ರಷ್ಯಾ ಅಧ್ಯಕ್ಷೀಯ ಚುನಾವಣೆ: ಐದನೇ ಅವಧಿಗೆ ಪುಟಿನ್ ಆಯ್ಕೆ ಸಾಧ್ಯತೆ
x

ರಷ್ಯಾ ಅಧ್ಯಕ್ಷೀಯ ಚುನಾವಣೆ: ಐದನೇ ಅವಧಿಗೆ ಪುಟಿನ್ ಆಯ್ಕೆ ಸಾಧ್ಯತೆ

ರಷ್ಯಾ ಸಂಸತ್‌ನ ಮೇಲ್ಮನೆಯು, ಚುನಾವಣೆಯ ದಿನಾಂಕವನ್ನು ನಿಗದಿಪಡಿಸುವ ಆದೇಶವನ್ನು ಅನುಮೋದಿಸಲು ಸರ್ವಾನುಮತದಿಂದ ಮತ ಚಲಾಯಿಸಿದೆ.


ಮಾಸ್ಕೋ: ರಷ್ಯಾದಲ್ಲಿ ಅಧ್ಯಕ್ಷೀಯ ಚುನಾವಣೆಯನ್ನು ಮಾರ್ಚ್ 17ಕ್ಕೆ ನಿಗದಿಪಡಿಸಿದ್ದು, ವಾಡಿಮಿರ್ ಪುಟಿನ್ ಅವರು ಐದನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.


ರಷ್ಯಾ ಸಂಸತ್‌ನ ಮೇಲ್ಮನೆಯು, ಚುನಾವಣೆಯ ದಿನಾಂಕವನ್ನು ನಿಗದಿಪಡಿಸುವ ಆದೇಶವನ್ನು ಅನುಮೋದಿಸಲು ಸರ್ವಾನುಮತದಿಂದ ಮತ ಚಲಾಯಿಸಿದೆ.

ದಿನಾಂಕ ನಿಗದಿಯಾಗಿರುವುದರಿಂದ ಚುನಾವಣಾ ಪ್ರಚಾರದ ಕಾರ್ಯಗಳು ಆರಂಭವಾಗಲಿವೆ ಎಂದು ರಷ್ಯಾದ ಮೇಲ್ಮನೆ ಸ್ಪೀಕರ್ ವ್ಯಾಲೆಂಟಿನಾ ಮ್ಯಾಟ್ರಿಯೆಂಕೊ ತಿಳಿಸಿದ್ದಾರೆ.

ಪುಟಿನ್ ಅವರು ಐದನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ. 2020ರ ಸಾಂವಿಧಾನಿಕ ತಿದ್ದುಪಡಿಯ ನಂತರ ಅವರಿಗೆ ಇನ್ನೂ ಎರಡು ಅವಧಿಗೆ ಆಯ್ಕೆಯಾಗಲು ಅವಕಾಶ ಇದೆ. ಆದರೆ ಅವರು ಮತ್ತೆ ಸ್ಪರ್ಧಿಸುವ ಇಂಗಿತವನ್ನು ಇನ್ನೂ ಬಹಿರಂಗಪಡಿಸಿಲ್ಲ.

ವರದಿಗಾರರು, ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರಿಗೆ ಪುಟಿನ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆಯೇ ಎಂದು ಕೇಳಿದಾಗ "ತಾಳ್ಮೆಯಿಂದಿರಿ" ಎಂದು ಪ್ರತಿಕ್ರಿಯಿಸಿದರು.

ರಷ್ಯಾದ ಕೇಂದ್ರ ಚುನಾವಣಾ ಆಯೋಗವು ಅಧ್ಯಕ್ಷೀಯ ಪ್ರಚಾರದ ಕುರಿತು ಶುಕ್ರವಾರ ಸಭೆ ನಡೆಸಲು ಯೋಜಿಸಿದೆ.

`ರಷ್ಯಾವನ್ನು ದುರ್ಬಲಗೊಳಿಸಲು ಶತ್ರುಗಳು ಪ್ರಯತ್ನಿಸುತ್ತಿರುವ ನಡುವೆಯೂ ನಾವು ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧರಾಗಿದ್ದೇವೆ' ಎಂದು ವ್ಯಾಲೆಂಟಿನಾ ಮ್ಯಾಟ್ರಿಯೆಂಕೊ ಅವರು ಹೇಳಿದ್ದಾರೆ.

ಅಧಿಕೃತ ಘೋಷಣೆ ಹೊರಬೀಳದಿದ್ದರೂ 71 ವರ್ಷದ ಪುಟಿನ್ ಅವರು ಮುಂದಿನ ಆರು ವರ್ಷಗಳ ಅವಧಿಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಪುಟಿನ್ ಅವರು ಮುಂದಿನ ವಾರ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಉಮೇದುವಾರಿಕೆಯನ್ನು ಘೋಷಿಸಲಿದ್ದಾರೆ ಎಂದೂ ಹೇಳಲಾಗಿದೆ.

2022ರ ಫೆಬ್ರುವರಿಯಲ್ಲಿ ಉಕ್ರೇನ್‌ ವಿರುದ್ಧ ಯುದ್ಧ ಘೋಷಿಸಿದ ನಂತರ ಪುಟಿನ್ ಅವರು ನಡೆಸುವ ಮೊದಲ ಪತ್ರಿಕಾಗೋಷ್ಠಿ ಇದಾಗಲಿದೆ.

ಉಕ್ರೇನ್‌ನ ಪ್ರದೇಶಗಳಾದ ಲುಗಾನ್ಸ್, ಬೆರ್ಸನ್, ಡೊನೆಟ್‌ಸ್ಕ್‌ ಮತ್ತು ಝಪೋರಿಝಿಯಾದ ಮೆಲೆ ರಷ್ಯಾದ ಪಡೆಗಳು ಸಂಪೂರ್ಣ ನಿಯಂತ್ರಣ ಸಾಧಿಸದಿದ್ದರೂ ಈ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ರಷ್ಯಾವು ಹೇಳಿಕೊಂಡಿದೆ. ಅಲ್ಲದೆ ಈ ಪ್ರದೇಶಗಳಲ್ಲೂ ಮತದಾನ ನಡೆಸಲು ಚಿಂತನೆ ನಡೆಸಿದೆ.

ಪುಟಿನ್ ಅವರು ಅಧ್ಯಕ್ಷ ಅಥವಾ ಪ್ರಧಾನಿಯಾಗಿ 1999ರಿಂದಲೂ ಅಧಿಕಾರದಲ್ಲಿದ್ದಾರೆ. ಎರಡು ದಶಕಗಳಿಂದ ಅಧಿಕಾರದಲ್ಲಿರುವ ಅವರು ವಿರೋಧ ಪಕ್ಷಗಳ ಧ್ವನಿ ಅಡಗಿಸಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.

ಕೇಂದ್ರ ಚುನಾವಣಾ ಆಯೋಗವು ರಷ್ಯಾದ ಸುಮಾರು 30 ಪ್ರದೇಶಗಳಲ್ಲಿ ಸಾಂಪ್ರದಾಯಿಕ ಪೇಪರ್ ಬ್ಯಾಲೆಟ್‌ಗಳ ಜೊತೆಗೆ ಆನ್‌ಲೈನ್ ಮತದಾನವನ್ನು ಯೋಜಿಸಿದೆ ಮತ್ತು ಮೂರು ದಿನಗಳವರೆಗೆ ಮತದಾನವನ್ನು ವಿಸ್ತರಿಸಲು ನಿರ್ಧರಿಸಿದೆ.


Read More
Next Story