ಹವಾಮಾನ ಬದಲಾವಣೆ ಸಮಸ್ಯೆ: ಬಜೆಟ್‌ ನಿರಾಶಾದಾಯಕ ಪ್ರತಿಕ್ರಿಯೆ
x
2023ರ ಸಿಕ್ಕಿಂ ಪ್ರವಾಹ

ಹವಾಮಾನ ಬದಲಾವಣೆ ಸಮಸ್ಯೆ: ಬಜೆಟ್‌ ನಿರಾಶಾದಾಯಕ ಪ್ರತಿಕ್ರಿಯೆ


ಹವಾಮಾನ ಬದಲಾವಣೆಗೆ ಭಾರತದ ಅಸಮರ್ಪಕ ಪ್ರತಿಕ್ರಿಯೆಯವನ್ನು 2024-25ರ ಬಜೆಟ್ ಮತ್ತೊಮ್ಮೆ ಎತ್ತಿ ತೋರಿಸಿದೆ. ಬಜೆಟ್ ಭಾಷಣದಲ್ಲಿ ಹವಾಮಾನ ವೈಪರೀತ್ಯ, ವಾಯುಮಾಲಿನ್ಯ ಸೇರಿದಂತೆ ಹವಾಮಾನ ಸವಾಲುಗಳ ಬಗ್ಗೆ ಯಾವುದೇ ಉಲ್ಲೇಖ ಇರಲಿಲ್ಲ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ 3,265 ಕೋಟಿ ರೂ. ನಿಗದಿಪಡಿಸಿದೆ, ಇದು ಹಿಂದಿನ ಬಜೆಟ್‌ ಗಿಂತ ಕೇವಲ 34 ಕೋಟಿ ರೂ. ಹೆಚ್ಚಳ. ಮುಂದಿನ ಏಳು ವರ್ಷಗಳಲ್ಲಿ ಹವಾಮಾನ ಬದಲಾವಣೆಯನ್ನು ಎದುರಿಸಲು ಅಗತ್ಯವಿರುವ 57 ಲಕ್ಷ ಕೋಟಿ ರೂ.ಗಿಂತ ಬಹಳ ಕಡಿಮೆ.

ಕನಿಷ್ಠ ಹೆಚ್ಚಳ: ದೇಶದ ನಗರಗಳಲ್ಲಿ ವಾಯು ಮಾಲಿನ್ಯ ಕಡಿಮೆ ಮಾಡುವ ಗುರಿಯುಳ್ಳ ಮಹತ್ವದ ಉಪಕ್ರಮವಾದ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮಕ್ಕೆ ಕಳೆದ ವರ್ಷ 290 ಕೋಟಿ ರೂ. ನೀಡಲಾಗಿತ್ತು. ಆದರೆ, ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆ, ಹಿಮಾಲಯ ಅಧ್ಯಯನ ಮಿಷನ್ ಮತ್ತು ರಾಷ್ಟ್ರೀಯ ಅಳವಡಿಕೆ ನಿಧಿಯಂತಹ ಪ್ರಮುಖ ಕಾರ್ಯಕ್ರಮಗಳಿಗೆ ಯಾವುದೇ ಅನುದಾನ ನಿಗದಿಪಡಿಸಲಿಲ್ಲ. ಸಮುದ್ರ ಮಟ್ಟ ಹೆಚ್ಚಳದಿಂದ ದೇಶದ ಕರಾವಳಿಯ 7,500 ಕಿಮೀ ವ್ಯಾಪ್ಪಿರತಿಯಲ್ಲಿರುವ ಸಮುದಾಯಗಳು ಅಪಾಯಕ್ಕೆ ಸಿಲುಕಿವೆ. ಇತ್ತೀಚಿನ ಐಪಿಸಿಸಿ ವರದಿ ಪ್ರಕಾರ, ಮಾನವ-ಪ್ರೇರಿತ ಹವಾಮಾನ ಬದಲಾವಣೆಯಿಂದಾಗಿ ಸಮುದ್ರ ಮಟ್ಟ ಏರಿಕೆ ತೀವ್ರಗೊಳ್ಳುತ್ತಿದೆ. ಇದು ಪರಿಸರ ಮತ್ತು ಜೈವಿಕ ವೈವಿಧ್ಯತೆಗೆ ಅಪಾಯವನ್ನುಂಟು ಮಾಡುತ್ತದೆ.

