
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ಅವರು ಐದು ವರ್ಷಗಳ ಕಾಲ ತಮಿಳು ನಾಡಿನಲ್ಲಿ ಹೊತ್ತುಕೊಂಡು ಓಡಾಡುತ್ತಿದ್ದ ʼಕೇಸರಿʼಯ ಹಂಗನ್ನು ತೊರೆದು ಹೊರಬಂದಿದ್ದಾರೆ. ಅದರಿಂದ ಸಂಪೂರ್ಣ ಕಳಚಿಕೊಂಡುಬರಲು ಶಕ್ಯರಾಗುವರೇ ಈಗಿರುವ ಪ್ರಶ್ನೆ.
ಕೆ.ಅಣ್ಣಾಮಲೈ ಜೂನ್ ಐದರಂದು ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. ಅವರು ನಲವತ್ತು ವಸಂತವನ್ನು ತುಂಬಿದ ಮರುದಿನವೇ ಈ ನಿರ್ಧಾರಕ್ಕೆ ಬಂದಿದ್ದಾರೆ. ಹಾಗೆ ಅವರು ಅಲ್ಲಿಂದ ಕಳಚಿಕೊಂಡ ಕೆಲವೇ ತಾಸುಗಳಲ್ಲಿ ಅವರೇ ಸ್ಥಾಪಿಸಿದ ʼವಿ ದ ಲೀಡರ್ಸ್ʼ ವೇದಿಕೆಗೆ ಲಕ್ಷಾಂತರ ಹೊಸ ಸ್ವಯಂಸೇವಕರು ಸೇರ್ಪಡೆಗೊಂಡಿದ್ದಾರೆ. ಅತ್ತ ಅಣ್ಣಾಮಲೈ ಮುಖ ತಿರುವಿಸಿ ಹೊರಟ ದಿನವೇ ಬಿಜೆಪಿ ತನ್ನ ಮುಂದಿನ ದಾರಿಯನ್ನು ಕಂಡುಕೊಂಡಿತ್ತು.
ಹಾಗಂತ ಯಾರಿಗಾದರೂ ಮುನಿಸಿತ್ತೇ? ಯಾರಲ್ಲಾದರೂ ಕಹಿ ಭಾವನೆಗಳಿದ್ದವೇ? ಬಿಲ್ಕುಲ್ ಇರಲಿಲ್ಲ. ಆದರೆ ಇದು ಬಹಳಷ್ಟು ಸಂಗತಿಗಳನ್ನು ಹೇಳುವುದು ಮಾತ್ರ ದಿಟ.
ಭಾರತದಲ್ಲಿ ರಾಜಕೀಯ ರಾಜೀನಾಮೆಗಳು ಸಾಮಾನ್ಯವಾಗಿ ಸಭ್ಯವಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಗಳನ್ನು ಕರೆದು ಹಳೆಯ ಹಳವಂಡಗಳು, ದ್ವೇಷಗಳನ್ನೆಲ್ಲ ಒಮ್ಮೆಯೇ ಕಕ್ಕಲಾಗುತ್ತದೆ. ಬಣಗಳು ಪರ-ವಿರೋಧಗಳಾಗಿ ಸೆಟದು ನಿಲ್ಲುತ್ತವೆ. ಜೊತೆಗೆ ಪಕ್ಷಗಳು ಕನಿಷ್ಠ ವಾರಗಳ ಕಾಲವಾದರೂ ಡ್ಯಾಮೇಜ್ ಕಂಟ್ರೋಲ್ ಕೆಲಸಗಳಲ್ಲಿ ತೊಡಗಿಕೊಳ್ಳುತ್ತವೆ. ಆದರೆ ಅಣ್ಣಾಮಲೈ ಅವರ ನಿರ್ಗಮನದಿಂದ ಇಂತಹ ಯಾವುದೇ ಘಟನೆಗಳು ನಡೆಯಲೇ ಇಲ್ಲ.
