ಗುಜರಾತ್‌ ಅಪರಾಧ ಪ್ರಕರಣ ತೀವ್ರ ಹೆಚ್ಚಳ: ಎನ್‌ಸಿಆರ್‌ಬಿ
x

ಗುಜರಾತ್‌ ಅಪರಾಧ ಪ್ರಕರಣ ತೀವ್ರ ಹೆಚ್ಚಳ: ಎನ್‌ಸಿಆರ್‌ಬಿ

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿಅಂಶಗಳ ಪ್ರಕಾರ, ಗುಜರಾತ್‌ನಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿಲ್ಲ. 2023ರಲ್ಲಿ ಅಪರಾಧ ಪ್ರಕರಣಗಳು ಹೆಚ್ಚಿದ್ದು, ಗುಜರಾತ್‌ ಮಾದರಿಯಲ್ಲಿನ ದೋಷಗಳನ್ನು ಬಹಿರಂಗಪಡಿಸಿದೆ.


ಗುಜರಾತ್‌ ಅಪರಾಧ ಪ್ರಕರಣ ತೀವ್ರ ಹೆಚ್ಚಳ: ಎನ್‌ಸಿಆರ್‌ಬಿ

-ದಮಯಂತಿ ಧರ್


ʼಗುಜರಾತಿನಲ್ಲಿ ಅಪರಾಧ ಪ್ರಕರಣಗಳ ಪ್ರಮಾಣ 2016ರಲ್ಲಿ ಶೇ.16.5 ಇದ್ದದ್ದು, 2019 ರಲ್ಲಿ ಶೇ.11.9 ಕ್ಕೆ ಇಳಿದಿದೆ. ಭೂಪೇಂದ್ರ ಪಟೇಲ್ ನೇತೃತ್ವದ ಬಿಜೆಪಿ ಸರ್ಕಾರ ಪರಿಚಯಿಸಿದ ವಿಶ್ವಾಸ್ ಸಿಸಿಟಿವಿ ಕಣ್ಗಾವಲು ಯೋಜನೆ, ಗುಜರಾತ್ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳ ನಿಯಂತ್ರಣ (ಜಿಸಿಟಿಒಸಿ) ಕಾಯಿದೆ ಮತ್ತು ಭೂ ಕಬಳಿಕೆ ಕಾಯಿದೆಯನ್ನು ಜಾರಿಗೊಳಿಸಿದೆ. ಇದರಿಂದ ಅಪರಾಧ ಚಟುವಟಿಕೆಗಳು ಕಡಿಮೆಯಾಗಿವೆʼ ಎಂದು ಸರ್ಕಾರ ಹೇಳಿಕೊಂಡಿತ್ತು.

ಆದರೆ, ಒಂದು ವರ್ಷದ ಬಳಿಕ ಡಿಸೆಂಬರ್ 2, 2023 ರಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ(ಎನ್‌ ಸಿ ಆರ್‌ ಬಿ) ಬಿಡುಗಡೆ ಮಾಡಿದ ಮಾಹಿತಿ ಬೇರೆಯದೇ ಚಿತ್ರಣವನ್ನು ನೀಡುತ್ತದೆ. 2022ರಲ್ಲಿ ಬೇರೆಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೋಲಿಸಿದರೆ ಗುಜರಾತ್ ಅತ್ಯಂತ ಹೆಚ್ಚು ಕಸ್ಟಡಿ ಸಾವುಗಳಾಗಿದ್ದವು(24). ಮಾರ್ಚ್‌ನಲ್ಲಿ ವಿಧಾನಸಭೆಯಲ್ಲಿ ನೀಡಿದ ಮಾಹಿತಿ ಪ್ರಕಾರ, 2021-22ರಲ್ಲಿ 189 ಕಸ್ಟಡಿ ಸಾವುಗಳಾಗಿದ್ದು, ಇದರಲ್ಲಿ 35 ಮಂದಿ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಮತ್ತು ಉಳಿದವು ನ್ಯಾಯಾಂಗ ಬಂಧನದಲ್ಲಿರುವಾಗ ಸಂಭವಿಸಿವೆ. ಕಸ್ಟಡಿಯಲ್ಲಿ ಸಾವಿಗೀಡಾದ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ಕುರಿತ ಪ್ರಶ್ನೆಗೆ ʻ7 ಲಕ್ಷ ರೂ. ಪರಿಹಾರ ನೀಡಲಾಗಿದೆʼ ಎಂದು ಉತ್ತರ ಬಂದಿತ್ತು. ಪೋರಬಂದರ್‌ ಕಾಂಗ್ರೆಸ್‌ ಶಾಸಕ ಅರ್ಜುನ್ ಮೊದ್ವಾಡಿಯಾ ಅವರು ಈ ಪ್ರಶ್ನೆ ಕೇಳಿದ್ದರು.

ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ, ಆರು ವರ್ಷದೊಳಗಿನ 45 ಮಕ್ಕಳ ಹತ್ಯೆಯೊಂದಿಗೆ ಗುಜರಾತ್ ಎರಡನೇ ಸ್ಥಾನದಲ್ಲಿದ್ದು(ಈ ಪೈಕಿ 20 ಬಾಲಕರು), ಮಹಾರಾಷ್ಟ್ರ ಮೊದಲ ಸ್ಥಾನ(60) ಮತ್ತು ಕರ್ನಾಟಕ ಮೂರನೇ ಸ್ಥಾನದಲ್ಲಿದೆ(44). ಅಹಮದಾಬಾದ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಹೆಣ್ಣು ಮಕ್ಕಳ ಹತ್ಯೆ ಹೆಚ್ಚು. ಗುಜರಾತ್‌ನಲ್ಲಿ 2022 ರಲ್ಲಿ 22 ಮಕ್ಕಳ ಹತ್ಯೆ ಪ್ರಸಂಗಗಳು ನಡೆದಿವೆ(6-12 ವರ್ಷ ವಯಸ್ಸಿನವರು). ಈ ಪೈಕಿ 11 ಮಂದಿ ಬಾಲಕರು. ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಶೇ.25ರಷ್ಟು ಹೆಚ್ಚಾಗಿದೆ. ತಿಂಗಳಿಗೆ ಸರಿಸುಮಾರು 45 ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಾರೆ; ಆರಕ್ಕೂ ಹೆಚ್ಚು ಮಹಿಳೆಯರ ಮೇಲೆ ಆಸಿಡ್ ದಾಳಿ ನಡೆಯುತ್ತದೆ ಮತ್ತು 260 ಮಹಿಳೆಯರು ಕೊಲ್ಲಲ್ಪಟ್ಟಿದ್ದಾರೆ. ಆದರೆ, ರಾಜ್ಯದಲ್ಲಿ ಮಹಿಳೆಯರ ಮೇಲೆ ಆಸಿಡ್ ದಾಳಿ ತೀರಾ ಕಡಿಮೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿತ್ತು. 2018 ರಿಂದ 2021 ರವರೆಗೆ ಇಂಥ 22 ಪ್ರಕರಣಗಳು ವರದಿಯಾಗಿವೆ. ರಾಜ್ಯದ ಪ್ರಮುಖ ನಗರವಾದ ಸೂರತ್‌ನಲ್ಲಿ ಮಹಿಳೆಯರ ಮೇಲೆ ಅತಿ ಹೆಚ್ಚು ಅಪರಾಧಗಳು ದಾಖಲಾಗಿವೆ.

ಸೆಪ್ಟೆಂಬರ್‌ 2023ರಲ್ಲಿ ದರ್ಶನ್ ನಾಯಕ್ ಎಂಬ ಸಾಮಾಜಿಕ ಕಾರ್ಯಕರ್ತ ನಗರದ 13 ಪೊಲೀಸ್ ಠಾಣೆಗಳಲ್ಲಿ ಅಪರಾಧಗಳ ಮಾಹಿತಿ ಕೇಳಿದ್ದರು. ನಾಯ್ಕ್ ಪ್ರಕಾರ, ಮದ್ಯಪಾನ ನಿಷೇಧ ಕಾನೂನನ್ನು ಪೊಲೀಸರು ಸಮರ್ಪಕವಾಗಿ ಜಾರಿಗೊಳಿಸದ ಕಾರಣ ಪರಿಸ್ಥಿತಿ ಹದಗೆಟ್ಟಿದೆ; ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳು ಹೆಚ್ಚುತ್ತಿವೆ. ಈ ಪ್ರಕರಣಗಳನ್ನು ತ್ವರಿತವಾಗಿ ನಿಭಾಯಿಸುವ ವಿಶೇಷ ನ್ಯಾಯಾಲಯಗಳಿದ್ದರೂ, ವಿಚಾರಣೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಸೈಬರ್ ಅಪರಾಧದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಜನವರಿ 2020ರಿಂದ ಮೇ 2023ರವರೆಗೆ ಸಹಾಯವಾಣಿ(ಸಂಖ್ಯೆ 1930) 1.59 ಲಕ್ಷ ದೂರುಗಳನ್ನು ಸ್ವೀಕರಿಸಿದೆ.

