
ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ಬಿಜೆಪಿ ಕಠಿಣ ನಿಲುವು ತಳೆಯುತ್ತಿದ್ದರೆ, ಆರ್‌ಎಸ್‌ಎಸ್ ಮುಖ್ಯಸ್ಥರು ಅವರೊಂದಿಗೆ ಕನೆಕ್ಟ್ ಆಗುವ ಪ್ರಯತ್ನ ನಡೆಸಿದ್ದಾರೆ.
ಬಲಪಂಥೀಯ ಹಿಂದೂ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್)ದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಮೈಕೊಡವಿಕೊಂಡು ಎದ್ದಿದ್ದಾರೆ. ನೀಟ್ ಪೇಪರ್ ಸೋರಿಕೆ ವಿರುದ್ಧ ಪ್ರತಿಭಟಿಸಲು ನವದೆಹಲಿಯ ಜಂತರ್ ಮಂತರ್‌ನಲ್ಲಿ ಜಮಾಯಿಸಿ ಜುಲೈ 20ರಂದು ಪೊಲೀಸ್ ದೌರ್ಜನ್ಯವನ್ನು ಎದುರಿಸಿದ ಜೆನ್-ಜೀ (Gen-Z) ಯುವಕರ ಪರವಾಗಿಯೇ ಅವರು ಧ್ವನಿ ಎತ್ತಿದ್ದಾರೆ.
ನಮ್ಮ ಯುವಕರ ಕಳಕಳಿ ನಿಜವಾದವುಗಳು. ಒಂದು ವೇಳೆ ತಾವು ವಿಶ್ವಾಸವಿಡುವ ಒಂದು ಗುಂಪು ಏನಾದರೂ ಇದ್ದರೆ ಅದು ಜೆನ್-ಜೀ ಮತ್ತು ಅಲ್ಫಾ ತಲೆಮಾರಿಗೆ ಸೇರಿದ ಗುಂಪು ಎಂದು ಅವರು ಹೇಳಿದರು. ಕಳೆದವಾರ ಮುಂಬೈನಲ್ಲಿ ನೀತಾ ಮುಖೇಶ್ ಅಂಬಾನಿ ಪ್ರಾಯೋಜಿತ ʼಇಂಡಿಯಾಸ್ ಇಂಟರ್ನ್ಯಾಷನಲ್ ಮೂವ್ಮೆಂಟ್ ಟು ಯುನೈಟೆಡ್ ನೇಷನ್ಸ್ (ಐಐಎಂಯುಎನ್) ಎಂಬ ಲಾಭರಹಿತ ಸಂಸ್ಥೆ ಎರ್ಪಡಿಸಿದ ಕಾರ್ಯಕ್ರಮದ ವೇಳೆ ಅವರು ಮಾತನಾಡಿದರು.
ಆಕ್ರೋಶಕ್ಕೆ ಒಳಗಾದ ಯುವಪಡೆಯನ್ನು ತಲುಪುವ ವಿಚಾರದಲ್ಲಿ ಭಾಗವತ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಮೋದಿ ಅವರು ತಮ್ಮ ಇನ್ಸ್ಟಾಗ್ರಾಮ್ ವೀಡಿಯೊ ಸಂದೇಶಗಳ ಮೂಲಕ ಪ್ರತಿಭಟನಕಾರರ ಜೊತೆ ಹಿರಿಯಣ್ಣನ ಧಾಟಿಯಲ್ಲಿ ಮಾತನಾಡಿದರೆ, ಆರ್‌ಎಸ್‌ಎಸ್ ಮುಖ್ಯಸ್ಥರು ಸ್ನೇಹಪರ ಹಿರಿಯ ವ್ಯಕ್ತಿಯ ಫಾತ್ರವನ್ನು ನಿರ್ವಹಿಸಿದ್ದಾರೆ. ಬಹುಷಃ ಬಂಡಾಯಗಾರ ಯುವಕರ ಪೋಷಕ ಸಂತನ ಪಾತ್ರವಹಿಸುವ ಇರಾದೆ ಆರ್‌ಎಸ್‌ಎಸ್‌ಗೆ ಇದ್ದಂತೆ ಕಾಣುತ್ತಿದೆ. ಹಿಂದೂ ಸಿದ್ಧಾಂತವನ್ನೇ ಪಸರಿಸುವ ಉದ್ದೇಶವನ್ನು ಹೊಂದಿದ ಸಂಸ್ಥೆಯೊಂದು ಹೊಸ ಅನುಯಾಯಿಗಳನ್ನು ಹುಡುಕಲು ಹಾಗೂ ಹೊಸ ನೇಮಕಾತಿಯನ್ನು ಮಾಡಲು ಇದುವೇ ಸರಿಯಾದ ಕಾರ್ಯತಂತ್ರ ಎಂದು ಅದು ಭಾವಿಸಿದಂತಿದೆ. ಭಾಗವತ್ ಅವರ ದೃಷ್ಟಿಯಲ್ಲಿ ಯುವಕರು ʼಆತ್ಮಗಳ ಕೊಯ್ಲುʼ ಮಾಡಲು ಸಿದ್ಧರಾಗಿರುವಂತೆ ಕಂಡಿದ್ದರೆ ಆಶ್ಚರ್ಯವಿಲ್ಲ.
