CAFE BLAST CASE | ಪ.ಬಂಗಾಲದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾದ ಕರ್ನಾಟಕ ಪ್ರಕರಣ
x
ಮಮತಾ ಬ್ಯಾನರ್ಜಿ ಅಮಿತ್ ಮಾಳವಿಯಾ ಅವರ ಹೇಳಿಕೆಗೆ ತೀಕ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

CAFE BLAST CASE | ಪ.ಬಂಗಾಲದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾದ ಕರ್ನಾಟಕ ಪ್ರಕರಣ

ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ದೂರಿದ್ದಾರೆ.


Click the Play button to hear this message in audio format

ಕರ್ನಾಟಕವನ್ನು ಬೆಚ್ಚಿಬೀಳಿಸಿದ್ದ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ ಮಾಸ್ಟರ್ ಮೈಂಡ್ ಸೇರಿದಂತೆ ಇಬ್ಬರು ಆರೋಪಿಗಳನ್ನು ಪಶ್ವಿಮ ಬಂಗಾಳದಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು (ಎನ್‌ಐಎ) ಶುಕ್ರವಾರ ( ಏಪ್ರಿಲ್‌ 12) ಬಂಧಿಸಿದ್ದಾರೆ. ಆದರೆ, ಈ ಬಂಧನ ಇದೀಗ ಪಶ್ಚಿಮ ಬಂಗಾಲದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಇದಕ್ಕೆ ಕಾರಣವಾಗಿದ್ದು ಬಿಜೆಪಿ ಐಟಿ ಸೆಲ್‌ನ ರಾಷ್ಟ್ರೀಯ ಸಂಚಾಲಕ ಅಮಿತ್‌ ಮಾಳವೀಯ ಅವರ ʼಪಶ್ಚಿಮ ಬಂಗಾಲ ಭಯೋತ್ಪಾದಕರ ಸುರಕ್ಷಿತ ಸ್ವರ್ಗ" ಎಂಬ ಟೀಕೆ. ಬೆಂಗಳೂರು ಪ್ರಕರಣದ ಮುಸಾವಿರ್ ಹುಸೇನ್ ಶಾಜಿಬ್, ಅಬ್ದುಲ್ ಮತೀನ್ ಅಹಮದ್ ತಾಹಾರನ್ನು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಲ್ಲಿ ಬಂಧಿಸಲಾಗಿದೆ ಎಂದು ಎನ್ಎಐ ಹೇಳಿಕೆ ಬಳಿಕ ಈ ಪ್ರಕರಣ ರಾಜಕೀಯ ತಿರುವು ಪಡೆದು ಕೊಂಡಿದ್ದು, ತೃಣಮೂಲ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷ ಪರಸ್ಪರ ಆರೋಪ- ಪ್ರತ್ಯಾರೋಪ ನಡೆಸುತ್ತಿವೆ.

ಅಮಿತ್ ಮಾಳವಿಯಾ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಳ್ವಿಕೆಯಲ್ಲಿ ಪಶ್ಚಿಮ ಬಂಗಾಳವು "ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿದೆ" ಎಂದು ಆರೋಪಿಸಿಸ್ದು ಅದಕ್ಕೆ ಪಶ್ಚಿಮ ಬಂಗಾಲದ ಪೊಲೀಸರು ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ʼರಾಜ್ಯ ಪೊಲೀಸರ ತ್ವರಿತ ಕ್ರಮದಿಂದಾಗಿ ಬೆಂಗಳೂರು ಸ್ಫೋಟ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆʼ ಎಂಬ ಹೇಳಿಕೆ ನೀಡಿ ಪ್ರತ್ಯುತ್ತರ ನೀಡಿದ್ದಾರೆ.

ರಾಮೇಶ್ವರಂ ಕೆಫೆ ಸ್ಫೋಟದ ಇಬ್ಬರು ಪ್ರಮುಖ ಶಂಕಿತ ಆರೋಪಿಗಳಾದ ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಸಹಚರ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಅವರನ್ನು ಕೋಲ್ಕತ್ತಾದ ಪೂರ್ವ ಮೇದಿನಿಪುರ ಜಿಲ್ಲೆಯ ಕಂಠಿಯಿಂದ ಎನ್‌ಐಎ ಬಂಧಿಸಿದೆ. ಇಬ್ಬರೂ ಕರ್ನಾಟಕದ ಶಿವಮೊಗ್ಗದಲ್ಲಿರುವ ಐಸಿಸ್ ಸೆಲ್‌ಗೆ ಸೇರಿದವರಾಗಿದ್ದಾರೆ.

