
ಆರ್‌ಎಸ್‌ಎಸ್ ಉಳಿದ ರಾಜಕೀಯ ಪಕ್ಷಗಳಂತೆ ಅಲ್ಲ. ಅದು ತನ್ನ ವಿಷಪೂರಿತ ಸಿದ್ಧಾಂತವನ್ನು ಸಮಾಜದ ಉದ್ದಗಲಕ್ಕೂ ಹರಡಲು ಅವಿರತವಾಗಿ ಶ್ರಮಿಸುತ್ತದೆ. ಹಾಗಾಗಿ ಅದು ಯಶಸ್ವಿಯಾಗುತ್ತ ಹೋಗುತ್ತದೆ.
ದಿಗ್ವಿಜಯ್ ಸಿಂಗ್ ಅವರು ಕಾಂಗ್ರೆಸಿನ ಅಪರೂಪದ ನಾಯಕರಲ್ಲಿ ಒಬ್ಬರು. ಯಾವುದೇ ಆತಂಕ, ಭಿಡೆ ಇಲ್ಲದೆ ಬಿಡುಬೀಸಾಗಿ ಮಾತನಾಡುವ ಗುಣ ಅವರದ್ದು. ತಾವಾಡುವ ಮಾತುಗಳಿಂದ ಪಕ್ಷದಲ್ಲಿನ ತಮ್ಮ ಸ್ಥಾನಮಾನದ ಮೇಲೆ ಅಥವಾ ಪಕ್ಷದ ಹೈಕಮಾಂಡ್ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂದೆಲ್ಲ ತಲೆಕೆಡಿಸಿಕೊಳ್ಳುವ ಜಾಯಮಾನ ಅವರದ್ದಲ್ಲ.
ನರೇಂದ್ರ ಮೋದಿ ಅವರಂತಹ ಸಾಮಾನ್ಯ ಕಾರ್ಯಕರ್ತರನ್ನೂ ರಾಜಕೀಯದ ಅಗ್ರ ಪಟ್ಟಕ್ಕೆ ಏರಿಸಬಲ್ಲ ಆರ್.ಎಸ್ಎಸ್.ನ ಸಾಂಘಿಕ ಶಕ್ತಿಯನ್ನು ಮೆಚ್ಚಿ ಅವರು ಈಚೆಗೆ ಮಾಡಿರುವ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷದಲ್ಲಿ ಬೇರು ಬಿಟ್ಟಿರುವ ವಂಶಪಾರಂಪರ್ಯ ರಾಜಕಾರಣದ ಮೇಲಿನ ಟೀಕೆ ಎಂದೇ ವ್ಯಾಪಕವಾಗಿ ಪರಿಗಣಿಸಲಾಗಿದೆ.
ಬಿಜೆಪಿ ಕಾರ್ಯಕರ್ತರು ಈ ಹೇಳಿಕೆಯನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡು ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವದ ಕೊರತೆಯಿದೆ ಎಂದು ವ್ಯಂಗ್ಯವಾಡುತ್ತಿದ್ದಾರೆ. ಇನ್ನೊಂದು ಕಡೆ ಗಾಂಧಿ ಕುಟುಂಬದ ಕೃಪಾಕಟಾಕ್ಷಕ್ಕಾಗಿ ಹಪಹಪಿಸುತ್ತಿರುವ ಕಾಂಗ್ರೆಸ್ ಪಕ್ಷದ ಕೆಲವು ಅವಕಾಶವಾದಿಗಳು ದಿಗ್ವಿಜಯ್ ಸಿಂಗ್ ಅವರನ್ನು ಆರ್.ಎಸ್.ಎಸ್. ಬೆಂಬಲಿಗ ಎಂದು ಸಾರಾಸಗಟಾಗಿ ಬಿಂಬಿಸಲು ಈ ಹೇಳಿಕೆಯನ್ನು ಬಳಸಿಕೊಂಡರೆ ಅಚ್ಚರಿಯೇನೂ ಇಲ್ಲ.