ಧ್ವನಿ-ಕಾರ್ಯತಂತ್ರ ಭಿನ್ನ
ಪ್ರಧಾನಿ ಮೋದಿ ಅವರ ಮೇಲಿನ ಅಚಲ ನಿಷ್ಠೆಯ ಫಲವಾಗಿ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ರಾಜಕೀಯವಾಗಿ ಒಂದು ಸಂದಿಗ್ಧ ಹಾಗೂ ವಿಚಿತ್ರ ಪರಿಸ್ಥಿತಿ ಎದುರಾಗಿದೆ. ಪ್ರಧಾನಿ ಮತ್ತು ಪಕ್ಷದಲ್ಲಿನ ಅವರ ಸಹೋದ್ಯೋಗಿಗಳು ಪ್ರತಿಭಟನಾಕಾರರ ವಿಚಾರದಲ್ಲಿ ಸದ್ದಿಲ್ಲದೆ ಹಗೆತನ ಸಾಧಿಸುತ್ತ ಬಂದಿದ್ದಾರೆ. ಮೋದಿಯೂ ಸೇರಿದಂತೆ ಅಧಿಕಾರದಲ್ಲಿರುವ ಪ್ರತಿಯೊಬ್ಬರನ್ನೂ ಗೇಲಿ ಮಾಡುತ್ತ ತರುಣರು ಮಾಡುತ್ತಿರುವ ಮೀಮ್ಸ್ ಹಾಗೂ ರೀಲ್ಸ್ ಬಗ್ಗೆ ಅವರಿಗೆ ಅಪಾರ ಕೋಪವಿದೆ. ಇಂತಹ ಯುವ ಪ್ರತಿಭಟನಾಕಾರರ ಕೋಪವನ್ನು ತಣಿಸುವ ಮೂಲಕ ಬಿಜೆಪಿ ಮತ್ತು ಮೋದಿ ಅವರಿಗೆ ಸಹಾಯ ಮಾಡಲು ಭಾಗವತ್ ಅವರು ಸ್ನೇಹಹಸ್ತ ಚಾಚಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಎರಡೂ ಒಂದೇ ಹಾದಿಯಲ್ಲಿದೆ ಎಂಬುದು ನಿಜವಾದರೂ ಅವುಗಳ ಧ್ವನಿ ಮತ್ತು ಕಾರ್ಯತಂತ್ರ ಮಾತ್ರ ಭಿನ್ನವಾಗಿದೆ.
ಬಿಜೆಪಿಯ ಹಲವು ಯುವ ಸಂಸದರು, ಮೋದಿ ಬೆಂಬಲಿಗರು ಹಾಗೂ ಮೋದಿ ಪರವಾದ ಟೆಲಿವಿಷನ್ ಸುದ್ದಿ ವಾಹಿನಿಗಳಲ್ಲಿ ಬಹಳ ಗಟ್ಟಿ ಧ್ವನಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸುವ, ಸದಾ ಭ್ರಮಾಲೋಕದಲ್ಲಿ ವಿಹರಿಸುವ ಹಿಂದೂ ಮಧ್ಯಮವರ್ಗದ ಬುದ್ಧಿಜೀವಿಗಳು ಜೆನ್-ಜೀ ಪ್ರತಿಭಟನಾಕಾರರ ವಿರುದ್ಧ ದ್ವೇಷ ಸಾಧಿಸುತ್ತ ಬಂದವರು. ಅದನ್ನು ಬಿಟ್ಟು ಭಾಗವತ್ ಅವರು ಯುವಕರ ಕಡೆಗೆ ರಾಜಿಮಾಡಿಕೊಳ್ಳುವ ಧೋರಣೆಯನ್ನು ತಳೆದಿರುವುದು ಸಮಾಧಾನಕರ ಸಂಗತಿ.
