ರಾಜ್ಯಸಭಾ ಚುನಾವಣೆ | 36% ಅಭ್ಯರ್ಥಿಗಳಿಗೆ ಕ್ರಿಮಿನಲ್ ಮೊಕದ್ದಮೆ: ADR ವರದಿ
x
ಸಾಂದರ್ಭಿಕ ಚಿತ್ರ

ರಾಜ್ಯಸಭಾ ಚುನಾವಣೆ | 36% ಅಭ್ಯರ್ಥಿಗಳಿಗೆ ಕ್ರಿಮಿನಲ್ ಮೊಕದ್ದಮೆ: ADR ವರದಿ

ರಾಜ್ಯಸಭಾ ಅಭ್ಯರ್ಥಿಗಳ ಪೈಕಿ 36% ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದು, ಈ ಪೈಕಿ 17% ವ್ಯಕ್ತಿಗಳು ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ


ಹೊಸದಿಲ್ಲಿ, ಫೆ 24: ರಾಜ್ಯಸಭಾ ಅಭ್ಯರ್ಥಿಗಳ ಪೈಕಿ 36% ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದು, ಅಭ್ಯರ್ಥಿಗಳ ಸರಾಸರಿ ಆಸ್ತಿ 127.81 ಕೋಟಿ ರೂಪಾಯಿ ಎಂದು ವಿಶ್ಲೇಷಿಸಲಾಗಿದೆ ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತಿಳಿಸಿದೆ.

ಎಡಿಆರ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ 15 ರಾಜ್ಯಗಳಲ್ಲಿ 56 ಸ್ಥಾನಗಳಿಗೆ ಕಣದಲ್ಲಿರುವ 59 ಅಭ್ಯರ್ಥಿಗಳ ಪೈಕಿ 58 ಮಂದಿ ಸ್ವಯಂ ಪ್ರಮಾಣ ವಚನ ಸ್ವೀಕರಿಸಿದ ಅಫಿಡವಿಟ್‌ಗಳನ್ನು ವಿಶ್ಲೇಷಿಸಿ ಈ ವರದಿ ತಯಾರಿಸಿದೆ. ರಾಜ್ಯಸಭಾ ಚುನಾವಣೆ ಫೆಬ್ರವರಿ 27ಕ್ಕೆ ನಿಗದಿಯಾಗಿದೆ.

ಸ್ಕ್ಯಾನ್ ಮಾಡಿದ ದಾಖಲೆಗಳ ಗುಣಮಟ್ಟ ಕಳಪೆಯಾದ ಕಾರಣ ಕರ್ನಾಟಕದ ಕಾಂಗ್ರೆಸ್ ಅಭ್ಯರ್ಥಿ ಜಿಸಿ ಚಂದ್ರಶೇಖರ್ ಅವರನ್ನು ವಿಶ್ಲೇಷಣೆಯಿಂದ ಕೈಬಿಡಲಾಗಿದೆ.

36 ಪ್ರತಿಶತದಷ್ಟು ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ ಎಂದು ವಿಶ್ಲೇಷಣೆಯು ಕಂಡುಹಿಡಿದಿದೆ. ಈ ಪೈಕಿ 17 ಪ್ರತಿಶತ ವ್ಯಕ್ತಿಗಳು ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದು, ಒಬ್ಬ ಅಭ್ಯರ್ಥಿಯು ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಹೊಂದಿದ್ದಾರೆ.