ಕಾಂಗ್ರೆಸ್ಸಿನ ಉನ್ನತ ನಾಯಕತ್ವವನ್ನು ಪರೋಕ್ಷವಾಗಿ ಟೀಕಿಸುವವರು ನಿಶ್ಚಿತವಾಗಿ ಪಕ್ಷ ವಿರೋಧಿಗಳೇ ಆಗಿರಬೇಕು ಎಂಬುದು ಒಂದು ವಾದ. ಇನ್ನು ಆರ್.ಎಸ್ಎಸ್.ನ ಸಾಂಘಿಕ ಶಕ್ತಿಯನ್ನು ಶ್ಲಾಘಿಸಿದರೆ ಅಂಥವರ ದೃಷ್ಟಿಕೋನ ಕೋಮುವಾದದಿಂದ ಕೂಡಿದೆ ಎಂದು ಅರ್ಥೈಸಲಾಗುತ್ತದೆ. ಆದರೆ ದಿಗ್ವಿಜಯ ಸಿಂಗ್ ಅವರ ವಿಚಾರದಲ್ಲಿ ಇಂತಹ ತರ್ಕಗಳೆಲ್ಲ ಕೆಲಸಕ್ಕೆ ಬರುವುದಿಲ್ಲ.
ದಿಗ್ವಿಜಯ್ ಸಿಂಗ್ ಅವರ ಹಿಂದುತ್ವದ ಸಿದ್ಧಾಂತ
ಕಾಂಗ್ರೆಸ್ಸಿನ ಒಳಗೂ ಹೊರಗೂ ಸಂಘ ಪರಿವಾರವನ್ನು ಅತ್ಯಂತ ಕಟುವಾಗಿ ಟೀಕಿಸುವ ನಾಯಕರಲ್ಲಿ ಒಬ್ಬರೆಂದರೆ ದಿಗ್ವಿಜಯ್ ಸಿಂಗ್. ʼಕೇಸರಿ ಭಯೋತ್ಪಾದನೆʼ ಎಂಬ ಪದವನ್ನು ಹುಟ್ಟುಹಾಕಿದವರು ಮತ್ತು ಹಿಂದೂಗಳನ್ನು ಭಯೋತ್ಪಾದಕರು ಎಂದು ಕರೆದವರು ಕೂಡ ಇದೇ ಸಿಂಗ್ ಎಂದು ಸ್ವತಃ ಬಿಜೆಪಿಯೇ ಆರೋಪಿಸಿದೆ.
ದಿಗ್ವಿಜಯ್ ಅವರು ಒಬ್ಬ ನಿಷ್ಠಾವಂತ ಹಿಂದೂ ಆಗಿದ್ದರೂ ಹಿಂದೂ ಧರ್ಮವನ್ನು ಒಂದು ʼನಂಬಿಕೆʼಯಾಗಿ ಮತ್ತು ಹಿಂದುತ್ವವನ್ನು ರಾಜಕೀಯ ಸಿದ್ದಾಂತವಾಗಿ ನೋಡುವ ನಡುವಿನ ವ್ಯತ್ಯಾಸವನ್ನು ಅತ್ಯಂತ ಸ್ಪಷ್ಟವಾಗಿ ವಿವರಿಸಬಲ್ಲ ನಾಯಕ.
ಮುಸ್ಲಿಮರನ್ನು ದ್ವಿತೀಯ ದರ್ಜೆ ನಾಗರಿಕರಂತೆ ಅಥವಾ ದೇಶದ್ರೋಹಿಗಳಂತೆ ಬಿಂಬಿಸುವ ಮೂಲಕ ರೂಪಿಸಲಾದ ರಾಜಕೀಯ ಸಿದ್ಧಾಂತವೇ ಹಿಂದುತ್ವ ಎಂಬುದು ಅವರ ವಾದ. ಹೀಗಾಗಿ ದಿಗ್ವಿಜಯ್ ಸಿಂಗ್ ಅವರು ಸಂಘ ಪರಿವಾರದ ಗುಪ್ತ ಅಭಿಮಾನಿ ಮತ್ತು ಈಗದು ಬಟಾಬಯಲಾಗುತ್ತಿದೆ ಎನ್ನುವ ವಾದ ಮಾತ್ರ ಅಪ್ಪಟ ಸುಳ್ಳು.
