D Ravi Kanth

ಇರಾನ್ ವಾರ್: ಪಾಕಿಸ್ತಾನಕ್ಕೆ ನಕಲಿ ʼವಿಶ್ವಗುರುʼ ಪೋಷಾಕು


ಇರಾನ್ ವಾರ್:  ಪಾಕಿಸ್ತಾನಕ್ಕೆ ನಕಲಿ ʼವಿಶ್ವಗುರುʼ ಪೋಷಾಕು
x
ಪಾಕ್‌ ಪ್ರಧಾನಿ ಶೆಜಬಾಜ್‌ ಷರೀಫ್
Click the Play button to hear this message in audio format

(ಪಾಕಿಸ್ತಾನಕ್ಕೆ ಸೂರ್ಯನದೊಂದು ಬೆಳಕಿನ ರೇಕು ಕಾಣಿಸಿದೆ. ಹಾಗಂತ ಈಗ ದಕ್ಕಿರುವ ಎರಡು ವಾರಗಳ ಬಿಡುವು ಆಮೂಲಾಗ್ರ ಬದಲಾವಣೆ ಎಂದೇನೂ ಭಾವಿಸದಿರಿ. ಜಗತ್ತಿನ ಅರ್ಥ ವ್ಯವಸ್ಥೆ ಉಲ್ಟಾ-ಪಲ್ಟಾ ಆಗುವುದು ಇನ್ನೂ ಬಾಕಿಯಿದೆ…)

ಅಷ್ಟಕ್ಕೂ ಪಾಕಿಸ್ತಾನ ಏಕಾಏಕಿ ರಾಜತಾಂತ್ರಿಕ ಬಿಕ್ಕಟ್ಟನ್ನು ಬಗೆಹರಿಸುವ ʼವಿಶ್ವಗುರುʼ ಆಗಿಬಿಟ್ಟಿತಾ? ಅಥವಾ ಏಪ್ರಿಲ್ 27ರ ಗಡುವಿನೊಳಗೆ ʼಸಂಪೂರ್ಣ ನಾಗರಿಕತೆಯನ್ನೇʼ ಹೊಸಕಿ ಹಾಕಿಬಿಡುತ್ತೇನೆ ಎಂದು ಹೂಂಕರಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಂಕುಶ ಹಾಕಲು ಈ ಭಯಭೀತ ಜಗತ್ತಿನಲ್ಲಿ ಯಾರಾದರೊಬ್ಬರು ಬೇಕಿದ್ದಾಗ ಅಚಾನಕ್ಕಾಗಿ ಪಾಕಿಸ್ತಾನಕ್ಕೊಂದು ಅವಕಾಶ ದಕ್ಕಿದೆಯೇ?

ಇಂತಹ ಹೊತ್ತಿನಲ್ಲಿ ಮಾತುಗಳನ್ನು ಮರೆಸುವುದು ಬೇಡ. ತನ್ನ ಆರ್ಥಿಕ ಲಾಭಕ್ಕಾಗಿ ಪಾಕಿಸ್ತಾನವು ಸಂಧಾನಕಾರನ ಪಾತ್ರದ ಬಗ್ಗೆ ಎಷ್ಟಾದರೂ ಬಡಾಯಿ ಕೊಚ್ಚಿಕೊಳ್ಳಬಹುದು. ʼದಿ ನ್ಯೂಯಾರ್ಕ್ ಟೈಮ್ಸ್ʼ ವರದಿಯೇ ಹೇಳುವಂತೆ, ಇರಾನ್ ಎರಡು ವಾರಗಳ ವಿರಾಮಕ್ಕೆ ಒಪ್ಪಿಗೆ ಸೂಚಿಸಿರುವುದು ಪಾಕಿಸ್ತಾನವು ನಡೆಸಿದ ಓಡಾಟ ಮತ್ತು ಕಟ್ಟಕಡೆಯಲ್ಲಿ ಚೀನಾ ನೀಡಿದ ಒತ್ತಡದ ಫಲ. ನಿಜ, ಪಾಕಿಸ್ತಾನವು ಘನಘೋರವಾದ ಈ ಸಮಸ್ಯೆಯ ಅಂತಿಮ ಕ್ಷಣಗಳನ್ನು ಅತ್ಯಂತ ಚತುರತೆಯಿಂದ ನಿಭಾಯಿಸುವಲ್ಲಿ ಯಶಸ್ವಿಯಾಗಿದೆ.

