ್ಯು ಮತ್ತು ಕೆಲವು ಅಂಬೇಡ್ಕರ್ವಾದಿ ಗುಂಪುಗಳು ದೀರ್ಘಕಾಲದ ಪ್ರತಿಭಟನಾಕಾರರಾಗಿದ್ದು, ಬೀದಿ ಹೋರಾಟವೇ ಅವರ ರಾಜಕೀಯ ಮಿತ್ರನಾಗಿದೆ. ಇದು ಸಿಜೆಪಿಯನ್ನು ಕಡ್ಡಾಯವಾಗಿ ಎಡಪಂಥೀಯರ ಪಾಳಯದಲ್ಲಿ ಗುರುತಿಸಿಕೊಳ್ಳುವಂತೆ ಮಾಡುತ್ತದೆಯೇ? ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿಕೂಟವು ಕೆಲವು ಯುವಕರನ್ನು ಅಭ್ಯರ್ಥಿಗಳನ್ನಾಗಿ ಬೆಂಬಲಿಸುವ ಮೂಲಕ ಮತ್ತು ಅವರನ್ನು ಮತ್ತೆ ಮಧ್ಯಮ ಮಾರ್ಗದ ರಾಜಕೀಯ ಗುಂಪಿಗೆ ಎಳೆದುಕೊಂಡು ಬಂದು ಉತ್ತೇಜನ ನೀಡಲು ನಿರ್ಧರಿಸದ ಹೊರತು, ಸದ್ಯದ ಪರಿಸ್ಥಿತಿ ಹಾಗೆಯೇ ಕಾಣಿಸುತ್ತಿದೆ. ದಿಪ್ಕೆ ಅವರಿಗೆ ನಿಸ್ಸಂದೇಹವಾಗಿ ರಾಜಕೀಯ ಭವಿಷ್ಯವಿದೆ.

ಸಿಜೆಪಿ ಗುಂಪಿನಲ್ಲಿ ದಿಢೀರನೆ ಇಷ್ಟೊಂದು ಉತ್ಸಾಹ ಮತ್ತು ಶಕ್ತಿ ತುಂಬಿಕೊಳ್ಳಲು ಕಾರಣವೆಂದರೆ, ತಮಿಳುನಾಡಿನಲ್ಲಿ ನಟ ಸಿ. ಜೋಸೆಫ್ ವಿಜಯ್ ಅವರ 'ಟಿವಿಕೆ' (TVK - ತಮಿಳಗ ವೆಟ್ರಿ ಕಳಗಂ) ಪಕ್ಷ ಸಾಧಿಸಿದ ಅಭೂತಪೂರ್ವವಾದ ಯಶಸ್ಸಿನ ಕಥೆ. ಸಾಮಾಜಿಕ ಮಾಧ್ಯಮಗಳು ಮತ್ತು ಯುವ ಪೀಳಿಗೆಯೇ (GenX) ವಿಜಯ್ ಅವರನ್ನು ಅಧಿಕಾರಕ್ಕೆ ತಂದಿತು ಎಂಬ ಅಭಿಪ್ರಾಯ ಬಲವಾಗಿದೆ. ಟಿವಿಕೆಗೆ ಇದು ಸಾಧ್ಯ ಎಂದಾದರೆ ಸಿಜೆಪಿಗೆ ಏಕೆ ಸಾಧ್ಯವಿಲ್ಲ, ಅದರ ಹೆಸರಿನಲ್ಲಿರುವ (ಕಾಕ್ರೋಚ್) ವ್ಯಂಗ್ಯವನ್ನು ಬದಿಗಿಟ್ಟರೂ? ಇದು ದಿಪ್ಕೆ ಮತ್ತು ಇತರರಿಗೆ ರಾಜಕೀಯ ಸಂದೇಶ ರವಾನಿಸುವುದು ಇನ್ನು ಮುಂದೆ ಅಷ್ಟೇನೂ ಕಷ್ಟದ ಕೆಲಸವಲ್ಲ ಮತ್ತು ಸಾಮಾಜಿಕ ಮಾಧ್ಯಮಗಳೇ ನಮ್ಮನ್ನು ದಡ ಸೇರಿಸುತ್ತವೆ ಎಂಬ ಭರವಸೆಯೂ ಅವರಿಗೆ ಇದೆ. ದ್ರಾವಿಡ ರಾಜಕೀಯವನ್ನು ತೊರೆದು, ಆಕ್ರೋಶಗೊಂಡಂತೆ ಕಾಣುತ್ತಿದ್ದ ಅಪರಿಚಿತ ವ್ಯಕ್ತಿಗಳು ನಡೆಸುವ ಹೊಸ ಆವೃತ್ತಿಯ ರಾಜಕೀಯವನ್ನು ಒಪ್ಪಿಕೊಳ್ಳುವಂತೆ ತಮಿಳುನಾಡಿನ ಜನರು ತಮ್ಮ ಕಡೆ ಒಲಿಯುವಂತೆ ಮಾಡಲು ವಿಜಯ್ ಮಾಡಿದ್ದು ಕೇವಲ 18 ಭಾಷಣಗಳನ್ನು ಮಾತ್ರ.