ಬಿಜೆಪಿ ಸಾಫ್ಟ್ ಕಾರ್ನರ್
ಪಕ್ಷ ತೊರೆದು ಹೊರನಿಂತ ಅಣ್ಣಾಮಲೈ ಅವರನ್ನು ಬಿಜೆಪಿ ವಿದ್ಯುಕ್ತವಾಗಿ ʼಮುಕ್ತಗೊಳಿಸಿದೆ.ʼ ಈ ಪದವನ್ನು ಸಾಮಾನ್ಯವಾಗಿ ಒಂದು ಅವಧಿ ಮುಗಿಸಿದ ನೌಕರರಿಗೆ ಬಳಕೆ ಮಾಡಲಾಗುತ್ತದೆ. ಬಂಡಾಯವೆದ್ದು ಹೊರಗೆ ಕಾಲಿಟ್ಟ ನಾಯಕನಿಗಲ್ಲ. 2024ರ ಡಿಸೆಂಬರ್ ತಿಂಗಳಿನಲ್ಲೇ ಅವರು ಪಕ್ಷದ ನಾಯಕರಿಗೆ ಇಂತಹುದೊಂದು ಸೂಚನೆಯನ್ನು ನೀಡಿದ್ದರು. ಹಾಗಿದ್ದರೂ ಚುನಾವಣಾ ಕರ್ತವ್ಯವನ್ನು ಮೊದಲು ಪೂರೈಸುವಂತೆ ಬಿಜೆಪಿ ವರಿಷ್ಠರು ತಾಕೀತು ಮಾಡಿದ್ದರು. ತಮಿಳು ನಾಡು ಬಿಜೆಪಿ ಅಧ್ಯಕ್ಷರು ಈ ನಿರ್ಗಮನವನ್ನು ʼಅಪ್ರಸ್ತುತ ವಿದ್ಯಮಾನʼ ಎಂದು ಕರೆದಿದ್ದಾರೆಯೇ ವಿನಾ ಯಾರೂ ಬಾಗಿಲನ್ನು ರಪ್ಪಂತ ಮುಚ್ಚಲು ಹೋಗಿಲ್ಲ.
ಯಾವುದೇ ಒಬ್ಬ ಪ್ರಮುಖ ವ್ಯಕ್ತಿ ಹೊರಟು ನಿಂತಾಗ ಯಾವ ಪಕ್ಷವೂ ಹೀಗೆ ವರ್ತಿಸುವುದಿಲ್ಲ. ಬದಲಾಗಿ ಒಬ್ಬ ವ್ಯಕ್ತಿ ಪಕ್ಷದ ಒಳಗಿರುವುದಕ್ಕಿಂತ ಹೊರಗಿದ್ದು ಕೆಲಸ ಮಾಡುವುದೇ ಹೆಚ್ಚು ಉಪಯುಕ್ತ ಎಂದು ಅರಿವಾದಾಗ ಮಾತ್ರ ಹೀಗೆ ವರ್ತಿಸುತ್ತದೆ.
ಕಳೆದ ಕೆಲವು ದಶಕಗಳ ಅವಧಿಯಲ್ಲಿ ತಮಿಳುನಾಡಿನಲ್ಲಿ ಹೇಗಾದರೂ ಮಾಡಿ ನೆಲೆ ಕಂಡುಕೊಳ್ಳಲು ಬಿಜೆಪಿ ಮಾಡದ ಸಾಹಸಗಳಿಲ್ಲ. ದುರದೃಷ್ಟವಶಾತ್, ಅದಕ್ಕೆ ಯಾವುದೇ ಗಮನಾರ್ಹ ಫಲಿತಾಂಶ ಸಿಕ್ಕಿಲ್ಲ. 2026ರ ಚುನಾವಣಾ ಫಲಿತಾಂಶವಂತೂ ಅದರ ಪಾಲಿಗೆ ಅತ್ಯಂತ ನಿರಾಶಾದಾಯಕವಾಗಿತ್ತು.