ವಿಶ್ಲೇಷಣೆಯ ಪ್ರಕಾರ, 30 ಬಿಜೆಪಿ ಅಭ್ಯರ್ಥಿಗಳಲ್ಲಿ ಎಂಟು (ಶೇ. 27), ಒಂಬತ್ತು ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಆರು (ಶೇ. 67), ನಾಲ್ಕು ಟಿಎಂಸಿ ಅಭ್ಯರ್ಥಿಗಳಲ್ಲಿ ಒಬ್ಬರು (ಶೇ. 25), ಸಮಾಜವಾದಿ ಪಕ್ಷದ ಮೂವರಲ್ಲಿ ಇಬ್ಬರು (ಶೇ. 67) ಮೂವರು ವೈಎಸ್‌ಆರ್‌ಸಿಪಿ ಅಭ್ಯರ್ಥಿಗಳಲ್ಲಿ ಒಬ್ಬರು (ಶೇ 33), ಇಬ್ಬರು ಆರ್‌ಜೆಡಿ ಅಭ್ಯರ್ಥಿಗಳಲ್ಲಿ ಒಬ್ಬರು (ಶೇ 50), ಇಬ್ಬರು ಬಿಜೆಡಿ ಅಭ್ಯರ್ಥಿಗಳಲ್ಲಿ ಒಬ್ಬರು (ಶೇ 50) ಮತ್ತು ಬಿಆರ್‌ಎಸ್ ಅಭ್ಯರ್ಥಿ ಒಬ್ಬರು (ಶೇ 100) ತಮ್ಮ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ

ಇದಲ್ಲದೆ, ವಿಶ್ಲೇಷಣೆಯು ಅಭ್ಯರ್ಥಿಗಳ ಆರ್ಥಿಕ ಹಿನ್ನೆಲೆಯನ್ನೂ ಪರಿಶೀಲಿಸಿದೆ. ಸರಿಸುಮಾರು ಶೇಕಡಾ 21 ರಷ್ಟು ಅಭ್ಯರ್ಥಿಗಳು ಶತಕೋಟ್ಯಾಧಿಪತಿಗಳಾಗಿದ್ದು, 100 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ರಾಜ್ಯಸಭಾ ಅಭ್ಯರ್ಥಿಗಳ ಸರಾಸರಿ ಆಸ್ತಿ 127.81 ಕೋಟಿ ರೂ. ಇದೆ ಎಂದು ವರದಿ ಹೇಳಿದೆ.

ಹಿಮಾಚಲ ಪ್ರದೇಶದ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಒಟ್ಟು 1,872 ಕೋಟಿ ಆಸ್ತಿ ಹೊಂದಿದ್ದು, ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಅಭ್ಯರ್ಥಿ ಜಯ ಅಮಿತಾಬ್ ಬಚ್ಚನ್ 1,578 ಕೋಟಿ ಆಸ್ತಿ ಮತ್ತು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ 871 ಕೋಟಿ ಆಸ್ತಿ ಹೊಂದಿದ್ದಾರೆ.

ಕಡಿಮೆ ಆಸ್ತಿ ಹೊಂದಿರುವ ಅಭ್ಯರ್ಥಿಗಳ ಪೈಕಿ ಮಧ್ಯಪ್ರದೇಶದ ಬಿಜೆಪಿ ಅಭ್ಯರ್ಥಿ ಬಾಲಯೋಗಿ ಉಮೇಶ್ ನಾಥ್ ಅವರು 47 ಲಕ್ಷ ರೂ.ಗೂ ಹೆಚ್ಚು ಆಸ್ತಿ ಹೊಂದಿದ್ದಾರೆ, ಬಿಜೆಪಿಯ ಪಶ್ಚಿಮ ಬಂಗಾಳದ ಅಭ್ಯರ್ಥಿ ಸಮಿಕ್ ಭಟ್ಟಾಚಾರ್ಯ 1 ಕೋಟಿ ರೂ. ಮೌಲ್ಯದ ಆಸ್ತಿ ಮತ್ತು ಬಿಜೆಪಿಯ ಉತ್ತರ ಪ್ರದೇಶದ ಅಭ್ಯರ್ಥಿ ಸಂಗೀತಾ 1 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

ಶೇಕಡಾ 17 ರಷ್ಟು ಅಭ್ಯರ್ಥಿಗಳು 5 ನೇ ಪಾಸ್‌ನಿಂದ 12 ನೇ ಪಾಸ್‌ವರೆಗಿನ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿದ್ದರೆ, ಗಮನಾರ್ಹ ಶೇಕಡಾ 79 ರಷ್ಟು ಪದವಿ ಅಥವಾ ಉನ್ನತ ಪದವಿಗಳನ್ನು ಹೊಂದಿದ್ದಾರೆ.

Read More
Next Story