ಆದರೆ ಇಂತಹ ಚತುರತೆಯನ್ನೇ ʼನಾಯಕತ್ವʼ ಎಂದು ಯಾರಾದರೂ ತಪ್ಪಾಗಿ ಭಾವಿಸಬೇಕಾಗಿಲ್ಲ. ನಾವು ಕಂಡಿರುವುದು ರಾಜತಾಂತ್ರಿಕ ವಿಜಯವನ್ನಲ್ಲ. ಬದಲಾಗಿ ಮಹಾಪ್ರಳಯದ ಕಾಲಕ್ಕೆ ತಾತ್ಕಾಲಿಕವಾಗಿ ಹಾಕಲಾದ ಕೀಲಿಯಷ್ಟೇ.

ವಿರಾಮವೆಂದರೆ ಶಾಂತಿಯಲ್ಲ!

ಅಮೆರಿಕ ಮತ್ತು ಇಸ್ರೇಲ್ ನಾಲ್ಕು ವಾರಗಳ ಕಾಲ ಪೈಪೋಟಿಗೆ ಬಿದ್ದವರಂತೆ ಇರಾನ್ ಮೇಲೆ ಸತತ ಬಾಂಬ್ ದಾಳಿ ನಡೆಸಿದವು. ʼಇರಾನ್‌ನಲ್ಲಿ ಸಂಪೂಣ ಮತ್ತು ಪೂರ್ಣ ಪ್ರಮಾಣ ಆಡಳಿತ ಬದಲಾವಣೆʼ ಮಾಡಿಬಿಡುತ್ತೇನೆ ಎಂದು ಟ್ರಂಪ್ ಗುಡುಗಿದ್ದರು. ಆದರೆ ಇರಾನಿನ ಸೇನೆ ದಾಳಿಗೆ ಒಳಗಾದ ರಾಷ್ಟ್ರಕ್ಕೆ ಉಳಿದಿರುವ ಏಕೈಕ ಘನತೆ ಎಂಬಂತೆ ನೀಡಿದ ಪ್ರತಿಕ್ರಿಯೆ –“ನಾವು ಗೆಲ್ಲುತ್ತೇವೆ ಅಥವಾ ಸಾಯುತ್ತೇವೆ. ಆದರೆ ಶರಣಾಗುವ ಮಾತೇ ಇಲ್ಲ.”

ಅದೇನು ಅಬ್ಬರಿಸಿದ್ದಲ್ಲ; ಅದು ಮಹಾ ಪ್ರಪಾತದ ಅಂಚಿನಲ್ಲಿ ನಿಂತು ನೋಡುತ್ತಿದ್ದ ಜನರ ಧ್ವನಿಯಾಗಿತ್ತು. ಕಾರ್ಲ್ ಮಾರ್ಕ್ಸ್ ಹೇಳಿದ್ದು ನಿಜ, ʼಮನುಷ್ಯರು ಇತಿಹಾಸವನ್ನು ನಿರ್ಮಿಸುತ್ತಾರೆ. ಆದರೆ ಅದು ಅವರ ಆಯ್ಕೆಯ ಸಂದರ್ಭಗಳಲ್ಲಿ ಅಲ್ಲ.ʼ ಈ ಯುದ್ಧವನ್ನು ಇರಾನ್ ಆಯ್ಕೆ ಮಾಡಿಕೊಂಡಿದ್ದಲ್ಲ. ಬದಲಾಗಿ ಅದರ ಮೇಲೆ ಹೇರಲ್ಪಟ್ಟಿದ್ದು.