ಇಲ್ಲಿನ ಸಮಸ್ಯೆ ಪ್ರಯತ್ನದ ಕೊರತೆಯಲ್ಲ, ಬದಲಾಗಿ 'ಗುರುತಿನ' ಮತ್ತು ಅಸ್ತಿತ್ವದ ಪ್ರಶ್ನೆ. ಹಿಂದಿ ಮತ್ತು ಹಿಂದುತ್ವವನ್ನೇ ಆಧಾರವಾಗಿಟ್ಟುಕೊಂಡ ಪಕ್ಷಕ್ಕೆ, ಈ ಎರಡೂ ಅಂಶಗಳು ಸಾಂಸ್ಕೃತಿಕ ಪ್ರತಿರೋಧವನ್ನು ಹುಟ್ಟುಹಾಕುವ ತಮಿಳುನಾಡಿನಲ್ಲಿ ಒಂದು ರಚನಾತ್ಮಕ ಮಿತಿ ಇದ್ದೇ ಇದೆ. ತಮಿಳುನಾಡು ತಿರಸ್ಕರಿಸಿದ್ದ ಪಕ್ಷಕ್ಕೆ ತಮಿಳು ಮುಖವನ್ನು ನೀಡುವ ಮೂಲಕ ಆ ಮಿತಿಯನ್ನು ಕಡಿಮೆ ಮಾಡುವುದು ಬಿಜೆಪಿಯಲ್ಲಿ ಅಣ್ಣಾಮಲೈ ಅವರ ಕೆಲಸವಾಗಿತ್ತು. ಸಹಜವಾಗಿಯೇ, ಅವರು ಬಿಂಬಿಸುವ ಕೆಲಸದಲ್ಲಿ ಸಮರ್ಥರಾಗಿದ್ದರು. ಆದರೆ, ಸೀಟುಗಳನ್ನು ಗೆಲ್ಲುವಷ್ಟು ಅದು ಸಾಕಾಗಲಿಲ್ಲ.
ಬಿಜೆಪಿ ಮುಂದಿನ ಲೆಕ್ಕಾಚಾರ ಏನು?
ಈಗ ಅಣ್ಣಾಮಲೈ ಪಕ್ಷದಿಂದ ಹೊರಬಿದ್ದಿದ್ದಾರೆ. ಅವರು ಅಲ್ಲಿಂದ ನಿರ್ಗಮಿಸಿದ್ದರಿಂದ ಬದಲಾಗುವುದಾದರೂ ಏನು? ಬಿಜೆಪಿಯ ಒಳಗಿದ್ದುಕೊಂಡು ಮಾಡಲು ಸಾಧ್ಯವಾಗದೇ ಇದ್ದುದು ಹೊರಗಿದ್ದುಕೊಂಡು ಮಾಡಲು ಸಾಧ್ಯವಾಗುತ್ತದೆ.
ಯಾವುದೇ ಅಧಿಕೃತ ಕೇಸರಿ ಬಣ್ಣದ ಲೇಪವಿಲ್ಲದ ಹೊಸ ಪಕ್ಷವು, ಯಾವುದೇ ಮುಜುಗರವಿಲ್ಲದೆ ತಮಿಳು ಅಸ್ಮಿತೆಯ ಬಗ್ಗೆ ಮಾತನಾಡಬಹುದು. ಇದುವರೆಗೂ ಬಿಜೆಪಿಯ ಬೆಳವಣಿಗೆಗೆ ಅಡ್ಡಿಯಾಗಿದ್ದ ಸಹಜ ಪ್ರತಿರೋಧವನ್ನು ಹುಟ್ಟುಹಾಕದೆಯೇ ಡಿಎಂಕೆಯ ಮತಗಳ ಮೇಲೆ ಕಣ್ಣಿಡಬಹುದು. ವಿಜಯ್ ಅವರ 'ಟಿವಿಕೆ' ನಿರ್ಮಿಸುತ್ತಿರುವ ಆಡಳಿತ ವಿರೋಧಿ ಮತ್ತು ಕುಟುಂಬ ರಾಜಕಾರಣ ವಿರೋಧಿ ವೇದಿಕೆಯನ್ನು ಇದು ಆಕ್ರಮಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ, ವಿಜಯ್ಗಿಂತಲೂ ಯುವಕರೂ, ಆಡಳಿತಾತ್ಮಕವಾಗಿ ಹೆಚ್ಚು ವಿಶ್ವಾಸಾರ್ಹರೂ ಮತ್ತು ತಮಿಳುನಾಡಿನ ಚುನಾವಣಾ ಲೆಕ್ಕಾಚಾರದಲ್ಲಿ ಅತ್ಯಂತ ನಿರ್ಣಾಯಕವಾಗಿರುವ ಒಬಿಸಿ ಸಮುದಾಯದ ಜಾಲದಲ್ಲಿ ಬೇರೂರಿರುವ ನಾಯಕರಾಗಿ ಅಣ್ಣಾಮಲೈ ಕಾಣಿಸಿಕೊಳ್ಳಬಲ್ಲರು.
