ಪಾಕಿಸ್ತಾನ ಚುನಾವಣೆಯಲ್ಲಿ ವಂಚನೆ: ತನಿಖೆಗೆ ಉನ್ನತ ಮಟ್ಟದ ಸಮಿತಿ
x

ಪಾಕಿಸ್ತಾನ ಚುನಾವಣೆಯಲ್ಲಿ ವಂಚನೆ: ತನಿಖೆಗೆ ಉನ್ನತ ಮಟ್ಟದ ಸಮಿತಿ


ಇಸ್ಲಾಮಾಬಾದ್, ಫೆ.18- ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ ವಿರುದ್ಧ ನ್ಯಾಯಾಂಗ ಮತ್ತು ಚುನಾವಣೆ ಸಂಸ್ಥೆಗಳಿಂದ ವಂಚನೆ ನಡೆದಿದೆ ಎಂಬ ಹಿರಿಯ ಅಧಿಕಾರಿಯೊಬ್ಬರ ಆರೋಪದ ತನಿಖೆಗೆ ಪಾಕಿಸ್ತಾನದ ಚುನಾವಣಾ ಆಯೋಗವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ರಾವ ಲ್ಪಿಂಡಿಯ ಮಾಜಿ ಆಯುಕ್ತರಾದ ಲಿಯಾಖತ್ ಅಲಿ ಚತ್ತಾ ಅವರು ಶನಿವಾರ ʻಚುನಾವಣೆಯಲ್ಲಿ ಸೋಲುತ್ತಿರುವ ಅಭ್ಯರ್ಥಿಗಳನ್ನು ಗೆಲ್ಲುವಂತೆ ಮಾಡಲಾಯಿತುʼ ಎಂದು ಆರೋಪಿಸಿದ್ದರು. ರಾವಲ್ಪಿಂಡಿಯ 13 ಅಭ್ಯರ್ಥಿಗಳನ್ನು ಬಲವಂತವಾಗಿ ವಿಜೇತರೆಂದು ಘೋಷಿಸಲಾಗಿದೆ ಎಂದು ಅವರು ದೂರಿದ್ದಾರೆ.

ಜೈಲಿನಲ್ಲಿರುವ ಮಾಜಿ ಪ್ರಧಾನಿ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷ ಫೆಬ್ರವರಿ 8 ರ ಚುನಾವಣೆಯಲ್ಲಿ ವಂಚನೆ ಹಾಗೂ ಜನಾದೇಶವನ್ನು ತಿದ್ದಲಾಗಿದೆ ಎಂದು ದೂರಿ, ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಆರಂಭಿಸಿದ ನಂತರ ತನಿಖೆಗೆ ಸಮಿತಿಯನ್ನು ನೇಮಿಸಲಾಗಿದೆ.ʻಈ ತಪ್ಪಿನ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತಿದ್ದೇನೆ ಮತ್ತು ಮುಖ್ಯ ಚುನಾವಣಾ ಆಯುಕ್ತರು ಹಾಗೂ ಮುಖ್ಯ ನ್ಯಾಯಾಧೀಶರು ಕೂಡ ಇದರಲ್ಲಿ ಭಾಗಿಯಾಗಿದ್ದಾರೆʼ ಚತ್ತಾ ಹೇಳಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಚುನಾವಣೆ ಫಲಿತಾಂಶಗಳ ತಿದ್ದುವಿಕೆಯ ಜವಾಬ್ದಾರಿ ಹೊತ್ತುಕೊಂಡ ಚತ್ತಾ ರಾಜೀನಾಮೆ ನೀಡಿದ್ದರು.

ಪಾಕಿಸ್ತಾನದ ಚುನಾವಣಾ ಆಯೋಗವು (ಇಸಿಪಿ) ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಚತ್ತಾ ಮಾಡಿರುವ ಆರೋಪಗಳನ್ನು ತಳ್ಳಿಹಾಕಿದೆ. ಆಯುಕ್ತರ ಆರೋಪ ಕುರಿತು ಚರ್ಚಿಸಲು ತುರ್ತು ಸಭೆ ನಡೆಸಿದ್ದು, ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಮುಖ್ಯ ಚುನಾವಣಾ ಆಯುಕ್ತ ಸಿಕಂದರ್ ಸುಲ್ತಾನ್ ರಜಾ ಅವರು ವಿಡಿಯೋ ಲಿಂಕ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಸಮಿತಿ ಸಂಬಂಧಿತ ಜಿಲ್ಲಾ ಚುನಾವಣಾಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು, ಮೂರು ದಿನಗಳಲ್ಲಿ ತನ್ನ ವರದಿಯನ್ನು ಇಸಿಪಿಗೆ ಸಲ್ಲಿಸಲಿದೆ.