ಸಂಘದ ಸಿದ್ಧಾಂತದ ಬಗ್ಗೆ ಸಿಂಗ್ ಅವರಿಗೆ ಇರುವ ಗುಪ್ತವಾದ ಅಭಿಮಾನವೇ ಅದರ ಸಾಂಘಿಕ ರಚನೆಯನ್ನು ಅವರು ಮೆಚ್ಚಿಕೊಳ್ಳಲು ಕಾರಣ. ಇಲ್ಲದೇ ಹೋದರೆ ಕಾಂಗ್ರೆಸ್ ತನ್ನದೇ ಆದ ಸಾಂಘಿಕ ವೈಫಲ್ಯವನ್ನು ಎದುರಿಸಬೇಕಾಗುತ್ತದೆ. ಆರ್.ಎಸ್.ಎಸ್ ಸಾಂಘಿಕ ಗುಣಕ್ಕೂ ಕಾಂಗ್ರೆಸಿನ ಈ ವೈಫಲ್ಯಕ್ಕೂ ಇರುವ ವ್ಯತ್ಯಾಸವು ಇಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತದೆ.
ಇದು ಪಕ್ಷದ ಹೈಕಮಾಂಡ್ ಸಂಸ್ಕೃತಿಗೆ ಹೆಚ್ಚು ಸಂಬಂಧಿಸಿದ್ದಾಗಿದೆ. ಅಂದರೆ ಪ್ರಮುಖ ಪದಾಧಿಕಾರಿಗಳನ್ನು ಪಕ್ಷದ ಕಾರ್ಯಕರ್ತರು ಆರಿಸುವುದಕ್ಕೆ ಬದಲಾಗಿ ಹೈಕಮಾಂಡ್ ನೇಮಕ ಮಾಡುವ ಪದ್ಧತಿ. ಇಂತಹ ಒಂದು ಹಂತದಿಂದ ಹೈಕಮಾಂಡಿನ ವಂಶಪಾರಂಪರ್ಯ ಅಸ್ತಿತ್ವವನ್ನು ದೂಷಿಸುವುದು ಕೇವಲ ಒಂದು ಸಣ್ಣ ಹೆಜ್ಜೆಯಷ್ಟೇ.
ಮಲ್ಲಿಕಾರ್ಜುನ ಖರ್ಗೆ ಅವರೇನೋ ಕಾಂಗ್ರೆಸ್ಸಿನ ಅಧ್ಯಕ್ಷರಾಗಿರಬಹುದು. ಆದರೆ ವಾಸ್ತವವಾಗಿ ಕಾಂಗ್ರೆಸ್ಸಿನಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವವರು ಯಾರು? ಅದು ಜವಾಹರ್ ಲಾಲ್ ನೆಹರೂ ಅವರ ಮರಿಮೊಮ್ಮಗ, ಇಂದಿರಾ ಗಾಂಧಿ ಅವರ ಮೊಮ್ಮಗ ಮತ್ತು ಸೋನಿಯಾ ಹಾಗೂ ರಾಜೀವ್ ಗಾಂಧಿ ಅವರ ಮಗ ರಾಹುಲ್ ಗಾಂಧಿ. ಅವರೊಂದಿಗೆ ಪ್ರಿಯಾಂಕ ಗಾಂಧಿ ಕೂಡ ನಾಯಕತ್ವದ ಪಾತ್ರ ವಹಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ.