ಈ ಬೆಳವಣಿಗೆಯನ್ನು ಗಮನಿಸಿದರೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಎಂದಿನಂತೆ ʼಕೆಟ್ಟ ಪೊಲೀಸ್- ಒಳ್ಳೆಯ ಪೊಲೀಸ್ʼ ಆಟ ಆಡುತ್ತಿವೆ ಎಂದು ಆರ್‌ಎಸ್‌ಎಸ್-ಬಿಜೆಪಿ ಟೀಕಾಕಾರರು ಖಂಡಿತವಾಗಿ ಹೇಳುತ್ತಾರೆ. ಆರ್‌ಎಸ್‌ಎಸ್ ಆಗಲಿ, ಬಿಜೆಪಿಯಾಗಲಿ ತಮ್ಮ ನಡುವಿನ ಅನ್ಯೋನ್ಯ ಬಾಂಧವ್ಯವನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಮತ್ತು ತಾವು ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುತ್ತಿದ್ದೇವೆ ಎಂಬ ವ್ಯಾಖ್ಯಾನವನ್ನು ಅವುಗಳು ಸಾರಾಸಗಟಾಗಿ ತಳ್ಳಿಹಾಕುತ್ತವೆ.
ಇಂತಹ ಸ್ಥಿತಿಯಲ್ಲಿ ಎದುರಾಗುವ ಮುಖ್ಯ ಪ್ರಶ್ನೆ ಏನೆಂದರೆ ಮೋದಿ ಅವರ ಮೊಂಡು ಧೋರಣೆ ವಿಫಲವಾದ ಕಡೆ ಭಾಗವತ್ ಅವರ ಸ್ನೇಹಪರ ನಡೆ ಯಶಸ್ವಿಯಾದೀತೇ ಎಂಬುದು. ಪ್ರಧಾನಿ ಅವರು ಇನ್ಸ್ಟಾಗ್ರಾಮ್ನಲ್ಲಿ ಹರಿಯಬಿಟ್ಟ ವಿಡಿಯೋಗಳು ಯಾವುದೇ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿದೆ. ಅದರ ಅರಿವು ಸ್ವತಃ ಅವರಿಗೇ ಆಗಿದೆ ಮತ್ತು ಅವರ ಸಹಾಯಕರಿಗೂ ಮನವರಿಕೆಯಾಗಿದೆ. ಅಲ್ಲದೆ ಪ್ರತಿಭಟನಾಕಾರರು ಮೋದಿ ಅವರ ನೀರಸ ಸಂದೇಶಗಳಿಗೆ ಯಾವುದೇ ರೀತಿಯಲ್ಲಿ ಮಣಿದಿಲ್ಲ.
ಜಾತಿ ಯುದ್ಧಗಳಲ್ಲಿ ನಂಬಿಕೆಯಿಲ್ಲ
ಯೂಟ್ಯೂಬ್‌ನಲ್ಲಿ ಈಗ ಲಭ್ಯವಿರುವ ಹಲವಾರು ಧ್ವನಿ ತುಣುಕುಗಳ ಪೈಕಿ ಒಂದರಲ್ಲಿ, ಭಾಗವತ್ ಅವರು ಆರ್‌ಎಸ್‌ಎಸ್ ಅನ್ನು "ಕಟ್ಟರ್ ಹಿಂದೂ" ಎಂದು ವ್ಯಾಖ್ಯಾನಿಸಿದ್ದಾರೆ ಮತ್ತು ಆರ್‌ಎಸ್‌ಎಸ್‌ನ ಅನೇಕ ಟೀಕಾಕಾರರು ಹೇಳುವಂತೆ ಅದು "ಮುಸ್ಲಿಂ ವಿರೋಧಿ" ಅಲ್ಲ ಎಂದೂ ಒತ್ತಿಹೇಳಿದ್ದಾರೆ.
