ಅನಧಿಕೃತ ಜಾಹೀರಾತು ಹಾವಳಿ | ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿದ ಹೈಕೋರ್ಟ್‌
x
ಹೈಕೋರ್ಟ್

ಅನಧಿಕೃತ ಜಾಹೀರಾತು ಹಾವಳಿ | ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿದ ಹೈಕೋರ್ಟ್‌

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಎಗ್ಗಿಲ್ಲದ ಅನಧಿಕೃತ ಜಾಹೀರಾತು ಫಲಕಗಳು, ಪ್ಲೆಕ್ಸ್ ಹಾಗೂ ಹೋರ್ಡಿಂಗ್‌ಗಳ ಹಾವಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ.


Click the Play button to hear this message in audio format

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳು, ಪ್ಲೆಕ್ಸ್ ಹಾಗೂ ಹೋರ್ಡಿಂಗ್‌ಗಳ ಹಾವಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಸ್ವಯಂ ಪ್ರೇರಿತ(ಸು- ಮೋಟೊ) ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಿಕೊಂಡಿದೆ.

ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ನಗರ ಪೊಲೀಸ್ ಕಮಿಷನ‌ರ್ ಅವರಿಗೆ ನೋಟಿಸ್ ಜಾರಿಗೊಳಿಸಲು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ಆದೇಶಿಸಿದೆ.

'ನ್ಯಾಯಾಲಯದ ಆದೇಶ ಪಾಲಿಸುವಲ್ಲಿ ವಿಫಲವಾಗಿರುವ ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆಯಡಿ ಯಾಕೆ ಕ್ರಮ ಜರುಗಿಸಬಾರದು ಎಂಬ ಬಗ್ಗೆ ವಿವರಣೆ ನೀಡಿ' ಎಂದು ಪಾಲಿಕೆಯ ಮುಖ್ಯ ಆಯುಕ್ತರು ಹಾಗೂ ನಗರ ಪೊಲೀಸ್ ಆಯುಕ್ತರಿಗೆ ತಾಕೀತು ಮಾಡಿದೆ.

'ನಗರದಲ್ಲಿ ಅನಧಿಕೃತ ಪ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್‌ಗಳ ಹಾವಳಿ ತಡೆಯಲು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸಬೇಕು' ಎಂದು ಕೋರಿ ಮಾಯಿಗೇಗೌಡ ಹಾಗೂ ಇತರರು 2017 ಮತ್ತು 2019ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು, ಈಗಾಗಲೇ 2017, 2018 ಮತ್ತು 2022ರಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಜೊತೆಗೆ ಜು.11ರಂದು ಇಂಗ್ಲಿಷ್ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ಆಧರಿಸಿ ನ್ಯಾಯಾಲಯ ಈ ಸ್ವಯಂ ಪ್ರೇರಿತ(ಸು-ಮೋಟೊ) ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ದಾಖಲಿಸಿಕೊಳ್ಳುತ್ತಿದೆ' ಎಂದು ತಿಳಿಸಿದರು.

“ಹೈಕೋರ್ಟ್ ನ ಹಲವು ಆದೇಶಗಳ ಹೊರತಾಗಿಯೂ ಬೆಂಗಳೂರು ಮಹಾನಗರದಲ್ಲಿ ಅನಧಿಕೃತ ಜಾಹೀರಾತು ಫಲಕಗಳು, ಪ್ಲೆಕ್ಸ್ ಹಾಗೂ ಹೋರ್ಡಿಂಗ್‌ಗಳ ಹಾವಳಿ ಮುಂದುವರಿದಿದೆ' ಎಂಬ ಪತ್ರಿಕೆಯ ವರದಿಯನ್ನು ನ್ಯಾಯಪೀಠ ಉಲ್ಲೇಖಿಸಿದೆ.

'ಹೈಕೋರ್ಟ್ 2017ರಿಂದ ಕಾಲಕಾಲಕ್ಕೆ ಅನೇಕ ಆದೇಶ ಮತ್ತು ನಿರ್ದೇಶನಗಳನ್ನು ನೀಡುತ್ತಾ ಬಂದಿದೆ. 2024ರ ಜನವರಿ 8ರಂದು ವಿವರವಾದ ಆದೇಶವನ್ನೇ ಹೊರಡಿಸಿದೆ. ಆದರೂ ಪ್ರಯೋಜನವಾಗಿಲ್ಲ' ಎಂಬ ಅಂಶವನ್ನು ನ್ಯಾಯಪೀಠ ವಿವರಿಸಿದೆ.

'ಬಿಬಿಎಂಪಿ 6.8 ಲಕ್ಷ ಅನಧಿಕೃತ ಬ್ಯಾನರ್, ಹೋರ್ಡಿಂಗ್‌ಗಳನ್ನು ತೆರವುಗೊಳಿಸಿದೆ ಎಂದು ಪತ್ರಿಕೆಯ ವರದಿಯಲ್ಲಿ ತಿಳಿಸಲಾಗಿದೆ. ಇದು ನಗರದಲ್ಲಿ ಸಾರ್ವಜನಿಕ ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತ ಬ್ಯಾನರ್, ಪ್ಲೆಕ್ಸ್ ಹಾಕುವ ಪ್ರವೃತ್ತಿ ಎಗ್ಗಿಲ್ಲದೆ ಮುಂದುವರಿದಿದೆ ಎನ್ನುವುದನ್ನು ಸಾಕ್ಷೀಕರಿಸುತ್ತದೆ. ಜೊತೆಗೆ ನ್ಯಾಯಾಲಯದ ಆದೇಶಗಳ ಬಗ್ಗೆ ಪಾಲಿಕೆ, ನಗರ ಪೊಲೀಸರು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂಬುದನ್ನೂ ಪುಷ್ಟೀಕರಿಸುತ್ತದೆ. ಹಾಗಾಗಿ, ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಳ್ಳಲಾಗುತ್ತಿದೆ' ಎಂದು ನ್ಯಾಯಪೀಠ ತಿಳಿಸಿದೆ.

ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ, ಬಿಬಿಎಂಪಿ ಮತ್ತು ನಗರ ಪೊಲೀಸರಿಗೆ ನಿರ್ದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಇದೇ 26ಕ್ಕೆ ಮುಂದೂಡಿದೆ.

Read More
Next Story