
ಪೊನ್ಮುಡಿ ನೇಮಕಕ್ಕೆ ರಾಜ್ಯಪಾಲರ ನಿರಾಕರಣೆ: ಮನವಿ ಪರಿಗಣನೆಗೆ ಸುಪ್ರೀಂ ಸಮ್ಮತಿ
ಮಾ.18- ಡಿಎಂಕೆ ಹಿರಿಯ ನಾಯಕ ಕೆ.ಪೊನ್ಮುಡಿ ಅವರನ್ನುಸಚಿವರನ್ನಾಗಿ ನೇಮಿಸಲು ರಾಜ್ಯಪಾಲ ಆರ್.ಎನ್. ರವಿ ನಿರಾಕರಿಸಿದ್ದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ರಾಜ್ಯಪಾಲರು ಇತ್ತೀಚೆಗೆ ಪೊನ್ಮುಡಿ ಅವರನ್ನು ಸಚಿವ ಸಂಪುಟಕ್ಕೆ ಮರು ಸೇರ್ಪಡೆಗೊಳಿಸಲು ನಿರಾಕರಿಸಿದ್ದಾರೆ. ಇದು ಸಾಂವಿಧಾನಿಕ ನೀತಿಗಳಿಗೆ ವಿರುದ್ಧ ಎಂದು ಮನವಿಯಲ್ಲಿ ಹೇಳಲಾಗಿದೆ. ಮು.ನ್ಯಾ. ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರ ಸಲ್ಲಿಕೆಗಳನ್ನು ಗಮನಿಸಿತು. ʻಇಮೇಲ್ ಕಳುಹಿಸಿ. ನಾನು ಪರಿಶೀಲಿಸುತ್ತೇನೆʼ ಎಂದು ಸಿಜೆಐ ಹೇಳಿದರು.
ಸುಪ್ರೀಂ ಕೋರ್ಟ್ ಪೊನ್ಮುಡಿ ಅವರ ಶಿಕ್ಷೆಯನ್ನು ಅಮಾನತುಗೊಳಿಸಿದೆ ಅಷ್ಟೇ ಎಂದು ರಾಜ್ಯಪಾಲರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಹೇಳಿದ್ದರು. ಆದ್ದರಿಂದ, ಸಂಪುಟದಲ್ಲಿ ಸೇರ್ಪಡೆಗೊಳಿಸಲು ನಿರಾಕರಿಸಿದ್ದರು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪೊನ್ಮುಡಿ ಅವರ ಶಿಕ್ಷೆಯನ್ನು ಅಮಾನತುಗೊಳಿಸಿದ ನಂತರ ರಾಜ್ಯ ಸರ್ಕಾರ ಅವರನ್ನು ಶಾಸಕರನ್ನಾಗಿ ಮರುಸ್ಥಾಪಿಸಿತ್ತು.

