
ಗುಂಪುಗಾರಿಕೆ ರಾಜಕಾರಣದಿಂದ ಸೋತೆವು: ಡಿವಿ ಸದಾನಂದಗೌಡ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗುಂಪುಗಾರಿಕೆಗಳಿದ್ದವು. ದೆಹಲಿ ಬಣ ಹಾಗೂ ಕರ್ನಾಟಕ ಬಣಗಳಿದ್ದವು. ನಿಮ್ಮ ಗುಂಪುಗಾರಿಕೆಯ ರಾಜಕಾರಣಕ್ಕೆ ಓಟು ಕೊಡಲ್ಲ ಎಂದು ಜನರು ಸ್ಪಷ್ಟವಾಗಿ ತೋರಿಸಿಕೊಟ್ಟರು ಎಂದು ಡಿವಿಎಸ್ ಹೇಳಿದರು
ಪುತ್ತೂರು: ಮಾಜಿ ಸಿಎಂ ಡಿ.ವಿ ಸದಾನಂದ ಗೌಡ ಅವರು, ಬಿಜೆಪಿಯನ್ನು ಶುದ್ಧೀಕರಣ ಮಾಡುವುದಾಗಿ ಮತ್ತೆ ಹೇಳಿದ್ದಾರೆ. ಪುತ್ತೂರಿನಲ್ಲಿ ಮಾತನಾಡಿದ ಅವರು, “ರಾಜಕೀಯ ಶುದ್ಧೀಕರಣದ ಬಗ್ಗೆ ಸ್ವಂತ ತೀರ್ಮಾನ ತೆಗೆದುಕೊಳ್ಳಲು ನನ್ನಿಂದ ಸಾಧ್ಯ. ಆದ್ರೆ ಸಮಾನಮನಸ್ಕರಾಗಿ ನನ್ನೊಂದಿಗೆ ಕೈಜೋಡಿಸಲು ಯಾರಾದರೂ ಬರುವುದಾದರೇ ಎಲ್ಲರಿಗೂ ಸ್ವಾಗತ. ಅದರ ಬದಲಾಗಿ ಎಲ್ಲರೂ ನನ್ನ ಜೊತೆ ಬನ್ನಿ, ಗುಂಪು ಮಾಡಿ ಗುಂಪುಗಾರಿಕೆ ರಾಜಕಾರಣ ಮಾಡಲ್ಲ” ಎಂದು ಕರೆ ನೀಡಿದ್ದಾರೆ.
“ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗುಂಪುಗಾರಿಕೆಗಳಿದ್ದವು. ದೆಹಲಿ ಬಣ ಹಾಗೂ ಕರ್ನಾಟಕ ಬಣಗಳಿದ್ದವು. ನಮ್ಮದು ಬಿಜೆಪಿ ಬಣ ಮಾತ್ರ. ಆದ್ರೆ ಬಿಜೆಪಿ ಬಣಕ್ಕೆ ಗೌರವ ಸಿಗಲಿಲ್ಲ. ನಿಮ್ಮ ಗುಂಪುಗಾರಿಕೆಯ ರಾಜಕಾರಣಕ್ಕೆ ಓಟು ಕೊಡಲ್ಲ ಎಂದು ಜನರು ಕೂಡಾ ಹೇಳಿದರು. ವಿಭಜಿತ ಬಿಜೆಪಿಗೆ ಓಟು ಕೊಡಲ್ಲ ಎಂದು ಜನರು ಸ್ಪಷ್ಟವಾಗಿ ತೋರಿಸಿಕೊಟ್ಟರು” ಎಂದು ಡಿವಿ ಸದಾನಂದ ಗೌಡ ಹೇಳಿದ್ದಾರೆ.
