ಅಮೆರಿಕ ಮಾದರಿಯ ಅವಧಿ ಮಿತಿ ಭಾರತದ ಪ್ರಧಾನಿ, ಮುಖ್ಯಮಂತ್ರಿಗಳಿಗೂ ಜಾರಿಗೆ ತರಬಹುದೇ?
x
ಭಾರತದಲ್ಲಿ ಪ್ರಧಾನಿ ಹುದ್ದೆಯು ಅತ್ಯಂತ ಪ್ರಭಾವಿ ಸಾಂವಿಧಾನಿಕ ಅಧಿಕಾರ. ಆದರೆ ರಾಷ್ಟ್ರಪತಿಯ ಪಾತ್ರವೇನಿದ್ದರೂ ಸಂಸತ್ತು ಮತ್ತು ಕೇಂದ್ರ ಸಂಪುಟದ ನಿರ್ಧಾರಗಳನ್ನು ಮಾನ್ಯಮಾಡುವಂತಹ ಕಾರ್ಯಗಳಷ್ಟೇ. ಅವಧಿ ಮಿತಿಯು ಪ್ರಧಾನಿಗೂ ಅನ್ವಯವಾಗುವುದು ಉತ್ತಮ.

ಅಮೆರಿಕ ಮಾದರಿಯ ಅವಧಿ ಮಿತಿ ಭಾರತದ ಪ್ರಧಾನಿ, ಮುಖ್ಯಮಂತ್ರಿಗಳಿಗೂ ಜಾರಿಗೆ ತರಬಹುದೇ?

ಚುನಾಯಿತ ನಾಯಕರೊಬ್ಬರು ಸಂಸ್ಥೆಗಳನ್ನು ಮತ್ತು ಆ ಮೂಲಕ ಪ್ರಜಾಪ್ರಭುತ್ವವನ್ನೇ ದುರ್ಬಲಗೊಳಿಸುವ ಸಾಧ್ಯತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಒಂದೇ ಅವಧಿಯ ಮಿತಿಯನ್ನು ವಿಧಿಸಲಾಗಿದೆ


ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2028ರಲ್ಲಿ ಮೂರನೇ ಅವಧಿಗೆ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಾರೆಯೇ ಎಂಬ ಕುರಿತು ಸಾಕಷ್ಟು ಊಹಾಪೋಹಗಳಿವೆ. ಅಮೆರಿಕದ ಸಂವಿಧಾನವು ಇದನ್ನು ಸ್ಪಷ್ಟವಾಗಿ ನಿಷೇಧಿಸುತ್ತದೆ. ಕೆಲವು ದಿನಗಳ ಹಿಂದಷ್ಟೇ, ಅಮೆರಿಕದ ಅಧ್ಯಕ್ಷೀಯ ಅವಧಿಯ ಮಿತಿಯನ್ನು ಮೀರುವುದು ಕಷ್ಟ ಎಂದು ಟ್ರಂಪ್ ಒಪ್ಪಿಕೊಂಡಂತೆ ಕಂಡುಬಂದರೂ, ಆ ವಿಚಾರದಲ್ಲಿ ಮುಕ್ತವಾಗಿರುವ ಇಂಗಿತವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಅಮೆರಿಕನ್ನರಲ್ಲಿಯೇ ಬಹುದೊಡ್ಡ ಸಂಖ್ಯೆಯ ಜನರೂ ಸೇರಿದಂತೆ ಪ್ರಪಂಚದ ಬಹುಪಾಲು ಮಂದಿ ಟ್ರಂಪ್ ಆಡಳಿತ ಕೈಗೊಂಡ ಹಲವಾರು ನಿರ್ಧಾರಗಳಿಂದ ಕೆರಳಿ ಕೆಂಡವಾಗಿದ್ದಾರೆ – ಅನ್ಯ ರಾಷ್ಟ್ರಗಳ ವಿರುದ್ಧ ಪರಸ್ಪರ ಮತ್ತು ದಂಡನಾತ್ಮಕ ಸುಂಕಗಳನ್ನು ವಿಧಿಸಿರುವುದು, ಕಾನೂನುಬದ್ಧ ವಲಸಿಗರನ್ನೂ ನಿರ್ದಯವಾಗಿ ಗುರಿ ಮಾಡಿರುವುದು, ವಿರೋಧ ಪಕ್ಷದ ಆಡಳಿತದಲ್ಲಿರುವ ದೇಶಗಳಿಗೆ ಸೇನೆಯನ್ನು ಕಳುಹಿಸುವುದು ಮತ್ತು ಸಾವಿರಾರು ಫೆಡರಲ್ ಸರ್ಕಾರಿ ಸಿಬ್ಬಂದಿಯನ್ನು ವಜಾಗೊಳಿಸುವುದು ಸೇರಿದಂತೆ ಟ್ರಂಪಾಟಕ್ಕೆ ರೋಸಿ ಹೋದವರಿಗೆ ಲೆಕ್ಕವಿಲ್ಲ. ಅನೇಕರಿಗೆ, ಒಂದೇ ಒಂದು ಸಮಾಧಾನದ ಸಂಗತಿ ಎಂದರೆ ಟ್ರಂಪ್ ಅವರ ಅವಧಿ 2028ರಲ್ಲಿ ಕೊನೆಗೊಳ್ಳುತ್ತದೆ ಮತ್ತು ಸದ್ಯಕ್ಕೆ ಮರು-ಚುನಾವಣೆಗೆ ಯಾವುದೇ ಅವಕಾಶವಿಲ್ಲ ಎಂಬುದು. ಆದರೆ ಈ ಕುರಿತು ಅಂತಿಮ ತೀರ್ಪು ಇನ್ನೂ ಹೊರಬಿದ್ದಿಲ್ಲ.

