
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

‘ಎಲ್ಲರನ್ನೂ ಮೆಚ್ಚಿಸುತ್ತ ಮುಂದಕ್ಕೆ ಸಾಗಬೇಕು’ ಎಂಬುದು ಭಾರತದ ನಿಲುವು. ಆದರೆ ಇಸ್ರೇಲ್ ಪರವಾದ ವಿವಾದಾತ್ಮಕ ನಿಲುವು ಅದಕ್ಕೆ ತಿರುಗುಬಾಣವಾಗಿಲ್ಲ.
“ಮೊಲದ ಜೊತೆ ಓಟಕ್ಕಿಳಿಯುವುದು ಮತ್ತು ಬೇಟೆ ನಾಯಿಯೊಂದಿಗೆ ಬೇಟೆಯಾಡುವುದು” ಇದು ಭಾರತ ವಿದೇಶಾಂಗ ನೀತಿ. ಅಂದರೆ ಎರಡೂ ಕಡೆಯವರನ್ನು ಓಲೈಕೆ ಮಾಡುವ ಈ ನೀತಿ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಸಂಬಂಧದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಫೆ.25ರಂದು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಭೇಟಿ ಕೈಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ವಿಚಾರವಂತೂ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಅದೇನೆಂದರೆ ಕಳೆದ ಕೆಲವು ದಶಕಗಳಿಂದ ನಡೆಯುತ್ತಿರುವ ಸಂಘರ್ಷ ಮತ್ತು ಪ್ಯಾಲೆಸ್ತೀನ್ ಪ್ರದೇಶಗಳ ಮೇಲೆ ಇತ್ತೀಚೆಗೆ ಇಸ್ರೇಲ್ ನಡೆಸಿದ ದಾಳಿಗಳಿಗೆ ಸಂಬಂಧಿಸಿದಂತೆ ತನ್ನ ನಿಲುವನ್ನು ಖಡಾಖಂಡಿತವಾಗಿ ಹೇಳಲು ಭಾರತಕ್ಕೆ ಸಾಧ್ಯವಾಗುತ್ತಿಲ್ಲ.
ತನ್ನ ನಿಲುವನ್ನು ತಿಳಿಸಿ ಎಂದು ಭಾರತಕ್ಕೆ ಕರೆ ಬಂದಾಗಲೆಲ್ಲ ಅದು ತಡಬಡಾಯಿಸಿದ್ದೇ ಹೆಚ್ಚು. ಅದಕ್ಕೆ ಇತ್ತೀಚೆಗಿನ ಎರಡು ಉದಾಹರಣೆಗಳೇ ಸ್ಪಷ್ಟವಾಗಿ ಉತ್ತರ ಹೇಳುತ್ತವೆ; ಮೊದಲನೆಯದು; ಮುರಿದು ಬಿದ್ದ ಗಾಜಾವನ್ನು ಮತ್ತೆ ಕಟ್ಟಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಚಿಸಿದ ‘ಶಾಂತಿ ಮಂಡಳಿ’ಯನ್ನು ಸೇರಿಕೊಳ್ಳುವಂತೆ ಭಾರತಕ್ಕೆ ಆಹ್ವಾನವನ್ನು ನೀಡಲಾಗಿತ್ತು. ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಕತಾರ್ ಈಗಾಗಲೇ ಸದಸ್ಯರಾಗಿ ಈ ಮಂಡಳಿಯನ್ನು ಸೇರಿಕೊಂಡಿದ್ದಾಗಿದೆ.
ಭಾರತದ ಎಚ್ಚರಿಕೆಯ ಹೆಜ್ಜೆಗಳು
ಆದರೆ ಮೋದಿ ಸರ್ಕಾರ ಮಾಡಿದ್ದಾದರೂ ಏನು. ಆರಂಭದಲ್ಲಿ ಟ್ರಂಪ್ ಅವರ ಆಹ್ವಾನಕ್ಕೆ ಒಪ್ಪಿಗೆ ನೀಡಲು ನಿರಾಕರಿಸಿದ ಭಾರತ ಕಟ್ಟಕಡೆಗೆ ಆ ಸಭೆಗೆ ಒಬ್ಬ ‘ವೀಕ್ಷಕ’ರನ್ನು ಕಳುಹಿಸಿಕೊಟ್ಟಿತು. ಇದನ್ನೇ ನಾವು ವ್ಯಾಖ್ಯಾನಿಸುವುದಾದರೆ ವೀಕ್ಷಕನನ್ನು ಕಳುಹಿಸುವುದು ಎಂದರೆ ಯಾವುದೇ ಸ್ಪಷ್ಟತೆ ಇಲ್ಲದ ನಿಲುವು. ಹಾಗೆ ಮಾಡುವ ಮೂಲಕ ಭಾರತ ಟ್ರಂಪ್ ಅವರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿತು. ಅದರಲ್ಲಿ ಯಶಸ್ವಿಯೂ ಆಯಿತು. ಅದೇ ಹೊತ್ತಿಗೆ ತಾವು ಈ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ‘ಭಾಗಿಯಾಗಿಲ್ಲ’ ಎಂಬ ಸಂದೇಶವನ್ನು ಪ್ಯಾಲೆಸ್ತೀನಿಯನ್ನರಿಗೆ ಕಳುಹಿಸಿತು.
