
ಭೂಮಿಕೆಯೇ ಇಲ್ಲದೆ ಸಿದ್ಧಪಡಿಸಿದ ನಾಟಕ: ತಾಳ ತಪ್ಪಿದ ಶೇಖ್ ಹಸೀನಾ ತೀರ್ಪು
ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮರಣ ದಂಡನೆ ವಿಧಿಸಿದೆ. ಜನನಾಯಕರಿಗೆ ವಿಚಾರಣೆಗೆ ಅವಕಾಶವಿಲ್ಲದಂತೆ ಶಿಕ್ಷೆ ವಿಧಿಸಿರುವುದು ವೇದಿಕೆಯೇ ಇಲ್ಲದ ರಂಗಪ್ರಸ್ತುತಿಯಂತೆ!
“ನಾನು ಢಾಕಾದಿಂದ ನೇರ ಪ್ರಸಾರವಾಗುತ್ತಿದ್ದ ಶೇಖ್ ಹಸೀನಾ ಅವರ ವಿರುದ್ಧದ ತೀರ್ಪನ್ನು ವೀಕ್ಷಿಸಿದೆ. ಸಂಪೂರ್ಣ ತೀರ್ಪು ಇನ್ನೂ ಬಿಡುಗಡೆಯಾಗಿಲ್ಲ, ಆದರೆ ಈಗಾಗಲೇ ಓದಲಾದ ಭಾಗವು ಇತಿಹಾಸ ಮರುಕಳಿಸುತ್ತಿದೆ ಎಂಬ ಬಲವಾದ ಭಾವನೆಯನ್ನು ಮೂಡಿಸಿತು. ಆ ಇಡೀ ಪ್ರಕ್ರಿಯೆಯು ನ್ಯಾಯ ನೀಡುವುದಕ್ಕಿಂತ ಹೆಚ್ಚಾಗಿ ಒಂದು ಪ್ರದರ್ಶನದಂತೆ ಭಾಸವಾಯಿತು”
ಅಂತರರಾಷ್ಟ್ರೀಯ ಕ್ರಿಮಿನಲ್ ಕಾನೂನು (ICL) ಪ್ರತಿಬಿಂಬಿಸುವ 1973ರ ಕಾಯಿದೆಯನ್ನು ವೇದಿಕೆಯೇ ಸಿದ್ಧವಿಲ್ಲದ ಒಂದು ನಾಟಕಕ್ಕೆ ಬಲವಂತವಾಗಿ ಸೇರಿಸಲಾಯಿತು ಮತ್ತು ಯೂನಸ್ ಅವರ ಮಧ್ಯಂತರ ಆಡಳಿತದ ಅಡಿಯಲ್ಲಿ ಪುನರ್ರಚನೆ ಮಾಡಲಾದ ನ್ಯಾಯಮಂಡಳಿಯು, ಅದರ ಸಾಂವಿಧಾನಿಕ ಆಧಾರವು ಹಿಂದಿಗಿಂತ ಹೆಚ್ಚು ವಿವಾದಾಸ್ಪದವಾಗಿದೆ, ಅಂತಾರಾಷ್ಟ್ರೀಯ ಕ್ರಿಮಿನಲ್ ಕಾನೂನಿನ ಸಿದ್ಧಾಂತದ ಶಿಸ್ತಿನ ಪರಿಚಯವಿರುವ ಯಾರಿಗೇ ಆದರೂ ಇದು ತೊಂದರೆ ಕೊಡುವುದಕ್ಕಾಗಿಯೇ ತನ್ನ ಮೊದಲ ತೀರ್ಪನ್ನು ನೀಡಿದೆ ಎಂಬುದು ಸ್ಪಷ್ಟವಾಗುತ್ತದೆ.
ಆರಂಭದಿಂದಲೂ, ಈ ವಿಚಾರಣೆಯು ನಿರ್ದಿಷ್ಟ ಯೋಜನೆಯನ್ನು ಹೊಂದಿತ್ತು. ಅಂತಾರಾಷ್ಟ್ರೀಯ ಅಪರಾಧಗಳ ವಿಚಾರದಲ್ಲಿ ಒಂದೇ ಒಂದು ತೀರ್ಪನ್ನೂ ಬರೆಯದ ನ್ಯಾಯಾಧೀಶರನ್ನು ಮೊದಲು ಮಧ್ಯಂತರ ಆಧಾರದ ಮೇಲೆ ಹೈಕೋರ್ಟ್ ವಿಭಾಗದಲ್ಲಿ ನೇಮಕ ಮಾಡಲಾಯಿತು ಮತ್ತು ನಂತರ ಅವರನ್ನು ತಕ್ಷಣವೇ ನ್ಯಾಯಮಂಡಳಿಗೆ ಸೇರ್ಪಡೆಗೊಳಿಸಲಾಯಿತು. ತೀರ್ಪಿಗೆ ಕೆಲವೇ ದಿನಗಳಿಗೂ ಮೊದಲು ಅವರ ಆಕಸ್ಮಿಕ ಕಾಯಂ ನೇಮಕಾತಿಯು, ನ್ಯಾಯಾಧೀಶರ ಸಮಗ್ರತೆಯ ನಿಯಮಗಳನ್ನು ಉಲ್ಲಂಘಿಸುವ ಸ್ಪಷ್ಟ ಸೂಚನೆಯಾಗಿತ್ತು.
