Bitcoin Scam | ಹಗರಣದ ಆರೋಪಿ ಶ್ರೀಕಿಗೆ ಭದ್ರತೆ; ಹಿನ್ನೆಲೆ ಏನು ?
x
ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ

Bitcoin Scam | ಹಗರಣದ ಆರೋಪಿ ಶ್ರೀಕಿಗೆ ಭದ್ರತೆ; ಹಿನ್ನೆಲೆ ಏನು ?


ರಾಜ್ಯದಲ್ಲಿ ನಡೆದ ಬಹುದೊಡ್ಡ ಸೈಬರ್ ಕ್ರೈಮ್ ಹಾಗೂ ಬಿಟ್‌ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ (ಶ್ರೀಕಿ)ಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಆತನಿಗೆ ಬೆಂಗಳೂರು ನಗರ ಪೊಲೀಸರು ಗನ್‌ ಮ್ಯಾನ್ ಭದ್ರತೆ ಕಲ್ಪಿಸಿದ್ದಾರೆ.

ಬಿಟ್‌ ಕಾಯಿನ್ ಹಗರಣ ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳಕಿಗೆ ಬಂದಿತ್ತು. ಈ ಹಗರಣದಲ್ಲಿ ಸ್ವತಃ ಅಂದಿನ ಮುಖ್ಯಮಂತ್ರಿ ಸೇರಿದಂತೆ ರಾಜಕೀಯ ನಾಯಕರ ಹೆಸರು ಸಹ ಕೇಳಿಬಂದಿತ್ತು. ವಿಚಾರಣೆ ವೇಳೆ ಬಂಧಿತ ಆರೋಪಿ ರಾಜಕಾರಣಿಗಳು ಹಾಗೂ ಐಪಿಎಸ್ ಅಧಿಕಾರಿಗಳ ಹೆಸರನ್ನೂ ಹೇಳಿದ್ದ. ಹೀಗಾಗಿ, ಈ ಹಗರಣದ ತನಿಖೆ ನಡೆಸುವುದಕ್ಕಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ದಳ (SIT) ರಚಿಸಿತ್ತು.

ವಿಚಾರಣೆಯ ವೇಳೆ ಆರೋಪಿ ಶ್ರೀಕಿ ರಾಜಕಾರಣಿಗಳು ಹಾಗೂ ಐಪಿಎಸ್ ಅಧಿಕಾರಿಗಳ ಹೆಸರು ಹೇಳಿದ ಮೇಲೆ ಆತನಿಗೆ ಬೆದರಿಕೆಯ ಕರೆಗಳು ಬರುತ್ತಿದೆ ಎನ್ನಲಾಗಿದ್ದು, ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಗನ್‌ ಮ್ಯಾನ್ ಭದ್ರತೆ ನೀಡಲಾಗಿದೆ.

ಯಾರು ಈ ಶ್ರೀಕಿ ?

ಶ್ರೀಕಿ ಇದೀಗ ಜಾಮೀನಿನ ಮೇಲೆ ಹೊರಗಿದ್ದಾನೆ. ಆದರೆ, ಶ್ರೀಕಿಯ ಮೇಲೆ ಹಲವು ಗಂಭೀರವಾದ ಆರೋಪಗಳಿವೆ. ಬೆಂಗಳೂರಿನ ನಿವಾಸಿಯಾಗಿರುವ ಈತ ವಿದೇಶದಲ್ಲಿ ಕಂಪ್ಯೂಟರ್ ಸೈನ್ಸ್ ಬಿಎಸ್ಸಿ ಪೂರೈಸಿದ್ದಾನೆ. ಕರ್ನಾಟಕ ಸರ್ಕಾರ ಇ-ಆಡಳಿತ ಪೋರ್ಟಲ್‌ನಿಂದ ಹಣ ವರ್ಗಾವಣೆ ಮಾಡಿರುವುದು, ಬಿಟ್ ಕಾಯಿನ್ ಹಗರಣ, ಸೈಬರ್ ವಂಚನೆ, ವೆಬ್ಸೈಟ್ ಹ್ಯಾಕ್ ಮಾಡಿದ ಆರೋಪ, ಡಾರ್ಕ್ ವೆಬ್ ಬಳಕೆಯ ಮೂಲಕ ಮಾದಕವಸ್ತುಗಳ ಮಾರಾಟ, ಮಾದಕವಸ್ತುಗಳ ಮಾರಾಟ ಹಾಗೂ ಕ್ರಿಪ್ಟೋಕರೆನ್ಸಿ ಕಳ್ಳತನ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾನೆ.