ಸಂವಿಧಾನವನ್ನು ತಿದ್ದುಪಡಿ ಮಾಡಲು ತಮಗೆ ಯಾವುದೇ ಮಾರ್ಗ ಕಾಣುತ್ತಿಲ್ಲ ಎಂದು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಸ್ಪೀಕರ್ ಹೇಳಿದ ಮಾತಿಗೆ, ಟ್ರಂಪ್ ಅವರು "too bad" ಎಂದು ಹೇಳಿದ್ದಾಗಿ ಅಲ್ಲಿನ ಮಾಧ್ಯಮಗಳು ಕಳೆದ ವಾರ ವರದಿ ಮಾಡಿದ್ದವು. ಆದರೂ ಫ್ಲೋರಿಡಾದ ರಾಂಡಿ ಫೈನ್ ಅವರಂತಹ ರಿಪಬ್ಲಿಕನ್ ನಾಯಕರು, ಟ್ರಂಪ್ ಅವರಿಗೆ ಮೂರನೇ ಬಾರಿಗೆ ಸ್ಪರ್ಧಿಸಲು ಅನುವು ಮಾಡಿಕೊಡುವ ಸಲುವಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಸೂಚಿಸುವುದರ ಮೂಲಕ, ಆ ಸಾಧ್ಯತೆಯನ್ನು ಜೀವಂತವಾಗಿ ಇಡಲು ಪ್ರಯತ್ನಿಸಿದ್ದಾರೆ.

ಅವಧಿ ಮಿತಿ ಭಾರತಕ್ಕೂ ಪ್ರಸ್ತುತವೇ?

ಅಮೆರಿಕ ಅಧ್ಯಕ್ಷರ ಅವಧಿಗೆ ಸಂಬಂಧಿಸಿದ ಮಿತಿಯ ಕಲ್ಪನೆಯು ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಸಂಬಂಧಿಸಿದ್ದೇ ಆಗಿದೆ. ಈಗಿರುವಂತೆ, ಅಂತಹ ಮಿತಿಗಳು ಹೆಚ್ಚಾಗಿ ಅಧ್ಯಕ್ಷೀಯ ಅಥವಾ ಅರೆ-ಅಧ್ಯಕ್ಷೀಯ ಸರ್ಕಾರಿ ವ್ಯವಸ್ಥೆಗಳಿಗೆ ಸೀಮಿತವಾಗಿವೆ. ಬೆರಳೆಣಿಕೆಯಷ್ಟು ರಾಷ್ಟ್ರಗಳನ್ನು ಹೊರತುಪಡಿಸಿ, ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾದಾದ್ಯಂತ ಅಧ್ಯಕ್ಷೀಯ ಅವಧಿ ಮಿತಿಗಳನ್ನು ಚಾಲ್ತಿಯಲ್ಲಿ ಇಡಲಾಗಿದೆ.

