ದೇಶದ ಮೊದಲ ಬಾಹ್ಯಾಕಾಶ ಪ್ರವಾಸಿ ಗೋಪಿಚಂದ್ ತೊಟಕುರ
ತೊಟಕುರ ಅವರು ಅವರು ಮೇ 19 ರಂದು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಕಂಪನಿಯಾದ ಬ್ಲೂ ಆರಿಜಿನ್ ಮೂಲಕ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಆರು ಸದಸ್ಯರ ತಂಡದ ಭಾಗವಾಗಿದ್ದರು.
ದೇಶದ ಮೊದಲ ನಾಗರಿಕ ಬಾಹ್ಯಾಕಾಶ ಪ್ರವಾಸಿ ಗೋಪಿಚಂದ್ ತೊಟಕುರ ಅವರು ಸೋಮವಾರ (ಆಗಸ್ಟ್ 26) ವಾಪಸಾಗಿದ್ದು, ನವದೆಹಲಿಯಲ್ಲಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಅವರು ರಾಕೇಶ್ ಶರ್ಮಾ ನಂತರ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯ.
ಅವರು ಮೇ 19 ರಂದು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಕಂಪನಿಯಾದ ಬ್ಲೂ ಆರಿಜಿನ್ ಮೂಲಕ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಆರು ಸದಸ್ಯರ ತಂಡದ ಭಾಗವಾಗಿದ್ದರು. ಇದು ಬ್ಲೂ ಆರಿಜಿನ್‌ನ ಏಳನೇ ಮಾನವ ಹಾರಾಟ ಮತ್ತು ನ್ಯೂ ಶೆಪರ್ಡ್ ಕಾರ್ಯಕ್ರಮದ ಭಾಗವಾಗಿ 25 ನೇ ಹಾರಾಟ.
ತೊಟಕುರ ಅವರ ಜೊತೆಗೆ, ಮೇಸನ್ ಏಂಜೆಲ್, ಸಿಲ್ವೈನ್ ಚಿರಾನ್, ಕೆನೆತ್ ಎಲ್. ಹೆಸ್, ಕರೋಲ್ ಶಾಲರ್ ಮತ್ತು ಅಧ್ಯಕ್ಷ ಜಾನ್ ಎಫ್. ಕೆನಡಿ ಅವರು 1961ರಲ್ಲಿ ರಾಷ್ಟ್ರದ ಮೊದಲ ಕಪ್ಪು ಗಗನಯಾತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದ ಮಾಜಿ ವಾಯು ಸೇನೆಯ ಕ್ಯಾಪ್ಟನ್ ಎಡ್ ಡ್ವೈಟ್ (ಆದರೆ, ಅವರಿಗೆ ಅವಕಾಶ ಸಿಗಲಿಲ್ಲ) ಎನ್‌ಎಸ್-25ರಲ್ಲಿ ಪ್ರಯಾಣಿಸಿದ್ದರು.
ಬ್ಲೂ ಆರಿಜಿನ್ ಪ್ರಕಾರ, ನ್ಯೂ ಶೆಪರ್ಡ್‌ನ ಸುಮಾರು ಶೇ. 99 ಒಣ ದ್ರವ್ಯರಾಶಿಯನ್ನು ಮರುಬಳಕೆ ಮಾಡಲಾಗುತ್ತದೆ. ಬೂಸ್ಟರ್, ಕ್ಯಾಪ್ಸುಲ್, ಎಂಜಿನ್, ಲ್ಯಾಂಡಿಂಗ್ ಗೇರ್ ಮತ್ತು ಪ್ಯಾರಾಚೂಟ್ ಕೂಡ ಮರುಬಳಕೆ ಆಗುತ್ತದೆ. ಹೊಸ ಶೆಪರ್ಡ್‌ನಲ್ಲಿ ಇಂಧನವಾಗಿ ದ್ರವ ಆಮ್ಲಜನಕ ಮತ್ತು ಜನಜನಕ ಬಳಕೆಯಾಗುತ್ತದೆ. ಹಾರಾಡುವಾಗ ಇಂಗಾಲದ ಹೊರಸೂಸುವುದಿಲ್ಲ: ನೀರಿನ ಆವಿ ಮಾತ್ರ ಉಪಉತ್ಪನ್ನ.
