ಸೌಜನ್ಯ ಪ್ರಕರಣ: ಸಿಬಿಐಗೆ ನೋಟಿಸ್ ನೀಡಲು ಹೈಕೋರ್ಟ್ ಆದೇಶ
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಆದೇಶಿಸಬೇಕು ಎಂದು ಸೌಜನ್ಯ ತಂದೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸಿಬಿಐಗೆ ನೋಟಿಸ್ ಜಾರಿಗೊಳಿಸಿ ಆದೇಶಿಸಿದೆ.
ಬೆಂಗಳೂರು: ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಆದೇಶಿಸಬೇಕು ಎಂದು ಸೌಜನ್ಯ ತಂದೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸಿಬಿಐಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.
ಮೃತ ಬಾಲಕಿಯ ತಂದೆ ಧರ್ಮಸ್ಥಳದ ಪಾಂಗಳದ ನಿವಾಸಿ ಚಂದಪ್ಪ ಗೌಡ ಅವರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ಪೀಠವು ನಡೆಸಿತು. ಅರ್ಜಿದಾರರ ಪರ ಹಿರಿಯ ವಕೀಲ ಎಂ.ಆರ್. ಬಾಲಕೃಷ್ಣ ವಾದ ಮಂಡಿಸಿದರು.
ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿ ವಿಚಾರಣಾ ನ್ಯಾಯಾಲಯ ನೀಡಿರುವ ತೀರ್ಪು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಾಕಿ ಇದೆ. ಆ ಮೇಲ್ಮನವಿಯ ಜೊತೆಗೆ ಈ ಅರ್ಜಿಯನ್ನೂ ವಿಚಾರಣೆಗೆ ನಿಗದಿಗೊಳಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ಸೂಕ್ತ ವಿಭಾಗೀಯ ಪೀಠದ ಮುಂದೆ ಈ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಲು ಮುಖ್ಯ ನ್ಯಾಯಮೂರ್ತಿಗಳಿಂದ ಅನುಮತಿ ಪಡೆಯುವಂತೆ ರಿಜಿಸ್ಟ್ರಾರ್‌ಗೆ ಸೂಚಿಸಿದೆ.
ಪ್ರಕರಣದಿಂದ ಖುಲಾಸೆಯಾಗಿರುವ ಸಂತೋಷ್ ರಾವ್ ಅನ್ನು ಸಹ ಪ್ರಕರಣದಲ್ಲಿ ಪ್ರತಿವಾದಿ ಮಾಡಲಾಗಿದೆ.
ಏನಿದು ಪ್ರಕರಣ?:
2012ರ ಅ.9ರಂದು ಬಾಲಕಿ ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿತ್ತು. ಪ್ರಕರಣ ತೀವ್ರ ಕಾವು ಪಡೆಯುತ್ತಿದ್ದಂತೆಯೇ, ಬೆಳ್ತಂಗಡಿ ಠಾಣೆ ಪೊಲೀಸರು ಸಂತೋಷ್ ರಾವ್ ಎಂಬಾತನನ್ನು ಬಂಧಿಸಿದ್ದರು. ಪ್ರಕರಣದ ತನಿಖೆಯನ್ನು ಸಿಐಡಿ, ಆ ಬಳಿಕ ಸಿಬಿಐಗೆ ವರ್ಗಾಯಿಸಲಾಯಿತು. ಸಿಬಿಐ ತನಿಖೆ ಪೂರ್ಣಗೊಳಿಸಿ, ಸಂತೋಷ್ ರಾವ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆದರೆ, ಸೆಷನ್ಸ್ ನ್ಯಾಯಾಲಯವು ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಸಂತೋಷ್ ರಾವ್ ರನ್ನು ಖುಲಾಸೆಗೊಳಿಸಿತ್ತು.
ಪ್ರಕರಣದಲ್ಲಿ ಆರೋಪಿಯ ಪಾತ್ರ ಇರುವುದನ್ನು ಮತ್ತು ಆತನ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ಸಾಬೀತುಪಡಿಸುವಲ್ಲಿ ತನಿಖಾಧಿಕಾರಿಗಳು ವಿಫಲವಾಗಿದ್ದಾರೆ. ತನಿಖೆಯನ್ನು ಸಮರ್ಪಕವಾಗಿ, ನ್ಯಾಯೋಚಿತವಾಗಿ ಮಾಡಿಲ್ಲ. ಹಾಗಾಗಿ ಮರು ತನಿಖೆ ನಡೆಸಲು ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.