ಈ ಸಂದರ್ಭದಲ್ಲಿ, ಇದು ಭಾರತಕ್ಕೆ ಮತ್ತು ಅದರ ಸಂಸದೀಯ ವ್ಯವಸ್ಥೆಗೆ ಪ್ರಸ್ತುತವೇ ಎಂಬುದನ್ನು ಪರಿಶೋಧಿಸುವುದು ಯೋಗ್ಯವಾಗಿದೆ.

ಆಸಕ್ತಿಯ ಸಂಗತಿ ಎಂದರೆ, ಹಿಂದೆ ಭಾರತದಲ್ಲಿ ಕೂಡ ಅಧ್ಯಕ್ಷೀಯ ಮಾದರಿಯ ಸರ್ಕಾರಕ್ಕೆ ಬದಲಾಯಿಸುವ ಬಗ್ಗೆ ಸಲಹೆಗಳು ಬಂದಿದ್ದವು, ಆದರೆ ಪ್ರಧಾನಿ ಮತ್ತು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಚುನಾಯಿತ ಅಧಿಕಾರಿಗಳ ಮೇಲೆ ಅವಧಿ ಮಿತಿಗಳನ್ನು ಪ್ರಸ್ತಾಪಿಸುವ ಅಗತ್ಯವನ್ನು ಕೆಲವರು ಮಾತ್ರ ಅನುಮೋದಿಸಿದಂತೆ ಕಾಣುತ್ತದೆ.

ಭಾರತದಲ್ಲಿ, ಪ್ರಧಾನಿ ಅವರು ಅತ್ಯಂತ ಶಕ್ತಿಶಾಲಿ ಸಾಂವಿಧಾನಿಕ ಅಧಿಕಾರವನ್ನು ಹೊಂದಿದ್ದಾರೆ, ಆದರೆ ರಾಷ್ಟ್ರಪತಿಯವರ ಪಾತ್ರವೇನಿದ್ದರೂ ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ, ಕೇಂದ್ರ ಸಚಿವ ಸಂಪುಟ ಮತ್ತು ಸಂಸತ್ತಿನ ನಿರ್ಧಾರಗಳನ್ನು ದೃಢೀಕರಿಸುವುದು ಮಾತ್ರ. ಆದ್ದರಿಂದ, ಅವಧಿ ಮಿತಿಯು ಪ್ರಧಾನಿಗಳಿಗೆ ಅನ್ವಯಿಸಬೇಕು. ಜನರು ಒಂದು ರಾಜಕೀಯ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೆ ತರುತ್ತಾರೆ ಮತ್ತು ಆ ಪಕ್ಷವು ತನ್ನ ನಾಯಕನನ್ನು ಆಯ್ಕೆ ಮಾಡುತ್ತದೆ, ಆ ನಾಯಕ ನಂತರ ಪ್ರಧಾನಿಯಾಗುತ್ತಾರೆ ಎನ್ನುವ ಅಂಶವು ಇಲ್ಲಿ ಮುಖ್ಯವಾಗುವುದಿಲ್ಲ.

ಯಾವುದೇ ರೀತಿಯ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ, ಅಧಿಕಾರವು ಮಿತಿಗೆ ಒಳಪಟ್ಟಿರಬೇಕು. ಈ ಮಿತಿಯು, ಚುನಾಯಿತ ನಾಯಕನು ಸಂಸ್ಥೆಗಳನ್ನು ಮತ್ತು ಆ ಮೂಲಕ ಪ್ರಜಾಪ್ರಭುತ್ವವನ್ನೇ ದುರ್ಬಲಗೊಳಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅದೇ ಮುಖ್ಯ ಉದ್ದೇಶ. ಅಧಿಕಾರದ ಪೀಠದಲ್ಲಿ ಸುದೀರ್ಘ ಅವಧಿಯ ವಾಸ್ತವ್ಯವು ಯಾವುದೇ ವ್ಯಕ್ತಿಯು ವ್ಯವಸ್ಥೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ದುರುಪಯೋಗಪಡಿಸಿಕೊಳ್ಳಲು ಫಲವತ್ತಾದ ನೆಲೆ ಕಲ್ಪಿಸಿದಂತೆ.