ಸ್ವಂತಿಕೆ ಇಲ್ಲದವರ ಅಧೀನದಲ್ಲಿ…
ಅನುಕರಣಗಾರ ಅಥವಾ ಇಂಗ್ಲಿಷಿನ epigone ಎಂದರೆ ಪ್ರಸಿದ್ಧ ಪೂರ್ವಜರ ವಂಶಸ್ಥರಾಗಿದ್ದು ತನ್ನ ಹಿರಿಯರನ್ನು ಪ್ರಸಿದ್ಧರನ್ನಾಗಿ ಮಾಡಿದ ಗುಣಗಳನ್ನು ಹೊಂದಿಲ್ಲದ ಸ್ವಂತಿಕೆ ಇಲ್ಲದ ವ್ಯಕ್ತಿ ಎಂದು ಅರ್ಥ. ಸಮರ್ಥ ಮತ್ತು ವರ್ಚಸ್ವಿ ನಾಯಕರು ಸ್ಥಾಪಿಸಿದ ರಾಜವಂಶದ ಗುಲಾಮಗಿರಿಗೆ ಒಳಗಾದ ಸಂಸ್ಥೆಯು ಅಂತಹ ಸಮರ್ಥರಲ್ಲದ ಅನುಕರಣಗಾರರಿಂದ ಮುನ್ನಡೆಸಲ್ಪಟ್ಟಾಗ ಅವನತಿ ಮತ್ತು ವಿಘಟನೆಗೆ ಒಳಗಾಗುತ್ತದೆ. ಇಂತಹ ಅನುಕರಣಗಾರರು ಎಲ್ಲಿಯ ತನಕ ಅಧಿಕಾರದಲ್ಲಿ ಇರುತ್ತಾರೋ ಅಲ್ಲಿಯ ತನಕ ಅದರ ಅಂತ್ಯವೂ ಅನಿವಾರ್ಯವಾಗಿ ದೀರ್ಘಕಾಲ ಮುಂದೂಡಲ್ಪಡುತ್ತದೆ.
ಆರ್.ಎಸ್.ಎಸ್ ಸಂಘಟನೆಯ ಒಳಗೆ ಮೋದಿ ಅವರ ಉನ್ನತಿಯನ್ನು ಪ್ರತಿಪಾದಿಸುವ ಮೂಲಕ ದಿಗ್ವಿಜಯ ಸಿಂಗ್ ಅವರು ಸಂಘಟನೆಯ ಕ್ರಿಯಾಶೀಲತೆಯ ಕಡೆಗೆ ಗಮನ ಸೆಳೆದಿದ್ದಾರೆ. ಇದರಿಂದ ಪ್ರತಿಭೆಯು ಸಂಘಟನೆಯ ತಳಮಟ್ಟದಿಂದ ಅತ್ಯುನ್ನತ ಮಟ್ಟಕ್ಕೆ ಏರಲು ಅವಕಾಶ ಮಾಡಿಕೊಡುತ್ತದೆ.
ಇಲ್ಲಿ ಉನ್ನತ ನಾಯಕತ್ವವು ಕೇವಲ ವಂಶಪಾರಂಪರ್ಯಕ್ಕೆ ಸೀಮಿತವಾಗಿರುವುದಿಲ್ಲ ಅಥವಾ ಅದು ಸಂಘಟನೆಯ ಪ್ರಮುಖ ಹುದ್ದೆಗಳಿಗೆ ತಮ್ಮ ಮಾತನ್ನು ಕೇಳುವ ವಿಧೇಯ ವ್ಯಕ್ತಿಗಳನ್ನು ನೇಮಕ ಮಾಡುವ ಮೂಲಕ ಪ್ರತಿಭೆಗೆ ಅಂಕುಶ ಹಾಕುವ ಕೆಲಸವನ್ನೂ ಮಾಡುವುದಿಲ್ಲ.
ಆದರೆ ಸಮರ್ಥ ಪ್ರತಿಭೆಗಳನ್ನು ಉತ್ತೇಜಿಸುವುದಷ್ಟೇ ಒಂದು ಕಾರ್ಯಶೀಲ ಸಂಸ್ಥೆಯ ಏಕೈಕ ಹಾಗೂ ಪ್ರಾಥಮಿಕ ಪ್ರಯೋಜನವಾಗಿರುವುದಿಲ್ಲ. ಒಂದು ಸದೃಢವಾದ ಸಂಸ್ಥೆ ಯಾವತ್ತೂ ತನ್ನ ಗುರಿಯನ್ನು ಸಾಧಿಸಲು ವರ್ಷದ ಅಷ್ಟೂ ದಿನ, ಹಗಲಿರುಳೂ ಕೆಲಸ ಮಾಡುವ ವಾತಾವರಣವನ್ನು ನಿರ್ಮಿಸುತ್ತದೆ. ಹೀಗೆ ಜಿದ್ದಿಗೆ ಬಿದ್ದು ಮಾಡುವ ಕೆಲಸದಿಂದ ಸಂಸ್ಥೆಯ ಮುಖ್ಯ ಧ್ಯೇಯದ ಮೇಲಿರುವ ದೃಢವಾದ ನಂಬಿಕೆಯನ್ನು ಪ್ರತಿಬಿಂಬಿಸುವುದು ಮಾತ್ರವಲ್ಲದೆ ಮತ್ತಷ್ಟು ಬಲವರ್ಧನೆಗೆ ಸಾಥ್ ನೀಡುತ್ತದೆ.