ಹೊಸದಾಗಿ ನೇಮಕಗೊಂಡ ರಾವಲ್ಪಿಂಡಿ ಆಯುಕ್ತ ಸೈಫ್ ಅನ್ವರ್ ಜಪ್ಪಾ, ಫೆಬ್ರವರಿ 8 ರ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿಲ್ಲ ಎಂದು ಹೇಳಿದ್ದು, ಮಾಜಿ ಆಯುಕ್ತರ ಆರೋಪಗಳನ್ನು ತಳ್ಳಿಹಾಕಿದರು. ಇಂಟರ್ನೆಟ್ ಟ್ರ್ಯಾಕಿಂಗ್ ಸಂಸ್ಥೆಯಾದ ನೆಟ್‌ಬ್ಲಾಕ್ಸ್, ಚುನಾವಣಾ ವಂಚನೆ ಆರೋಪಗಳಿಂದ ʻಹೆಚ್ಚುತ್ತಿರುವ ಅಶಾಂತಿ ಮತ್ತು ಪ್ರತಿಭಟನೆʼಗಳನ್ನು ತಡೆಯಲು ಎಕ್ಸ್‌ನ ಸೇವೆಯಲ್ಲಿ ರಾಷ್ಟ್ರವ್ಯಾಪಿ ಅಡ್ಡಿ ಉಂಟಾಗಿದೆ ಎಂದು ವರದಿ ಮಾಡಿದೆ.

ಪಿಟಿಐ ಪಕ್ಷದ ಬೆಂಬಲಿತರು 265 ರಾಷ್ಟ್ರೀಯ ಅಸೆಂಬ್ಲಿ ಸ್ಥಾನಗಳಲ್ಲಿ 93 ಸ್ಥಾನಗಳನ್ನು ಗೆದ್ದಿದ್ದಾರೆ. ಪಿಎಂಎಲ್-ಎನ್ 75, ಪಿಪಿಪಿ 54 ಸ್ಥಾನ ಮತ್ತು ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್ ಪಾಕಿಸ್ತಾನ್ 17 ಸ್ಥಾನ ಗಳಿಸಿದೆ. ಕಳೆದ ವಾರ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ಎನ್ (ಪಿಎಂಎಲ್-ಎನ್) ಮತ್ತು ಬಿಲಾವಲ್ ಭುಟ್ಟೋ ಜರ್ದಾರಿ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಚುನಾವಣೋತ್ತರ ಮೈತ್ರಿ ಮಾಡಿಕೊಂಡಿವೆ. 266 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಸರ್ಕಾರ ರಚಿಸಲು 133 ಸ್ಥಾನಗಳು ಬೇಕಿವೆ.

ಪಿಎಂಎಲ್ ಎನ್‌ ಪ್ರತಿಕ್ರಿಯೆ: ಪಿಎಂಎಲ್ಎನ್ ನಾಯಕ ಮರಿಯಮ್ ಔರಂಗಜೇಬ್ ,ʻಚತಾ ಅವರು ಸಾಕ್ಷ್ಯಾಧಾರಗಳೊಂದಿಗೆ ಪಾಕಿಸ್ತಾನದ ಚುನಾವಣಾ ಆಯೋಗವನ್ನು ಸಂಪರ್ಕಿಸಬೇಕಿತ್ತುʼ ಎಂದು ಹೇಳಿದ್ದಾರೆ. ʻಚುನಾವಣೆ ನಡೆದ ಎಂಟು ದಿನಗಳ ನಂತರ ಮತ್ತು ನಿಮ್ಮ ಯುಎಸ್ ವೀಸಾ ಪಡೆದ ನಂತರ ನಿಮ್ಮ ಆತ್ಮಸಾಕ್ಷಿ ಜೀವಂತವಾಯಿತುʼ ಎಂದು ಹೇಳಿದರು.

Read More
Next Story