ಪಶ್ವಿಮಬಂಗಾಳದಲ್ಲಿ ಶಂಕಿತರನ್ನು ಬಂಧಿಸಿರುವುದು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಪಶ್ಚಿಮಬಂಗಾಳ ಪೊಲೀಸರು ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಅಮಿತ್ ಮಾಳವಿಯಾ ಮತ್ತು ಪಶ್ವಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಈ ವಿಷಯ ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿದೆ.

ಪಶ್ಚಿಮ ಬಂಗಾಳ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗ

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಪೂರ್ವ ಮೇದಿನಿಪುರ ಜಿಲ್ಲೆಯ ಕಂಠಿಯಿಂದ ಇಬ್ಬರು ಶಂಕಿತರನ್ನು ಕರೆದೊಯ್ದ ಕೂಡಲೇ, ಮಾಳವಿಯಾ ತಮ್ಮ ಎಕ್ಸ್‌ ಖಾತೆಯಲ್ಲಿ, “ದುರಾದೃಷ್ಟವಶಾತ್, ಮಮತಾ ಬ್ಯಾನರ್ಜಿ ಅಡಿಯಲ್ಲಿ ಪಶ್ಚಿಮ ಬಂಗಾಳವು ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿದೆ” ಎಂದು ಪೋಸ್ಟ್‌ ಮಾಡಿದ್ದಾರೆ.

ಅಸತ್ಯವು ಅತ್ಯಂತ ಕೆಟ್ಟದಾಗಿದೆ!

ಇದಕ್ಕೆ ಪ್ರತಿಕ್ರಿಯಿಸಿರುವ ಪಶ್ವಿಮ ಬಂಗಾಳದ ಪೊಲೀಸರು ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, ʼʼಅಸತ್ಯವು ಅತ್ಯಂತ ಕೆಟ್ಟದಾಗಿದೆ! ವಾಸ್ತವ ಏನೆಂದರೆ, ಪಶ್ಚಿಮ ಬಂಗಾಳ ಪೊಲೀಸರು ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳ ಜಂಟಿ ಕಾರ್ಯಾಚರಣೆಯಲ್ಲಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಇಬ್ಬರು ಶಂಕಿತರನ್ನು ಪುರ್ಬಾ ಮೇದಿನಿಪುರದಿಂದ ಬಂಧಿಸಲಾಗಿದೆ. ಈ ವಿಷಯದಲ್ಲಿ ಪಶ್ವಿಮ ಬಂಗಾಳದ ಪೊಲೀಸರ ಪ್ರಮುಖ ಪಾತ್ರವನ್ನು ಕೇಂದ್ರೀಯ ಏಜೆನ್ಸಿಗಳು ಅಧಿಕೃತವಾಗಿ ಒಪ್ಪಿಕೊಂಡಿವೆ. ಪಶ್ಚಿಮ ಬಂಗಾಳವು ಎಂದಿಗೂ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿರಲಿಲ್ಲ ಮತ್ತು ರಾಜ್ಯ ಪೊಲೀಸರು ರಾಜ್ಯದ ಜನರನ್ನು ಸುರಕ್ಷಿತವಾಗಿರಿಸುವಲ್ಲಿ ಸದಾ ಜಾಗರೂಕತೆ ಹೊಂದಿದ್ದಾರೆ" ಎಂದು ತಿರುಗೇಟು ನೀಡಿದ್ದಾರೆ.

ನೀವು ಅಧಿಕಾರದಲ್ಲಿರುವ ರಾಜ್ಯಗಳ ಸ್ಥಿತಿ ಏನು?