ಗೋಪಿಚಂದ್ ತೊಟಕುರ ಯಾರು?: ದೆಹಲಿಗೆ ಆಗಮಿಸಿದ ತೊಟಕುರ(30) ಹೇಳಿದರು, ʻಈ ಭಾವನೆಯನ್ನು ಬಹಳ ಸಮಯದಿಂದ ನಿರೀಕ್ಷಿಸಿದ್ದೆ. ಮನೆಗೆ ಮರಳಿರುವುದರಿಂದ ಸಂತೋಷವಾಗಿದೆ. ಇದು ಭಾರತಕ್ಕೂ ಹೆಮ್ಮೆಯ ಕ್ಷಣ; ದೇಶವನ್ನು ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆಯಿದೆ. ಪೋಷಕರು ಮತ್ತು ಅಜ್ಜ-ಅಜ್ಜಿಯನ್ನು ನೋಡುವುದು ಆನಂದದ ವಿಷಯ,ʼ ಎಂದರು.
ಬ್ಲೂ ಆರಿಜಿನ್ ವೆಬ್‌ಸೈಟ್‌ನ ಪ್ರಕಾರ, ತೊಟಕುರ ವೃತ್ತಿಯಲ್ಲಿ ಪೈಲಟ್. ಅಮೆರಿಕದ ಹಾರ್ಟ್ಸ್‌ಫೀಲ್ಡ್-ಜಾಕ್ಸನ್ ಅಟ್ಲಾಂಟಾ ಅಂತಾರಾ ಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಪ್ರಿಸರ್ವ್ ಲೈಫ್ ಕಾರ್ಪ್‌ನ ಸಹ ಸಂಸ್ಥಾಪಕ. ಅಂತಾರಾಷ್ಟ್ರೀಯ ವೈದ್ಯಕೀಯ ಜೆಟ್ ಪೈಲಟ್ ಆಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಕಿಲಿಮಂಜಾರೋ ಪರ್ವತದ ಶಿಖರವನ್ನು ಏರಿದ್ದರು. ಅಮೆರಿಕದ ಫ್ಲೋರಿಡಾದಲ್ಲಿರುವ ಎಂಬ್ರಿ-ರಿಡಲ್ ಏರೋನಾಟಿಕಲ್ ವಿಶ್ವವಿದ್ಯಾನಿಲಯದ ಪದವೀಧರ.
ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದರು. ರಾಕೇಶ್ ಶರ್ಮಾ ನಂತರ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯ.
ಬಾಹ್ಯಾಕಾಶ ಪ್ರವಾಸೋದ್ಯಮ: ʻಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಭಾರಿ ಭವಿಷ್ಯವಿದೆ. ಅದನ್ನು ಕೈಗೆಟುಕುವಂತೆ ಮಾಡುವುದು ಬ್ಲೂ ಆರಿಜಿನ್ ಅಥವಾ ಇನ್ನಿತರ ಕಂಪನಿಗಳ ಉದ್ದೇಶ. ಅದು ಎಲ್ಲರ ಕೈಗೆಟಕುವಂತೆ ಮಾಡಲು ಏನು ಮಾಡಬೇಕು ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ,ʼ ಎಂದು ಹೇಳಿದರು.
ಬ್ಲೂ ಆರಿಜಿನ್ ನ ಎಂಟನೇ ಮಾನವ ಹಾರಾಟ, ಎನ್‌ಎಸ್ -26, ಗುರುವಾರ ಆಗಸ್ಟ್ 29 ರಂದು ಪಶ್ಚಿಮ ಟೆಕ್ಸಾಸ್‌ನ ಲಾಂಚ್ ಸೈಟ್ ಒನ್‌ನಿಂದ ಆರಂಭವಾಗಲಿದೆ.