ಕಳವಳಕಾರಿ ವಿಚಾರಣೆ
ಬಾಂಗ್ಲಾದೇಶದ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ಪ್ರಕರಣವನ್ನು ನಿರ್ಣಯಿಸುವಾಗ ದೀರ್ಘ ಮತ್ತು ನೋವಿನ ಜಾಗತಿಕ ಅನುಭವದ ಮೂಲಕ ಪರಿಷ್ಕರಿಸಲಾದ ಕಾನೂನು ಸಂಸ್ಥೆಯನ್ನು ಅದನ್ನು ನೈಜ ಸಮಯದಲ್ಲಿ ಕಲಿಯುತ್ತಿದ್ದ ನ್ಯಾಯಪೀಠಕ್ಕೆ ಹಸ್ತಾಂತರಿಸಲಾಯಿತು. ಆರೋಪಿಯ ಗೈರುಹಾಜರಿಯಲ್ಲಿ ವಿಚಾರಣೆ ನಡೆಸಿದ ರೀತಿ ಮತ್ತಷ್ಟು ಕಳವಳಕಾರಿಯಾಗಿತ್ತು. ಇಂತಹ ವಿಚಾರಣೆಗಳನ್ನು ಕೇವಲ ಎಚ್ಚರಿಕೆಯಿಂದ ವ್ಯಾಖ್ಯಾನಿಸಲಾದ ಸಂದರ್ಭಗಳಲ್ಲಿ ಮಾತ್ರ ಅಂತಾರಾಷ್ಟ್ರೀಯ ಕಾನೂನು ಅನುಮತಿ ನೀಡುತ್ತದೆ. ಅವುಗಳೆಂದರೆ, ಆರೋಪಿಗೆ ಪರಿಣಾಮಕಾರಿಯಾದ ರೀತಿಯಲ್ಲಿ ಸೂಚನೆ ತಲುಪುವಂತೆ ನೋಡಿಕೊಳ್ಳುವುದು, ಆತ ಸ್ವಯಂಪ್ರೇರಿತವಾಗಿ ಹಾಜರಾಗಲು ನಿರಾಕರಿಸುವುದು, ಆತನನ್ನು ಅರ್ಥಪೂರ್ಣವಾಗಿ ಪ್ರತಿನಿಧಿಸುವುದು ಮತ್ತು ಹಿಂದಿರುಗಿದ ನಂತರ ಆತನಿಗೆ ಸಂಪೂರ್ಣ ಮರು-ವಿಚಾರಣೆಯ ಖಾತರಿ ನೀಡುವುದು. ಈ ಪ್ರಕರಣದಲ್ಲಿ ಇಂತಹ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸಲಿಲ್ಲ. ಸರ್ಕಾರದಿಂದ ನೇಮಕ ಹೊಂದಿದ ವಕೀಲರು, ಹೆಚ್ಚಾಗಿ ರಕ್ಷಣೆ ನೀಡುವ ಬದಲು ನಾಟಕೀಯವಾಗಿ ವರ್ತಿಸುತ್ತಿದ್ದರು, ಮತ್ತು ಅವರಿಗೆ ಆರೋಪಿಯೊಂದಿಗೆ ಯಾವುದೇ ಸಂಪರ್ಕವಿರಲಿಲ್ಲ.
ರಾಜಕೀಯ ವಾತಾವರಣವು ಯಾವುದೇ ನೈಜ ರಕ್ಷಣೆ ಅಸಾಧ್ಯವಾಯಿತು. ಮಧ್ಯಂತರ ಆಡಳಿತವು ಭಯ, ಹಿಂಸೆ ಮತ್ತು ರಾಜಕೀಯ ಶುದ್ಧೀಕರಣದ ವಾತಾವರಣವನ್ನು ಸೃಷ್ಟಿಸಿದಾಗ, ಅದು ಯಾವುದೇ ಆರೋಪಿಯು ಮರಳಿ ಬರುವುದನ್ನು ತಡೆಯುತ್ತದೆ, ಅಂತಹ ಸಂದರ್ಭದಲ್ಲಿ ಗೈರುಹಾಜರಿಯನ್ನು ಸ್ವಯಂಪ್ರೇರಿತ ಎಂದು ಪರಿಗಣಿಸಲು ಸಾಧ್ಯವಿಲ್ಲ.