ಕಳೆದ ವಾರವೂ ಇಂತಹುದೇ ಇನ್ನೊಂದು ಇಕ್ಕಟ್ಟಿನ ಪ್ರಸಂಗ ಉಂಟಾಯಿತು. ಪಶ್ಚಿಮ ದಂಡೆಯ ಇಸ್ರೇಲ್ ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದಲ್ಲಿ ಯಹೂದಿ ವಸಾಹತುಗಳನ್ನು ‘ಕಾನೂನುಬದ್ಧವಾಗಿ ಮಾಡಬೇಕು ಮತ್ತು ತನ್ನ ನಿಯಂತ್ರಣವನ್ನು ವಿಸ್ತರಿಸಬೇಕು ಎಂಬುದಕ್ಕಾಗಿ ಇಸ್ರೇಲ್ ಸರ್ಕಾರವು ರೂಪಿಸುತ್ತಿರುವ ನಿಯಮಗಳನ್ನು ಟೀಕಿಸಿ 85 ರಾಷ್ಟ್ರಗಳು ಪತ್ರವೊಂದಕ್ಕೆ ಸಹಿಹಾಕಿದ್ದವು. ಈ ಮೂಲ ಸಹಿದಾರರ ಪಟ್ಟಿಯಲ್ಲಿ ಭಾರತದ ಹೆಸರೇ ಇರಲಿಲ್ಲ. ಕೊನೆಗೆ ಒಂದು ದಿನದ ಬಳಿಕವಷ್ಟೇ ಈ ಪಟ್ಟಿಯಲ್ಲಿ ಭಾರತದ ಹೆಸರು ಕಾಣಿಸಿಕೊಂಡಿತು.
ಪಶ್ಚಿಮ ಏಷ್ಯಾದಲ್ಲಿ (ಅಥವಾ ಜಾಗತಿಕವಾಗಿ ಕರೆಯುವಂತೆ ಮಧ್ಯಪ್ರಾಚ್ಯದಲ್ಲಿ) ಬೆಳವಣಿಗೆಗಳು ಕ್ಷಿಪ್ರ ಗತಿಯಲ್ಲಿ ಸಂಭವಿಸುತ್ತಲೇ ಇರುತ್ತವೆ. ಆದರೆ ಅವುಗಳಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎನ್ನುವ ಬಗ್ಗೆ ಭಾರತಕ್ಕೆ ಸಂದಿಗ್ಧತೆ ಇದೆ. ಅದಕ್ಕೆ ಈ ಘಟನೆ ಕನ್ನಡಿ ಹಿಡಿಯುತ್ತದೆ.
ಮೂರು ದಶಕಗಳಲ್ಲಿ ಗಟ್ಟಿ ಸಂಬಂಧ
ಇಷ್ಟೆಲ್ಲ ನೀತಿ, ನಿಯಮಗಳು ಮತ್ತು ನಿಲುವುಗಳನ್ನು ಒತ್ತಟ್ಟಿಗಿಟ್ಟು ಅಮೆರಿಕ, ಇಸ್ರೇಲ್ ಮತ್ತು ಭಾರತವನ್ನು ಒಳಗೊಂಡ ಪ್ರಬಲ ಅಕ್ಷವೊಂದು ಹೊರಹೊಮ್ಮುತ್ತಿರುವುದನ್ನು ಕಾಣಬಹುದು. ಇದು ಇಂದಿನ ವಾಸ್ತವ ಸ್ಥಿತಿ. ಕಳೆದ ಮೂರು ದಶಕಗಳ ಅವಧಿಯಲ್ಲಿ ಭಾರತ ಮತ್ತು ಇಸ್ರೇಲ್ ನಡುವೆ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧಗಳು ಆರಂಭವಾದ ದಿನದಿಂದ ರಕ್ಷಣಾ ಖರೀದಿಗಳು, ಮಿಲಿಟರಿ ಗುಪ್ತಚರ ಮತ್ತು ಒಟ್ಟಾರೆ ವ್ಯಾಪಾರದಲ್ಲಿ ಉಭಯ ರಾಷ್ಟ್ರಗಳು ನಿಕಟವಾದ ಸಂಬಂಧವನ್ನು ಹೊಂದಿವೆ.
