ಶಿರೂರು ಗುಡ್ಡ ಕುಸಿತ | ಮತ್ತೋರ್ವ ಚಾಲಕ ನಾಪತ್ತೆ, ಶೋಧಕ್ಕೆ ಕುಟುಂಬದ ಮೊರೆ
x
ಅಂಕೋಲ ಗುಡ್ಡ ಕುಸಿತ

ಶಿರೂರು ಗುಡ್ಡ ಕುಸಿತ | ಮತ್ತೋರ್ವ ಚಾಲಕ ನಾಪತ್ತೆ, ಶೋಧಕ್ಕೆ ಕುಟುಂಬದ ಮೊರೆ

ಅಂಕೋಲ ಸಮೀಪದ ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ಇದೀಗ ಮತ್ತೋರ್ವ ತಮಿಳುನಾಡು ಮೂಲದ ಲಾರಿ ಚಾಲಕ ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿದೆ.


ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶೀರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ನಡೆದು ಇಂದಿಗೆ 10 ದಿನಗಳು ಕಳೆದಿದ್ದು, ಇನ್ನೂ ನಾಪತ್ತೆಯಾಗಿರುವ ನಾಲ್ವರಿಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಗಂಗಾವಳಿ ನದಿಯಲ್ಲಿ ಇರುವುದು ಬುಧವಾರ (ಜು.24) ಖಚಿತವಾಗಿದ್ದು, ಬೂಮ್ ಫೋಕ್ಲೇನ್ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ. ಈ ನಡುವೆ ಘಟನೆಯಲ್ಲಿ ಮತ್ತೋರ್ವ ತಮಿಳುನಾಡು ಮೂಲದ ಲಾರಿ ಚಾಲಕ ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿದೆ.

ತಮಿಳುನಾಡು ಮೂಲದ ಶರವಣ ನಾಪತ್ತೆ

ಶಿರೂರು ಬಳಿ ಗುಡ್ಡ ಕುಸಿತವಾದ ಜಾಗದ ಪಕ್ಕದಲ್ಲೇ ತಮಿಳುನಾಡು ಮೂಲದ ಶರವಣನ ಟ್ಯಾಂಕರ್ ಇತ್ತು. ಅದನ್ನು ಜಿಲ್ಲಾಡಳಿತ ಕಾರ್ಯಾಚರಣೆ ವೇಳೆ ಬೇರೆ ಕಡೆಗೆ ಸ್ಥಳಾಂತರ ಮಾಡಿದ್ದರು. ಟ್ಯಾಂಕರ್ ಲಾರಿ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ‘ಚಾಲಕ ಶರವಣ ನಾಪತ್ತೆ ಆದ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಅವರ ಮಾವ ಸೆಂದಿಲ್ ಎಂಬುವವರು ದೂರು ದಾಖಲಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾತನಾಡಿದ ಅವರು, ‘ಆತನ ಮೊಬೈಲ್​ ಬ್ಯಾಟರಿ ಕಡಿಮೆ ಆಗಿ ಮೊಬೈಲ್ ಸ್ವಿಚ್ ಆಫ್ ಆಗಿರಬಹುದು. ಆದರೆ ಬಹಳ ದಿನ ಕಳೆದರೂ ಮೊಬೈಲ್ ಆನ್ ಆಗದೇ ಇರುವ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ್ದೇವೆ ಎಂದರು. ಇದೀಗ ಲಾರಿ ಚಾಲಕರಿಂದ ಮಾಹಿತಿ ಸಿಗುತ್ತಿದ್ದಂತೆ ಶರವಣ ಸಂಬಂಧಿಕರು ಶಿರೂರಿಗೆ ಬಂದಿದ್ದಾರೆ.

ಸದ್ಯ ಕೇರಳ ಮೂಲದವರಾದ ಲಾರಿ ಚಾಲಕ ಅರ್ಜುನ್, ತಮಿಳುನಾಡು ಎಲ್​ಪಿಜಿ ಗ್ಯಾಸ್ ಟ್ಯಾಂಕರ್ ಚಾಲಕ ಶರವಣ, ಗಂಗೆಕೊಳ ಗ್ರಾಮದ ಯುವಕ ಜಗನ್ನಾಥ್ ಹಾಗೂ ಲೋಕೇಶ್ ನಾಯ್ಕ್ ಎಂಬ ನಾಲ್ವರಿಗೆ ಶೋಧ ಕಾರ್ಯ ನಡೆಯುತ್ತಿದೆ.

ಟ್ರಕ್‌ಗಾಗಿ ಹುಡುಕಾಟ

ಇನ್ನು ಭೀಕರ ಗುಡ್ಡಕುಸಿತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಈಗ ಗುಡ್ಡದ ಮುಂಭಾಗದಲ್ಲಿರುವ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ. ನೀರಿನಲ್ಲಿ ಮುಳುಗಿರುವ ಟ್ರಕ್ ಅನ್ನು ಈಗ ಗುರುತಿಸಲಾಗಿದೆ ಮತ್ತು ಅದನ್ನು ಮೇಲಕ್ಕೆ ಎತ್ತಲು ಕಾರ್ಯಾಚರಣೆ ರೂಪಿಸಲಾಗುತ್ತಿದೆ ಎನ್ನುವ ಬಗ್ಗೆ ಸರ್ಕಾರವೇ ಮಾಹಿತಿ ನೀಡಿದೆ. ಸುಧಾರಿತ ಡ್ರೋನ್ ಆಧಾರಿತ ಇಂಟೆಲಿಜೆಂಟ್ ಅಂಡರ್‌ಗೌಂಡ್ ಬರೀಡ್ ಆಪ್ಟೆಕ್ಟ್ ಡಿಟೆಕ್ಷನ್ ಸಿಸ್ಟಮ್ ಅನ್ನು ಸಹ ಹುಡುಕಾಟಕ್ಕಾಗಿ ನಿಯೋಜಿಸಲಾಗಿದೆ. ಕೋಸ್ಟ್ ಗಾರ್ಡ್ ನೀರಿನಲ್ಲಿ ನಾಪತ್ತೆಯಾದ ದೇಹಗಳಿಗಾಗಿ ಹೆಲಿಕಾಪ್ಟರ್ ಹುಡುಕಾಟ ನಡೆಸುತ್ತಿದೆ.

ಇನ್ನು ಈ ಗುಡ್ಡ ಕುಸಿತದಲ್ಲಿ ಸಿಕ್ಕಿಕೊಂಡ ಒಟ್ಟು ಎಂಟು ಜನರ ಶವ ಇದುವರೆಗೆ ಪತ್ತೆಯಾಗಿದೆ. ಇನ್ನು ಘಟನಾ ಸ್ಥಳಕ್ಕೆ ಸಿ.ಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಕುಟುಂಬಕ್ಕೆ ಸಿಎಂ ಐದು ಲಕ್ಷ ಪರಿಹಾರ ಕೂಡ ಘೋಷಣೆ ಮಾಡಿದ್ದಾರೆ.

Read More
Next Story