ಸಿಜೆಪಿಯು ಕಳೆದ ಕೆಲವು ವರ್ಷಗಳಲ್ಲಿ ಬಿಜೆಪಿಗೆ ಪ್ರತಿರೋಧ ಒಡ್ಡಲು ಹುಟ್ಟಿಕೊಂಡ ಇತರ ಪಕ್ಷಗಳೊಂದಿಗೆ ನಿಕಟ ಹೋಲಿಕೆ ಹೊಂದಿದೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಚಂದ್ರಶೇಖರ್ ಆಜಾದ್ ಅವರು ಸ್ಥಾಪಿಸಿದ 'ಭೀಮ್ ಆರ್ಮಿ'. ಇದು ಮಾಯಾವತಿಯವರ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಜಡತ್ವಕ್ಕೆ ಪ್ರತಿಯಾಗಿ ರೂಪಿಸಲಾದ ಅಂಬೇಡ್ಕರ್ವಾದದ ಹೆಚ್ಚು ಆಕ್ರಮಣಕಾರಿ ರೂಪ. ಕಾಯಂ ನಿಷ್ಕ್ರಿಯ ಸ್ಥಿತಿಯಲ್ಲಿರುವ ಮಾಯಾವತಿಯವರ ಕಚೇರಿ ಆವೃತ್ತಿಯ ರಾಜಕೀಯಕ್ಕಿಂತ ಭಿನ್ನವಾಗಿ, ದಲಿತರ ಹಕ್ಕುಗಳ ಪ್ರತಿಪಾದನೆಯ ಹೆಚ್ಚು ಉಗ್ರವಾದ ಆವೃತ್ತಿಯನ್ನು ಹೊಂದುವುದು ಇದರ ಸ್ಪಷ್ಟ ಉದ್ದೇಶವಾಗಿತ್ತು. ಭೀಮ್ ಆರ್ಮಿ ಆರಂಭದಲ್ಲಿ ಭರವಸೆಯನ್ನು ಮೂಡಿಸಿತ್ತು ಮತ್ತು ಅದರ ಸಂಸ್ಥಾಪಕರನ್ನು ಜೈಲಿಗೆ ಹಾಕಲಾಯಿತು, ಇದು ಬಿಜೆಪಿ ರೂಪಿಸುತ್ತಿರುವ ಹೊಸ ಭಾರತದಲ್ಲಿ ಒಂದು ಸಾಮಾನ್ಯ ಪ್ರಕ್ರಿಯೆಯೇ ಆಗಿಹೋಗಿದೆ. ಆಜಾದ್ ಅವರು ಈಗ ಉತ್ತರ ಪ್ರದೇಶದ ಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದಾರೆ. ಇಂತಹ ಮೂರನೇ ಪಕ್ಷವೆಂದರೆ ಹೈದರಾಬಾದ್ನ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ, ಇದು ಕೇರಳದ ವ್ಯವಸ್ಥೆಯ ಪರವಾಗಿರುವ ಮುಸ್ಲಿಂ ಲೀಗ್ಗೆ ಹೋಲಿಸಿದರೆ ಇಸ್ಲಾಮಿಕ್ ಹಕ್ಕುಗಳ ಪ್ರತಿಪಾದನೆಯ ಸ್ವಲ್ಪ ಆಕ್ರಮಣಕಾರಿ ಸ್ವರೂಪವನ್ನು ಹೊಂದಿದೆ.