ಈಗ ನಮ್ಮ ಮುಂದೆ ಇರುವುದು ಹದಿನೈದು ದಿನಗಳ ವಿರಾಮ. ಹೌದು, ಇದು ಕೇವಲ ವಿರಾಮ ಮಾತ್ರ. ಶಾಂತಿಯಲ್ಲ. ಇಸ್ಲಾಮಬಾದಿನಲ್ಲಿ ಜಮಾಯಿಸಿರುವ ರಾಜತಾಂತ್ರಿಕರಿಗಿಂತಲೂ ವೇಗವಾಗಿ ಪ್ರಶ್ನೆಗಳು ಉದ್ಭವಿಸುತ್ತಿವೆ. ಇದು ಯುದ್ಧದ ಅಂತ್ಯಕ್ಕೆ ಬರೆದ ಮುನ್ನುಡಿಯೋ ಅಥವಾ ಮುಂದಿನ ಘನಘೋರ ಯುದ್ಧಕ್ಕೆ ಮುನ್ನ ಚೇತರಿಸಿಕೊಳ್ಳಲು ಒದಗಿಸಲಾದ ಕದನ ವಿರಾಮವೋ? ಅಮೆರಿಕ ಈ ಯುದ್ಧಕ್ಕೆ ಪರಿಹಾರ ಧನವನ್ನು ನೀಡಬೇಕು ಎಂಬ ಷರತ್ತನ್ನು ಒಪ್ಪುತ್ತದೆಯೇ? ಮಧ್ಯಪ್ರಾಚ್ಯದ ಏಕೈಕ ಅಧಿಪತಿಯಾಗಿ ಉಳಿಯದೇ ಇರುವ ಯಾವುದೇ ಫಲಿತಾಂಶಕ್ಕೆ ಇಸ್ರೇಲ್ ಗೋಣು ಆಡಿಸೀತೇ? ಎಲ್ಲಕ್ಕಿಂತ ಮುಖ್ಯವಾಗಿ- ಹೊರ್ಮುಜ್ ಜಲಸಂಧಿ ಮುಂದೆ ನಿಯಂತ್ರಿಸುವವರಾದರೂ ಯಾರು?

ಇರಾನಿನ ಇಡೀ ನಾಗರಿಕತೆಯನ್ನು ಹೊಸಕಿಹಾಕುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ದಮಕಿ ಹಾಕಿದ ಬಳಿಕ ಉಲ್ಟಾ ಹೊಡೆದು ಕದನ ವಿರಾಮ ಮಾಡಿಕೊಂಡಿದ್ದನ್ನು ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಜಮಾಯಿಸಿದ ಇರಾನ್ ಬೆಂಬಲಿಗರು ಘೋಷಣೆಗಳನ್ನು ಕೂಗುತ್ತಿರುವುದು.

ಜಲಸಂಧಿ ಎಂಬ ಯುದ್ಧ ಕಠಾರಿ

ಆ ಜಲಸಂಧಿ ಜಾಗತಿಕ ತೈಲ ವ್ಯಾಪಾರದ ಶೇ.20ರಷ್ಟು ಪಾಲನ್ನು ತನ್ನಲ್ಲಿ ಬಂದಿಯಾಗಿಸಿಕೊಂಡಿದೆ. 52 ಕಿ.ಮೀ. ಉದ್ದದ ಆ ಜಲಮಾರ್ಗವು ಇರಾನಿನ ಮಟ್ಟಿಗೆ ವ್ಯೂಹಾತ್ಮಕ ಕಠಾರಿ. ಇದನ್ನು ತನ್ನ ಬಗಲಲ್ಲಿ ಇಟ್ಟುಕೊಂಡ ಇರಾನ್ ಅಮೆರಿಕದ ನೆಲೆಗಳ ಮೇಲೆ, ಕೊಲ್ಲಿ ತೈಲ ಘಟಕಗಳು ಮತ್ತು ಇಸ್ರೇಲಿ ಆಸ್ತಿಗಳ ಮೇಲೆ ದಾಳಿ ಮಾಡುವ ತಾಕತ್ತು ಹೊಂದಿದ್ದೇವೆ ಎಂಬುದನ್ನು ಈಗಾಗಲೇ ಇಡೀ ಜಗತ್ತಿಗೆ ಸಾಬೀತುಮಾಡಿದೆ. ಅವರು ಈ ಒಂದು ಅಸಮಾನ ಯುದ್ಧವನ್ನು ಅತ್ಯಂತ ಸಮಾನವಾದ ಆರ್ಥಿಕ ದುಸ್ವಪ್ನವಾಗಿ ಪರಿವರ್ತಿಸಿದ್ದಾರೆ.