"ಕಟ್ಟರ್ ಹಿಂದೂ" ಎಂಬ ಪದಕ್ಕೆ ಅತ್ಯಂತ ಉದಾರವಾದ ಅರ್ಥ "ಸಾಂಪ್ರದಾಯಿಕ ಹಿಂದೂ" ಎಂದಾಗಿದೆಯಾದರೂ, ಅದರ ಸರಿಯಾದ ಅರ್ಥ "ನಿಷ್ಠುರ ಹಿಂದೂ" ಎಂದೂ ಆಗುತ್ತದೆ. ಜಂತರ್ ಮಂತರ್ನಲ್ಲಿ ಮಾಧ್ಯಮಗಳೊಂದಿಗೆ ನಡೆಸಿದ ಸಂವಾದಗಳಲ್ಲಿ ಜೆನ್-Z ಯುವಕರು ತಾವು ಹಿಂದೂ-ಮುಸ್ಲಿಂ ಅಜೆಂಡಾವನ್ನು ನಂಬುವುದಿಲ್ಲ ಎಂದು ಅಸಂಖ್ಯಾತ ಬಾರಿ ಪುನರುಚ್ಚರಿಸಿದ್ದಾರೆ. ದಲಿತರ ಮೇಲಿನ ದಬ್ಬಾಳಿಕೆ ಮತ್ತು "ಬ್ರಾಹ್ಮಣವಾದ"ದ ಕ್ರೌರ್ಯದ ಬಗ್ಗೆ ಅವರಲ್ಲಿ ಅನೇಕರು ಮುಕ್ತವಾಗಿ ಮಾತನಾಡಿದ್ದಾರೆ. ಹಾಗೆಯೇ, ಜಾತಿ ಯುದ್ಧಗಳನ್ನು ಮಾಡಲು ಆಸಕ್ತಿ ಇಲ್ಲದ ಕಾರಣ ಮೀಸಲಾತಿಯನ್ನು ವಿರೋಧಿಸಿದವರೂ ಅವರಲ್ಲಿ ಸಾಕಷ್ಟು ಜನರಿದ್ದರು.
ಈ ಯುವಕರು ಒಡೆದಾಳುವ ಹಿಂದೂ-ಮುಸ್ಲಿಂ ರಾಜಕಾರಣವನ್ನು ವಿರೋಧಿಸುತ್ತಿರುವ ಕಾರಣಕ್ಕೆ ಈ ಬಲಪಂಥೀಯ ಸಂಘಟನೆಗಳಿಗೆ ಅಸಮಾಧಾನವಿದ್ದರೂ, ಅವರನ್ನು ಜಾತಿ ಚರ್ಚೆಗೆ ಎಳೆದು ತರುವ ಸಾಹಸಕ್ಕೆ ಆರ್‌ಎಸ್‌ಎಸ್ ಅಥವಾ ಬಿಜೆಪಿ ಎರಡೂ ಕೈಹಾಕುವುದಿಲ್ಲ. ಆ ಎರಡೂ ಸಂಘಟನೆಗಳು ಇನ್ನೂ ಯುವಕರ ಮನಸ್ಥಿತಿಯೊಂದಿಗೆ ಸಾಗಲು ಸಿದ್ಧವಿವೆ. ಯುವಕರ ವಿಚಾರದಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ಇರುವ ದೊಡ್ಡ ಸವಾಲು ಏನೆಂದರೆ, ಅವರು ಗುರುತಿನ ಚೀಟಿ ಹೊಂದಿರುವ ಉದಾರವಾದಿಗಳಲ್ಲ ಅಥವಾ ಎಡಪಂಥೀಯರಲ್ಲ. ಅವರು ಯಾವುದೇ ರಾಜಕೀಯ ಉದ್ದೇಶವಿಲ್ಲದೆ ವಿಶಾಲ ಮನೋಭಾವದ ಸ್ವಾಭಾವಿಕ ಉದಾರವಾದಿಗಳು.