ಅವಧಿ ಮಿತಿಗೆ ಹೋಲುವ ವಿಧಾನವು ಭಾರತಕ್ಕೆ ಹೊಸದೇನಲ್ಲ. ಅಧಿಕಾರಿಶಾಹಿಯಲ್ಲಿ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ, ನಿರ್ದಿಷ್ಟ ಕಾಲಮಿತಿಯೊಳಗೆ ಅಧಿಕಾರಿಗಳನ್ನು ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ಅಥವಾ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆ (ರೊಟೇಶನ್) ಮಾಡುವುದು ಸಾಮಾನ್ಯವಾಗಿದೆ. ಸ್ವಹಿತಾಸಕ್ತಿಯಿಂದ ಅಧಿಕಾರವನ್ನು ಕೈಗೆತ್ತಿಕೊಳ್ಳುವುದನ್ನು ತಡೆಯುವುದು, ಪಾರದರ್ಶಕತೆ ಜಾರಿಗೆ ತರುವುದು, ವಂಚನೆ ತಡೆಯುವುದು ಇತ್ಯಾದಿ ಇದರ ಹಿಂದಿನ ಉದ್ದೇಶ.

ವೈಯಕ್ತಿಕ ಮಹತ್ವಾಕಾಂಕ್ಷೆಯ ಅಪಾಯವಿಲ್ಲ

ಉದಾಹರಣೆಗೆ ಪ್ರಧಾನಿ ಮತ್ತು ಮುಖ್ಯಮಂತ್ರಿಗಳಿಗೆ, ಅಧಿಕಾರದಲ್ಲಿ ಎರಡು ಅವಧಿ ತನಕ ಮಿತಿ ವಿಧಿಸುವುದರಿಂದ, ವೈಯಕ್ತಿಕ ಮಹತ್ವಾಕಾಂಕ್ಷೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಎರಡನೇ ಅವಧಿಯಲ 1975ರಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದು, ಭಾರತದ ಸಂಸದೀಯ ಪ್ರಜಾಪ್ರಭುತ್ವವು ದುರ್ಬಲಗೊಳ್ಳುವ ಸ್ಥಿತಿಯಿಂದ ಹೊರತಾಗಿಲ್ಲ ಎಂಬುದನ್ನು ಸಾಬೀತುಮಾಡಿದೆ. 2014ರಿಂದ 3ನೇ ಅವಧಿಗೆ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಅಧೀನದಲ್ಲಿ ಈಗಿನ ಸರ್ಕಾರವು ಕೂಡ ಅದರಲ್ಲೂ ವಿಶೇಷವಾಗಿ 2ನೇ ಅವಧಿಯಿಂದ, ಪ್ರಜಾಪ್ರಭುತ್ವದ ಮಾನದಂಡಗಳನ್ನು ದುರ್ಬಲಗೊಳಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವುದು ಸುಳ್ಳಲ್ಲ.

ಇದೇ ಪರಿಸ್ಥಿತಿ ಹೆಚ್ಚಾಗಿ ರಾಜ್ಯಗಳಲ್ಲಿಯೂ ಪುನರಾವರ್ತನೆಯಾಗುತ್ತದೆ. ಅಲ್ಲಿ ದೀರ್ಘಕಾಲ ಅಧಿಕಾರದಲ್ಲಿರುವ ಮುಖ್ಯಮಂತ್ರಿಗಳು ಕೂಡ ಪ್ರಜಾಪ್ರಭುತ್ವಕ್ಕೆ ಹಾನಿಯಾಗುವ ರೀತಿಯಲ್ಲಿ ಸ್ವಹಿತಾಸಕ್ತಿಗಳನ್ನು ಬೆಳೆಸಿಕೊಳ್ಳಬಹುದು.

