ರಸ್ತೆ ಅಪಘಾತದಲ್ಲಿ ತೆಲಂಗಾಣ ಶಾಸಕಿ ಲಾಸ್ಯ ನಂದಿತಾ ಸಾವು
x

ರಸ್ತೆ ಅಪಘಾತದಲ್ಲಿ ತೆಲಂಗಾಣ ಶಾಸಕಿ ಲಾಸ್ಯ ನಂದಿತಾ ಸಾವು

10 ದಿನಗಳ ಹಿಂದೆಯಷ್ಟೇ ನಾರ್ಕಟ್‌ಪಲ್ಲಿಯಲ್ಲಿ ನಡೆದ ಅಪಘಾತದಲ್ಲಿ ನಂದಿತಾ ಸಣ್ಣಪುಟ್ಟ ಗಾಯಗಳಿಂದ ಬದುಕುಳಿದಿದ್ದರು.


ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಶಾಸಕಿ ಜಿ ಲಾಸ್ಯ ನಂದಿತಾ (37 ವರ್ಷ) ಶುಕ್ರವಾರ ಬೆಳಗ್ಗೆ ಹೈದರಾಬಾದ್ ಬಳಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಸಿಕಂದರಾಬಾದ್ ಕಂಟೋನ್ಮೆಂಟ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಜಿ ಲಾಸ್ಯ ನಂದಿತಾ ಅವರು ಮೊದಲ ಬಾರಿಗೆ ಶಾಸಕರಾಗಿದ್ದರು. ಪತಂಚೇರು ಬಳಿಯ ಹೊರ ವರ್ತುಲ ಟ್ರಾಫಿಕ್ (ORR) ನಲ್ಲಿ ವಾಹನವು ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ಡಿಕ್ಕಿಯ ರಭಸಕ್ಕೆ ಶಾಸಕರ ಚಾಲಕನಿಗೆ ಗಾಯಗಳಾಗಿವೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ನಂದಿತಾ ಅವರು 10 ದಿನಗಳ ಹಿಂದೆಯಷ್ಟೇ ನಾರ್ಕಟ್‌ ಪಲ್ಲಿಯಲ್ಲಿ ನಡೆದ ಮತ್ತೊಂದು ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಿಂದ ಬದುಕುಳಿದಿದ್ದರು. ಫೆಬ್ರವರಿ 13 ರಂದು ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ನಲ್ಗೊಂಡಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ಆಕೆಯ ಗೃಹರಕ್ಷಕ ದಳದ ಸಿಬ್ಬಂದಿ ಸಾವನ್ನಪ್ಪಿದ್ದರು.

ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು, “ಕಂಟೋನ್ಮೆಂಟ್ ಶಾಸಕಿ ಲಾಸ್ಯ ನಂದಿತಾ ಅವರ ಅಕಾಲಿಕ ಮರಣವು ನನಗೆ ತೀವ್ರ ಆಘಾತವನ್ನುಂಟು ಮಾಡಿದೆ. ನಂದಿತಾ ಅವರ ತಂದೆ ಸ್ವರ್ಗೀಯ ಸಾಯಣ್ಣ ಅವರೊಂದಿಗೆ ನನಗೆ ನಿಕಟ ಸಂಬಂಧವಿತ್ತು. ಕಳೆದ ವರ್ಷ ಇದೇ ತಿಂಗಳಲ್ಲಿ ಅವರು ನಿಧನರಾದರು... ಅದೇ ತಿಂಗಳಲ್ಲಿ ನಂದಿತಾ ಕೂಡ ಹಠಾತ್ತನೆ ಸಾವನ್ನಪ್ಪಿರುವುದು ತುಂಬಾ ದುಃಖಕರವಾಗಿದೆ. ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳು ಶಕ್ತಿ ನೀಡಲಿ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆʼʼ ಎಂದು ಹೇಳಿದ್ದಾರೆ.

ನಂದಿತಾ ಅವರ ಹಠಾತ್ ನಿಧನಕ್ಕೆ ಸಂತಾಪ ಸೂಚಿಸಲು ಹಿರಿಯ BRS ನಾಯಕ ಕೆಟಿ ರಾಮರಾವ್ ಅವರು X (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್‌ ಮಾಡಿದ್ದಾರೆ. 1986ರಲ್ಲಿ ಹೈದರಾಬಾದ್‌ನಲ್ಲಿ ಜನಿಸಿದ ನಂದಿತಾ ಸುಮಾರು ಒಂದು ದಶಕದ ಹಿಂದೆ ರಾಜಕೀಯ ಪ್ರವೇಶ ಮಾಡಿದ್ದರು. 2023 ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಸಿಕಂದರಾಬಾದ್ ಕಂಟೋನ್ಮೆಂಟ್‌ ನಿಂದ ಶಾಸಕರಾಗಿ ಆಯ್ಕೆಯಾಗುವ ಮೊದಲು ಅವರು ಕವಾಡಿಗುಡ ವಾರ್ಡ್‌ ನಲ್ಲಿ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿದರು. ರಾಜ್ಯ ವಿಧಾನಸಭೆಯ ಅತ್ಯಂತ ಕಿರಿಯ ಶಾಸಕರಲ್ಲಿ ಒಬ್ಬರಾಗಿದ್ದರು..

Read More
Next Story