ಬೈಜೂಸ್ ಅವನತಿ: ಶೈಕ್ಷಣಿಕ ತಂತ್ರಜ್ಞಾನದ ತಪ್ಪುಗಳ ವಿಶ್ಲೇಷಣೆ
x

ಬೈಜೂಸ್ ಅವನತಿ: ಶೈಕ್ಷಣಿಕ ತಂತ್ರಜ್ಞಾನದ ತಪ್ಪುಗಳ ವಿಶ್ಲೇಷಣೆ

ಕೋವಿಡ್‌ ಸಾಂಕ್ರಾಮಿಕದಿಂದ ಎಜುಟೆಕ್‌(ಶಿಕ್ಷಣ ತಂತ್ರಜ್ಞಾನ) ಕಂಪನಿಗಳು ವೇಗವಾಗಿ ಬೆಳೆದವು. ಬೈಜೂಸ್ ಸೇರಿದಂತೆ ಬಹುತೇಕ ಎಜುಟೆಕ್‌ ಕಂಪನಿಗಳು ವೈಯಕ್ತೀಕರಣಕ್ಕೆ ಆದ್ಯತೆ ನೀಡಲಿಲ್ಲ. ಜಾಹೀರಾತುಗಳ ಮೂಲಕ ಪೋಷಕರನ್ನು ಆಕರ್ಷಿಸಿ,ವೇಗವಾಗಿ ಬೆಳೆದವು. ಆದರೆ, ಎರಡನೇ ಹಂತದಲ್ಲಿ ಹೂಡಿಕೆಯ ಕೊರತೆಯಿಂದ ಕುಸಿದವು.


ಬೈಜೂಸ್ ಅವನತಿ: ಶೈಕ್ಷಣಿಕ ತಂತ್ರಜ್ಞಾನದ ತಪ್ಪುಗಳ ವಿಶ್ಲೇಷಣೆ

-ಕೆ. ಗಿರಿಪ್ರಕಾಶ್

ಎಜುಟೆಕ್‌ ಕಂಪನಿಗಳಿಗೆ ಇದು ಕಷ್ಟದ ಕಾಲ. ಪ್ರಸಿದ್ಧ ಎಜುಟೆಕ್‌ ಕಂಪನಿ ಬೈಜೂಸ್‌, 15,000 ಸಿಬ್ಬಂದಿಗಳಿಗೆ ವೇತನ ಪಾವತಿಸಲು ಮನೆ ಅಡಮಾನ ಇರಿಸಿ, 12 ದಶಲಕ್ಷ ಡಾಲರ್‌ ಸಾಲ ಎತ್ತಿದೆ.

ಬಳಕೆದಾರರು, ಹೂಡಿಕೆದಾರರು ಮತ್ತು ಚಂದಾದಾರರನ್ನು ಒಳಗೊಂಡಿರುವ ಈ ಕ್ಷೇತ್ರದ ಪರಿಸ್ಥಿತಿ ಉತ್ತಮವಾಗಿಲ್ಲ ಎಂಬುದಕ್ಕೆ ಇದು ಸಾಕ್ಷಿ. ಮಣಿಪಾಲ್ ಗ್ರೂಪ್‌ನ ಮುಖ್ಯಸ್ಥ ಡಾ.ರಂಜನ್ ಪೈ ಅವರು ಬೈಜೂಸ್‌ಗೆ ಸಹಾಯ ಮಾಡಲು ಪ್ರಯತ್ನಿಸಿದರೂ, ಅದು ಫಲ ನೀಡಲಿಲ್ಲ. ದೇಶದಲ್ಲಿನ ಅನೇಕ ಎಜುಟೆಕ್ ಕಂಪನಿಗಳ ವ್ಯವಹಾರ ಮಾದರಿಗಳು ಸಮಸ್ಯಾತ್ಮಕವಾಗಿದೆ.