ಆದರೆ, ಈಗಾಗಲೇ ಅವಧಿ ಮಿತಿಗಳನ್ನು ಹೊಂದಿರುವ ದೇಶಗಳಲ್ಲಿ ಮಿಶ್ರ ಅನುಭವವಿದೆ. ಅಮೆರಿಕದಲ್ಲಿ, ಈ ವ್ಯವಸ್ಥೆಯು ಟ್ರಂಪ್ ಅವರಿಂದಾಗಿ ಮೊದಲ ಬಾರಿಗೆ ಸವಾಲಿಗೆ ಒಳಪಟ್ಟಿದೆ. ದೀರ್ಘಕಾಲದವರೆಗೆ, ಅವಧಿ ಮಿತಿಯು ಕಾನೂನಿಗಿಂತ ಹೆಚ್ಚಾಗಿ ಸಂಪ್ರದಾಯವಾಗಿತ್ತು. ಇದಕ್ಕೆ ಕಾರಣ, ಅದರ ಮೊದಲ ಅಧ್ಯಕ್ಷರಾದ ಜಾರ್ಜ್ ವಾಷಿಂಗ್ಟನ್ ಅವರು ಸ್ವಯಂಪ್ರೇರಿತವಾಗಿ ಮೂರನೇ ಅವಧಿಗೆ ಮುಂದುವರಿಯಲು ನಿರಾಕರಿಸಿದ್ದು.

ಫ್ರಾಂಕ್ಲಿನ್ ರೂಸ್ವೆಲ್ಟ್ ಅವರು ಮಾತ್ರ ಎರಡು ಅವಧಿಗಿಂತ ಹೆಚ್ಚು (1933-45) ಸ್ಪರ್ಧಿಸಿದ ಏಕೈಕ ಅಧ್ಯಕ್ಷರು—ಇದಕ್ಕೆ ಮುಖ್ಯ ಕಾರಣ ಎರಡನೇ ಮಹಾಯುದ್ಧ. 1951ರಲ್ಲಿ, ಅಮೆರಿಕ ಸಂವಿಧಾನದ 22ನೇ ತಿದ್ದುಪಡಿಯ ಮೂಲಕ ಎರಡು ಅವಧಿಗಳ ಮಿತಿಯನ್ನು ಕಾನೂನುಬದ್ಧಗೊಳಿಸಲಾಯಿತು. ಟ್ರಂಪ್ ಮತ್ತು ಅವರ ಸಹಾಯಕರು ಈಗ ಈ ತಡೆಯನ್ನು ಹೇಗೆ ತಪ್ಪಿಸಿಕೊಳ್ಳುವುದು ಎಂಬ ಚಿಂತೆಗೆ ಬಿದ್ದಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಹುದೇ?

ಒಂದು ಸಲಹೆಯೆಂದರೆ, ಟ್ರಂಪ್ ಅವರು ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸುವುದು. ಚುನಾವಣೆಯ ನಂತರ, ಹೊಸದಾಗಿ ಆಯ್ಕೆಯಾದ ಅಧ್ಯಕ್ಷರು ನಿವೃತ್ತಿ ಹೊಂದಿ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಆದರೆ, 12ನೇ ತಿದ್ದುಪಡಿಯು, ಅಧ್ಯಕ್ಷರಾಗಿ ಎರಡು ಅವಧಿಗಳ ನಂತರ ಯಾವುದೇ ಸಾಂವಿಧಾನಿಕ ಸ್ಥಾನ ಹೊಂದುವುದರಿಂದ ಆ ವ್ಯಕ್ತಿಯನ್ನು ಸ್ಪಷ್ಟವಾಗಿ ನಿರ್ಬಂಧಿಸುತ್ತದೆ ಎಂದು ಕಾಣುತ್ತದೆ.