'ಇಂಡಿಯಾ' ಮೈತ್ರಿಕೂಟದ ಬೆಂಬಲ

ಜನರಲ್ಲಿ ಆಕ್ರೋಶ ಮತ್ತು ಹತಾಶೆ ಇದೆ, ಮತ್ತು ನೀವು ಆ ಆಕ್ರೋಶದ ಮುಖವಾಗಿ ನಿಂತರೆ ಕೆಲವು ಮತಗಳು ನಿಮ್ಮ ಕಡೆಗೆ ಬರುತ್ತವೆ. ಆದರೆ ರಸ್ತೆಗೆ ಇಳಿದು ಹೋರಾಡುತ್ತಿರುವ ದಿಪ್ಕೆಗೆ ಅವರ 22 ಮಿಲಿಯನ್ ಸಾಮಾಜಿಕ ಮಾಧ್ಯಮ ಅನುಯಾಯಿಗಳ ಬೇಷರತ್ ಬೆಂಬಲ ಸಿಗುವುದಿಲ್ಲ, ಏಕೆಂದರೆ ಈ ನೀಟ್ ಪರೀಕ್ಷೆ ಬರೆದವರಲ್ಲಿ ಹೆಚ್ಚಿನವರು ಮೇಲ್ಜಾತಿ ಅಥವಾ ಮಧ್ಯಮ ಜಾತಿ ಮತ್ತು ವರ್ಗಕ್ಕೆ ಸೇರಿದವರಾಗಿದ್ದಾರೆ, ಹಾಗಾಗಿ ಅವರಲ್ಲಿ ಬಿಜೆಪಿಯ ವಿರುದ್ಧ ಯಾವುದೇ ದೊಡ್ಡ ಆಕ್ರೋಶವಿಲ್ಲ. ಅನೇಕ ಪರೀಕ್ಷೆಗಳ ನಂತರವೂ ಉದ್ಯೋಗವಿಲ್ಲದ ನೀಟ್-ಜೀಟ್ ಹಾಗೂ ಕೋಟಾದ ನಿರುದ್ಯೋಗಿ ಯುವಕರ ಸಣ್ಣ ಗುಂಪು ಸಿಜೆಪಿ ಜೊತೆಗೆ ಉಳಿಯಬಹುದು, ಆದರೆ ಅದಕ್ಕೆ ಇಟ್ಟಿರುವ ಹೆಸರಿನಂತೆ (ಜಿರಳೆ) ಅದು ತನ್ನ ಮೊಂಡುತನ ಮತ್ತು ದೀರ್ಘಕಾಲದ ಅಸ್ತಿತ್ವವನ್ನು ಪ್ರದರ್ಶಿಸಲೇಬೇಕಾಗುತ್ತದೆ.

ಮೇಲೆ ಹೆಸರಿಸಲಾದ ಪಕ್ಷಗಳಿಗೆ ಆಪ್ (ಆಮ್ ಆದ್ಮಿ ಪಕ್ಷ) ನಂತೆ ಯಾವುದೇ ದೊಡ್ಡ ಮಹತ್ವಾಕಾಂಕ್ಷೆ ಇಲ್ಲದೇ ಇದ್ದರೂ, ಇಲ್ಲಿನ ಹೋರಾಟವೇನಿದ್ದರೂ ಮಧ್ಯಮ ಮಾರ್ಗದ ರಾಜಕೀಯ ಜಾಗಕ್ಕಾಗಿ ನಡೆಯುತ್ತಿದೆ. ಕಾಂಗ್ರೆಸ್ ಪಾಲಿಗೆ, ಈ ಸಣ್ಣ ಸಂಸ್ಥೆಗಳು ಒಂದೇ ರಾಜಕೀಯ ಸೈದ್ಧಾಂತಿಕ ತಟದಲ್ಲಿದ್ದರೂ ಸಹ ಸಮಸ್ಯೆಗಳನ್ನು ಸೃಷ್ಟಿಸುತ್ತವೆ.