ತಲೆಮಾರುಗಳ ನಡುವಿನ ಅಂತರ
ಶಿಕ್ಷಣ ವ್ಯವಸ್ಥೆ ಮತ್ತು ಅರ್ಥ ವ್ಯವಸ್ಥೆಯ ಸ್ಥಿತಿಗತಿಯ ಬಗ್ಗೆ ಅವರಲ್ಲಿ ಅಪಾರವಾದ ಕಳಕಳಿಯಿದೆ. ಪ್ರತಿಭಟಿಸುವುದು, ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸುವುದು ಮತ್ತು ಹಾಗೆ ಮಾಡುವ ಹಕ್ಕಿನಂತಹ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳ ಬಗ್ಗೆ ಅವರು ಸ್ವಾಭಾವಿಕವಾಗಿಯೇ ಉತ್ಸುಕರಾಗಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ವ್ಯಕ್ತಿಗಿಂತ ರಾಷ್ಟ್ರವನ್ನು ಮೇಲಿಡುವುದು ಯುವಕರ ಕರ್ತವ್ಯ ಎಂದು ಹೇಳಿದಾಗ, ಯುವಕರು ಅಂತಹ ಉತ್ಸಾಹಹೀನ ಉಪದೇಶಗಳನ್ನು ಗೇಲಿ ಮಾಡುತ್ತಾರೆ. ಅವರು ತಮ್ಮ ದೇಶದಲ್ಲಿ ಜನಿಸಿರುವುದರಿಂದ ಅದನ್ನು ಪ್ರೀತಿಸುತ್ತಾರೆಯೇ ಹೊರತು, ಆ ಬಗ್ಗೆ ದೊಡ್ಡ ಸದ್ದು ಮಾಡಿ ತೋರಿಸಿಕೊಳ್ಳುವ ಅಗತ್ಯವಿಲ್ಲ ಎಂದು ಭಾವಿಸುತ್ತಾರೆ.
ಆರ್‌ಎಸ್‌ಎಸ್ ಮತ್ತು ಬಿಜೆಪಿಯ, ಅಂದರೆ ಭಾಗವತ್ ಮತ್ತು ಮೋದಿ ಅವರ ಕಾರ್ಯತಂತ್ರಗಳು ಭಿನ್ನವಾಗಿರುವಂತೆ ತೋರುತ್ತಿವೆ. ಜೆನ್-Z ದಾರಿ ತಪ್ಪಿದೆ ಎಂದೂ, ಅಗತ್ಯವಿದ್ದರೆ ಬಲ ಪ್ರಯೋಗಿಸಿ ಅವರನ್ನು ವಿಧೇಯದ ಹಾದಿಗೆ (ಬಲಪಂಥೀಯ ಹಾದಿಗೆ) ಮರಳಿ ತರಬೇಕು ಎಂಬ ಭಾವನೆ ಬಿಜೆಪಿ ಅಂತರಂಗದಲ್ಲಂತೂ ಇದ್ದೇ ಇದೆ.
ಪ್ರತಿಭಟನಾಕಾರರ ಮಾತುಗಳನ್ನು ಕೇಳಲು ಮತ್ತು ಅವರ ಮುಕ್ತ ರಾಜಕೀಯ ಚರ್ಚೆಗಳಿಗೆ ಕಿವಿಗೊಡಲು ಬಿಜೆಪಿ ಯಾವುದೇ ಕಾರಣಕ್ಕೂ ಸಿದ್ಧವಿಲ್ಲ. ಅದು ಮುಂದಿನ ದಿನಗಳಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಮಾದರಿಯ ಕೆಲವು ರಾಜಕೀಯ ಕಾರ್ಯಕ್ರಮ ಮತ್ತು ಪ್ರಣಾಳಿಕೆಯನ್ನು ರೂಪಿಸಬಹುದು. ಆದರೆ ಜುಲೈ 20 ರಂದು ಭಾಗವಹಿಸಿದಂತೆ, ಅದಕ್ಕೆ ಸ್ಪಂದಿಸುವ ಸಾಧ್ಯತೆಯಿರುವ ಸಾವಿರಾರು ಯುವಕರು ಸಂಪೂರ್ಣ ಸ್ವತಂತ್ರವಾಗಿರಲಿದ್ದಾರೆ.