ರಾಷ್ಟ್ರೀಯ ಮೊಸಳೆ ಮಿಷನ್ (ಎನ್ಸಿಎಂ) ಮೀನುಗಾರರ ಜೀವನೋಪಾಯವನ್ನು ರಕ್ಷಿಸುವ, ಮೊಸಳೆಗಳ ಆವಾಸಸ್ಥಾನಗಳನ್ನು ಸಂರಕ್ಷಿಸುವ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಮಹತ್ವದ ಕಾರ್ಯಕ್ರಮ. ಇದಕ್ಕೆ ಬಜೆಟ್‌ ನಲ್ಲಿ ಕೇವಲ 50 ಕೋಟಿ ರೂ. ನೀಡಲಾಗಿದೆ. ತಮಿಳುನಾಡು ಕಳೆದ ವರ್ಷ ಚಂಡಮಾರುತದಿಂದ 11,000 ಕೋಟಿ ರೂ. ನಷ್ಟ ಅನುಭವಿಸಿತು.

ಐಎಂಡಿಗೆ ಕಡಿಮೆ ಅನುದಾನ: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕೇವಲ 537 ಕೋಟಿ ರೂ. ಕೊಡಲಾಗಿದೆ, ಇದು ಹಿಂದಿನ ವರ್ಷಕ್ಕಿಂತ ಕಡಿಮೆ. ಹವಾಮಾನ ಬದಲಾವಣೆ ಯುಗದಲ್ಲಿ ಐಎಂಡಿ ಪಾತ್ರ ನಿರ್ಣಾಯಕವಾದುದು. ಉಷ್ಣ ಅಲೆಗಳು, ಭಾರೀ ಮಳೆ ಮತ್ತು ಇತರ ಸ್ವಾಭಾವಿಕ ಘಟನೆಗಳ ಬಗ್ಗೆ ಎಚ್ಚರಿಕೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇತ್ತೀಚೆಗೆ 199 ಜಿಲ್ಲೆಗಳಲ್ಲಿ ಕೃಷಿ ಕೇಂದ್ರಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಐಎಂಡಿ ನಿರ್ಧರಿಸಿದೆ. ಈ ಕೇಂದ್ರಗಳು ವಿಭಾಗ ಮಟ್ಟದಲ್ಲಿ ಲಕ್ಷಾಂತರ ರೈತರಿಗೆ ಹವಾಮಾನ ಸಲಹೆ ನೀಡುತ್ತಿದ್ದವು ಮತ್ತು ಬೆಳೆ ನಷ್ಟ ಕಡಿಮೆ ಮಾಡಲು ಸಹಾಯ ಮಾಡುತ್ತಿದ್ದವು.

ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್‌ಎಫ್) ಗೆ ಕೂಡ ಕಡಿತ ಮೊತ್ತ ನೀಡಲಾಗಿದೆ. ವಿಪತ್ತು ನಿರ್ವಹಣೆಗೆ 37.78 ಕೋಟಿ ರೂ. ಮತ್ತು ರಾಷ್ಟ್ರೀಯ ಚಂಡಮಾರುತ ಅಪಾಯ ತಗ್ಗಿಸುವ ಯೋಜನೆಗೆ ಕೇವಲ 10 ಕೋಟಿ ರೂ. ನೀಡಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಸಮುದ್ರದ ಜೀವವೈವಿಧ್ಯಕ್ಕೆ ಅಪಾಯವನ್ನುಂಟುಮಾಡುವ ಆಳ ಸಮುದ್ರದ ಕಾರ್ಯಾಚರಣೆಗೆ 600 ಕೋಟಿ ರೂ. ನಿಗದಿಪಡಿಸಲಾಗಿದೆ. ಇದು ಹಿಂದಿನ ಬಜೆಟ್‌ಗಿಂತ 150 ಕೋಟಿ ರೂ. ಹೆಚ್ಚಳ.