ಓದಲಾದ ತೀರ್ಪಿನ ಸಾಕ್ಷ್ಯಾಧಾರದ ಆಧಾರವು ತೀರಾ ತೆಳ್ಳಗಿತ್ತು. ಕುಟುಂಬದ ಹೇಳಿಕೆಗಳು, ಪ್ರತ್ಯಕ್ಷದರ್ಶಿಗಳ ನಿರೂಪಣೆಗಳು, "ಪ್ರಾಸಿಕ್ಯೂಷನ್ ಪರಿಶೀಲಿಸಿದ" ಮೂರು ಆಡಿಯೊ ತುಣುಕುಗಳು, ಪ್ರಧಾನಿಯ ಪತ್ರಿಕಾಗೋಷ್ಠಿಗಳು ಮತ್ತು ಸಹವರ್ತಿ ಸಾಕ್ಷಿಯಾಗಿ ಬದಲಾದ ಪೊಲೀಸ್ ಮುಖ್ಯಸ್ಥನ ಸಾಕ್ಷ್ಯವು ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಅಗತ್ಯವಿರುವ ಉನ್ನತ ಮಾನದಂಡವನ್ನು ಪೂರೈಸಲು ಸಾಧ್ಯವಿರಲಿಲ್ಲ. .
ಕ್ಷಮಾದಾನದ ಭರವಸೆಯ ಮೂಲಕ ಪಡೆಯಲಾದ ಅಬ್ದುಲ್ಲಾ ಅಲ್ ಮಾಮುನ್ ಅವರ ಹೇಳಿಕೆಯು, ದೃಢೀಕರಿಸದ ಮತ್ತು ಆಶ್ಚರ್ಯಕರವಾಗಿ ಸ್ವಯಂಪ್ರೇರಿತ ಎಂದು ಪ್ರಸ್ತುತಪಡಿಸಲಾದ ಹೇಳಿಕೆಯಾಗಿತ್ತು. ಇದು ಸ್ವ-ಆರೋಪಣೆ ವಿರುದ್ಧದ ಅತ್ಯಂತ ಮೂಲಭೂತ ಖಾತರಿಗಳ ಜೊತೆಗೆ (ಸಂವಿಧಾನದ 35ನೇ ವಿಧಿ) ಹೊಂದಿಕೆಯಾಗಲಿಲ್ಲ.
ಚಪ್ಪಾಳೆ ತಟ್ಟಿ ಸಂಭ್ರಮಿಸಿದರು
ಇವೆಲ್ಲಕ್ಕಿಂತ ಹೆಚ್ಚು ಆತಂಕಕಾರಿ ಸಂಗತಿ ಎಂದರೆ, ನ್ಯಾಯಮಂಡಳಿಯು ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿಯ ಮಧ್ಯಂತರ ಸತ್ಯಶೋಧನೆಗೆ ಸಂಬಂಧಿಸಿದ ದಾಖಲೆಯ ಮೇಲೆ ಅವಲಂಬಿತವಾಗಿತ್ತು. ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿ ಕ್ರಿಮಿನಲ್ ನಿರ್ಣಯಗಳನ್ನು ನೀಡುವುದಿಲ್ಲ, ಆದರೂ ನ್ಯಾಯಮಂಡಳಿಯು ಈ ಅಪ್ರಸ್ತುತ ಹೇಳಿಕೆಗಳನ್ನು ಕಾನೂನುಬದ್ಧ ತೂಕವನ್ನು ಹೊಂದಿರುವಂತೆ ಪರಿಗಣಿಸಿತು. ಪ್ರಾಸಿಕ್ಯೂಷನ್ನ ರಾಜಕೀಯ ಉತ್ಸಾಹವಂತೂ ನ್ಯಾಯಾಲಯದಲ್ಲೇ ಬಯಲಾಯಿತು, ಅಲ್ಲಿ ಮರಣದಂಡನೆಯನ್ನು ಘೋಷಿಸಿದಾಗ ಚಪ್ಪಾಳೆ ತಟ್ಟಿ ಸಂಭ್ರಮಿಸಲಾಯಿತು. ಸಾರ್ವಜನಿಕರನ್ನು ಮೆಚ್ಚಿಸುವ ಉದ್ದೇಶದಿಂದ ಶಿಕ್ಷೆಯನ್ನು ಬಳಸುವ ಒಂದು ಆತಂಕಕಾರಿ ಪ್ರದರ್ಶನ ಇದಾಗಿತ್ತು. ಕಳೆದ ಅನೇಕ ವರ್ಷಗಳಿಂದ ಬಾಂಗ್ಲಾದೇಶದ ಅಪರಾಧ ನ್ಯಾಯ ಸಂಸ್ಕೃತಿಯನ್ನು ಹಾಳುಮಾಡಿದ್ದು ಕೂಡ ಇದೇ ಮನಸ್ಥಿತಿ.
ತೀರ್ಪಿನ ಕಾನೂನು ತಾರ್ಕಿಕತೆಯೇ ಅದರ ಅತ್ಯಂತ ಆತಂಕಕಾರಿ ಲಕ್ಷಣವಾಗಿದೆ. ನ್ಯಾಯಮಂಡಳಿಯು ಜಂಟಿ ಕ್ರಿಮಿನಲ್ ಉದ್ಯಮ (ಜೆಸಿಇ) ಸಿದ್ಧಾಂತವನ್ನು ಅನ್ವಯಿಸಿದ ರೀತಿ ಅದನ್ನು ಗುರುತಿಸಲಾಗದಷ್ಟು ವಿಸ್ತರಿಸುವಂತೆ ಮಾಡಿದೆ. ಜೆಸಿಇ ಕುರಿತ ಆರಂಭಿಕ ಉತ್ಸಾಹವು ಬಹಳ ಹಿಂದೆಯೇ ಮಾಸಿಹೋಗಿದೆ, ಯಾಕೆಂದರೆ ಅದರ ವ್ಯಾಪ್ತಿಯ ಬಗ್ಗೆ ಪಾಂಡಿತ್ಯಪೂರ್ಣವಾದ ಸಂದೇಹಗಳು ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ.