ಅಧಿಕ ಜಾಹೀರಾತು ವೆಚ್ಚ ಮತ್ತು ಬ್ರಾಂಡ್‌ನ ಉತ್ತೇಜನಕ್ಕಾಗಿ ದುಬಾರಿ ರೂಪದರ್ಶಿಗಳನ್ನು ಬಳಸುವ ಮೂಲಕ ಮತ್ತು ವೈಟ್‌ಹ್ಯಾಟ್ ಜೂನಿಯರ್‌ನಂತಹ ಕಂಪನಿಗಳನ್ನು ತ್ವರಿತವಾಗಿ ಸ್ವಾಧೀನಪಡಿಸಿಕೊಳ್ಳುವ ಮೂಲಕ ಬೈಜೂಸ್ ಆಕ್ರಮಣಕಾರಿಯಾಗಿ ವಿಸ್ತರಿಸಿತು. ಆದಾಯ ಹೆಚ್ಚಿಸಲು ಸಾವಯವವಲ್ಲದ ಬೆಳವಣಿಗೆ ತಂತ್ರಗಳನ್ನು ಅನುಸರಿಸಿತು. ಈ ವಿಧಾನ ಆರಂಭದಲ್ಲಿ ಫಲ ನೀಡಿದರೂ, ಅಂತಿಮವಾಗಿ ಗಂಭೀರ ಹಣಕಾಸು ಸಮಸ್ಯೆ ಉಂಟುಮಾಡಿತು; ಅಂತಿಮವಾಗಿ ವೈಫಲ್ಯಕ್ಕೆ ಕಾರಣವಾಯಿತು.

ಕೋವಿಡ್‌ ಸಾಂಕ್ರಾಮಿಕವು ಶೈಕ್ಷಣಿಕ ತಂತ್ರಜ್ಞಾನದ ಸ್ಟಾರ್ಟ್‌ಅಪ್‌ಗಳಿಗೆ ತ್ವರಿತವಾಗಿ ಬೆಳೆಯಲು ಅವಕಾಶ ನೀಡಿತು. ಹೂಡಿಕೆದಾರರು ಬೈಜೂಸ್‌ ಮತ್ತಿತರ ಎಜುಟೆಕ್‌ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಮಾರ್ಕೆಟಿಂಗ್‌ಗೆ ಹೆಚ್ಚು ಹಣ ವೆಚ್ಚ ಮಾಡಿದವು. ಆದರೆ, ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಅಥವಾ ಗ್ರಾಹಕರು ಏನನ್ನು ನಿರೀಕ್ಷಿಸುತ್ತಾರೆ ಎನ್ನುವುದರ ಬಗ್ಗೆ ಸಾಕಷ್ಟು ಗಮನ ನೀಡಲಿಲ್ಲ. ಬೈಜೂಸ್ ಬಳಸಿದ ʻಎಲ್ಲರಿಗೂ ಒಂದೇ ವಿಷಯ ಒದಗಿಸುವ ವಿಧಾನʼ ಕೆಲಸ ಮಾಡಲಿಲ್ಲ; ಏಕೆಂದರೆ, ಪ್ರತಿಯೊಬ್ಬರ ಅಗತ್ಯಗಳು ವಿಭಿನ್ನವಾಗಿರುತ್ತವೆ. ದೇಶದಲ್ಲಿನ ಅನೇಕ ಎಜುಟೆಕ್‌ ಪ್ಲಾಟ್‌ಫಾರ್ಮ್‌ಗಳು ವೈಯಕ್ತೀಕರಣ ಆಯ್ಕೆಗಳನ್ನು ಹೊಂದಿಲ್ಲ. ಉತ್ಪನ್ನದಲ್ಲಿ ಅನನ್ಯತೆಯಿಲ್ಲದೆ ಇರುವುದು ಮತ್ತು ಸ್ಪರ್ಧೆಗೆ ಹೊಂದಿಕೊಳ್ಳದ ಕಾರಣ ಬೈಜು ಮಾರುಕಟ್ಟೆ ಪಾಲನ್ನು ಕಳೆದುಕೊಂಡಿತು.