ಆಸ್ತಿ ಪಾಸ್ತಿಗೆ ಧಕ್ಕೆ: ಹವಾಮಾನ ಬದಲಾವಣೆಯಿಂದ ಚಂಡಮಾರುತ, ಪ್ರವಾಹ, ಸುಂಟರಗಾಳಿ ಮತ್ತು ಬರಗಾಲ ಮತ್ತಿತರ ತೀವ್ರ ಹವಾಮಾನ ಘಟನೆಗಳು ಹೆಚ್ಚುತ್ತಿವೆ. ವಿಪತ್ತು ನಿರ್ವಹಣಾ ಇಲಾಖೆ ಪ್ರಕಾರ, 2022ರಲ್ಲಿ 314 ದಿನ ಹವಾಮಾನ ವೈಪರೀತ್ಯ ಕಂಡುಬಂದಿದೆ. 214 ದಿನ ಪ್ರವಾಹ, ಭೂಕಂಪ ಅಥವಾ ಭಾರೀ ಮಳೆ, 66 ದಿನ ಉಷ್ಣ ಅಲೆಗಳು, 185 ದಿನ ಗುಡುಗು-ಸಿಡಿಲು, 46 ದಿನ ಶೀತ ಅಲೆಗಳು ಸಂಭವಿಸಿದವು. 3026 ಸಾವು,1.96 ದಶಲಕ್ಷ ಹೆಕ್ಟೇರ್ ಬೆಳೆ ಹಾನಿ ಮತ್ತು 423 ಸಾವಿರ ಮನೆಗಳು ಹಾನಿಗೊಳಗಾದವು. ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ವರದಿ ಪ್ರಕಾರ, 2021ರಲ್ಲಿ ಪ್ರವಾಹದಿಂದ 3.2 ಶತಕೋಟಿ ಡಾಲರ್‌ ನಷ್ಟ ಉಂಟಾಗಿದೆ. ಏಷ್ಯಾ ದಲ್ಲಿ ಭಾರತವು ಚೀನಾ ನಂತರ ಎರಡನೇ ಸ್ಥಾನದಲ್ಲಿದೆ. ದೇಶ ಅಂದಾಜು 26,268 ಕೋಟಿ ರೂ. ನಷ್ಟ ಅನುಭವಿಸಿದೆ(ಸ್ಟೇಟ್ ಆಫ್ ದಿ ಕ್ಲೈಮೇಟ್ ಇನ್ ಏಷ್ಯಾ 2021) . 2021 ರಲ್ಲಿ ಅಸ್ಸಾಂನಲ್ಲಿ ಸಂಭವಿಸಿದ ಪ್ರವಾಹದಿಂದ 88 ಲಕ್ಷ ಜನ ತೊಂದರೆಗೀಡಾದರು ಮತ್ತು10,000 ಕೋಟಿ ರೂ. ಮೌಲ್ಯದ ಹಾನಿ ಸಂಭವಿಸಿತು. ವಿಶ್ವ ಸಂಸ್ಥೆ ಪ್ರಕಾರ, 2018ರ ಪ್ರವಾಹದಿಂದ ಕೇರಳದಲ್ಲಿ ಆದ ನಷ್ಟ 31,000 ಕೋಟಿ ರೂ.,

ಆರ್ಥಿಕ ಪರಿಣಾಮ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ವರದಿ ಪ್ರಕಾರ, 2019 ರಲ್ಲಿ ಹವಾಮಾನ ಸಂಬಂಧಿತ ಘಟನೆಗಳಿಂದ ದೇಶ 69 ಶತಕೋಟಿ ಡಾಲರ್‌ ನಷ್ಟ ಅನುಭವಿಸಿದೆ. ಉಷ್ಣ ಸಂಬಂಧಿತ ಉತ್ಪಾದಕತೆ ಕುಸಿತದಿಂದ ದೇಶ 34 ದಶಲಕ್ಷ ಉದ್ಯೋಗಗಳನ್ನು ಕಳೆದುಕೊಳ್ಳಬಹುದು. ಮೆಕಿನ್ಸೆ ಅಧ್ಯಯನದ ಪ್ರಕಾರ, ಶಾಖ ಮತ್ತು ಆರ್ದ್ರತೆಯಿಂದಾಗುವ ಉದ್ಯೋಗ ನಷ್ಟದಿಂದ ದೇಶದ ಜಿಡಿಪಿ ಮೇಲೆ ಶೇ. 4.5ರಷ್ಟು ಪರಿಣಾಮ ಬೀರಬಹುದು.