ಯಾವತ್ತು 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್.ಡಿ.ಎ. ಸರ್ಕಾರ ಅಸ್ತಿತ್ವಕ್ಕೆ ಬಂತೋ ಅಂದಿನಿಂದ ಈ ಸಂಬಂಧವು ಗಣನೀಯವಾಗಿ ಬೆಳೆದಿದೆ. 2014ರಲ್ಲಿ ಸುಮಾರು 4.52 ಶತಕೋಟಿ ಡಾಲರ್-ನಷ್ಟಿದ್ದ ಪರಸ್ಪರ ವ್ಯಾಪಾರವು (ರಕ್ಷಣೇತರ) ಈಗ ಸುಮಾರು ಏಳು ಶತಕೋಟಿ ಡಾಲರ್-ಗೆ ಏರಿಕೆ ಕಂಡಿದೆ. ಇನ್ನು ಸೇನಾ ಸಂಬಂಧಿ ವ್ಯಾಪಾರದ ವಿಚಾರಕ್ಕೆ ಬಂದರೆ ಇದು 8.6 ಶತಕೋಟಿ ಡಾಲರ್ ತಲುಪಬಹುದು ಎಂದು ಅಂದಾಜು ಮಾಡಲಾಗಿದೆ. ಭಾರತದ ನಾಲ್ಕು ಪ್ರಮುಖ ಶಸ್ತ್ರಾಸ್ತ್ರ ಸರಬರಾಜುದಾರರಲ್ಲಿ ಇಸ್ರೇಲ್ ಕೂಡ ಒಂದಾಗಿದೆ. ಇಸ್ರೇಲಿನ ಒಟ್ಟು ಮಿಲಿಟರಿ ಹಾರ್ಡ್-ವೇರ್-ಗಳಲ್ಲಿ ಸುಮಾರು ಶೇ.40ರಷ್ಟು ಪ್ರಮಾಣವನ್ನು ಭಾರತವೇ ಖರೀದಿ ಮಾಡುತ್ತಿರುವುದು ಗಮನಾರ್ಹ ಅಂಶ.
ಎನ್.ಡಿ.ಎ. ಸರ್ಕಾರದ ‘ಹಿಂದುತ್ವ ಕೇಂದ್ರಿತ’ ದೃಷ್ಟಿಕೋನವು ಭಾರತವನ್ನು ಇಸ್ರೇಲ್ ಮತ್ತು ಅಮೆರಿಕಕ್ಕೆ ಸಹಜ ಮಿತ್ರ ರಾಷ್ಟ್ರವನ್ನಾಗಿ ಮಾಡಿದೆ. ಯಾಕೆಂದರೆ ಈ ಎರಡೂ ರಾಷ್ಟ್ರಗಳ ಪಾಲಿಗೆ ‘ರಾಜಕೀಯ ಇಸ್ಲಾಂ’ ಎನ್ನುವುದು ಸಧ್ಯಕ್ಕೆ ಅಸ್ತಿತ್ವದಲ್ಲಿರುವ ಅಪಾಯವಾಗಿದೆ. ವಾಸ್ತವವಾಗಿ 2017ರಲ್ಲಿ ಇಸ್ರೇಲಿಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆ ನರೇಂದ್ರ ಮೋದಿ ಅವರು ಪಾತ್ರರಾಗಿದ್ದರು.
ತಟಸ್ಥ ನಿಲುವಿನ ಆಯ್ಕೆ
ಹಿಂದೆಲ್ಲ ವಿಶ್ವಸಂಸ್ಥೆಯೂ ಸೇರಿದಂತೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಯಾವಾಗಲೂ ಪ್ಯಾಲೆಸ್ತೀನ್ ಪರವಾದ ಯಾವುದೇ ನಿರ್ಣಯಗಳನ್ನು ಕೈಗೊಂಡರೂ ಅದನ್ನು ಬೆಂಬಲಿಸುತ್ತಿದ್ದ ಭಾರತವು ಈಗ ಇಸ್ರೇಲ್-ನ್ನು ಟೀಕಿಸುವ ಸಂದರ್ಭ ಬಂದಾಗಲೆಲ್ಲ ತಟಸ್ಥ ನಿಲುವು ತಳೆಯುವುದನ್ನೇ ಆಯ್ಕೆ ಮಾಡಿಕೊಳ್ಳುತ್ತಿದೆ.