ಈ ಲೆಕ್ಕಾಚಾರವನ್ನು ಗಂಭೀರವಾಗಿ ಪರಿಗಣಿಸಲು ಕಾರಣವಾದ ಅಂಕಿ-ಅಂಶ ಇಲ್ಲಿದೆ: ತಮಿಳುನಾಡಿನ ಸುಮಾರು ಶೇ. 62 ರಷ್ಟು ಮತದಾರರು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ರಾಜಕೀಯವಾಗಿ ಇದು ಯುವ ರಾಜ್ಯವಾಗಿದೆ ಮತ್ತು ಯುವ ಮತದಾರರು ಡಿಎಂಕೆ ಯಂತ್ರ ಅಥವಾ ಎಐಎಡಿಎಂಕೆ ಪರಂಪರೆಗೆ ಅಷ್ಟೇನೂ ನಿಷ್ಠೆಯನ್ನು ಹೊಂದಿಲ್ಲದಿರುವಂತೆ ಕಾಣುತ್ತಿದೆ.
ಅಣ್ಣಾಮಲೈ ಅವರಿಗೆ 42 ವರ್ಷ. ಕಾರ್ಯಕರ್ತ ಆಧಾರಿತ ರಾಜಕೀಯ, ನಾಯಕತ್ವದ ತರಬೇತಿ ಮತ್ತು ತಮ್ಮ ಪಕ್ಷವು ಯಾರಿಗೂ ವೈಯಕ್ತಿಕ ಆಸ್ತಿಯಾಗುವುದಿಲ್ಲ ಎಂಬ ಭರವಸೆಯನ್ನು ಅವರು ನೀಡುತ್ತಿದ್ದಾರೆ. ಕರುಣಾನಿಧಿ ಮತ್ತು ಎಂಜಿಆರ್ ಅವರ ರಾಜಕೀಯ ಶೈಲಿಯನ್ನು ನೋಡುತ್ತಾ ಬೆಳೆದವರಿಗಿಂತ ಭಿನ್ನವಾಗಿ, ಮೊದಲ ಬಾರಿಗೆ ಮತ ಚಲಾಯಿಸುವ 18 ವರ್ಷದ ಯುವಕನ ಮೇಲೆ ಈ ಮಾತುಗಳು ಭಿನ್ನವಾದ ಪ್ರಭಾವ ಬೀರುತ್ತವೆ.
ಅನುಮಾನ ಮೂಡಿಸಿದ ಸಂಗತಿಗಳು
ಈಗ ಅಣ್ಣಾಮಲೈ ಉದ್ದೇಶಪೂರ್ವಕವಾಗಿ ಏನನ್ನು ಮಾಡುತ್ತಿಲ್ಲ ಎಂಬುದನ್ನು ಗಮನಿಸಿ. ಅವರು 2029ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದೆ, ಕೇವಲ 2031ರ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಆ ಆಯ್ಕೆಯು ಬಹಳಷ್ಟು ವಿಷಯಗಳನ್ನು ನಮಗೆ ಸೂಚ್ಯವಾಗಿ ತಿಳಿಸುತ್ತದೆ.
ಒಂದು ವೇಳೆ 2029ರಲ್ಲಿ ಸಂಸತ್ತಿನ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಅದು ರಾಷ್ಟ್ರೀಯ ವಿಷಯ, ಮೋದಿ, ಬಿಜೆಪಿ ಮತ್ತು ಐದು ವರ್ಷಗಳ ಕಾಲ ಸೈದ್ಧಾಂತಿಕವಾಗಿ ತಾವು ಸೇವೆ ಸಲ್ಲಿಸಿದ ಸರ್ಕಾರದ ನೀತಿಗಳ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳುವ ಒತ್ತಡಕ್ಕೆ ಅವರು ಸಿಲುಕುತ್ತಾರೆ. ಆಗ ಅವರು ಒಂದೋ ಅವುಗಳನ್ನು ಸಮರ್ಥಿಸಿಕೊಳ್ಳಬೇಕು, ಇಲ್ಲವೇ ವಿರೋಧಿಸಬೇಕಾಗುತ್ತದೆ.
