
ಕೇಂದ್ರದ ಆರ್ಥಿಕ ನಿರ್ಬಂಧದಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ: ಕೆ.ಎನ್.ಬಾಲಗೋಪಾಲ್
ನ್ಯಾಯಯುತ ತೆರಿಗೆ ಪಾವತಿಯಲ್ಲಿ ಅನ್ಯಾಯ, ಕೇಂದ್ರ ಸರ್ಕಾರದ ನಡೆಗೆ ಅಸಮಾಧಾನ
ಕೇರಳದ ಮೇಲೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೇರಿರುವ ಆರ್ಥಿಕ ನಿರ್ಬಂಧವು ರಾಜಕೀಯವನ್ನು ಮೀರಿ, ಸಹಕಾರಿ ಒಕ್ಕೂಟ ತತ್ವಕ್ಕೆ ಸವಾಲಾಗಿದೆ ಎಂದು ಕೇರಳದ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇರಳದ ವಿರುದ್ಧ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ತಾರತಮ್ಯವು ಕೇವಲ ರಾಜಕೀಯವಷ್ಟೇ ಅಲ್ಲ. ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲಿದೆ. ರಾಜ್ಯಗಳ ಹಿತಾಸಕ್ತಿ ಕಾಪಾಡುವುದು ಕೇಂದ್ರ ಸರ್ಕಾರದ ಕರ್ತವ್ಯ ಸಹ ಎಂದು ಹೇಳಿದ್ದಾರೆ.
ಆದಾಯ ತೆರಿಗೆಯ ನ್ಯಾಯಯುತ ಪಾಲನ್ನು ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಕೇರಳ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದೆ. ಎಲ್ಲವೂ ಈಗ ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ಅವಲಂಬಿತವಾಗಿದೆ. ಕೇಂದ್ರ ಸರ್ಕಾರವು ನಮಗೆ ಅನೇಕ ವಿಷಯಗಳನ್ನು ನಿರಾಕರಿಸಿದೆ. ರಾಜ್ಯವಾಗಿ ನಮ್ಮ ಹಕ್ಕುಗಳನ್ನು ನಿರಾಕರಿಸಲಾಗಿದೆ ಎಂದಿದ್ದಾರೆ.
ನ್ಯಾಯಯುತ ತೆರಿಗೆ ಪಾವತಿಗೆ ಆಗ್ರಹಿಸಿ, ಕೇರಳ ಸರ್ಕಾರವು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಆದರೆ, ಕೇರಳ ಸರ್ಕಾರವು ಈ ಪ್ರಕರಣವನ್ನು ಹಿಂಪಡೆದರೆ ಮಾತ್ರ 13,000 ಕೋಟಿ ರೂ. ಮಂಜೂರು ಮಾಡುವುದಾಗಿ ನಿರ್ದೇಶನ ನೀಡಿದೆ ಎಂದು ಕೇರಳ ಸರ್ಕಾರದ ಪರ ವಾದ ಮಂಡಿಸಿರುವ ವಕೀಲ ಕಪಿಲ್ ಸಿಬಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ನಡೆಯು ಸ್ವೀಕಾರಾರ್ಹವಲ್ಲ ಎಂದು ಬಾಲಗೋಪಾಲ್ ಹೇಳಿದ್ದಾರೆ.
ರಾಜ್ಯಗಳ ಹಿತಾಸಕ್ತಿಗಳನ್ನು ಕಾಪಾಡಲು ಹಾಗೂ ಅವರಿಗೆ ನೀಡಬೇಕಾದ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ಸಕಾಲದಲ್ಲಿ ನೀಡದೇ ಇದ್ದರೆ, ಜನರು ಕೇಂದ್ರ ಸರ್ಕಾರ ಮತ್ತು ಅದರ ಮೈತ್ರಿ ಪಕ್ಷಗಳನ್ನು ಬೆಂಬಲಿಸುವುದಿಲ್ಲ ಎಂದರು.
ರಾಜ್ಯಗಳಿಗೆ ಆದಾಯ ತೆರಿಗೆ ಮರು ಪಾವತಿಯು ಬಹಳ ಮುಖ್ಯವಾದ ವಿಷಯವಾಗಿದೆ. ಕೇರಳದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಈ ವಿಷಯವನ್ನು ರಾಷ್ಟ್ರೀಯ ವಿಷಯವನ್ನಾಗಿಸಿದೆ. ಕೇಂದ್ರ ಸರ್ಕಾರದ ಆರ್ಥಿಕ ನಿರ್ಬಂಧಗಳಿಂದಾಗಿ ಕೇರಳವು ಈ ವರ್ಷ ತನ್ನ ವೆಚ್ಚದ ಶೇ.75 ರಷ್ಟನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಕೇಂದ್ರದ ಪಾಲು ಕೇವಲ ಶೇ. 25ಕ್ಕೆ ಸೀಮಿತವಾಗಿದೆ ಎಂದಿದ್ದಾರೆ.