ಕಾನೂನು ತಜ್ಞರನ್ನು ಉಲ್ಲೇಖಿಸಿರುವ ವರದಿಗಳ ಪ್ರಕಾರ, “ಸಾಂವಿಧಾನಿಕವಾಗಿ ಅಧ್ಯಕ್ಷ ಹುದ್ದೆಗೆ ಅನರ್ಹರಾದ ಯಾವುದೇ ವ್ಯಕ್ತಿ ಅಮೆರಿಕದ ಉಪಾಧ್ಯಕ್ಷ ಹುದ್ದೆಗೂ ಅರ್ಹತೆ ಪಡೆಯುವುದಿಲ್ಲ” ಎಂದು ಹೇಳುತ್ತವೆ. ಇದು ನಿಜವೇ ಆಗಿದ್ದರೆ, ಅದು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದರಿಂದ ಟ್ರಂಪ್ ಅವರನ್ನು ಅನರ್ಹಗೊಳಿಸುತ್ತದೆ.

ಟ್ರಂಪ್ ಪಾಳಯವು ಮಂಡಿಸುವ ಇನ್ನೊಂದು ವಾದವೆಂದರೆ, ಕಾನೂನು ಕೇವಲ ಎರಡು “ಸತತ” ಅವಧಿಗಳನ್ನು ಮಾತ್ರ ನಿಷೇಧಿಸುತ್ತದೆ, ಹಾಗಾಗಿ ಮೊದಲ ಮತ್ತು ಎರಡನೇ ಅವಧಿಗಳ ನಡುವೆ ವಿರಾಮವಿರುವ ಕಾರಣ, ಅವರು ಇನ್ನೊಂದು ಅವಧಿಗೆ ಅರ್ಹರಾಗುತ್ತಾರೆ ಎಂಬುದು. ಈ ಬಗ್ಗೆ ಕಾನೂನು ಸ್ಪಷ್ಟವಾಗಿದ್ದರೂ, ಈ ನಿಬಂಧನೆಯನ್ನು ಇನ್ನೂ ಪ್ರಶ್ನಿಸಬಹುದು ಎಂದು ಅವರ ಸಹವರ್ತಿಗಳು ಹೇಳುತ್ತಾರೆ.

ಭಾರತದಂತಹ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಧಿ ಮಿತಿಗಳು ಕಾರ್ಯರೂಪಕ್ಕೆ ಬರುತ್ತವೆಯೇ? ಮೇಲ್ನೋಟಕ್ಕೆ, ಈ ವ್ಯವಸ್ಥೆಯು ಸಮಂಜಸವಾಗಿ ಕಾಣುತ್ತದೆ. ಯಾಕೆಂದರೆ ಇದು ಅಧಿಕಾರವು ಕೆಲವೇ ಜನರ ಮುಷ್ಠಿಗೆ ಒಳಪಡುವುದನ್ನು ತಡೆಯುತ್ತದೆ.

ಪುಟಿನ್ ತುಳಿದ ಹಾದಿ

ಆದರೆ, ಅವಧಿ ಮಿತಿಯನ್ನು ತಪ್ಪಿಸಲು ಪ್ರಯತ್ನಿಸಿದವರು ಟ್ರಂಪ್ ಮಾತ್ರವಲ್ಲ. ಇದೇ ರೀತಿಯ ಮಿತಿಗಳನ್ನು ಹೊಂದಿರುವ ಇತರ ರಾಷ್ಟ್ರಗಳಲ್ಲಿಯೂ ಒಂದು ನಿರ್ದಿಷ್ಟ ಅಧ್ಯಕ್ಷರ ಆಡಳಿತವನ್ನು ವಿಸ್ತರಿಸಲು ಪ್ರಯತ್ನಗಳು ನಡೆದಿವೆ ಮತ್ತು ಅವುಗಳಲ್ಲಿ ಕೆಲವು ಯಶಸ್ವಿಯಾಗಿವೆ. ರಷ್ಯಾದ ಸಂವಿಧಾನದಲ್ಲಿ ಅಧ್ಯಕ್ಷರಿಗೆ ಎರಡಕ್ಕಿಂತ ಹೆಚ್ಚು ಅವಧಿಗಳಿಲ್ಲ (ಎಂಟು ವರ್ಷಗಳು) ಎಂಬ ಇದೇ ರೀತಿಯ ನಿಬಂಧನೆಯಿತ್ತು. ಅಧ್ಯಕ್ಷರಾಗಿ ಎರಡು ಅವಧಿಗಳನ್ನು (2000-2008) ಪೂರ್ಣಗೊಳಿಸಿದ ವ್ಲಾಡಿಮಿರ್ ಪುಟಿನ್ ಅವರು, ಡಿಮಿಟ್ರಿ ಮೆಡ್ವೆಡೆವ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ, ತಾವೇ ಉಪಾಧ್ಯಕ್ಷರಾಗಿ ಸ್ಪರ್ಧಿಸಿದರು. ಸರಣಿ ಸಾಂವಿಧಾನಿಕ ತಿದ್ದುಪಡಿಗಳು, ಅಧ್ಯಕ್ಷರ ಅವಧಿಯನ್ನು ನಾಲ್ಕು ವರ್ಷದಿಂದ ಆರು ವರ್ಷಗಳಿಗೆ ಹೆಚ್ಚಿಸಿದ್ದು ಸೇರಿದಂತೆ, 2012 ಮತ್ತು 2018ರಲ್ಲಿ ಪುಟಿನ್ ಮತ್ತೆ ಅಧಿಕಾರಕ್ಕೆ ಮರಳಲು ಅನುವು ಮಾಡಿಕೊಟ್ಟವು.