ಈ ಸಿದ್ಧಾಂತವು ಉದ್ದೇಶ ಮತ್ತು ಜ್ಞಾನದ ನಡುವಿನ ಗೆರೆಯನ್ನು ಮಸುಕುಗೊಳಿಸುವ ಮೂರು ದೋಷಗಳಿಂದ ಬಳಲುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದು ಇತರರು ಊಹಿಸಲಾಗದೇ ಇರುವ ಕಾರ್ಯಗಳಿಗೂ ಅವರ ಹೊಣೆಗಾರಿಕೆಯನ್ನು ವಿಸ್ತರಿಸುತ್ತದೆ, ಸಂಕೀರ್ಣವಾದ, ಬಹು-ಪಾತ್ರಧಾರಿಳು ಶಾಮೀಲಾಗಿರುವ ಅರಾಜಕತೆಯಲ್ಲಿ (ಉದಾಹರಣೆಗೆ ಕಳೆದ ಜುಲೈ ತಿಂಗಳಲ್ಲಿ ಉಂಟಾದ ಅರಾಜಕತೆ) ಅವರ ನೈಜ ಪಾತ್ರ ಏನೇ ಇದ್ದರೂ ಪಾಲ್ಗೊಂಡ ಎಲ್ಲರನ್ನೂ ಸಮಾನವಾಗಿ ದೋಷಿಯೆಂದು ಪರಿಗಣಿಸುತ್ತದೆ. ಇಂತಹ ಸಂದರ್ಭಗಳಲ್ಲಿ, ಈ ದೋಷಗಳು ತೀವ್ರ ಪರಿಣಾಮ ಬೀರುತ್ತವೆ.
ರಂಗಪುರ, ಚಂಕಾರಪುಲ್ ಮತ್ತು ಅಶುಲಿಯಾದಲ್ಲಿ ಸಂಭವಿಸಿದ ಹತ್ಯೆಗಳು ವಿಭಿನ್ನ ಸನ್ನಿವೇಶಗಳಲ್ಲಿ ಸಂಭವಿಸಿದ್ದಾಗಿವೆ ಮತ್ತು ಶೇಖ್ ಹಸೀನಾ ಅವರು ರಾಷ್ಟ್ರವನ್ನು ತೊರೆದ ಬಳಿಕ ನಡೆದಿದ್ದು. ಅದನ್ನು ಜೆಸಿಇಯ ಭಾಗವಾಗಿ ಬಿಂಬಿಸುವುದು ಕಾನೂನಾತ್ಮಕವಾಗಿ ಅಸಮರ್ಪಕ.
ಪರಿಗಣಿಸಿದ ಅಸ್ಪಷ್ಟ ಸಾಕ್ಷಿಗಳು
ಅದೇ ರೀತಿ ನ್ಯಾಯಮಂಡಳಿಯ ನಿಯಂತ್ರಣದ ಹೊಣೆಗಾರಿಕೆಯ ಬಳಕೆಯು ಕೂಡ ಸಮರ್ಪಕವಾಗಿರಲಿಲ್ಲ. ಅಂತಾರಾಷ್ಟ್ರೀಯ ಕಾನೂನು ಮೂರು ಕಠಿಣ ಅಂಶಗಳನ್ನು ಬಯಸುತ್ತದೆ: ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಮೇಲೆ ಪರಿಣಾಮಕಾರಿ ನಿಯಂತ್ರಣವನ್ನು ಹೊಂದಿರುವ ನೈಜ ಸಂಬಂಧ, ಅಪರಾಧಗಳು ನಡೆಯುತ್ತಿವೆ ಅಥವಾ ನಡೆಯಲಿವೆ ಎಂಬ ಸ್ಪಷ್ಟ ಜ್ಞಾನ, ಮತ್ತು ತಡೆಯಲು ಅಥವಾ ಶಿಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಆಗಿರುವ ವೈಫಲ್ಯ. ಈ ಯಾವುದೇ ಅಂಶಗಳು ಜುಲೈಯಲ್ಲಿ ಸಂಭವಿಸಿದ ಘಟನೆಗಳಲ್ಲಿ ಕಂಡುಬರುವುದಿಲ್ಲ. ಹಾಗಿದ್ದೂ ಕೂಡ ನ್ಯಾಯಮಂಡಳಿಯು, ಅಸ್ಪಷ್ಟ ರಾಜಕೀಯ ಹೇಳಿಕೆಗಳು ಮತ್ತು ಢಾಕಾ ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ಇಬ್ಬರು ರಾಜಕೀಯ ಸಹೋದ್ಯೋಗಿಗಳಿಗೆ ಮಾಡಿದ ಆಡಿಯೋ ಕರೆಯನ್ನು, ಮಿಲಿಟರಿ ಕಮಾಂಡ್ ಸರಪಳಿಯ ಮೂಲಕ ರವಾನಿಸಲಾದ ಕಾರ್ಯಾಚರಣೆಯ ಆದೇಶಗಳು ಎನ್ನುವಂತೆ ಪರಿಗಣಿಸಿದೆ.