ಸೈದ್ಧಾಂತಿಕ ಬದ್ಧತೆಯ ಕೊರತೆ
ಸದ್ಯಕ್ಕೆ ಒಬ್ಬ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತನನ್ನು ನಿಲ್ಲಿಸಿ, ನಿಮ್ಮ ಪಕ್ಷ ಯಾವ ಸಿದ್ಧಾಂತದ ನೆಲೆಗಟ್ಟಿನಲ್ಲಿ ನಿಂತಿದೆ ಎಂಬ ಪ್ರಶ್ನೆಯನ್ನು ಎಸೆದರೆ, ಆತ ಅಥವಾ ಆಕೆ ನಮಗೆ ಮನವರಿಕೆಯಾಗುವಂತಹ ಉತ್ತರವನ್ನು ಕೊಡುವುದು ಅಸಂಭವ. ಎಲ್ಲರನ್ನೂ ಒಳಗೊಳ್ಳುವ ರಾಜಕಾರಣ, ಜನಸಾಮಾನ್ಯರ ಕಲ್ಯಾಣ, ಸಂವಿಧಾನದ ರಕ್ಷಣೆ, ಜಾತ್ಯತೀತತೆಯ ರಕ್ಷಣೆ ಮತ್ತು ಇನ್ನೂ ಹಲವಾರು ಸಿದ್ಧ ಮಾತುಗಳು ಕಾಂಗ್ರೆಸ್ ಕಾರ್ಯಕರ್ತರ ನಾಲಿಗೆಯಿಂದ ಸುಲಭವಾಗಿ ಉರಳಬಹುದು.
ಆದರೆ ಅವರನ್ನು ಮತ್ತಷ್ಟು ಪೀಡಿಸಿದರೆ ಬಿಜೆಪಿಯಿಂದ ಅಧಿಕಾರ ಕಿತ್ತುಕೊಳ್ಳುವುದೇ ತಮ್ಮ ಗುರಿ ಎಂಬ ಸತ್ಯವನ್ನು ಅವರು ಒಪ್ಪಿಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಹಾಗೆ ಪಡೆದ ಅಧಿಕಾರವನ್ನು ಬಿಜೆಪಿಗಿಂತ ಭಿನ್ನವಾಗಿ ಕಾಂಗ್ರೆಸ್ ಹೇಗೆ ಬಳಸಿಕೊಳ್ಳುತ್ತದೆ ಎನ್ನುವ ವಿಚಾರದಲ್ಲಿ ಅವರಲ್ಲಿ ಅಂತಹ ಸ್ಪಷ್ಟತೆ ಇರುವುದಿಲ್ಲ.