ದೇಶ ಹವಾಮಾನ ಬದಲಾವಣೆಯಿಂದ ನಷ್ಟ ಅನುಭವಿಸಿದ ದೇಶಗಳಿಗೆ ಧನಸಹಾಯ ನೀಡಬೇಕೆಂದು ಹೇಳುತ್ತದೆ. ಹವಾಮಾನ ಬದಲಾವಣೆ ಪರಿಣಾಮಗಳಿಂದ ದುರ್ಬಲ ಸಮುದಾಯಗಳನ್ನು ರಕ್ಷಿಸಲು ಸುಸ್ಥಿರ ಕ್ರಮಗಳನ್ನು ಅಳವಡಿಸಿಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಹ್ಯುಮ್ಯಾನಿಟಿ ಆಂಡ್‌ ನೇಚರ್‌ ಪ್ರಕಾರ, ದಿನವೊಂದಕ್ಕೆ 1.9 ಡಾಲರ್‌ ಆದಾಯ ಗಳಿಸುವ ಕುಟುಂಬಗಳಿಗೆ ಹೋಳಿಸಿದರೆ, ಹೆಚ್ಚು ಆದಾಯದ ಕುಟುಂಬಗಳು ಶೇ.20ರಷ್ಟು ಅಧಿಕ ಇಂಗಾಲ ಹೊರಸೂಸುತ್ತವೆ.

ದುರ್ಬಲ ಗುಂಪುಗಳು: ಹವಾಮಾನ ಬದಲಾವಣೆ ಎಲ್ಲರಿಗೂ ಒಂದೇ ರೀತಿ ಹಾನಿ ಮಾಡುವುದಿಲ್ಲ.ಬಡವರು, ದೂರ ಪ್ರದೇಶಗಳಲ್ಲಿರುವವರು ಅಥವಾ ಕರಾವಳಿಯಲ್ಲಿ ವಾಸಿಸುವವರು ತೀವ್ರ ಪರಿಣಾಮ ಎದುರಿಸುತ್ತಾರೆ. ಇವರಿಗೆ ಹವಾಮಾನ ವಿಪತ್ತುಗಳನ್ನು ನಿಭಾಯಿಸಲು ಸಂಪನ್ಮೂಲ ಅಥವಾ ಆರ್ಥಿಕ ಬಲದ ಕೊರತೆಯಿದೆ. ದುರ್ಬಲರ ಅಗತ್ಯಗಳಿಗೆ ಗಮನ ಕೊಡುವುದು ಮತ್ತು ಹವಾಮಾನ ಬದಲಾವಣೆ ಬಗ್ಗೆ ನೀತಿ ಅಭಿವೃದ್ಧಿಪಡಿಸುವುದು ಅತ್ಯಗತ್ಯ. ಆದರೆ, ಪ್ರಸ್ತುತ ನೀತಿಗಳು ಮುಖ್ಯವಾಗಿ ಶ್ರೀಮಂತ ವರ್ಗವನ್ನು ಬೆಂಬಲಿಸುತ್ತವೆ. ರಸ್ತೆ ಮತ್ತು ಸಾರಿಗೆ ಸಚಿವಾಲಯಕ್ಕೆ ಬಜೆಟ್‌ನಲ್ಲಿ 2,78,000 ಕೋಟಿ ರೂ. ನೀಡಲಾಗಿದೆ; ಇದು ಆರೋಗ್ಯ ಸಚಿವಾಲಯಕ್ಕೆ ಮೀಸಲಿಟ್ಟ 87,656 ಕೋಟಿ ರೂ.ಗಿಂತ ಶೇ.217 ಅಧಿಕ. ಬಜೆಟ್ ಹಂಚಿಕೆ ಹವಾಮಾನ ಬದಲಾವಣೆ ಉಪಕ್ರಮಗಳು ಮತ್ತು ಸಾಮಾಜಿಕ ನ್ಯಾಯದ ತತ್ವಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ.

ಇದು ಮಧ್ಯಂತರ ಬಜೆಟ್ ಆಗಿದ್ದು,ಚುನಾವಣೆ ಫಲಿತಾಂಶದ ನಂತರ ಹೊಸ ಬಜೆಟ್ ಘೋಷಣೆಯಾಗಲಿದೆ. ನ್ಯಾಯೋಚಿತ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಖಾತ್ರಿಗೊಳಿಸುವ ಸಾಮಾನ್ಯ ಆದರೆ ವಿಭಾಗಗೊಂಡ ಜವಾಬ್ದಾರಿ(ಸಿಬಿಡಿಆರ್)‌ ನ್ನು ಅಳವಡಿಸಿಕೊಳ್ಳಬೇಕಿದೆ.

(ಲೇಖನದಲ್ಲಿರುವ ಮಾಹಿತಿ, ಆಲೋಚನೆ ಅಥವಾ ಅಭಿಪ್ರಾಯಗಳು ಲೇಖಕರವು; ಅವು ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ.)

Read More
Next Story