“ಎರಡೂ ಕಡೆಯವರು ಒಂದು ರೀತಿಯ ವಿಜಯವನ್ನು ಪ್ರತಿಪಾದಿಸಬಹುದು,” ಎಂದು ಪಾಶ್ಚಾತ್ಯ ವಿಶ್ಲೇಷಕರು ಹೇಳುತ್ತಲೇ ಇದ್ದಾರೆ. ಅವರನ್ನು ನಾವು ತರಾಟೆಗೆ ತೆಗೆದುಕೊಳ್ಳಲೇಬೇಕು. ಅವರು ಹೇಳುತ್ತಿರುವುದು ಸಮಾನತೆಯ ಹೆಸರಿನಲ್ಲಿ ಪ್ರದರ್ಶಿಸುತ್ತಿರುವ ಹೇಡಿತನವಷ್ಟೇ. ವಾಸ್ತವದಲ್ಲಿ ಈ ವ್ಯೂಹಾತ್ಮಕ ಯುದ್ಧವನ್ನು ಗೆದ್ದಿರುವುದು ಇರಾನ್.

ಅಮೆರಿಕ ಮತ್ತು ಇಸ್ರೇಲ್ ಇರಾನಿನ ನಾಯಕರನ್ನು ಹತ್ಯೆ ಮಾಡಿರಬಹುದು. ಡ್ರೋನ್ ನೆಲೆಗಳನ್ನು ನಾಶಮಾಡಿರಬಹುದು. ಅಷ್ಟೆಲ್ಲಾ ಆಗಿಯೂ ಇರಾನ್ ಮಂಡಿಯೂರಿಲ್ಲ. ಅದು ಈಗಲೂ ತಿರುಗೇಟು ನೀಡುತ್ತಲೇ ಇದೆ. ಅದು ಅಮೆರಿಕ-ಇಸ್ರೇಲ್ ಮಿಲಿಟರಿ ಕೋಟೆಗೆ ಹಾನಿ ಎಸಗಿರುವುದು ಅಕ್ಷರಶಃ ಸತ್ಯ. ಜನಾಂಗೀತ ಹತ್ಯೆಯ ಮಟ್ಟದ ಬಾಂಬ್ ದಾಳಿಗಳು ಶರಣಾಗತಿಯನ್ನು ತರುವುದಿಲ್ಲ. ಬದಲಾಗಿ ಪ್ರತಿರೋಧವನ್ನು ಹುಟ್ಟುಹಾಕುತ್ತವೆ ಎಂಬುದನ್ನು ಅದು ಸ್ಪಷ್ಟಪಡಿಸಿದೆ.

ಶಾಂತಿ ಕಂಟಕನ ಮಾತನ್ನು ನಂಬಬಹುದೇ?