ಡಾರ್ಕ್ವೆಬ್ ಮೂಲಕ ವಿದೇಶದಿಂದ ಗಾಂಜಾ ತರಿಸಿಕೊಂಡಿದ್ದ ಆರೋಪದ ಮೇಲೆ ಶ್ರೀಕಿ ಹಾಗೂ ಆತನ ಸಹಚರರ ಮೇಲೆ ಬೆಂಗಳೂರಿನ ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಸಿಸಿಬಿ ಅಧಿಕಾರಿಗಳು ಶ್ರೀಕಿಯನ್ನು ಬಂಧಿಸಿದ್ದರು. ಇದೀಗ ಆತ ಜಮೀನಿನ ಮೇಲೆ ಬಿಡುಗಡೆಯಾಗಿದ್ದು, ಎಸ್ಐಟಿ ತನಿಖೆ ಮುಂದುವರಿದಿದೆ.

ಶ್ರೀಕಿ ಹಗರಣ ಬೆಳಕಿಗೆ ಬಂದಿದ್ದು ಹೇಗೆ ?

ಶ್ರೀಕಿಯ ಅವ್ಯವಹಾರ ಮೊದಲು ಬೆಳಕಿಗೆ ಬಂದಿದ್ದು, 2019ರಲ್ಲಿ. ಆ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಹಣಕಾಸು ಸಲಹೆಗಾರರಾಗಿದ್ದ ಎಸ್.ಕೆ. ಶೈಲಜಾ ಅವರು ಅರ್ನೆಸ್ಟ್ ಮನಿ ಡೆಪಾಸಿಟ್ಸ್ (ಇಎಂಡಿ) ಮರುಪಾವತಿಯನ್ನು ಪರಿಶೀಲಿಸುವಾಗ ಹ್ಯಾಕಿಂಗ್ ಆಗಿರುವುದು ಬೆಳಕಿಗೆ ಬಂದಿತ್ತು. ಸರ್ಕಾರದ ಅಧಿಕೃತ ಖಾತೆಯಿಂದ ಬರೋಬ್ಬರಿ 7.37 ಕೋಟಿ ರೂಪಾಯಿ ಅನಧಿಕೃತವಾಗಿ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿತ್ತು. ಪ್ರಕರಣ ಸಂಬಂಧ ಸಿಐಡಿಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆಯಲ್ಲಿ ಶ್ರೀಕಿ ಕರ್ನಾಟಕ ಸರ್ಕಾರದ ಇ-ಆಡಳಿತ ಕೇಂದ್ರದ ಪೋರ್ಟಲ್ ಅನ್ನು ಹ್ಯಾಕ್ ಮಾಡಿದ್ದು, 10.5 ಕೋಟಿ ರೂ, ಮೊತ್ತವನ್ನು ವಿವಿಧ ಖಾತೆಗಳಿಗೆ ವರ್ಗಾವಣೆಯಾಗಿದ್ದು ಬೆಳಕಿಗೆ ಬಂದಿತ್ತು.

ಬಿಟ್‌ ಕಾಯಿನ್ ಹಗರಣ ಎಂದರೇನು ?

ಬಿಟ್ ಕಾಯಿನ್ ಹಗರಣವನ್ನು ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಬೆಳಕಿಗೆ ಬಂದಿದ್ದ ಬಹುದೊಡ್ಡ ಸೈಬರ್ ವಂಚನೆ ಎಂದೇ ಪರಿಗಣಿಸಲಾಗಿದೆ.

ಮಾದಕ ದ್ರವ್ಯ ಪ್ರಕರಣದಲ್ಲಿ ಶ್ರೀಕಿ ಹಾಗೂ ಆತನ ಸಹಚರರನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ಪೊಲೀಸರು 2020ರಲ್ಲಿ ಬಂಧಿಸಿದ್ದರು. ಡಾರ್ಕ್ ವೆಬ್‌ ಮೂಲಕ (dark net) ಬಿಟ್‌ ಕಾಯಿನ್ ಬಳಸಿಕೊಂಡು, ಮಾದಕ ವಸ್ತುಗಳನ್ನು ಸಂಗ್ರಹಿಸುತ್ತಿದ್ದ. ಅಷ್ಟೇ ಅಲ್ಲದೇ ಪ್ರಭಾವಿಗಳು ಹಾಗೂ ಶ್ರೀಮಂತರಿಗೆ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಎಂದು ಆರೋಪಿಸಲಾಗಿತ್ತು. ಇದಲ್ಲದೇ ಬಿಟ್‌ ಕಾಯಿನ್ ವಿನಿಮಯ ಮಾಡುವುದಕ್ಕಾಗಿ ಹ್ಯಾಕ್ ಮಾಡುವುದು, ಕ್ರಿಪ್ಟೋಕರೆನ್ಸಿ ಕಳ್ಳತನ, ಅಕ್ರಮ ಹಣ ವರ್ಗಾವಣೆ ಹಾಗೂ ಸೈಬರ್ ವಂಚನೆ ಸೇರಿದಂತೆ ಹಲವು ಗಂಭೀರ ಆರೋಪಗಳು ಶ್ರೀಕಿಯ ಮೇಲಿದೆ.

Read More
Next Story