ಖಲಿಸ್ತಾನಿ ನಾಯಕ ಪನ್ನುನ್ ಹತ್ಯೆ ಸಂಚು: ತನಿಖೆಗೆ ಅಮೆರಿಕ ಸ್ವಾಗತ
x

ಖಲಿಸ್ತಾನಿ ನಾಯಕ ಪನ್ನುನ್ ಹತ್ಯೆ ಸಂಚು: ತನಿಖೆಗೆ ಅಮೆರಿಕ ಸ್ವಾಗತ

ಖಲಿಸ್ತಾನ್ ಚಳವಳಿಯನ್ನು ಬೆಂಬಲಿಸುವ ಗುರುಪತ್ವಂತ್ ಸಿಂಗ್​ನನ್ನು ಭಯೋತ್ಪಾದಕ ಎಂದು ಭಾರತ ಘೋಷಿಸಿದೆ.


ವಾಷಿಂಗ್ಟನ್: ಖಾಲಿಸ್ತಾನ ಪ್ರತ್ಯೇಕತಾವಾದಿ ನಾಯಕ ಗುರುಪಶ್ವಂತ್ ಸಿಂಗ್ ಪನ್ನುನ್ ಹತ್ಯೆ ಸಂಚು ಪ್ರಕರಣದಲ್ಲಿ ಭಾರತೀಯ ಅಧಿಕಾರಿ ವಿರುದ್ಧದ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿರುವ ಭಾರತದ ಕ್ರಮವನ್ನು ಅಮೆರಿಕ ಸ್ವಾಗತಿಸಿದೆ.


'ತನ್ನ ಅಧಿಕಾರಿ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸುವುದಾಗಿ ಭಾರತ ಹೇಳಿರುವುದು ಉತ್ತಮ ಹಾಗೂ ಸೂಕ್ತ ನಿರ್ಧಾರ. ತನಿಖೆಯ ಫಲಿತಾಂಶಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ' ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಪ್ರತಿಕ್ರಿಯಿಸಿದ್ದಾರೆ.

ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಪ್ರಕ್ರಿಯೆ ನಡೆಯುತ್ತಿರುವ ಕಾರಣ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದರು.

'ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದಷ್ಟೆ ನಾನು ಹೇಳಬಲ್ಲೆ. ಕಳೆದ ಕೆಲ ವಾರಗಳಿಂದ ಈ ವಿಷಯವನ್ನು ನಾವು ನೇರವಾಗಿ ಭಾರತ ಸರ್ಕಾರದ ಮುಂದೆ ಪ್ರಸ್ತಾಪಿಸಿದ್ದೇವೆ' ಎಂದೂ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಜೂನ್‌ನಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ಆ ಭೇಟಿಯ ನಂತರ, ಪನ್ನುನ್ ಹತ್ಯೆಗೆ ರೂಪಿಸಿದ್ದ ಸಂಚಿನ ವಿಷಯ ಚರ್ಚೆಗೊಳಗಾಗಿತ್ತು. ಆದರೆ, ಈ ಬೆಳವಣಿಗೆಯು ಉಭಯ ದೇಶಗಳ ನಡುವಿನ ಬಾಂಧವ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಸಮನ್ವಯಾಧಿಕಾರಿ (ಕಾರ್ಯತಂತ್ರ ಸಂವಹನ) ಆಗಿರುವ ಜಾನ್ ಕಿರ್ಬಿ ಹೇಳಿದ್ದಾರೆ.

'ನ್ಯಾಯಾಂಗ ಇಲಾಖೆಯು ತನಿಖೆ ನಡೆಸುತ್ತಿರುವ ಕಾರಣ, ಈ ಬಗ್ಗೆ ಹೆಚ್ಚು ಮಾತನಾಡವುದಿಲ್ಲ. ಆದರೆ, ಎರಡು ವಿಷಯಗಳನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಮೊದಲನೆದಾಗಿ ಭಾರತ ನಮ್ಮ ಮುಖ್ಯ ಪಾಲುದಾರ ದೇಶವಾಗಿ ಇರಲಿದೆ. ಎರಡನೆಯದಾಗಿ, ಈ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗುತ್ತೇವೆ' ಎಂದು ಕಿರ್ಬಿ ಹೇಳಿದ್ದಾರೆ.

ಅಮೆರಿಕಾ ಸ್ಪಂದಿಸಬೇಕು ಎಂದ ಪನ್ನುನ್

ʼಖಲಿಸ್ತಾನ್ ಚಳವಳಿಯನ್ನು ಬೆಂಬಲಿಸುವ ಗುರುಪತ್ವಂತ್ ಸಿಂಗ್​ನನ್ನು ಭಯೋತ್ಪಾದಕ ಎಂದು ಭಾರತ ಘೋಷಿಸಿದೆ. ಆತ ಅಮೆರಿಕಾದಲ್ಲಿ ಖಲಿಸ್ತಾನ್ ಚಳವಳಿಯನ್ನು ಮುನ್ನಡೆಸುತ್ತಿದ್ದಾನೆ. ಈತ ನಡೆಸುತ್ತಿದ್ದ ‘ಸಿಖ್ ಫಾರ್ ಜಸ್ಟಿಸ್’ ಸಂಘಟನೆಯನ್ನೂ ಭಾರತ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ.

ಇದೀಗ, “ಭಾರತದಿಂದ ನನ್ನ ಜೀವ ಬೆದರಿಕೆಗೆ ಅಮೆರಿಕ ಸರ್ಕಾರ ಸ್ಪಂದಿಸಲಿ. ಸಂಚಿಗೆ ಪ್ರತೀಕಾರವಾಗಿ ಭಾರತದ ಸಂಸತ್‌ ಮೇಲೆ ದಾಳಿ ನಡೆಸುವೆʼʼ ಎಂದು ಪನ್ನು​ನ್ ಹೇಳಿದ್ದಾನೆ.

ಭಾರತದ ಪಾತ್ರದ ಬಗ್ಗೆ ಕಳವಳ

ಪನ್ನುನ್ ಹತ್ಯೆಯ ಸಂಚಿನಲ್ಲಿ ಭಾರತದ ಪಾತ್ರವಿರಬಹುದು ಎಂಬ ಕಳವಳದ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರ ಭಾರತಕ್ಕೆ ಎಚ್ಚರಿಕೆ ನೀಡಿದೆ ಎಂದು ಲೇಖನದಲ್ಲಿ ಹೇಳಲಾಗಿದೆ. ಅಮೆರಿಕನ್-ಕೆನಡಾದ ಪ್ರಜೆಯಾದ ಗುರುಪತ್ವಂತ್ ಸಿಂಗ್ ಪನ್ನುನ್‌, ಅಮೇರಿಕಾದಲ್ಲಿ ಜಸ್ಟಿಸ್ ಫಾರ್ ಸಿಖ್​ ಮುಖ್ಯಸ್ಥರಾಗಿದ್ದಾರೆ. ಆದರೆ ಭಾರತ ಅದನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ.

ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತ ಸರ್ಕಾರದ ಸಂಬಂಧ ಇರುವ ಏಜೆಂಟರ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಈ ಹಿಂದೆ ಘೋಷಿಸಿದ್ದರು. ಘೋಷಣೆಯಾದ ಆರು ವಾರಗಳ ನಂತರ ಈ ಘಟನೆ ನಡೆದಿದೆ ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ.

US praises India for initiating probe into alleged plot to kill Sikh separatist

Read More
Next Story