ವಾಲ್ಮೀಕಿ ನಿಗಮ ಹಗರಣ | ಜೂ.28ರಂದು ರಾಜ್ಯವ್ಯಾಪಿ  ಬಿಜೆಪಿ ಪ್ರತಿಭಟನೆ
x
ಜೂನ್ 28ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ತೀರ್ಮಾನಿಸಿದೆ.

ವಾಲ್ಮೀಕಿ ನಿಗಮ ಹಗರಣ | ಜೂ.28ರಂದು ರಾಜ್ಯವ್ಯಾಪಿ ಬಿಜೆಪಿ ಪ್ರತಿಭಟನೆ

ಕೋಟ್ಯಂತರ ರೂಪಾಯಿ ಅವ್ಯವಹಾರದ ವಿರುದ್ಧ ಜೂನ್ 28ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ತೀರ್ಮಾನಿಸಿದೆ.


Click the Play button to hear this message in audio format

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ(Valmiki Corporation Scam)ದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಅವ್ಯವಹಾರದ ವಿರುದ್ಧ ರಾಜ್ಯಾದ್ಯಂತ ಜೂ.28ರಂದು ಪ್ರತಿಭಟನೆ ನಡೆಸಲು ಬಿಜೆಪಿ ತೀರ್ಮಾನಿಸಿದೆ.

ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಶನಿವಾರ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಪಕ್ಷದ ಎಸ್​ಟಿ ಮುಖಂಡರ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಯಿತು.

ಈ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ ಶ್ರೀರಾಮುಲು, ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸಮುದಾಯದ ಸಚಿವಾಲಯ ಮಾಡಿ, ಸಚಿವರನ್ನು ನೇಮಕ ಮಾಡಿ ಸಮುದಾಯದ ಅಭಿವೃದ್ಧಿಗೆ ಮುನ್ನಡಿ ಬರೆದಿದ್ದರು. ಎಸ್​ಟಿ ಸಮುದಾಯದ ಮೀಸಲಾತಿ ಪ್ರಮಾಣ ಶೇ 7ಕ್ಕೆ ಹೆಚ್ಚಿಸಿದ್ದರು. ಈಗ ಈ ಸರ್ಕಾರದ ಅವಧಿಯಲ್ಲಿ ನಡೆದಿರುವ ಭಾರೀ ಅಕ್ರಮದಿಂದಾಗಿ ನಿಗಮದ ಅಮಾಯಕ ಅಧಿಕಾರಿ ನೇಣಿಗೆ ಶರಣಾಗಿದ್ದಾರೆ. ಸಚಿವರ ಮೌಖಿಕ ಆದೇಶದಂತೆ ತೆಲಂಗಾಣಕ್ಕೆ ಹಣ ವರ್ಗಾವಣೆಯಾಗಿದೆ. ವೈನ್ ಶಾಪ್, ಚಿನ್ನದ ಅಂಗಡಿಗಳಲ್ಲಿ ದಲಿತರ ಹಣ ಡ್ರಾ ಮಾಡಿದ್ದಾರೆ. ಮುಖ್ಯಮಂತ್ರಿಗೆ ಮಾಹಿತಿ ಇಲ್ಲದೆ ಈ ರೀತಿ ಆಗಲು ಸಾಧ್ಯವಿಲ್ಲ. ಹಣಕಾಸು ಇಲಾಖೆಯಲ್ಲೇ ಭ್ರಷ್ಟಾಚಾರ ನಡೆದಿರುವ ಅನುಮಾನ ಇದೆ. ಸಿಎಂ ಸಿದ್ದರಾಮಯ್ಯ ಬಳಿಯೇ ಹಣಕಾಸು ಇಲಾಖೆಯಿದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿದ್ದೇವೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರ ರಾಜೀನಾಮೆ ಸಾಕಾಗಲ್ಲ. ಜೂನ್ 28ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ನಿರ್ಧರಿಸಿದ್ದೇವೆ ಎಂದು ಹೇಳಿದರು.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ಬ್ಯಾಂಕ್ ಖಾತೆಯಿಂದ ೧೮ ಖಾಸಗಿ ಖಾತೆಗಳಿಗೆ ಬರೋಬ್ಬರಿ 94.73 ಕೋಟಿ ರೂಪಾಯಿ ಅಕ್ರಮವಾಗಿ ವರ್ಗಾವಣೆಯಾಗಿತ್ತು. ಎಂಜಿ ರಸ್ತೆಯ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯಿಂದ ಹಣ ವರ್ಗಾವಣೆಯಾಗಿತ್ತು. ಈ ಸಂಬಂಧ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿತ್ತು. ಹಗರಣ ಸಂಬಂಧ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್, ಮಾಜಿ ಸಚಿವ ಬಿ. ನಾಗೇಂದ್ರ ಅವರ ಅಪ್ತ ಎನ್ನಲಾದ ನಾಗರಾಜ್ ನೆಕ್ಕುಂಟಿ, ನಾಗೇಶ್ವರ್ ರಾವ್ ಎಂಬುವವರನ್ನು ಎಸ್‌ಐಟಿ ಬಂಧಿಸಿದ್ದು ವಿಚಾರಣೆಗೆ ಒಳಪಡಿಸಿದೆ.

ಈ ಮಧ್ಯೆ, 18 ನಕಲಿ ಖಾತೆಗಳಿಗೆ ವರ್ಗಾವಣೆಯಾಗಿದ್ದ ಮೊತ್ತವನ್ನು ಮದ್ಯದಂಗಡಿಗಳು, ಚಿನ್ನಾಭರಣ ಮಾರಾಟ ಮಳಿಗೆಗಳು ಹಾಗೂ ಸಣ್ಣ ಕಂಪನಿಗಳಿಗೆ ವರ್ಗಾಯಿಸಿಕೊಂಡು ನಗದು ಪಡೆದಿರುವ ವಿಚಾರವೂ ವಿಶೇಷ ತನಿಖಾ ತಂಡದ ತನಿಖೆ ವೇಳೆ ಬಯಲಾಗಿತ್ತು.

Read More
Next Story