ಈ ತಿದ್ದುಪಡಿಗಳನ್ನು ಪುಟಿನ್ ಅವರು ನಿರಂತರವಾಗಿ ಅಧಿಕಾರದಲ್ಲಿರಲು ತೊಂದರೆಯಾಗದಂತೆ ಮಾಡಲಾಗಿದೆ. ಆದ್ದರಿಂದ, ಈಗ, ಎರಡು ಅವಧಿಗಳ ಮಿತಿಯು ತಿದ್ದುಪಡಿಯಾದ ರೂಪದಲ್ಲಿ 2024ರಿಂದ ಜಾರಿಯಲ್ಲಿದೆ, ಅಂದರೆ ಪುಟಿನ್ ಅವರು 2036 ರವರೆಗೆ ಅಧ್ಯಕ್ಷರಾಗಿ ಮುಂದುವರಿಯಬಹುದು.

ಅವಧಿ ಮಿತಿಯನ್ನು ತಪ್ಪಿಸುವ ಇನ್ನೊಂದು ಶ್ರೇಷ್ಠ ಉದಾಹರಣೆ ಎಂದರೆ ಹ್ಯೂಗೋ ಚಾವೆಜ್ (1998-2013) ಆಳ್ವಿಕೆಯಲ್ಲಿದ್ದ ವೆನೆಜುವೆಲಾ. ಅವರು ಅಧಿಕಾರಕ್ಕೆ ಬಂದಾಗ, ಅಧ್ಯಕ್ಷರಿಗೆ ಆರು ವರ್ಷಗಳ ಎರಡು ಅವಧಿಗಳ ಮಿತಿ ಇತ್ತು. ಅವಧಿ ಮಿತಿಗಳನ್ನು ರದ್ದುಗೊಳಿಸುವ ಅವರ ಪ್ರಸ್ತಾವನೆ 2007ರಲ್ಲಿ ವಿಫಲವಾದ ನಂತರ, ಎರಡು ವರ್ಷಗಳ ನಂತರ ಎರಡನೇ ಬಾರಿಗೆ ಅವರು ಯಶಸ್ವಿಯಾದರು. ಕಾನೂನನ್ನು ತಿದ್ದುಪಡಿ ಮಾಡಿ ರಾಷ್ಟ್ರೀಯ ಜನಮತ ಸಂಗ್ರಹದ ಮೂಲಕ ಮೌಲ್ಯೀಕರಿಸಲಾಯಿತು. ಆದರೆ 2013ರಲ್ಲಿ ಕ್ಯಾನ್ಸರ್ನಿಂದ ನಿಧನರಾದ ಕಾರಣ ಅವರು ತಮ್ಮ ಅನಿಯಂತ್ರಿತ ಅಧ್ಯಕ್ಷೀಯ ಅವಧಿಯನ್ನು ಅನುಭವಿಸಲು ಸಾಧ್ಯವಾಗಲಿಲ್ಲ.