ಇದು ಸಿದ್ಧಾಂತವನ್ನೇ ತಲೆಕೆಳಗು ಮಾಡುತ್ತದೆ: ಜನ ನಾಯಕರು ಅರಾಜಕ ಪರಿಸ್ಥಿತಿಯಲ್ಲಿ ಆಕ್ರೋಶದಿಂದ ರಾಜಕೀಯ ಹೇಳಿಕೆಗಳನ್ನು ನೀಡಿದಾಗಲಲ್ಲ, ಬದಲಿಗೆ ಮುಂಬರುವ ಅಪರಾಧಗಳ ನಿರ್ದಿಷ್ಟ ಮಾಹಿತಿಯನ್ನು ತಿಳಿದೂ ನಿರ್ಲಕ್ಷ್ಯ ವಹಿಸಿದಾಗ ಮಾತ್ರ ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ. ಉಪಕುಲಪತಿ ಎ.ಎಸ್.ಎಂ. ಮೊಕ್ಸುದ್ ಕಮಾಲ್ ಅವರಿಗೆ ನೀಡಲಾದ, “ರಜಕಾರರನ್ನು ಹೇಗೆ ನೇಣಿಗೆ ಹಾಕಲಾಯಿತೋ, ಅವರಿಗೂ ಅದೇ ಗತಿ ಬರುತ್ತದೆ” ಎನ್ನಲಾದ ಹೇಳಿಕೆಯನ್ನು, ಪ್ರತಿಭಟನಾಕಾರರನ್ನು ಕೊಲ್ಲುವ ಆದೇಶ ಎಂದು ಪರಿಗಣಿಸಲಾಗಿದೆ. ಇಂತಹ ತೀರ್ಮಾನವು ಅದ್ಭುತ ಕುತರ್ಕದಿಂದ ಕೂಡಿದೆ. ಅದರಲ್ಲೂ ವಿಶೇಷವಾಗಿ ಉಲ್ಲೇಖಿಸಲಾದ ಘಟನೆಗಳು ಪ್ರತ್ಯೇಕ ಪರಿಸ್ಥಿತಿಗಳಲ್ಲಿ ಸಂಭವಿಸಿದಾಗ, ಕೆಲವು ಹಸೀನಾ ಅವರು ದೇಶವನ್ನು ತೊರೆದ ನಂತರ ನಡೆದಿದ್ದರೂ ಮತ್ತು ಅವರ ಪರಿಣಾಮಕಾರಿ ನಿಯಂತ್ರಣಕ್ಕೆ ಯಾವುದೇ ಪುರಾವೆಗಳಿಲ್ಲದಿದ್ದರೂ ಕೂಡ ಇಂತಹ ತೀರ್ಮಾನಕ್ಕೆ ಬರಲಾಗಿದೆ.
ಪ್ರಾಸಿಕ್ಯೂಷನ್ನಿನ ಸಂಪೂರ್ಣ ವಿನ್ಯಾಸದ ಮೇಲೆ ಒಂದು ಅಂತಿಮ ಪ್ರಶ್ನೆಯು ಸುಳಿದಾಡುತ್ತಿದೆ. ಚಾಂಖಾರ್ಪುಲ್ನಲ್ಲಿ ಸಂಭವಿಸಿದ ಆರು ಮಂದಿ ಸಾವು, ಆಶುಲಿಯಾದಲ್ಲಿನ ನಾಲ್ಕು ಅಥವಾ ಐದು ಮತ್ತು ರಂಗಪುರದಲ್ಲಿ ಒಂದು ಸಾವಿನ ಆರೋಪವನ್ನು ಶೇಖ್ ಹಸೀನಾ ಅವರ ಮೇಲೆ ಹೊರಿಸಲಾಗಿದೆ. ಆದರೆ ದೇಶದಾದ್ಯಂತ ಇನ್ನೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ.
ಆ ಸಾವುಗಳಿಗೆ ಯಾರು ಹೊಣೆಗಾರರು? ದೇಶದ ಅಪರಾಧ ನ್ಯಾಯಾಲಯಗಳು ಇತರೆಲ್ಲ ಪ್ರಕರಣಗಳನ್ನು ನಿಭಾಯಿಸಲು ಸಮರ್ಥವಾಗಿದ್ದರೆ, ನ್ಯಾಯಮಂಡಳಿಗೆ ಕೇವಲ ಈ ಮೂರು ಪ್ರಕರಣಗಳನ್ನು ಮಾತ್ರ ಏಕೆ ಆಯ್ಕೆ ಮಾಡಲಾಯಿತು? ಉಳಿದ ಸಾವುಗಳು ಹಸೀನಾ ಅವರ 'ಕಮಾಂಡ್' ಅಡಿಯಲ್ಲಿ ಸಂಭವಿಸಲಿಲ್ಲ ಎಂದು ಪ್ರಾಸಿಕ್ಯೂಷನ್ ನಂಬಿದೆಯೇ?