ಗಾಜಾ ಪಟ್ಟಿಯ ಮೇಲೆ ಎರಡು ವರ್ಷಗಳ ಕಾಲ ನಡೆದ ಆಕ್ರಮಣದಲ್ಲಿ ಹತರಾದ ಪ್ಯಾಲೆಸ್ತೀನ್ ನಾಗರಿಕರ ಸಂಖ್ಯೆಯೇ ಎಪ್ಪತ್ತು ಸಾವಿರ. ಆಗ ಇಸ್ರೇಲ್ ಕ್ರಮವನ್ನು ನೇರವಾಗಿ ಖಂಡಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಇರಲಿಲ್ಲ. ಅದಕ್ಕೆ ಬದಲಾಗಿ ಇಸ್ರೇಲ್ ಹೆಸರನ್ನು ಎತ್ತದೇ ಕೇವಲ ಶಾಂತಿ ಮತ್ತು ಸಂಘರ್ಷದ ಪರಿಹಾರಕ್ಕೆ ಕರೆ ನೀಡುವ ಸಾಮಾನ್ಯ ನಿಲುವನ್ನು ಅದು ತೆಗೆದುಕೊಂಡಿತ್ತು.
ಮೋದಿ ಸರ್ಕಾರವು ಸ್ಥೂಲವಾಗಿ ಭಯೋತ್ಪಾದನೆಯ ಅಂತ್ಯಕ್ಕೆ ಮತ್ತು ಇಸ್ರೇಲ್ನ ಆತ್ಮರಕ್ಷಣೆಯ ಹಕ್ಕಿಗೆ ಕರೆ ನೀಡಿದೆ - ಜೊತೆಗೆ ಸ್ವತಂತ್ರ ಪ್ಯಾಲೆಸ್ತೀನ ರಾಷ್ಟ್ರವನ್ನು ಒಳಗೊಂಡ 'ದ್ವಿ-ರಾಷ್ಟ್ರ ಸೂತ್ರ'ಕ್ಕೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ. ಕದನ ವಿರಾಮ, ಮಾನವೀಯ ನೆರವಿನ ವಿತರಣೆ ಮತ್ತು ಒತ್ತೆಯಾಳುಗಳ ವಾಪಸಾತಿಯನ್ನು ಭಾರತ ಬೆಂಬಲಿಸಿದೆ. ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲೆ ನಡೆದ ಹಮಾಸ್ ದಾಳಿಯನ್ನು ಖಂಡಿಸಿದ ಮೊದಲ ರಾಷ್ಟ್ರಗಳಲ್ಲಿ ಭಾರತವೂ ಒಂದು.
ಭಾರತಕ್ಕೆ ಇಸ್ರೇಲ್ ಯಾಕೆ ಮುಖ್ಯ?
ತನ್ನ ನೆರೆಹೊರೆಯಲ್ಲಿ ಗಂಭೀರ ಸವಾಲುಗಳನ್ನು ಎದುರಿಸುತ್ತಿರುವ ಹೊತ್ತಿನಲ್ಲಿಯೇ ಮೋದಿ ಅವರು ಈ ಇಸ್ರೇಲ್ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಸವಾಲುಗಳಲ್ಲಿ ಪ್ರಮುಖವಾದುದು ಚೀನಾದ ಬೆದರಿಕೆ ಮತ್ತು ಪಾಕಿಸ್ತಾನದೊಂದಿಗೆ ಅದರ ನಿರಂತರ ಸಂಬಂಧ. ಪಹಲ್ಗಾಮ್ ಭಯೋತ್ಪಾದನಾ ದಾಳಿಯ ನಂತರ ಭಾರತದೊಂದಿಗೆ ನಡೆದ ಸೀಮಿತ ಸಂಘರ್ಷದ ಮೇಲೆ ಇದು ನೇರ ಪರಿಣಾಮ ಬೀರಿದೆ. ಭಾರತದ ನಿರಾಕರಣೆಯ ಹೊರತಾಗಿಯೂ, ತನ್ನ ವಿಮಾನವನ್ನು ಹೊಡೆದು ಉರುಳಿಸಲಾಗಿದೆ ಎಂಬ ಟ್ರಂಪ್ ಅವರ ಪುನರಾವರ್ತಿತ ಪ್ರತಿಪಾದನೆಗಳು ಮತ್ತು ಭಾರತದೊಂದಿಗಿನ ಸಂಘರ್ಷದಲ್ಲಿ ಪಾಕಿಸ್ತಾನಕ್ಕೆ ಚೀನಾದಿಂದ ತಾಂತ್ರಿಕ ನೆರವು ಲಭಿಸಿದೆ ಎಂಬ ವರದಿಗಳು, ಮೋದಿ ಅವರು ಇಸ್ರೇಲಿ ಮಿಲಿಟರಿ ಸಾಮಗ್ರಿಗಳ ಮೇಲೆ ಹೆಚ್ಚಿನ ಆಸಕ್ತಿ ತೋರಿಸಲು ಕಾರಣವಾಗಿರಬಹುದು.