ನಿಧಾನಗತಿಯ ರಾಜಕೀಯ ಸಾವು
ಅಥವಾ ಪರ್ಯಾಯವಾಗಿ ಇದನ್ನು ಸಂಪೂರ್ಣವಾಗಿ ಬೇರೆ ರೀತಿಯಲ್ಲಿ ಓದಬಹುದು, ಮತ್ತು ಈ ವಿಶ್ಲೇಷಣೆ ಕೂಡ ಸಮರ್ಥನೀಯವಾಗಿದೆ. ಅಣ್ಣಾಮಲೈ ತಮ್ಮ ಭವಿಷ್ಯದ ಬಗ್ಗೆ ಸ್ವತಃ ಲೆಕ್ಕಾಚಾರ ಹಾಕಿ, ಬಿಜೆಪಿಯಲ್ಲೇ ಮುಂದುವರಿಯುವುದು ನಿಧಾನಗತಿಯ ರಾಜಕೀಯ ಸಾವಿಗೆ ಸಮಾನ ಎಂದು ತೀರ್ಮಾನಿಸಿರಬಹುದು.
ಎಐಎಡಿಎಂಕೆ ಒಂದು ಸತ್ವವಿಲ್ಲದ ಶಂಖವಾಗಿದೆ. ಡಿಎಂಕೆ ಒಂದು ಕುಟುಂಬ ನಿರ್ವಹಿಸುವ ವ್ಯವಹಾರ. ಸ್ಟಾಲಿನ್ ಎಂಬ ಉಪನಾಮ ಇಲ್ಲದವರಿಗೆ ಅಲ್ಲಿ ಅವಕಾಶಗಳು ಕಡಿಮೆಯಾಗುತ್ತಿವೆ. ಹೊಸ ರಾಜಕೀಯ ಶಕ್ತಿಗಳು ನಿರೀಕ್ಷೆಗಿಂತ ವೇಗವಾಗಿ ಕಾರ್ಯಕರ್ತರನ್ನು ಸೆಳೆಯಬಲ್ಲವು ಎಂಬುದನ್ನು ವಿಜಯ್ ತೋರಿಸಿಕೊಟ್ಟಿದ್ದಾರೆ. ಜನಸಂಖ್ಯೆಯಲ್ಲಿ ಅಗಾಧವಾಗಿದ್ದು, ಸಾಂಸ್ಥಿಕವಾಗಿ ಸೂಕ್ತ ಪ್ರಾತಿನಿಧ್ಯ ಹೊಂದದೇ ಇರುವ ಓಬಿಸಿ ರಾಜಕೀಯ ಕ್ಷೇತ್ರಕ್ಕೆ ಯಾವುದೇ ನಿರ್ದಿಷ್ಟ ನೆಲೆಯಿಲ್ಲ.
42 ವರ್ಷದ ಮಹತ್ವಾಕಾಂಕ್ಷೆಯ ವ್ಯಕ್ತಿಯೊಬ್ಬರಿಗೆ, ಜನಬೆಂಬಲ ಮತ್ತು ಐದು ವರ್ಷಗಳ ಕಾಲ ರಾಜ್ಯವ್ಯಾಪಿ ಓಡಾಡಿದ ಅನುಭವಿದ್ದಾಗ, ಬಿಜೆಪಿ ಅವರಿಗೆ ಒಂದು ಉಡಾವಣಾ ವೇದಿಕೆಯಾಗುವ ಬದಲು ಮಿತಿಯನ್ನು ಹೇರುವ ಸಾಧನವಾಗಿತ್ತು. ಪಕ್ಷ ತೊರೆದಿದ್ದು ದ್ರೋಹವಲ್ಲ; ಅದೊಂದು ಪಕ್ಕಾ ಲೆಕ್ಕಾಚಾರ ಅಷ್ಟೆ.