ಲಭ್ಯವಾಗಿರುವ ವರದಿಗಳ ಪ್ರಕಾರ ಈಗ ನಿಜವಾದ ಮಾತುಕತೆಗಳು ನಡೆಯುವುದು ಪಾಕಿಸ್ತಾನದಲ್ಲಿ. ಅಬ್ಬರದ ಬೆದರಿಕೆಗಳ ಬಳಿಕ ಟ್ರಂಪ್ ಹಠಾತ್ತನೆ “ವಿಶ್ವಶಾಂತಿಗೆ ಇದೊಂದು ದೊಡ್ಡ ದಿನ” ಎಂದು ಹೇಳಿದ್ದಾರೆ. ಜೊತೆಗೆ ಜಲಸಂಧಿಯಲ್ಲಿನ ʼಸಂಚಾರ ದಟ್ಟಣೆʼಯನ್ನು ಸರಿಪಡಿಸಲು ಸಹಾಯ ಮಾಡುತ್ತೇನೆ ಎಂಬ ಮಾತನ್ನು ಟ್ವೀಟ್ ಮಾಡುತ್ತಿದ್ದಾರೆ.

ಅವರ ಈ ಬೊಗಳೇ ಮಾತುಗಳೆಲ್ಲ ಒತ್ತಟ್ಟಿಗಿರಲಿ, ಒಂದು ಇಡೀ ನಾಗರಿಕತೆಯನ್ನು ಅಳಿಸಿಬಿಡುವೆ ಎಂದು ತಮಾಷೆಯ ರೀತಿಯಲ್ಲಿ ಮಾತನಾಡಿದ್ದ ವ್ಯಕ್ತಿ ಈಗ ಅಗತ್ಯ ವಸ್ತುಗಳ ಪೂರೈಕೆಯೊಂದಿಗೆ ʼಜೊತೆಗಿರುತ್ತೇನೆʼ ಎಂದರೆ ನಂಬಲು ಸಾಧ್ಯವೇ? ಇನ್ನು ಇಸ್ರೇಲಂತೂ ಪ್ರತಿ ಹಂತದಲ್ಲೂ ಖಳನಾಯಕನ ಪಾತ್ರವನ್ನೇ ನಿರ್ವಹಿಸುತ್ತ ಬಂದಿದೆ. ಜೊತೆಗೆ ತನಗೆ ಅನುಕೂಲವೆನಿಸಿದ ತತ್ಕ್ಷಣದಲ್ಲಿ ಟ್ರಂಪ್ ಅವರ ಆಶಾವಾದವನ್ನೇ ಬುಡಮೇಲು ಮಾಡುತ್ತದೆ.

ಈ ದುಸ್ವಪ್ನ ಮತ್ತೆ ಮರುಕಳಿಸದಿರಲಿ

ಹಾಗಂತ ಇರಾನ್ ಮುಗ್ಧ ರಾಷ್ಟ್ರವೇನೂ ಅಲ್ಲ. ಚೀನಾಕ್ಕೆ ನಿಯೋಜಿತವಾಗಿರುವ ಅದರ ರಾಯಭಾರಿಯು ಏಕೈಕ ವಿವೇಕಯುತ ಮಾರ್ಗವನ್ನು ಸ್ಪಷ್ಟಪಡಿಸಿದ್ದಾರೆ: ಅದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಚೀನಾ, ರಷ್ಯಾ ಮತ್ತು ಪಾಕಿಸ್ತಾನದ ಬೆಂಬಲವಿರುವ ಒಂದು ವಿಶ್ವಾಸಾರ್ಹ, ಕಟ್ಟುನಿಟ್ಟಾದ ಮತ್ತು ಅಭೇದ್ಯ ಭದ್ರತಾ ಖಾತರಿ. ಅಮೆರಿಕದ ಪಡೆಗಳು ಹೊರಹೋಗಬೇಕು, ನಿರ್ಬಂಧಗಳನ್ನು ತೆಗೆದುಹಾಕಬೇಕು ಮತ್ತು ಯುದ್ಧದ ಹಾನಿಗಾಗಿ ಪರಿಹಾರ ಧನ ನೀಡಬೇಕು ಎಂಬುದು ಟೆಹ್ರಾನ್‌ನ ಬೇಡಿಕೆ. ಅವರ 10-ಅಂಶಗಳ ಪ್ರಸ್ತಾವನೆಯನ್ನು ಈಗ ಪರಿಶೀಲಿಸಲಾಗುತ್ತಿದೆ ಎಂದು ವರದಿಯಾಗಿದೆ.

