ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ 6 ದಿನ ಮಳೆಯ  ಸಿಂಚನ!
x
ಮಳೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ 6 ದಿನ ಮಳೆಯ ಸಿಂಚನ!

ಬಿಸಿಲ ಧಗೆಯಿಂದ ಹೈರಾಣಾಗಿದ್ದ ರಾಜ್ಯದ ಜನರಿಗೆ ವರುಣ ತುಸು ಕೃಪೆ ತೋರಿದ್ದು, ರಾಜ್ಯದ ವಿವಿಧ ಭಾಗದಲ್ಲಿ ಗುರುವಾರ ಮಳೆಯಾಗಿದೆ. ಇನ್ನು ಆರು ದಿನ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದವರಿಯಲಿದೆ.


ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವರುಣ ಕೃಪೆ ತೋರಿದ್ದು, ಬಿಸಿಲ ಧಗೆಯಿಂದ ಹೈರಾಣಾಗಿದ್ದ ರಾಜ್ಯದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಗುರುವಾರ ಕರಾವಳಿ ಪ್ರದೇಶ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗಿದೆ. ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ 3 ಸೆಂ.ಮೀ, ಹುಕ್ಕೇರಿಯಲ್ಲಿ 2 ಸೆಂ.ಮೀ ಹಾಗೂ ಯಡವಾಡದಲ್ಲಿ 1 ಸೆಂ.ಮೀ ಮಳೆಯಾಗಿದೆ.

ಕಲಬುರಗಿ, ಬೀದರ್, ಬೆಳಗಾವಿ ಹಾಗೂ ಶಿವಮೊಗ್ಗ ಸೇರಿದಂತೆ ವಿವಿಧೆಡೆ ಭಾರೀ ಮಳೆಯಾಗಿದೆ. ಕಲಬುರಗಿ ನಗರದಲ್ಲಿ ಸುಮಾರು 1 ಗಂಟೆ ಮಳೆಯಾಗಿದ್ದು, ಶಿವಮೊಗ್ಗದಲ್ಲೂ ಅರ್ಧ ತಾಸಿಗೂ ಹೆಚ್ಚು ಮಳೆಯಾಗಿದೆ. ಹುಬ್ಬಳ್ಳಿ – ಧಾರವಾಡ ಸೇರಿದಂತೆ ವಿವಿಧ ನಗರದಲ್ಲಿ ಭಾರೀ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿರುವುದು ವರದಿಯಾಗಿದೆ.

ಇನ್ನು ಶುಕ್ರವಾರವೂ (ಏಪ್ರಿಲ್ 12) ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶುಕ್ರವಾರ ದಕ್ಷಿಣ ಕನ್ನಡ, ಉಡುಪಿಯಲ್ಲಿ, ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ರಾಮನಗರ, ಶಿವಮೊಗ್ಗ, ವಿಜಯನಗರ ಮತ್ತು ಮೈಸೂರಿನಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ. ಉಳಿದೆಡೆ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ವಿಜಯಪುರದಲ್ಲಿ ಸಿಡಿಲು ಬಡಿದು 3 ಸಾವು!

ರಾಜ್ಯದಲ್ಲಿ ಗುರುವಾರ ಮಿಂಚು – ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಸಿಡಿಲು ಬಿಡಿದು ಮೂವರು ಸಾವನ್ನಪ್ಪಿರುವುದು ವರದಿಯಾಗಿದೆ. ವಿಜಯಪುರದಲ್ಲಿ ಸಿಡಿಲು ಬಡಿದು ಬೀರಪ್ಪ ಅವರಾದಿ (15) , ಸೋಮಶೇಖರ ಪಟ್ಟಣಶೆಟ್ಟಿ (45) ಹಾಗೂ ಸುನಂದಾ ಡೋಳ್ಳಿ (50) ಎನ್ನುವವರು ಮೃತಪಟ್ಟಿದ್ದಾರೆ. ಮಳೆಯಿಂದ ಕೆಲವು ಭಾಗದಲ್ಲಿ ಜಾನುವಾರುಗಳು ಸಾವನ್ನಪ್ಪಿರುವುದು ಸಹ ವರದಿಯಾಗಿದೆ.

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ಬೆಂಗಳೂರಿನಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದೆ. ಬೆಂಗಳೂರಿನಲ್ಲೂ ಶುಕ್ರವಾರ ಸಂಜೆ ಅಥವಾ ಶನಿವಾರ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಪ್ರಿಲ್ 17ರ ವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಗುಡುಗು ಮುನ್ನೆಚ್ಚರಿಕೆ

ಏಪ್ರಿಲ್ 12 ಮತ್ತು 13ರಂದು ರಾಜ್ಯದ ವಿವಿಧೆಡೆ ಮಿಂಚು – ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಸಿಲ ಪ್ರಮಾಣ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Read More
Next Story