ಬಿಎಸ್‌ವೈ ಪೋಕ್ಸೋ ಪ್ರಕರಣ | ನ್ಯಾಯ ದೇಗುಲದಲ್ಲಿ ಸತ್ಯಕ್ಕೆ ಜಯ ಸಿಗಲಿದೆ: ಬಿ ವೈ ವಿಜಯೇಂದ್ರ
ಮುಂದಿನ ದಿನಗಳಲ್ಲಿ ನ್ಯಾಯ ದೇಗುಲದಲ್ಲಿ ಸತ್ಯವೇ ಗೆಲ್ಲುತ್ತದೆಂಬ ಅಚಲ ವಿಶ್ವಾಸ ನಮ್ಮದಾಗಿದೆ ಎಂದು ಯಡಿಯೂರಪ್ಪ ಪುತ್ರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ
ತಮ್ಮ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಪೋಕ್ಸೋ ಪ್ರಕರಣದಲ್ಲಿ ಬಂಧಿಸದಂತೆ ಸಿಐಡಿಗೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದ್ದು, ‘ನ್ಯಾಯ ಮಂದಿರ’ದಲ್ಲಿ ಸತ್ಯಕ್ಕೆ ಜಯ ಸಿಗಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಸ್ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಸಿಐಡಿಗೆ ಸೂಚನೆ ನೀಡಿದೆ. ತಮ್ಮ ವಿರುದ್ಧ ತನಿಖೆ ಚುರುಕಾಗುತ್ತಿದ್ದಂತೆ ಮಾಜಿ ಸಿಎಂ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದು, ಸಹಜವಾಗಿ ಅನಾರೋಗ್ಯದ ಸಮಸ್ಯೆಗಳಿರುತ್ತವೆ. ಅವರು ತನಿಖಾ ತಂಡದ ಎದುರು ಜೂನ್ 17 ರಂದು ಹಾಜರಾಗುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಅವರನ್ನು ಬಂಧಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಇದೇ ವೇಳೆ ತನಿಖೆಗೆ ಹಾಜರಾಗುವಂತೆ ಯಡಿಯೂರಪ್ಪಗೆ ಸೂಚಿಸಿದೆ.
ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ, 'ಬಿಎಸ್ ಯಡಿಯೂರಪ್ಪ ಅವರ ಮೇಲಿನ ಕರ್ನಾಟಕದ ಜನರ ಆಶೀರ್ವಾದ, ಕೋಟಿ ಹೃದಯಗಳ ಪ್ರಾರ್ಥನೆ ನ್ಯಾಯ ದೇಗುಲದಲ್ಲಿ ಅನಾವರಣಗೊಂಡಿದೆ. ಷಡ್ಯಂತ್ರ, ಪಿತೂರಿ ರಾಜಕಾರಣವು ಬಿಎಸ್‌ವೈ ಅವರನ್ನು ಹಿಂಬಾಲಿಸಿಕೊಂಡು ಬರುತ್ತಲೇ ಇದೆ. ಎದೆಗುಂದದ ಅವರು ನ್ಯಾಯದ ಹಾದಿಯಲ್ಲಿ ಷಡ್ಯಂತ್ರಗಳನ್ನು ಜಯಿಸಿದ್ದಾರೆ' ಎಂದಿದ್ದಾರೆ.
'ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಉಚ್ಚ ನ್ಯಾಯಾಲಯವು ಅವರಿಗೆ ಮಧ್ಯಂತರ ಜಾಮೀನು ನೀಡಿ 'ಯಡಿಯೂರಪ್ಪನವರು ವಿಚಾರಣೆಗಳಿಗೆ ಬೆನ್ನು ತೋರಿಸುವ ಜಾಯಮಾನದವರಲ್ಲ' ಎನ್ನುವ ಮಾತನ್ನು ಉಲ್ಲೇಖಿಸಿರುವುದು ಬಿಎಸ್ ಯಡಿಯೂರಪ್ಪ ಅವರು ಈ ನೆಲದ ಕಾನೂನಿಗೆ ಗೌರವ ಕೊಡುವ ಪರಿಯನ್ನು ಸಾಕ್ಷೀಕರಿಸಿದೆ. ಮುಂದಿನ ದಿನಗಳಲ್ಲಿ ನ್ಯಾಯ ದೇಗುಲದಲ್ಲಿ ಸತ್ಯವೇ ಗೆಲ್ಲುತ್ತದೆಂಬ ಅಚಲ ವಿಶ್ವಾಸ ನಮ್ಮದಾಗಿದೆ' ಎಂದು ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.
ಕಳೆದ ಮಾರ್ಚ್ 14 ರಂದು ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪ ವಿರುದ್ಧ ಗುರುವಾರ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿತ್ತು.