ಕಾನೂನಾತ್ಮಕ ಗೊಂದಲ
ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಇಡೀ ಚಿತ್ರಪಟವಾಗಿ ಈ ಮೂರು ಘಟನೆಗಳನ್ನು ಆಯ್ಕೆ ಮಾಡುವ ಮೂಲಕ, ಪ್ರಾಸಿಕ್ಯೂಷನ್ ಜುಲೈ ತಿಂಗಳ ಇತರ ಯಾವುದೇ ಘಟನೆಗಳಿಗೆ ಹಸೀನಾ ಅವರನ್ನು ಮತ್ತೆ ದೋಷಾರೋಪಣೆ ಮಾಡುವ ಸಾಧ್ಯತೆಯನ್ನು ಪರಿಣಾಮಕಾರಿಯಾಗಿ ಮುಚ್ಚಿ ಹಾಕಿದೆ. ವ್ಯಾಪಕ ಪ್ರಮಾಣದ ರಾಷ್ಟ್ರೀಯ ದುರಂತವೆಂದು ರೂಪಿಸಲಾದ ಒಂದು ಪ್ರಕರಣಕ್ಕೆ, ನ್ಯಾಯಮಂಡಳಿಯು ಆಯ್ಕೆಮಾಡಿಕೊಂಡಿರುವ ಪ್ರಕರಣಗಳು ಸಂಪೂರ್ಣವಾಗಿ ಬಗೆಹರಿಸದ ಕಾನೂನಾತ್ಮಕ ಗೊಂದಲವನ್ನು ಉಂಟುಮಾಡುತ್ತದೆ ಎಂಬುದು ಮಾತ್ರ ನಿಶ್ಚಿತ.
ಜುಲೈ ತಿಂಗಳ ಹಿಂಸಾಚಾರವು ವ್ಯಾಪಕ ಪ್ರಮಾಣದಲ್ಲಿತ್ತು ಎಂಬುದನ್ನು ಒಪ್ಪಿಕೊಂಡರೂ ಕೂಡ, ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಆಧಾರವನ್ನು ಸಾಬೀತುಪಡಿಸಲು, ಆ ದಾಳಿಯು ವ್ಯವಸ್ಥಿತವಾಗಿತ್ತು ಎಂಬುದಕ್ಕೆ ಪುರಾವೆಗಳ ಅಗತ್ಯವಿದೆ. ಹಾಗಾಗಿ ಈ ವಿಷಯವು ಇನ್ನಷ್ಟು ವಿವಾದಾತ್ಮಕವಾಗಿದೆ.
ಮಾನವೀಯತೆಯ ವಿರುದ್ಧದ ಅಪರಾಧಗಳು ಎಂದು ರೂಪಿಸಲಾದ ಕೃತ್ಯಗಳಿಗೆ ಮರಣದಂಡನೆ ವಿಧಿಸುವುದು, ಈ ತೀರ್ಪನ್ನು ಅಂತಾರಾಷ್ಟ್ರೀಯ ಕ್ರಮಗಳಿಂದ ಹೊರಗೆ ಇರಿಸುವಂತೆ ಮಾಡುತ್ತದೆ. ಜುಲೈ ತಿಂಗಳ ದೌರ್ಜನ್ಯಗಳಿಗೆ ಕಾನೂನು ಹೊಣೆಗಾರಿಕೆ ಅಗತ್ಯವಿದೆ ಎಂದು ನಾನು ಸ್ಪಷ್ಟವಾಗಿ ಹೇಳಬಲ್ಲೆ. ಜನರು ಸಾವನ್ನಪ್ಪಿದ್ದಾರೆ, ಬೆಂಕಿ ಹೊತ್ತಿದೆ, ಬಂದೂಕುಗಳು ಗರ್ಜಿಸಿವೆ, ಬೆಂಕಿ ಹಚ್ಚುವುದು, ದುಂಡಾವರ್ತಿ ನಡೆದಿದೆ, ಪೊಲೀಸರ ಮಿತಿಮೀರಿದ ವರ್ತನೆ ಮತ್ತು ಪ್ರತಿದಾಳಿ ಎಲ್ಲವೂ ಸಂಭವಿಸಿವೆ. ಆದರೆ ಇವು ಸರ್ಕಾರ ಮತ್ತು ಸರ್ಕಾರೇತರ ಇಬ್ಬರಿಂದಲೂ ಸಂಭವಿಸಿದ ಶ್ರೇಣೀಕೃತ ಘಟನೆಗಳಾಗಿವೆ.
