ತಮಿಳುನಾಡು ವಿಧಾನಸಭೆಯಲ್ಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ
ಮಣ್ಣಿನ ಫಲವತ್ತತೆ ಕಾಪಾಡಲು ವಿಶೇಷ ಯೋಜನೆ
ತಮಿಳುನಾಡು ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಎಂ.ಆರ್.ಕೆ ಪನ್ನೀರ್ ಸೆಲ್ವಂ ಅವರು ತಮಿಳುನಾಡು ವಿಧಾನಸಭೆಯಲ್ಲಿ ಮಂಗಳವಾರ 2024-25ನೇ ಸಾಲಿನ ಕೃಷಿ ಬಜೆಟ್ ಮಂಡಿಸಿದರು.
ಈ ಬಜೆಟ್ ನಲ್ಲಿ ಪ್ರತ್ಯೇಕವಾಗಿ ಕೃಷಿ ಬಜೆಟ್ ಮಂಡನೆ ಮಾಡಲಾಗಿದ್ದು, ಮಣ್ಣಿನ ಫಲವತ್ತತೆಯನ್ನು ಸುಧಾರಿಸುವುದು ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ.
ಅಲ್ಲದೇ ರಾಸಾಯನಿಕ ಗೊಬ್ಬರಗಳು, ಕಳೆನಾಶಕಗಳು ಮತ್ತು ಕೀಟನಾಶಕಗಳನ್ನು ಯಾವುದೇ ವಿವೇಚನೆಯಿಲ್ಲದ ಬಳಕೆ ಮಾಡಿರುವುದು ಸೇರಿದಂತೆ ಹಲವು ಕಾರಣಗಳಿಂದ ಮಣ್ಣಿನ ಫಲವತ್ತತೆ ಕುಸಿತವಾಗಿದೆ ಎಂದು ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ಸುಸ್ಥಿರ ಕೃಷಿಗಾಗಿ ರಾಸಾಯನಿಕ ಮುಕ್ತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಿದೆ. ಇನ್ನು ಹೊಸ ಪ್ರಮುಖ ಯೋಜನೆಯಾದ 'ಮುಖ್ಯಮಂತ್ರಿಗಳ ಮಣ್ಣುಯಿರ್ ಕಾತು ಮಣ್ಣುಯಿರ್ ಕಾಪ್ಪೊಂ ಯೋಜನೆ' (ಮುಖ್ಯಮಂತ್ರಿ ಮಣ್ಣಿನ ಫಲವತ್ತತೆ ರಕ್ಷಿಸುವ ಯೋಜನೆ)ಯ ಭಾಗವಾಗಿ 2024-2025ರ ಅವಧಿಯಲ್ಲಿ 206 ಕೋಟಿ ರೂಪಾಯಿ ವೆಚ್ಚದಲ್ಲಿ 22 ಘಟಕಗಳನ್ನು ಉದ್ಘಾಟಿಸಲಾಗುತ್ತಿದೆ.
ಇನ್ನು ಭತ್ತದ ಬೆಳೆಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡುವುದು, ಹವಾಮಾನ ಬದಲಾವಣೆಯನ್ನು ಎದುರಿಸಲು ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮವನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಅಲ್ಲದೇ ಮಧುಮೇಹ ತಡೆಯುವ ಉದ್ದೇಶದಿಂದ ಸಾಂಪ್ರದಾಯಿಕ ಭತ್ತದ ತಳಿಗಳನ್ನು ಉತ್ತೇಜಿಸಲು ಪನ್ನೀರಸೆಲ್ವಂ ಅವರು ಬೀಜ ವಿತರಣೆಯ ಬಗ್ಗೆಯೂ ಮಾತನಾಡಿದ್ದಾರೆ. ಅಲ್ಲದೇ ಸಿರಿಧಾನ್ಯ ಬೆಳೆಗಳಿಗೆ 65.30 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ಉತ್ತಮ ಇಳುವರಿಯನ್ನು ನಿರೀಕ್ಷಿಸಲಾಗಿದೆ.