ಮುಂಬರುವ ಪ್ರವಾಸದಲ್ಲಿ, SPICE 1000 ನಿಖರ-ನಿರ್ದೇಶಿತ ಬಾಂಬ್ಗಳು, Rampage ಗಾಳಿಯಿಂದ ಭೂಮಿಗೆ ಹಾರುವ ಕ್ಷಿಪಣಿಗಳು, Air LORA ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು IceBreaker ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸುವ ಒಪ್ಪಂದಗಳಿಗೆ ಅಂತಿಮ ರೂಪ ಸಿಗುವ ಸಾಧ್ಯತೆ ನಿಚ್ಚಳವಾಗಿದೆ. ಭಾರತದ ವಾಯು ರಕ್ಷಣಾ ಸಾಮರ್ಥ್ಯಗಳು, ಡ್ರೋನ್ ತಂತ್ರಜ್ಞಾನ ಮತ್ತು ನೌಕಾ ವ್ಯವಸ್ಥೆಗಳನ್ನು ಮೇಲ್ದರ್ಜೆಗೇರಿಸುವುದು ಇದರ ಉದ್ದೇಶವಾಗಿದೆ.
ಕುತೂಹಲದ ಸಂಗತಿ ಏನೆಂದರೆ, ಭಾರತವು ಇಸ್ರೇಲ್ನೊಂದಿಗೆ ಮೊದಲು ಗುಪ್ತವಾಗಿ ಮತ್ತು ಈಗ ಬಹಳ ಬಹಿರಂಗವಾಗಿ ಬೆಳೆಸಿಕೊಂಡಿರುವ ಬಲವಾದ ಸಂಬಂಧಕ್ಕೆ ಅರಬ್ ರಾಷ್ಟ್ರಗಳಿಂದ ಹೆಚ್ಚಿನ ವಿರೋಧ ವ್ಯಕ್ತವಾಗಿಲ್ಲ. ಅಲ್ಲಿ ಕೆಲಸ ಮಾಡುವ ಲಕ್ಷಾಂತರ ಭಾರತೀಯರು ಮತ್ತು ಪೆಟ್ರೋಲ್ ಹಾಗೂ ಇಂಧನ ಅಗತ್ಯಗಳಿಗಾಗಿ ಆ ಪ್ರದೇಶದ ಮೇಲಿನ ಅವಲಂಬನೆಯನ್ನು ಗಮನಿಸಿದರೆ, ಅರಬ್ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಕಾಯ್ದುಕೊಳ್ಳುವುದು ಭಾರತಕ್ಕೆ ಅತ್ಯಂತ ಅವಶ್ಯಕವಾಗಿದೆ.
ಮೋದಿ ಭೇಟಿಯ ಮೇಲೆ ತೀವ್ರ ನಿಗಾ
ಅದೃಷ್ಟವಶಾತ್ "ಎಲ್ಲರನ್ನೂ ಮೆಚ್ಚಿಸುವ" ಆದರೆ ಇಸ್ರೇಲ್ ಪರವಾದ ಭಾರತದ ನೀತಿಯು ಇದುವರೆಗೆ ತಿರುಗುಬಾಣವಾಗಿ ಪರಿಣಮಿಸಿಲ್ಲ. ಯಾಕೆಂದರೆ ಅರಬ್ ರಾಷ್ಟ್ರಗಳೇ ರಾಜಕೀಯವಾಗಿ ಮತ್ತು ಮಿಲಿಟರಿ ದೃಷ್ಟಿಯಿಂದ ಗೊಂದಲದ ಗೂಡಾಗಿವೆ.