ಮಾಹಿತಿ ಪ್ರಕಾರ, ಗುಜರಾತ್‌ನಲ್ಲಿ ಕೇವಲ ಶೇ.0.8 ದೂರುಗಳಲ್ಲಿ ಎಫ್‌ಐಆರ್‌(ಪ್ರಥಮ ಮಾಹಿತಿ ವರದಿ) ಹಾಕಲಾಗುತ್ತಿದೆ. ರಾಷ್ಟ್ರೀಯ ಸರಾಸರಿ ಶೇ.1.9. ಪೊಲೀಸರು ಸ್ವೀಕರಿಸಿದ 1.59 ಲಕ್ಷ ದೂರುಗಳಲ್ಲಿ 1,233ರಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. 2018 ಮತ್ತು 2021 ರ ನಡುವೆ ದಲಿತರ ವಿರುದ್ಧದ ಪ್ರಕರಣಗಳು 5,369. ತೀರ್ಪಿನ ಪ್ರಮಾಣ ಶೇ.3.065. 32 ಪ್ರಕರಣಗಳಲ್ಲಿ ಆರೋಪ ಸಾಬೀತಾಗಿದ್ದು, 1,044 ಪ್ರಕರಣಗಳು ನ್ಯಾಯಾಲಯದ ಹೊರಗೆ ಪರಿಹಾರ ವಾಗಿವೆ. ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಕಾಯ್ದೆಯಡಿ 1,012 ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ. ದಲಿತರ ಮೇಲಿನ ಕೊಲೆ, ಅತ್ಯಾಚಾರ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಶಿಕ್ಷಿಸುವಲ್ಲಿ ಸರಕಾರ ವಿಫಲವಾಗಿದೆ.

ಗುಜರಾತ್‌ನ ದಲಿತ ಹಕ್ಕುಗಳ ಕಾರ್ಯಕರ್ತ ಮಾರ್ಟಿನ್ ಮಕ್ವಾನ್, ದಲಿತರು ಎದುರಿಸುತ್ತಿರುವ ಕಠಿಣ ಪರಿಸ್ಥಿತಿಗೆ ಬಿಜೆಪಿ ಸರ್ಕಾರವೇ ಕಾರಣ. 27 ವರ್ಷಗಳಿಂದ ಪರಿಶಿಷ್ಟ ಜಾತಿಗೆ ಮೀಸಲಾದ ಬಹುತೇಕ ವಿಧಾನಸಭಾ ಸ್ಥಾನಗಳನ್ನು ಬಿಜೆಪಿ ಹಿಡಿತದಲ್ಲಿಟ್ಟುಕೊಂಡಿದೆ. ದಲಿತರ ಹಕ್ಕುಗಳಿಗಾಗಿ ಹೋರಾಡುವ ಎನ್‌ಜಿಒಗಳ ಸಹಾಯದಿಂದಾಗಿ ಕೆಲವು ಪ್ರಕರಣಗಳಲ್ಲಿ ಶಿಕ್ಷಯಾಗುತ್ತದೆ. ದೂರು ನೀಡುವವರು ಸಾಮಾಜಿಕ ಒತ್ತಡ ಮತ್ತು ಬೆದರಿಕೆ ಎದುರಿಸುತ್ತಾರೆ. ದೂರು ಹಿಂಪಡೆಯುತ್ತಾರೆ. ಇದರಿಂದಾಗಿ ಬಹಳಷ್ಟು ಘಟನೆಗಳು ವರದಿಯಾಗುವುದಿಲ್ಲ ಅಥವಾ ಸಂಧಾನದ ಮೂಲಕ ಪರಿಹರಿಸಲ್ಪಡುತ್ತವೆ ಎಂದು ಹೇಳುತ್ತಾರೆ. ಎನ್‌ಸಿಆರ್‌ಬಿ ಪ್ರಕಾರ, 2022ರಲ್ಲಿ ದ್ವೇಷ ಮತ್ತು ಸುಳ್ಳು ಸುದ್ದಿಗಳು ಗಮನಾರ್ಹ ವಾಗಿ ಹೆಚ್ಚಿವೆ.

ಗುಜರಾತಿನ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಶಂಶೇರ್ ಸಿಂಗ್, ದ್ವೇಷ ಮತ್ತು ಸುಳ್ಳು ಸುದ್ದಿ ಪ್ರಕರಣಗಳನ್ನು ಐಪಿಸಿ ಸೆಕ್ಷನ್ 153ಎ ಅಡಿ ದಾಖಲಿಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ. ರಾಜ್ಯದಲ್ಲಿ 2,000 ರೂ.ನಕಲಿ ನೋಟುಗಳನ್ನು ಗರಿಷ್ಠ ಪ್ರಮಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ(1.15 ದಶಲಕ್ಷ ನಕಲಿ ನೋಟು). ಇದು ದೇಶದಲ್ಲಿ ಒಟ್ಟು ವಶಪಡಿಸಿಕೊಂಡ ನೋಟುಗಳಲ್ಲಿ ಶೇ.98.

---------

Read More
Next Story