ವಿಶ್ವಾಸಾರ್ಹ ತನಿಖೆಯ ಅಗತ್ಯತೆ
ನಿರ್ದಿಷ್ಟವಾದ ಕ್ರಿಮಿನಲ್ ಹೊಣೆಗಾರಿಕೆಯನ್ನು ಹೊರಿಸುವುದಕ್ಕೂ ಮೊದಲು, ಅದರಲ್ಲೂ ವಿಶೇಷವಾಗಿ ಸುದೀರ್ಘ ಸಾರ್ವಜನಿಕ ವೃತ್ತಿಜೀವನವನ್ನು ಹೊಂದಿರುವ ರಾಜಕೀಯ ನಾಯಕರ ವಿಚಾರದಲ್ಲಿ ಒಂದು ವಿಶ್ವಾಸಾರ್ಹ ಮತ್ತು ಸ್ವತಂತ್ರ ತನಿಖೆಯ ಅಗತ್ಯವಿರುತ್ತದೆ. ಆ ತನಿಖೆಯು ಆಗಸ್ಟ್ 5ರ ಮೊದಲು ಮತ್ತು ನಂತರದ ಸಮಯದ ಆದೇಶವನ್ನು ಹೊಂದಿದ್ದು, ಸೂಕ್ತ ರೀತಿಯಲ್ಲಿ ಹೊಂದಾಣಿಕೆ ಆಗುವ ರೀತಿಯಲ್ಲಿ ಇರಬೇಕು. ಆ ತನಿಖೆಯು ನಿಷ್ಪಕ್ಷಪಾತವಾಗಿ ನಡೆಯಬೇಕು ಮತ್ತು ಅಂತಾರಾಷ್ಟ್ರೀಯ ಮೇಲ್ವಿಚಾರಣೆಯಲ್ಲಿ, ವಿಶ್ವಸಂಸ್ಥೆಯ ಅಡಿಯಲ್ಲಿ ಆದರ್ಶಪ್ರಾಯವಾಗಿ ನಡೆಯಬೇಕು, ಇದರಿಂದಾಗಿ ಅದರ ತನಿಖೆ-ವಿಚಾರಣೆ ಕರಾರುವಕ್ಕಾಗಿರುತ್ತದೆ ಮತ್ತು ರಾಜಕೀಯ ಪ್ರೇರಿತವಾಗಿರುವುದಿಲ್ಲ. ಕೊಲೆ ನಡೆದಿರುವುದು ಒಂದು ಸಂಗತಿಯಾದರೆ, ಅಂತಾರಾಷ್ಟ್ರೀಯ ಕಾನೂನಿನ ಕಟ್ಟುನಿಟ್ಟಾದ ಸಿದ್ಧಾಂತಗಳ ಅಡಿಯಲ್ಲಿ ಹೊಣೆಗಾರಿಕೆಯನ್ನು ವಹಿಸುವುದು ಮತ್ತೊಂದು ಮಹತ್ವದ ಸಂಗತಿ.
ವಿವಾದಾತ್ಮಕ ಕಾನೂನುಬದ್ಧತೆಯನ್ನು ಹೊಂದಿರುವ ಸರ್ಕಾರದ ಅಡಿಯಲ್ಲಿ ಅಸಾಮಾನ್ಯ ಆತುರದಿಂದ ನೀಡಲಾದ ಈ ತೀರ್ಪು, ಯಾವುದೇ ರೀತಿಯಲ್ಲಿ ಅಂತಾರಾಷ್ಟ್ರೀಯ ವಿಶ್ವಾಸಕ್ಕೆ ಪ್ರೇರೇಪಣೆಯಾಗಿಲ್ಲ. ಇದರ ಸೈದ್ಧಾಂತಿಕ ದೌರ್ಬಲ್ಯಗಳು ಈಗಾಗಲೇ ಸೂಕ್ಷ್ಮ ಪರಿಶೀಲನೆಯಲ್ಲಿವೆ ಮತ್ತು ಇದರ ಪರಿಣಾಮಗಳು ನ್ಯಾಯಾಲಯದ ಆಚೆಗೂ ವಿಸ್ತರಿಸಿದೆ. ಈ ನಡುವೆ ಬಾಂಗ್ಲಾದೇಶವು ಶೇಖ್ ಹಸೀನಾ ಅವರನ್ನು ಗಡೀಪಾರು ಮಾಡುವಂತೆ ಭಾರತವನ್ನು ಕೇಳಿದೆ. ಆದರೂ, ರಾಜಕೀಯ ಅಪರಾಧಗಳಿಗಾಗಿ ಅಥವಾ ಆರೋಪಿಯು ಮಾನವ ಹಕ್ಕುಗಳ ಉಲ್ಲಂಘನೆಯ ನೈಜ ಅಪಾಯವನ್ನು ಎದುರಿಸುತ್ತಿರುವ ಸಂದರ್ಭಗಳಲ್ಲಿ ಭಾರತದ ಕಾನೂನು ಗಡೀಪಾರು ಮಾಡುವುದನ್ನು ನಿಷೇಧಿಸುತ್ತದೆ.
