EPF Issue | ಕಳೆದ 10 ವರ್ಷಗಳ ಅವಧಿ ಅನ್ಯಾಯದ ಕಾಲ: ಕಾಂಗ್ರೆಸ್‌
x

EPF Issue | ಕಳೆದ 10 ವರ್ಷಗಳ ಅವಧಿ ಅನ್ಯಾಯದ ಕಾಲ: ಕಾಂಗ್ರೆಸ್‌

ಪಿಎಫ್‌ ಅಂತಿಮ ಪಾವತಿ ತಿರಸ್ಕೃತಗೊಳ್ಳುವಿಕೆ ಪ್ರಮಾಣದಲ್ಲಿ ಭಾರೀ ಹೆಚ್ಚಳ


ದೇಶದ ಉದ್ಯೋಗಿಗಳ ಭವಿಷ್ಯ ನಿಧಿ(ಪಿಎಫ್)‌ಯ ಅಂತಿಮ ಪಾವತಿ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿಯ ಅಂತಿಮ ಪಾವತಿ ತಿರಸ್ಕೃತ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಶುಕ್ರವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಕಳೆದ 10 ವರ್ಷಗಳ ಅವಧಿಯು ಅನ್ಯಾಯ ಕಾಲವಾಗಿದೆ. ಇದರ ವಿಶೇಷವೆಂದರೆ, ಯಾವುದೇ ಸಮುದಾಯಕ್ಕೆ ಸಂಪೂರ್ಣ ಮೊತ್ತದ ಪಿಎಫ್‌ ಪರಿಹಾರ ಸಿಕ್ಕಿಲ್ಲ. ಇಪಿಎಫ್‌ನ ಅಂತಿಮ ಪಾವತಿ ನಿರಾಕರಣೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. 2017-18ರಲ್ಲಿ ಸುಮಾರು ಶೇ.13 ಇದ್ದ ಇಪಿಎಫ್‌ನ ಅಂತಿಮ ಪಾವತಿ ಪ್ರಮಾಣ 2022-23ರ ವೇಳೆಗೆ ಶೇ.34ಕ್ಕೆ ತಲುಪಿದೆ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿದ್ದಾರೆ.

ಕಳೆದ 10 ವರ್ಷಗಳ ಅವಧಿ ಅನ್ಯಾಯದ ಕಾಲವಾಗಿದೆ. ಯಾವುದೇ ಸಮುದಾಯಕ್ಕೂ ನ್ಯಾಯ ಸಿಗುತ್ತಿಲ್ಲ. ಮಹಿಳೆಯರು ಉದ್ಯೋಗ ಕ್ಷೇತ್ರದಿಂದ ದೂರ ಉಳಿಯುತ್ತಿದ್ದಾರೆ. ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ರೈತರು ಸೂಕ್ತ ಬೆಲೆ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ ಎಂದಿದ್ದಾರೆ.

ಕೂಲಿ ಮಾಡಿಕೊಂಡು ಜೀವನ ಸಾಗಿಸುವವರು ಸಹ ಸ್ವಂತ ಆದಾಯ ಗಳಿಸಲು ಆಗುತ್ತಿಲ್ಲ. ಇದರ ನಡುವೆಯೇ ದೇಶದ ಕಾರ್ಮಿಕರ ಭವಿಷ್ಯ ನಿಧಿಯನ್ನು ನಿರ್ವಹಿಸುವ ಸರ್ಕಾರಿ ಸಂಸ್ಥೆ ಇಪಿಎಫ್‌ಒ, ಅಂತಿಮ ಪಾವತಿ ನಿರಾಕರಣೆಯಲ್ಲಿ ತೀವ್ರ ಏರಿಕೆ ಕಂಡಿದೆ. ಇಂಥ ನಿರಾಕರಣೆಯು ಕಾರ್ಮಿಕರ ಕುಟುಂಬಗಳಿಗೆ ತೀವ್ರ ಸಮಸ್ಯೆ ಸೃಷ್ಟಿಸಲಿದೆ ಮತ್ತು ಅವರ ಮೇಲೆ ಅಪಾರ ಒತ್ತಡ ಹೇರುತ್ತಿದೆ ಎಂದಿದ್ದಾರೆ.

ಪಿಎಫ್‌ ಕ್ಲೈಮ್‌ಗಳನ್ನು ಅನುಮೋದನೆ ಮಾಡುವ ಆನ್‌ಲೈನ್ ವ್ಯವಸ್ಥೆ ತಪ್ಪಾಗಿರುವುದೇ ಪಿಎಫ್‌ ಅಂತಿಮ ಪಾವತಿ ನಿರಾಕರಣೆಗೆ ಪ್ರಮುಖ ಕಾರಣ. ಇಪಿಎಫ್‌ಒದ ಸಂವೇದನಾಶೀಲರಹಿತ ಹಾಗೂ ಅಧಿಕಾರಶಾಹಿ ನೀತಿಗಳಿಂದ ನಿವೃತ್ತ ಕಾರ್ಮಿಕರು ತೀವ್ರ ಸಂಕಷ್ಟದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.

Read More
Next Story