ಆಫ್ರಿಕಾದಲ್ಲಿಯೂ ಅಧ್ಯಕ್ಷರು ಅವಧಿ ಮಿತಿಗಳನ್ನು ತಪ್ಪಿಸಲು ಪ್ರಯತ್ನಿಸಿದ ಉದಾಹರಣೆಗಳಿವೆ. ಇತ್ತೀಚಿನದು ಕೀನ್ಯಾ, ಅಲ್ಲಿ ಅಧ್ಯಕ್ಷರ ಅವಧಿಯನ್ನು ಏಳು ವರ್ಷಗಳಿಗೆ ಹೆಚ್ಚಿಸುವ ಪ್ರಸ್ತಾಪವಿತ್ತು. ಆದರೆ ವ್ಯಾಪಕ ಸಾರ್ವಜನಿಕ ಪ್ರತಿಭಟನೆಗಳಿಂದಾಗಿ ಅದು ವಿಫಲವಾಯಿತು. ಈಗ, ಅದರ ಅಧ್ಯಕ್ಷರಾದ ವಿಲಿಯಂ ರೂಟೊ ಅವರು ತಲಾ ಐದು ವರ್ಷಗಳ ಎರಡು-ಅವಧಿಗಳ ಮಿತಿಯನ್ನು ತೆಗೆದುಹಾಕಲು ಶಾಸನವನ್ನು ಜಾರಿಗೆ ತರಲು ಯೋಜಿಸುತ್ತಿದ್ದಾರೆಯೇ ಎಂಬ ವದಂತಿ ಹರಡಿದೆ. ಇದು 2027ಕ್ಕೆ ನಿಗದಿಯಾಗಿರುವ ಚುನಾವಣೆಯಲ್ಲಿ ಅವರಿಗೆ ಸ್ಪರ್ಧಿಸಲು ಅನುವು ಮಾಡಿಕೊಡುತ್ತದೆ.

ಆಫ್ರಿಕಾ ಸೆಂಟರ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್ನ ಪ್ರಕಾರ, ಕಳೆದ 10 ವರ್ಷಗಳ ಅವಧಿಯಲ್ಲಿ, ಕನಿಷ್ಠ 14 ರಾಷ್ಟ್ರಗಳ ಆಡಳಿತದ ಗಣ್ಯರು ಅವಧಿ ಮಿತಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇವುಗಳಲ್ಲಿ ಈಜಿಪ್ಟ್, ಉಗಾಂಡಾ, ರುವಾಂಡಾ ಮತ್ತು ಅಲ್ಜೀರಿಯಾ ಸೇರಿವೆ.

ಭಾರತದಂತಹ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಧಿ ಮಿತಿ ಕಾರ್ಯರೂಪಕ್ಕೆ ಬರುತ್ತವೆಯೇ? ಮೇಲ್ನೋಟಕ್ಕೆ, ಈ ವ್ಯವಸ್ಥೆಯು ಅಧಿಕಾರವು ಕೆಲವೇ ಜನರ ಕೈಯಲ್ಲಿ ಸಿಲುಕುವುದನ್ನು ತಡೆಯುತ್ತದೆ. ಮತ್ತು ಆ ಕಾರಣಕ್ಕೆ ಸಮಂಜಸವಾಗಿ ಕಾಣುತ್ತದೆ. ಆದರೆ, ಯಾವುದೇ ಆಡಳಿತ ವ್ಯವಸ್ಥೆಯು ಸ್ವಯಂ-ಮಿತಿಗೊಳಿಸುವ ಮತ್ತು ಈಗಾಗಲೇ ಅಧಿಕಾರದಲ್ಲಿರುವವರ ಹಿತಾಸಕ್ತಿಗೆ ವಿರುದ್ಧವಾದ ನಡೆಗೆ ಕಾರಣವಾಗುತ್ತದೆಯೇ ಎಂಬುದು ವಾಸ್ತವಿಕ ಪ್ರಶ್ನೆಯಾಗಿದೆ.

Read More
Next Story