ಬೈಜುಸ್ ಸೇರಿದಂತೆ ಅನೇಕ ಎಜುಟೆಕ್ ಕಂಪನಿಗಳ ಉತ್ಪನ್ನಗಳ ಬೆಲೆ ದುಬಾರಿಯಾದ್ದರಿಂದ, ಕಡಿಮೆ ಆದಾಯ ಹೊಂದಿರುವವರಿಗೆ ಕೈಗೆಟಕುವುದಿಲ್ಲ. ಈ ಕಂಪನಿಗಳು ತಾಂತ್ರಿಕ ಸಮಸ್ಯೆ, ಗ್ರಾಹಕರ ಕೆಟ್ಟ ಅನುಭವ ಮತ್ತು ನಕಾರಾತ್ಮಕ ಕೆಲಸದ ವಾತಾವರಣದಂತಹ ಸಮಸ್ಯೆಗಳನ್ನು ಎದುರಿಸುತ್ತಿವೆ; ಇದರಿಂದ ಬಳಕೆದಾರರು ಮತ್ತು ಮಧ್ಯಸ್ಥಗಾರರ ವಿಶ್ವಾಸವನ್ನು ಕಳೆದುಕೊಳ್ಳುವಂತಾಗಿದೆ. ದೇಶದಲ್ಲಿ 13,000ಕ್ಕೂ ಹೆಚ್ಚು ಎಜುಟೆಕ್ ಕಂಪನಿಗಳಿದ್ದು, ಬೈಜೂಸ್ ಈ ಕ್ಷೇತ್ರದಲ್ಲಿ ಹೂಡಿಕೆಯ ಶೇ.65 ಅನ್ನು ಪಡೆದುಕೊಂಡಿದೆ. ಶೇ.80ರಷ್ಟು ಎಜುಟೆಕ್‌ ಸ್ಟಾರ್ಟ್‌ಅಪ್‌ಗಳಲ್ಲಿ ಎರಡನೇ ಸುತ್ತಿನ ಬಳಿಕ ಹೂಡಿಕೆ ನಡೆದಿಲ್ಲ.

ಅನೇಕ ಎಜುಟೆಕ್‌ ಕಂಪನಿಗಳು ಯಶಸ್ಸು ಸಾಧಿಸಿದವರನ್ನು ಅನುಕರಿಸಲು ನಡೆಸಿ ಪ್ರಯತ್ನಗಳು ವಿಫಲವಾಗಿವೆ. ಅಲ್ಪಾವಧಿಯಲ್ಲಿ ಲಾಭ ಗಳಿಸುವ ಬದಲು ದೀರ್ಘಕಾಲ ಕಾರ್ಯಸಾಧ್ಯವಾಗಿ ಉಳಿಯಲು ಗಮನಹರಿಸಬೇಕಿದೆ; ಈ ವಿಧಾನವು ಹಣಕಾಸು ನಿರ್ವಹಣೆಯಲ್ಲಿ ಚಾತುರ್ಯ, ಜಾಹೀರಾತು ವೆಚ್ಚದ ನಿಯಂತ್ರಣ ಮತ್ತು ನಿಧಾನವಾದ, ನೈಸರ್ಗಿಕ ಬೆಳವಣಿಗೆಯನ್ನು ಒಳಗೊಂಡಿರುತ್ತದೆ. ಕೆಲವು ಕಂಪನಿಗಳಲ್ಲಿ ಆರಂಭದಲ್ಲಿ ಸಾಕಷ್ಟು ಹೂಡಿಕೆಯಾದರೂ, ಹೆಚ್ಚು ಜನರ ನೇಮಕ ಅಥವಾ ಶೀಘ್ರ ಬೆಳವಣಿಗೆಗೆ ಪ್ರಯತ್ನಿಸುವ ಮೂಲಕ ಹಣ ವ್ಯರ್ಥ ಮಾಡಲಾಯಿತು. ಪ್ರತಿಯೊಬ್ಬ ವಿದ್ಯಾರ್ಥಿಯ ಅಗತ್ಯಗಳು ಬೇರೆ ಇರುತ್ತವೆ; ಆದ್ದರಿಂದ ವೈಯಕ್ತಿಕ ಅಗತ್ಯಗಳನ್ನು ಪೂರೈಸುವ ಕಲಿಕೆ ಸಾಮಗ್ರಿಗಳು ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸುತ್ತವೆ ಮತ್ತು ಉತ್ತಮ ಕಲಿಕಾ ಫಲಿತಾಂಶ ನೀಡುತ್ತವೆ. ಹಾನಿಕರ ಕೆಲಸದ ವಾತಾವರಣದಿಂದ ಮತ್ತು ತಮ್ಮ ಉತ್ಪನ್ನಗಳನ್ನು ಖರೀದಿಸುವಂತೆ ಪೋಷಕರ ಮೇಲೆ ಒತ್ತಡ ಹೇರುವ ಮೂಲಕ ಬೈಜೂಸ್ ದೊಡ್ಡ ತಪ್ಪು ಮಾಡಿದೆ.

ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿನ ಖಾತ್ರಿ ನೀಡಲಾಗುತ್ತಿತ್ತು. ಇದರಿಂದ ಕಂಪನಿಯ ವಿಶ್ವಾಸಾರ್ಹತೆ ಕಡಿಮೆಯಾಗಿದೆ. ಶಿಕ್ಷಣ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ನ್ಯಾಯಸಮ್ಮತವಾದ ಬೆಲೆ ನಿಗದಿಗೊಳಿಸಬೇಕು. ಇದರಿಂದ ಶೈಕ್ಷಣಿಕ ಅಂತರ ಕಡಿಮೆ ಮಾಡಲು ಮತ್ತು ಹಿಂದುಳಿದವರನ್ನು ತಲುಪಲು ನೆರವಾಗುತ್ತದೆ; ಗ್ರಾಹಕರ ಸಂಖ್ಯೆಯನ್ನು ವಿಸ್ತರಿಸುತ್ತದೆ. ಸಾಂಪ್ರದಾಯಿಕ ಕಲಿಕಾ ವಿಧಾನಗಳನ್ನು ಉತ್ತಮಗೊಳಿಸಲು ತಂತ್ರಜ್ಞಾನವನ್ನು ಬಳಸಬೇಕು; ಅವುಗಳನ್ನು ಸಂಪೂರ್ಣವಾಗಿ ಬದಲಾಯಿಸಬಾರದು. ಆನ್‌ಲೈನ್ ಮತ್ತು ಆಫ್‌ಲೈನ್ನ ಸಂಯೋಜಿತ ಮಾದರಿಯು ಕಲಿಕೆ ವಾತಾವರಣ ಸೃಷ್ಟಿಸಬಹುದು.

ಮಾರಾಟ, ಮಾರ್ಕೆಟಿಂಗ್ ಮತ್ತು ವ್ಯವಹಾರದಲ್ಲಿ ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುವುದು, ಮುಕ್ತ ಮತ್ತು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವುದು ಮತ್ತು ಗ್ರಾಹಕರ ಬಗ್ಗೆ ಪ್ರಾಮಾಣಿಕ ಕಾಳಜಿ ವಹಿಸುವುದರಿಂದ ವಿಶ್ವಾಸವನ್ನು ಮರಳಿ ಪಡೆಯಬಹುದು. ಇದು ಯಶಸ್ಸನ್ನು ಖಾತರಿ ಪಡಿಸುತ್ತದೆ. ಸಂವಹನ ಮತ್ತು ಮಾರ್ಗದರ್ಶನ ಎಜುಟೆಕ್ ವ್ಯವಸ್ಥೆಯ ಪ್ರಮುಖ ಭಾಗವಾಬೇಕು. ಬೈಜೂಸ್ ವೈಫಲ್ಯವು ಗ್ರಾಹಕರ ಅಗತ್ಯಗಳನ್ನು ಪರಿಗಣಿಸದೆ, ವೇಗವಾಗಿ ಬೆಳೆಯುವುದರಿಂದ ಆಗುವ ಅಪಾಯದ ಸ್ಪಷ್ಟ ಸೂಚನೆಯಾಗಿದೆ. ದೇಶಿ ಎಜುಟೆಕ್ ಕಂಪನಿಗಳು ಈ ತಪ್ಪುಗಳಿಂದ ಕಲಿಯಬೇಕಿದೆ.


Read More
Next Story