ಆಡಳಿತ ನಡೆಸುವವರಿಂದ ಅಧಿಕಾರವನ್ನು ಕಸಿದುಕೊಳ್ಳುವುದು ಯಾವುದೇ ರಾಜಕೀಯ ಪಕ್ಷಕ್ಕೆ ಒಂದು ನ್ಯಾಯಸಮ್ಮತವಾದ ಗುರಿ ಎನ್ನುವುದರಲ್ಲಿ ಯಾವ ಅನುಮಾನವಿಲ್ಲ. ವಾಸ್ತವವಾಗಿ ಒಂದು ರಾಜಕೀಯ ಪಕ್ಷದ ಅಸ್ತಿತ್ವಕ್ಕೆ ಅದೇ ಮುಖ್ಯ ಕಾರಣ. ಕಾರ್ಮಿಕ ಸಂಘಟನೆಗಳು ಅಥವಾ ಇತರ ಸಂಘಟನೆಗಳು ಎಷ್ಟೇ ರಾಜಕೀಯ ಸ್ವರೂಪ ಹೊಂದಿದ್ದರೂ ಅವುಗಳಿಗಿಂತ ರಾಜಕೀಯ ಪಕ್ಷವು ಭಿನ್ನವಾಗಿರುತ್ತದೆ. ಯಾಕೆಂದರೆ ರಾಜಕೀಯ ಪಕ್ಷದ ಪ್ರಮುಖ ಉದ್ದೇಶವೇ ಅಧಿಕಾರದ ಗದ್ದುಗೆಯನ್ನು ಏರುವುದು. ಆದರೆ ಹಾಗೆ ಹಿಡಿದ ಅಧಿಕಾರವನ್ನು ಮುಂದೆ ಹೇಗೆ ಚಲಾಯಿಸಬೇಕು ಎಂಬ ಬಗ್ಗೆ ಸ್ಪಷ್ಟತೆ ಇಲ್ಲದೆ ಹೋದರೆ ಆ ಕಾರ್ಯದಲ್ಲಿ ಯಶಸ್ಸು ಗಳಿಸುವುದು ಅಸಂಭವ.
ಆರ್.ಎಸ್.ಎಸ್ ಸರ್ವೋಚ್ಛ ಗುರಿ
ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಹೆಚ್ಚಿನ ರಾಜಕಾರಣಿಗಳು ನಿರೀಕ್ಷಿಸುವುದಾದರೂ ಏನು? ಅಧಿಕಾರದಿಂದ ದೊರೆಯುವ ಸೌಲಭ್ಯಗಳನ್ನು. ಆದರೆ ಆರ್.ಎಸ್.ಎಸ್ ಮತ್ತು ಅದರ ಅಂಗ ಸಂಘಟನೆಗಳಿಗೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಬದಲಾಯಿಸುವುದೇ ಬಹುಮುಖ್ಯ ಮತ್ತು ಸರ್ವೋಚ್ಛ ಗುರಿಯಾಗಿದೆ. ಹಾಗಂತ ಇದನ್ನು ಸಹಜವಾಗಿಯೇ ಸಾಮಾನ್ಯ ಜನರ ಮುಂದೆ ನೇರವಾಗಿ ಈ ರೂಪದಲ್ಲಿ ಮಂಡಿಸಲಾಗುವುದಿಲ್ಲ.
ಬದಲಾಗಿ ಈ ಗುರಿಯನ್ನು ಜನರ ಮನಗೆಲ್ಲುವಂತಹ ಆಕರ್ಷಕ ವಿಚಾರಗಳ ಮೂಲಕ ಪ್ರಸ್ತುತಪಡಿಲಾಗುತ್ತದೆ. ಪ್ರಾಚೀನ ವೈಭವ ಮತ್ತು ರಾಷ್ಟ್ರೀಯ ಆತ್ಮವಿಶ್ವಾಸವನ್ನು ಮರಳಿ ದಕ್ಕಿಸಿಕೊಳ್ಳುವುದು, ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವುದು, ಸ್ವಾವಲಂಬನೆ ಮತ್ತು ವಸಾಹತುಶಾಹಿ ಮನಸ್ಥಿತಿಯಿಂದ ಹೊರಬರುವುದು ಇವೇ ಮುಂತಾದ ವಿಚಾರಗಳಾಗಿವೆ.