ಆದರೆ ಈ ಬಾರಿ, ಮುಂದಿನ ಅಧ್ಯಕ್ಷರು ಬಂದ ಕೂಡಲೇ ಕರಗಿ ಹೋಗುವ ಅಮೆರಿಕದ ಸುಳ್ಳು ಭರವಸೆಗಳನ್ನು ಇರಾನ್ ಒಪ್ಪುವುದಿಲ್ಲ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಟ್ರಂಪ್ ಅವರನ್ನು ಈ ಕ್ರೂರ ದಾಳಿಗೆ ತಳ್ಳಿದ ನಂತರ, ಇರಾನ್ ಒಂದು ಪಾಠ ಕಲಿತಿದೆ: ಪಕ್ಕಾ ಗ್ಯಾರಂಟಿ ಇಲ್ಲದಿದ್ದರೆ, ಯಾವುದೇ ಒಪ್ಪಂದವೂ ಇಲ್ಲ ಎಂಬುದು.

ಹೀಗಿದೆ ಈಗಿನ ಪರಿಸ್ಥಿತಿ. ಇದರಲ್ಲಿ ಪಾಕಿಸ್ತಾನಕ್ಕೆ ಕ್ಷಣಿಕ ಕಾಲದ ಮನ್ನಣೆ ಸಿಕ್ಕಿರಬಹುದು. ಆದರೆ ಎರಡು ವಾರಗಳ ಈ ಬಿಡುವನ್ನು ವ್ಯವಸ್ಥೆಯ ಆಮೂಲಾಗ್ರ ಬದಲಾವಣೆ ಎಂದು ಗೊಂದಲಕ್ಕೀಡಾಗಬೇಡಿ. ಜಾಗತಿಕ ಆರ್ಥಿಕತೆ ಇನ್ನೂ ಅಸ್ತವ್ಯಸ್ತವಾಗಿದೆ; ನಿಯಮ ಆಧಾರಿತ ವ್ಯವಸ್ಥೆಯು ಚಿಂದಿ ಏದ್ದಿದೆ. ಸಾಯಲು ನಿರಾಕರಿಸಿದ ಒಂದು ನಾಗರಿಕತೆಯು ಈಗ ವಾಷಿಂಗ್ಟನ್ ಇದುವರೆಗೆ ಎಂದೂ ನೀಡದ ಒಂದು ಭರವಸೆಯನ್ನು ಕೇಳುತ್ತಿದೆ—ಅದೇನೆಂದರೆ, ಈ ದುಸ್ವಪ್ನ ಮತ್ತೆ ಮರುಕಳಿಸುವುದಿಲ್ಲ ಎಂಬ ಖಾತರಿ.

ಶರಣಾಗತಿ ಎಂಬುದು ಎಂದಿಗೂ ಅವರ ಆಯ್ಕೆಯಾಗಿರಲಿಲ್ಲ, ಮತ್ತು ಈಗ ತಿಳಿದುಬಂದಿರುವಂತೆ ನಿಜವಾದ ಶಾಂತಿ ಕೂಡ ಸದ್ಯಕ್ಕೆ ಮರೀಚಿಕೆ. ಇದು ಕೇವಲ 15 ದಿನಗಳ ಕಾಲ ಮುಂದೂಡಲ್ಪಟ್ಟ ಮರಣದಂಡನೆಯಷ್ಟೇ. ಇದನ್ನು ವಿಜಯ ಎಂದು ಕರೆಯಬೇಡಿ. ಇದನ್ನು 'ಪಲಾಯನ' ಎಂದು ಕರೆಯಿರಿ; ಇಲ್ಲಿ ಪಾಕಿಸ್ತಾನ ಕೇವಲ ಬಾಗಿಲನ್ನು ಹಿಡಿದುಕೊಂಡಿದೆಯೇ ಹೊರತು, ಅದರ ಕೀಲಿ ಕೈ ಅದರ ಬಳಿಯಿಲ್ಲ.

Next Story