ಬಂಡಾಯ ಅಭ್ಯರ್ಥಿಯಾಗಲು ಬೆಂಬಲಿಗರ ಒತ್ತಡ: ಕೆಎಸ್‌ ಈಶ್ವರಪ್ಪ ಸ್ಫೋಟಕ ಹೇಳಿಕೆ
x

ಬಂಡಾಯ ಅಭ್ಯರ್ಥಿಯಾಗಲು ಬೆಂಬಲಿಗರ ಒತ್ತಡ: ಕೆಎಸ್‌ ಈಶ್ವರಪ್ಪ ಸ್ಫೋಟಕ ಹೇಳಿಕೆ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶಿವಮೊಗ್ಗದಿಂದ ಟಿಕೆಟ್‌ ನೀಡಿದರೆ ಸ್ಪರ್ಧಿಸುವೆ. ಇಲ್ಲವಾದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಿರಿ ಎಂದು ಬೆಂಬಲಿಗರು ಹೇಳುತ್ತಿದ್ದಾರೆ ಎಂದು ಕೆಎಸ್‌ ಈಶ್ವರಪ್ಪ ಹೇಳಿದ್ದಾರೆ.


ಶಿವಮೊಗ್ಗ: ನನಗೆ ಬಹಳ ಅನ್ಯಾಯವಾಗಿದೆ ಎಂದು ನನ್ನ ಬೆಂಬಲಿಗರಿಗೆ ಬೇಸರವಾಗಿದೆ. ಬಂಡಾಯ ಅಭ್ಯರ್ಥಿಯಾಗಿ ನಿಲ್ಲಲು ಒತ್ತಡ ಕೂಡಾ ಹಾಕುತ್ತಿದ್ದಾರೆ. ಶುಕ್ರವಾರ ಬೆಂಬಲಿಗರ ಸಭೆ ಕರೆದಿದ್ದು, ಅಲ್ಲಿ ತೆಗೆದುಕೊಳ್ಳುವ ತೀರ್ಮಾನದಂತೆ ಮುಂದುವರಿಯುವೆ ಎಂದು ‌ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ನಿಮಗೆ ಯಾವ ರೀತಿಯ ಅನ್ಯಾಯವಾಗಿದೆ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದ ಅವರು, “ಬಿಜೆಪಿ ನನಗೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಚರ್ಚಿಸಿ ತೀರ್ಮಾನಿಸಲು ಕಲಿಸಿಕೊಟ್ಟಿದೆ. ಅದರಂತೆ ನಾನು ನಡೆಯುತ್ತೇನೆ” ಎಂದಿದ್ದಾರೆ.

"ಪ್ರಹ್ಲಾದ್‌ ಜೋಷಿ ಶಿವಮೊಗ್ಗಕ್ಕೆ ಬಂದಾಗ ನಮ್ಮ ಮನೆಗೆ ಬರುತ್ತಾರೆ. ಅವರೊಂದಿಗೆ ಚರ್ಚೆಯೂ ಆಗಿದೆ. ಆದರೆ, ಆ ಚರ್ಚೆಯನ್ನು ಬಹಿರಂಗಪಡಿಸಲಾಗುವುದಿಲ್ಲ. ನನ್ನ ಹಿತೈಷಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ" ಎಂದು ಅವರು ಹೇಳಿದರು.

“ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಕೊಡಿಸುವೆ. ಅಲ್ಲಿ ಓಡಾಡಿ ಗೆಲ್ಲಿಸಿಕೊಂಡು ಬರುವೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಭರವಸೆ ಕೊಟ್ಟ ಕಾರಣಕ್ಕೆ ಪುತ್ರ ಕಾಂತೇಶನನ್ನು ಅಲ್ಲಿಗೆ ಕಳುಹಿಸಿದ್ದೆ. ಈಗಲೂ ಹಾವೇರಿಯಿಂದ ಪುತ್ರನಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ನನಗೆ ಶಿವಮೊಗ್ಗ ಕ್ಷೇತ್ರದಿಂದ ಟಿಕೆಟ್‌ ನೀಡಿದರೆ ನಾನೇ ಸ್ಪರ್ಧಿಸುವೆ" ಎಂದು ಅವರು ಹೇಳಿದ್ದಾರೆ.

“ಹಾವೇರಿ ಲೋಕಸಭಾ ಕ್ಷೇತ್ರದಿಂದ ನನಗೆ ಟಿಕೆಟ್ ಕೊಟ್ಟರೆ ಸ್ಪರ್ಧಿಸುವುದಿಲ್ಲ. ಬೆಂಬಲಿಗರ ಒತ್ತಾಯವೂ ಇರುವುದರಿಂದ ಅಗತ್ಯ ಬಿದ್ದರೆ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ನನಗೆ ಎಂಪಿ ಆಗುವ ಆಸೆ ಇಲ್ಲ. ಆದರೆ, ಇದು ಪಕ್ಷದ ಭವಿಷ್ಯದ ದೃಷ್ಟಿಯಿಂದ ಅಗತ್ಯ ಇದೆ” ಎಂದು ಹೇಳಿದರು.

“ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಸೋತು 66 ಸೀಟಿಗೆ ಬಂದು ನಿಂತಿದ್ದೇವೆ, ನಮ್ಮ ಪಕ್ಷದ್ದೂ ತಪ್ಪಿದೆ. ಆ ತಪ್ಪುಗಳನ್ನು ತಿದ್ದಿಕೊಳ್ಳುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಚರ್ಚೆ ಆಗಬೇಕು, ಪಕ್ಷದಲ್ಲಿರುವ ದೋಷ ಸರಿ ಪಡಿಸಬೇಕು. ನಾನು ಸ್ಪರ್ಧಿಸುವುದರಿಂದ ಪಕ್ಷಕ್ಕೆ ಒಳ್ಳೆಯದು ಆಗುತ್ತದೆಯೋ, ಇಲ್ಲವೋ ಎಂಬುದನ್ನು ನೋಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ” ಎಂದು ಅವರು ಹೇಳಿದರು.

ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಣಕ್ಕಿಳಿಯುವ ನಿರೀಕ್ಷೆಯಲ್ಲಿ ಈಶ್ವರಪ್ಪ ಪುತ್ರ ಕೆ ಇ ಕಾಂತೇಶ್‌ ಕಳೆದ ಒಂದು ವರ್ಷದಿಂದ ಹಾವೇರಿಯಲ್ಲಿ ಸಕ್ರಿಯವಾಗಿದ್ದರು. ಆದರೆ, ಪಕ್ಷದ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಲ್ಲಿ ಅವರಿಗೆ ಟಿಕೆಟ್‌ ಕೈತಪ್ಪುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಪಕ್ಷದ ವಿರುದ್ಧ ಅಸಮಾಧಾನಗೊಂಡಿರುವ ಈಶ್ವರಪ್ಪ ಶಿವಮೊಗ್ಗದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸೂಚನೆ ಕೊಟ್ಟಿದ್ದಾರೆ ಎಂದೇ ಅವರ ಈ ಹೇಳಿಕೆಯನ್ನು ವ್ಯಾಖ್ಯಾನಿಸಲಾಗುತ್ತಿದೆ.

Read More
Next Story