ಹಿಂದೂ ರಾಷ್ಟ್ರವನ್ನು ನಿರ್ಮಾಣ ಮಾಡುವುದು ಎಂದರೆ ಹಿಂದುಗಳಲ್ಲದೇ ಇರುವವರಿಗೆ ಪ್ರಜಾಪ್ರಭುತ್ವದ ಹಕ್ಕುಗಳನ್ನು ನಿರಾಕರಿಸುವುದು ಮತ್ತು ಅದು ನಮಗೆ ತಿಳಿದಿರುವ ಪ್ರಜಾಪ್ರಭುತ್ವಕ್ಕೆ ಇತಿಶ್ರೀ ಹಾಡುವುದು ಎಂದು ಅರ್ಥ. ಪ್ರಜಾಸತ್ತಾತ್ಮಕವಾಗಿ ಇರುವುದು ಮತ್ತು ಗರ್ಭಿಣಿಯಾಗಿರುವುದರ ನಡುವೆ ಒಂದು ಸಾಮ್ಯತೆ ಇದೆ. ಇವೆರಡರಲ್ಲಿ ಯಾವುದೂ ಭಾಗಶಃ ಇರಲು ಸಾಧ್ಯವಿಲ್ಲ. ಹಿಂದುಗಳಲ್ಲದೇ ಇರುವವರಿಗೆ ಪ್ರಜಾಪ್ರಭುತ್ವವನ್ನು ನಿರಾಕರಿಸುವುದು ಎಂದರೆ ಇಡೀ ಜನಸಂಖ್ಯೆಗೆ ಪ್ರಜಾಪ್ರಭುತ್ವವನ್ನು ಇಲ್ಲದಂತೆ ಮಾಡುವುದು ಎಂದರ್ಥ.
ಒಂದು ವೇಳೆ ಬಹುಸಂಖ್ಯಾತರ ಒಂದು ವರ್ಗವು ಅಲ್ಪಸಂಖ್ಯಾತರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದರೆ ಅಂಥವರನ್ನು ನಿಯಂತ್ರಿಸಬೇಕಾಗುತ್ತದೆ. ಅಲ್ಪಸಂಖ್ಯಾತರ ಜೊತೆಗೆ ಅವರೂ ಕೂಡ ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ. ಯಾರಾದರೊಬ್ಬರ ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಸಿದುಕೊಳ್ಳುವ ಸರ್ಕಾರದ ನಿರಂಕುಶ ಅಧಿಕಾರವೇ ಆ ಕಾಲದ ನಿಯಮವಾಗಿ ಬಿಡುತ್ತದೆ. ಒಂದು ವೇಳೆ ಸಂವಿಧಾನ ಪೀಠಿಕೆಯನ್ನು ಉಳಿಸಿಕೊಂಡರೂ ಪ್ರಜಾಪ್ರಭುತ್ವ ರದ್ದಾದಂತೇ ಸರಿ.
ಆರ್.ಎಸ್.ಎಸ್. ನಡೆಸುತ್ತಿರುವ ಈ ಅಭಿಯಾನದ ಬಗ್ಗೆ, ಅದರ ಗುರಿಯ ಕಡೆಗೆ ನಿಮಗೆ ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ಕೂಡ ಸಮಾಜದ ನಾನಾ ಸ್ತರಗಳಲ್ಲಿ ಮತ್ತು ಸಾಂಸ್ಕೃತಿಕ ಜೀವನದ ನಾನಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಹತ್ತಾರು ಸಂಸ್ಥೆಗಳ ಜೊತೆಗೆ ಸೇರಿಕೊಂಡು ಅದು ತನ್ನ ಗುರಿಯನ್ನು ಸಾಧಿಸಲು ಛಲ ಬಿಡದೆ ಪ್ರಯತ್ನ ನಡೆಸುತ್ತಿರುತ್ತದೆ ಎಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ. ಇದರ ಪರಿಣಾಮವಾಗಿ ಆರ್.ಎಸ್.ಎಸ್.ಗೆ ಸಾರ್ವಜನಿಕ ಜೀವನದ ಎಲ್ಲಾ ರಂಗಗಳಲ್ಲಿ ಪಟ್ಟು ಬಿಡದ, ಅವಿರತ ಮತ್ತು ಬಹುಮುಖಿ ಉಪಸ್ಥಿತಿಯನ್ನು ನೀಡುತ್ತದೆ.