ರಾಜಕೀಯ ಸಮೀಕರಣ
ಇದು ಸಿಜೆಪಿಯ ಅಭಿಜಿತ್ ದೀಪ್ಕೆ ಮತ್ತು ಅವರ ತಂಡಕ್ಕೆ ಒಂದು ಸವಾಲನ್ನು ಒಡ್ಡುತ್ತದೆ, ಏಕೆಂದರೆ ಅವರು ತಮ್ಮೊಂದಿಗೆ ತೊಡಗಿಸಿಕೊಳ್ಳುವವರ ಭಾವನೆಗಳು ಮತ್ತು ಆಕ್ರೋಶವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಬೇಕಾಗುತ್ತದೆ. ದೀಪ್ಕೆ ಅಂಡ್ ಕೋ ಅಥವಾ ಮೋದಿ ಮತ್ತು ಭಾಗವತ್ ಅವರ ಇಚ್ಛೆಯಂತೆ ಯುವಕರು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ಬಿಡುವುದಿಲ್ಲ. ಜೆನ್-Z ಪ್ರತಿಭಟನಾಕಾರರು ಹೆಚ್ಚಿನ ಸದ್ದುಗದ್ದಲವಿಲ್ಲದೆ ಮನೆಗೆ ಹೋಗಬೇಕೆಂದು ಬಿಜೆಪಿ ಬಯಸಿದರೆ, ಭಾಗವತ್ ಅವರು ಅವರನ್ನು ಆರ್‌ಎಸ್‌ಎಸ್ "ಶಾಖೆ" ಸೇರುವಂತೆ ಮಾಡಲು ಬಯಸುತ್ತಾರೆ. ಆದರೆ ದೀಪ್ಕೆ ಸರ್ಕಾರದ ಮೇಲೆ ಒತ್ತಡ ಹೇರಲು ಅವರನ್ನು ಬೀದಿಯಲ್ಲೇ ಉಳಿಸಿಕೊಳ್ಳಲು ಬಯಸಬಹುದು.
ಒಂದೆಡೆ ದೀಪ್ಕೆ ಮತ್ತು ಅವರ ತಂಡ, ಮತ್ತೊಂದೆಡೆ ಭಾಗವತ್ ಹಾಗೂ ಆರ್‌ಎಸ್‌ಎಸ್ ನಡುವಿನ ಸಮೀಕರಣವು ಕುತೂಹಲಕಾರಿಯಾಗಿದೆ. ಸಿಜೆಪಿಯ ಸ್ವತಂತ್ರ ಸ್ಥಾನಕ್ಕೆ ಧಕ್ಕೆಯಾಗದಂತೆ ದೀಪ್ಕೆ ಅವರು ಆರ್‌ಎಸ್‌ಎಸ್ ಮತ್ತು ಭಾಗವತ್ ಅವರ ಬೆಂಬಲ ಹಾಗೂ ಪ್ರೋತ್ಸಾಹವನ್ನು ಸ್ವಯಂಪ್ರೇರಿತವಾಗಿ ಒಪ್ಪಿಕೊಳ್ಳಬಹುದು. ಆದರೆ ಮೋದಿ ಮತ್ತು ಬಿಜೆಪಿ ಪಕ್ಷವು ಸಿಜೆಪಿಯನ್ನು ರಾಜಕೀಯ ಪ್ರತಿಸ್ಪರ್ಧಿಯಾಗಿ, ಅಂದರೆ ಮತ್ತೊಂದು ಆಮ್ ಆದ್ಮಿ ಪಾರ್ಟಿ (ಎಎಪಿ) ರೂಪದಲ್ಲಿ ಕಾಣುವುದರಿಂದ ಅದರೊಂದಿಗೆ ನಿರಂತರವಾಗಿ ಶತ್ರುತ್ವವನ್ನೇ ಸಾಧಿಸುತ್ತವೆ. ಈ ಎಲ್ಲಾ ಸಮೀಕರಣಗಳಲ್ಲಿ, ಸ್ವಯಂಪ್ರೇರಿತ ಮತ್ತು ಸಿದ್ಧಾಂತದ ಬಂಧನಕ್ಕೆ ಒಳಪಡದ ಯುವ ಪ್ರತಿಭಟನಾಕಾರರು ನಿರ್ಣಾಯಕ 'ಎಕ್ಸ್ ಫ್ಯಾಕ್ಟರ್' ಆಗಿ ಉಳಿಯಲಿದ್ದಾರೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