ವಾಸ್ತವದಲ್ಲಿ, ಈ ಎರಡೂ ವಿಶ್ಲೇಷಣೆಗಳು ಒಂದೇ ಸಮಯದಲ್ಲಿ ನಿಜವಾಗಿರಬಹುದು. ಇದೇ ಕಾರಣಕ್ಕೆ ಈ ನಡೆಯನ್ನು ನಿಖರವಾಗಿ ಅರ್ಥಮಾಡಿಕೊಳ್ಳುವುದು ಕಷ್ಟ ಮತ್ತು ತಮಿಳುನಾಡಿನ ರಾಜಕೀಯ ವಲಯ ಅಣ್ಣಾಮಲೈ ಅವರನ್ನು ಆತಂಕದಿಂದ ಗಮನಿಸುತ್ತಿದೆ. ಒಂದು ವೇಳೆ ಅವರು ಟಿವಿಕೆ ಪಕ್ಷವನ್ನು ದುರ್ಬಲಗೊಳಿಸಿ, ಡಿಎಂಕೆ ವಿರೋಧಿ ಮತಗಳನ್ನು ಚದುರುವಂತೆ ಮಾಡಿ, ದ್ರಾವಿಡ ಪಕ್ಷಗಳು ಸಂಪೂರ್ಣವಾಗಿ ಸೆಳೆಯಲು ಸಾಧ್ಯವಾಗದ ಓಬಿಸಿ ಸಮುದಾಯಗಳನ್ನು ಒಗ್ಗೂಡಿಸಿದರೆ, ಯಾವುದೇ ರೂಪಾಯಿ ಖರ್ಚು ಮಾಡದೆ ಅಥವಾ ತನ್ನ ಹೆಸರನ್ನು ಬಳಸದೆ ಬಿಜೆಪಿಗೆ ಲಾಭವಾಗುತ್ತದೆ. ಆಗ ರಾಜಕೀಯ ಹಿತಾಸಕ್ತಿಗಳು ಒಂದೇ ದಿಕ್ಕಿನಲ್ಲಿ ಸಾಗಲು ಯಾವುದೇ ಔಪಚಾರಿಕ ಒಪ್ಪಂದಗಳ ಅಗತ್ಯವಿರುವುದಿಲ್ಲ.
ರಾಜಕೀಯ ಜೀವನ: ಹೇರಿಕೊಂಡ ಹೊರೆ
ಆದರೆ, ಕೇವಲ ಹೊಸ ಪಕ್ಷದ ಹೆಸರಿನಿಂದ ಬಗೆಹರಿಯದ ಒಂದು ಸಮಸ್ಯೆ ಅಣ್ಣಾಮಲೈ ಅವರಿಗಿದೆ: ಅದು ಅವರ ಹಿಂದಿನ ರಾಜಕೀಯ ಜೀವನ. ತಮಿಳುನಾಡಿನಲ್ಲಿ ಬಿಜೆಪಿಯ ಅತ್ಯಂತ ಪ್ರಮುಖ ಮುಖವಾಗಿ ಕಳೆದ ಐದು ವರ್ಷಗಳನ್ನು ಕಳೆದಿದ್ದು ತಟಸ್ಥ ವಿಷಯವಲ್ಲ. ಹಿಂದಿ ಭಾಷೆ, ರಾಜ್ಯದ ಸ್ವಾಯತ್ತತೆ ಮತ್ತು ದ್ರಾವಿಡ ಸಾಂಸ್ಕೃತಿಕ ರಾಜಕಾರಣದ ಕುರಿತು ಪಕ್ಷವು ತಳೆದ ನಿಲುವುಗಳು ತಮಿಳುನಾಡಿನ ಮತದಾರರನ್ನು ದೂರವಿಟ್ಟವು. ಆ ನಿಲುವುಗಳ ಮುಂಚೂಣಿಯಲ್ಲಿ ಅಣ್ಣಾಮಲೈ ಅವರೇ ಇದ್ದರು.
ಮತದಾರರಿಗೆ ಅನೇಕ ವಿಷಯಗಳ ಬಗ್ಗೆ ಮರೆವು ಇರಬಹುದು. ಆದರೆ ತಮಿಳುನಾಡಿನಲ್ಲಿ ರಾಜಕೀಯ ಅಸ್ಮಿತೆ ಅಂತಹ ವಿಷಯಗಳಲ್ಲಿ ಒಂದಲ್ಲ ಎಂಬುದನ್ನು ಮರೆಯಬಾರದು.