ಯುಎಇ, ಬಹ್ರೇನ್ ಮತ್ತು ಈಜಿಪ್ಟ್ ಸೇರಿದಂತೆ ಅವುಗಳಲ್ಲಿ ಹಲವು ರಾಷ್ಟ್ರಗಳು ಇಸ್ರೇಲ್ ಮತ್ತು ಅಮೆರಿಕದೊಂದಿಗೆ ನಿಕಟ ಸಂಬಂಧ ಹೊಂದಿವೆ. ಸುನ್ನಿ ಮುಸ್ಲಿಂ ಜಗತ್ತಿನ ನಾಯಕ ಎಂದು ಪರಿಗಣಿಸಲ್ಪಟ್ಟಿರುವ ಸೌದಿ ಅರೇಬಿಯಾ ಕೂಡ, ಟ್ರಂಪ್ ಅವರ 'ಅಬ್ರಹಾಮಿಕ್ ಒಪ್ಪಂದಗಳ' ಭಾಗವಾಗಿ ಇಸ್ರೇಲ್ನೊಂದಿಗೆ ಸಂಬಂಧಕ್ಕೆ ಚಾಲನೆಯನ್ನು ನೀಡುವ ಹಂತದಲ್ಲಿದೆ.
ಅಸ್ತಿತ್ವದ ಬಿಕ್ಕಟ್ಟುಗಳ ಸುಳಿಯಲ್ಲಿ
ಈ ವಲಯದಲ್ಲಿ ನಡೆಯುತ್ತಿರುವ ಮುಸ್ಲಿಂ ರಾಷ್ಟ್ರಗಳ ನಡುವಿನ ಪಂಥೀಯ ಕಲಹಗಳ ಕಾರಣದಿಂದ ಇರಾನ್ ಏಕಾಂಗಿಯಾಗಿದೆ. ಅಮೆರಿಕದ ಸಂಭಾವ್ಯ ದಾಳಿಯನ್ನು ತಡೆಯಲು ಇರಾನ್ ಇಂದು ಏಕಾಂಗಿಯಾಗಿ ಹೋರಾಡುತ್ತಿದೆ. ಇಂತಹ ಅಸ್ತಿತ್ವದ ಬಿಕ್ಕಟ್ಟುಗಳಿಂದಾಗಿಯೇ ಈ ಪ್ರದೇಶದಲ್ಲಿ ಭಾರತವು ಇಸ್ರೇಲ್ ಪರವಾಗಿ ವಹಿಸುತ್ತಿರುವ ವಿವಾದಾತ್ಮಕ ಪಾತ್ರದ ಪ್ರಭಾವವನ್ನು ತಗ್ಗಿಸಿದೆ.
ಗಾಜಾ ಮೇಲಿನ ದಾಳಿಯ ಸಂದರ್ಭದಲ್ಲಿ ಭಾರತವು ಇಸ್ರೇಲ್ಗೆ ನೆರವು ನೀಡುತ್ತಿದೆ ಎಂಬ ವರದಿಗಳು ಕೇಳಿಬಂದಿದ್ದರೂ, ಭಾರತದ ಪಾಲಿಗೆ ಆ ಸುದ್ದಿಗಳು ಅಷ್ಟಾಗಿ ಪ್ರಾಮುಖ್ಯತೆ ಪಡೆಯದೇ ಇರುವುದು ಒಂದು ಮಟ್ಟಿನ ಯೋಗಾಯೋಗ.
ಪಶ್ಚಿಮ ಏಷ್ಯಾದ ನಾನಾ ರಾಷ್ಟ್ರಗಳನ್ನು ಕಾಡುತ್ತಿರುವ ಸಾಲು ಸಾಲು ಸಮಸ್ಯೆಗಳ ನಡುವೆಯೂ, ಮೋದಿಯವರ ಈ ಭೇಟಿಯನ್ನು ಜಗತ್ತು ಕುತೂಹಲದಿಂದ ಗಮನಿಸಲಿದೆ. ವಿಶೇಷವಾಗಿ ಇಸ್ರೇಲ್ನೊಂದಿಗೆ ಭಾರತವು ಬೆಳೆಸುತ್ತಿರುವ ಇನ್ನೂ ಹೆಚ್ಚಿನ ನಿಕಟ ಸಂಬಂಧವು ಈ ಪ್ರದೇಶದ ಮೇಲೆ ಭವಿಷ್ಯದಲ್ಲಿ ದೊಡ್ಡ ಮಟ್ಟದ ಪ್ರಭಾವ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