ಬೇರು ಬಿಟ್ಟಿರುವ ಶ್ರೇಣೀಕೃತ ವ್ಯವಸ್ಥೆ
ಕಾಂಗ್ರೆಸ್ ನಾಯಕರು ಕೇವಲ ಚುನಾವಣೆಗಳು ಸಮೀಪಿಸಿದಾಗ ಮಾತ್ರ ರಾಜಕೀಯವಾಗಿ ಸಕ್ರಿಯರಾಗುತ್ತಾರೆ. ಭಾರತೀಯ ಸಮಾಜವನ್ನು ಪ್ರಜಾಸತ್ತಾತ್ಮಕವಾಗಿ ಮಾಡುವ ಹೋರಾಟ ಅವರದ್ದಲ್ಲ. ನಮ್ಮ ಸಮಾಜದಲ್ಲಿ ಶ್ರೇಣೀಕೃತ ವ್ಯವಸ್ಥೆ ಆಳವಾಗಿ ಬೇರುಬಿಟ್ಟಿದೆ. ಕೆಲವು ಗುಂಪುಗಳ ಶ್ರೇಷ್ಠತೆಯನ್ನೂ ಮತ್ತು ಇತರರ ಕೀಳರಿಮೆಯನ್ನೂ ಎತ್ತಿ ಹಿಡಿಯುವ ಸಂಸ್ಕೃತಿಯಲ್ಲಿ ನಾವು ಮುಳುಗಿಹೋಗಿದ್ದೇವೆ.
ದೈಹಿಕ ಶ್ರಮವನ್ನು ಹೀಗಳೆಯುತ್ತ ಮಾನಸಿಕ ಕಾರ್ಯವನ್ನು ಆರಾಧಿಸುವ ಕೆಲಸ ಮಾಡುತ್ತೇವೆ. ಜೊತೆಗೆ ಆಧುನಿಕತೆಯನ್ನು ಇಚ್ಛಾನುಸಾರ ಧರಿಸಬಹುದು ಅಥವಾ ಬಿಚ್ಚಿಡುವ ಸಿದ್ಧ ಉಡುಪಿನಂತೆ ಭಾವಿಸಿದ್ದೇವೆ.
ʼ ಭಾರತ ಜನತೆ ವಿಧಿಯೊಂದಿಗೆ ನಡೆಸುವ ಮುಖಾಮುಖಿಯನ್ನು ಪೂರ್ಣವಾಗಿ ಅಲ್ಲದಿದ್ದರೂ ಗಮನಾರ್ಹವಾಗಿ ಸಾಕಾರಗೊಳಿಸಬೇಕಿದ್ದರೆ ಕಾಂಗ್ರೆಸ್ ಪಕ್ಷವು ಜನರ ಪ್ರಜಾಸತ್ತಾತ್ಮಕ ಸಬಲೀಕರಣವನ್ನೇ ತನ್ನ ಸಾಂಸ್ಥಿಕ ಧ್ಯೇಯವನ್ನಾಗಿ ಸ್ವೀಕಾರ ಮಾಡಿಕೊಳ್ಳಬೇಕು. ಹಾಗೆ ಮಾಡದ ಹೊರತು ಅದಕ್ಕೆ ಪ್ರತಿಭಾವಂತರನ್ನು ಬೆಳೆಸುವ ಕ್ರಿಯಾಶೀಲತೆ ಅಥವಾ ಚುನಾವಣಾ ಪ್ರಾಮುಖ್ಯತೆಯಾಗಲಿ ದಕ್ಕುವುದಿಲ್ಲʼ ಎಂಬ ಹಳೆಯ ಕಾಲದ ಕಾಂಗ್ರೆಸ್ ನಾಯಕರ ಮಾತುಗಳನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವೆನಿಸುತ್ತದೆ.
ಹಾಗಾಗಿ ದಿಗ್ವಿಜಯ್ ಸಿಂಗ್ ನೀವು ಮುಂದುವರಿಯಿರಿ, ಅನ್ಯಾಯದ ಎದುರು ಮೌನವಾಗಿರುವುದು ಎಂದರೆ ಅನ್ಯಾಯಕ್ಕೆ ಸಾಥ್ ನೀಡಿದಂತೆಯೇ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