ಆದ್ದರಿಂದ, ಸಮಸ್ಯೆಯೆಂದರೆ ಅವರು ಹೊತ್ತುಕೊಂಡಿರುವ ಬಿಜೆಪಿಯ ಹಳೆಯ ಹೊರೆ ಮತ್ತು ಅಣ್ಣಾಮಲೈ ಇದಕ್ಕೆ ಇನ್ನೂ ಸ್ಪಷ್ಟವಾದ ಉತ್ತರ ನೀಡಿಲ್ಲ. ಐದು ವರ್ಷಗಳ ಕಾಲ ಒಂದು ಪಕ್ಷದ ಮುಖವಾಣಿಯಾಗಿ ಕೆಲಸ ಮಾಡಿ, ನಂತರ ಜನರನ್ನು ನಿಮ್ಮನ್ನು ಅದರ ಸಂಪೂರ್ಣ ತದ್ವಿರುದ್ಧವಾದ ವ್ಯಕ್ತಿ ಎಂದು ಪರಿಗಣಿಸಿವಂತೆ ಕೇಳಲು ಸಾಧ್ಯವಿಲ್ಲ. ಬ್ರ್ಯಾಂಡಿಂಗ್ ಬದಲಾವಣೆಯು ಕೇವಲ ರಚನಾತ್ಮಕವಾಗಿರಬಾರದು, ಅದು ಸೈದ್ಧಾಂತಿಕವಾಗಿಯೂ ಇರಬೇಕು.
ಸಿದ್ಧಾಂತವಲ್ಲ ವಾಹನ ಬದಲಾಯಿತು
ಅಣ್ಣಾಮಲೈ ಅವರು ತಮ್ಮ ಇಷ್ಟೂ ವರ್ಷಗಳ ಬಿಜೆಪಿ ಸಖ್ಯದ ವೇಳೆ ಯಾವುದೇ ಸ್ಪಷ್ಟ ಸೈದ್ಧಾಂತಿಕ ಅಂತರವನ್ನು ಕಾಯ್ದುಕೊಂಡಿಲ್ಲ. ಅವರು ಕೇವಲ ವಾಹನವನ್ನು ಬದಲಾಯಿಸಿದ್ದಾರೆ, ಆದರೆ ಅವರು ಹೊರಟಿರುವ ಗಮ್ಯಸ್ಥಾನದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ವಾಸ್ತವವಾಗಿ, ತಮಿಳುನಾಡು ರಾಜಕೀಯವು ಈ ರೀತಿಯ ಮಹತ್ವಾಕಾಂಕ್ಷೆಯನ್ನು ಮೊದಲೇ ಕಂಡಿದೆ. ರಾಜಕೀಯಕ್ಕೆ ಪ್ರವೇಶಿಸುವ ವಿಚಾರದಲ್ಲಿ ರಜನೀಕಾಂತ್ ಅವರು ವರ್ಷಗಳ ಕಾಲ ಮಾತನಾಡಿದರು, ಅಂತಿಮವಾಗಿ ಪ್ರವೇಶವನ್ನೂ ಘೋಷಿಸಿದರು ಮತ್ತು ಮೊದಲ ಚುನಾವಣೆಗೆ ಮೊದಲೇ ನಿರ್ಗಮಿಸಿದರು.
ಈ ಎಲ್ಲ ಹಿನ್ನೆಲೆಯಲ್ಲಿ ಬಹುಶಃ ತಮಿಳುನಾಡು ಅಣ್ಣಾಮಲೈ ಅವರಿಂದ ನಿರೀಕ್ಷಿಸುತ್ತಿರುವುದು ಸ್ಪಷ್ಟ ರಾಜಕೀಯ ನಿಲುವನ್ನು. ಅವರಿಗೆ ಒಂದು ಇಮೇಜ್ ಇದೆ ಅನ್ನುವುದರಲ್ಲಿ ಅನುಮಾನವಿಲ್ಲ. ಸಹಜವಾಗಿ ಅವರಲ್ಲಿ ಶಕ್ತಿಯೂ ಇದೆ. ಬಹುಶಃ, ಸಂಖ್ಯೆಗಳೂ (ಬೆಂಬಲಿಗರು) ಇರಬಹುದು.
ಆದರೆ ಅವರ ಬಳಿ ಇನ್ನೂ ಇಲ್ಲದಿರುವುದು ಎಂಬುದನ್ನು ಗಮನಿಸಬೇಕು. ತಾವು ತಳೆದಿರುವ ನಿಲುವು, ತಮ್ಮ ಹಿಂದಿನ ರಾಜಕೀಯ ಜೀವನವನ್ನು ಜನರು ಏಕೆ ಪರಿಗಣಿಸಬಾರದು ಎಂಬುದಕ್ಕೆ ಪ್ರಾಮಾಣಿಕ ಮತ್ತು ಮನವೊಪ್ಪಿಸುವ ವಿವರಣೆ. ಅದೇ ಅವರ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬುದು ನಿರ್ವಿವಾದ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