ಇದೇ ಕಾರಣಕ್ಕಾಗಿ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಪಕ್ಷವಾದ ಕಾಂಗ್ರೆಸ್, ಸಿಜೆಪಿಗೆ ಬಹಿರಂಗವಾಗಿ ಬೆಂಬಲ ನೀಡದೆ, ಕೇವಲ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪರೋಕ್ಷವಾಗಿ ಬೆಂಬಲ ಸೂಚಿಸಿದೆ. ಇಂಡಿಯಾ ಮೈತ್ರಿಕೂಟವು ಸಿಜೆಪಿಯ ಬೇಡಿಕೆಗಳ ಪರವಾಗಿ ದೆಹಲಿಯಲ್ಲಿ ಸುಲಭವಾಗಿ ಒಂದು ಬೃಹತ್ ಮೆರವಣಿಗೆಯನ್ನು ಆಯೋಜಿಸಬಹುದಿತ್ತು, ಏಕೆಂದರೆ ಅದು ಅವರದ್ದೂ ಬೇಡಿಕೆಯಾಗಿದೆ. ಆದರೆ, ಅನೇಕ ಸಂಸದರು ಪಕ್ಷಾಂತರ ಮಾಡುತ್ತಿರುವುದರಿಂದ ಸಿದ್ಧಾಂತ ಎಂಬುದು ಸುಲಭವಾಗಿ ಕರಗಿಹೋಗುತ್ತದೆ ಎಂಬುದನ್ನು ಮೈತ್ರಿಕೂಟದ ಬಹುತೇಕ ಘಟಕ ಪಕ್ಷಗಳು ಮನಗಂಡಿವೆ. ಮತ್ತೊಂದೆಡೆ, ಹಿಂದೂ ಧರ್ಮವೇ ನಿಮ್ಮ ರಾಜಕೀಯ ಅಜೆಂಡಾ ಎಂದಾದರೆ - ಆ ವೇದಿಕೆ, ಲೋಗೋ, ಪಕ್ಷ ಮತ್ತು ಬಣ್ಣ ಎಲ್ಲವೂ ನಮ್ಮದೇ, ನೀವು ಇಲ್ಲಿಂದ ಹೊರನಡೆಯಿರಿ ಎಂಬುದನ್ನು ಸಾಬೀತುಪಡಿಸಲು ಬಿಜೆಪಿ ಎಡ, ಮಧ್ಯಮ ಅಥವಾ ಬಲಪಂಥೀಯ ಸಣ್ಣ ಪಕ್ಷಗಳನ್ನು ವ್ಯವಸ್ಥಿತವಾಗಿ ಮುಗಿಸಿದೆ ಎಂಬುದು ಇಲ್ಲಿ ಗಮನಾರ್ಹ.

ವಿರೋಧ ಪಕ್ಷಗಳಿಗೆ ಅತ್ಯಂತ ಕಠಿಣವಾಗಿರುವ ಈ ದಿನಗಳಲ್ಲಿ ದಿಪ್ಕೆ ಅಪಾರ ಧೈರ್ಯವನ್ನು ಪ್ರದರ್ಶಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ, ತೀವ್ರ ಆಕ್ರೋಶಗೊಂಡ ಇನ್ನು ಹಲವು ಪಕ್ಷಗಳೂ ಸಹ ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ಕುಳಿತಿದ್ದವು. ಆದರೆ ಅವೆಲ್ಲವೂ ಇಂದು ಅಸ್ತಿತ್ವದಲ್ಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಪ್ರತಿರೋಧ ಮತ್ತು ಆಕ್ರೋಶದ ಕೊರತೆಯಿದೆ. ಇಂತಹ ಸನ್ನಿವೇಶದಲ್ಲಿ ದಿಪ್ಕೆ ಒಂದು ಸಣ್ಣ ಭರವಸೆಯ ಬೆಳಕಾಗಿ ಕಂಗೊಳಿಸಿದರೆ ಅಚ್ಚರಿಯ ಮಾತಲ್ಲ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story