ಮಾಳವಿಯಾ ಹೇಳಿಕೆಗೆ ಕೂಚ್ ಬೆಹಾರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಪಶ್ವಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಬಂಗಾಳ ಸುರಕ್ಷಿತವಲ್ಲ ಎಂದು ಬಿಜೆಪಿ ನಾಯಕರೊಬ್ಬರು ಹೇಳುವುದನ್ನು ಕೇಳಿದ್ದಾನೆ. ಪೊಲೀಸರ ತ್ವರಿತ ಪ್ರಕ್ರಿಯೆಯಿಂದಾಗಿ ಆರೋಪಿಗಳನ್ನು ಎರಡು ಗಂಟೆಗಳಲ್ಲಿ ಬಂಧಿಸಲಾಯಿತು. ನೀವು ಅಧಿಕಾರದಲ್ಲಿರುವ ರಾಜ್ಯಗಳ ಸ್ಥಿತಿ ಏನು?

ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಗುಜರಾತ್ ಮತ್ತು ಬಿಹಾರದ ಕಥೆ ಏನು ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ರಾಜ್ಯದ ವಿರುದ್ಧ ಬಿಜೆಪಿ ಅಪಪ್ರಚಾರ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಸುವೆಂದು ಅಧಿಕಾರಿಯ ಭದ್ರಕೋಟೆ

ಆರೋಪಿಗಳನ್ನು ಬಂಧಿಸಿರುವ ಕಂಠಿ ಅಥವಾ ಕೊಂಟೈ ಅನ್ನು ಬಿಜೆಪಿ ನಾಯಕ ಸುವೆಂದು ಅಧಿಕಾರಿ ಮತ್ತು ಅವರ ಕುಟುಂಬದ ಭದ್ರಕೋಟೆ ಎಂದು ಕರೆಯಲಾಗುತ್ತದೆ.

ಬಂಗಾಳದ ರಾಜ್ಯಪಾಲರ ಪ್ರತಿಕ್ರಿಯೆ

ಪಶ್ಚಿಮ ಬಂಗಾಳದ ಗವರ್ನರ್ ಸಿವಿ ಆನಂದ ಬೋಸ್ ಅವರು ಕಾನೂನಿನ ಕೈಗಳು ಚಲಿಸಲು ಪ್ರಾರಂಭಿಸಿವೆ, ಅಪರಾಧಿಗಳು ಸಿಕ್ಕಿಬಿದ್ದಿದ್ದಾರೆ ಇದು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವವರಿಗೆ ಉತ್ತೇಜನ ನೀಡುವ ಸಂಗತಿಯಾಗಿದೆ. "ಭಾರತವು ಶ್ರೇಷ್ಠ ದೇಶವಾಗಿದೆ ಮತ್ತು ಬಂಗಾಳವು ಅದರ ಪ್ರಸಿದ್ಧ ಭಾಗವಾಗಿದೆ. ಒಬ್ಬ ಅಪರಾಧಿ ಭಾರತದಲ್ಲಿ ಎಲ್ಲಿಯಾದರೂ ಅಡಗಿಕೊಳ್ಳಲು ಪ್ರಯತ್ನಿಸಿದರೆ, ಅವನನ್ನು ಬಂಧಿಸಲಾಗುತ್ತದೆ, ಇದರಿಂದ ಪಾಠ ಕಲಿಯಬಹುದುʼʼ ಎಂದು ಆನಂದ ಬೋಸ್ ಹೇಳಿದ್ದಾರೆ.

ಮಾರ್ಚ್ ಒಂದರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ನಡೆದಿದ್ದು, ಐದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಬಾಂಬ್ ಇಟ್ಟಿದ್ದ ವ್ಯಕ್ತಿಯ ಪತ್ತೆಗೆ ನಂತರ ಶೋಧ ಕಾರ್ಯ ತೀವ್ರಗೊಳಿಸಲಾಗಿತ್ತು. ಬಳಿಕ ತನಿಖೆಯ ಹೊಣೆಯನ್ನು ಎನ್‌ಐಎಗೆ ವಹಿಸಲಾಗಿತ್ತು. ಇದೀಗ ಕೊಲ್ಕತ್ತಾದಲ್ಲಿ ಅಡಗಿಕೊಂಡಿದ್ದ ಶಂಕಿತರನ್ನು ಎಎನ್‌ಐ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

Read More
Next Story