ಅರ್ಥಪೂರ್ಣ ಮೇಲ್ಮನವಿಯ ಸಾಧ್ಯತೆಗಳಿಲ್ಲದೆ ಆರೋಪಿಯ ಗೈರುಹಾಜರಿಯಲ್ಲಿ ನೀಡಲಾದ ಈ ತೀರ್ಪು ಬಿಕ್ಕಟ್ಟನ್ನು ಇನ್ನಷ್ಟು ಗಾಢವಾಗಿಸಿದೆ. ಬಾಂಗ್ಲಾದೇಶದ ದೀರ್ಘಕಾಲದ ಪಾಲುದಾರನಾದ ಭಾರತವು, ಈಗ ಒಂದು ಸೂಕ್ಷ್ಮ ರಾಜತಾಂತ್ರಿಕ ಸವಾಲನ್ನು ಎದುರಿಸುತ್ತಿದೆ. ಒಂದು ವೇಳೆ ಗಡೀಪಾರು ಮಾಡಿದರೆ ಅದು ತನ್ನ ಕಾನೂನು ಕರ್ತವ್ಯಗಳನ್ನು ಉಲ್ಲಂಘಿಸಿದಂತಾಗುತ್ತದೆ, ನಿರಾಕರಿಸಿದರೆ ದ್ವಿಪಕ್ಷೀಯ ಸಂಬಂಧಗಳು ಹದಗೆಡುವ ಸಾಧ್ಯತೆಯಿದೆ.
ವಿಶ್ವಾಸ ಮರುಸ್ಥಾಪಿಸುವ ಜರೂರತ್ತು
ಸದ್ಯಕ್ಕೆ, ಅಂತಾರಾಷ್ಟ್ರೀಯ ಪ್ರತಿಕ್ರಿಯೆಗಳು ಅತ್ಯಂತ ಎಚ್ಚರಿಕೆಯಿಂದ ಕೂಡಿವೆ. ಜಾಗತಿಕ ಸಮುದಾಯವು ಬಾಂಗ್ಲಾದೇಶಕ್ಕೆ ಸಮರ್ಪಕ ಪ್ರಕ್ರಿಯೆ ನಡೆಸುವಂತೆ, ಸಾಂವಿಧಾನಿಕ ಆಡಳಿತವನ್ನು ಗೌರವಿಸುವಂತೆ, ಮತ್ತು ಕಾನೂನಿನ ಆಳ್ವಿಕೆಯಲ್ಲಿ ವಿಶ್ವಾಸವನ್ನು ಮರುಸ್ಥಾಪಿಸುವಂತೆ, ಹಾಗೂ ಎಲ್ಲರನ್ನೂ ಒಳಗೊಳ್ಳುವ ಸಾರ್ವತ್ರಿಕ ಚುನಾವಣೆಯ ವಾತಾವರಣವನ್ನು ಸೃಷ್ಟಿಸುವಂತೆ ಒತ್ತಾಯಿಸಬೇಕಾದ ಜರೂರತ್ತಿದೆ.
ನ್ಯಾಯಾಲಯದ ತೀರ್ಪಿನ ಕಾರ್ಯಾಚರಣೆಯ ಭಾಗವನ್ನು ಕೇಳಿ ಮುಗಿಸಿದಾಗ, ಕಾನೂನೇ ಸ್ವತಃ ವಿಚಾರಣೆಗೆ ಒಳಪಟ್ಟಂತೆ ಕಾಣಿಸುತ್ತಿದೆ. ನ್ಯಾಯಮಂಡಳಿಯ ಈ ಮೊದಲ ತೀರ್ಪು ಅದರ ತೀರ್ಮಾನಗಳಿಗಿಂತ ಹೆಚ್ಚಾಗಿ, ಆ ತೀರ್ಮಾನಗಳಿಗೆ ಬಂದ ರೀತಿಯಿಂದಾಗಿ, ಆತುರದಿಂದ, ಆಕ್ರಮಣಕಾರಿಯಾಗಿ ಮತ್ತು ಅದು ಉಲ್ಲೇಖಿಸಿದ ಸಿದ್ಧಾಂತಗಳಿಗೆ ನಿಷ್ಠೆ ಇಲ್ಲದೆ ಇರುವ ಕಾರಣಕ್ಕಾಗಿ ನೆನಪಿನಲ್ಲಿ ಉಳಿಯುವ ಸಾಧ್ಯತೆಯೇ ಹೆಚ್ಚು.
ಅಂತಾರಾಷ್ಟ್ರೀಯ ಕ್ರಿಮಿನಲ್ ಕಾನೂನು ಹೆಚ್ಚು ದೃಢವಾದ ಕೈಯನ್ನು ಬಯಸುತ್ತಿತ್ತು. ಅದೇ ಹೊತ್ತಿನಲ್ಲಿ ಬಾಂಗ್ಲಾದೇಶವು ಹೆಚ್ಚು ಸೈದ್ಧಾಂತಿಕ ಪ್ರಕ್ರಿಯೆಯನ್ನು ಬಯಸುತ್ತಿತ್ತು. ಢಾಕಾದ ಆ ನ್ಯಾಯಾಲಯದಲ್ಲಿ ಏನನ್ನು ಗಟ್ಟಿ ಧ್ವನಿಯಲ್ಲಿ ಓದಲಾಗಿದೆಯೋ ಅದಕ್ಕಿಂತ ಹೆಚ್ಚಿನದನ್ನು ಪಡೆಯುವ ಅರ್ಹತೆಯನ್ನು ಈ ಪ್ರಕರಣ ಹೊಂದಿತ್ತು.