ಚುನಾವಣಾ ರಾಜಕೀಯದಿಂದ ದೂರ, ಆದರೆ ರಾಜಕೀಯದಿಂದ ದೂರ ಉಳಿಯಲ್ಲ ಎಂದು ಹೇಳಿದ ಅವರು, “ನರೇಂದ್ರ ಮೋದಿಯವರದ್ದು ಸ್ವಾರ್ಥರಹಿತ ರಾಜಕಾರಣ. ನರೇಂದ್ರಯವರನ್ನ ಫಾಲೋ ಮಾಡಿಕೊಂಡು ಉಳಿದವರು ಮುಂದವರಿಯಬೇಕು. ನರೇಂದ್ರ ಮೋದಿಯವರು ದೆಹಲಿಯಲ್ಲಿ ಮಾತ್ರ ಸೀಮಿತವಾದ್ರೆ ಆಗೋದಿಲ್ಲ. ಎಲ್ಲಾ ರಾಜ್ಯಗಳಲ್ಲೂ ನರೇಂದ್ರ ಮೋದಿಯವರಂತೆ ಉಳಿದವರು ಕೆಲಸ ಮಾಡಬೇಕು. ನರೇಂದ್ರ ಮೋದಿ ಹೇಳಿದಂತೆ ಪರಿವಾರವದದಿಂದ ಮುಕ್ತರಾಗಬೇಕು, ಭ್ರಷ್ಟಾಚಾರದಿಂದ ಮುಕ್ತರಾಗಬೇಕು. ಜಾತಿವಾದದಿಂದ ಮುಕ್ತರಾಗಬೇಕೆಂಬುದು ನರೇಂದ್ರ ಮೋದಿಯವರ ಪರಿಕಲ್ಪನೆ. ಈ ಚುನಾವಣೆಯಲ್ಲೇ ನರೇಂದ್ರ ಮೋದಿಯವರ ಪರಿಕಲ್ಪನೆ ಆಗಬೇಕಿತ್ತು. ಆದ್ರೆ ರಾಜ್ಯದಲ್ಲಿರುವಂತ ಜವಾಬ್ದಾರಿ ಹೊತ್ತ ಕೆಲವರು ನರೇಂದ್ರ ಮೋದಿಯ ಈ ಮೂರು ಪರಿಕಲ್ಪನೆಗೆ ಸರಿಹೊಂದಲ್ಲ” ಎಂದು ಅವರು ಹೇಳಿದರು.
“ ಮುಂದಿನ ದಿನಗಳಲ್ಲಿ ರಾಜ್ಯ ಬಿಜೆಪಿಯನ್ನ ಶುದ್ಧೀಕರಣ ಮಾಡುವ ಕೆಲಸ ಮಾಡುತ್ತೇನೆ. ಈಗ ನರೇಂದ್ರ ಮೋದಿಯವರ ಚುನಾವಣೆ ಮಾತ್ರ ನಮ್ಮ ಮುಂದಿದೆ. ಹಾಗಾಗಿ ಬಿಜೆಪಿಯನ್ನ ಮತ್ತೆ ಅಧಿಕಾರಕ್ಕೆ ತರಲು ನಾವೆಲ್ಲ ಸಿದ್ಧರಾಗಬೇಕು. ನನಗೆ ಪಕ್ಷ ಎಲ್ಲವನ್ನೂ ನೀಡಿದೆ, ಹಾಗಾಗಿ ನಾನು ಪಕ್ಷಕ್ಕೆ ಏನಾದ್ರು ಮಾಡಬೇಕು. ಹಾಗಿರುವ ನರೇಂದ್ರ ಮೋದಿಯವರು ಓರ್ವ ದೈವಾಂಶ ಸಂಭೂತ. ಮೋದಿ ಶುದ್ಧೀಕರಣ ಮಾಡಲು ಮುಂದಾಗಿದ್ದನ್ನು ಕೆಲಹಂತದಿಂದ ಶುದ್ಧೀಕರಣ ಮಾಡಲು ನಾವು ತಯಾರಾಗಿದ್ದೇವೆ. ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ಪ್ರಾಮಣಿಕತೆ ಹಾಗೂ ಬದ್ಧತೆ ಅರ್ಥಕ ಳೆದುಕೊಂಡಿದೆ. ಲೋಕಸಭಾ ಚುನಾವಣೆ ಮುಗಿಯುವವರೆಗೆ ಎಲ್ಲಾ ನೋವುಗಳನ್ನು ನುಂಗಿ ಕೂರುತ್ತೇನೆ” ಎಂದು ಅವರು ಹೇಳಿದ್ದಾರೆ.